Category: ಪ್ರತಿಭೆ

  • ಮೈಕ್ರೋಫೋನ್ ಕೈಯಲ್ಲಿ ಹಿಡಿದ ನೂರ್ ಅಬೂ ರುಕ್ಬಾ

    ಮೈಕ್ರೋಫೋನ್ ಕೈಯಲ್ಲಿ ಹಿಡಿದ ನೂರ್ ಅಬೂ ರುಕ್ಬಾ

    ಯುದ್ಧಗಳ ಇತಿಹಾಸದಲ್ಲಿ ಕಂಡು ಕೇಳರಿಯದ ಪತ್ರಕರ್ತರ ಹುತಾತ್ಮತೆಗೆ ಇಸ್ರೇಲ್ ನಡೆಸುತ್ತಿರುವ ಕ್ರೌರ್ಯವು ಸಾಕ್ಷಿಯಾಗಿದೆ. ಪತ್ರಕರ್ತರನ್ನೇ ಗುರಿ ಯಾಗಿಸಿ ಇನ್ನೂ ಹತ್ಯೆ ಮುಂದುವರೆ ದಿದೆ. ಇಡೀ ಜಗತ್ತನ್ನು ಬೆಚ್ಚಿಬೀಳಿಸಿದ ಸುದ್ದಿ ಎಂದರೆ ಛಾಯಾಗ್ರಹಣಕ್ಕಾಗಿ ಪುಲಿಟ್ಜರ್ ಪ್ರಶಸ್ತಿಯನ್ನು ಗೆದ್ದ ಅಲ್ ಜಝೀರಾ ವರದಿಗಾರ ಅನಸ್ ಅಲ್-ಶರೀಫ್ ಅವರ ಸಾವು. ಈಗ, ಆ ಪ್ರತಿಭೆಯ ಹಾದಿಯಲ್ಲಿ ಅವರಿಗೆ ಬದಲಿಯಾಗಿ, ಜಬಾಲಿಯಾ ಅವರ ಮಗಳು ನೂರ್ ಅಬೂ ರುಕ್ಬಾ ಮೈಕ್ರೊಫೋನ್ ಅನ್ನು ಕೈಗೆತ್ತಿಕೊಂಡಿದ್ದಾರೆ.

    ಗಾಝಾದ ಉತ್ತರದಲ್ಲಿರುವ ಜಬಾ ಲಿಯಾ ನಿರಾಶ್ರಿತರ ಶಿಬಿರದಲ್ಲಿ ಜನಿ ಸಿದ ಮತ್ತು ಹನ್ನೆರಡು ಬಾರಿ ಸ್ಥಳಾಂತರಗೊಂಡ ಮತ್ತು ಯುದ್ಧದ ಸಮಯದಲ್ಲಿ ಮೂವರು ಸಹೋದರರ ಹುತಾತ್ಮತೆಯಲ್ಲಿ ಹೆಮ್ಮೆಪಡುವ ಈ ಹುಡುಗಿ ಅಲ್-ಅಕ್ಸಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದವರು. ಅವರು ಮಹಿಳಾ ಕೇಂದ್ರ, ಇನ್ಸ್ಟಿಟ್ಯೂಟ್ ಫಾರ್ ಪ್ಯಾಲೆಸ್ತೀನ್ ಸ್ಟಡೀಸ್ ಮತ್ತು ಅಲ್ ಜಝೀರಾ ಸಂಸ್ಥೆಯ ಪತ್ರಿಕೋದ್ಯಮ ನಿಯತಕಾಲಿಕೆ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಮತ್ತು ನಂತರ ಪಾಲ್ ಮೀಡಿಯಾದಲ್ಲಿ ನಿರ್ಮಾಪಕಿಯಾಗಿ ಕೆಲಸ ಮಾಡಿ ದರು. ಅವರು ಯುದ್ಧದ ಮೊದಲು ಧ್ವನಿಮುದ್ರಿಕೆ ಕಲಾವಿದೆಯಾಗಿ ಮತ್ತು “ಎ ಫ್ಯೂಚರ್ ಆಫ್ ಪೀಸ್” ಸಾಕ್ಷ್ಯಚಿತ್ರವನ್ನು ನಿರ್ಮಿಸುತ್ತಿದ್ದರು, ವಲಸೆ ಹೋದ ಜನರ ಮರಳುವಿಕೆಯನ್ನು ದಾಖಲಿಸುವ ವೀಡಿಯೊ ವೈರಲ್ ಆದಾಗ, ಅಲ್ ಜಝೀರಾದ ಉತ್ತರಾಧಿ ಕಾರಿಯಾಗಿ ಅನಸ್ ಷರೀಫ್‌ರ ಉತ್ತ ರಾಧಿಕಾರಿಯಾದರು.

    ಅಲ್ ಜಝೀರಾಕ್ಕೆ ಆಯ್ಕೆಯಾದ ಕ್ಷಣಗಳನ್ನು ನೂರ್ ಹಂಚಿಕೊಂಡದ್ದು: “ಹೀಗೆ ಈ ಕ್ಷಣದಲ್ಲಿ ಅನಸ್ ಅವರ ಬದಲಿಯಾಗಿರುವುದು ವರ್ಣನಾತೀತ ಭಾವನೆ!” ಅನಸ್ ಕೇವಲ ವೃತ್ತಿಪರ ಸಹೋದ್ಯೋಗಿಯಾಗಿರಲಿಲ್ಲ. ಅವರು ನಿಜವಾದ ಸಹೋದರ: ಧೈರ್ಯ ಮತ್ತು ಸಮರ್ಪಣೆಯ ಉಜ್ವಲ ಉದಾ ಹರಣೆ, ಮೂವರು ಸಹೋದರರನ್ನು ಕಳೆದುಕೊಂಡ ನನಗೆ ನಾಲ್ಕನೇ ಸಹೋ ದರನಂತೆ, ಅವರು ತಮ್ಮ ಪ್ರೀತಿ ಮತ್ತು ಬೆಂಬಲವನ್ನು ಪೂರ್ಣ ಪ್ರಮಾಣದಲ್ಲಿ ಸುರಿಸಿದ ಧೈರ್ಯ ಮತ್ತು ಸಮರ್ಪಣೆಯ ಉಜ್ವಲ ಮಾದರಿ. ಅಂತಹ ವ್ಯಕ್ತಿಯ ಸ್ಥಾನಕ್ಕೆ ತಲುಪುವುದು ಅವರಿಗೆ ಬದಲಿ ಯಾಗುವುದು ಎಂಬ ಯೋಚನೆಯೇ ನನ್ನ ಹೃದಯದಲ್ಲಿ ಕಂಪನವನ್ನುಂಟು ಮಾಡಿದೆ
    ಅನೇಕರಿಗೆ, ನಾನು ಇನ್ನು ಮುಂದೆ ನೂರ್ ಅಲ್ಲ, ಅನಸ್‌ನ ಬದಲಿ. ನನ್ನ ಪ್ರಯಾಣವು ಅನಸ್ ನಿಲ್ಲಿಸಿದ ಸ್ಥಳದಿಂದ ಪ್ರಾರಂಭವಾಗುತ್ತದೆ.”

    ಝೈತೂನ್ ಹೊರವಲಯದಲ್ಲಿ ಮಿಲಿಟರಿಯ ಉಪಸ್ಥಿತಿಯ ಬಳಿ ಇದೆ. ಬೀದಿಗಳು ನಿರ್ಜನವಾಗಿವೆ. ದೂರದಲ್ಲಿ ಯುದ್ಧವಿಮಾನಗಳಿಂದ ಬಂದ ಬಾಂಬ್ ಗಳ ಶಬ್ದವು ನನಗೆ ಭಯವನ್ನುಂಟು ಮಾಡಿತು. ಇಲ್ಲ, ಭಯ ಮಾಯವಾಗಿದೆ. ನಾನು ಜಬಾಲಿಯಾಳ ಮಗಳು, ಬಾಲ್ಯ ದಿಂದಲೂ ಎಲ್ಲವೂ ನನಗೆ ಚಿರ ಪರಿಚಿತವಾಗಿದೆ. ಭಯವು ಯಾವುದಕ್ಕೂ ಅಡ್ಡಿಯಾಗಲು ಸಾಧ್ಯವಿಲ್ಲ.

    ನೂರ್ ಕೇವಲ ವರದಿಗಾರ್ತಿಯಲ್ಲ, ಪ್ರತಿಯೊಬ್ಬ ದುಃಖಿತ ತಾಯಿ ಮತ್ತು ಸಹೋದರಿಯ, ಮತ್ತು ಬಾಲ್ಯ ಹೇಗಿದೆ ಎಂದು ತಿಳಿಯದ ಪ್ರತಿಯೊಬ್ಬ ಅನಾಥರ ಧ್ವನಿ. ನೂರ್ ಹೇಳಲು ಬಹಳಷ್ಟು ಇದೆ: “ಗಾಝಾದ ಕಥೆಯನ್ನು ಅದರ ಮಕ್ಕಳ ನಾಲಿಗೆಯಿಂದ ಸೆರೆಹಿಡಿದು ಅದನ್ನು ಜಗತ್ತಿಗೆ ಕೇಳುವಂತೆ ಮಾಡುವುದು. ನನ್ನ ಮಾಧ್ಯಮ ಕೆಲಸವೆಂದರೆ ಗಾಝಾ ಮತ್ತು ಪ್ರಪಂಚದ ನಡುವೆ ಸೇತುವೆ ಯನ್ನು ನಿರ್ಮಿಸುವುದು. ದುಃಖ ಮತ್ತು ದುರಂತಕ್ಕೆ ಸಾಕ್ಷಿಯಾಗಿ, ನೆನಪುಗಳು ಮತ್ತು ಧ್ವನಿಗಳು ಮಾತ್ರ ಉಳಿದಿರು ವವರ ವಕ್ತಾರನಾಗಿ, ನಾನು ನಿಜವಾದ ಗಾಝಾವನ್ನು ನನ್ನೊಂದಿಗೆ ಒಯ್ಯು ತ್ತೇನೆ. ಗಾಝಾದ ಅವಶೇಷಗಳಿಂದ ಮೇಲೇರುವ ಸ್ಮಶಾನ ಭೂಮಿ, ಸಾವಿಗೆ ಸವಾಲು ಹಾಕುವ ಜೀವನ ಶೈಲಿ. ಮಾಧ್ಯಮ ಕೆಲಸವು ಬದುಕುಳಿಯುವ ಸಾಧನವಾಗಿರಬೇಕು. ಈ ಮೈಕ್ರೊಫೋನ್ ನನಗೆ ಪ್ರತಿಯೊಬ್ಬ ಹುತಾತ್ಮರ, ಯಾವುದೇ ಕ್ಷಣದಲ್ಲಿ ಸಾವನ್ನು ಎದುರಿಸುತ್ತಿರುವವರ ಸಂದೇಶವನ್ನು ಜಗತ್ತಿಗೆ ನೀಡಲು ಶಕ್ತಿ ಯನ್ನು ನೀಡಬೇಕು. ನಾನು ನಾಶವಾದ ಬೀದಿಗಳಲ್ಲಿ, ಗಾಯಗೊಂಡವರಿಂದ ತುಂಬಿರುವ ಆಸ್ಪತ್ರೆಗಳ ಮೂಲಕ ನಡೆ ಯುತ್ತೇನೆ. ಅನೇಕರ ಅಂತ್ಯವಾಗಬಹು ದಾದ ಕ್ಷಣಗಳನ್ನು ಸೆರೆಹಿಡಿಯುವುದು, ಜಗತ್ತಿಗೆ ದೈನಂದಿನ ವಾಸ್ತವಗಳ ನೇರ ಚಿತ್ರಣವನ್ನು ನೀಡುವುದು – ಇದು ನನ್ನ ಕರ್ತವ್ಯ.”

  • ಹುಲಿ ಸಾಗಿದ ದಾರಿ…

    ಹುಲಿ ಸಾಗಿದ ದಾರಿ…

    [ಜುಲೈ 29ರಂದು ಅಂತರಾಷ್ಟ್ರೀಯ ಹುಲಿ ದಿನಾಚರಣೆಯ ದಿನ. ಹುಲಿಗಳ ತವರೂರಾದ ಭಾರತದಲ್ಲಿ ಹುಲಿಗಳ ಸಂತತಿಯು ಕ್ಷೀಣಿಸುತ್ತಿರುವುದು ಕಳವಳಕಾರಿ ಸುದ್ದಿ. ಅವುಗಳ ಅಭಿವೃದ್ಧಿಗೆ ಐವತ್ತು ವರುಷಗಳ ಹಿಂದೆಯೇ ಪ್ರಾಜೆಕ್ಟ್ ಟೈಗರ್' ಅನ್ನುವ ಯೋಜನೆಯನ್ನು ಜಾರಿಗೆ ತಂದರೂ ಅವು ಪರಿಪೂರ್ಣವಾಗಿ ಯಶಸ್ವಿಯಾಗಲಿಲ್ಲ. ಇದಕ್ಕೆ ಮೂಲ ಕಾರಣ ಏನು ಅನ್ನುವುದನ್ನು ಲೇಖನದಲ್ಲಿ ವಿವರಿಸಲಾಗಿದೆ. ಬನ್ನಿ, ವ್ಯಾಘ್ರನ ಕಾಡಿನಲ್ಲಿ ಸುತ್ತಿ ಬರೋಣ- ಸಂಪಾದಕಿ]

    ಸುಮಾರು ಮುನ್ನೂರು ವರುಷಗಳ ಹಿಂದೆ, ನಮ್ಮ ದೇಶದ ದಟ್ಟ ಅಡವಿಗಳಲ್ಲಿ ಹುಲಿಗಳ ಸಂತತಿ ಸುಮಾರು 60 ಸಾವಿರಕ್ಕೂ ಮಿಕ್ಕಿ ಇದ್ದವು. ಆಗ ಈ ದೇಶದಲ್ಲಿ ಇರುವಷ್ಟು ಹುಲಿಗಳ ಸಂಖ್ಯೆ ಇನ್ನಾವುದೇ ರಾಷ್ಟ್ರಗಳಲ್ಲಿ ಇರಲಿಲ್ಲ. ಹಿಂದೆ ರಾಜ-ಮಹಾರಾಜರು, ಸುಲ್ತಾನ-ನವಾಬರು, ಈ ಹುಲಿ ಬೇಟೆಗೆ ಗುಂಪುಗೂಡಿ ಕಾಡಿಗೆ ಹೋಗುತ್ತಿದ್ದರು. ಅವರಿಗೆ ಈ ಹುಲಿಗಳ ಶಿಕಾರಿ ಅನ್ನುವುದು ಸಾಹಸ-ಪರಾಕ್ರಮದ ಸಂಕೇತ. ಭಾರತಕ್ಕೆ ನುಸುಳಿ ಬಂದ ಆಂಗ್ಲರಿಗೂ ಹುಲಿ ಬೇಟೆಯ ಹುಚ್ಚು. ಹತ್ಯೆ ಮಾಡಿದ ಹುಲಿಯ ಎದುರು ಬಂದೂಕು ಹಿಡಿದು ಫೋಟೋ ಕ್ಲಿಕ್ಕಿಸುವುದೆಂದರೆ ಅವರಿಗೆ ಶೌರ್ಯದ ಸಾಧನೆ. ಯಾರದೋ ಕಾಡು- ಯಾರದೋ ಜಂಗಲ್ ರಾಜ್! ಸ್ವಾತಂತ್ರ್ಯ ಪೂರ್ವದಲ್ಲಿ ಮಧ್ಯ ಪ್ರದೇಶದ ಒಂದು ಪ್ರಾಂತ್ಯವನ್ನು ಸರ್ಗೂಜ್ ಅನ್ನುವ ಮಹಾರಾಜ ಅಳುತ್ತಿದ್ದ. ಆತನಿಗೆ ಹುಲಿಗಳನ್ನು ಕೊಲ್ಲುವ ಮೋಜು. ಆತನ ಈ ಹವ್ಯಾಸಕ್ಕೆ ಅಂದು 1160 ಹುಲಿಗಳು ಕೈಯಾರೆ ಹತ್ಯೆಯಾದವು. ಇದು ಇತಿಹಾಸದ ಪುಟದಲ್ಲಿ ಅಚ್ಚಳಿಯದ ದಾಖಲೆ! ದಂತ ಪೋರ ವೀರಪ್ಪನ್‌ನಂತೆ! ಆತ ಕೊಂದ ಆನೆಗಳು ಇನ್ನೊಂದು ಕಪ್ಪು ಚರಿತ್ರೆ! ಮನುಷ್ಯರ ಈ ದುರಾಶೆಗೆ-ಸಾಹಸಕ್ಕೆ ಕಾಡಿನಲ್ಲಿ ವಾಸವಾಗಿದ್ದ ಸಾವಿರಾರು ಹುಲಿಗಳು ನಶಿಸಿ ಹೋದವು. 1970ರಲ್ಲಿ ಈ ಹುಲಿಗಳ ಗಣತಿ ಕಾರ್ಯ ಆರಂಭಿಸಿದಾಗ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಸುದ್ದಿ ಬಹಿರಂಗವಾಯಿತು. ಆಗ ಕಾಡಿನಲ್ಲಿ ಉಳಿದುಕೊಂಡಿದ್ದ ಹುಲಿಗಳ ಸಂಖ್ಯೆ ಕೇವಲ 1780 ಮಾತ್ರ! ಈ ಕಳವಳಕಾರಿ ವರದಿಯನ್ನು ಅಂದಿನ ಕೇಂದ್ರ ಸರಕಾರವು ಬಹು ಗಂಭೀರವಾಗಿ ಪರಿಗಣಿಸಿತು. ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಹುಲಿಗಳ ಸಂರಕ್ಷಣೆಗೆಪ್ರಾಜೆಕ್ಟ್ ಟೈಗರ್’ ಅನ್ನುವ ಹುಲಿ ಸಂರಕ್ಷಣಾ ಯೋಜನೆಯನ್ನು ಜಾರಿಗೆ ತಂದರು. ಬಹಳಷ್ಟು ದೂರಾದೃಷ್ಟಿಯ ಈ ಕಾರ್ಯ ಕ್ರಮವನ್ನು ಸ್ವಯಂ ಇಂದಿರಾ ಗಾಂಧಿಯವರು ಬಹು ಕಾಳಜಿಯಿಂದ ನಿರ್ವಹಿಸಿದರು. ಕಳ್ಳ ಬೇಟೆಯಾಡುವ ಶೋಕಿಗಳಾಗಲಿ, ಆದಿವಾಸಿ ಜನಾಂಗವಾಗಲಿ ಅಥವಾ ಅರಣ್ಯಾಧಿಕಾರಿಗಳೇ ಆಗಲಿ ಅವರಿಗೆ ಕಠಿಣವಾಗಿ ಶಿಕ್ಷಿಸುವ ಬಿಗಿ ಕಾನೂನನ್ನು ಜಾರಿಗೆ ತಂದರು. ಕಾಡು ಕಾಯುವ ವನ ಪಾಲಕರನ್ನು ಹೆಚ್ಚಿಸಲಾಯಿತು. ಈ ಯೋಜನೆಯನ್ನು ಮೆಚ್ಚಿಕೊಂಡ ವಿಶ್ವ ವನ್ಯ ಮೃಗ ನಿಧಿ'ಯು ಇದರ ಉತ್ತೇಜನಕ್ಕೆ ಒಂದು ಮಿಲಿಯನ್ ಡಾಲರ್ ಮೊತ್ತವನ್ನು ಅನುದಾನವಾಗಿ ನೀಡಿತು. ಒಂದು ದಶಕಗಳ ಬಳಿಕ ಮತ್ತೆ ಹುಲಿಗಳ ಗಣತಿ ಆರಂಭ ಮಾಡಿದರು. ಈ ಯೋಜನೆಯು ಪರಿಣಾಮ ಎಂಬAತೆ ಸುಮಾರು 4,334 ಹುಲಿಗಳು ಹೊಸತಾಗಿ ಕಂಡು ಬಂದವು. ಈ ಪ್ರಗತಿಯನ್ನು ಇಡೀ ವಿಶ್ವವೇ ಕೊಂಡಾಡಿತು. ಅಂತೂ ಈ ಯೋಜನೆಯು ಹುಲಿಗಳ ನಿರ್ಮೂಲವನ್ನು ತಡೆಗಟ್ಟುವಲ್ಲಿ ಬಹುಮುಖ್ಯವಾದ ಪಾತ್ರ ವಹಿಸಿತು. ವಿಶ್ವಸಂಸ್ಥೆಯು ಈ ಸಾಧನೆಗೆ ಭಾರತದ ಬೆನ್ನು ತಟ್ಟಿತು. ಇದಕ್ಕೆ ಸೂಕ್ತ ಸಮಯದಲ್ಲಿ ಕಡಿವಾಣವನ್ನು ಹಾಕದೆ ಇದ್ದಿದ್ದರೆ, ನಮ್ಮ ಮುಂದಿನ ಪೀಳಿಗೆಯು ಇಂತಹ ಹುಲಿಗಳನ್ನು ಬರೇ ಚಿತ್ರಪಟಗಳಲ್ಲಿ ಕಾಣುವ ದಿನಗಳು ಎದುರಾಗುತ್ತಿತ್ತೆಂದು ಸಂತೋಷ ವ್ಯಕ್ತಪಡಿಸಿತು. ಇಂದಿಗೂ ಈ ಹುಲಿ ಯೋಜನೆಯ ಸಂರಕ್ಷಣಾ ಕಾರ್ಯಕ್ರಮವು ಜಾರಿಯಲ್ಲಿದೆ. ಜೊತೆಗೆ ಜುಲಾÊ 29ರ ದಿನವನ್ನು ಅದು ಅಂತರಾಷ್ಟ್ರೀಯ ಹುಲಿ ದಿನಾಚಣೆಯ ಹೆಸರಿನಲ್ಲಿ ಆಚರಿಸಲಾಗುತ್ತದೆ.ಹುಲಿಯು ನಿಸರ್ಗದ ಅತ್ಯುತ್ತಮ ಸುಂದರ ಹಾಗೂ ಕೆಚ್ಚದೆಯ ಮೃಗ. ಅದು ಭಾರತದ ರಾಷ್ಟಿçÃಯ ಪ್ರಾಣಿಯಾಗಿಯೂ ಗುರುತಿಸಿಕೊಂಡಿದೆ. ಅದರ ರಾಜ ಗಾಂಭೀರ್ಯದ ನಡಿಗೆ, ತೀಕ್ಷ÷್ಣವಾದ ನೋಟ, ವೇಗದ ಓಟ, ಅಸಾಧರಣ ಮೈ ಕಟ್ಟು, ಭೇಟೆಯಾಡುವ ಶೈಲಿ, ಹೆಣ್ಣು ಹುಲಿಯು ಮಕ್ಕಳನ್ನೂ ಪೋಷಣೆ ಮಾಡುವ ರೀತಿ, ಮಕ್ಕಳನ್ನು ಉಳಿಸಿಕೊಳ್ಳಲು ಅದು ನಡೆಸುವ ಹೋರಾಟ ಇತ್ಯಾದಿ ಅದನ್ನು ರಾಷ್ಟಿçÃಯ ಮೃಗವಾಗಿ ಆಯ್ಕೆ ಮಾಡಲಾಗಿದೆ. ಹುಲಿಗಳ ಗುಂಪು ಕಾಡಿನಲ್ಲಿ ತಮ್ಮದೇ ವ್ಯಾಪ್ತಿ ಪ್ರದೇಶವನ್ನು ಗುರುತಿಸಿಕೊಂಡು ಜೀವಿಸುತ್ತವೆ. ತನ್ನ ಕುಟುಂಬದ ಹೆಣ್ಣು ಹುಲಿಯು ಬೇರೆ ವ್ಯಾಪ್ತಿಗೆ ಹೋಗ ಕೂಡದೆಂದು ಅದು ಸದಾ ಕಟ್ಟೆಚ್ಚರ ವಹಿಸುತ್ತದೆ. ಮರಗಳ ತೊಗಟೆಗಳನ್ನು ತನ್ನ ಹರಿತವಾದ ಉಗುರಿನಿಂದ ಕೆರೆದು ಆಗಾಗ ಅದರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತದೆ. ತನ್ನ ಸರ ಹದ್ದಿಗೆ ಬರುವ ಅನೇಕ ಮರಗಳಿಗೆ ಅದು ಈ ರೀತಿಯ ಗುರುತುಗಳನ್ನು ಹಾಕಿಕೊಳ್ಳುತ್ತದೆ. ಇದು ಉಳಿದ ವ್ಯಾಪ್ತಿಯ ಹುಲಿಗಳು ಅತಿಕ್ರಮಣ ಮಾಡಬಾರದೆಂಬ ಸೂಚನೆ. ಈ ಎಚ್ಚರಿಕೆಯನ್ನು ಉಲ್ಲಂಘಿಸಿಯೂ ಕೆಲವು ಹುಲಿಗಳು ಲಕ್ಷö್ಮಣ ರೇಖೆಯನ್ನು ದಾಟುವುದಿದೆ. ಹೀಗೆ ಆಕ್ರಮವಾಗಿ ನುಸುಳಿದಾಗ ಅದು ತೀವ್ರವಾದ ಪ್ರತಿಭಟನೆ ಮಾಡುತ್ತದೆ. ಕಾದಾಟಕ್ಕೆ ನಿಂತು, ಇಡೀ ಕಾಡೇ ನಡುಗುವಂತೆ ಘರ್ಜಿಸುತ್ತದೆ. ತನ್ನ ಬಿಗಿ ಪಂಜದಲ್ಲಿ ಮುಖಮೂತಿಯನ್ನು ಗಮನಿಸದೆ ಹೊಡೆಯುತ್ತದೆ. ಇದನ್ನುಟೆರಿಟರಿ ಪೈಟ್’ ಅನ್ನುತ್ತಾರೆ. ಇಲ್ಲಿ ಒಂದೋ ಎದುರಾಳಿ ಹುಲಿ ತೀವ್ರವಾದ ಗಾಯಗೊಂಡು ಪರಾರಿಯಾಗುತ್ತದೆ ಅಥವಾ ಕಾದಾಟದಲ್ಲಿಯೇ ಹತವಾಗುತ್ತದೆ.
    ಮುಖ್ಯ ವಿಚಾರವೆಂದರೆ ಇಲ್ಲಿಯೇ ಹುಟ್ಟಿ ಬೆಳೆದ ಹುಲಿಯು ತನ್ನ ತವರು ಪ್ರದೇಶವನ್ನು ಯಾರಿಗೂ ಬಿಟ್ಟು ಕೊಡಲು ಸಿದ್ಧವಿರುವುದಿಲ್ಲ. ಅದು ತನ್ನ ವ್ಯಾಪ್ತಿ ಪ್ರದೇಶದಲ್ಲಿಯೇ ತನ್ನ ಜೀವಿತವನ್ನು ಕಳೆಯ ಬಯಸುತ್ತದೆ. ಹೀಗಾಗಿ ಕಾಡ್ಗಿಜ್ಜಿಗೂ, ಸರಕಾರದ ಯೋಜನೆಗಳಿಗೂ ಅಥವಾ ಬೇರೆ ರಾಜ್ಯದ ವಲಸೆಗೂ ಅವುಗಳನ್ನು ಸ್ಥಳಾಂತರ ಮಾಡಿದರೆ ಅವು ಬದುಕಿ ಉಳಿಯುವ ಆಯಸ್ಸು ಬಲು ಕಡಿಮೆಯಾಗಿರುತ್ತದೆ.
    ನಮ್ಮ ರಾಜ್ಯದ ನಾಗರ ಹೊಳೆಯಂತೆ, ಹುಲಿಗಳಿಗೆ ರಾಜಸ್ತಾನದ ಸರಿಸ್ಕಾ' ಮತ್ತು ಮಧ್ಯ ಪ್ರದೇಶದಪನ್ನಾ’ ಅರಣ್ಯಾಧಾಮಗಳು ಬಲು ಪ್ರಸಿದ್ಧ ತಾಣಗಳು. ಇಲ್ಲಿ ನೂರಾರು ಹುಲಿಗಳಿವೆ. ಆದರೆ ಈ ಪ್ರದೇಶದ ಹುಲಿಗಳನ್ನು ಇನ್ನೊಂದು ತಾಣಕ್ಕೆ ಸ್ಥಳಾಂತರ ಗೊಳಿಸಿದರೆ ಅವು ಹೊಸ ಪ್ರದೇಶವನ್ನು ಇಷ್ಟಪಡುವುದಿಲ್ಲ. ಹೇಗಾದರೂ ತಪ್ಪಿಸಿಕೊಂಡು ತಮ್ಮ ಮೂಲ ಸ್ಥಾನಕ್ಕೆ ಬರಲು ಪ್ರಯತ್ನಿಸುತ್ತವೆ. ಇದಕ್ಕಾಗಿಯೇ ಮೃಗಾಲಯಗಳಲ್ಲಿ ಹುಲಿಗಳ ಸಣ್ಣ ಮರಿಗಳನ್ನೇ ತಂದು, ಪೋಷಣೆ ಮಾಡುತ್ತಾರೆ. ಅವು ಅಲ್ಲೇ ಬೆಳೆದು, ಬಾಲ್ಯ ಸವೆದು ಯೌವನಕ್ಕೆ ಕಾಲಿಡುತ್ತವೆ. ಕೊನೆಗೆ ಮೃಗಾಲಯವನ್ನೇ ಮನೆ ಮಾಡಿಕೊಂಡು ಜೀವನ ಪೂರ್ತಿ ಕಳೆಯುತ್ತವೆ. ಇಲ್ಲದಿದ್ದರೆ, ಅದರ ಜಿನ್‌ನಲ್ಲಿ ಹರಿದು ಬಂದ ವಂಶವಾಹಿ ಗುಣವನ್ನು ಸುಲಭವಾಗಿ ಪರಿವರ್ತಿಸಲು ಸಾಧ್ಯವಿಲ್ಲ.
    ಇನ್ನು ಮನುಷ್ಯರಾದ ನಾವು ಪ್ರಾಣಿಗಳ ಕಾಡಿನ ವ್ಯಾಪ್ತಿ ಪ್ರದೇಶವನ್ನು ನಿರ್ಮೂಲನ ಮಾಡುತ್ತೇವೆ. ಅವರ ತವರು ಪ್ರದೇಶವನ್ನು ಕಡಿದು ರೈಲು ಮಾರ್ಗ ನಿರ್ಮಿಸುತ್ತೇವೆ. ದೊಡ್ಡ ದೊಡ್ಡ ರಾಷ್ಟಿçÃಯ ಹೆದ್ದಾರಿಗಳನ್ನು ಅಗೆದು ನಗರಗಳಿಗೆ ಜೋಡಿಸುತ್ತೇವೆ. ಸುರಂಗಗಳನ್ನು ಕೊರೆದು, ಹೊಸ ಹೊಸ ಹಾದಿಗಳನ್ನೂ ಹುಡುಕುತ್ತೇವೆ. ಕಾಡ್ಗಿಚ್ಚು' ಅನ್ನುವ ನಾಟಕವನ್ನು ಆಡಿ ಸಾವಿರಾರು ಪ್ರಾಣಿ-ಪಕ್ಷಿಗಳನ್ನು ದೂರಕ್ಕೆ ಅಟ್ಟಿ ಬಿಡುತ್ತೇವೆ. ಆಗ ಅಲ್ಲಿ ಲಕ್ಷಾಂತರ ಕ್ರಿಮಿ-ಕೀಟಗಳು, ಹುಳ-ಹುಪ್ಪಟೆಗಳು, ಹರಿದಾಡುವ ಸರಿಸೃಪಗಳು ಬೆಂಕಿಗೆ ಆಹುತಿಯಾಗುತ್ತವೆ. ಓಡಿ ಹೋಗಲು ಸಾಧ್ಯವಾಗದ ಅದೆಷ್ಟು ಮರಿಗಳು, ಗರ್ಭವತಿ ಪ್ರಾಣಿಗಳು ಸುಡುವ ಅಗ್ನಿಗೆ ಕರಟಿ ಹೋಗುತ್ತವೆ. ಇದರಿಂದ ಕಾಡಿನ ಇಡೀ ಪರಿಸರವೇ ಅಸಮತೋಲನಗೊಳ್ಳುತ್ತದೆ. ಅವು ಮುಂದೆ ಪರಿಸರದ ಮೇಲೆ ಕೆಟ್ಟದಾದ ಪರಿಣಾಮ ಬೀರುತ್ತವೆ. ಇದರಿಂದಲೇ ಪ್ರಕೃತಿ ವಿಕೋಪಗಳು ಸೃಷ್ಟಿಯಾಗುತ್ತವೆ. ಇಲ್ಲಿ ಹುಲಿಯ ಸಮಸ್ಯೆಯೂ ಇದೇ. ಅವು ವ್ಯಾಪ್ತಿ ಪ್ರದೇಶದಿಂದ ತಪ್ಪಿಹೋದರೆ ಗೊಂದಲಕ್ಕೆ ಸಿಲುಕಿಕೊಳ್ಳುತ್ತವೆ. ತನ್ನ ಕ್ಷೇತ್ರವನ್ನು ಹುಡುಕಾಡಲು ಓಡಾಡುತ್ತವೆ. ಅದು ಸಿಗದೇ ಹೋದಾಗ ನೇರವಾಗಿ ಹತ್ತಿರದ ಹಳ್ಳಿಗೂ, ಊರಿಗೂ ನುಗ್ಗುತ್ತವೆ. ತಿನ್ನಲು ಆಹಾರವು ಸಿಗದೆ ಹೋದಾಗ ಮೇಯುವ ಜಾನುವಾರಗಳನ್ನೂ, ನಾಯಿಗಳನ್ನೂ ಹಿಡಿದು ಕೊಲ್ಲುತ್ತವೆ. ಮನುಷ್ಯರ ಮೇಲೆ ದಾಳಿ ಮಾಡಿದಾಗನರಭಕ್ಷಕ’ ಅನ್ನುವ ಹಣೆಪಟ್ಟಿಯನ್ನು ಪಡೆಯುತ್ತವೆ. ಈ ದುಷ್ಕೃತ್ಯಕ್ಕೆ ಇಲ್ಲಿ ಮನುಷ್ಯನೇ ಕಾರಣವೇ ಹೊರತು, ಹುಲಿಯಲ್ಲ. ಕಾಡಿನ ರಾಜನಾದ ಹುಲಿಯು ಯಾವತ್ತೂ ರಾಜ ಹುಲಿಯೇ. ಅದಕ್ಕೆ ಮನುಷ್ಯನ ಹಣ, ಬಂಗಾರ ಮನೆ-ಮಠಗಳು ಯಾವುದೂ ಬೇಕಿಲ್ಲ. ಮದ, ಮತ್ಸರ, ಅಸೂಯೆ, ಹಗೆತನ ತುಂಬಿಕೊAಡಿರುವ ಕೊಳಕು ಮನಸ್ಸಿನ ರಕ್ತವೂ ಬೇಕಿಲ್ಲ. ಅದಕ್ಕೆ ಬೇಕಾಗಿರುವುದು ತನ್ನ ವ್ಯಾಪ್ತಿ-ತನ್ನ ವಲಯ. ಅಲ್ಲೇ ಅದು ತನ್ನ ಸಂಸಾರದ ಜೊತೆಗೆ ಸಭ್ಯ ಗೃಹಸ್ಥನಾಗಿ ಸ್ವಚಂದವಾಗಿ ಬದುಕಬಲ್ಲದು. ಅದಕ್ಕೆ ನಾಡಿಗೆ ನುಸುಳಿ ಕಳ್ಳರಂತೆ ಅಡಗಿಕೊಳ್ಳಲು, ಭಯದಲ್ಲಿ ನಡುಗಿಕೊಳ್ಳಲು ಯಾವತ್ತೂ ಇಷ್ಟವಿಲ್ಲ. ಅದು ಸದಾ ಸ್ವಾತಂತ್ರ್ಯವನ್ನೇ ಬಯಸುತ್ತವೆ.
    ಇವತ್ತು ಹುಲಿ ಸಂರಕ್ಷಣಾ ಯೋಜನೆಗೆ 50 ವರ್ಷಗಳು ದಾಟಿದವು. ಆದರೆ ಅದು ಪರಿಪೂರ್ಣವಾಗಿ ಯಶಸ್ವಿಯಾಗಲಿಲ್ಲ. ದುರಂತವೆAದರೆ ನಮ್ಮಲ್ಲಿ ಅದೆಷ್ಟು ಪ್ರಗತಿಪರ ಯೋಜನೆಗಳನ್ನು ರೂಪಿಸಿದರೂ, ಅದನ್ನು ಅಡ್ಡಹಾದಿಯಲ್ಲಿ ಕಬಳಿಸುವವರೇ ಹೆಚ್ಚು. ಇದಕ್ಕೆ ಈ ಪ್ರಾಜೆಕ್ಟ್ ಟೈಗರ್' ಕೂಡ ಹೊರತಲ್ಲ. ಇದರಲ್ಲಿ ಮುಖ್ಯವಾಗಿ ಆದಿವಾಸಿಗಳು, ಶ್ರೀಮಂತರು, ರಾಜಕಾರಣಿಗಳು ಹಾಗೂ ಸ್ಥಳೀಯ ಅರಣ್ಯಾಧಿಕಾರಿಗಳು ಶಾಮೀಲಾಗಿರುತ್ತಾರೆ. ಇಲ್ಲಿ ಬೇಲಿಯೇ ಹೊಲವನ್ನು ಮೇಯಿದರೆ ಯಾರಿಗೆ ಕಾನೂನಿನ ಕುಣಿಕೆಯೊಳಗೆ ಸಿಕ್ಕಿಸುವುದು? ಮನುಷ್ಯನಿಗೆ ಹಣದ ದಾಹವು ಮಾಡಬಾರದ ಕೆಲಸಗಳನ್ನೂ ಮಾಡಿಸುತ್ತದೆ. ಇವರಿಂದಲೇ ತೆರೆಮರೆಯಲ್ಲಿ ಹುಲಿಗಳ ಮಾರಣ ಹೋಮಗಳು ಜರುಗುತ್ತಲೇ ಇರುತ್ತವೆ. ಇಂದಿಗೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಲಿಗಳ ಚರ್ಮ, ಮೂಳೆ, ಮಾಂಸ, ಕಣ್ಣುಗಳು, ಉಗುರುಗಳು ಇತ್ಯಾದಿಗಳಿಗೆ ಬಹು ಬೇಡಿಕೆ ಇದೆ. ಇದರಲ್ಲಿ ಅತ್ಯಧಿಕ. ಗ್ರಾಹಕರಿರುವುದು ಥೈಲ್ಯಾಂಡ್ ರಾಷ್ಟçದಲ್ಲಿ. ಹೀಗಾಗಿ ಭಾರತದಿಂದ ಚೀನಾ ಮೂಲಕವಾಗಿ ಹುಲಿಗಳ ದೇಹದ ಭಾಗಗಳು ಅಕ್ರಮವಾಗಿ ರವಾನೆಯಾಗುತ್ತಲೇ ಇರುತ್ತದೆ. ಈ ವ್ಯವಸ್ಥಿತ ಜಾಲದಲ್ಲಿ ಅನೇಕ ಕಾಣದ ಕೈಗಳಿವೆ. ಬಲವಾದ ರಾಜಕೀಯ ಕೈವಾಡವಿರುವ ಕಾರಣ ಅವರನ್ನು ಸುಲಭವಾಗಿ ಬಂಧಿಸುವುದು ಸುಲಭವಲ್ಲ. ಈ ರೀತಿ ಅವ್ಯಾಹಿತವಾಗಿ ಸಾಗುವ ಕಳ್ಳ ಸಾಗಣೆಯಿಂದ ಹುಲಿಗಳ ಸಂತತಿ ಕ್ಷೀಣಿಸುತ್ತಾ ಸಾಗುತ್ತಿದೆ. ದೇಶಕ್ಕೆ ದ್ರೋಹ ಬಗೆಯುವ ಇಂತಹ ನೀಚರೇ ಹುಲಿಗಳ ನಿಜವಾದ ಭಕ್ಷಕರು. ಇವರಿಗೆ ಹಣದಾಶೆಗೆ ಕುಮ್ಮಕ್ಕು ನೀಡುವ ಖಾಕಿ ಅಧಿಕಾರಿಗಳೇ ನಿಜವಾದ ಹುಲಿ ಹಂತಕರು! ಕಳೆದ ಬಾರಿಯ ಹುಲಿ ಗಣತಿಯ ಪಟ್ಟಿಯನ್ನು ಎತ್ತಿ ನೋಡಿದರೆ, ಈಗ ಭಾರತದಲ್ಲಿ ಬದುಕಿ ಉಳಿದಿರುವ ಹುಲಿಗಳ ಸಂಖ್ಯೆ ಕೇವಲ 3,167. ಎಲ್ಲಿಯ ವರೆಗೆ ಸರಕಾರದ ಕಾಯ್ದ-ಕಾನೂನುಗಳು ಸಡಿಲಗೊಳ್ಳುತ್ತವೋ ಅಲ್ಲಿಯವರೆಗೆ ಇಂತಹದ್ದೇ ಫಲಿತಾಂಶಗಳು ಕಾಣಸಿಗುತ್ತದೆ. ಹುಲಿ ಬೇಟೆಯಾಡುವ ಯಾವುದೇ ಹಂತಕನಿರಲಿ, ಆತ ಕಾಡಿಗೆ ಹೊಕ್ಕರೆಕಂಡಲ್ಲಿ ಗುಂಡು’ ಅನ್ನುವ ಕಾನೂನು ಜಾರಿಗೆ ತಂದರೆ ಹುಲಿಗಳ ಸಂತತಿ ಏರ ಬಹುದೋ ಏನೋ?
    ಇರ್ಶಾದ್ ಮೂಡಬಿದ್ರಿ

  • ಕುಮಾರಿ ಹರ್ಷಿಯ ಬಾನುರವರ ಮನ ಮುಟ್ಟುವ ಬರಹ…

    ಕುಮಾರಿ ಹರ್ಷಿಯ ಬಾನುರವರ ಮನ ಮುಟ್ಟುವ ಬರಹ…

    ನಮಸ್ಕಾರ ಬಂಧುಗಳೇ,

    ನಾನು ಶಿಕ್ಷಕಿಯಾಗಬೇಕೆಂದು ನಮ್ಮ ಅಮ್ಮ ಆಸೆಪಟ್ಟಿದ್ರು. ಹಾಗಾಗಿ ಓದು-ಬರಹ ಕಲಿಯಲು ಕಷ್ಟ ಎನಿಸಿದರೂ ಸಹ ಅಮ್ಮನ ಒಂದೇ ಒಂದು ಆಸೆ ಈಡೇರಿಸುವ ಜವಾಬ್ದಾರಿ ನನ್ನ ಮೇಲಿತ್ತು. ಮುಕ್ಕಾಲು ಭಾಗ ಅಂಧತ್ವವನ್ನು ಹೊತ್ತು ಹುಟ್ಟಿದ ನನಗೆ ಸಾಮಾನ್ಯ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಶಾಲೆಗೆ ನನ್ನನ್ನು ದಾಖಲಿಸಿದರು. ನನ್ನ ಕಲಿಕೆಯೇ ಅಲ್ಲಿ ಆಗುತ್ತಿರಲಿಲ್ಲ. ಕಾರಣ ಕಪ್ಪುಹಲಗೆಯ ಅಕ್ಷರಗಳು ನನಗೆ ಕಾಣುತ್ತಿರಲಿಲ್ಲ. ಅಕ್ಕ ಪಕ್ಕದ ವಿದ್ಯಾರ್ಥಿಗಳು ಸಹಾಯ ಮಾಡುತ್ತಿರಲಿಲ್ಲ. ಬದಲಾಗಿ ಆಡಿಕೊಳ್ಳುತ್ತಿದ್ದರು, ಛೇಡಿಸುತ್ತಿದ್ದರು. ಶಿಕ್ಷಕರು ನಮ್ಮ ತಂದೆ ತಾಯಿಗಳಿಗೆ ಸಲಹೆ ಕೊಟ್ಟರು: “ದಯವಿಟ್ಟು ನಿಮ್ಮ ಮಗುವನ್ನು ಅಂಧ ಮಕ್ಕಳ ಶಾಲೆಗೆ ಸೇರಿಸಿ. ನಿಮ್ಮ ಮಗಳ ಭವಿಷ್ಯ ಉತ್ತಮವಾಗುತ್ತದೆ”.

    ನಮ್ಮ ತಂದೆ-ತಾಯಿ ಅಂದು ತೆಗೆದುಕೊಂಡ ನಿರ್ಧಾರ ನನ್ನ ಜೀವನದ ದಿಕ್ಕೇ ಬದಲಾಯಿಸಿತು. ಅವರು ಹೀಗೆ ಉತ್ತರಿಸಿದರು:- “ನೋಡಿ ಸರ್, ನಮ್ಮ ಮಗಳು ಹೇಗಾದರೂ ಇರಲಿ, ನಮ್ಮ ಕಣ್ಣ ಮುಂದೆ ಬೆಳೆಯ ಬೇಕು. ಅವಳನ್ನು ನೋಡಿ ನಾವು ಖುಷಿಪಡಬೇಕು. ಅವಳಿಂದ ನಾವು ಯಾವ ನಿರೀಕ್ಷೆಯೂ ಮಾಡಲ್ಲ. ಅವಳು ನಮ್ಮನ್ನು ಸಾಕಬೇಕೆಂದು ನಾವು ಬಯಸುವುದಿಲ್ಲ. ನಾವು ಬದುಕಿರುವವರೆಗೂ ಕೊನೆಯವರೆಗೂ ನಾವು ಅವಳನ್ನು ನೋಡಿಕೊಳ್ಳುತ್ತೇವೆ. ಕಷ್ಟನೋ ಸುಖನೋ ನಮ್ಮ ಮಗು ನಮ್ಮ ಜೊತೆಯೇ ಇರಲಿ” ಎಂದು ಉತ್ತರಿಸಿ ಮನೆಯ ಕಡೆ ಹೆಜ್ಜೆ ಹಾಕಿದರು. ಅಕ್ಕ ಪಕ್ಕದ ಮನೆಯವರ ಚುಚ್ಚು ಮಾತುಗಳಿಗೂ ಆಹಾರವಾದರು. “ಅಯ್ಯೋ ಪಾಪ, ಈ ಮಗು ನಾ ಅವರ ತಂದೆ ತಾಯಿ ಸಾಯೋವರೆಗೂ ಸಾಕಬೇಕಲ್ಲ!” ಎಂದು ಜನರೆಲ್ಲ ಆಡಿಕೊಂಡು ನಗುತ್ತಿದ್ದರು.

    ಇದನ್ನೆಲ್ಲ ಮೌನವಾಗಿ ಗಮನಿಸುತ್ತಿದ್ದ ನನಗೂ ನಾನೇಕೆ ನನ್ನ ಅಪ್ಪ ಅಮ್ಮನಿಗೆ ಹೊರೆಯಾಗಿರಬೇಕು ನಾನೂ ಸಹ ಓದಬೇಕು ಏನಾದರೂ ಮಾಡಬೇಕು ಎಂಬ ಆಲೋಚನೆ ಉಂಟಾಯಿತು. ತರಗತಿಯಲ್ಲಿ ಶಿಕ್ಷಕರು ಸರತಿಯ ಸಾಲಿನಲ್ಲಿ ಎಲ್ಲರನ್ನೂ ಓದಿಸುತ್ತಿದ್ದರು. ನನ್ನ ಸರದಿ ಬಂದಾಗ ನಿನ್ನ ಕೈಲಾಗಲ್ಲಮ್ಮ ಕಷ್ಟ ಆಗುತ್ತೆ ಕುಳಿತುಕೋ ಎಂದು ಕೂರಿಸಿಬಿಡುತ್ತಿದ್ದರು. ಅದಕ್ಕೆ ಕಾರಣ ಶಿಕ್ಷಕರಿಗೆ ನನ್ನ ಮೇಲಿರುವ ಕಾಳಜಿಯೋ ಅನುಕಂಪವೋ ತಿಳಿಯದು. ನಂತರದ ದಿನಗಳಲ್ಲಿ ಸ್ವತಃ ನಾನೇ ಹಿರಿಯ ವಿದ್ಯಾರ್ಥಿಗಳ ಬಳಿ ಹೇಳಿಸಿಕೊಂಡು ಕಲಿಯತೊಡಗಿದೆ. ಕಾರಣ ಅಪ್ಪ ಅಮ್ಮ ಅಷ್ಟೇನೂ ಓದಿಲ್ಲ. ಅಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಿ ದರ್ಜೆಯ ನೌಕರರು (ಈಗ ನಿವೃತ್ತರು).

    ಅಮ್ಮ ಗೃಹಿಣಿ, ನಾನೇ ಮೊದಲ ಮಗು ಆಗಿದ್ರಿಂದ ಹೇಳಿಕೊಡುವವರಾರೂ ಇರಲಿಲ್ಲ. ಹಿರಿಯ ವಿದ್ಯಾರ್ಥಿಗಳ ಸಹಾಯದಿಂದ ಕಲಿತ ನಾನು ಸರದಿಯ ಸಾಲಿನಲ್ಲಿ ನನ್ನ ಸರದಿ ಬಂದಾಗ ನಾನೇ ಎದ್ದು ನಿಂತೆ ಎಂದಿನAತೆ ನನ್ನ ಶಿಕ್ಷಕರು ಕೂರಲು ಹೇಳಿದರು. ಆಗ ನಾನು ಹೇಳಿದೆ, “ಸರ್. ನಾನೂ ಓದುತ್ತೇನೆ, ತಪ್ಪಿದ್ದರೆ ತಿಳಿಸಿ ಸರಿ ಇದ್ದರೆ ಓದಲು ಅವಕಾಶ ಕೊಡಿ” ಎಂದೆ. ಅಂದೇ ನನಗೆನಿಸಿದ್ದು, “ಅನುಕಂಪ ಬೇಡ, ಅವಕಾಶ ಕೊಡಿ” ಎಂದು. ಗುರುಗಳು ಓದಲು ತಿಳಿಸಿದರು. ಕನ್ನಡ ಪಾಠ ಓದಿದೆ. ನಂತರ ಇತರೆ ವಿಷಯಗಳನ್ನು ಓದಲು ಹೇಳಿದರು ಅವುಗಳನ್ನೂ ಓದಿದೆ. ಆಗ ಶಿಕ್ಷಕರೆಲ್ಲ ಒಟ್ಟಿಗೆ ಒಂದೆಡೆ ಸೇರಿ ಇವಳೂ ಸಹ ಓದಬಲ್ಲಳು. ಪ್ರೋತ್ಸಾಹದ ಅಗತ್ಯವಿದೆ. ಎಂದರಿತ ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರು ೬ನೇ ತರಗತಿಯಿಂದ ಪ್ರೋತ್ಸಾಹಿಸಲು ಪ್ರಾರಂಭಿಸಿದರು. ಆಟಕ್ಕೆಂದು ಹೋದರೆ ಸಹಪಾಠಿಗಳಿಂದ ಹೀಯಾಳಿಕೆಗೊಳಗಾಗಬೇಕಿತ್ತು. ಕುರುಡಿ ಎಂದು ಆಡಿಕೊಳ್ಳುತ್ತಿದ್ದರು. ಭಯದಿಂದಲೇ ಶಾಲೆಯ ಆಟದ ಮೈದಾನದಲ್ಲಿರಬೇಕಿತ್ತು. ಶಾಲೆ ಬಿಟ್ಟ ನಂತರ ಮನೆ ಕಡೆ ಹೋಗ್ತಾ ಇದ್ರೆ ಕಲ್ಲಲ್ಲೆಲ್ಲ ಹೊಡೆಯೋರು. ೭ನೇ ತರಗತಿಯಲ್ಲಿ ಅನುತ್ತೀರ್ಣವಾಗಲು ಕಾರಣ ಗಣಿತದ ಲೆಕ್ಕಗಳು ಕಪ್ಪು ಹಲಗೆಯ ಮೇಲೆ ಕಾಣದಿರುವುದು. ನಂತರ ಕಷ್ಟಪಟ್ಟು ಅಭ್ಯಾಸ ಮಾಡಿ ಪರೀಕ್ಷೆ ೭ನೇ ತರಗತಿ ಪಾಸಾದೆ. ಪ್ರೌಢ ಶಾಲೆಯಲ್ಲಿ ಆಟದ ಅವಧಿ ಬಂದಾಗ ಶಿಕ್ಷಕರ ಬಳಿ ಹೋಗಿ ಗಣಿತದ ಲೆಕ್ಕಗಳು, ವಿಜ್ಞಾನದ ಚಿತ್ರಗಳು, ಸಮಾಜ ವಿಜ್ಞಾನದ ಭೂಪಟಗಳನ್ನು ಅಭ್ಯಾಸ ಮಾಡುತ್ತಿದ್ದೆ. ಪ್ರೌಢ ಶಾಲೆಯಲ್ಲಿ ನಾನು ಮೊದಲ ಬೆಂಚಿನ ಮೊದಲ ವಿದ್ಯಾರ್ಥಿನಿ. ಹಾಗಿದ್ದರೂ ಸಹ ಕಪ್ಪು ಹಲಗೆಯ ಅಕ್ಷರಗಳು ಕಾಣುತ್ತಿರಲಿಲ್ಲ. ನಮ್ಮ ಶಿಕ್ಷಕರು ಈ ವಿಚಾರದಲ್ಲಿ ಬಹಳ ಸಹಕಾರ ಕೊಟ್ಟರು. ಅವರು ಹೇಳಿಕೊಂಡೇ ಪಾಠಗಳ ನೋಟ್ಸ್ ಅನ್ನು ಕಪ್ಪು ಹಲಗೆಯ ಮೇಲೆ ಬರೆಯುತ್ತಿದ್ದರು. ನಾನೂ ಸಹ ಅದನ್ನು ಆಲಿಸುವುದರ ಮೂಲಕ ವೇಗವಾಗಿ ಬರೆದುಕೊಳ್ಳುತ್ತಿದ್ದೆ. ಶಾಲೆಯಲ್ಲಿ ನಡೆಯುವ ಯಾವುದೇ ಸಂಗತಿಗಳನ್ನು ಮನೆಯಲ್ಲಿ ಅಪ್ಪ ಅಮ್ಮನಿಗೆ ಹೇಳುತ್ತಿರಲಿಲ್ಲ. ಎಲ್ಲಿ ನನಗೆ ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿಬಿಡುವರೋ ಎಂಬ ಭಯ ಕಾಡುತ್ತಿತ್ತು. ಆಟಕ್ಕೆ ಹೋಗದೆ ಕೇವಲ ಪಾಠಗಳ ಅಭ್ಯಾಸವನ್ನೇ ಮಾಡುತ್ತಿದ್ದೆ. ಜನಪದ ಗೀತೆ, ಭಾವಗೀತೆ, ಪ್ರಬಂಧ ರಚನೆ, ಏಕಪಾತ್ರಾಭಿನಯ ಹೀಗೆ ಎಲ್ಲ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದೆ. ನನ್ನ ಶಿಕ್ಷಕರೂ ಸಹ ಪ್ರೋತ್ಸಾಹಿಸುತ್ತಿದ್ದರು. ನನ್ನ ಪೋಷಕರು ಶಾಲೆ ದೂರ ಇದ್ದರೆ ಓಡಾಟ ಕಷ್ಟ ಎಂದು ಮನೆಯ ಹತ್ತಿರವೇ ಇದ್ದ ಅನುದಾನಿತ ಶಾಲೆಗಳಲ್ಲಿ ಓದಿಸಿದರು. ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣಳಾದೆ. ಕಾಲೇಜು ಶಿಕ್ಷಣಕ್ಕಾಗಿ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿಗೆ ಸೇರಿಸಿದರು. ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಬೇಕೆಂದು ನನಗೆ ಆಸೆ ಇತ್ತು. ಆದರೆ ಅಲ್ಲಿನ ಆಡಳಿತಾಧಿಕಾರಿಗಳು ಕೊಡಲು ನಿರಾಕರಿಸಿದರು. ಅವರು ಕೊಡುವ ಕಾರಣ ಹೀಗಿದೆ: “ನೋಡಮ್ಮ, ವಿಜ್ಞಾನÀ ವಿಭಾಗಕ್ಕೆ ಸೇರಿಸಿಕೊಳ್ಳೋದಕ್ಕೆ ನಮಗೇನೂ ತಕರಾರಿಲ್ಲ ನಿನಗೆ ಅರ್ಹತೆಯೂ ಇದೆ. ಆದರೆ ಮಾನವೀಯತೆ ದೃಷ್ಟಿಯಿಂದ ನಾವು ನಿನಗೆ ಕೊಡುವುದಿಲ್ಲ. ದೈಹಿಕವಾಗಿ ಸದೃಢರಾಗಿರುವವರೇ ಕಣ್ಣಿನಲ್ಲಿ ಆಸಿಡ್ ಎಲ್ಲ ಚೆಲ್ಲಿಕೊಂಡ ಉದಾಹರಣೆಗಳಿವೆ. ದಯವಿಟ್ಟು ಕ್ಷಮಿಸು. ನೀನು ಕಲಾವಿಭಾಗ ಆರಿಸಿಕೊಂಡು ಅಧ್ಯಯನ ಮಾಡುವುದೇ ಸರಿ” ಎಂದು ಹೇಳಿದರು. ಬೇರೆ ಬೇರೆ ಖಾಸಗಿ ಶಾಲೆಗಳಿಗೂ ಹೋಗಿ ಕೇಳಿದೆ. ಅಲ್ಲಿಯೂ ನನಗೆ ವಿಜ್ಞಾನ ವಿಭಾಗಕ್ಕೆ ಸೇರಲು ಅವಕಾಶ ಕೊಡಲಿಲ್ಲ. ಕಡೆಗೆ ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸಿ ಕಲಾ ವಿಭಾಗದಲ್ಲಿಯೇ ಅಭ್ಯಾಸ ಮಾಡಿದೆ. ಕಾಲೇಜು ಸ್ವಲ್ಪ ದೂರ ಹಾಗಾಗಿ ಮನೆಯ ಹತ್ತಿರವೇ ಇದ್ದ ನನ್ನ ಸಹಪಾಠಿಗಳ ಜೊತೆಯಲ್ಲಿಯೇ ಕಾಲೇಜಿಗೆ ಹೋಗುತ್ತಿದ್ದೆ. ಎಲ್ಲವೂ ಥಿಯರಿಯೇ ಇದ್ದಿದ್ದರಿಂದ ನನಗಲ್ಲಿ ಸಮಸ್ಯೆಯಾಗಲಿಲ್ಲ. ಆದರೆ ಇಂಗ್ಲಿಷ್ ವ್ಯಾಕರಣ ಹೇಳಿಸಿಕೊಳ್ಳಲು ನಮ್ಮ ಸಹಪಾಠಿಗಳ ಜೊತೆ ಇಂಗ್ಲಿಷ್ ಉಪನ್ಯಾಸಕರ ಮನೆಗೆ ಹೋಗಿ ಹೇಳಿಸಿಕೊಳ್ಳುತ್ತಿದ್ದೆವು. ಪ್ರೌಢಶಾಲಾ ಹಂತದಲ್ಲೂ ಶಿಕ್ಷಕರ ಮನೆಗೆ ಹೋಗಿ ಹೇಳಿಸಿಕೊಂಡ ಉದಾಹರಣೆಗಳಿವೆ. ಪಿಯುಸಿಯಲ್ಲಿ ನಿರಾತಂಕವಾಗಿ ಓದಿ ದ್ವಿತೀಯ ಪಿ.ಯು.ಸಿ.ಯನ್ನು ಉತ್ತಮ ಅಂಕಗಳೊAದಿಗೆ ಉತ್ತೀರ್ಣವಾದ ನಂತರ ಮುಂದೇನು ಎಂಬ ಚಿಂತೆ ಉಂಟಾಯಿತು. ಆಗ ಅಲ್ಲಿದ್ದ ಒಬ್ಬರು ಉಪನ್ಯಾಸಕರು ಐಚ್ಛಿಕ ಕನ್ನಡ, ಇತಿಹಾಸ ಹಾಗೂ ಸಮಾಜಶಾಸ್ತ್ರ ವಿಷಯಗಳನ್ನಾರಿಸಿಕೊಂಡು ಬಿಎ ಅಭ್ಯಾಸ ಮಾಡಲು ಸಲಹೆ ಕೊಟ್ಟರು ಅದರಂತೆ ಪದವಿ ಕಾಲೇಜಿಗೆ ಸೇರಿದೆ ಅಲ್ಲಿ ನನಗೆ ಮೊದಲು ಪರಿಚಯವಾದವರು ಕನ್ನಡದ ಪ್ರೊಫೆಸರ್. ಎಂಟನೆಯ ತರಗತಿಯಿಂದಲೇ ಕವನ ಬರೆಯುವ ಹವ್ಯಾಸ ಇದ್ದ ನನಗೆ ನನ್ನ ಬರವಣಿಗೆಗೆ ಮತ್ತಷ್ಟು ಪ್ರೋತ್ಸಾಹ ಅಲ್ಲಿ ನನಗೆ ದೊರೆಯಿತು. ಪದವಿ ತರಗತಿಯನ್ನೂ ಸಹ ಪೂರ್ಣಗೊಳಿಸಿದ ನಂತರ ಬಿಎಡ್‌ಗೆ ದಾಖಲಾತಿ ಪಡೆಯಲು ಪ್ರವೇಶ ಪರೀಕ್ಷೆ ಬರೆದೆ. ಮೊದಲ ಪ್ರಯತ್ನದಲ್ಲಿಯೇ ಆಯ್ಕೆಯೂ ಆಯಿತು ವಿವೇಕಾನಂದ ಬಿ.ಎಡ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಸೀಟು ದೊರೆಯಿತು. ಇಷ್ಟೇ ಕೋನಮಿತಿಯಲ್ಲಿ ಪುಸ್ತಕ ಹಿಡಿಯಬೇಕು ಓದುಗಾರಿಕೆ ಕೌಶಲದಲ್ಲಿ ಎಂಬುದು ನಿಯಮ. ನನಗೆ ಅದು ಸಾಧ್ಯವಾಗುವುದಿಲ್ಲ ಕಣ್ಣಿಗೆ ತುಂಬಾ ಸಮೀಪ ಹಿಡಿದುಕೊಂಡರಷ್ಟೇ ಕಾಣುವುದು. ಸ್ವಲ್ಪ ಅಂತರವಿದ್ದರೂ ಕಾಣುವುದಿಲ್ಲ. ಕನ್ನಡ ಮೆಥೇಡ್ ಬೋಧಿಸುವ ಶಿಕ್ಷಕರ ಬಳಿ ನನ್ನ ಅಳಲನ್ನು ತೋಡಿಕೊಂಡೆ. ನಿನಗೆ ಆಸಕ್ತಿ ಇದ್ಯಲ್ಲ ಅದು ಮೆಚ್ಚುವಂಥದ್ದೆ. ನಿನ್ನಂತಹ ಕೆಲವು ಪ್ರಕರಣಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಧೈರ್ಯವಾಗಿ ನಿನ್ನ ಅಧ್ಯಯನ ಮುಂದುವರೆಸು ಎಂದು ಹೇಳಿದರು. ನಾನು ಓದಿದ ಪ್ರೌಢಶಾಲೆಗೆ ನನಗೆ ಬೋಧನಾಭ್ಯಾಸಕ್ಕೆ ನಿಯೋಜಿಸಿದರು. ವಿಶಿಷ್ಟವಾದ ಕಲಿಕೋಪಕರಣಗಳನ್ನು ಬಳಸಿ ಪಾಠ ಮಾಡುವ ನನ್ನ ಕಾಯಕ ಹವ್ಯಾಸ ಅಲ್ಲಿಂದಲೇ ಪ್ರಾರಂಭವಾಯಿತು ಪರಿಸರ ಪಾಠಕ್ಕೆ ಸಂಬAಧಿಸಿದAತೆ ಬೇರೆ ಬೇರೆ ದಿನಪತ್ರಿಕೆಯಲ್ಲಿನ ಪರಿಸರಸಂಬAಧಿ ಭಾವಚಿತ್ರಗಳನ್ನು ಕತ್ತರಿಸಿ ಡ್ರಾಯಿಂಗ್ ಚಾರ್ಟ್ಗೆ ಅಂಟಿಸಿ ಮಾಹಿತಿಗಳನ್ನು ಕೆಳಗೆ ಬರೆದುಕೊಂಡು ಹೋಗಿದ್ದೆ. ಉಪನ್ಯಾಸಕರು ಅದನ್ನು ಮೆಚ್ಚಿಕೊಂಡೇ ಅವರೇ ಸನ್ನಿವೇಶಗಳನ್ನು ವಿವರಿಸಿದರು. ಬಿಎಡ್ ವ್ಯಾಸಂಗ ಮುಗಿದ ನಂತರ ಯಾವ ಖಾಸಗಿ ಶಾಲೆಯವರೂ ನನಗೆ ಬೋಧನೆಗೆ ಅವಕಾಶ ಕೊಟ್ಟಿಲ್ಲ. ಟ್ಯುಟೋರಿಯಲ್ ನಲ್ಲಿ ಕೆಲಸ ಮಾಡುತ್ತಿದ್ದೆ ಅಷ್ಟೆ. ನನ್ನ ಪರಿಸ್ಥಿತಿ ನೋಡಿ ಇವಳಿಂದೇನಾಗುತ್ತೆ ಎಂದು ಯಾವ ಖಾಸಗಿ ಶಾಲೆಯವರೂ ಸಹ ನನಗೆ ಬೋಧನೆಗೆ ಅವಕಾಶ ಕೊಡಲು ಸಿದ್ದವಿರಲಿಲ್ಲ. ಹೀಗಿರುವಾಗ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರೆ ಕೊಟ್ಟಿತು. ನಾನು ಸತತವಾಗಿ ಅಭ್ಯಾಸ ಮಾಡುತ್ತಿದ್ದೆ. ಮೊದಲ ಪ್ರಯತ್ನದಲ್ಲಿಯೇ ಆಯ್ಕೆಯೂ ಆದೆ. ನಾನು ಬರೆದ ಎಲ್ಲ ಪರೀಕ್ಷೆಗಳು ಸಾಮಾನ್ಯ ವಿದ್ಯಾರ್ಥಿಯಾಗಿಯೇ ಬರೆದದ್ದು.. ನನ್ನ ಶಿಕ್ಷಕರ ಒತ್ತಾಯಕ್ಕೆ ಮಣಿದು ಅಂಗವಿಕಲರ ಪ್ರಮಾಣಪತ್ರವನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಲಗತ್ತಿಸಿದ್ದೆ. ಆಯ್ಕೆಯಾದ ನಂತರ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿರುವ ಆದರ್ಶ ವಿದ್ಯಾಲಯ ಆರ್‌ಎಂಎಸ್‌ಎ ಶಾಲೆಗೆ ಕನ್ನಡ ಭಾಷಾ ಶಿಕ್ಷಕಿಯಾಗಿ ವರದಿ ಮಾಡಿಕೊಂಡೆ. ಪ್ರಾರಂಭದಲ್ಲಿ ನನಗೆ ಇಲ್ಲಿಯೂ ಕಷ್ಟವಾಯಿತು. ಇಲ್ಲೂ ಸಹ ಎಲ್ಲರ ಹೀಯಾಳಿಕೆ ಹೀಗಳಿಕೆಗೆ ಗುರಿಯಾಗಬೇಕಾಯಿತು. ವಿದ್ಯಾರ್ಥಿಗಳಾದಿಯಾಗಿ ಎಲ್ಲರ ಅಪಹಾಸ್ಯ ಬೈಗುಳಗಳಿಗೆ ಗುರಿಯಾಗಬೇಕಾಯಿತು. ನಾನು ಪಾಠ ಓದಲು ಪ್ರಾರಂಭಿಸಿದರೆ ಎಲ್ರೂ ನಗಾಡುವುದು ಕಿರುಚುವುದು ನಿತ್ಯದ ಚಟುವಟಿಕೆಯಾಗಿತ್ತು. ನನ್ನ ಕೆಲಸ ನನಗೆ ಎಷ್ಟೇ ಕಷ್ಟವಾದರೂ ನಾನೇ ಅದನ್ನು ಪೂರ್ಣಗೊಳಿಸಬೇಕಿತ್ತು. ಪಾಠ ಬೋಧನೆಯ ಜೊತೆಗೆ ತರಗತಿ ಶಿಕ್ಷಕಿ ಎನ್ನುವ ಜವಾಬ್ದಾರಿಯೂ ಹೆಗಲೇರಿತ್ತು. ಪಾಠ ಮಾಡುವುದೇ ದುಸ್ತರವಾಗಿದ್ದಾಗ ಹೆಚ್ಚುವರಿ ಕೆಲಸಗಳ ಭಾರ ಸಾಕಷ್ಟು ಒತ್ತಡ ಉಂಟು ಮಾಡುತ್ತಿತ್ತು. ಇಲ್ಲಿ ಕನ್ನಡ ಕಲಿಸುವುದು ಸವಾಲಿನ ಕೆಲಸ. ಕಾರಣ ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ತೆಲುಗು, ತಮಿಳು ಮಾತೃಭಾಷಿಕರು. ಆಂಗ್ಲ ಮಾಧ್ಯಮ ಶಾಲೆ. ಪಾಠ ಓದುವಾಗ ವಿದ್ಯಾರ್ಥಿಗಳ ನಗು. ಇದರಿಂದ ತಪ್ಪಿಸಿಕೊಳ್ಳಲು ಪಾಠಗಳೆಲ್ಲ ಕಂಠಪಾಠ ಮಾಡಿಕೊಂಡೆ. ಎಲ್ಲಿ ನಿಲಿಸಿದರೆ ಪುಟ ಮುಕ್ತಾಯವಾಗುತ್ತದೆ ಎಂಬುದನ್ನೂ ಸಹ ನೆನಪಿಟ್ಟುಕೊಳ್ಳಬೇಕಿತ್ತು. ಈ ಮಾರ್ಗ ಕಂಡುಕೊAಡ ಮೇಲೆ ವಿದ್ಯಾರ್ಥಿಗಳ ಅಪಹಾಸ್ಯ ನಿಂತು ಹೋಯಿತು. ನಂತರದಲ್ಲಿ ವ್ಯಾಕರಣ ಬೋಧನೆಗೆ ಕಪ್ಪು ಹಲಗೆಯ ಮೇಲೆ ಬರೆಯಲೇಬೇಕಿತ್ತು ಹಾಗಾಗಿ ನಾನು ಪ್ರತಿಯೊಂದು ವ್ಯಾಕರಣಾಂಶಗಳಿಗೂ ಮಾದರಿಗಳನ್ನು ತಯಾರಿಸಿಕೊಂಡೆ ಅದರ ಮೂಲಕ ಬೋಧನೆ ಮಾಡಲು ಪ್ರಾರಂಭಿಸಿದೆ. ಬೋಧನಾ ವಿಧಾನ ಉತ್ತಮ ಫಲಿತಾಂಶ ಉಂಟು ಮಾಡಿದರೆ ಅದನ್ನು ಮುಂದುವರೆಸುತ್ತಿದ್ದೆ ಇಲ್ಲವಾದಲ್ಲಿ ಬೇರೆ ವಿಧಾನ ಪ್ರಾಯೋಗಿಕವಾಗಿ ಪ್ರಾರಂಭಿಸುತ್ತಿದ್ದೆ. ಹೇಗೆ ನಾನು ಸಂದರ್ಶನ ಮಾದರಿ ವಿಧಾನ, ನಾಟಕ ಅಭಿನಯ ವಿಧಾನ, ಮಾದರಿಯೊಂದಿಗೆ ಬೋಧನೆ, ಉಪನ್ಯಾಸ ವಿಧಾನ, ಚರ್ಚಾ ವಿಧಾನ ಹೀಗೆ ಬೇರೆ ಬೇರೆ ವಿಧಾನಗಳ ಮೂಲಕ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಹೆಚ್ಚುವಂತೆ ಮಾಡುತ್ತೇನೆ. ಕಳೆದ ನಾಲ್ಕೂ ಎಸ್‌ಎಸ್‌ಎಲ್‌ಸಿ ಬ್ಯಾಚ್‌ಗಳಲ್ಲಿ ಎರಡು ಬ್ಯಾಚ್ ಕನ್ನಡದಲ್ಲಿ ಶೇಕಡ ೧೦೦ ಫಲಿತಾಂಶ ಬಂದಿರುತ್ತದೆ. ಉಳಿದೆರಡು ಬ್ಯಾಚ್ ೯೮.೫. ಶೇ ಫಲಿತಾಂಶ ಬಂದಿರುತ್ತದೆ. ಕಳೆದ ಬಾರಿ ೧೦೦ಕ್ಕೆ ೧೦೦ ಮೂರು ವಿದ್ಯಾರ್ಥಿನಿಯರು ಪಡೆದಿರುತ್ತಾರೆ. ಅವರಿಗೆ ನನ್ನ ಸ್ವಂತ ಖಾತೆಯಿಂದ ೧೦೦೦ ರೂ. ನಗದು ಹಾಗು ಪದಕವನ್ನಿತ್ತು ಮುಖ್ಯಶಿಕ್ಷಕರ ಮೂಲಕ ಗೌರವಿಸಲಾಯಿತು. ಮಕ್ಕಳಿಗೆ ಬೇರೆ ಬೇರೆ ಪುಸ್ತಕಗಳನ್ನು ಓದಿಸಿ ಬರೆಸುವ ಆಲೋಚನೆ ಇದೆ.. ಇದರಿಂದ ಓದುವ ಹವ್ಯಾಸ ಬೆಳೆಸಬಹುದು.

    ನಮ್ಮ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹಾಕಲು ವೇದಿಕೆ ಕಲ್ಪಿಸುವ ಉದ್ದೇಶದಿಂದ ಮುಂದಿನ ತಿಂಗಳಿAದ ಗೋಡೆ ಪತ್ರಿಕೆ ಹೊರ ತರುವ ಉದ್ದೇಶವಿತ್ತು. ಅವುಗಳನ್ನು ಸಾಕಾರಗೊಳಿಸಬೇಕೆನ್ನುವಷ್ಟರಲ್ಲಿ ನನ್ನ ತವರು ಜಿಲ್ಲೆಯಾದ ಹಾಸನ ಜಿಲ್ಲೆಗೆ ವರ್ಗವಾಯಿತು. ೧೯ ಅಕ್ಟೋಬರ್ ೨೦೧೯ರಲ್ಲಿ ನಾನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣ ಬೆಳಗೊಳ ಹೋಬಳಿಗೆ ಸೇರಿದ ಜುಟ್ಟನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ವರದಿ ಮಾಡಿಕೊಂಡೆ. ಇನ್ನೇನು ಮಕ್ಕಳೊಂದಿಗೆ ಬೆರೆಯಬೇಕು ಹೊಂದಿಕೊಳ್ಳಬೇಕು ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕೆನ್ನುವ ಯೋಜನೆಗಳನ್ನು ರೂಪಿಸುವಾಗಲೇ ಕೊರೋನ ಎಂಬ ಪೆಡಂಭೂತ ಅಡ್ಡಿಯಾಯಿತು. ದೇಶದಾದ್ಯಂತ ಲಾಕ್ ಡೌನ್. ಆ ಎರಡು ವರ್ಷಗಳು ಏನೂ ಮಾಡಲಾಗದ ಅಸಹಾಯಕತೆ. ಆನ್ ಲೈನ್ ತರಗತಿಗಳನ್ನು ಮಾಡೋಣ ಎಂದರೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸ್ಮಾರ್ಟ್ ಫೋನ್ ಹೊಂದಿದ್ದರು. ಮೊದಲೇ ಅಲ್ಲಿನ ಶಾಲೆಗೆ ಪ್ರಯಾಣಿಸುವುದೇ ನನಗೆ ಸವಾಲಿನ ಕೆಲಸ. ಅರಸೀಕೆರೆಯಿಂದ ಚನ್ನರಾಯಪಟ್ಟಣ, ಚನ್ನರಾಯಪಟ್ಟಣದಿಂದ ಹಿರೀಸಾವೆ, ಹಿರೀಸಾವೆಯಿಂದ ಜುಟ್ಟನಹಳ್ಳಿ ಹೀಗೆ ಮೂರು ವಾಹನಗಳನ್ನು ಬಳಸಿ ಅರಸೀಕೆರೆಯಿಂದ ನೂರು ಕಿ.ಮೀ ದೂರದಲಿರುವ ಶಾಲೆಗೆ ಹೋಗಿ ಅಧ್ಯಯನ ಅಧ್ಯಾಪನದಲಿ ತೊಡಗಿಸಿಕೊಳ್ಳಬೇಕಿತ್ತು. ನಾವು ಶಾಲೆ ತಲುಪಿ ಅಲ್ಲಿಂದ ಮಕ್ಕಳಿರುವ ಹಳ್ಳಿಗಳಿಗೇ ಹೋಗಿ ಬೋಧನೆ ಮಾಡತೊಡಗಿದೆವು. ಅಲ್ಲಿ ಲಾಕ್ ಡೌನಿದ್ದದ್ರಿಂದ ವಾಹನ ವ್ಯವಸ್ಥೆ ಇರಲಿಲ್ಲ. ದಿನಕೆ ಐನೂರರಿಂದ ಆರು ನೂರು ರೂಪಾಯಿಗಳು ಆಟೊ ಬಾಡಿಗೆ ಕೊಡಬೇಕಿತ್ತು. ಈಗಲೂ ಹಾಗೆಯೇ. ಬೆಳಗಿನ ಜಾವ ಆರು ಗಂಟೆ ಬಸ್ಸಿಗೆ ಹೊರಟರೆ ಮನೆ ತಲುಪುವುದು ಸಂಜೆ ಏಳೂವರೆ ಎಂಟು ಗಂಟೆಯೂ ಆಗಿ ಬಿಡುತ್ತದೆ. ಶಾಲೆಯಲ್ಲಿ ಬಿಡುವಿಲ್ಲದ ತರಗತಿಗಳು. ಹಾಗಾಗಿ ಶಾಲೆಯ ಇತರೆ ಕೆಲಸಗಳನ್ನೆಲ್ಲ ಮನೆಗೇ ಹೊತ್ತು ತಂದು ಮಾಡಿ ಕೊಳ್ಳುವೆ. ಶಾಲೆಯಲ್ಲಿ ನನಗೆ ಸಂಪೂರ್ಣ ಸಹಕಾರವಿದೆ ಆದರೂ ಪ್ರಯಾಣವೇ ನನ್ನ ಪಾಲಿಗೆ ಸವಾಲಿನ ಸಂಗತಿ. ಪ್ರತಿ ದಿನ ಇನ್ನೂರು ಕಿ.ಮೀ ಪ್ರಯಾಣದ ಕಾರಣ ಆರು ಗಂಟೆಗಳು ಪ್ರಯಾಣದಲ್ಲಿಯೇ ಕಳೆದು ಹೋಗುತ್ತದೆ. ಶಾಲೆಯಿಂದ ಅರಸೀಕೆರೆಗೆ ಬಂದ ನಂತರ ಸಂಗೀತ ಹಾಗೂ ವೀಣೆ ತರಗತಿಗೆ ಹೋಗಿ ಮನೆಗೆ ಬರುವುದು ರಾತ್ರಿ ಎಂಟು ಗಂಟೆ. ಮನೆಗೆ ಬಂದ ನಂತರ ಶುಭ್ರವಾಗಿ ಊಟ ಮುಗಿಸಿ ಸಂಗೀತ ಅಭ್ಯಾಸ, ವೀಣೆ ಅಭ್ಯಾಸ, ಮಾರನೆಯ ದಿನ ತೆಗೆದುಕೊಳ್ಳುವ ತರಗತಿಗಳ ಸಿದ್ದತೆ , ಕವನ, ಲೇಖನ ಬರೆವಣಿಗೆ ನಂತರ ಸರಿಯಾಗಿ ಹನ್ನೆರಡು ಗಂಟೆಗೆ ಡೈರಿ ಬರೆದು ಮಲಗಿದರೆ ಪುನಃ ಏಳುವುದು ಬೆಳಗಿನ ಜಾವ ಮೂರು ಗಂಟೆಗೆ. ಹೀಗಿತ್ತು ನನ್ನ ದಿನಚರಿ. ಆದರೆ ಇತ್ತೀಚೆಗೆ ನನಗೆ ಚನ್ನರಾಯಪಟ್ಟಣ ತಾಲೂಕಿನ ಸಾತೇನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಯಾಗಿದೆ. ಕೇವಲ ಮೂವ್ವತ್ತೆರಡು ಕಿ.ಮೀ. ದೂರ ಇರುವ ಶಾಲೆ. ಒಟ್ಟು ಅರವತ್ನಾಲ್ಕು ಕಿ.ಮೀ. ಪ್ರಯಾಣ. ಒಂದೂವರೆ ಗಂಟೆಯಷ್ಟೆ ಪ್ರಯಾಣದ ಅವಧಿ. ನನ್ನ ಸೃಜನಶೀಲ ಕೆಲಸಗಳಿಗೊಂದಷ್ಟು ಸಮಯ ದೊರಕಿತೆಂದೇ ಹೇಳಬಹುದು. ಹೀಗೆ ಬೆಳಗಿನ ಜಾವ ಮೂರು ಗಂಟೆಗೆ ಎದ್ದರೆ ಮಲಗುವುದು ರಾತ್ರಿ ಹನ್ನೆರಡು ಗಂಟೆಗೆ. ನನಗೆ ದಿನದ ಇಪ್ಪತ್ನಾಲ್ಕು ಗಂಟೆಗಳೂ ಸಹ ಸಾಲದಾಗಿತ್ತು. ಒತ್ತಡದ ನಡುವೆ ಒಂದಿಷ್ಟು ಉಲ್ಲಾಸ ಉತ್ಸಾಹ ತಂದು ಕೊಡುವುದು ನನಗೆ ಸಂಗೀತ ಹಾಗೂ ಸಾಹಿತ್ಯ. ಹಾಗಾಗಿ ಸಪ್ತಸ್ವರ ನಾದ ಮಂದಿರದ ನನ್ನ ಪೂಜ್ಯ ಗುರುಗಳಾದ ವಿದೂಷಿ ಶ್ರೀ ಮತಿ ವೀಣಾ ಮೇಡಮ್ ಬಳಿ ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಹಾಗೂ ವೀಣೆಯನ್ನು ಅಭ್ಯಸಿಸುತಿರುವೆ. ಸಾಹಿತ್ಯ ಸೃಷ್ಟಿಯೂ ಜೊತೆ ಜೊತೆಗೆ ಸಾಗುತ್ತಲಿದೆ. ಹೀಗೆ ವೃತ್ತಿ ಪ್ರವೃತ್ತಿ ಎಂದು ಹಲವು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರೂ ನನಗೆ ಅತಿ ಹೆಚ್ಚು ಖುಷಿ ಕೊಡುವ ಕ್ಷಣಗಳೆಂದರೆ ಅದು ನನ್ನ ವಿದ್ಯಾರ್ಥಿಗಳೊಂದಿಗೆ ಕಳೆಯುವ ಕ್ಷಣಗಳು. ಕಲಿತು ಕಲಿಸುವ ತತ್ವವನ್ನು ನನ್ನೊಳಗೆ ಅಳವಡಿಸಿಕೊಂಡಿರುವುದರಿAದ ನಿರಂತರ ಕಲಿಕಾರ್ಥಿಯಾಗಿದ್ದೇನೆ. 

    ವೈದ್ಯೆಯಾಗಬೇಕೆಂಬ ಕನಸು ನನಸಾಗಲಿಲ್ಲವಾದರೂ ಇಂದು ನನ್ನ ವಿದ್ಯಾರ್ಥಿಗಳು ಸಾಕಷ್ಟು ಜನ ವೈದ್ಯಕೀಯ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡು ನನ್ನ ಸಂಪರ್ಕದಲ್ಲಿರುವುದು ಹೆಮ್ಮೆಯ ಸಂಗತಿ.

    “ಹರ ಕೊಲ್ಲಲ್ ಗುರು ಕಾಯ್ವರು” ಎಂಬ ನಾಣ್ಣುಡಿಯಂತೆ ನನ್ನ ಪಾಲಿಗೆ ನನ್ನನ್ನು ಅನವರತ ಪ್ರೋತ್ಸಾಹಿಸುವ ಪ್ರೇರೇಪಿಸುವ ಪ್ರತಿಯೊಬ್ಬರೂ ಕೂಡ ಗುರು ಸಮಾನರೇ ಇವು ಕೇವಲ ವಿದ್ಯಾರ್ಥಿ ಜೀವನ ಹಾಗೂ ಶಿಕ್ಷಕಿಯಾಗಿ ನನ್ನ ಅನುಭವ. 

    ಬೋಧನೆಗೆ ಯಾವ ಖಾಸಗೀ ಶಾಲೆಯೂ ಅವಕಾಶ ಕೊಡದಿದ್ದ ಸಂದರ್ಭದಲ್ಲಿ ಸರ್ಕಾರ ನನಗೆ ಇಂಥ ಸುವರ್ಣಾವಕಾಶ ಕೊಟ್ಟಿದೆ. ಶಿಕ್ಷಕಿ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಇದೆ. ಅಮ್ಮನ ಕನಸು ಸಾಕಾರಗೊಳಿಸಿದ ಖುಷಿ ಇದೆ ನನಗೆ.

    ಧನ್ಯವಾದಗಳು ಮಾನ್ಯರೇ, ಗೌರವಾನ್ವಿತರೇ, ಬಂಧುಗಳೇ.

    ಕು.ಹರ್ಷಿಯಾ ಭಾನು

    ಕನ್ನಡ ಭಾಷಾ ಶಿಕ್ಷಕಿ

    ಸರ್ಕಾರಿ ಪ್ರೌಢಶಾಲೆ

    ಸಾತೇನಹಳ್ಳಿ

    ದಂಡಿಗನಹಳ್ಳಿ ಹೋಬಳಿ

    ಚನ್ನರಾಯಪಟ್ಟಣ ತಾಲೂಕು

    ಹಾಸನ ಜಿಲ್ಲೆಪಿ£: 573111