Category: ಅಂಕಣಗಳು

  • ಕಾಡಿನಿಂದ ನಾಡಿಗೆ ಬಂದ ಆನೆಗಳು…

    ಕಾಡಿನಿಂದ ನಾಡಿಗೆ ಬಂದ ಆನೆಗಳು…

    ಇಂದು ಪತ್ರಿಕೆ ಮತ್ತು ಟಿ.ವಿ.ಗಳಲ್ಲಿ ಕಾಡಾನೆಗಳದ್ದೇ ಸುದ್ದಿ. ಅವು ಕಾಡಿನಿಂದ ನಾಡಿಗೆ ಕಾಲಿಟ್ಟು ದಾಂಧಲೆ ನಡೆಸಿದ ಘಟನೆಗಳೇ ಹೆಚ್ಚು. ಕೆಲವೊಮ್ಮೆ ಸಾವು-ನೋವಿನ ವಿಷಾದಕರ ಸುದ್ದಿಯೂ ಇರುತ್ತದೆ.

    ಆಳವಾದ ಚಿಂತನೆ ಮಾಡಿದರೆ, ಈ ಆನೆಗಳನ್ನು ನಾಡಿಗೆ ಬರ ಮಾಡಿಕೊಂಡದ್ದೇ ನಮ್ಮವರು. ತಮ್ಮ ಸ್ವಾರ್ಥಕ್ಕೆ ಅವರು ನಾನಾ ಕಾರಣಗಳಿಗೆ ಕಾಡನ್ನು ಕಡಿದು ಉರುಳಿಸಿದರು. ಅಭಿವೃದ್ಧಿಯ ನಾಮದಲ್ಲಿ ಜಲ ವಿದ್ಯುತ್, ಗಣಿಕಾರಿಕೆ, ರೈಲ್ವೆ ಹಳಿ, ರಿಸಾರ್ಟ್, ಸುರಂಗ, ಹೆದ್ದಾರಿ ಅನ್ನುತ್ತಾ ಎಲ್ಲಡೆ ಕೊಡಲಿ ಬೀಸಿದರು. ಕೃಷಿ ಭೂಮಿಯ ಒತ್ತುವರಿಯೆಂದು ಸಾಕಷ್ಟು ಅರಣ್ಯವನ್ನು ಧ್ವಂಸ ಮಾಡಿದರು. ಈಗ ಮೂಕ ಪ್ರಾಣಿ-ಪಕ್ಷಿಗಳು ದಿಕ್ಕುಪಾಲಾಗಿ ಚದುರಿಕೊಂಡವು. ಅದರಲ್ಲಿ ವಿಶೇಷವಾಗಿ ಈ ಗಜಪಡೆಯಂತೂ ತಾವು ತಮ್ಮ ಹಿರಿಯರಿಂದ ಗುರುತಿಸಿಕೊಂಡಿದ್ದ ಹಾದಿಯನ್ನು ಮರೆತು ಹೋದವು. ಈ ಸೇಡನ್ನು ತೀರಿಸಿಕೊಳ್ಳುವ ಅವು ಕಾಡಿನಿಂದ ನಾಡಿನತ್ತ ನುಗ್ಗಿದವು. ಅವುಗಳಿಗೆ ಕಬ್ಬಿನ ತೋಟ, ಪಚ್ಚೆ ಪೈರಿನ ಹೊಲಗದ್ದೆ, ಕಾಫಿ ತೋಟ, ಬಾಳೆಗಿಡಗಳ ಕೃಷಿ ಇತ್ಯಾದಿಗಳೇ ರುಚಿ ಅನಿಸಿದವು. ಸರಕಾರವು ಕಾಡು ಕಡಿದು ಕೃತಕವಾಗಿ ಸೃಷ್ಟಿಸಿದ ಗಿಡ-ಮರಗಳನ್ನು ಅವು ಮೂಸಿಯೂ ನೋಡಲಿಲ್ಲ.

    ಆನೆಗಳು ಯಾವತ್ತೂ ಕಾಡಿನ ಒಂದೇ ನೆಲೆಯಲ್ಲಿ ವಾಸವಾಗಿರುವುದಿಲ್ಲ. ಅವು ಆಹಾರವನ್ನು ಹುಡುಕುತ್ತಾ ಸಾವಿರಾರು ಕಿ.ಮೀ. ದೂರಕ್ಕೆ ಚಲಿಸಿಕೊಂಡೇ ಸಾಗುತ್ತವೆ. ಮನುಷ್ಯರಂತೆ ಆನೆಗಳು ಸಂಘ ಜೀವಿಗಳು. ಅವು ಒಗ್ಗಟ್ಟಿನಿಂದಲೇ ಜೀವನ ಸಾಗಿಸುತ್ತವೆ. ತಾತ-ಮುತ್ತಾತ, ಮಾವ-ಮಾಮಿ, ಚಿಕ್ಕಪ್ಪ-ಚಿಕ್ಕಮ್ಮ, ಅವರ ಮಕ್ಕಳು ಮರಿಗಳೆಂದು ಸುಮಾರು 60 ರಿಂದ 70 ಮಂದಿ ಸದಸ್ಯರು ಇರುತ್ತಾರೆ. ಈ ಗುಂಪಿಗೆ ಹೆಣ್ಣು ಆನೆಯೇ ಯಜಮಾನಿ- ನಾಯಕಿ. ಆಕೆ ಹೇಳಿದಂತೆ ಅವು ಎಲ್ಲಾ ನೀತಿ-ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಇಲ್ಲದಿದ್ದರೆ ಕುಟುಂಬದಿAದ ಹೊರ ದೂಡುತ್ತವೆ.

    ಈ ಬಂಧು-ಬಳಗವು ದಿನದ ಹದಿನೆಂಟು ತಾಸುಗಳನ್ನು ಆಹಾರ ತಿನ್ನವುದರಲ್ಲಿಯೇ ಕಳೆದುಕೊಳ್ಳುತ್ತವೆ. ಅವರ ದೈತ ದೇಹಕ್ಕೆ ಹಸಿವು ಹೆಚ್ಚು. ದಿನನಿತ್ಯ ಅವುಗಳಿಗೆ ಸುಮಾರು 25 ರಿಂದ 30 ಕೆ.ಜಿ.ಯಷ್ಟು ಆಹಾರಬೇಕು. ಹಾಗೆ 150 ರಿಂದ 180 ಲೀಟರ್‌ನಷ್ಟು ನೀರು ಬಾಯಾರಿಕೆಗೆ ಬೇಕು. ಬೇಸಿಗೆಯಲ್ಲಿ ಸ್ಥಳೀಯ ಜಲಧಾರೆಯು ಬತ್ತಿಕೊಂಡರೆ, ಮುಂದೆ ಎಲ್ಲಿ ನೀರು ಸಿಗುತ್ತದೆ ಅನ್ನುವ ಪರಿಜ್ಞಾನ ಅವುಗಳ ಹಿರಿಯರಿಗಿದೆ. ಈಗ ಅವು ಮೇವುವನ್ನು ಹುಡುಕುತ್ತಾ, ನೀರು ಅರಸುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತವೆ.

    ಕೆಲವು ಬಾರಿ ಅವು ಒಂದು ಪಶ್ಚಿಮ ಘಟ್ಟದಿಂದ, ಇನ್ನೊಂದು ಪಶ್ಚಿಮ ಘಟ್ಟಕ್ಕೆ ಪ್ರಯಾಣ ಬೆಳೆಸುತ್ತವೆ. ದಿನಕ್ಕೆ ಸುಮಾರು 20 ರಿಂದ 25 ಕಿ.ಮೀ. ದೂರ ಸಾಗುತ್ತ, ಸಾವಿರಾರು ಕಿ.ಮೀ. ಕ್ರಮಿಸುತ್ತವೆ. ಕರ್ನಾಟಕದಿಂದ ಕೇರಳದ ದಟ್ಟಡವಿಯಲ್ಲಿ ಸಾಗಿದರೂ ಅವು ಮತ್ತೆ ಹಿಂತಿರುಗಿ ಬರುವ ದಾರಿಯನ್ನು ಯಾವತ್ತೂ ಮರೆಯುವುದಿಲ್ಲ. ನಮ್ಮಂತಹ ಮನುಷ್ಯರಿಗೆ ಹೀಗೆ ಕಾಡಿನಲ್ಲಿ ದಾರಿ ತಪ್ಪುವುದೇ ಹೆಚ್ಚು. ಆಗ ಹುಡುಕಾಡಲು ಆಧುನಿಕ ಸೌಲಭ್ಯಗಳು ಬೇಕು. ಇಲ್ಲದಿದ್ದರೆ ಈ ಚಕ್ರವ್ಯೂಹದಿಂದ ಹೊರಬರುವುದೇ ಕಷ್ಟ. ಆದರೆ ಆನೆಗಳು ಈ ಹಾದಿಯನ್ನು ತಮ್ಮ ಹಿರಿಯರಿಂದ ಅರಿತುಕೊಳ್ಳುತ್ತವೆ. ಯಾವ ಋತುಮಾನದಲ್ಲಿ ಯಾವ ಕಡೆ ಸಾಗಬೇಕು ಅನ್ನುವುದು ಕಲಿತುಕೊಂಡಿರುತ್ತವೆ. ಇದು ಅವರಿಗೆ ಅನುಭವದಲ್ಲಿ ದಕ್ಕಿದ ಪಾಠ. ಪರಂಪರೆಯ ಜ್ಞಾನ!

    ಈಗ ಮನುಷ್ಯ ಈ ಹಾದಿಯನ್ನೇ ಕಡಿದು ಹಾಕಿದರೆ ಆನೆಗಳು ಏನು ಮಾಡಬೇಕು? ಯಾರ ತಂಟೆಗೂ ಹೋಗದೆ ಕಾಡಿನಲ್ಲಿ ಹಾಯಾಗಿದ್ದ ಅವು ದಿಕ್ಕು ತಪ್ಪಿ ಎತ್ತ ಸಾಗಬೇಕು? ಆಗ ಕಾಣಿಸಿಕೊಳ್ಳುವುದೇ ನಮ್ಮ ನಾಡು! ನಮ್ಮ ಕಾಡ ಹತ್ತಿರದ ಊರು!

    ಆನೆಗಳಲ್ಲಿ ಏಷ್ಯಾ ಖಂಡದ ಆನೆಗಳು ಮತ್ತು ಆಫ್ರಿಕಾ ಖಂಡದ ಆನೆಗಳು ಅನ್ನುವ ಎರಡು ವರ್ಗಗಳಿವೆ. ನಮ್ಮ ಆನೆಗಳ ಬೆನ್ನು ಹೊರ ಉಬ್ಬಿಕೊಂಡರೆ, ಅವುಗಳ ಹುಬ್ಬು ಒಳಗಡೆ ಬಾಗಿಕೊಂಡಿರುತ್ತದೆ. ನಮ್ಮಲ್ಲಿ ಗಂಡಿಗೆ ಮಾತ್ರ ದಂತವಿದ್ದರೆ ಆಫ್ರಿಕಾದ ಗಂಡು-ಹೆಣ್ಣಿಗೂ ದಂತಗಳಿವೆ. ಆದರೆ ಎರಡು ಖಂಡದ ಆನೆಗಳ ಜೀವಿತ ಅವಧಿ 60 ರಿಂದ 70 ವರ್ಷಗಳು.

    ಹೆಣ್ಣು ಆನೆ ಯೌವನಕ್ಕೆ ಕಾಲಿಡಲು 10 ರಿಂದ 12 ವರುಷಗಳು ಬಏಕು. ಅವುಗಳ ಗರ್ಭಧಾರಣೆಗೆ ಯಾವುದೇ ಋತುಮಾನದ ಅಗತ್ಯವಿಲ್ಲ. ಆದರೆ ಮರಿ ಆನೆ ತಾಯಿಯ ಗರ್ಭದಿಂದ ಹೊರಬರಲು 22 ರಿಂದ 23 ಮಾಸಗಳ ವರೆಗೆ ಕಾಯಬೇಕು. ಅಂದರೆ ಸುಮಾರು ಎರಡು ವರುಷಗಳಿಗೆ ಹತ್ತಿರ! ಹೆಚ್ಚಾಗಿ ಒಂದೇ ಮರಿ ನೀಡುವ ಆನೆಯೂ ಕೆಲವು ಬಾರಿ ಮಾತ್ರ ಅವಳಿಗಳಿಗೆ ಜನ್ಮ ನೀಡುತ್ತವೆ. ವಿಶೇಷವೆಂದರೆ ಆಗ ತಾನೆ ಹುಟ್ಟಿದ ಮರಿಯಾನೆಯೂ ಎದ್ದು ನಿಲ್ಲುತ್ತದೆ.

    ಗಜಲಕ್ಷ್ಮಿ ಈ ಮಗುವನ್ನು ಬಹು ಜಾಗ್ರತೆಯಿಂದ ಲಾಲನೆ-ಪಾಲನೆ ಮಾಡುತ್ತದೆ. ಸದಾ ಇವುಗಳನ್ನು ಗುಂಪಿನ ನಡುವೆ ಇಟ್ಟುಕೊಂಡೇ ಸಾಗುತ್ತವೆ. ಏಕೆಂದರೆ ಹುಲಿ ಮತ್ತು ಕತ್ತೆ ಕಿರುಬ ಇವುಗಳ ಅಜಾತ ಶತ್ರುಗಳು. ಇದನ್ನು ತಿಂದು ಮುಗಿಸಲು ಅವು ಸದಾ ಹೊಂಚು ಹಾಕಿರುತ್ತವೆ. ಹೀಗಾಗಿ ಬಾಣಂತಿಯಾದ ತಾಯಿಯೂ ಅದರ ರಕ್ಷಣೆಯಲ್ಲಿ ರಾತ್ರಿ ನಿದ್ದೆಯೂ ಸರಿಯಾಗಿ ಮಾಡದು.

    ಅಂದ ಹಾಗೆ ಆನೆಗಳಿಗೆ ನಿದ್ರೆ ಕಡಿಮೆ. ಇಡೀ ದಿನದಲ್ಲಿ ಅವು 4-5 ತಾಸು ಮಲಗಿದರೆ ಅದೇ ಹೆಚ್ಚು. ಬಹುತೇಕ ಅವು ನಿಂತುಕೊಂಡೇ ನಿದ್ರಿಸುತ್ತವೆ. ಅನುಕೂಲ ಕಂಡರೆ ಮಾತ್ರ ನೆಲಕ್ಕೆ ಒರಗಿಕೊಳ್ಳುತ್ತವೆ. ಇವುಗಳ ಶ್ರವಣ ಶಕ್ತಿ ಅದೆಷ್ಟು ತೀವ್ರವೆಂದರೆ, ಕಾಡಿನ ಮರದಿಂದ ಸಣ್ಣ ಕಾಯಿ ಬಿದ್ದರೂ ಅವು ಗ್ರಹಿಸಿಕೊಳ್ಳಬಹುದು. ಅದೇ ರೀತಿ ವಾಸನೆ ಗ್ರಂಥಿಯೂ ಸೂಕ್ಷ್ಮ. ಅದೇಷ್ಟು ದೂರದ ಮರದಲ್ಲಿ ಹಲಸಿನ ಹಣ್ಣುಗಳು ಪಕ್ವವಾದರೆ ಅದು ತಿಳಿದುಕೊಳ್ಳಬಹುದು. ನೆಲ್ಲಿಕಾಯಿ, ಬಿದಿರು, ಹುಣಸೆಕಾಯಿ, ಮಾವು ಮತ್ತು ಕಬ್ಬು ಇವುಗಳಿಗೆ ಪ್ರಿಯವಾದ ತಿನಿಸು. ಊರಿನ ಬೆಲ್ಲವೆಂದರೂ ಇಷ್ಟ.

    ಆನೆಗಳಿಗೆ ನೀರಾಟವೆಂದರೆ ತುಂಬಾ ಸಂತೋಷ. ಹೀಗಾಗಿ ಅವು ನದಿ ತೀರದಲ್ಲಿ, ಸರೋವರದ ಬಳಿ ಹೆಚ್ಚಾಗಿ ಕಾಣಿಸಕೊಳ್ಳುತ್ತವೆ. ಅವುಗಳಿಗೆ ಬೆವರು ಗ್ರಂಥಿಗಳಿಲ್ಲದ ಕಾರಣ, ಅವು ದೇಹದ ಉಷ್ಣತೆಯನ್ನು ತನ್ನ ವಿಶಾಲವಾದ ಕಿವಿಗಳಿಂದ ಚಾಮರದಂತೆ ಬೀಸಿಕೊಂಡು ತಂಪು ಮಾಡಿಕೊಳ್ಳುತ್ತವೆ. ಕೆಲವು ಬಾರಿ ಇಂತಹ ನೀರಿನಲ್ಲಿ ಮುಳುಗಿ ಪರಿಹಾರ ಹುಡುಕುತ್ತವೆ. ಅದರ ಸೊಂಡಿಲು ಬಲಿಷ್ಠವಾದರೂ, ತುಂಬಾ ಮೃದುವಾಗಿದೆ. ಸೊಂಡಲಿನ ತುದಿಯಲ್ಲಿ ಅದಕ್ಕೆ ನಮ್ಮ ಬೆರಳಿನಂತಹ ಅಂಗವಿದೆ. ಇದರಿಂದ ಅದು ಸಣ್ಣ ಅಡಿಕೆಯನ್ನೂ ಹೆಕ್ಕಿ ಕೊಡಬಲ್ಲದು. ಕಣ್ಣುಗಳು ಅತೀ ಚಿಕ್ಕದಿದ್ದರೂ, ಬಲು ದೂರದವರೆಗೆ ನೋಟ ಹರಿಸಬಹುದು. ತನ್ನ ಜೊತೆಗೆ ಶತ್ರುತ್ವವನ್ನು ಬೆಳೆಸಿದವರ ಪರಿಚಯವನ್ನು ಬಹಳಷ್ಟು ಕಾಲ ಮರೆಯದೆ ಇಡಬಹುದು. ಎರಡು ಹೊರ ದಂತಗಳAತೂ ಹುಲಿಯಂತಹ ಶತ್ರುಗಳನ್ನು ಎದುರಿಸಲು, ಮರದ ತೊಗಟೆಯನ್ನು ಸೀಳಿ ತೆಗೆಯಲು ನೆರವು ನೀಡುತ್ತದೆ. ಆದರೆ ದವಡೆಗಳಂತೂ ತನ್ನ ಜೀವಿತ ಅವಧಿಯಲ್ಲಿ ಆರು ಬಾರಿ ಉದುರಿ ಮತ್ತೆ ಹುಟ್ಟಿಕೊಳ್ಳುತ್ತವೆ. ದಿನದಲ್ಲಿ ಸುಮಾರು 16-18 ತಾಸುಗಳು ಅವು ಮೇಯುವ ಕಾರ್ಯದಲ್ಲಿ ನಿರಂತರವಾಗಿರುವಾಗ, ಅವು ಸವೆದು ಹೋಗುತ್ತವೆ. ಏಳನೇ ಬಾರಿ ಈ ಹಲ್ಲುಗಳು ಹುಟ್ಟಿಕೊಳ್ಳುವುದಿಲ್ಲ. ಅಷ್ಟರಲ್ಲಿ ಅದಕ್ಕೆ ಮುದಿತನ ಆವರಿಸಿಕೊಂಡಿರುತ್ತದೆ. ಆಗ ಅದಕ್ಕೆ ಜಗಿಯುವ ಶಕ್ತಿಯೇ ಇರದು. ಕೆಲವು ಬಾರಿ ಅವು ಈ ಕಾರಣವಾಗಿಯೇ ಉಪವಾಸ ಬಿದ್ದು ಸಾವನ್ನು ಅಪ್ಪುತ್ತವೆ. ಅದು ಪ್ರಕೃತಿ ನಿಯಮ.

    ಆನೆಯು ಅದೆಷ್ಟೇ ದೈತ ಇರಲಿ, ಮನುಷ್ಯನು ಮಾತ್ರ ಅದಕ್ಕಿಂತ ಬುದ್ಧಿವಂತ. ಅನಾದಿ ಕಾಲದಿಂದಲೂ ಆತ ಆನೆಯ ಬಲ, ಸಾಮರ್ಥ್ಯ ಶಕ್ತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದಾನೆ. ಇದನ್ನು ವಶಪಡಿಸಿಕೊಂಡರೆ ತನಗೆ ಆಗದಿರುವ ಅನೇಕ ಕೆಲಸ ಕಾರ್ಯಗಳನ್ನು ನಿರ್ವಹಿಸಬಹುದೆಂದು ಲೆಕ್ಕಾಚಾರ ಹಾಕಿದ್ದಾನೆ. ಹೀಗಾಗಿ ಆ ಬೆಟ್ಟದಂತಹ ಆ ಕಾಡು ಪ್ರಾಣಿಯನ್ನೇ ತನ್ನ ಅಂಕುಶದಲ್ಲಿ ಬಂಧಿಸಿ ನೆಲಕ್ಕೆ ಕೆಡವಿದ್ದಾಣೆ. ಮನುಷ್ಯನ ಮೋಹದ ಜಾಲದ ಖೆಡ್ಡಾ'ಕ್ಕೆ ಬಿದ್ದ ಆನೆಯಂತೂ ಮೋಸ ಹೋಗಿದೆ. ಅದು ಮಾವುತನಿಂದ ತರಬೇತಿ ಪಡೆದು, ತನ್ನ ಪ್ರತಿಭಟನೆ, ಒರಟುತನ, ಆಕ್ರೋಶ, ಸಿಟ್ಟು, ಆವೇಶ ಎಲ್ಲವನ್ನೂ ತ್ಯಜಿಸಿ ಸಾಧುವಾಗಿದೆ. ಆತನ ಎಲ್ಲಾ ಕೆಲಸಕ್ಕೂಜೀ ಹುಜೂರ್’ಯೆಂದು ಒಪ್ಪಿಕೊಂಡಿದೆ. ತನ್ನ ದೈತ್ಯ ಬಲದ ಶಕ್ತಿಯನ್ನು ಮರೆತು ಬಾಲ ಮುದುಡಿ ಮೌನವಾಗಿದೆ. ತನ್ನ ಕಂಬದAತಹ ಕಾಳಿಗೆ ಜುಜುಬಿ ಹಗ್ಗ ಕಟ್ಟಿದರೂ ಅದು ಕಬ್ಬಿಣದ ಸರಪಳಿಯೆಂದೇ ಭಾವಿಸಿಕೊಂಡಿದೆ. ಐದಡಿ-ಆರಡಿ ಮನುಷ್ಯನಿಗೆ, ಆತ ಕುಬ್ಬ, ಅಲ್ವ ಅನ್ನುವುದೇ ಮರೆತು ಹೋಗಿದೆ.

    ಒಂದು ವೇಳೆ ಅದು ತನ್ನ ನೈಜ ಕೋಪದಲ್ಲಿ ಸೊಂಡಿಲು ಬಳಸಿದರೆ, ಮನುಷ್ಯನ ದೇಹದ ಮೂಳೆಗಳು ಲಟಲಟನೆ ಮುರಿದು ಹೋಗಬಹುದು. ತಲೆಯು ಬಲವಾದ ಪಾದದ ಅಡಿಯಲ್ಲಿ ಬಂದರೆ ಬುರುಡೆಯೇ ಇರದು. ಕೂಡಲೇ ಅಪ್ಪಚ್ಚಿಯಾಗಿ ಸಿಡಿದು ಹೋಗಬಹುದು!

    ಆದರೆ ಬುದ್ಧಿವಂತ ಮನುಷ್ಯನು ಅದನ್ನೂ ರಾಜ-ಮಹಾರಾಜರ ಕಾಲದಿಂದಲೂ ಯೋಗ್ಯವಾಗಿ ಬಳಸಿಕೊಂಡಿದ್ದಾನೆ. ಘೋರ ಕಾಳಗವೇ ಇರಲಿ, ಸಣ್ಣ ಪುಟ್ಟ ಯುದ್ಧಗಳೇ ಇರಲಿ, ಅದರ ಮೇಲೆ ಹತ್ತಿ ಶತ್ರುಗಳನ್ನು ಸದೆ ಬಡೆದಿದ್ದಾನೆ- ಯಾರೂ ಸಾಗದ ನದಿ, ಬೆಟ್ಟ, ಗುಡ್ಡ, ಕಾಡುಗಳನ್ನು ಬಳಸಿ ದುರ್ಗಮ ಹಾದಿಯನ್ನೂ ಸವೆದಿದ್ದಾನೆ. ಯುದ್ಧದ ಸಾಮಗ್ರಿ ಹಾಗೂ ಆಹಾರ ವಸ್ತುಗಳ ಭಾರವಾದ ವಸ್ತುಗಳನ್ನು ಅದರ ಬೆನ್ನು ಮೇಲೆ ಏರಿಕೊಂಡು ಅದರ ಉಪಯೋಗ ಪಡೆದಿದ್ದಾನೆ. ಕೆಲವೊಮ್ಮೆ ಅದರ ಮೇಲೆ ಅಂಬರಿಯನ್ನೂ ಕಟ್ಟಿ ರಾಜ-ಮಹಾರಾಜರಿಗೆ ಊರ ಸವಾರಿಯನ್ನೂ ಮಾಡಿಸಿದ್ದಾನೆ.

    ದೊಡ್ಡ ದೊಡ್ಡ ಮರದ ದಿಮ್ಮಿಗಳಾಗಲಿ, ದೇವಸ್ಥಾನ ನಿರ್ಮಾಣದ ಕಲ್ಲು ಬಂಡೆಗಳಾಗಲಿ ಅದನ್ನು ಸಾಗಿಸಲು ಈ ಆನೆಗಳನ್ನು ಬಳಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಸೈನಿಕ ಪಡೆಯಲ್ಲಿ ಆನೆಗಳ ಸಂಖ್ಯೆಯೇ ದೊಡ್ಡ ಬಲವಾಗಿತ್ತು. ಈ ಆನೆಗಳು ಭಾರತದಿಂದ ಮುಂದೆ ಅನೇಕ ರಾಷ್ಟçಗಳಿಗೆ ಪ್ರಯಾಣವೂ ಬೆಳೆಸಿದವು. ಅವು ಅಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡವು.

    ಇರ್ಶಾದ್ ಮೂಡಬಿದ್ರೆ

  • ಪೀಲೆ ಖ್ಯಾತಿಯ ಫೆಲೆಸ್ತೀನಿಯನ್ ಫುಟ್ಬಾಲ್ ಆಟಗಾರ ಸುಲೈಮಾನ್ ಹ*ತ್ಯೆ

    ಪೀಲೆ ಖ್ಯಾತಿಯ ಫೆಲೆಸ್ತೀನಿಯನ್ ಫುಟ್ಬಾಲ್ ಆಟಗಾರ ಸುಲೈಮಾನ್ ಹ*ತ್ಯೆ

    ಸುಲೈಮಾನ್ ಅಲ್-ಉಬೈದ್ – ಪ್ಯಾಲೆಸ್ಟೀನಿಯನ್ ಪೀಲೆ ಎಂಬ ಪ್ರಸಿದ್ಧಿ ಪಡೆದ ಹೆಮ್ಮೆಯ ಆಟಗಾರ. ಗಾಝಾ ಸಮುದ್ರ ಕಿನಾರೆಯ ಮರಳಿನ ಮೇಲೆ ಚೆಂಡನ್ನು ಒದೆಯಲು ಪ್ರಾರಂಭಿಸಿ, ನಂತರ ಬೀಚ್ ಸರ್ವೀಸಸ್ ಕ್ಲಬ್‌ನಲ್ಲಿ ಗಾಝಾ ಸ್ಪೋರ್ಟ್ಸ್ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದವರು. ರಾಷ್ಟಿçÃಯ ತಂಡಕ್ಕಾಗಿ ನೂರಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ ಸುಲೈಮಾನ್, 2010ರ ಪಶ್ಚಿಮ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಯೆಮೆನ್ ವಿರುದ್ಧದ ತನ್ನ ಕತ್ತರಿ ಕಿಕ್ ಗೋಲಿನೊಂದಿಗೆ ಮತ್ತೆ ಸೆಲೆಬ್ರಿಟಿಯಾದರು. ಅವರು ಸ್ಥಳೀಯ ಮಕ್ಕಳಿಗೆ ತರಬೇತುದಾರರಾಗಿದ್ದಾರಲ್ಲದೆ 24 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪ್ಯಾಲೆಸ್ಟೀನಿಯನ್ ಧ್ವಜವನ್ನು ಹೊತ್ತಿದ್ದರು.

    ಇಷ್ಟೆಲ್ಲಾ ಇದ್ದು ಕೊನೆಗೆ ಏನಾಯಿತು? ಅವರು ಹುಟ್ಟಿದ ಸ್ಥಳ ಗಾಝಾ ಆಗಿಹೋಯಿತು. ಕಲೆ/ಕ್ರೀಡೆಗಳ ಮೇಲಿನ ಪ್ರೀತಿಯು ಮಾನವೀಯತೆ ಹೊಂದಿರುವವರಿಗೆ ಮಾತ್ರ ಇರುವ ಗುಣಗಳಾಗಿವೆ. ಹಸಿವಿನ ಬೆಂಕಿಯ ವಿರುದ್ಧ ಹೋರಾಡುತ್ತಿರುವ ಗಾಝಾದ ಮಕ್ಕಳನ್ನು ಜನಾಂಗೀಯ ಬಾಣಲೆಯಲ್ಲಿ ಉರಿಯುವ ಪೈಶಾಚಿಕ ವೀರರಿಗೆ ಫುಟ್‌ಬಾಲ್ ಆದರೇನು? ಅದರ ಆಟಗಾರ ಆದರೇನು ಮುಗ್ಧ ಮಕ್ಕಳಾದರೇನು ಎಲ್ಲವೂ ಒಂದೇ, ಸುಲೈಮಾನ್ ಅಲ್-ಉಬೈದ್ ಅವರ ದೃಷ್ಟಿಯಲ್ಲಿ ಕೇವಲ ಮರಣ ಕೂಪಕ್ಕೆ ಒದೆಯಲ್ಪಡಬೇಕಾದ ಓರ್ವ ಗಾಝಾದ ವ್ಯಕ್ತಿ ಮಾತ್ರ. ಇತ್ತೀಚೆಗೆ ಫೆಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸಿದ ಶೆಲ್ ದಾಳಿಯಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದ ವಿಶ್ವವಿಖ್ಯಾತ ಆಟಗಾರ ಕೊಲ್ಲಲ್ಪಟ್ಟರು. ಫೆಲಸ್ತೀನ್‌ನಲ್ಲಿ ಕೊಲ್ಲಲ್ಪಟ್ಟ 61400 ಮನುಷ್ಯರ ಪೈಕಿ ಒಂದು ಅಂಕೆ ಆದರು.

    ಫೆಲೆಸ್ತೀನ್‌ನಲ್ಲಿ ಹುತಾತ್ಮರಾದ ಸಾವಿರಾರು ಫೆಲೆಸ್ತೀನಿಯನ್ನರಂತೆ, ಸುಲೇಮಾನ್ ಸುಂದರ ಜೀವನದ ಕನಸು ಕಂಡಿದ್ದರು. ಫುಟ್‌ಬಾಲ್ ಅವರ ಸರ್ವಸ್ವವಾಗಿತ್ತು. ಗಾಝಾ ಯುದ್ಧಭೂಮಿಯಲ್ಲಿ ಇಸ್ರೇಲಿ ಬೆಂಕಿಯ ಮಳೆ ಸುರಿಯುತ್ತಿದ್ದಾಗ ಫುಟ್‌ಬಾಲ್ ಆಡುತ್ತಿದ್ದ ಸುಲೇಮಾನ್‌ಗೆ, ಅವನ ಹೆಂಡತಿ ದುವಾ ಮತ್ತು ಐದು ಮಕ್ಕಳ ಭವಿಷ್ಯವನ್ನು ಬೆಳಗಿಸುವ ಜವಾಬ್ದಾರಿ ಇತ್ತು ಐವತ್ತು ವರ್ಷದವರೆಗೆ ಫುಟ್‌ಬಾಲ್ ಆಡುವುದು, ತನ್ನ ಮಕ್ಕಳನ್ನು ರಾಷ್ಟ್ರ ಹೆಮ್ಮೆಪಡುವಂತಹ ವ್ಯಕ್ತಿತ್ವಗಳಾಗಿ ಬೆಳೆಸುವುದು – ಇವು ನಲವತ್ತೊಂದು ವರ್ಷದ ಸುಲೇಮಾನ್ ಕನಸಾಗಿತ್ತು. ಕಲಾವಿದರು, ಕ್ರೀಡಾಪಟುಗಳು, ವಿವಿಧ ತಜ್ಞರು ಮತ್ತು ಮಾಧ್ಯಮ ಕಾರ್ಯಕರ್ತರು ಸೇರಿದಂತೆ ಫೆಲೆಸ್ತೀನಿಯನ್ನರು ಸಾವು ಬರುವವರೆಗೂ ಇಂತಹ ಸುಂದರ ಕನಸಿನೊಂದಿಗೆ ಬದುಕುತ್ತಿರುತ್ತಾರೆ.

    ಕುಟುಂಬದ ಹಸಿವು ತಣಿಸಲು ಸುಲೇಮಾನ್ ನಿರಾಶ್ರಿತರ ಶಿಬಿರದ ಬಳಿಯ ಆಹಾರ ವಿತರಣಾ ಕೇಂದ್ರದಲ್ಲಿ ಸರದಿಯಲ್ಲಿ ಕಾಯುತ್ತಿದ್ದರು. ಆಹಾರಕ್ಕಾಗಿ ಸರದಿ ಸಾಲಿನಲ್ಲಿ ನಿಂತವರ ಮೇಲೆ ಪ್ರಪಂಚದ ಮೌನ ಬೆಂಬಲದೊಂದಿಗೆ ಜಿಯೋನಿಸ್ಟ್ ಸೈನ್ಯವು ಕ್ಷಿಪಣಿಗಳ ಮಳೆ ಸುರಿಸಿದಾಗ ಕೊಲ್ಲಲ್ಪಟ್ಟ 1,500 ಜನರಲ್ಲಿ ಸುಲೇಮಾನ್ ಅಲ್-ಒಬೈದ್ ಒಬ್ಬರು. ಯುರೋಪಿಯನ್ ಫುಟ್ಬಾಲ್ ಅಸೋಸಿಯೇಷನ್ (UEFA) ಕಾಟಾಚಾರಕ್ಕೆ ಎರಡು ಗೆರೆಯ ಸಂತಾಪ ಸೂಚಿಸಿತು. “ಫೆಲಸ್ತೀನ್ ಪೀಲೆ ಸುಲೇಮಾನ್ ಅಲ್-ಒಬೈದ್‌ಗೆ ಭಾವಪೂರ್ಣ ವಿದಾಯ ಅವರು ಕತ್ತಲೆಯ ಕಾಲದಲ್ಲೂ ಅಸಂಖ್ಯಾತ ಮಕ್ಕಳಿಗೆ ಭರವಸೆಯ ಕಿರಣ ಮೂಡಿಸಿದ ಪ್ರತಿಭಾವಂತ” ಎಂದು UEFAಯ Xನಲ್ಲಿ ಬರೆಯಿತು. ಈ ಸಂದೇಶವು ಸುಲೇಮಾನ್, ಗಾಝಾವನ್ನು ಪ್ರೀತಿಸುವ ಮತ್ತು ಮಾನವೀಯತೆಯನ್ನು ಪ್ರೀತಿಸುವವರಿಗೆ ಅರಗಿಸಿಕೊಳ್ಳಲಾಗಲಿಲ್ಲ.

    ಸುಲೇಮಾನ್ ನಿವೃತ್ತರಾದದ್ದಲ್ಲ, ಅವರು ವೃದ್ಧಾಪ್ಯದಿಂದ ಸಾಯಲಿಲ್ಲ, ಅವರು ಮೈದಾನದಲ್ಲಿ ಆಘಾತದಿಂದ ಸತ್ತದ್ದಲ್ಲ. ಅವರನ್ನು ಇಸ್ರೇಲ್ ಎಂಬ ಕ್ರೂರ ಸೈನ್ಯವು ಕೊಂದು ಹಾಕಿದ್ದು ಎಂಬುದು ಹಾಡು ಹಗಲಿನಂತೆ ಸ್ಪಷ್ಟವಾಗಿದ್ದರೂ ಕೊಂದ ಹಂತಕರ ಹೆಸರನ್ನು ಉಲ್ಲೇಖಿಸಲು ಹಿಂಜರಿಕೆ ಏಕೆ ಎಂಬುದೇ ಎಲ್ಲರ ಪ್ರತಿಕ್ರಿಯೆಯಾಗಿತ್ತು. ಫೆಲೆಸ್ತೀನ್‌ನ ಎಲ್ಲಾ ಕಹಿ ಮತ್ತು ನೋವನ್ನು ತನ್ನ ಎದೆಗೆ ಹಾಕಿಕೊಂಡಿರುವ ಲಿವರ್‌ಪೂಲ್‌ನ ಈಜಿಪ್ಟ್ ತಾರೆ ಮೊಹಮ್ಮದ್ ಸಲಾಹ್, UEFA ಅಥವಾ ಅವರಂತೆಯೇ ನಿದ್ರಿಸುತ್ತಿರುವ ಇಡೀ ಜಗತ್ತನ್ನು ಕೇಳುತ್ತಿದ್ದಾರೆ, “ಅವರು ಎಲ್ಲಿ, ಹೇಗೆ ಮತ್ತು ಏಕೆ ಸತ್ತರು ಎಂದು ನೀವು ನಮಗೆ ಹೇಳಬಲ್ಲಿರಾ?” ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರನ್ನು ತಲುಪಿದ ಸಂದೇಶವಾಗಿತ್ತದು, ಇಸ್ರೇಲಿಗೆ ಮಾಮೂಲಿಯಾಗಿದ್ದ ಒಂದು ಹತ್ಯೆಯನ್ನು ಜಗತ್ತನ್ನು ನಡುಗಿಸುವ ಪ್ರಶ್ನೆಯನ್ನಾಗಿ ಪರಿವರ್ತಿಸಲು ಇದಕ್ಕೆ ಸಾಧ್ಯವಾಯಿತು.

    ಜಿಯೋನಿಸ್ಟ್ ಭಯೋತ್ಪಾದನೆಯ ವಿರುದ್ಧ ಮೊದಲ ದಿನದಿಂದಲೂ ಸಲಾಹ್ ಫೆಲಸ್ತೀನಿಯನ್ನರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ.

    ಮುಗ್ಧ ಜೀವಗಳು ಸೇರಿದಂತೆ 62,000ಕ್ಕೂ ಹೆಚ್ಚು ಮಾನವ ಜೀವಗಳ ಸಾಮೂಹಿಕ ಹತ್ಯೆಯ ಹೊರತಾಗಿಯೂ ರಕ್ತಪಿಪಾಸು ಆಗಿಯೇ ತನ್ನ ಆಕ್ರಮಣವನ್ನು ಮುಂದುವರಿಸುತ್ತಿರುವ ಇಸ್ರೇಲ್ ಅನ್ನು ತಹಬಂದಿಗೆ ತರಲು ಜಗತ್ತಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ಅವರ ಪ್ರಶ್ನೆ.

    ಅತ್ಯಂತ ಸಣ್ಣ ಪ್ರದೇಶದಲ್ಲಿ. ಯುದ್ಧ ಭೀತಿಯ ನಡುವೆ, ನಿರಂತರ ದಿಗ್ಬಂಧನದ ನಡುವೆಯೂ ಅದನ್ನು ಲೆಕ್ಕಿಸದೆ ತಾವು ಇಷ್ಟಪಟ್ಟ ರಂಗಗಳಲ್ಲಿ ಗಾಝಾದ ಜನತೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಅತ್ಯುತ್ತಮ ವೈದ್ಯಕೀಯ ತಜ್ಞರು, ಪ್ರಸಿದ್ಧ ಶಿಕ್ಷಣ ತಜ್ಞರು, ಅಂತರಾಷ್ಟಿçÃಯವಾಗಿ ಗುರುತಿಸಲ್ಪಟ್ಟ ಕಲಾವಿದರು ಮತ್ತು ಪತ್ರಕರ್ತರು ಮರಣ ಭೀತಿಯ ನಡುವೆಯು ಫುಟ್ಬಾಲ್ ಮತ್ತು ಅಥ್ಲೆಟಿಕ್ಸ್ಗೆ ತಮ್ಮನ್ನು ಅರ್ಪಿಸಿಕೊಂಡ ಯುವಕರು… ಹೀಗೆ ಗಾಝಾದ ಜನತೆಯು ವಿಶ್ವದ ಅಸಾಧಾರಣ ಹಾಗೂ ಅದ್ಭುತವಾದ ಮಾನವ ಸಂಪನ್ಮೂಲವಾಗಿದೆ.

    ಇಸ್ರೇಲ್, ಕ್ಷಿಪಣಿಗಳು ಮತ್ತು ಹಸಿವಿನಿಂದ ಅವರನ್ನು ನಾಶಪಡಿಸುತ್ತಿದೆ ಅವರು ಇಲ್ಲಿಯವರೆಗೆ ಗಾಝಾದಲ್ಲಿ 103 ಮಕ್ಕಳು ಸೇರಿದಂತೆ 421 ಫುಟ್ಬಾಲ್ ಆಟಗಾರರನ್ನು ಕೊಂದಿದ್ದಾರೆ. ದೊಡ್ಡ ಕ್ರೀಡಾಂಗಣಗಳು ಮತ್ತು ಸಣ್ಣವುಗಳು ಸೇರಿದಂತೆ 268 ಕ್ರೀಡಾಂಗಣಗಳನ್ನು ಕೆಡವಿದ್ದಾರೆ. ಝಿಯೋನಿಸ್ಟ್ ನರಮೇಧವು ಗಾಝಾದಲ್ಲಿ ಹತ್ತಾರು ಸಾವಿರ ಮುಗ್ಧ ಜನರನ್ನು ಕೊಲ್ಲುತ್ತಿದೆ. ಹಸಿವು ಹಾಗೂ ಬಾಂಬುಗಳ ಭೀತಿಯ ನಡುವೆ ಅವರು ನಿರ್ಮಿಸಿರುವ ಮಹಾನ್ ಮಾನವ ನಾಗರಿಕತೆಯನ್ನು ಸಹ ನಾಶಪಡಿಸುತ್ತಿದೆ. ಮೊಹಮ್ಮದ್ ಸಲಾಹ್ ಅವರು ಎತ್ತಿರುವ ಪ್ರಶ್ನೆಯು ಒಂದು ಸಣ್ಣ ಬೆರಳನ್ನು ಎತ್ತಲೂ ಕೂಡ ಸಾಧ್ಯವಾಗದೇ ಲೋಕದಲ್ಲಿ ಮೆರೆದಾಡುತ್ತಿರುವ ಅಧಿಕಾರ ಶಾಹಿ ಜಗತ್ತಿನ ಮುಂದೆ, ಅದರ ಕಪಟತೆಯ ವಿರುದ್ಧ ಬೀಸಿದ ಚಾಟಿಯೇಟು ಆಗಿದೆ.
    ಮುರ್ಶಿದ್ ಅಲಿ

  • ಮಿಸೇಲ್ ಉಡಾಯಿಸುವ ಇರಾನಿ ಮಹಿಳೆಯರು: 
ಇವರ ಪರ್ಸೆಂಟೇಜ್ ಎಷ್ಟಿದೆ ಗೊತ್ತೇ?

    ಮಿಸೇಲ್ ಉಡಾಯಿಸುವ ಇರಾನಿ ಮಹಿಳೆಯರು: ಇವರ ಪರ್ಸೆಂಟೇಜ್ ಎಷ್ಟಿದೆ ಗೊತ್ತೇ?

    ಮಬ್ಬು ಬೆಳಕಿನ ನಿಯಂತ್ರಣ ಕೊಠಡಿಗಳಲ್ಲಿ ಕುಳಿತಿದ್ದು, ದಾಳಿಯ ಚಲನ ವಲನಗಳನ್ನು ವಿಶ್ಲೇಷಿಸುತ್ತಾ, ನಿಯಂತ್ರಿಸುತ್ತಾ, ಉಡಾವಣೆ ಪ್ರಕ್ರಿಯೆಗಳನ್ನು ಪರಿಶೀಲಿಸುತ್ತಾ, ಅತ್ಯಂತ ಶಿಸ್ತು ಮತ್ತು ನಿಖರತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದದ್ದು ಹಿಜಾಬ್ ಧರಿಸಿದ ಇರಾನಿನ ಮಹಿಳೆಯರು.

    ಖತಮ್ ಅಲ್-ಅಂಬಿಯಾ ಏರೋಸ್ಪೇಸ್ ಸಂಸ್ಥೆಗಳಲ್ಲಿ ಇರಾನಿನ ಮಹಿಳೆಯರು ಡೇಟಾ ವಿಶ್ಲೇಷಕರು, ಸಿಸ್ಟಂ ಪ್ರೋಗ್ರಾಮರ್‌ಗಳು ಮತ್ತು ನಿಯಂತ್ರಣ ಕೊಠಡಿಗಳ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಸಾಫ್ಟ್ವೇರ್ ವ್ಯವಸ್ಥೆಗಳನ್ನು, ಉಪಗ್ರಹ ನಕ್ಷೆಗಳನ್ನು ಮತ್ತು ಉಡಾವಣೆ ಸಮನ್ವಯಗಳನ್ನು ನಿಖರವಾಗಿ ನಿರ್ವಹಿಸುತ್ತಿದ್ದಾರೆ. ಅವರು ಇರಾನಿನ ರಕ್ಷಣಾ ರಚನೆಯೊಳಗೆ ಸಕ್ರಿಯ ಮತ್ತು ಅನಿವಾರ್ಯ ಪಾತ್ರದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಜಗತ್ತಿನ ಹಲವು ಭಾಗಗಳಲ್ಲಿ ಮಹಿಳೆಯರ ಸಾಧನೆಗಳನ್ನು ಸಾರ್ವಜನಿಕವಾಗಿ ಪ್ರದಶಿಸುವುದು, ಪ್ರಶಂಸೆ ಪಡೆಯುವುದು ಮತ್ತು ನಾಯಕತ್ವ ವಹಿಸುವ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಕ್ಷಿಪಣಿ ಉಡಾವಣಾ ಕನ್‌ಸೋಲ್ ಹಿಂದೆ ಹಿಜಾಬ್ ಧರಿಸಿದ ಮಹಿಳೆ ಆದುನಿಕತೆಗೆ ತಕ್ಕವಳಾಗಿ ಕಾಣಿಸದಿರಬಹುದು. ಆದರೆ ಅವಳು ಡೇಟಾ ಮೇಲೆ ಹಿಡಿತವಿಟ್ಟಿದ್ದಾಳೆ, ದೇಶದ ರಕ್ಷಣೆಯಲ್ಲಿ ಕೆಲಸಮಾಡುತ್ತಿದ್ದಾಳೆ ಮತ್ತು ರಾಷ್ಟ್ರಸೇವೆಯ ಕಾರ್ಯನಿರ್ವಹಿಸುತ್ತಿದ್ದಾಳೆ. ಇದು ಫ್ಯಾಶನ್ ಅಥವಾ ಸ್ವಾರ್ಥಕ್ಕಾಗಿ ಅಲ್ಲ. ಇದು ನಂಬಿಕೆ, ಶಿಕ್ಷಣ ಮತ್ತು ಕೌಶಲ್ಯದ ಮೇಲೆ ಆಧಾರಿತವಾದ ನಿಜವಾದ ಶಕ್ತಿ ಮಹಿಳಾ ಶಕ್ತಿಯಾಗಿದೆ.

    1979ರ ಕ್ರಾಂತಿಯ ಬಳಿಕ ಇರಾನ್‌ನಲ್ಲಿ ಮಹಿಳೆಯರ ಶಿಕ್ಷಣ, ವಿಶೇಷವಾಗಿ ಮೆಡಿಕಲ್ ಮತ್ತು ಎಂಜಿನಿಯರಿAಗ್ ಕ್ಷೇತ್ರಗಳಲ್ಲಿ, ಉನ್ನತ ಮಟ್ಟದಲ್ಲಿ ಉತ್ತೀರ್ಣರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಇಂದು ಯುನೆಸ್ಕೋ ಮತ್ತು ವಿಶ್ವ ಬ್ಯಾಂಕ್ ಮಾಹಿತಿಯ ಪ್ರಕಾರ, ಇರಾನ್‌ನಲ್ಲಿನ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿAಗ್, ಗಣಿತ) ಪದವೀಧರರಲ್ಲಿ 70%ಕ್ಕಿಂತ ಹೆಚ್ಚು ಮಂದಿ ಮಹಿಳೆಯರಿದ್ದಾರೆ. ಇಂದು ಇರಾನಿನ ನಿಲುವು ಮಹಿಳೆಯರೂ ರಾಷ್ಟ್ರದ ಹೆಗ್ಗಳಿಕೆಯ ಗುರುತು ಹಾಗೂ ಏಳಿಗೆಯಲ್ಲಿ ರಾಷ್ಟ್ರದ ಪರವಾಗಿ ಪ್ರತಿರೋಧ ಚಲನೆಯನ್ನು ರೂಪಿಸುವ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಪರಿಗಣಿಸಿದೆ.

    ಈ ದೃಷ್ಟಿಕೋನವೇ ಮಹಿಳೆಯರಿಗೆ ರಕ್ಷಣಾ ಕ್ಷೇತ್ರದಂತಹ ಅತ್ಯಂತ ವಿಶೇಷ ಹಾಗೂ ಸಂವೇದನಾಶೀಲ ವಿಭಾಗಗಳಲ್ಲಿ ಭಾಗವಹಿಸಲು ಅವಕಾಶ ನೀಡಿದೆ. ಪ್ರಮುಖವಾಗಿ ಇವರ ಪಾತ್ರಗಳನ್ನು ಪರಂಪರಾಗತವಾಗಿ ಸೌಮ್ಯ ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳಿಸಲಾಗಿಲ್ಲ. ಬದಲಾಗಿ ಯುದ್ಧತಂತ್ರ ಹಾಗೂ ಉನ್ನತ ತಾಂತ್ರಿಕ ಕಾರ್ಯಾಚರಣೆಗಳಲ್ಲೂ ಅವರು ಸಕ್ರಿಯವಾಗಿ ಭಾಗವಹಿಸಲು ಅವಕಾಶ ನೀಡಲಾಗುತ್ತಿದೆ.
    ಇಂದಿನ ಕಾಲದಲ್ಲಿ ಜಾಗತಿಕ ಮಾಧ್ಯಮಗಳು ಮುಸ್ಲಿಂ ಮಹಿಳೆಯರನ್ನು ಬಹುತೇಕ ಸಂದರ್ಭಗಳಲ್ಲಿ ಮೌನವಾಗಿರುವವರು ಅಥವಾ ದಬ್ಬಾಳಿಕೆಗೆ ಒಳಪಡುವವರು ಎಂದು ಚಿತ್ರಿಸಲಾಗುತ್ತದೆ. ಆದರೆ ಇರಾನಿನ ಈ ಒಂದು ಬೆಳವಣಿಗೆಯು ಬೇರೊಂದು ಪರ್ಯಾಯ ಚಿತ್ರಣವನ್ನು ನಮ್ಮ ಮುಂದಿಡುತ್ತದೆ.

    ಇದು ಧರ್ಮದ ಮೇರೆಯನ್ನು ನಿರಾಕರಿಸುವುದಲ್ಲ ಬದಲಾಗಿ ಅದನ್ನೇ ವೇದಿಕೆಯಾಗಿ ಬಳಸುತ್ತಿದೆ. ಕ್ಷಿಪಣಿ ಕಮಾಂಡ್ ಕೊಠಡಿಗಳಲ್ಲಿ ಈ ಮಹಿಳೆಯರ ಉಪಸ್ಥಿತಿಯು ಧಾಮಿಕತೆಯ ವಿರುದ್ಧವಲ್ಲ ಅದು ನಂಬಿಕೆಯಿAದಲೇ ಹುಟ್ಟಿಕೊಂಡಿರುವುದಾಗಿದೆ.

    ಇಸ್ರೇಲ್‌ನ ಬೆಂಜಮಿನ್ ನೆತನ್ಯಾಹೂ ಸೇರಿದಂತೆ ಪಶ್ಚಿಮಾತ್ಯ ನಾಯಕರು ಇರಾನಿನ ಸೇನಾ ಜಾಲವನ್ನು ನಾಶಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ಶಕ್ತಿ ಮತ್ತು ಸ್ಥೈರ್ಯದ ಹಿಂದೆ ಸಮಾನ ಶಿಕ್ಷಣ ಹಾಗೂ ಇರಾನ್ ಹೊಂದಿರುವ ನಿಷ್ಠೆ ಎದ್ದು ಕಾಣುತ್ತಿದೆ. ಈ ನಿಷ್ಠೆಯಲ್ಲಿ ಈಗ ಅಲ್ಲಿಯ ಮಹಿಳೆಯರೂ ಸೇರಿಕೊಂಡಿರುವುದು ಮಹತ್ತರ ಪಾತ್ರವನ್ನು ಹೊಂದಿದೆ.

    ಕ್ಷಿಪಣಿ ವ್ಯವಸ್ಥೆಗಳನ್ನು ನಿರ್ವಹಿಸುತ್ತಿರುವ ಇರಾನಿನ ಮಹಿಳೆಯರ ಚಿತ್ರಣ ಬಹುತೇಕ ಜನರಿಗೆ ಅಚ್ಚರಿಯಾಗಿ ಕಾಣಬಹುದು. ವಿಶೇಷವಾಗಿ ಮುಸ್ಲಿಂ ಮಹಿಳೆಯರನ್ನು ನಿಷ್ಕ್ರಿಯರು, ಮೌನವಾಗಿರುವವರು ಅಥವಾ ಕೇವಲ ಗೃಹ ಬಂಧನದಕ್ಕೆ ಸೀಮಿತವಾಗಿರುವವರು ಎಂದು ತಪ್ಪಾಗಿ ಪರಿಗಣಿಸಲಾಗುತ್ತಿರುವ ಜಾಗತಿಕ ಮಟ್ಟದವರಿಗೆ…!
    ಅದರ ರಾಜಕೀಯ ಜಟಿಲತೆಗಳೇನೇ ಇರಲಿ, ಇರಾನ್‌ನ ನಿಲುವು ನಮಗೆ ಒಂದು ಸ್ಪಷ್ಟ ಸಂದೇಶ ನೀಡುತ್ತದೆ: ಧರ್ಮಾಧಾರಿತ ಸಮಾಜಗಳು ಮಹಿಳಾ ನಾಯಕತ್ವಕ್ಕೆ ಸಹಜವಾಗಿ ವಿರೋಧಿಯಾಗಿಲ್ಲ. ಜಗತ್ತಿನ ಅನೇಕ ಮುಸ್ಲಿಂ ದೇಶಗಳು ಈಗಾಗಲೇ ಈ ದಾರಿಗೆ ಬೇಕಾದ ಮಾನವ ಸಂಪತ್ತು, ಶಿಕ್ಷಣ ವ್ಯವಸ್ಥೆ ಮತ್ತು ನೈತಿಕತೆ ಹೊಂದಿವೆ. ಇದೀಗ ಅಗತ್ಯವಿರುವುದು, ಮಹಿಳೆಯರನ್ನು ಕೇವಲ ನೈತಿಕ ಲಾಭಪಡೆಯುವವರಂತೆ ನೋಡದೆ ಅವರನ್ನು ಪ್ರಗತಿಯೆಡೆಗೆ ಮುನ್ನಡೆಸುವ ಧೈರ್ಯವನ್ನು ತುಂಬುವುದು ಕಾಲದ ಬೇಡಿಕೆಯಾಗಿದೆ.
    ಇರಾನಿನ ಮಾದರಿಯನ್ನೇ ಅನುಸರಿಸಬೇಕೆಂದಿಲ್ಲ. ಆದರೆ ಅದು ನಮ್ಮ ಕಲ್ಪನೆಗೆ ಆಹ್ವಾನ ನೀಡುತ್ತದೆ. ಇದು ಮುಸ್ಲಿಂ ಜಗತ್ತಿನಾದ್ಯಂತ ಇರುವ ಮಹಿಳೆಯರ ಅಪಾರ ಸಾಮರ್ಥ್ಯಗಳನ್ನು ಗುರುತಿಸಿ, ಅವರ ಬೆಳವಣಿಗೆಗೆ ತಡೆ ಹಾಕುವ ಅಂಶಗಳನ್ನು ತೊಡೆದು ಹಾಕಬೇಕಾಗಿದೆ.

    ಇರಾನ್-ಇಸ್ರೇಲ್ ಸಂಘರ್ಷ ಮುಂದುವರಿಯುತ್ತಿರುವಂತೆ, ಕ್ಷಿಪಣಿ ಉಡಾವಣೆ ಪರದೆಯ ಹಿಂದೆ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಚಿತ್ರಗಳು ಪರ್ಯಾಯ ಮಾಧ್ಯಮಗಳಲ್ಲಿ ನಿಧಾನವಾಗಿ ಹರಿದಾಡುತ್ತಿವೆ. ಇದರಿಂದಾಗಿ ಜಗತ್ತು ಈಗ ಒಂದು ಹೊಸ ದೃಷ್ಟಿಕೋನವನ್ನು ಅಂಗೀಕರಿಸಬೇಕಾದ ಅಗತ್ಯತೆ ಎದು ರಾಗಿದೆ.

  • ಆಮಿರ್ ಅಲ್ ಮಹ್ದಿಯ ಪವಾಡ ಸದೃಶವಾದ ಪ್ರಯಾಣ

    ಆಮಿರ್ ಅಲ್ ಮಹ್ದಿಯ ಪವಾಡ ಸದೃಶವಾದ ಪ್ರಯಾಣ

    2025ರ ಹಜ್ಜ್ ಯಾತ್ರೆ ಪೂರ್ಣಗೊಂಡು ಹಾಜಿಗಳೆಲ್ಲರೂ ತಾಯ್ನಾಡಿಗೆ ಮರಳಿದ್ದಾರೆ. ತ್ಯಾಗ ಮತ್ತು ಬಲಿದಾನದ ಸಂಕೇತವಾದ ಪವಿತ್ರ ತೀರ್ಥಯಾತ್ರೆಯನ್ನು ಮುಗಿಸಿ ಹೊಸ ಹುರುಪು, ಹೊಸ ಚೈತನ್ಯದೊಂದಿಗೆ ಜೀವನದ ಜಂಜಾಟಕ್ಕೆ ಪುನಃ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
    ಈ ಬಾರಿಯ ಹಜ್ಜ್ ಕರ್ಮವು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗರೂಕತೆ ವಹಿಸಿದ್ದರಿಂದ ಬಹಳ ಸುಸೂತ್ರವಾಗಿ ನೆರವೇರಿದೆ. ಈ ನಡುವೆ ಆಮಿರ್ ಮನ್ಸೂರ್ ಮಹ್ದಿ ಅಲ್ ಗದ್ದಾಫಿ ಎಂಬ 38 ರ ಹರೆಯದ ಲಿಬಿಯಾದ ಪೌರ ತನ್ನ ಹಜ್ಜ್ ಪ್ರಯಾಣದಲ್ಲಿ ಸಂಚಲವನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲೂ ವಾರ್ತಾ ಮಾಧ್ಯಮಗಳಲ್ಲೂ ವೈರಲ್ ಆಗಿದ್ದರು.
    ಎಲ್ಲರಂತೆ ಆಮಿರ್ ಕೂಡ ಹಜ್ಜ್ ಯಾತ್ರೆಗಾಗಿ ಲಿಬಿಯಾದ ಸಭಾ ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಸೌದಿಗೆ ಹಜ್ಜ್ಗಾಗಿ ತೆರಳುವ ಎಲ್ಲ ಪ್ರಯಾಣಿಕರೂ ಬೋರ್ಡಿಂಗ್ ಪಾಸ್ ಪಡೆದು ವಿಮಾನದೊಳಗೆ ಪ್ರವೇಶಿಸಿದ್ದರು. ಆದರೆ ಆಮಿರ್‌ರಿಗೆ ಬೋರ್ಡಿಗೆ ಪಾಸ್ ನಿರಾಕರಿಸಲಾಗಿತ್ತು ಅದಕ್ಕೆ ಕಾರಣ ಪಾಸ್ ಪೋರ್ಟ್ನಲ್ಲಿರುವ ಗದ್ದಾಫಿ ಎಂಬ ಹೆಸರಿನಲ್ಲಿರುವ ಸಮಸ್ಯೆ ಎಂದು ಸೂಚಿಸಲಾಗಿತ್ತು. ಆಮಿರ್‌ನ ಹೊರತಾಗಿ ವಿಮಾನ ಪ್ರಯಾಣ ಹೊರಟಿತು. ಆದರೆ ವಿಧಿಯ ಆಟವನ್ನು ಬಲ್ಲವರಾರು. ವಿಮಾನ ಆಕಾಶದೆತ್ತರಕ್ಕೆ ಹಾರಿ ಸ್ವಲ್ಪದರಲ್ಲೇ ತಾಂತ್ರಿಕ ಸಮಸ್ಯೆಯ ಕಾರಣ ವಿಮಾನವನ್ನು ನಿಲ್ದಾಣಕ್ಕೆ ಮರಳಿಸಬೇಕಾಯಿತು.
    ಆದರೆ ವಿಮಾನ ನಿಲ್ದಾಣದಲ್ಲಿರುವ ಆಮಿರ್ ನಾನು ಹಜ್ಜ್ನ ಸಂಕಲ್ಪ ಮಾಡಿ ತಾಯ್ನಾಡಿನಿಂದ ಹೊರಟಿದ್ದೇನೆ ಮತ್ತು ಇನ್ನು ಸೌದಿಗಲ್ಲದೆ ಮರಳಿ ಮನೆಗೆ ಹೋಗಲಾರೆ ಎಂದು ಹಠ ಹಿಡಿದು ಕುಳಿತಿದ್ದಾರೆ. ನಿಲ್ದಾಣಕ್ಕೆ ಮರಳಿದ ವಿಮಾನದ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿದರೂ ಆಮಿರ್ ನನ್ನು ವಿಮಾನದೊಳಗೆ ಪ್ರವೇಶಿಸಲು ಪೈಲಟ್ ಅನುಮತಿ ನೀಡಲೇ ಇಲ್ಲ. ಪ್ರಯಾಣಕ್ಕೆ ಸಜ್ಜಾದ ವಿಮಾನವು ಆಕಾಶದೆತ್ತರಕ್ಕೆ ಹಾರಿ ಮಾಯವಾಯಿತು. ಪುನಃ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಾಗ ಗತ್ಯಂತರವಿಲ್ಲದೆ ನಿಲ್ದಾಣಕ್ಕೆ ಮರಳಬೇಕಾಯಿತು. ಆದರೆ ಈ ಬಾರಿ ಪೈಲಟ್‌ಗೆ ಏನೋ ಸಂಶಯ ಕಾಡತೊಡಗಿತು. ಅವನು ಆಗಲೇ ಸೂಚನೆ ನೀಡಿದ. ಇನ್ನು ವಿಮಾನವು ಲ್ಯಾಂಡಿಗ್ ಮಾಡುವುದಾದರೆ ಆಮಿರ್ ನ ಹೊರತಾಗಿ ವಿಮಾನ ಟೇಕ್ ಆಫ್ ಮಾಡಲಾರದು ಎಂಬ ಸಂಕಲ್ಪದೊAದಿಗೆ ವಿಮಾನವನ್ನು ಕೆಳಗಿಳಿಸಲಾಯಿತು. ಪುನಃ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ ಆಮಿರ್‌ನಿಗೆ ಪ್ರವೇಶಾನುಮತಿ ನೀಡಿ ವಿಮಾನವು ಹಾರಾಡಿತು ಮತ್ತು ಜೆದ್ದಾ ವಿಮಾನ ನಿಲ್ದಾಣಕ್ಕೆ ತಲುಪಿತು.
    ಆಮಿರ್ ತನ್ನ ಹದಿನಾರನೆಯ ಪ್ರಾಯದಲ್ಲಿ ಹಜ್ಜ್ ಎಂಬ ಪವಿತ್ರ ಕರ್ಮ ನಿರ್ವಹಿಸುವ ಕನಸನ್ನು ಕಂಡಿದ್ದ. ಆದರೆ ಕಾರಣಾಂತರದಿAದ ಅದು ಸಾಧ್ಯವಾಗಲಿಲ್ಲ. ತನ್ನ 38 ನೆಯ ಪ್ರಾಯದಲ್ಲಿ ತನ್ನ ಕನಸು ನೆರವೇರುವ ಸಮಯ ಕೂಡಿ ಬಂದಿತ್ತು. ಅದರ ಸಕಲ ಸಿದ್ಧತೆಗಳನ್ನು ಮಾಡಿ ವಿಮಾನ ನಿಲ್ದಾಣ ತಲುಪಿದಾಗ ಇಂತಹ ಒಂದು ಕಹಿ ಅನುಭವವಾಗಿತ್ತು. ಓರ್ವ ಪ್ರಯಾಣಿಕನು ಪ್ರಯಾಣದ ಸಕಲ ಸಿದ್ಧತೆಗಳನ್ನು ಮಾಡಿ ತನ್ನದಲ್ಲದ ತಪ್ಪಿನಿಂದ ಆ ಪ್ರಯಾಣ ಮೊಟಕುಗೊಳ್ಳುವಾಗ ಅವನು ಅನುಭವಿಸುವ ಮಾನಸಿಕ ಯಾತನೆ, ತಳಮಳ ಮತ್ತು ಸಂಘರ್ಷ ಮಾತಿನಲ್ಲಿ ವರ್ಣಿಸಲು ಅಸಾಧ್ಯ. ಅದನ್ನು ಅನುಭವಿಸುವವರಿಗೆ ಅದರ ಸಂಕಷ್ಟದ ಬಗ್ಗೆ ಅರಿವಿರುತ್ತೆ. ಆಮಿರ್‌ನ ಅನುಭವ ಕೂಡ ಇದಕ್ಕೆ ಭಿನ್ನವಲ್ಲ. ಆದರೆ ಸಾಧಾರಣ ಗತಿಯಲ್ಲಿ ಪ್ರಯಾಣ ಮೊಟಕುಗೊಂಡರೆ ತನ್ನ ವಿಧಿಯನ್ನು ಹಳಿಯುತ್ತಾ ಪ್ರಯಾಣಿಕನು ಮರಳುವುದೇ ಹೆಚ್ಚು. ವಿಮಾನ ನಿಲ್ದಾಣದ ಅಧಿಕಾರಿಗಳು ಆಮಿರ್ ನನ್ನು ಅದೆಷ್ಟೋ ಸಂತೈಸಿರಬಹುದು, ತನ್ನ ಅದೃಷ್ಟ ದಲ್ಲಿ ಈ ಬಾರಿಯ ಹಜ್ಜ್ ಬರೆದಿಲ್ಲ ಎಂಬಿತ್ಯಾದಿ ಮಾತುಗಳಿಂದ ಆಮಿರ್ ನಿಗೆ ಮನವರಿಕೆ ಮಾಡಿಕೊಟ್ಟಿರಲೂಬಹುದು. ಆದರೆ ಆಮಿರ್ ಕುಳಿತಲ್ಲಿಂದ ಕದಲಲೇ ಇಲ್ಲ. ಇಂದಿನ ಹಜ್ಜ್ ವಿಮಾನ ಹೊರಟಿದೆ ಇನ್ನು ಬರುವ ವರ್ಷ ಹೋಗಬಹುದು ಎಂದು ಅವನನ್ನು ಅಧಿಕಾರಿಗಳು ಸಂತೈಸಲು ಪ್ರಯತ್ನಿಸಿದರೂ ಅದ್ಯಾವುದಕ್ಕೂ ಕಿವಿಗೊಡದೆ, ಅಲ್ಲಿ ಸದ್ದು ಗದ್ದಲ ಮಾಡುವುದೋ, ಬೊಬ್ಬೆ ಹೊಡೆಯುವುದೋ ಪ್ರತಿಭಟನೆ ನಡೆಸುವುದೋ ಅಥವಾ ಅಧಿಕಾರಿಗಳನ್ನು ತರಾಟೆಗೆ ತೆಗೆಯುವುದೋ ಇದ್ಯಾವುದರ ಗೋಜಿಗೆ ಹೋಗದೆ ನನ್ನನ್ನು ಬಿಟ್ಟು ಈ ವಿಮಾನ ಹಾರಾಡುವುದಿಲ್ಲ ಎಂದು ಮಾತ್ರ ಹೇಳುತ್ತಾ ಅಲ್ಲಿಯೇ ಉಳಿದುಬಿಡುತ್ತಾನೆ.
    ಓರ್ವ ಪ್ರಯಾಣಿಕನಿಗೆ ವಿಮಾನದಲ್ಲಿ ಪ್ರಯಾಣ ಮಾಡಲು ಸಾಧ್ಯವಾಗದೆ ಇದ್ದರೆ ಇನ್ನೊಂದು ವಿಮಾನದಲ್ಲಿ ಬದಲು ವ್ಯವಸ್ಥೆಯನ್ನು ಕಲ್ಪಿಸಲಾಗುತ್ತೆ. ಆದರೆ ಹಜ್ಜ್ ವಿಮಾನದಲ್ಲಿ ಅಂತಹ ಒಂದು ಬದಲು ವ್ಯವಸ್ಥೆ ಇದೆಯೋ ಎಂದು ತಿಳಿದಿಲ್ಲ. ಆದರೂ ತಾನು ಹಜ್ಜ್ಗಲ್ಲದೆ ಮರಳಿ ತಾಯ್ನಾಡಿಗಿಲ್ಲ ಎಂಬ ಆಮಿರ್‌ನ ದೃಢ ನಿರ್ಧಾರ ಮತ್ತು ಇಚ್ಛಾ ಶಕ್ತಿ ಅದಕ್ಕೂ ಮಿಗಿಲಾದ ದೇವನ ಮೇಲಿರುವ ಭರವಸೆ ಮತ್ತು ಸಂಕಲ್ಪ ನಿಜಕ್ಕೂ ಅದ್ಭುತವಾದುದು. ಏಕೆಂದರೆ ಓರ್ವ ಪ್ರಯಾಣಿಕನನ್ನು ಬಿಟ್ಟು ಹೋದ ಕಾರಣದಿಂದ ವಿಮಾನ ತನ್ನ ನಿರ್ಧೀಷ್ಟ ಸ್ಥಳವನ್ನು ತಲುಪದೆ ತಾಂತ್ರಿಕ ದೋಷ ಕಂಡುಬರುವುದು ಮತ್ತು ಅದಕ್ಕಾಗಿ ಎರಡೆರಡು ಬಾರಿ ಮರಳಿ ಸ್ವನಿಲ್ದಾಣದಲ್ಲಿ ಇಳಿಸುವುದು ಇಂದೊAದು ಅಪರೂಪದ ಘಟನೆಯೇ ಸರಿ. ಇಲ್ಲಿ ಒಂದು ಆಧ್ಯಾತ್ಮಿಕ ಶಕ್ತಿ ಮಧ್ಯಪ್ರವೇಶಿಸಿದೆ ಎಂದು ಹೇಳಿದರೆ ತಪ್ಪಾಗಲಾರದು. ಇದು ನಮ್ಮ ಕಾಲದ ಆಧ್ಯಾತ್ಮಿಕ ಶೋಷಣೆ ಮಾಡುವಂತಹ ಪವಾಡವೇನಲ್ಲ. ಮಹಾಪುರುಷರ ಜೀವಂತವಿರುವ ಅಥವಾ ಮೃತಶರೀರದ ಪವಾಡದ ವ್ಯಾಪಾರ ನಡೆಸುವ ಇಂದಿನ ಕಾಲದಲ್ಲಿ ಇದನ್ನೊಂದು ಪವಾಡವಾಗಿ ನೋಡುವವರಿದ್ದರೂ ಅತಿಶಯೋಕ್ತಿಯಲ್ಲ. ಆದರೆ ಇದು ಯಾವುದೇ ಕಟ್ಟು ಕತೆಯ ಪವಾಡವಲ್ಲ. ಇದೊಂದು ಬಲವಾದ ದೃಢ ನಂಬಿಕೆ ಮತ್ತು ಇಚ್ಛಾಶಕ್ತಿಯ ಸಂಕೇತವಷ್ಟೆ.
    ಹಿAದೆ ನಾವೆಲ್ಲರೂ ಅಜ್ಜಿ ಕಥೆ ಕೇಳಿದವರಾಗಿದ್ದೇವೆ. ಆ ಕಥೆಗಳಲ್ಲಿ ಒಂದು ಸಂದೇಶ ಇದ್ದೆ ಇರುತ್ತೆ. ಆದರೆ ಇದು ಕಥೆಯಲ್ಲ ವಾಸ್ತವ. ನೂರಾರು ಜನರ ಮುಂದೆಯೇ ನಡೆದ ಘಟನೆ. ಯಾವುದೇ ಒಂದು ಘಟನೆ ಒಂದು ಹತ್ತಿಪ್ಪತ್ತು ವರ್ಷಗಳ ಹಿಂದೆ ನಡೆದದ್ದಾಗಿದ್ದರೆ ಅದು ಕಾಲ್ಪನಿಕ ಕತೆ ಎಂದು ಅಲ್ಲಗಳೆಯುವ ಸಾಧ್ಯತೆಯೇ ಹೆಚ್ಚು.
    ಪ್ರತಿಯೊಂದು ಧರ್ಮಗಳಲ್ಲೂ ವಿಭಿನ್ನ ರೀತಿಯಲ್ಲಿ ಧಾರ್ಮಿಕ ಆರಾಧಾನೆ ಮತ್ತು ಆಧ್ಯಾತ್ಮಿಕ ಚೈತನ್ಯಗಳಿಗೆ ಹೇತುವಾಗಬಲ್ಲ ಆಚಾರಣೆಗಳಿರುತ್ತೆ. ಇವೆಲ್ಲವುಗಳಲ್ಲೂ ಸಂಕಲ್ಪವೆAಬುದು ಬಹಳ ಮುಖ್ಯ ಪಾತ್ರ ವಹಿಸುತ್ತೆ. ಸಂಕಲ್ಪವಿಲ್ಲದ ಯಾವುದೇ ಆರಾಧನೆಗಳು ಫಲಶೂನ್ಯ. ಇಸ್ಲಾಮಿನಲ್ಲೂ ಆರಾಧನೆಗಳ ಸ್ವೀಕಾರ್ಯಕ್ಕೆ ಸಂಕಲ್ಪವು ಅತಿ ಅಗತ್ಯ. ಮತ್ತು ಪ್ರಾರ್ಥನೆಗಳ ಸ್ವೀಕೃತಕ್ಕೆ ಶುದ್ಧ ಸಂಪಾದನೆ ಮಾನದಂಡ ಎಂದು ಹೇಳುತ್ತೆ. ನಮ್ಮ ಸಂಪಾದನೆ ಶುದ್ಧವಲ್ಲದಿದ್ದಲ್ಲಿ ಮತ್ತು ಅದು ಅಕ್ರಮ ಅನೀತಿ ಮತ್ತು ಅನ್ಯಾಯವಾಗಿ ಸಂಪಾದಿಸಿದ್ದರೆ ದೇವನ ಮುಂದೆ ಎಷ್ಟೇ ಬೇಡಿದರೂ, ಎಷ್ಟೇ ಪ್ರಾರ್ಥನೆ ಮಾಡಿದರೂ ಆ ಪ್ರಾರ್ಥನೆಯನ್ನು ತಡೆಹಿಡಿಯಲಾಗುತ್ತೆ ಅಥವಾ ಸ್ವೀಕೃತವಾಗಲಾರದು ಎಂದು ಹೇಳಲಾಗುತ್ತೆ. ಏಕೆಂದರೆ ಪ್ರಾರ್ಥನೆಗೆ ಉತ್ತರ ಸಿಗಬೇಕಿದ್ದರೆ ನಾವು ಉಣ್ಣುವ ಆಹಾರ ಮತ್ತು ಮಾಡುವ ಸಂಪಾದನೆ ಹಲಾಲ್ ಅಥವಾ ಶುದ್ಧವಾಗಿರಬೇಕಾದುದು ಅತಿ ಅಗತ್ಯ. ಅನ್ಯಾಯವಾಗಿ ಸಂಪಾದಿಸಿ ಪ್ರಾರ್ಥನೆ ಮಾಡಿದರೆ ಅದು ಸ್ವೀಕೃತವಾಗಲಾರದು ಎಂಬುದು ಇಸ್ಲಾಮಿನ ತತ್ವ. ಅದೇ ರೀತಿ ಹಜ್ಜ್ ಎಂಬ ಪವಿತ್ರ ಕರ್ಮವು ಇಸ್ಲಾಮಿನ ಬುನಾದಿ ಅಥವಾ ಪಂಚ ಸ್ಥಂಭಗಳಲ್ಲೊAದು. ಆದ್ದರಿಂದಲೇ ಪವಿತ್ರವಾದ ಕರ್ಮಕ್ಕೆ ಖರ್ಚು ಮಾಡುವ ಹಣ ಪವಿತ್ರವಾಗಬೇಕಿರುವುದು ಅನಿವಾರ್ಯ.
    ಓರ್ವ ಹಜ್ಜ್ ಯಾತ್ರಿಕನ ದೇವನ ಮೇಲಿನ ಭರವಸೆ ಮತ್ತು ಸಂಕಲ್ಪವು ವಿಮಾನವನ್ನೇ ಮರಳಿಸುವಷ್ಟರ ಮಟ್ಟಿಗೆ ಪಾತ್ರ ವಹಿಸುತ್ತೆ ಎಂದಾದರೆ ನಾವು ನಮ್ಮ ದೇವ ಭಯ ಮತ್ತು ಸಂಕಲ್ಪ ಶುದ್ಧಿಯನ್ನೊಮ್ಮೆ ಆತ್ಮಾವಲೋಕನಕ್ಕೆ ಒಡ್ಡಬೇಕಿದೆ.
    ಪ್ರವಾದಿ ಮುಹಮ್ಮದ್(ಸ)ರವರ ಶಿಕ್ಷಣ ಪ್ರಕಾರ ತಾನು ಉಡುವುದು, ಕುಡಿಯುವುದು ಮತ್ತು ಉಣ್ಣುವುದು ನ್ಯಾಯವಲ್ಲದ ಸಂಪಾದನೆಯಿAದಾದರೆ ಎಷ್ಟೇ ಪ್ರಾರ್ಥಿಸಿದರೂ ಉತ್ತರ ಸಿಗಲಾರದು. ಓರ್ವನ ಸಂಪಾದನೆ ನ್ಯಾಯಯುತವಾಗಿದ್ದರೆ ಮತ್ತು ಅಕ್ರಮದ ಸಂಪಾದನೆಯಿAದ ತನ್ನ ಹೊಟ್ಟೆ ತುಂಬಿಸಲಾರೆ ಎಂದು ದೃಢ ನಿಶ್ಚಯ ಮಾಡಿದ್ದರೆ ಅವನ ಸಂಕಲ್ಪಕ್ಕನುಸಾರ ದೇವನು ಅವನ ಕರ್ಮಗಳಿಗೆ ಫಲವನ್ನು ನೀಡುವನು. ಒಟ್ಟಿನಲ್ಲಿ ತನ್ನ ಸಂಕಲ್ಪ ಶುದ್ಧಿಯಾಗಿರಬೇಕು. ಪ್ರವಾದಿಯ ಅನುಚರರು ಮುಂಜಾನೆ ಎದ್ದು ದುಡಿಮೆಗಾಗಿ ಮನೆಯಿಂದ ಹೊರಡುವಾಗ ಅವರ ಪತ್ನಿಯರು ಈ ರೀತಿ ತಾಕೀತು ಮಾಡುತ್ತಿದ್ದರಂತೆ, ನೀವು ಅಕ್ರಮ ಸಂಪಾದನೆ ಮಾಡಿ ಮನೆಗೆ ತರಬೇಡಿ.
    ಓರ್ವ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ, ಎಷ್ಟೇ ದೊಡ್ಡ ಶ್ರೀಮಂತನಾಗಿದ್ದರೂ ಐಹಿಕ ಜೀವನದಲ್ಲಿ ಅವನಿಗೆ ಮನ್ನಣೆ ದೊರಕೀತು. ಆದರೆ ಅವನ ಸಂಪಾದನೆ ಶುದ್ಧವಲ್ಲದಿದ್ದರೆ ಅವನು ದೇವನ ದೃಷ್ಟಿಯಲ್ಲಿ ನಿಕೃಷ್ಟನೂ ಅಧಮನೂ ಆಗಿರುವನು. ಬಹುಷ ಆಮಿರ್‌ನ ಸಂಕಲ್ಪ ಶುದ್ಧಿಯಿಂದಲೇ ಅವನಿಗೆ ಇಂತಹ ಒಂದು ಸೌಭಾಗ್ಯ ದೊರಕಿದೆ. ಅದಲ್ಲದೆ ಇದ್ದರೆ ನಾನು ಹಜ್ಜ್ ಯಾತ್ರೆಗಾಗಿ ಸಂಕಲ್ಪ ಮಾಡಿ ಬಂದಿದ್ದೇನೆ ಮತ್ತು ಇನ್ನು ಹಜ್ಜ್ಗಲ್ಲದೆ ಇಲ್ಲಿಂದ ಮರಳಲಾರೆ ಎಂದು ದೃಢ ನಿರ್ಧಾರ ಮಾಡಲು ಹೇಗೆ ಸಾಧ್ಯ. ಆಮಿರ್ ಇಲ್ಲದೆ ಈ ವರ್ಷದ ಹಜ್ಜ್ ಅಪೂರ್ಣ ಎಂದು ದೇವನು ನಿರ್ಧರಿಸಿದ್ದರೆ ಅದು ನಡೆದೇ ತೀರುವುದು. ದೇವನ ಇಚ್ಛೆಗೆ ವಿರುದ್ಧವಾದ ಯಾವುದು ಕೂಡ ನಡೆಯುವುದಿಲ್ಲ ಎಂಬುದು ವಾಸ್ತವ. ಪರ್ವತದ ತಪ್ಪಲಿನಲ್ಲಿ ಮರದ ಒಂದು ಎಲೆ ಉದುರಿ ಬೀಳುವುದಿದ್ದರೂ ಅದು ದೇವನ ಆಜ್ಞೆಯಂತೆಯೇ ವಿನಃ ನಮ್ಮ ಆಜ್ಞೆಯಂತಲ್ಲ.
    ಆಮಿರ್ ಕೊನೆಯ ಯಾತ್ರಿಕನಾಗಿ ವಿಮಾನದೊಳಕ್ಕೆ ಪ್ರವೇಶಿಸಿದರೂ ಎಲ್ಲಾ ಪ್ರಯಾಣಿಕರ ಮತ್ತು ಸಿಬ್ಬಂಧಿ ವರ್ಗದ ಗಮನ ಸೆಳೆದು ಮೊದಲಿಗನಾದ. ಜೆದ್ದಾ ವಿಮಾನ ನಿಲ್ದಾಣ ತಲುಪುದ್ದಿಂತೆ ಆಮಿರ್‌ನ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತಿದ್ದಂತೆ ಜಗತ್ತಿನಲ್ಲೇ ಹೀರೊ ಆಗಿ ಎಲ್ಲರ ಪ್ರಶಂಸೆಗೆ ಪಾತ್ರನಾದ.
    ಆಮಿರ್‌ನಂತಹ ದೃಢ ಚಿತ್ತದ, ಇಚ್ಛಾ ಶಕ್ತಿಯ, ಸಂಕಲ್ಪ ಶುದ್ಧಿಯ, ಯಾರೊಂದಿಗೂ ವೈಮನಸ್ಸಿಲ್ಲದ, ಅಸೂಯೆ ಅಹಂಕಾರ ಮತ್ತು ಆಡಂಭರತೆಯನ್ನು ಮೈಗೂಡಿಸಿಕೊಳ್ಳದ ಹಜ್ಜಾಜ್‌ಗಳು ಇನ್ನೂ ವರ್ಷಂಪ್ರತಿ ಹೆಚ್ಚಾಗಲಿ ಮತ್ತು ಅಂತಹ ಮುತ್ತು ರತ್ನಗಳು ಬೆಳೆದು ಬರಲಿ ಎಂದು ಹಾರೈಸೋಣ.
    ಅಬ್ದುಸ್ಸಲಾಮ್, ದೇರಳಕಟ್ಟೆ