“ಬೆಳ್ಳಿ ಹಬ್ಬ ಆಚರಿಸುತ್ತಿರುವ ಅನುಪಮ, ಸ್ವರ್ಣ ಮಹೋತ್ಸವವನ್ನು ಪೂರೈಸಲಿ” ಖ್ಯಾತ ಸಾಹಿತಿ ಡಾ| ಕೆ. ಶರೀಫಾ​

ಮಂಗಳೂರು: ನಗರದ ಪುರಭವನದಲ್ಲಿ ಜ. 15ರಂದು ನಡೆದ ಅನುಪಮ 25ನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಬೆಳ್ಳಿ ಹಬ್ಬ ಸಮಾವೇಶವನ್ನು ಖ್ಯಾತ ಸಾಹಿತಿ ಡಾ. ಕೆ. ಶರೀಫಾ ಉದ್ಘಾಟಿಸಿದರು. ಬಳಿಕ ಮಾತನಾಡುತ್ತಾ, “ಅನೇಕ ಎಡರು ತೊಡರುಗಳನ್ನು ಎದುರಿಸಿ ಮಹಿಳೆಯರು ಪತ್ರಿಕೆಯೊಂದನ್ನು ನಡೆಸುತ್ತಿರುವುದು ದೊಡ್ಡಸಾಹಸ” ಎಂದರು.

“ಧರ್ಮಸ್ಥಳದಲ್ಲಿ ನಡೆದಿರುವ ಕೊಲೆಗಳ ಕುರಿತಾಗಿ- ಕೊಂದವರು ಯಾರು -ಹೋರಾಟಕ್ಕೂ ಧ್ವನಿ ಎತ್ತಿರುವುದು ಇವರ ಮಹಿಳಾ ಸಂವೇದನೆಗೆ ಸಾಕ್ಷಿಯಾಗಿದೆ. ಬಹುತೇಕ ಘಟನೆಗಳಲ್ಲಿ ಮುಸ್ಲಿಮ್ ಮಹಿಳೆಯರು ಗಟ್ಟಿಯಾಗಿ ನಿಂತು ಹೋರಾಟ ಮಾಡಿದ್ದಾರೆ. ಮಹಿಳೆಯರ ಶಿಕ್ಷಣಕ್ಕೆ ಒತ್ತು ಕೊಟ್ಟ ಸಾವಿತ್ರಿ ಬಾಯಿ ಪುಲೆ ಅವರ ಜೊತೆ ಫಾತಿಮ ಶೇಕ್ ಕೂಡಾ ಭಾಗಿಯಾಗಿದ್ದರು. ಮನೆಯೊಳಗೆ ಕುಳಿತ ಮಹಿಳೆಗೆ ತನ್ನ ನೋವು ನಲಿವು ಹಂಚಿ ಕೊಳ್ಳಲು ಪತ್ರಿಕೆ ಶುರು ಮಾಡಿರುವುದು ಇಂದು ಹೆಮ್ಮರವಾಗಿ ಬೆಳೆದಿದೆ” ಎಂದರು.


“ಪತ್ರಿಕೆಗೆ ಜಾಹಿರಾತು ಮುಖ್ಯ. ಆದರೆ ತಂಬಾಕು, ಮಾದಕ ವಸ್ತು ಮೊದಲಾದ ಆಗೋಗ್ಯಕ್ಕೆ ಹಾನಿಕರವಾದ ಜಾಹಿರಾತು ತೆಗೆದುಕೊಳ್ಳದೇ ಇರುವುದು ನೈತಿಕತೆಗೆ ಸಾಕ್ಷಿ” ಎಂದರು. “ಸ್ವಾತಂತ್ರ ಬಂದ ಕಾಲದಲ್ಲಿ ಮಹಿಳೆಯರು ಶಾಲೆಗೆ ಹೋಗುವುದೇ ಕಷ್ಟವಿತ್ತು, ಆದರೆ ವಿದ್ಯಾಭ್ಯಾಸ ಮಾಡಿ, ಪತ್ರಿಕೆ ನಡೆಸಿದ್ದೀರಿ. ಕೊರೊನ ಸಮಯದಲ್ಲಿ ಯೇ ಪತ್ರಿಕೆ ಮುಚ್ಚಿಲ್ಲ, ಹಾಗಾಗಿ ಕೊನೆ ತನಕ ಮುಂದುವರಿಯಲಿ. ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಅನುಪಮ, ಸ್ವರ್ಣ ಮಹೋತ್ಸವವನ್ನು ಪೂರೈಸಲಿ” ಎಂದು ಹಾರೈಸಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಧಾನ ಸಂಪಾದಕಿ ಶಹನಾಜ್ ಎಂ. “25 ವರ್ಷಗಳ ಹಾದಿಯನ್ನು ವಿವರಿಸಿದ, ಪತ್ರಿಕೆ ಒಂದು ಭಾರತವಾಗಿ ಬೆಳೆದಿದೆ. ಇದರಲ್ಲಿ ಎಲ್ಲಾ ವರ್ಗದ ಓದುಗರು, ಲೇಖಕರು ಮತ್ತು ಪ್ರೋತ್ಸಾಹಕರನ್ನು ಹೊಂದಿದೆ. ಪತ್ರಿಕೆಯ ಬೆಳವಣಿಗೆಯಲ್ಲಿ ಬೆನ್ನೆಲುಬಾಗಿ ನಿಂತವರನ್ನು ನೆನಪಿಸುತ್ತಾ, ನಾವು ನಮ್ಮ ನೈತಿಕತೆಯನ್ನು ಬಿಟ್ಟು ಜಾಹಿರಾತಿಗೆ ಕೈ ಒಡ್ಡಿಲ್ಲ ಎಂದರು. ಅನುಪಮ ಮಾಸಿಕ
ಡಿಜಿಟಲ್ ರೂಪದಲ್ಲಿ ಯೂ ಬರಲಿದೆ”
ಎಂದರು.

ಬೆಥನಿ ಸಂತ ತೆರೇಸಾ ಕಾಲೇಜು ಪ್ರಾಂಶುಪಾಲರಾದ ಸಿಸ್ಟರ್ ಲೂರ್ಡ್ಸ್: “ಅನುಪಮ ಪತ್ರಿಕೆ ಒಂದು ನಂಬಿಕೆಯ ಅಡಿಗಲ್ಲಾಗಿದೆ. ಮೌಲ್ಯಗಳಿಗೆ ಬೆಲೆ ನೀಡಿ, ಜವಾಬ್ದಾರಿಯುತ ಪತ್ರಿಕೋದ್ಯಮ ನಡೆಸುತ್ತಿದೆ. ಹಲವಾರು ಮಹಿಳೆಯರ ಕನಸು ಗಳಿಗೆ ಆಧಾರವಾಗಿ, ನೋವು ನಲಿವುಗಳನ್ನು ಹಂಚುತ್ತಿದೆ. ಹೀಗಾಗಿ ಈ ಪತ್ರಿಕೆ ಮಹಿಳೆಯರ ಜೊತೆಗಾತಿಯಾಗಿದೆ” ಎಂದರು.

ಆಪ್ತ ಸಮಾಲೋಚಕಿ ಡಾ। ರುಕ್ಸಾನ ಮಾತನಾಡುತ್ತಾ, “ವಿದ್ಯಾಭ್ಯಾಸ ಮಾಡಿದ ಹುಡುಗಿಯರನ್ನು ತಮಾಷೆ ಮಾಡುವ ಕಾಲದಲ್ಲಿ ಒಂದು ಯಶಸ್ವೀ ಪತ್ರಿಕೆ ನಡೆಸುತ್ತಿರುವುದು ದೊಡ್ಡಸಾಧನೆ” ಎಂದರು. “ಮಹಿಳೆಯೊಬ್ಬಳ ಸಹನೆ, ತಾಳ್ಮೆಯ ಎದುರು, ಯಾವ ಪುರುಷನೂ ಇಲ್ಲ. ಇಂದು ಮಹಿಳೆ ಎಷ್ಟೇ ದೊಡ್ಡ ಹುದ್ದೆಗೆ ಏರಿದರೂ, ಮಹಿಳೆಯ ಜವಾಬ್ದಾರಿಯನ್ನು ಮರೆತಿರುವುದು ಸಾಧ್ಯವಿಲ್ಲ” ಎಂದರು. “ಬರವಣಿಗೆ ಶಾಶ್ವತವಾಗಿದೆ. ಇಂದು ಮುದ್ರಣ ಮಾಧ್ಯಮ ಮಾಯವಾಗುವಂತಿದೆ. ಆದರೆ ಹಾಗಾಗುವುದು ಬೇಡ. ಇಂದು ಬರೆದಿರುವುದು ಮುಂದಿನ ಕಾಲಕ್ಕೂ ಉಳಿಯಲಿ” ಎಂದರು.

ಮುಂಬೈನ ಹಿರಿಯ ವಕೀಲೆ, ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ತನ್ನ ಮನದಾಳದ ಮಾತು ಹಂಚಿಕೊಂಡರು
ಹಿರಿಯ ಲೇಖಕಿ ಕೆ.ಎ. ರೋಹಿಣಿ, ಸಮಾಜ ಸೇವಕಿ ಹರಿಣಿ ಕೆ. ಅನುಪಮದ ಹಿರಿಯ ಓದುಗ ಬಳಗದ ಆಯೇಷಾ ಇಬ್ರಾಹಿಂ ಶಫಿರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅನುಪಮ ಓದುಗರಾದ ಶಿಹನಾ ಬಿ.ಮ್., ಶಮೀಮಾ ಕುತ್ತಾರ್ ಹಾಗೂ ಶ್ರೀಮತಿ ಸುಖಾಲಕ್ಷಿ ತಮ್ಮ ಅನಿಸಿಕೆಗಳನ್ನು ನೀಡಿದರು.

ಮಂಗಳೂರು ದಕ್ಷಿಣ ಮಹಿಳಾ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಬಾಲಕೃಷ್ಣರನ್ನು, ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್ ಚೇರ್ ಮೆನ್ ಅಶ್ಫಾಕ್ ಅಹಮದ್ ಹೂಗುಚ್ಚ ನೀಡುವ ಮೂಲಕ ಸ್ವಾಗತಿಸಿದರು.

ಅನುಪಮ ವೆಬ್ ಪೋರ್ಟಲ್ ಬಿಡುಗಡೆ ಮಾಡಿ ಮಾತನಾಡುತ್ತಾ “ಮಹಿಳೆ ಒಂದು ಶಕ್ತಿ. ಮಹಿಳೆಯರಿಗೆ ಇಂದು ಮನೆಯಲ್ಲಿ ಬಹಳಷ್ಟು ಮಾನಸಿಕ ಕಿರುಕುಳ, ಆರ್ಥಿಕ ಒತ್ತಡ, ನಿರ್ಬಂಧನೆ ಕಾಡುತ್ತಿದೆ. ಅವೆಲ್ಲವನ್ನು ಮೀರಿ ಮಹಿಳೆ ಎದ್ದು ನಿಲ್ಲಬೇಕಾಗಿದೆ. ಮನೆಯಲ್ಲಿ ತಂದೆ-ತಾಯಿ ಜಗಳವಾಡುತ್ತಿದ್ದರೆ ಅದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಮನೆಯಲ್ಲಿ ಮಕ್ಕಳೆದುರು ಗಂಡ-ಹೆಂಡತಿ ಜಗಳ ನಿಲ್ಲಿಸಬೇಕು” ಎಂದು ಕಿವಿಮಾತು ಹೇಳಿದರು.

ಸಭೆಯ ಪ್ರಾರಂಭದಲ್ಲಿ ಬ್ರೈಟ್ ಮಾಡೆಲ್ ಸ್ಕೂಲ್ ವಿದ್ಯಾರ್ಥಿಗಳು ಸ್ತುತಿ ಗೀತೆ ಹಾಡುವ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

“ಇತಿಹಾಸದ ಪ್ರತಿಯೊಂದು ಕ್ರಾಂತಿಯ ಹಿಂದೆ ಸಾಹಿತ್ಯದ ಪ್ರೇರಣೆ ಇದೆ. ಹಾಗೆಯೇ ಮಹಿಳೆಯರೇ ಸೇರಿ ಒಂದು ಪತ್ರಿಕೆನ್ನು 25ವರ್ಷ ನಡೆಸುತ್ತಿರುವುದು ಕೂಡಾ ಒಂದು ಕ್ರಾಂತಿ” ಎಂದು ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ ಕೇಂದ್ರ ಸಮಿತಿ ಸದಸ್ಯೆ ಸಮೀನಾ ಅಫ್ಸಾನ್ ಹೇಳಿದರು. ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

“ಬರವಣಿಗೆ ಎಲ್ಲಾ ಕಾಲಕ್ಕೂ ಒಂದು ಸಾಧನೆ. ಮಹಿಳೆಯರು ಬರವಣಿಗೆ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಲು ವೇದಿಕೆ ಪಡೆದುಕೊಂಡಿರುವುದು ಒಂದು ಕ್ರಾಂತಿಯಾಗಿದೆ. ಮಹಿಳೆಯರು ವೇದಿಕೆಯನ್ನು ಇನ್ನಷ್ಟು ಬಳಸಿಕೊಳ್ಳಬೇಕು” ಎಂದರು. ಅನುಪಮ “ಪತ್ರಿಕೆ ಎಲೆ ಮರೆಯ ಕಾಯಿಗಳನ್ನು ಕೂಡಾ ಮುನ್ನೆಲೆಗೆ ತಂದು ಅವರಿಗೆ ಧ್ವನಿ ನೀಡಿದೆ. ಈ ಧ್ವನಿ ಇಂದು ಶಕ್ತಿಯಾಗಿ ಬೆಳೆದಿದೆ. ಇದು ಎಲ್ಲಾ ಮಹಿಳೆಯರಿಗೆ ಮಾರ್ಗದರ್ಶಿ” ಎಂದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರಾದ ನಿವೃತ್ತ ಶಿಕ್ಷಕಿ ಲೇಖಕಿ ಕೆ.ಎ., ಸಾಮಾಜಿಕ ಕಾರ್ಯಕರ್ತೆ ಹರಿಣಿ, ರೋಹಿಣಿ, ಸಮಾಜ ಸೇವಕಿ ಹಿರಿಯ ಓದುಗೆ ಆಯಿಶಾ ಈ. ಶಾಫಿ ಅವರನ್ನು ಸನ್ಮಾನಿಸಲಾಯಿತು.

ಅನುಪಮ ಉಪಸಂಪಾದಕಿ ಸಬೀಹಾ ಫಾತಿಮಾ ಅತಿಥಿಗಳನ್ನು ಸ್ವಾಗತಿಸಿದರು. ಅಸ್ಮತ್ ವಗ್ಗ ಮತ್ತು ಲುಬ್ನಾ ಝಕೀಯ ಕಾರ್ಯಕ್ರಮ ನಿರೂಪಿಸಿದರು.

Comments

Leave a Reply

Your email address will not be published. Required fields are marked *