Author: anupamamasika@gmail.com

  • ಇಲ್ಲಿ ವಿದ್ಯಾರ್ಥಿಗಳೆಲ್ಲರೂ First ಬೇಂಚಿಗರೇ..!ಕರ್ನಾಟಕ ಶಾಲೆಯಲ್ಲೊಂದು ಹೊಸ ಪ್ರಯೋಗ

    ಇಲ್ಲಿ ವಿದ್ಯಾರ್ಥಿಗಳೆಲ್ಲರೂ First ಬೇಂಚಿಗರೇ..!ಕರ್ನಾಟಕ ಶಾಲೆಯಲ್ಲೊಂದು ಹೊಸ ಪ್ರಯೋಗ

    ಶಾಲೆಯ ತರಗತಿಯಲ್ಲಿ ‘ಲಾಸ್ಟ್ ಬೆಂಚ್ ವಿದ್ಯಾರ್ಥಿ ಎಂಬ ಮಾತು ಸಾಮಾನ್ಯವಾಗಿ ವಿವಿಧ ಆಯಾಮದಲ್ಲಿ ಚರ್ಚಿತ ವಿಷಯ. ಆದರೆ ‘ಲಾಸ್ಟ್ ಬೆಂಚ್’ ಪರಿಪಾಠಕ್ಕೆ ಮುಕ್ತಿ ನೀಡುವ ಹೊಸ ಬೆಳವಣಿಗೆ ಇತ್ತೀಚೆಗೆ ಕೇರಳದಲ್ಲಿ ನಡೆದಿತ್ತು. ಮಲಯಾಳಂ ಮೂವಿಯೊಂದರಲ್ಲಿ ತೋರಿಸಲಾದ ಕ್ಲಾಸ್ ರೂಮಿನ Setupನಿಂದ ಪ್ರಭಾವಿತಗೊಂಡು ಕೇರಳ ಸರಕಾರ ಈ ಕ್ರಮವನ್ನು ಅನುಸರಿಸಿದೆ. ವಿಶೇಷವೆಂದರೆ ಇಂತಹುದೇ ಬದಲಾವಣೆಯೊಂದು ಸುಶಿಕ್ಷಿತ ಜಿಲ್ಲೆ ದಕ್ಷಿಣ ಕನ್ನಡದಲ್ಲಿಯೂ ಜಾರಿಗೆ ಬಂದಿದೆ.
    ಉಳ್ಳಾಲ ತಾಲೂಕಿನ ಬಾಳೆಪುಣಿ ಹೂಹಾಕುವಕಲ್ಲು ಸಮೀಪದ ಪಿ.ಎಂ.ಶ್ರೀ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಕುಳಿತುಕೊಳ್ಳುವ ಆಸನ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಮಾಡಲಾಗಿದೆ.
    ಈ ಶಾಲೆಯಲ್ಲಿ ಮಕ್ಕಳ ಬೆಂಚ್ ಹಾಗೂ ಡೆಸ್ಕ್‌ಗಳನ್ನು ಅರ್ಧ ವೃತ್ತಾಕಾರದಲ್ಲಿ ಇದೀಗ ಬದಲಾಯಿಸಲಾಗಿದೆ. ಶಿಕ್ಷಕರು ಮಧ್ಯದಲ್ಲಿ ನಿಂತು ಪಾಠ ಮಾಡುತ್ತಿದ್ದಾರೆ. ಇದರಿಂದ ಮಕ್ಕಳು ಶಿಕ್ಷಕರಿಗೆ ಹತ್ತಿರವಾಗಿರುವುದಲ್ಲದೆ, ಎಲ್ಲ ಮಕ್ಕಳ ಜತೆ ಶಿಕ್ಷಕರಿಗೆ ಸಮರ್ಪಕ ಸಂವಹನಕ್ಕೆ ಇದು ನೆರವಾಗುತ್ತಿದೆ.
    ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಒಟ್ಟು 545 ಮಕ್ಕಳಿದ್ದಾರೆ. ಆರಂಭದಲ್ಲಿ 6ನೇ ತರಗತಿ ಮಕ್ಕಳ ಆಸನ ವ್ಯವಸ್ಥೆಯನ್ನು ಬದಲಿಸಲಾಗಿತ್ತು. ಅದನ್ನು ನೋಡಿದ ಇತರ ತರಗತಿಯ ಮಕ್ಕಳೂ ನಮಗೂ ಆದೇ ರೀತಿಯ ವ್ಯವಸ್ಥೆಬೇಕು ಎಂದು ಹೇಳಿದಂತೆ ಅಲ್ಲಿಯೂ ಬದಲಾವಣೆ ಮಾಡಲಾಗಿದೆ. ಸದ್ಯ 30ರಿಂದ 35 ಮಕ್ಕಳವರೆಗಿನ 4ನೇ ತರಗತಿಯಿಂದ 8ನೇ ತರಗತಿವರೆಗಿನ ಒಟ್ಟು 9ನೇ ತರಗತಿಗಳಲ್ಲಿ ‘ಯು’ ಆಕಾರದ ಆಸನ ವ್ಯವಸ್ಥೆ ಇಲ್ಲಿ ಮಾಡಲಾಗಿದೆ.
    ಮುಖ್ಯೋಪಾಧ್ಯಾಯಿನಿ ವಿಜಯ ಲಕ್ಷ್ಮೀ ಅವರು ಪ್ರತಿಕ್ರಿಯಿಸಿ: ‘ಕೇರಳದ ಕೆಲವು ಶಾಲೆಗಳ ಕೊಠಡಿಗಳ ಆಸನ ವ್ಯವಸ್ಥೆಯ ಬದಲಾವಣೆ ಬಗ್ಗೆ ಗಮನಿಸಿ ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರ ಜತೆಗೆ ಚರ್ಚಿಸಿ ಲಾಸ್ಟ್ ಬೆಂಚ್ ಪರಿಕಲ್ಪನೆಯನ್ನು ಬದಲಾಯಿಸಲು ತೀರ್ಮಾನಿಸಲಾಯಿತು. ಹೊಸ ವ್ಯವಸ್ಥೆಯನ್ನು ಮಕ್ಕಳು ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಶಿಕ್ಷಕರೂ ಇದನ್ನು ಸ್ವಾಗತಿಸಿದ್ದಾರೆ’ ಎನ್ನುತ್ತಾರೆ.

  • ಮಕ್ಕಳ ಆಧಾರ್ ಕಾರ್ಡ್ Update ಇನ್ನು ಶಾಲೆಯಲ್ಲಿ…ಏನಿದು ಕೇಂದ್ರದ ಹೊಸ ಯೋಜನೆ..?

    ಮಕ್ಕಳ ಆಧಾರ್ ಕಾರ್ಡ್ Update ಇನ್ನು ಶಾಲೆಯಲ್ಲಿ…ಏನಿದು ಕೇಂದ್ರದ ಹೊಸ ಯೋಜನೆ..?

    ನವದಹೆಲಿ: ಶಾಲೆಗಳಲ್ಲಿಯೇ ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಚಿಂತನೆ ನಡೆಸಿದೆ.
    ಈ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸಲಾಗುತ್ತಿದ್ದು, 40ರಿಂದ 60 ದಿನಗಳ ಒಳಗೆ ಯೋಜನೆ ಸಿದ್ದಗೊಳ್ಳಲಿದೆ ಎಂದು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್‌ ಕುಮಾರ್‌ ತಿಳಿಸಿದ್ದಾರೆ.
    5 ವರ್ಷದ ದಾಟಿದ ಪ್ರತಿ ಮಗುವಿನ ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡುವುದು ಕಡ್ಡಾಯವಾಗಿದೆ. 7 ವರ್ಷ ದಾಟಿದ ಬಳಿಕವೂ ಅಪ್‌ಡೇಟ್‌ ಆಗದಿದ್ದರೆ ಆ ಮಗುವಿನ ಆಧಾರ್‌ ಕಾರ್ಡ್‌ ಸಂಖ್ಯೆ ನಿಷ್ಕ್ರಿಯವಾಗಲಿದೆ.
    ದೇಶದ 7 ಕೋಟಿ ಮಕ್ಕಳ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಆಗದಿರುವ ಕಾರಣ, ಪೋಷಕರ ಸಮ್ಮತಿ ಪಡೆದು ಶಾಲೆಗಳಲ್ಲೇ ಬಯೋಮೆಟ್ರಿಕ್‌ ಅಪ್ಡೇಟ್‌ ಮಾಡಲು ಚಿಂತನೆ ನಡೆಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

  • ವೃದ್ಧನನ್ನು ಕಾರಿನಲ್ಲಿ ಕಟ್ಟಿ ಹಾಕಿದ ಕುಟುಂಬ:ರಕ್ಷಿಸಿದ ಭದ್ರತಾ ಸಿಬ್ಬಂದಿಗಳು

    ವೃದ್ಧನನ್ನು ಕಾರಿನಲ್ಲಿ ಕಟ್ಟಿ ಹಾಕಿದ ಕುಟುಂಬ:ರಕ್ಷಿಸಿದ ಭದ್ರತಾ ಸಿಬ್ಬಂದಿಗಳು

    ಆಗ್ರಾ: ಮುಂಬೈನ ಕುಟುಂಬವೊಂದು ತಮ್ಮ ಮಗ ಮತ್ತು ಕುಟುಂಬದೊಂದಿಗೆ ತಾಜ್ ಮಹಲ್ ನೋಡಲು ಆಗ್ರಾಕ್ಕೆ ಹೋಗಿತ್ತು. ಉತ್ತರ ಪ್ರದೇಶದ ಆಗ್ರಾದಲ್ಲಿ ಗುರುವಾರ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಪಾರ್ಶ್ವವಾಯುವಿಗೆ ಒಳಗಾದ 80 ವರ್ಷದ ವೃದ್ಧನೊಂದಿಗೆ ಕುಟುಂಬ ಮುಂಬೈನಿಂದ ಆಗ್ರಾಕ್ಕೆ ಕಾರಿನಲ್ಲಿ ಹೋಗಿತ್ತು. ಕುಟುಂಬ ಸದಸ್ಯರು ವೃದ್ಧನನ್ನು ಕಾರಿನ ಸೀಟಿಗೆ ಕಟ್ಟಿ ಗ್ಲಾಸ್ ಗಳನ್ನು ಮುಚ್ಚಿ ಹೊರಗೆ ಹೋದರು.
    ಭದ್ರತಾ ಸಿಬ್ಬಂದಿ ಹತ್ತಿರ ಬಂದಾಗ, ಕಾರು ಪಾರ್ಕಿಂಗ್ ಸ್ಥಳದಲ್ಲಿ ಅಸಾಮಾನ್ಯ ರೀತಿಯಲ್ಲಿ ಬಿದ್ದಿರುವುದನ್ನು ನೋಡಿದರು ಮತ್ತು ಕೈಕಾಲುಗಳನ್ನು ಕಟ್ಟಿಹಾಕಿದ ವೃದ್ಧ ಗಂಭೀರ ಸ್ಥಿತಿಯಲ್ಲಿ ಕಾಣಿಸಿಕೊಂಡರು. ಕಾರನ್ನು ಬಿಸಿಲಿನಲ್ಲಿ ನಿಲ್ಲಿಸಲಾಗಿತ್ತು. ಇದಲ್ಲದೆ, ಸಹಾಯ ಮಾಡಲು ಯಾರೂ ಇರಲಿಲ್ಲ. ವೃದ್ಧನ ಸ್ಥಿತಿಯನ್ನು ನೋಡಿದ ಸಿಬ್ಬಂದಿ ಇತರರನ್ನು ಕರೆದರು.
    ಕಾರಿನ ಕಿಟಕಿಗಳನ್ನು ಒಡೆದು ಬಾಗಿಲು ತೆರೆಯುವ ಮೂಲಕ ಆತನನ್ನು ಹೊರಗೆ ಕರೆದೊಯ್ಯಲಾಯಿತು. ಕುಟುಂಬವು ಆತನನ್ನು ಬಟ್ಟೆಯಿಂದ ಕಾರಿನ ಸೀಟಿಗೆ ಕಟ್ಟಿ ಹಾಕಿತು. ಪಾರ್ಶ್ವವಾಯುವಿಗೆ ಒಳಗಾಗಿ ಚಲನಶೀಲತೆಯನ್ನು ಕಳೆದುಕೊಂಡಿದ್ದ ಟಿಂಡೇಲ್ ಅವರನ್ನು ಜನರು ಹೊರಗೆ ಕರೆದೊಯ್ದರು. ನಂತರ, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
    ಕುಟುಂಬವು ವೃದ್ಧನನ್ನು ಕಾರಿನಲ್ಲಿ ಬಿಟ್ಟು ತಾಜ್ ಮಹಲ್ ಅನ್ನು ಆನಂದಿಸಿತು. ಭಯಾನಕ ಕಲಿಯುಗ ಬಂದಿದೆ.
    ಮಹಾರಾಷ್ಟ್ರ ಮೂಲದ ಸಿದ್ಧೇಶ್ವರ್ ಟಿಂಡೇಲ್ ಅವರು ತಮ್ಮ ಕುಟುಂಬದೊಂದಿಗೆ ತಾಜ್ ಮಹಲ್ ಭೇಟಿ ನೀಡಲು ಬಂದಿದ್ದರು, ಅವರ ತಂದೆ ಹರಿ ಓಂ ಟಿಂಡೇಲ್ ಅವರನ್ನು ಕಾರಿನೊಳಗೆ ಕಟ್ಟಿಹಾಕಲಾಗಿತ್ತು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಯಾರೂ ದೂರು ನೀಡದ ಕಾರಣ, ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಸಿದ್ಧೇಶ್ವರ್ ತನ್ನ ತಂದೆಯನ್ನು ಟಿಂಡೇಲ್ ಜೊತೆಗೆ ಕಳುಹಿಸಿದ್ದಾರೆ ಎಂದು ಅವರು ಹೇಳಿದರು.
    ಆದಾಗ್ಯೂ, ಪೊಲೀಸರು ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

  • ಗ್ಯಾಸ್ಟ್ರಿಕ್ ಮತ್ತು ಹೃದಯಾಘಾತಕ್ಕಿರುವ ಲಕ್ಷಣಗಳೇನು?ಗಾಬರಿ ಬೇಡ, ಇಲ್ಲಿದೆ ಮುನ್ನೆಚ್ಚರಿಕೆ ಕ್ರಮಗಳು…

    ಗ್ಯಾಸ್ಟ್ರಿಕ್ ಮತ್ತು ಹೃದಯಾಘಾತಕ್ಕಿರುವ ಲಕ್ಷಣಗಳೇನು?ಗಾಬರಿ ಬೇಡ, ಇಲ್ಲಿದೆ ಮುನ್ನೆಚ್ಚರಿಕೆ ಕ್ರಮಗಳು…

    ಹೃದಯಾಘಾತದ ಪ್ರಕರಣಗಳು ಈಗ ಭಯದ ವಾತಾವರಣವನ್ನು ಸೃಷ್ಟಿಸಿವೆ. ಆಸ್ಪತ್ರೆಗೆ ಎದೆನೋವು ಎಂದು ಬರುವ ಸಾಕಷ್ಟು ಜನರು ತಮಗಾಗಿರುವುದು ಹೃದಯ ಸಂಬಂಧಿ ಸಮಸ್ಯೆಯೋ ಅಥವಾ ಗ್ಯಾಸ್ಟ್ರಿಕ್‌ ಸಮಸ್ಯೆಯೋ ಅರಿಯದೇ ಗೊಂದಲಕ್ಕೀಡಾಗುತ್ತಿದ್ದಾರೆ. ಹಾರ್ಟ್ ಅಟ್ಯಾಕ್‌ನ್ನು ಗ್ಯಾಸ್ಟ್ರಿಕ್‌ ಎಂದು ತಿಳಿದು ನಿರ್ಲಕ್ಷಿಸಿದವರೂ ಹಲವರು. ಹೀಗಾಗಿ ಈ ಸಂದರ್ಭದಲ್ಲಿ ಇವೆರಡು ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ.


    ಗ್ಯಾಸ್ಟ್ರಿಕ್‌ ಮತ್ತು ಹಾರ್ಟ್ ಅಟ್ಯಾಕ್‌ ನಡುವೆ ಗೊಂದಲವಾಗುವುದೇಕೆ?
    ಹೃದಯ, ಅನ್ನನಾಳ ಹಾಗೂ ಹೊಟ್ಟೆ ಇವು ಮೂರೂ ನಮ್ಮ ದೇಹದಲ್ಲಿ ಪರಸ್ಪರ ಸಮೀಪದಲ್ಲೇ ಇವೆ ಹಾಗೂ ಒಂದೇ ರೀತಿಯ ನರ ವ್ಯೂಹವನ್ನು ಹೊಂದಿರುತ್ತವೆ. ಈ ರೀತಿಯ ಅಂಗ ಹಾಗೂ ನರ ಮಂಡಲ ರಚನೆಯ ಕಾರಣಕ್ಕೆ ದೇಹದ ಮೇಲ್ಭಾಗದಲ್ಲಿ ನೋವುಂಟಾದಾಗ ಹೃದಯ ಸಂಬಂಧಿತ ಸಮಸ್ಯೆಯೋ ಅಥವಾ ಗ್ಯಾಸ್ಟ್ರಿಕ್‌ ಸಮಸ್ಯೆಯೋ ಅರ್ಥ ಮಾಡಿಕೊಳ್ಳುವುದು ಸಾಮಾನ್ಯ ಜನರಿಗೆ ಕಷ್ಟವಾಗುತ್ತದೆ. ಗಂಭೀರ ಗ್ಯಾಸ್ಟ್ರಿಕ್‌ ಸಮಸ್ಯೆ ಎದುರಿಸುತ್ತಿರುವ ರೋಗಿ ಎದೆನೋವು, ಉರಿ ಅನುಭವ ಪಡೆಯುವುದು ಸಾಮಾನ್ಯ. ಇದೇ ಹೃದಯಾಘಾತ ಎಂದು ತುರ್ತು ವೈದ್ಯಕೀಯ ನೆರವಿಗೆ ತೆರಳುತ್ತಾರೆ. ಅದೇ ರೀತಿ ಹೃದಯಾಘಾತ ಸಂಭವಿಸಿದ್ದರೂ ವಾಕರಿಕೆ, ವಾಂತಿ, ಹೊಟ್ಟೆ ನೋವನ್ನು ಗ್ಯಾಸ್ಟ್ರಿಕ್‌ ಎಂದು ತಿಳಿದು ಕಡೆಗಣಿಸುವ ಸಾಧ್ಯತೆಯೂ ಇದೆ.


    ಗ್ಯಾಸ್ ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆ ಎರಡೂ ಒಂದೆಯೇ?
    ಗ್ಯಾಸ್‌ ಮತ್ತು ಗ್ಯಾಸ್ಟ್ರಿಕ್‌ ನಡುವೆ ವ್ಯತ್ಯಾಸವಿದೆಯೇ ಇಲ್ಲವೇ? ಎಂಬ ಬಗ್ಗೆ ಸಾಕಷ್ಟು ಜನರಲ್ಲಿ ಗೊಂದಲವಿದೆ. ವೈದ್ಯಕೀಯ ದೃಷ್ಟಿಯಲ್ಲಿ ಎರಡಕ್ಕೂ ಸಂಬಂಧ ಇದೆ. ಗ್ಯಾಸ್ಟ್ರಿಕ್‌ ಸಮಸ್ಯೆಗೆ ಗ್ಯಾಸ್ ಕಾರಣ. ಗ್ಯಾಸ್‌ ಎನ್ನುವುದು ಆಹಾರ ಜೀರ್ಣಕ್ರಿಯೆಯ ಸಂದರ್ಭದಲ್ಲಿ ಉತ್ಪತ್ತಿಯಾಗುವ ಅನಿಲ. ತೇಗಿನ ಮೂಲಕ ಗ್ಯಾಸನ್ನು ದೇಹದಿಂದ ಹೊರಹಾಕಬಹುದು. ಆದರೆ ದೇಹದಿಂದ ಹೊರ ಹೋಗದೇ ಉಳಿದ ಗ್ಯಾಸ್‌ ಜೀರ್ಣಾಂಗ ವ್ಯವಸ್ಥೆಯಲ್ಲಿ ಉಳಿದುಕೊಂಡು ಸಮಸ್ಯೆ ಸೃಷ್ಟಿಸಬಹುದು. ಇದನ್ನು ಗ್ಯಾಸ್ಟ್ರಿಕ್‌ ಸಮಸ್ಯೆ ಎಂದು ಹೇಳಬಹುದು.


    ಹೃದಯಾಘಾತದ ಲಕ್ಷಣಗಳೇನು?
    ಹೃದಯಾಘಾತ ಸಂಭವಿಸಿದಾಗ ಹೃದಯ ಹಿಂಡಿದಂತಹಾ ಅನುಭವ ಉಂಟಾಗುತ್ತದೆ. ಇದು ಯಾವುದೇ ಪೆಟ್ಟು ಅಥವಾ ಗಾಯದಿಂದ ಉಂಟಾದ ನೋವಲ್ಲ ಎಂಬುದು ತಿಳಿಯುತ್ತದೆ. ಎದೆಯ ಮೇಲೆ ಭಾರವಾದ ವಸ್ತು ಇಟ್ಟಂತಹ ಅನುಭವ. ದೇಹದ ಮಧ್ಯಭಾಗದಲ್ಲಿ ಆರಂಭವಾಗುವ ನೋವು ಕೈ, ಕುತ್ತಿಗೆ, ದವಡೆ ಹಾಗೂ ಬೆನ್ನಿಗೆ ಹರಡುತ್ತದೆ. ಸುಮಾರು 5 ನಿಮಿಷಗಳ ಕಾಲ ಸಾಕಷ್ಟು ನೋವು ಅನುಭವವಾಗುತ್ತದೆ. ಇದರ ಜೊತೆಗೆ ಉಸಿರಾಟದಲ್ಲಿ ಕಷ್ಟ, ಬೆವರು, ವಾಕರಿಕೆ, ತಲೆತಿರುಗಿದ ಅನುಭವ, ಅಶಕ್ತತೆ ಕೂಡ ಅನುಭವವಾಗಬಹುದು. ಡಯಾಬಿಟಿಸ್, ಹೈ ಬಿಪಿ, ಕೊಲೆಸ್ಟ್ರಾಲ್‌ ಸಮಸ್ಯೆಯಿಂದ ಬಳಲುತ್ತಿರುವವರು, ಧೂಮಪಾನ, ತಂಬಾಕು ಸೇವನೆ ಮಾಡುವವರು, ಕುಟುಂಬದಲ್ಲಿ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದವರಿದ್ದರೆ 30 ವರ್ಷ ಮೇಲ್ಪಟ್ಟವರಿಗೆ ಹೃದಯಾಘಾತದ ಸಾಧ್ಯತೆ ಹೆಚ್ಚಾಗಿರುತ್ತದೆ.


    ಗ್ಯಾಸ್ಟ್ರಿಕ್‌ ಸಮಸ್ಯೆ ಲಕ್ಷಣಗಳೇನು?
    ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳುವ ಜೊತೆಗೆ ಚುಚ್ಚಿದಂತಹ, ಉರಿ ಅನುಭವ ಉಂಟಾಗುತ್ತದೆ. ಪ್ರತಿ ಬಾರಿ ಕೆಲವು ಸೆಕೆಂಡುಗಳ ಕಾಲ ಈ ನೋವು ಅನುಭವಕ್ಕೆ ಬಂದು ಮತ್ತೆ ಮುಂದುವರೆಯುತ್ತದೆ. ಇದು ನಿರಂತರ ನೋವಲ್ಲ. ಖಾರ ಮತ್ತು ಅತಿ ಹುಳಿ ಪದಾರ್ಥಗಳನ್ನು ಸೇವಿಸಿದಾಗ, ಮದ್ಯಪಾನ ಹಾಗೂ ಕೆಲ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿದಾಗ ಗ್ಯಾಸ್ಟ್ರಿಕ್ ಸಮಸ್ಯೆಯ ಸಾಧ್ಯತೆ ಹೆಚ್ಚಾಗಿರುತ್ತದೆ. ವಾಕರಿಕೆ, ಹೊಟ್ಟೆ ಉಬ್ಬರ, ವಾಂತಿ, ಬಾಯಲ್ಲಿ ಹುಳಿ ರುಚಿ ಅನುಭವ ಕೂಡ ಗ್ಯಾಸ್ಟ್ರಿಕ್ ಸಮಸ್ಯೆಯ ಲಕ್ಷಣಗಳಾಗಿವೆ. ಇಲ್ಲಿ ದೇಹದ ವಿವಿಧ ಅಂಗಗಳಿಗೆ ನೋವು ಹರಡುವ ಸಾಧ್ಯತೆ ಇರುವುದಿಲ್ಲ. ಹಾಗೇ ಗ್ಯಾಸ್‌ ಪಾಸ್‌ ಮಾಡಿದ ಬಳಿಕ ಈ ನೋವು ಸಾಮಾನ್ಯವಾಗಿ ಕಡಿಮೆಯಾಗುತ್ತದೆ.


    ಯಾವಾಗ ವೈದ್ಯರನ್ನು ಕಾಣಬೇಕು? ಗೊಂದಲವಿದ್ದಲ್ಲಿ ಏನು ಮಾಡಬೇಕು?
    ಹೊಟ್ಟೆ ಮತ್ತು ಹೃದಯಭಾಗದ ಮಧ್ಯದಲ್ಲಿ ನಿರಂತರ ನೋವು ಹಾಗೂ ಈ ನೋವು ದೇಹದ ವಿವಿಧ ಭಾಗಗಳಿಗೆ (ಕೈ, ಬೆನ್ನು, ದವಡೆ) ಹರಡುವ ಅನುಭವವಾಗುತ್ತಿದ್ದಲ್ಲಿ, ಜೊತೆಗೆ ಬೆವರುವುದು, ಉಸಿರಾಟದಲ್ಲಿ ಕಷ್ಟ ಉಂಟಾದರೆ ತಡ ಮಾಡದೇ ವೈದ್ಯರನ್ನು ಭೇಟಿಯಾಗಿ. ಇಸಿಜಿ, ಇಸಿಹೆಚ್‌ಒ, ಟಿಎಂಟಿ ಅಥವಾ ರಕ್ತ ಪರೀಕ್ಷೆಗಳಾದ ಸಿಕೆ ಎಮ್‌ಬಿ, ಟ್ರೊಪೊನೊನಿನ್‌ ಟಿ ಮತ್ತು ಎಂಜಿಯೊಗ್ರಾಮ್ ಮೂಲಕ ಹೃದಯಾಘಾತವನ್ನು ಪತ್ತೆ ಹಚ್ಚಿ ಸಾವಿನ ಸಂಭವವನ್ನು ತಡೆಯಬಹುದು. ಹೃದಯ ಸಮಸ್ಯೆಯ ಸಾಧ್ಯತೆ ಹೆಚ್ಚಿದೆ ಅನಿಸಿದ್ದಲ್ಲಿ ಟ್ರೆಡ್‌ಮಿಲ್‌ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಕಾರ್ಡಿಯಾಕ್‌ ಪರೀಕ್ಷೆ ನೆಗೆಟಿವ್‌ ಬಂದಲ್ಲಿ ಆಂಟಾಸಿಡ್ ಕೂಡ ನೀಡಬಹುದಾಗಿದೆ. ಗ್ಯಾಸ್ಟ್ರಿಕ್‌ ಸಂಶಯವಿದ್ದಲ್ಲಿ ಎಂಡೊಸ್ಕೊಪಿ, ಪಿಹೆಚ್‌-ಮೆಟ್ರಿ ಅಥವಾ ಮ್ಯಾನೊಮೆಟ್ರಿ ವಿಧಾನ (ಒತ್ತಡ ಮಾಪನ ವಿಧಾನ) ಅಗತ್ಯವಾಗಬಹುದು.
    ಒಟ್ಟಿನಲ್ಲಿ, ಹಾರ್ಟ್ ಅಟ್ಯಾಕ್‌ ಬಂದ ನಂತರ ಏನು ಮಾಡುವುದು ಎನ್ನುವುದಕ್ಕಿಂತ ಆಗದಂತೆ ಆರೋಗ್ಯವನ್ನು ಕಾಪಾಡುವುದು ಬಹಳ ಮುಖ್ಯ. ಹೃದಯಾಘಾತದಂತಹ ಸಂದರ್ಭ ಎದುರಾದಾಗ ರೋಗಿಯ ಜೊತೆಗಿರುವವರು ಗಾಬರಿಯಾಗದೇ ತಕ್ಷಣ ವೈದ್ಯರ ನೆರವು ಪಡೆಯುವುದು ಅಗತ್ಯ. ಹಾಗೇ ಗ್ಯಾಸ್ಟ್ರಿಕ್‌ ಸಮಸ್ಯೆ ಎನಿಸಿದ್ದೂ ನೋವು ನಿರಂತರವಾಗಿದ್ದಲ್ಲಿ ನಿರ್ಲಕ್ಷಿಸದೇ ವೈದ್ಯರ ನೆರವು ಪಡೆಯಿರಿ.


    ಹೃದಯಾಘಾತ ತಡೆಗೆ ಮುನ್ನೆಚ್ಚರಿಕೆ ಕ್ರಮಗಳೇನು ?
    ಆರೋಗ್ಯಪೂರ್ಣ ಜೀವನಶೈಲಿ ಹಾಗೂ ಈಗಾಗಲೇ ಹೃದಯ ಸಂಬಂಧಿತ ಅಥವಾ ಡಯಾಬಿಟಿಸ್, ಹೈಪರ್‍‌ಟೆನ್ಷನ್, ಬೊಜ್ಜಿನಂತಹ ಸಮಸ್ಯೆಗಳಿದ್ದರೆ ಸೂಕ್ತ ಚಿಕಿತ್ಸೆ ಮತ್ತುನಿಯಮಿತ ತಪಾಸಣೆ ಪಡೆಯುವುದು, ನಿಯಮಿತ ವ್ಯಾಯಾಮ, ಒತ್ತಡ ರಹಿತ ಜೀವನ ರೂಪಿಸಿಕೊಳ್ಳುವುದು, ಮದ್ಯಪಾನ ಹಾಗೂ ಧೂಮಪಾನದಿಂದ ದೂರವಿರುವುದೇ ಹೃದಯಾಘಾತ ತಡೆಗೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳು.


    ಡಾ. ಎಂ.ಎನ್‌.ಭಟ್‌, ಹಿರಿಯ ಇಂಟರ್ವೆನ್ಶನಲ್‌ ಕಾರ್ಡಿಯಾಲಾಜಿಸ್ಟ್‌ ಹಾಗೂ ಡಾ. ಅನುರಾಗ ಶೆಟ್ಟಿ, ಮೆಡಿಕಲ್ ಗ್ಯಾಸ್ಟ್ರೋಎಂಟಿರಾಲಜಿಸ್ಟ್‌, ಕೆಎಂಸಿ ಆಸ್ಪತ್ರೆ, ಮಂಗಳೂರು

  • ಚರ್ಚ್ ಮೇಲೆ ಇಸ್ರೇಲ್ ಮಿಸೈಲ್ ದಾಳಿ:ಸ್ಪಷ್ಟೀಕರಣ ನೀಡದಿರಲು ಕಾರಣವೇನು?

    ಚರ್ಚ್ ಮೇಲೆ ಇಸ್ರೇಲ್ ಮಿಸೈಲ್ ದಾಳಿ:ಸ್ಪಷ್ಟೀಕರಣ ನೀಡದಿರಲು ಕಾರಣವೇನು?

    ಗಾಝಾದಲ್ಲಿರುವ ಹೋಲಿ ಫ್ಯಾಮಿಲಿ ಚರ್ಚ್‌ ಮೇಲೆ ಗುರುವಾರ ಬೆಳಿಗ್ಗೆ ಇಸ್ರೇಲ್‌ ಶೆಲ್‌ ದಾಳಿ ಮಾಡಿದೆ. ದಾಳಿಯಲ್ಲಿ ಚರ್ಚ್‌ನ ಪಾದ್ರಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
    ಇತ್ತೀಚೆಗೆ ಮೃತಪಟ್ಟ ಪೋಪ್‌ ಫ್ರಾನ್ಸಿಸ್‌ ಅವರಿಗೆ ಈ ಚರ್ಚ್‌ನ ಪಾದ್ರಿ, ಫಾದರ್‌ ಗೇಬ್ರಿಯಲ್‌ ರೊಮಾನಿ ಅವರು ಅತ್ಯಂತ ಆಪ್ತರಾಗಿದ್ದರು. ಗಾಝಾ ಮೇಲೆ ಇಸ್ರೇಲ್‌ ದಾಳಿ ನಡೆಸಲು ಆರಂಭಿಸಿದಾಗಿನಿಂದಲೂ ಫ್ರಾನ್ಸಿನ್‌ ಅವರು ಗೇಬ್ರಿಯಲ್‌ ಅವರಿಗೆ ಪದೇ ಪದೇ ಕರೆ ಮಾಡಿ, ಜನರ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದರು.

    ದಾಳಿಯ ಬಗ್ಗೆ ಇಸ್ರೇಲ್‌ ಸೇನೆ ಈವರೆಗೂ ‍ಪ್ರತಿಕ್ರಿಯೆ ನೀಡಿಲ್ಲ. ಹಮಾಸ್ ಯೋಧರನ್ನು ಗುರಿಯಾಗಿಸುವ ನೆಪದಲ್ಲಿ ಇಸ್ರೇಲ್ ಗಾಝಾದ ಅಮಾಯಕರ ಹತ್ಯೆ ಮಾಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಗಾಝಾ ನಗರದ ಕಟ್ಟಡಗಳ ಮೇಲೆ ನಿರಂತರ ಮಿಸೈಲ್ ದಾಳಿ ಮಾಡುವ ಮೂಲಕ, ಇಸ್ರೇಲ್ ಗಾಝಾದ ಜನರಿಗೆ ಆಶ್ರಯ ಇಲ್ಲದಂತೆ ಮಾಡುತ್ತಿದೆ.

  • “ಮತಗಳನ್ನು ಕದಿಯುವಾಗಲೇ ಚುನಾವಣಾ ಆಯೋಗ ಸಿಕ್ಕಿಬಿದ್ದಿದೆ”:ರಾಹುಲ್ ಗಾಂಧಿ ಆರೋಪಿಸಿದ್ದೇಕೆ?

    “ಮತಗಳನ್ನು ಕದಿಯುವಾಗಲೇ ಚುನಾವಣಾ ಆಯೋಗ ಸಿಕ್ಕಿಬಿದ್ದಿದೆ”:ರಾಹುಲ್ ಗಾಂಧಿ ಆರೋಪಿಸಿದ್ದೇಕೆ?

    ‘ಬಿಹಾರದ ಚುನಾವಣೆ ಹೊಸ್ತಿಲಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆ (SIR) ಹೆಸರಿನಲ್ಲಿ ಮತಗಳನ್ನು ಕದಿಯುವಾಗ ಚುನಾವಣಾ ಆಯೋಗ ಕೈಗೆ ಸಿಕ್ಕಿಬಿದ್ದಿದ್ದು, ಆಯೋಗವು ಬಿಜೆಪಿಯ ‘ಎಲೆಕ್ಷನ್‌ ಚೋರಿ ಬ್ರಾಂಚ್‌’ ಆಗಿ ಬದಲಾಗಿದೆಯೇ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಳಿದ್ದಾರೆ.
    22 ವರ್ಷಗಳ ನಂತರ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಇದರಲ್ಲಿ ಅನರ್ಹ, ಒಂದಕ್ಕಿಂತ ಹೆಚ್ಚು ಬಾರಿ ಹೆಸರಿರುವ ಹಾಗೂ ಕಾನೂನಿನ್ವಯ ಅರ್ಹ ಮತದಾರರ ಹೆಸರು ಸೇರಿಸುವ ಪ್ರಕ್ರಿಯೆಗೆ ಚುನಾವಣಾ ಆಯೋಗ ಮುನ್ನುಡಿ ಬರೆದಿದೆ.
    ಯುಟ್ಯೂಬರ್‌ ಅಜಿತ್ ಅಂಜುಮ್ ಅವರು ಬಿಹಾರದಲ್ಲಿ ಕೈಗೊಂಡಿರುವ SIR ಕುರಿತು ಸರಣಿ ವರದಿಗಳನ್ನು ಪ್ರಸಾರ ಮಾಡಿದ್ದರು. ಇವುಗಳನ್ನು ರಾಹುಲ್ ಗಾಂಧಿ ಮರು ಹಂಚಿಕೊಂಡಿದ್ದು, ‘SIR ಹೆಸರಿನಲ್ಲಿ ಚುನಾವಣಾ ಆಯೋಗವು ಮತಗಳನ್ನು ಕದಿಯುವಾಗಲೇ ಸಿಕ್ಕಿಬಿದ್ದಿದೆ. ಈ ಸುದ್ದಿಯನ್ನು ಬಯಲಿಗೆ ತಂದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
    ‘ಚುನಾವಣಾ ಆಯೋಗವು ಈಗಲೂ ಪಾರದರ್ಶಕ ಚುನಾವಣೆ ನಡೆಸುವ ಸಂಸ್ಥೆಯಾಗಿಯೇ ಉಳಿದಿದೆಯೇ ಅಥವಾ ಸಂಪೂರ್ಣವಾಗಿ ಬಿಜೆಪಿಯ ‘ಚುನಾವಣಾ ಕಳ್ಳತನ ಶಾಖೆ’ಯಾಗಿ ಬದಲಾಗಿದೆಯೇ’ ಎಂದು ರಾಹುಲ್ ಪ್ರಶ್ನಿಸಿದ್ದಾರೆ.
    ‘ಪೌರತ್ವ ದಾಖಲೆಗಳನ್ನೇ ಮುಂದಿಟ್ಟುಕೊಂಡು ಕೊಟ್ಯಂತರ ಅರ್ಹ ಭಾರತೀಯ ಮತದಾರರನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡುವ ಹುನ್ನಾರ ನಡೆಸಲಾಗಿದೆ’ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
    ‘ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭದಲ್ಲಿ ಅರ್ಹ ಮತದಾರರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದೀರಿ’ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಇತ್ತೀಚೆಗೆ ಹೇಳಿದ್ದರು.

    ಬಿಹಾರ ವಿಧಾನಸಭೆಗೆ ಇದೇ ವರ್ಷ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಇದರ ಭಾಗವಾಗಿ ನಡೆದ SIR ಪ್ರಶ್ನಿಸಿ ವಿರೋಧ ಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು. ಇದರ ಬೆನ್ನಲ್ಲೇ ಜ್ಞಾನೇಶ್ ಕುಮಾರ್‌ ಅವರು ಈ ಹೇಳಿಕೆ ನೀಡಿದ್ದರು.

  • ಧರ್ಮಸ್ಥಳ ಪ್ರಕರಣ: “ತನಿಖೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಯಲಿ”ವಕೀಲರು ಸಿದ್ದರಾಮಯ್ಯರಲ್ಲಿ ಆಗ್ರಹಿಸಲು ಕಾರಣವೇನು?

    ಧರ್ಮಸ್ಥಳ ಪ್ರಕರಣ: “ತನಿಖೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಯಲಿ”ವಕೀಲರು ಸಿದ್ದರಾಮಯ್ಯರಲ್ಲಿ ಆಗ್ರಹಿಸಲು ಕಾರಣವೇನು?

    ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಗೃಹ ಕಚೇರಿ ಕೃಷ್ಣಾದಲ್ಲಿ, ಹಿರಿಯ ವಕೀಲರಾದ ಬಾಲನ್, ಡಾ.ಸಿ.ಎಸ್.ದ್ವಾರಕನಾಥ್, ಉಮಾಪತಿ, ಸುಧಾ ಕಟ್ಟಾ ಹಾಗೂ ಸಾಮಾಜಿಕ ಕಾರ್ಯಕರ್ತ ಟಿ.ನರಸಿಂಹಮೂರ್ತಿಯನ್ನೊಳಗೊಂಡ ನಿಯೋಗವು ಭೇಟಿಯಾಗಿ ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ರಚನೆ ಮಾಡುವುದು ಮಾತ್ರವಲ್ಲದೆ, ತನಿಖೆಯ ಹೊಣೆಯನ್ನು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಅಥವಾ ಎಡಿಜಿಪಿಗೆ ವಹಿಸಬೇಕು ಎಂದು ಒತ್ತಾಯಿಸಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಸಿ.ಎಸ್.ದ್ವಾರಕನಾಥ್, “ದಿನೇ ದಿನೇ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಪ್ರಕರಣಗಳು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿವೆ. ಇದರ ನಡುವೆ ಹಲವಾರು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ಸಾಕ್ಷಿದಾರ ಬಂದಿದ್ದು, ಆತನಿಗೆ ಸೂಕ್ತ ರಕ್ಷಣೆ ನೀಡುವ ಜವಾಬ್ದಾರಿ ರಾಜ್ಯ ಸರಕಾರದ್ದು. ಧರ್ಮಸ್ಥಳ ವ್ಯಾಪ್ತಿಯಲ್ಲಿ ಮಹಿಳೆಯರ ಮೇಲೆ ಮಾತ್ರ ದೌರ್ಜನ್ಯ ನಡೆದಿಲ್ಲ. ಬದಲಾಗಿ ಭಿಕ್ಷುಕರನ್ನು ಹತ್ಯೆ ಮಾಡಿರುವ ಆರೋಪಗಳು ಇವೆ” ಎಂದು ಹೇಳಿದರು.
    “ಇನ್ನೂ, ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಸಾಕ್ಷಿ ದೂರುದಾರ ಜು.11ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದು, ತಾನು ಹೂತು ಹಾಕಿದ್ದ ಮೃತದೇಹವೊಂದನ್ನು ಹೊರತೆಗೆದಿರುವುದಾಗಿ ಹೇಳಿದ್ದಾನೆ. ಹೀಗಿರುವಾಗ ರಾಜ್ಯ ಸರಕಾರ ತುರ್ತು ಎಸ್‌ಐಟಿ ರಚನೆ ಮಾಡಬೇಕು. ಎಲ್ಲ ಸಾಕ್ಷ್ಯಗಳನ್ನು ರಕ್ಷಣೆ ಮಾಡಬೇಕು. ಜತೆಗೆ, ಉನ್ನತ ತನಿಖೆ ನಡೆಯಬೇಕು” ಎಂದು ಆಗ್ರಹಿಸಿದರು.

    “ಧರ್ಮಸ್ಥಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪ್ರಕರಣಗಳ ಬೆಳವಣಿಗೆಯ ತನಿಖೆ ಎಲ್ಲವೂ ಓರ್ವ ಸಾಮಾನ್ಯ ಇನ್‌ ಸ್ಪೆಕ್ಟರ್ ನೇತೃತ್ವದಲ್ಲಿ ನಡೆಯುತ್ತಿದೆ. ಈ ಇನ್‌ಸ್ಪೆಕ್ಟರ್ ಡಿವೈಎಸ್ಪಿ ಆದೇಶ ಪಾಲನೆ ಮಾಡಬೇಕು. ಆದರೆ, ವಾಸ್ತವ ಬೇರೆಯೇ ಇದ್ದು, ಅಲ್ಲಿನ ದೊಡ್ಡ ಯಜಮಾನರೇ ಡಿವೈಎಸ್ಪಿಯನ್ನು ನಿಯೋಜನೆ ಮಾಡಿಕೊಂಡಿದ್ದಾರೆ. ಎಸ್‌ಐಟಿ ರಚನೆ ಮಾಡುವಂತೆ ಕೋರಿ ಸಲ್ಲಿಸಿದ ನಮ್ಮ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದು ಮಾತ್ರವಲ್ಲದೆ, ಗೃಹ ಇಲಾಖೆಯೊಂದಿಗೆ ಚರ್ಚೆ ನಡೆಸಿ ಆನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ” ಎಂದು ದ್ವಾರಕನಾಥ್ ಹೇಳಿದರು.

    ಮನವಿಯಲ್ಲೇನಿದೆ?
    ಎಡಿಜಿಪಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್‌ ಐಟಿ ತನಿಖೆ ನಡೆಯಬೇಕು.
    ಸಾಕ್ಷ್ಯಗಳನ್ನು ರಕ್ಷಣೆ ಮಾಡಬೇಕು.
    ದಾಖಲಾಗಿರುವ ದೂರುಗಳನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು.
    ಸಾಕ್ಷಿದಾರರಿಗೆ ಸೂಕ್ತ ರಕ್ಷಣೆ ನೀಡಬೇಕು.
    ಕಳಂಕಿತ ಪೊಲೀಸ್ ಅಧಿಕಾರಿಗಳನ್ನು ತನಿಖೆಯಿಂದ ದೂರ ಇಡಬೇಕು.

  • ಮೂಡಬಿದ್ರೆ ಕಾಲೇಜೊಂದರ ವಿದ್ಯಾರ್ಥಿನಿಯ ಅತ್ಯಾಚಾರ:
ಉಪನ್ಯಾಸಕ ಸೇರಿ ಮೂವರ ಬಂಧನ

    ಮೂಡಬಿದ್ರೆ ಕಾಲೇಜೊಂದರ ವಿದ್ಯಾರ್ಥಿನಿಯ ಅತ್ಯಾಚಾರ: ಉಪನ್ಯಾಸಕ ಸೇರಿ ಮೂವರ ಬಂಧನ

    ಮಂಗಳೂರು: ವಿದ್ಯಾರ್ಥಿನಿಯನ್ನು ಬ್ಲ್ಯಾಕ್‌ಮೇಲ್‌ ಮಾಡಿ ಅತ್ಯಾಚಾರ ಮಾಡಿದ್ದ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕಾಲೇಜೊಂದರ ಇಬ್ಬರು ಉಪನ್ಯಾಸಕರೊಂದಿಗೆ ಸ್ನೇಹಿತನನ್ನು ಮಾರತ್‌ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
    19 ವರ್ಷದ ಸಂತ್ರಸ್ತೆ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
    ಕಾಲೇಜಿನ ಭೌತವಿಜ್ಞಾನ ವಿಭಾಗದ ಉಪನ್ಯಾಸಕ ನರೇಂದ್ರ, ಜೀವವಿಜ್ಞಾನ ವಿಭಾಗದ ಉಪನ್ಯಾಸಕ ಸಂದೀಪ್‌ ಹಾಗೂ ಅವರ ಸ್ನೇಹಿತ ಬೆಂಗಳೂರು ನಿವಾಸಿ ಅನೂಪ್‌ ಬಂಧಿತರು.
    ‘ಘಟನೆಯು ಕೆಲವು ತಿಂಗಳ ಹಿಂದೆ ನಡೆದಿತ್ತು. ಆರೋಪಿಗಳ ಬ್ಲ್ಯಾಕ್‌ಮೇಲ್‌ ಹೆಚ್ಚಾದ ಮೇಲೆ ಮಹಿಳಾ ಆಯೋಗಕ್ಕೆ ಕಳೆದ ವಾರ ಪೋಷಕರ ಜತೆಗೆ ಬಂದು ವಿದ್ಯಾರ್ಥಿನಿ ದೂರು ನೀಡಿದ್ದರು. ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ದೂರನ್ನು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿಗೆ ವರ್ಗಾಯಿಸಿ ತನಿಖೆಗೆ ಸೂಚನೆ

    ನೀಡಿದ್ದರು. ಮಾರತ್‌ಹಳ್ಳಿ ಠಾಣೆಯ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ನೋಟ್ಸ್ ನೀಡುವ ನೆಪದಲ್ಲಿ ಕೃತ್ಯ:
    ‘ಭೌತವಿಜ್ಞಾನ ವಿಭಾಗದ ಉಪನ್ಯಾಸಕ ನರೇಂದ್ರ ನೋಟ್ಸ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿಗೆ ಹತ್ತಿರವಾಗಿದ್ದ. ಬಳಿಕ ಆಕೆಯ ಜತೆಗೆ ವಾಟ್ಸ್‌ಆ್ಯಪ್‌ನಲ್ಲಿ ಚಾಟ್ ಮಾಡುವುದು, ನೋಟ್ಸ್ ಕಳುಹಿಸುವುದು ಮಾಡುತ್ತಿದ್ದ. ಅಲ್ಲಿ ಶಿಕ್ಷಣ ಪೂರೈಸಿ ಆಕೆ ಬೆಂಗಳೂರಿಗೆ ಬಂದ ನಂತರವೂ ಸಂದೇಶ ಕಳುಹಿಸುತ್ತಿದ್ದ. ನೋಟ್ಸ್ ನೀಡುವುದನ್ನೂ ಮುಂದುವರಿಸಿದ್ದ. ಅದೇ ನೆಪದಲ್ಲಿ ಮಾರತ್‌ಹಳ್ಳಿಯ ಗೆಳೆಯನ ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದಾಗಿ ಬೆದರಿಕೆ ಹಾಕಿದ್ದ’ ಎಂದು ಮೂಲಗಳು ಹೇಳಿವೆ.

    ‘ಕೆಲವು ದಿನಗಳ ನಂತರ ಜೀವವಿಜ್ಞಾನ ವಿಭಾಗದ ಉಪನ್ಯಾಸಕ ಸಂದೀಪ್‌ಗೂ ಈ ವಿಷಯ ಗೊತ್ತಾಗಿತ್ತು. ‘ನೀನು ನರೇಂದ್ರನ ಜೊತೆಗಿರುವ ಫೋಟೊ ಹಾಗೂ ವಿಡಿಯೊಗಳು ನನ್ನ ಬಳಿಯಿವೆ. ನನ್ನ ಜತೆಗೆ ಸಹಕಾರ ನೀಡದಿದ್ದರೆ ಕಾಲೇಜಿನ ಎಲ್ಲರಿಗೂ ವಿಷಯ ತಿಳಿಯುವಂತೆ ಮಾಡುತ್ತೇನೆ ಎಂಬುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್​ಮೇಲ್ ಮಾಡಲು ಆರಂಭಿಸಿದ್ದ. ನಂತರ, ಸಂದೀಪ್‌ ಸಹ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದ’ ಎಂದು ಮೂಲಗಳು ತಿಳಿಸಿವೆ.

    ಸ್ನೇಹಿತನಿಂದಲೂ ಅತ್ಯಾಚಾರ:
    ವಿದ್ಯಾರ್ಥಿನಿ ಮೇಲೆ ನರೇಂದ್ರ ಹಾಗೂ ಸಂದೀಪ್ ಅತ್ಯಾಚಾರ ಎಸಗಿದ್ದ ಕೊಠಡಿ ಅನೂಪ್‌ಗೆ ಸೇರಿತ್ತು. ಘಟನೆ ಬೆನ್ನಲ್ಲೇ ವಿದ್ಯಾರ್ಥಿನಿಯನ್ನು ಸಂಪರ್ಕಿಸಿದ್ದ ಅನೂಪ್, ‘ನೀನು ನನ್ನ ಕೊಠಡಿಗೆ ಬಂದು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನನ್ನ ಕೊಠಡಿಯಲ್ಲಿ ಕ್ಯಾಮೆರಾವಿದೆ. ನನ್ನ ಜತೆಗೂ ಸಹಕಾರ ನೀಡಬೇಕು ಎಂದು ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ‘ಭಯ ಪಡಬೇಡಿ ದೂರು ನೀಡಿ’
    ಸಂತ್ರಸ್ತೆಗೆ ಆಪ್ತಸಮಾಲೋಚನೆ ನಡೆಸಿ ಧೈರ್ಯ ತುಂಬಲಾಗಿದೆ. ‘ವಾರದ ಹಿಂದೆ ಹೆಣ್ಣು ಮಗಳೊಬ್ಬಳು ಪೋಷಕರ ಜತೆಗೆ ಬಂದು ದೂರು ನೀಡಿದ್ದಳು. ಆ ಮಗುವಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಾ ಶೋಷಣೆ ಮಾಡಿರುವುದು ಗೊತ್ತಾಗಿದೆ. ಆರೋಪಿಗಳು ಸಾಮಾಜಿಕ ಮಾಧ್ಯಮಗಳನ್ನೂ ಬಳಸಿಕೊಂಡು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದಾರೆ. ಸದ್ಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯೂ ತನ್ನ ಹೇಳಿಕೆ ದಾಖಲಿಸಿದ್ದಾಳೆ’ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ. ‘ಹೆಣ್ಣು ಮಗಳು ಧೈರ್ಯ ತೋರಿ ದೂರು ನೀಡಿದ್ದಾಳೆ. ಬ್ಲ್ಯಾಕ್‌ಮೇಲ್‌ಗೆ ಒಳಗಾಗದೇ ದೂರು ನೀಡಬೇಕು. ಹೆದರಿಕೊಂಡರೆ ನೀವೇ ಬಲಿಪಶು ಆಗುತ್ತೀರಿ. ಆರೋಪಿಗಳು ಶೋಷಣೆ ಮಾಡುತ್ತಲೇ ಇರುತ್ತಾರೆ. ಯಾವುದಾದರೂ ತಪ್ಪುಗಳು ನಡೆದರೆ ತಂದೆ –ತಾಯಿಗೆ ಮೊದಲು ತಿಳಿಸಬೇಕು. ನಂತರ ಹತ್ತಿರದ ಠಾಣೆಗೆ ಮಾಹಿತಿ ನೀಡಬೇಕು. ಅದೂ ಸಾಧ್ಯವಾಗದಿದ್ದರೆ ಮಹಿಳಾ ಆಯೋಗಕ್ಕೆ ತಿಳಿಸಿ’ ಎಂದು ನಾಗಲಕ್ಷ್ಮೀ ಮನವಿ ಮಾಡಿದರು.