Category: ಈ ಸಮಾಜ

  • ಯೂಟ್ಯೂಬ್ ನೋಡಿ ತೂಕ ಇಳಿಸುವ ಮದ್ದು ಸೇವಿಸಿ, ಕಾಲೇಜು ವಿದ್ಯಾರ್ಥಿನಿ ಸಾವು:

    ಯೂಟ್ಯೂಬ್ ನೋಡಿ ತೂಕ ಇಳಿಸುವ ಮದ್ದು ಸೇವಿಸಿ, ಕಾಲೇಜು ವಿದ್ಯಾರ್ಥಿನಿ ಸಾವು:


    ​ಇಂದಿನ ಯುವ ಜನಾಂಗದಲ್ಲಿ ಸೌಂದರ್ಯದ ಪ್ರಜ್ಞೆ ಹೆಚ್ಚಾಗುತ್ತಿದ್ದು, ಅತಿ ವೇಗವಾಗಿ ಶರೀರದ ತೂಕ ಇಳಿಸಿಕೊಳ್ಳಬೇಕು ಎನ್ನುವ ಹಂಬಲಕ್ಕೆ ಬಿದ್ದು ಅಪಾಯಗಳನ್ನು ತಂದುಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ತಮಿಳುನಾಡಿನ ಮಧುರೈನಲ್ಲಿ 19 ವರ್ಷದ ಕಾಲೇಜು ವಿದ್ಯಾರ್ಥಿನಿ ಕಲೈಯರಸಿ ಎಂಬ ಯುವತಿ ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ತೂಕ ಇಳಿಸುವ ಮದ್ದು ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಕಲೈಯರಸಿ ಯೂಟ್ಯೂಬ್‌ನಲ್ಲಿ ‘ವೆಂಗಾರಂ’ ಅಥವಾ ಬೊರಾಕ್ಸ್ ಎಂಬ ಪುಡಿಯನ್ನು ಬಳಸುವುದರಿಂದ ಬೇಗನೆ ತೂಕ ಇಳಿಸಬಹುದು ಎಂಬ ಮಾಹಿತಿಯನ್ನು ನಂಬಿ, ಮದ್ದಿನ ಅಂಗಡಿಯಿಂದ ಅದನ್ನು ಖರೀದಿಸಿ ಸೇವಿಸಿದ್ದರು. ಮದ್ದು ಸೇವಿಸಿದ ಕೆಲವೇ ಕ್ಷಣಗಳಲ್ಲಿ ತೀವ್ರವಾದ ವಾಂತಿ ಮತ್ತು ಭೇದಿಯಿಂದ ಬಳಲಿದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

    ​ಈ ದುರಂತ ಘಟನೆಯು ಇಂದಿನ ಯುವತಿಯರಿಗೆ ಒಂದು ದೊಡ್ಡ ಎಚ್ಚರಿಕೆಯಾಗಿದೆ. ತೂಕ ಇಳಿಸಿಕೊಳ್ಳುವ ಆಸೆ ಇರುವವರು ಯಾವುದೇ ಕಾರಣಕ್ಕೂ ಸೋಷಿಯಲ್ ಮೀಡಿಯಾದಲ್ಲಿ ಸಿಗುವ ಮಾಹಿತಿಯನ್ನು ಕುರುಡಾಗಿ ನಂಬಬಾರದು. ಶರೀರಕ್ಕೆ ಸಂಬಂಧಿಸಿದ ಯಾವುದೇ ಪ್ರಯೋಗಗಳನ್ನು ಮಾಡುವ ಮೊದಲು ನುರಿತ ವೈದ್ಯರ ಅಥವಾ ಪ್ರಮಾಣೀಕೃತ ತಜ್ಞರ ಸಲಹೆಯನ್ನು ಪಡೆದೇ ಮುಂದಡಿ ಇಡಬೇಕು. ವೈಜ್ಞಾನಿಕ ಆಧಾರವಿಲ್ಲದ ಇಂತಹ ಮದ್ದುಗಳು ಆಂತರಿಕ ಅಂಗಾಂಗಗಳ ಮೇಲೆ ತೀವ್ರ ಪರಿಣಾಮ ಬೀರಿ ಜೀವಕ್ಕೇ ಕುತ್ತು ತರುತ್ತವೆ. ಸೌಂದರ್ಯಕ್ಕಿಂತ ಜೀವ ಮುಖ್ಯ ಎಂಬ ಅರಿವು ಪ್ರತಿಯೊಬ್ಬ ಯುವತಿಯಲ್ಲಿ ಇರಬೇಕಾದದ್ದು ಇಂದಿನ ತುರ್ತು ಅಗತ್ಯವಾಗಿದೆ.

    ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ಇಡುವುದು ಅವಶ್ಯಕವಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಇಂಟರ್ನೆಟ್‌ನಲ್ಲಿ ಯಾವ ರೀತಿಯ ವಿಷಯಗಳನ್ನು ಹುಡುಕುತ್ತಿದ್ದಾರೆ ಮತ್ತು ಆನ್‌ಲೈನ್ ಮೂಲಕ ಅಥವಾ ಅಂಗಡಿಗಳಿಂದ ಯಾವ ರೀತಿಯ ಔಷಧಿ ಹಾಗೂ ಪುಡಿಗಳನ್ನು ತರಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಪೋಷಕರು ಗಮನಿಸಬೇಕು. ಮಕ್ಕಳೊಂದಿಗೆ ಮುಕ್ತವಾಗಿ ಸಂವಹನ ನಡೆಸಿ, ಅವರಿಗೆ ಇಂತಹ ಅಪಾಯಕಾರಿ ಸೋಷಿಯಲ್ ಮೀಡಿಯಾ ಪ್ರವೃತ್ತಿಗಳ ಬಗ್ಗೆ ತಿಳುವಳಿಕೆ ನೀಡಬೇಕು. ಪೋಷಕರ ಜಾಗೃತಿ ಮತ್ತು ತಜ್ಞರ ಮಾರ್ಗದರ್ಶನ ಮಾತ್ರ ಇಂತಹ ಅನಗತ್ಯ ಸಾವುಗಳನ್ನು ತಡೆಯಲು ಸಾಧ್ಯ.

  • ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ 
ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    ಮಹಿಳೆಯರೇ ನಡೆಸುತ್ತಿರುವ ರಾಜ್ಯದ ಏಕೈಕ ಮಹಿಳಾ ಮಾಸಿಕ ಅನುಪಮ ಮಾಸಿಕಕ್ಕೆ 25 ವರ್ಷಗಳು ತುಂಬಿದೆ. ಈ ಹಿನ್ನೆಲೆಯಲ್ಲಿ 25 ವರ್ಷಗಳ ಯಶಸ್ಸಿನ ಹಿನ್ನೋಟವಿರುವ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಗುರುವಾರ ಬಿಡುಗಡೆ ಮಾಡಿದರು.

    ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಪತ್ರಿಕೋದ್ಯಮದಲ್ಲಿ ಮುಸ್ಲಿಂ ಮಹಿಳೆಯರು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಈ ನಡುವೆ ಕೂಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಂ ಸಮುದಾಯದ ಮಹಿಳೆಯರೇ ನಡೆಸುತ್ತಿರುವ ಅನುಪಮ ಮಹಿಳಾ ಮಾಸಿಕವು 25 ವರ್ಷಗಳನ್ನು ಪೂರೈಸಿರುವುದು ಶ್ಲಾಘನೀಯ”ಎಂದು ಅಭಿನಂದನೆ ಸಲ್ಲಿಸಿದರು.

    ಬಳಿಕ ಮಾತನಾಡಿದ ಅನುಪಮ ಸಂಪಾದಕಿ ಶಹನಾಝ್ ಎಂ, “ರಾಜ್ಯದಲ್ಲಿ ಮಹಿಳೆಯರಿಗೆ ಗ್ಯಾರಂಟಿಗಳನ್ನು ಘೋಷಿಸಿ, ಅದನ್ನು ಅನುಷ್ಠಾನಕ್ಕೆ ತಂದ ನಂತರ ಮಹಿಳೆಯರ ಬದುಕಿನಲ್ಲಿ ಹಲವಾರು ಬದಲಾವಣೆ ಆಗಲು ನೆರವಾಗಿದೆ. ಮಹಿಳೆಯರ ಅಭಿವೃದ್ಧಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಅನುಪಮ ಬಳಗ ಹಾಗೂ ಎಲ್ಲ ಮಹಿಳೆಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಬಿಎಂಟಿಸಿ ನಿಗಮದ ಉಪಾಧ್ಯಕ್ಷರಾದ ನಿಕೇತ್ ರಾಜ್ ಮೌರ್ಯ, ಅನುಪಮ ಮಹಿಳಾ ಮಾಸಿಕದ ಉಪಸಂಪಾದಕಿಯರಾದ ಸಮೀನಾ ಉಪ್ಪಿನಂಗಡಿ, ಸಾಜಿದಾ ಮೂಮಿನ್, ಕುಲ್ಸುಮ್ ಅಬೂಬಕ್ಕರ್, ಎಸ್.ಎಂ. ಮುತ್ತಲಿಬ್, ಫೈಝಲ್ ಇಸ್ಮಾಯೀಲ್, ಸಲೀಂ ಬೋಳಂಗಡಿ ಉಪಸ್ಥಿತರಿದ್ದರು.

    ಬಳಿಕ ಅನುಪಮ ಬಳಗವು ಈ ಸ್ಮರಣ ಸಂಚಿಕೆಯನ್ನು ಕರ್ನಾಟಕ ಸರಕಾರದಲ್ಲಿ ವಿವಿಧ ಸ್ಥಾನಗಳನ್ನುಅಲಂಕರಿಸಿರುವ ಹಾಗೂ ಸರಕಾರದ ಅಧಿಕಾರಿಗಳಾಗಿರುವ ಹೊಣೆಗಾರರನ್ನು ಭೇಟಿ ಮಾಡಿ ನೀಡಿತು.

    ಸನ್ಮಾನ್ಯ ನಿಕೇತ್ ರಾಜ್ ಮೌರ್ಯ [ಉಪಾಧ್ಯಕ್ಷರು, (BMTC) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ (KPYCC) ರಾಜ್ಯ ಪ್ರಧಾನ ಕಾರ್ಯದರ್ಶಿ]

    ಸನ್ಮಾನ್ಯ ರಿಜ್ವಾನ್ ಅರ್ಷದ್ [ಸದಸ್ಯರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ಹಾಗೂ MLA ಶಿವಾಜಿ ನಗರ, ಬೆಂಗಳೂರು]

    ಸನ್ಮಾನ್ಯ ನಸೀರ್ ಅಹ್ಮದ್ [ವಿಧಾನ ಪರಿಷತ್ ಸದಸ್ಯ (MLC) ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ]

    ಸನ್ಮಾನ್ಯ ಅಬ್ದುಲ್ ಅಹದ್ [DIG, ಪೊಲೀಸ್ ಉಪ ಮಹಾನಿರೀಕ್ಷಕರು, ಕರ್ನಾಟಕ ಸರಕಾರ]

  • ನಿಮಗಿನ್ನೂ ಗೃಹಲಕ್ಷ್ಮಿಯ 2000 ರೂಪಾಯಿ ಬರಲು ಬಾಕಿಯಿದೆಯೇ? ಇಲ್ಲಿದೆ ಕೆಲವು ಮಾಹಿತಿಗಳು..!

    ನಿಮಗಿನ್ನೂ ಗೃಹಲಕ್ಷ್ಮಿಯ 2000 ರೂಪಾಯಿ ಬರಲು ಬಾಕಿಯಿದೆಯೇ? ಇಲ್ಲಿದೆ ಕೆಲವು ಮಾಹಿತಿಗಳು..!

    1. 24ನೇ ಕಂತಿನ ಹಣ ಬಿಡುಗಡೆ:

    ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ (₹2,000) ಹಣ ಬಿಡುಗಡೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಾಹಿತಿಯಂತೆ, ಈ ಕಂತಿನ ಹಣವು ಜನವರಿ ಮೊದಲ ವಾರದಿಂದಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (DBT) ಮೂಲಕ ಜಮೆಯಾಗಲು ಪ್ರಾರಂಭವಾಗಿದೆ.

    2. 181 ಹೊಸ ಸಹಾಯವಾಣಿ (Helpline) ಆರಂಭ

    ಹಣ ಜಮೆಯಾಗದ ಬಗ್ಗೆ ಅಥವಾ ಯೋಜನೆಯಲ್ಲಿನ ತಾಂತ್ರಿಕ ಸಮಸ್ಯೆಗಳ ಬಗ್ಗೆ ದೂರು ನೀಡಲು ಸರ್ಕಾರವು ಹೊಸದಾಗಿ ‘181’ ಸಹಾಯವಾಣಿಯನ್ನು ಆರಂಭಿಸಿದೆ.

    ಮಹಿಳೆಯರು ಇನ್ಮುಂದೆ ಹಣದ ವಿಚಾರವಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ.

    ಈ ಸಂಖ್ಯೆಗೆ ಕರೆ ಮಾಡುವ ಮೂಲಕ ನಿಮ್ಮ ಅರ್ಜಿಯ ಸ್ಥಿತಿ ಮತ್ತು ಹಣ ಬಾರದಿರಲು ಕಾರಣವನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

    3. ಬಾಕಿ ಇರುವ ಫೆಬ್ರವರಿ ಮತ್ತು ಮಾರ್ಚ್ ಕಂತುಗಳ ಚರ್ಚೆ

    ಕಳೆದ ವರ್ಷದ (2025) ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳು ಇನ್ನೂ ಕೆಲವು ಫಲಾನುಭವಿಗಳಿಗೆ ತಲುಪಿಲ್ಲ ಎಂಬ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗಳು ನಡೆದಿವೆ. ಈ ಬಾಕಿ ಹಣದ (ಸುಮಾರು ₹5,000 ಕೋಟಿ) ಬಗ್ಗೆ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಲಿದೆ ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

    ಹಣ ಬಂದಿದೆಯೇ ಎಂದು ಪರೀಕ್ಷಿಸುವುದು ಹೇಗೆ?

    ನಿಮ್ಮ ಖಾತೆಗೆ ಹಣ ಜಮೆಯಾಗಿದೆಯೇ ಎಂದು ತಿಳಿಯಲು ಈ ಕ್ರಮಗಳನ್ನು ಅನುಸರಿಸಿ:

    DBT Karnataka App:

    ಪ್ಲೇ ಸ್ಟೋರ್‌ನಿಂದ ಈ ಆ್ಯಪ್ ಡೌನ್‌ಲೋಡ್ ಮಾಡಿ ನಿಮ್ಮ ಆಧಾರ್ ಮೂಲಕ ಲಾಗಿನ್ ಆಗಿ ‘Payment Status’ ನೋಡಿ.

    181 ಸಹಾಯವಾಣಿ: ನೇರವಾಗಿ ಕರೆ ಮಾಡಿ ಮಾಹಿತಿ ಪಡೆಯಿರಿ.

    ಬ್ಯಾಂಕ್ ಖಾತೆ:

    ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ (NPCI Mapping) ಆಗಿದೆಯೇ ಎಂದು ಒಮ್ಮೆ ಪರಿಶೀಲಿಸಿಕೊಳ್ಳಿ.

    4. ಯಶಸ್ಸಿನ ಕಥೆ:

    ಹನುಮಮ್ಮನವರ ಉದಾಹರಣೆ

    ರಾಯಚೂರು ಜಿಲ್ಲೆಯ ಸಿಂಧನೂರಿನ ಹನುಮಮ್ಮ ಎಂಬ ಫಲಾನುಭವಿ ಗೃಹಲಕ್ಷ್ಮಿ ಯೋಜನೆಯ ಉಳಿತಾಯದ ಹಣದಿಂದ ಫ್ರಿಡ್ಜ್ (Refrigerator) ಖರೀದಿಸಿರುವುದು ರಾಜ್ಯಾದ್ಯಂತ ಸುದ್ದಿಯಾಗಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ಹೇಗೆ ಸಹಾಯ ಮಾಡುತ್ತಿವೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ಸರ್ಕಾರಿ ಕಾರ್ಯಕ್ರಮಗಳಲ್ಲಿ (“ಗ್ಯಾರಂಟಿ ಉತ್ಸವ”) ಉಲ್ಲೇಖಿಸಲಾಗುತ್ತಿದೆ.

  • ನಿಮಗೆ ಗೊತ್ತೇ? ಮಹಿಳೆಯರ ರಕ್ಷಣೆಗಾಗಿ ತಯಾರಾಗಿದೆ ‘ಅಕ್ಕಾ ಪಡೆ’..!

    ನಿಮಗೆ ಗೊತ್ತೇ? ಮಹಿಳೆಯರ ರಕ್ಷಣೆಗಾಗಿ ತಯಾರಾಗಿದೆ ‘ಅಕ್ಕಾ ಪಡೆ’..!

    ಕರ್ನಾಟಕ ಸರ್ಕಾರವು ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಜಾರಿಗೆ ತಂದಿರುವ ಅತ್ಯಂತ ಮಹತ್ವದ ಯೋಜನೆಯೇ ಈ ‘ಅಕ್ಕ ಪಡೆ’ (Akka Pade). ಇದನ್ನು ಇತ್ತೀಚೆಗೆ (ಜನವರಿ 2026ರ ಹೊತ್ತಿಗೆ) ರಾಜ್ಯದಾದ್ಯಂತ ವಿಸ್ತರಿಸಲಾಗುತ್ತಿದೆ.

    ಇದರ ಸಂಪೂರ್ಣ ವಿವರಗಳು ಇಲ್ಲಿವೆ:

    1. ಅಕ್ಕ ಪಡೆ ಎಂದರೇನು?
    ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ರೂಪಿಸಲಾದ ಒಂದು ವಿಶೇಷ ಗಸ್ತು ಪಡೆ (Patrol Force). ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣವೇ ಸ್ಪಂದಿಸುವುದು ಈ ಪಡೆಯ ಮುಖ್ಯ ಕೆಲಸ.

    2. ಇದು ಹೇಗೆ ಕೆಲಸ ಮಾಡುತ್ತದೆ?
    ಗಸ್ತು ವಾಹನಗಳು: ಪೊಲೀಸ್ ಇಲಾಖೆಯ ‘ಹೊಯ್ಸಳ’ ವಾಹನಗಳಂತೆಯೇ ಅಕ್ಕ ಪಡೆಗೆ ಪ್ರತ್ಯೇಕ ವಾಹನಗಳನ್ನು ನೀಡಲಾಗಿರುತ್ತದೆ.

    ಕಾರ್ಯಾಚರಣೆ ಸಮಯ:

    ಸಾಮಾನ್ಯವಾಗಿ ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಅಥವಾ ಅಗತ್ಯವಿದ್ದಲ್ಲಿ ಶಿಫ್ಟ್ ಮಾದರಿಯಲ್ಲಿ ಇದು ಕೆಲಸ ಮಾಡುತ್ತದೆ.ತಂಡದ ರಚನೆ: ಪ್ರತಿ ತಂಡದಲ್ಲಿ ಮಹಿಳಾ ಪೊಲೀಸ್ ಪೇದೆಗಳು ಮತ್ತು ಎನ್‌ಸಿಸಿ (NCC) ‘ಸಿ’ ಸರ್ಟಿಫಿಕೇಟ್ ಹೊಂದಿರುವ ಮಹಿಳಾ ಕೆಡೆಟ್‌ಗಳು ಅಥವಾ ಹೋಮ್ ಗಾರ್ಡ್‌ಗಳು ಇರುತ್ತಾರೆ.

    3. ಮುಖ್ಯ ಉದ್ದೇಶಗಳು:

    ಸಾರ್ವಜನಿಕ ಸುರಕ್ಷತೆ: ಶಾಲಾ-ಕಾಲೇಜುಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಮಾಲ್‌ಗಳು ಮತ್ತು ಪಾರ್ಕ್‌ಗಳಂತಹ ಜನನಿಬಿಡ ಪ್ರದೇಶಗಳಲ್ಲಿ ಈ ಪಡೆ ಗಸ್ತು ತಿರುಗುತ್ತದೆ.

    ದುರ್ವರ್ತನೆ ತಡೆ: ಮಹಿಳೆಯರನ್ನು ಅಥವಾ ವಿದ್ಯಾರ್ಥಿನಿಯರನ್ನು ಚುಡಾಯಿಸುವ (Eve-teasing) ಪುಂಡರ ಮೇಲೆ ಕಣ್ಣಿಡುವುದು ಮತ್ತು ಕ್ರಮ ಕೈಗೊಳ್ಳುವುದು.ಜಾಗೃತಿ ಮೂಡಿಸುವುದು: ಬಾಲ್ಯ ವಿವಾಹ, ಮಕ್ಕಳ ಕಳ್ಳಸಾಗಣೆ ಮತ್ತು ಗುಡ್ ಟಚ್-ಬ್ಯಾಡ್ ಟಚ್ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸುತ್ತದೆ.

    ತುರ್ತು ಸಹಾಯ: ಮಹಿಳೆಯರು ಮನೆಯಲ್ಲಾಗಲಿ ಅಥವಾ ಹೊರಗಾಗಲಿ ಸಂಕಷ್ಟಕ್ಕೆ ಸಿಲುಕಿದಾಗ ಈ ಪಡೆಯನ್ನು ಸಂಪರ್ಕಿಸಬಹುದು.

    4. ಯಾರಿಗೆ ಸಹಾಯ?

    ಶಾಲೆಗೆ ಹೋಗುವ ಮಕ್ಕಳು, ಕಾಲೇಜು ವಿದ್ಯಾರ್ಥಿನಿಯರು, ಕೆಲಸಕ್ಕೆ ಹೋಗುವ ಮಹಿಳೆಯರು, ಸಂಕಷ್ಟದಲ್ಲಿರುವ ಯಾವುದೇ ಮಹಿಳೆ.

    5. ಸಂಪರ್ಕಿಸುವುದು ಹೇಗೆ?

    ನೀವು ಅಥವಾ ನಿಮ್ಮ ಸಂಬಂಧಿಕರು ಯಾವುದೇ ತೊಂದರೆಯಲ್ಲಿದ್ದಾಗ ಸಹಾಯವಾಣಿ ಸಂಖ್ಯೆಗಳಾದ 112 (ತುರ್ತು ಸೇವೆ) ಅಥವಾ 181 (ಮಹಿಳಾ ಸಹಾಯವಾಣಿ)ಗೆ ಕರೆ ಮಾಡಬಹುದು. ಈ ಸಂಖ್ಯೆಗಳಿಗೆ ಕರೆ ಮಾಡಿದ ತಕ್ಷಣ ಸಮೀಪದಲ್ಲಿರುವ ‘ಅಕ್ಕ ಪಡೆ’ ವಾಹನವು ಸ್ಥಳಕ್ಕೆ ಬರುತ್ತದೆ.

    ಮಾಹಿತಿ: ಈಗಾಗಲೇ ದಕ್ಷಿಣ ಕನ್ನಡ, ಮಂಡ್ಯ, ಬೆಂಗಳೂರು ಸೇರಿದಂತೆ ರಾಜ್ಯದ 31 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ.

  • ನವವಧುಗಳ ಆತ್ಮಹತ್ಯೆ ಹೆಚ್ಚಳ: 
ಮದುವೆ ಮುನ್ನ ಕಡ್ಡಾಯ ಕೌನ್ಸಿಲಿಂಗ್‌ಗೆ ಸಂಸದ ಹ್ಯಾರಿಸ್ ಬೀರನ್ ಆಗ್ರಹ

    ನವವಧುಗಳ ಆತ್ಮಹತ್ಯೆ ಹೆಚ್ಚಳ: ಮದುವೆ ಮುನ್ನ ಕಡ್ಡಾಯ ಕೌನ್ಸಿಲಿಂಗ್‌ಗೆ ಸಂಸದ ಹ್ಯಾರಿಸ್ ಬೀರನ್ ಆಗ್ರಹ

    ​ದೇಶದಲ್ಲಿ ವಿವಾಹಿತ ಮಹಿಳೆಯರ ಆತ್ಮಹತ್ಯೆ ಪ್ರಮಾಣವು ಆತಂಕಕಾರಿಯಾಗಿ ಏರುತ್ತಿದ್ದು, ವಾರ್ಷಿಕವಾಗಿ 1.6 ಲಕ್ಷಕ್ಕೂ ಹೆಚ್ಚು ಮಹಿಳೆಯರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂಬ ಕಠೋರ ಸತ್ಯವನ್ನು ಸಂಸದ ಹ್ಯಾರಿಸ್ ಬೀರನ್ ರಾಜ್ಯಸಭೆಯಲ್ಲಿ ಬಿಚ್ಚಿಟ್ಟಿದ್ದಾರೆ. ಮದುವೆಯ ನಂತರದ ಕೌಟುಂಬಿಕ ಕಿರುಕುಳ ಮತ್ತು ಮಾನಸಿಕ ಸಂಘರ್ಷಗಳಿಂದಾಗಿ ಪ್ರತಿ ವರ್ಷ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಹಿಳೆಯರು ಪ್ರಾಣ ಕಳೆದುಕೊಳ್ಳುತ್ತಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ನವವಧುಗಳ ಸುರಕ್ಷತೆಯನ್ನು ಖಚಿತಪಡಿಸಲು ವಿವಾಹದ ಕಾನೂನು ಪ್ರಕ್ರಿಯೆಯಲ್ಲಿ ಸಮೂಲ ಬದಲಾವಣೆ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

    ​ಮದುವೆ ನೋಂದಣಿ ಸಮಯದಲ್ಲಿ ಅಥವಾ ಮ್ಯಾರೇಜ್ ಸರ್ಟಿಫಿಕೇಟ್ ಪಡೆಯುವ ಮೊದಲು ದಂಪತಿಗಳಿಗೆ ‘ವಿವಾಹಪೂರ್ವ ಕೌನ್ಸಿಲಿಂಗ್’ ಅನ್ನು ಕಡ್ಡಾಯಗೊಳಿಸಬೇಕು ಎಂಬುದು ಸಂಸದರ ಪ್ರಮುಖ ಬೇಡಿಕೆಯಾಗಿದೆ. ಕೌಟುಂಬಿಕ ಒತ್ತಡ ಮತ್ತು ಹೊಂದಾಣಿಕೆಯ ಸಮಸ್ಯೆಗಳನ್ನು ನಿಭಾಯಿಸಲು ಈ ಕೌನ್ಸಿಲಿಂಗ್ ದಂಪತಿಗಳಿಗೆ ಮಾನಸಿಕ ಬಲ ನೀಡುತ್ತದೆ. ಕೇವಲ ಅಪರಾಧ ನಡೆದ ನಂತರ ಕಾನೂನು ಕ್ರಮ ಕೈಗೊಳ್ಳುವ ಬದಲು, ಮುನ್ನೆಚ್ಚರಿಕೆಯಾಗಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಶಾಸನಬದ್ಧಗೊಳಿಸುವುದರಿಂದ ಲಕ್ಷಾಂತರ ಮಹಿಳೆಯರ ಜೀವ ಉಳಿಸಬಹುದು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ನವವಧುಗಳ ಜೀವ ಉಳಿಸಲು ಮತ್ತು ಸುಭದ್ರ ಕುಟುಂಬ ವ್ಯವಸ್ಥೆಯನ್ನು ನಿರ್ಮಿಸಲು ಇಂತಹ ಕಾನೂನು ಸುಧಾರಣೆಗಳು ಕಾಲದ ಅಗತ್ಯವಾಗಿದೆ.

  • ಹೆಣ್ಣಿನ ನೋವು

    ಹೆಣ್ಣಿನ ನೋವು

    ಮನಬಿಚ್ಚಿ ಹೇಳುವ ಹಾಗಿಲ್ಲ
    ಕಣ್ಣಂಚಿ ನಲ್ಲಿ ಕಣ್ಣೀರು ಮಾತ್ರ
    ನಿನ್ನದೇನು ಮಹಾನ್ ನೋವುಗಳೇ
    ಎಲ್ಲರ ಹಾಗೆ ನೀನೂ ಕೂಡ

    ಅತ್ತರೇನು ನಕ್ಕರೇನು ನಿನ್ನ ಕೇಳುವವರಾರು
    ನಾಲ್ಕು ಗೋಡೆಗಳ ಮಧ್ಯವಷ್ಟೆ ನಿನ್ನ ರೋದನ
    ಕೈಗೆ ಕೋಳ ಕಟ್ಟಬೇಕಾಗಿಲ್ಲ
    ಮಾತಿನ ಸರಪಳಿಯೇ ಸಾಕಲ್ಲವೇ?

    ಶತಮಾನಗಳೇನೋ ಕಳೆದಿವೆ
    ಹೆಣ್ಣಿನ ಬಾಳಿಗೆ ತೂಕವೇನೋ ಬಂದಿದೆ
    ನೋಟಗಳಲ್ಲಿ ಅದೇ ಭಾವನೆಯಲ್ಲವೇ

    ಇಲ್ಲವೆನ್ನಲ್ಲ ಸ್ವಾತಂತ್ರ‍್ಯ ವಿದೆ, ಹಕ್ಕೂ ಇದೆ
    ಕಾನೂನಿದೆ, ನ್ಯಾಯವಿದೆ
    ಎಲ್ಲ ಅದರದರ ಸ್ಥಾನದಲ್ಲಿದೆ
    ಎಲ್ಲರಿಗೂ ಎಟುಕುವುದು ಅನುಮಾನ
    ಹಣಬಲವಲ್ಲವೇ ಇಲ್ಲಿಯ ಪರಿಮಾಣ

    ಹೂವಾಗಿ ಅರಳಬೇಕಿತ್ತು
    ಹಕ್ಕಿಗಳಾಗಿ ಹಾರಾಡಬೇಕಿತ್ತು
    ನೀರಾಗಿ ಹರಿಯಬೇಕಿತ್ತು
    ಗಂಡಾಗಿ ಹುಟ್ಟಬೇಕಿತ್ತು
    ಹೆಣ್ಣು ಅಂದುಕೊಂಡದ್ದು ಅಂತು ನಿಜ
    ಎಲ್ಲಿದೆ ಸಾರ್ಥಕ ಬದುಕು
    ನಮ್ಮೊಳಗೇ ಪ್ರಶ್ನಿಸಬೇಕಿದೆ???

    ರುಮಾನ, ಮುಂಡೋಳಿ

  • “ಅಪ್ಪಾ ನನ್ನನ್ನು ಕ್ಷಮಿಸಿ” 
Whatsapp Voice ಮಾಡಿ ಆತ್ಮಹತ್ಯೆಗೈದ ಮಗಳು…

    “ಅಪ್ಪಾ ನನ್ನನ್ನು ಕ್ಷಮಿಸಿ” Whatsapp Voice ಮಾಡಿ ಆತ್ಮಹತ್ಯೆಗೈದ ಮಗಳು…

    “ಅಪ್ಪಾ, ನನ್ನನ್ನು ಕ್ಷಮಿಸಿ. ನಾನೀ ಚಿತ್ರಹಿಂಸೆಯನ್ನು ಸಹಿಸಬಹುದು ಎಂದು ಭಾವಿಸಿದ್ದೆ. ಆದರೆ ಅವರು ಮನುಷ್ಯರಲ್ಲ, ಕ್ರೂರಿಗಳು. ನನಗೆ ಹೀಗೆಯೇ ಬದುಕು ಮುಂದುವರಿಸಲು ಸಾಧ್ಯವಿಲ್ಲ” ಇದು ನವ ವಿವಾಹಿತೆ ರಿಧನ್ಯಾ ತನ್ನ ಸಾವಿನ ಮೊದಲು ತಂದೆಗೆ ಕಳಿಸಿದ ಧ್ವನಿ ಸಂದೇಶದ ಚುಟುಕು.

    ತಮಿಳುನಾಡಿನ ತಿರುಪುರ ಜಿಲ್ಲೆಯ 27 ವರ್ಷದ ನವವಿವಾಹಿತೆ ರಿಧನ್ಯಾ ಜೂನ್ 28 ರಂದು ದಾಂಪತ್ಯದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಈ ಘಟನೆ ತಮಿಳುನಾಡಿನೆಲ್ಲೆಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಅವಳು ತನ್ನ ಸಾವಿಗೆ ಮೊದಲು ತಂದೆಗೆ ಕಳಿಸಿದ್ದ ಹೃದಯವೇ ಒಡೆಯುವಂತಹ ಧ್ವನಿ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಮೃತರಾದ ರಿಧನ್ಯಾ, 2025ರ ಏಪ್ರಿಲ್ 11ರಂದು ಕವಿನ್ ಕುಮಾರ್ (28) ಎಂಬವರೊಂದಿಗೆ ವಿವಾಹವಾಗಿದ್ದರು. ವಿವಾಹಕ್ಕಾಗಿ ಅವರ ಕುಟುಂಬವು ಸುಮಾರು 100 ಪವನ್ ಚಿನ್ನ (800 ಗ್ರಾಂ) ಹಾಗೂ 70 ಲಕ್ಷ ಮೌಲ್ಯದ ವೋಲ್ವೋ ಕಾರ್ ವರದಕ್ಷಿಣೆ ರೂಪದಲ್ಲಿ ನೀಡಿದ್ದರೂ, ಪುನಹ 500 ಪವನ್ ವರದಕ್ಷಿಣೆ ಹೆಚ್ಚು ನೀಡಬೇಕೆಂದು ಅವರ ಪತಿಯ ಕುಟುಂಬದವರು ನಿರಂತರ ಕಿರುಕುಳಗಳು ನೀಡುತ್ತಿದ್ದರೆಂದು ಕುಟುಂಬದವರು ಆರೋಪಿಸಿದ್ದಾರೆ.

    “ಅವಳನ್ನು ಗಂಟೆಗಟ್ಟಲೇ ನಿಲ್ಲಿಸಿಟ್ಟು, ಊಟ ಕೊಡದೆ ಕೋಣೆಯಲ್ಲಿ ಕೂಡಿ ಹಾಕಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.” “ವಿವಾಹವು ಅವಳಿಗೆ ಸಂತೋಷ ನೀಡುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಅದು ಅವಳಿಗೆ ಹಿಂಸೆಯೊಂದಿಗೆ ಅಂತ್ಯಕ್ಕೆ ಕಾರಣವಾಯಿತು” ಎಂದು ಆಕೆಯ ತಂದೆ ದಿ ಇಂಡಿಯನ್ ಎಕ್ಸ್ಪ್ರೆಸ್‌ಗೆ ತಿಳಿಸಿದ್ದಾರೆ.
    ಜೂನ್ 28ರಂದು ರಿಧನ್ಯಾ ದೇವಸ್ಥಾನಕ್ಕೆ ಹೋಗುತ್ತಿದ್ದೇನೆಂದು ಹೇಳಿ ಹೊರಟು, ಕಾರನ್ನು ಮಂಡಿಪಾಳ್ಯಮ್ನಲ್ಲಿ ನಿಲ್ಲಿಸಿ ಸಾಮಾನ್ಯವಾಗಿ ಗ್ರಾಮೀಣ ಜನರು ಆತ್ಮಹತ್ಯೆಗೆ ಬಳಸುವ ವಿಷ ಪದಾರ್ಥವನ್ನು ಖರೀದಿಸಿದಳು ಎಂದು
    ದಿ ನ್ಯೂಸ್ ಮಿನಿಟ್‌ನಲ್ಲಿ ವರದಿಯಾಗಿದೆ.

    ವಿಷ ಸೇವಿಸಿ ಅರೆ ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ದ ಆಕೆಯನ್ನು ದಾರಿಹೋಕರು ಅವಿನಾಶಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಆಕೆ ಮೃತಪಟ್ಟಿದ್ದಳು.
    ಸಾವಿಗೆ ಮುನ್ನ ಆ ಹೆಣ್ಣು ಮಗಳು ತಂದೆಗೆ ವಾಟ್ಸಾಪ್ ಮೂಲಕ ಏಳು ಧ್ವನಿಸಂದೇಶಗಳನ್ನು ಕಳಿಸಿದ್ದಳು.. ಅವುಗಳಲ್ಲಿ ಒಂದು
    “ಅಪ್ಪಾ, ನನ್ನನ್ನು ಕ್ಷಮಿಸಿ. ನಾನೀ ಚಿತ್ರಹಿಂಸೆಯನ್ನು ಸಹಿಸಬಹುದು ಎಂದು ಭಾವಿಸಿದ್ದೆ. ಆದರೆ ಅವರು ಮನುಷ್ಯರಲ್ಲ, ಕ್ರೂರಿಗಳು. ನನಗೆ ಹೀಗೆಯೇ ಮುಂದುವರಿಸಿ ಬದುಕುವುದು ಸಾಧ್ಯವಿಲ್ಲ” ಎಂದು ರಿಧನ್ಯಾಳ ರೋದನ.”

    ಸಾರ್ವಜನಿಕರ ಪ್ರತಿಭಟನೆ ಹಾಗೂ ಮಾಧ್ಯಮದ ಒತ್ತಡದಿಂದಾಗಿ, ಸೇವೂರು ಪೊಲೀಸರು ಆಕೆಯ ಪತಿ ಕವಿನ್ ಕುಮಾರ್, ಮಾವ ಈಶ್ವರಮೂರ್ತಿ ಮತ್ತು ಅತ್ತೆ ಚಿತ್ರಾದೇವಿ ಅವರ ಮೇಲೆ IPಅ ಸೆಕ್ಷನ್ 498 A, 304 B ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ, 1961ರ ಅನ್ವಯ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ (ಹಿಂದುಸ್ತಾನ್ ಟೈಮ್ಸ್).ವಿವಾಹದ ಸಮಯದಲ್ಲಿ ನಡೆದ ಹಣಕಾಸು ಮತ್ತು ವಸ್ತು ವಿನಿಮಯಗಳ ಕುರಿತು ಆದಾಯ ವಿಭಾಗ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ.

    ವರದಕ್ಷಿಣೆ ನಿಷೇಧ ಕಾನೂನು 1961ರಲ್ಲಿ ಜಾರಿಗೆ ಬಂದರೂ ಭಾರತದಲ್ಲಿ ಪ್ರತಿ ವರ್ಷ ಸರಾಸರಿ 6,500 ವರದಕ್ಷಿಣೆ ಸಂಬಂಧಿತ ಸಾವುಗಳ ವರದಿಯಾಗುತ್ತಿವೆ. (ದಿ ನ್ಯೂಸ್ ಮಿನಿಟ್). 2022ರಲ್ಲಿ ಕೇವಲ ತಮಿಳುನಾಡಿನಲ್ಲಿ ಮಾತ್ರ 29 ಪ್ರಕರಣಗಳು ದಾಖಲಾಗಿವೆ (The CSR Journal)

    “ಇದು ಬರೇ ಚಿನ್ನ ಅಥವಾ ಐಶಾರಾಮಿ ಕಾರಿನ ವಿಷಯವಲ್ಲ” ಎನ್ನುತ್ತಾರೆ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಪ್ರಿಯಾ ರಾಜನ್. “ಎಷ್ಟೇ ಶ್ರೀಮಂತ ಕುಟುಂಬದ ಹೆಣ್ಣುಮಕ್ಕಳಿಗಾದರೂ ಶೋಷಣೆಯಿಂದ ರಕ್ಷಣೆ ಸಿಗುವುದಿಲ್ಲ. ರಿಧನ್ಯಾಳ ಅಂತಿಮ ಧ್ವನಿ ಸಂದೇಶಗಳು- ಕ್ಷಮಾಪಣೆಯ ನೋವಿನ ಧ್ವನಿ- ಈ ರಾಷ್ಟ್ರವನ್ನು ಎಚ್ಚರಿಸಬೇಕು” (ದಿ ಇಂಡಿಯನ್ ಎಕ್ಸ್ಪ್ರೆಸ್).

    ಮಹಿಳಾ ಹಕ್ಕು ಹೋರಾಟಗಾರರು ಅಧಿಕಾರಿಗಳ ಮೇಲೆ ಹೆಚ್ಚಿನ ಹೊಣೆಗಾರಿಕೆಯನ್ನು ವಿಧಿಸಬೇಕೆಂದು ಹಾಗೂ ಮಹಿಳೆಯರಿಗಾಗಿ ಜಿಲ್ಲಾಮಟ್ಟದ ದೂರು ಸ್ವೀಕಾರ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಆಗ್ರಹಿಸುತ್ತಿದ್ದಾರೆ..
    ಈ ಘಟನೆ ಭಾರತದೆಲ್ಲೆಡೆ ಭಾವನಾತ್ಮಕ, ನೋವಿನ ಹಾಗೂ ಚೀತ್ಕಾರದ ಪ್ರತಿಧ್ವನಿಯನ್ನು ಉಂಟುಮಾಡಿದೆ. ಹಣವಿರುವ ಕುಟುಂಬದಿಂದ ಬಂದಿದ್ದರೂ ರಿಧನ್ಯಾಳಿಗೆ ವರದಕ್ಷಿಣೆಯ ಶಾಪದಿಂದ ಪಾರಾಗಲು ಸಾಧ್ಯವಾಗಲಿಲ್ಲ. ಈ ಪ್ರಕರಣವು ಎಲ್ಲ ವರ್ಗಗಳಲ್ಲಿಯೂ ಶೋಷಣೆಯ ಆಳವನ್ನು ತೋರಿಸುವ ಸಂಕೇತವಾಗಿದೆ.

    ಸಾಮಾಜಿಕ ಮಾಧ್ಯಮಗಳಲ್ಲಿ Justice For Ridhanya ಮತ್ತು End Dowry Deaths ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ. ನಟರು, ಹಕ್ಕು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಎಲ್ಲರೂ ನ್ಯಾಯ ಮತ್ತು ಸಕಾರಾತ್ಮಕ ಬದಲಾವಣೆಗೆ ಬೊಬ್ಬಿಡುತ್ತಿದ್ದಾರೆ.

    ವರದಕ್ಷಿಣೆ ಸಂಬಂಧಿಸಿದ ಸಾವುಗಳು ಭಾರತದಲ್ಲಿ ಬೃಹತ್ ಸಮಸ್ಯೆಯಾಗಿ ಉಳಿದಿವೆ. ಪಿತೃಪ್ರಧಾನ ರೂಢಿಗಳು, ಕಳಪೆ ಕಾನೂನು ಜಾರಿ ಮತ್ತು ಆಳವಾಗಿ ಬೇರೂರಿರುವ ದುರಾಸೆಯಿಂದಾಗಿ ಇದಕ್ಕೆ ಕಾರಣವಾಗಿವೆ
    ಅವಿನಾಶಿಯಲ್ಲಿ ರಿಧನ್ಯಾಳ ಅಂತ್ಯಕ್ರಿಯೆಯ ವೇಳೆ ತಂದೆ ಕಣ್ಣೀರಿಡುತ್ತಾ ಹೇಳಿದರು: “ನಮಗೆ ಅವಳ ಸಂತೋಷ ಬೇಕಿತ್ತು. ಆದರೆ ನಮ್ಮ ಹೃದಯದಲ್ಲಿ ಉತ್ತರವಿಲ್ಲದ ಅದೆಷ್ಟೋ ಪ್ರಶ್ನೆಗಳೊಂದಿಗೆ ಸಹಿಸಲಾಗದ ನೋವಿನೊಂದಿಗೆ ಈಗ ಅವಳ ಸಮಾಧಿಯ ಮುಂದೆ ನಿಂತಿದ್ದೇವೆ.”

    ಭವಿಷ್ಯದಲ್ಲಿ ಆಶೆ ಮತ್ತು ಆಕಾಂಕ್ಷೆಗಳೊಂದಿಗೆ ಪತಿಯ ಮನೆಯಲ್ಲಿ ಬದುಕಬೇಕು ಎಂಬ ಮಗಳ ಕನಸುಗಳು ಬಾಲ್ಯದಿಂದ ಯೌವನದವರೆಗೆ ಯಾವುದೆ ನೋವೂ ಸಂಕಷ್ಟವೂ ಆಗದಂತೆ ತೊಟ್ಟಿಲಿನಿಂದ ಜೀವರಕ್ಷೆ ಮಾಡಿದ ತಂದೆ-ತಾಯಿಯ ಮಮತೆಯನ್ನೂ ಕೊನೆಗೆ ಬೆಂಕಿಗೆ ಆಹುತಿಯಾಗುತ್ತವೆಂದರೆ, ಅದನ್ನು ಹೇಗೆ ಸಹಿಸಬೇಕು?
    ನಮ್ಮ ಕಾನೂನು ವ್ಯವಸ್ಥೆ ಎಲ್ಲಿ ತಪ್ಪುತ್ತಿದೆ? ಮಾನವೀಯ ಮೌಲ್ಯಗಳು ಎಲ್ಲಿ ಕುಸಿದುಹೋಗಿವೆ? ಇವು ಚಿಂತನೆಗೆ ಗಂಭೀರ ಕಾರಣಗಳಾಗಿವೆ.

    ಉತ್ತಮ ನಾಗರಿಕರೆಂಬ ನಿಟ್ಟಿನಲ್ಲಿ, ಗೃಹಹಿಂಸೆ ಅಥವಾ ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಯಾರಾದರೂ ಕಂಡಾಗ, ತಕ್ಷಣವೇ ಸಂಬAಧಿತ ಸಹಾಯವಾಣಿಗೆ ಕರೆಮಾಡುವುದು ಅಥವಾ ಸ್ಥಳೀಯ ಮಾನಸಿಕ ಆರೋಗ್ಯ ತಜ್ಞರ ಬಳಿ ಮಾಹಿತಿ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
    ಕುಲ್ಸೂಮ್ ಅಬೂಬಕರ್

  • ಒಂದೇ ಮನೆಯಲ್ಲಿ ವಾಸಿಸುವ ಕ್ರಿಶ್ಚಿಯನ್-ಮುಸ್ಲಿಮ್ ಮಾದರೀ ಕುಟುಂಬ: 
ಇವರ ಮಧ್ಯವಿರುವ ಸಂಬಂಧವೇನು..?

    ಒಂದೇ ಮನೆಯಲ್ಲಿ ವಾಸಿಸುವ ಕ್ರಿಶ್ಚಿಯನ್-ಮುಸ್ಲಿಮ್ ಮಾದರೀ ಕುಟುಂಬ: ಇವರ ಮಧ್ಯವಿರುವ ಸಂಬಂಧವೇನು..?

    ಓದುಗರೇ! ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಧರ್ಮ ಧರ್ಮ ಎಂದು ಕಚ್ಚಾಡುತ್ತಿರುವ ಈ ಸಮಾಜದಲ್ಲಿ ಎರಡು ಬೇರೆ ಧರ್ಮಗಳಿಗೆ ಸೇರಿದ ಕುಟುಂಬಗಳು ಅನ್ಯೋನ್ಯವಾಗಿ ಬಾಳುತ್ತಿರುವ ಸಂತೋಷವನ್ನು ನಿಮ್ಮೊಂದಿಗೆ ಹಂಚುತ್ತಿದ್ದೇನೆ. ಬಳಗವು ಜಸಿಂತ ಮತ್ತು ನಸೀಮ್ ಎಂಬ ಇಬ್ಬರು ಮಹಿಳೆಯರಿಗೆ ಭೇಟಿ ಮಾಡಿತು.

    ಬಳಗ : ಜಸಿಂತ, ನೀವು ಮತ್ತು ನಸೀಮ್ ಬೇರೆ ಧರ್ಮಕ್ಕೆ ಸೇರಿದವರಾಗಿ ಇಷ್ಟು ಪ್ರೀತಿ ಮತ್ತು ಅನ್ಯೋನ್ಯವಾಗಿ ಬಾಳಲು ಹೇಗೆ ಸಾಧ್ಯ?

    ಜಸಿಂತ : ನನ್ನ ಅತ್ತಿಗೆ ನಸೀಮ ತುಂಬ ಒಳ್ಳೆಯವರು. ಅವರು ಅತ್ತಿಗೆ ಮಾತ್ರವಾಗಿರದೆ ನನ್ನ ತಂಗಿಯೂ ಆಗಿದ್ದಾರೆ. ತಂಗಿಗಿಂತಲೂ ಆಪ್ತಳು ಎಂದು ಹೇಳಿದರೆ ತಪ್ಪಾಗಲಾರದು. ಅವಳ ಒಳ್ಳೆಯತನ ನಮಗೆ ಪ್ರೀತಿ ಮತ್ತು ಅನ್ಯೋನ್ಯವಾಗಿರಲು ಸಹಕರಿಸುತ್ತದೆ.

    ಬಳಗ : ನಿಮ್ಮ ಅಣ್ಣ ಬೇರೆ ಧರ್ಮದ ಹುಡುಗಿಯನ್ನು ವಿವಾಹ ಆದಾಗ ಮನೆಯಲ್ಲಿ ಸಮಸ್ಯೆ ಆಗಲಿಲ್ಲವೇ?

    ಜಸಿಂತ : ಅಪ್ಪ-ಅಮ್ಮ ಮತ್ತು ನಮಗೆಲ್ಲರಿಗೂ ವಿರೋಧವಿತ್ತು. ಇಂತಹ ವಿವಾಹಕ್ಕೆ ಯಾರು ಒಪ್ಪುತ್ತಾರೆ? ಆದರೆ ಅಣ್ಣ ತನ್ನಿಷ್ಟದಿಂದ ತನ್ನ ಧರ್ಮವನ್ನು ಬದಲಿಸಿರುವುದರಿಂದ ನಾವು ಏನು ಮಾಡಲು ಸಾಧ್ಯ? ಈ ಬಗ್ಗೆ ಮಾತನಾಡಿದರೆ ಎಲ್ಲರೂ ಬೇಸರ ಪಡುತ್ತಾರೆ ಎಂದು ಅಮ್ಮ ವಿರೋಧಿಸಿದಾಗ, ನಾವು ಯಾರು ವಿರೋಧಿಸಲಿಲ್ಲ. ಆದರೆ ಅಪ್ಪನಿಗೆ ಬಹಳ ಸಮಯದ ತನಕ ಬೇಸರವಿತ್ತು.

    ಬಳಗ : ಅಣ್ಣ ತನ್ನ ಧರ್ಮ ಬದಲಾಯಿಸಿದ ನಂತರ ಮೊದಲಿನಂತೆಯೇ ಇದ್ದಾರೆಯೆ? ಅಥವಾ ಬದಲಾಗಿದ್ದಾರೆಯೇ?

    ಜಸಿಂತ : ಇಲ್ಲಿ ಅಣ್ಣನು ಸ್ವಲ್ಪವೂ ಬದಲಾಗಲಿಲ್ಲ. ಮೊದಲಿಗಿಂತಲೂ ಹೆಚ್ಚು ನಿಕಟವಾದರು. ಅಪ್ಪ-ಅಮ್ಮನನ್ನು ನೋಡುವುದರಲ್ಲಿರಲಿ ಅಥವಾ ನಮ್ಮೊಂದಿಗಿನ ಸಂಬಂಧವು ಮೊದಲಿಗಿಂತ ಗಟ್ಟಿಯಾಯಿತು.

    ಬಳಗ : ನಸೀಮ, ನೀವು ಮತ್ತು ಬಿಲಾಲ್ ಪ್ರೀತಿಸಿ ಮದುವೆಯಾದದ್ದೇ?

    ನಸೀಮ : ಇಲ್ಲ. ನಮ್ಮದು ಅರೆಂಜ್ ಮ್ಯಾರೇಜ್. ನನ್ನ ಸಂಬಂಧಿಕರೊಬ್ಬರು ಬಿಲಾಲ್‌ರ ಸ್ನೇಹಿತರಾಗಿದ್ದರು. ಅವರು ಈ ಸಂಬಂಧವನ್ನು ಮಾಡಿಸಿದರು. ಅಮ್ಮ ಹುಡುಗಿಯನ್ನು ನೋಡಿ ಒಪ್ಪಿದರೆ, ನಾನು ವಿವಾಹ ಆಗುವುದು ಎಂದು ಬಿಲಾಲ್ ಹೇಳಿದರಿಂದ, ಅಮ್ಮ ನನ್ನನ್ನು ನೋಡಲು ಬಂದಿದ್ದರು.

    ಬಳಗ : ವಿವಾಹದ ನಂತರ ಅತ್ತೆ ಮನೆಗೆ ಹೋಗಿದ್ದೀರಾ?

    ನಸೀಮ : ಹೌದು, ಅಪ್ಪ-ಅಮ್ಮ ಮತ್ತು ಮನೆವರೆಲ್ಲರು ಬಹಳ ಸಂತೋಷದಿಂದ ಬರಮಾಡಿಕೊಂಡರು. ನಾನು ಅಮ್ಮನಿಲ್ಲದ ಹೆಣ್ಣು ಎಂದು ಅತ್ತೆ ನನ್ನನ್ನು, ನನ್ನ ಸಹೋದರ, ಸಹೋದರಿಯರನ್ನೂ ಪ್ರೀತಿಸುತ್ತಿದ್ದರು.

    ಬಳಗ: ನಿಮ್ಮ ಮತ್ತು ನಿಮ್ಮ ಅತ್ತೆ ಮನೆಯವರ ಸಂಬಂಧ ಹೇಗಿದೆ?

    ನಸೀಮ : ಅಲ್‌ಹಮ್ದುಲಿಲ್ಲಾಹ್ (ದೇವನಿಗೆ ಸ್ತುತಿಗಳು) ಬಹಳ ಉತ್ತಮ ಸಂಬಂಧ. ನಾದಿನಿ ಮೈದುನನವರೊಂದಿಗೂ ಉತ್ತಮ ಸಂಬಂಧindu ವಿದೆ. ನನ್ನ ಮನೆಯವರೊಂದಿಗೂ ಅವರ ಸಂಬಂಧ ಒಳ್ಳೆದಿದೆ. ನಮ್ಮ ಧರ್ಮ ಯಾವುತ್ತೂ ನಮ್ಮ ಅನ್ಯೋನ್ಯತೆಗೆ ಅಡ್ಡಿ ಬರಲಿಲ್ಲ.

    ಬಳಗ : ಜಸಿಂತ, ನಿಮ್ಮ ಅಣ್ಣ ಹಾಗೂ ಅತ್ತಿಗೆಯ ಸಂಬಂಧ ನಿಮ್ಮೊಂದಿಗೆ ಹೇಗಿದೆ?

    ಜಸಿಂತ : ಪ್ರೀತಿಯ ಸಂಬಂಧ. ಅಮ್ಮ ಜೀವಂತವಾಗಿರುವ ವರೆಗೆ ಅಮ್ಮನಿಗೆ ಎಲ್ಲ ರೀತಿಯಲ್ಲಿ ಸಹಕರಿಸಿದ್ದಾರೆ. ಅಮ್ಮನ ಯಾವುದೇ ಅಗತ್ಯದ ವಿಷಯದಲ್ಲಿ ಬೇಸರ ಪಡಿಸಲಿಲ್ಲ. ಮಾತ್ರವಲ್ಲದೇ ನಮ್ಮೆಲ್ಲರ ಅಗತ್ಯವನ್ನು ಕೇಳುವ ಮೊದಲೇ ಪೂರೈಸುತ್ತಾರೆ. ನನ್ನ ಆರೋಗ್ಯ ಸರಿ ಇಲ್ಲದಾಗಲೂ ಅಣ್ಣ ಅತ್ತಿಗೆ ನನ್ನನ್ನು ಬಿಡಲಿಲ್ಲ. ಈ ವಿಷಯದಲ್ಲಿ ನಸೀಮ ಎತ್ತಿದ ಕೈ. ನಸೀಮ ನಮಗೆ ಯಾರಿಗೂ ದೂರ ಮಾಡಲಿಲ್ಲ. ನಾವು, ಅವರು ಪರಸ್ಪರ ನಮ್ಮ ಮನೆಗಳಿಗೆ ಭೇಟಿ ಕೊಡುತ್ತೇವೆ.

    ಬಳಗ : ನಸೀಮ, ಬಿಲಾಲ್‌ರ ಸಹೋದರ ಸಹೋದರಿಯರೊಂದಿಗೆ ನಿಮ್ಮ ಸಂಬಂಧ ಹೇಗಿದೆ?

    ನಸೀಮ : ಒಂದು ಕುಟುಂಬ ಹೇಗಿರಬೇಕೋ ಹಾಗೆಯೇ ಇದೆ. ಕೆಲವು ತಿಂಗಳ ಹಿಂದೆ, ಅವರ ಓರ್ವ ಹಿರಿಯ ಸಹೋದರಿ ಗಲ್ಫ್ನಲ್ಲಿ 15 ದಿನ ನಮ್ಮೊಂದಿಗೆ ನಿಲ್ಲಲು ಬಂದವರು ಒಂದೂವರೆ ತಿಂಗಳು ನಮ್ಮೊಂದಿಗೆ ಇದ್ದು ಹೋದರು. ನಮ್ಮ ಮಕ್ಕಳು ಮತ್ತು ಅವರೆಲ್ಲರ ಮಕ್ಕಳೊಂದಿಗೆ ಉತ್ತಮ ಸಂಬಂಧ ಇದೆ. ಸುಖ-ದುಃಖಗಳಲ್ಲೆಲ್ಲ ಇಡೀ ಕುಟುಂಬ ಸೇರುತ್ತೇವೆ. ಪರಸ್ಪರ ಉಡುಗೊರೆ ಹಂಚುತ್ತೇವೆ ಮತ್ತು ಪರಸ್ಪರ ಸಹಕರಿಸುತ್ತೇವೆ ಕೂಡ.

    ಬಳಗ :ವಿವಾಹದ ಮೊದ ಮೊದಲು ಬಿಲಾಲ್ ತನ್ನ ಮನೆಯವರಿಗೆ ಸಹಕರಿಸುವಾಗ ನಿಮಗೆ ಬೇಸರ ಆಗುತ್ತಿತ್ತೇ

    ನಸೀಮ : ಇಲ್ಲ. ಸ್ವಲ್ಪನೂ ಇಲ್ಲ. ಕೆಲಸದ ನಿಬಿಢತೆಯಿಂದ ಬಿಲಾಲ್‌ಗೆ ಕೆಲವೊಮ್ಮೆ ಅಮ್ಮನಿಗೆ ಫೋನಾಯಿಸಲು ಅಥವಾ ಹಣ ಕಳುಹಿಸಲು ನೆನಪಿಲ್ಲದಾಗ, ನಾನು ಅವರಿಗೆ ನೆನಪಿಸುತ್ತೇನೆ. ಬಿಲಾಲ್ ಫೋನಾಯಿಸದಿದ್ದರೂ ನಾನು ಫೋನಾಯಿಸುತ್ತಾ ಇರುತ್ತೇನೆ. ಹಣ ಕಳುಹಿಸಲು ಬಿಲಾಲ್‌ಗೆ ಸಮಯ ಇರುವುದಿಲ್ಲವೆಂದು ನಾನೇ ಕಳುಹಿಸಲು ಆರಂಭಿಸಿದೆ. ಕ್ರಮೇಣ ಆ ಜವಾಬ್ದಾರಿಯನ್ನು ಬಿಲಾಲ್ ನನಗೆನೇ ವಹಿಸಿಕೊಟ್ಟರು. ಅವರ ಸಹೋದರ ಸಹೋದರಿಯರಿಗೆ ಹಣದ ಅಗತ್ಯ ಇದ್ದರೆ, ಅವರ ಮೊಬೈಲ್ ನೋಡಿ ನಾನೇ ಕಳುಹಿಸಿಕೊಡುತ್ತೇನೆ. ಅಮ್ಮನಿಗೆ ಕಳುಹಿಸುವ ಹಣ ನಾನು ವಹಿಸಿಕೊಂಡ ನಂತರ ಒಂದು ದಿನ ಕೂಡ ಲೇಟ್ ಮಾಡಲಿಲ್ಲ.

    ಬಳಗ : ಅಮ್ಮನ ನಿಧನದ ಸಮಯ ಅಣ್ಣ ಅತ್ತಿಗೆ ಬಂದಿದ್ದರೆ?

    ಜಸಿಂತ : ಅಮ್ಮ ಅನಾರೋಗ್ಯಗೊಂಡಾಗ ಅಣ್ಣ ಮತ್ತು ಅತ್ತಿಗೆಯನ್ನೇ ನೆನೆಯುತ್ತಿದ್ದರು. ಅಣ್ಣನಿಗೆ ಕೆಲಸದ ನಿಬಿಢತೆಯಿಂದ ಬರಲು ಆಗುತ್ತಿರದಿದ್ದರೂ ಅತ್ತಿಗೆ ಬರುತ್ತಿದ್ದರು. ನಿಧನದ ಸಮಯ ಕೂಡ ಅಮ್ಮ ಇವರಿಬ್ಬರನ್ನು ಕಾಯುತ್ತಿದ್ದರು. ನಸೀಮ- ಅಮ್ಮನ ಆರೋಗ್ಯ ಸರಿಯಿಲ್ಲ ಎಂದು ಕೇಳಿದ ತಕ್ಷಣ ನಾವು ಹೊರಟೆವು. ಆದರೆ… ಪ್ರಯಾಣ… ನಾವು ಮುಟ್ಟುವಷ್ಟರಲ್ಲಿ ಅಮ್ಮ ನಿಧನ ಹೊಂದಿದ್ದರು. ಬಿಲಾಲ್ ಹೆಚ್ಚಾಗಿ ಗಲ್ಫ್ನಲ್ಲಿರುವುದರಿಂದ ಇಲ್ಲಿಯ ವಿಷಯ ಅವರಿಗೆ ಗೊತ್ತಿಲ್ಲ. ಆದ್ದರಿಂದ ಅಮ್ಮನ ದೇಹವನ್ನು ಶವಾಗಾರದಲ್ಲಿಡುವ ವ್ಯವಸ್ಥೆ, ಅವರಿಗೆ ಉಡಿಸಲು ಸೀರೆ ಮತ್ತು ಹೂವು ಎಲ್ಲದರ ವ್ಯವಸ್ಥೆ ನಾನು ಮಾಡಿಕೊಂಡು ಮರುದಿನ ಮರಣವನ್ನು ಊರಿಗೆ ಕಳುಹಿಸಿದೆ. ಮತ್ತು ಹಿಂದಿನಿಂದ ನಾವು ಕೂಡ ಹೋದೆವು. ಜಸಿಂತ- ಅಮ್ಮ ಮರಣದ ತನಕ ನಮ್ಮೆಲ್ಲರೊಂದಿಗೆ ಹೇಳುತ್ತಿದ್ದರು ಏನೆಂದರೆ ನೀವೆಲ್ಲ ಸಹೋದರ-ಸಹೋದರಿಯರು ಒಂದಾಗಿ ಇರಬೇಕು. ಬೇರೆ ಬೇರೆ ಆಗಬಾರದು. ಈ ಅಣ್ಣ ಅತ್ತಿಗೆಯನ್ನು ದೂರ ಮಾಡಬಾರದು. ನಸೀಮ- ಬಿಲಾಲ್‌ರ ತಮ್ಮ ಜೋಸೆಫ್ ಅಂದರೆ ನಮ್ಮ ಮಕ್ಕಳಿಗೆ ಪಂಚ ಪ್ರಾಣ. ಅವರಿಗೂ ನಮ್ಮ ಮಕ್ಕಳೊಂದಿಗೆ ತುಂಬಾ ಪ್ರೀತಿ. ನಮ್ಮ ಊರಿಗೆ ಬಂದಾಗ, ನಮ್ಮ ಹೆಚ್ಚಿನ ಕೆಲಸ ಕಾರ್ಯಗಳಿಗೆ ಅವರು ನಮಗೆ ಸಹಕರಿಸುತ್ತಾರೆ. ಬಿಲಾಲ್ ನಮ್ಮೊಂದಿಗೆ ಬಾರದಿದ್ದರೂ ಅವರು ನಮ್ಮೊಂದಿಗೆ ಇರುತ್ತಾರೆ.

    ಬಳಗ : ಬಿಲಾಲ್‌ರೊಂದಿಗೆ ವಿವಾಹದ ನಂತರ ನಿಮ್ಮ ಜೀವನ ಹೇಗೆ ಸಾಗುತ್ತಿದೆ?

    ನಸೀಮ : ಅಲ್‌ಹಮ್ದುಲಿಲ್ಲಾಹ್ (ದೇವನಿಗೆ ಸ್ತುತಿ) ತುಂಬ ಒಳ್ಳೆಯ ಜೀವನ ಸಾಗಿಸುತ್ತಿದ್ದೇವೆ. ಅವರು ತುಂಬ ಶ್ರಮ ಜೀವಿ. ವಿವಾಹದ ಮೊದಲು ಇದ್ದ ಜೀವನ, ವಿವಾಹದ ನಂತರ ಸಂಪೂರ್ಣ ಬದಲಾಗಿದೆ. ನಾವು ಮಾತ್ರವಲ್ಲಿ ನಮ್ಮೊಂದಿಗೆ ನನ್ನ ಕುಟುಂಬ ಹಾಗೂ ಬಿಲಾಲ್‌ರ ಕುಟುಂಬವು ಉತ್ತಮ ಜೀವನ ಜೀವಿಸುತ್ತಿದ್ದೇವೆ.ind

  • ಬೇಸಿಗೆಗೂ ಮುನ್ನ ನೀರನ್ನು ಸಂಗ್ರಹಿಸಿ

    ಬೇಸಿಗೆಗೂ ಮುನ್ನ ನೀರನ್ನು ಸಂಗ್ರಹಿಸಿ

    ಬೇಸಿಗೆಕಾಲ ಆರಂಭವಾಗುತ್ತಿದ್ದಂತೆಯೇ ಸುಡು ಬಿಸಿಲು. ಜೊತೆಗೆ ದೇಶದ ಹಲವಾರು ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಬರಗಾಲ ಉಂಟಾಗುತ್ತದೆ. ವಾಸ್ತವದಲ್ಲಿ ಮಳೆಗಾಲದಲ್ಲಿ ಧಾರಾಳವಾಗಿ ಮಳೆ ಸುರಿಯುವ ಅನೇಕ ಪ್ರದೇಶಗಳು ನಮ್ಮಲ್ಲಿವೆ. ಮಳೆ ನೀರು ಹೆಚ್ಚಾಗಿ ಪ್ರವಾಹ. ನೆರೆ ಬರುವುದೂ ಇದೆ. ಈ ಮಳೆ ನೀರನ್ನು ಹೀಗೆ ಹಾಳಾಗುವುದನ್ನು ತಪ್ಪಿಸಿ ಅದನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಕ್ರಮವನ್ನು ಅಳವಡಿಸಿದರೆ ಖಂಡಿತವಾಗಿಯೂ ಇದರಿಂದ ಎಲ್ಲರಿಗೂ ಪ್ರಯೋಜನ ಪಡೆಯಬಹುದು.

    1000 ಚದರ ಅಡಿಗಳ ಪ್ರದೇಶದಿಂದ ವರ್ಷಕ್ಕೆ 3 ರಿಂದ 5 ಲಕ್ಷ ಲೀಟರ್ ಮಳೆ ನೀರು ಲಭ್ಯವಾಗುತ್ತದೆ ಎಂಬುದು ಲೆಕ್ಕಾಚಾರ. 10 ಸೆಂಟ್ ಹೊಲವು 1,60,000 ಲೀಟರ್ ಮಳೆ ನೀರನ್ನು ಭರಿಸುತ್ತದೆ. ಕಾಡು, ಹೊಲ, ಕೆರೆ, ಬಾವಿಗಳು ಮಳೆ ನೀರನ್ನು ದೀರ್ಘಾವಧಿಯವರೆಗೆ ಸಂಗ್ರಹಿಸಿಡುತ್ತದೆ. ಆದುದರಿಂದ ಮಳೆ ನೀರನ್ನು ಹೆಚ್ಚು ಹೆಚ್ಚು ಸಂಗ್ರಹಿಸಿ ಉಪಯೋಗಿಸಿ ನೆಲದೊಳಗೆ ಇಂಗಿಸಿ ಭೂಗರ್ಭ ಜಲಮಟ್ಟವನ್ನು ಹೆಚ್ಚಿಸಲು ಗಮನಹರಿಸಬೇಕು.

    ಮನೆ ಮಠಗಳಲ್ಲಿ ಜಲಸಂರಕ್ಷಣಾ ವಿಧಾನಗಳು

    ಹಿಂದಿನ ಅವಿಭಕ್ತ ಕುಟುಂಬಗಳು ಇಂದು ನ್ಯೂಕ್ಲಿಯರ್ ಕುಟುಂಬಗಳಾಗಿವೆ. ಒಂದು ಸಣ್ಣ ಮನೆ, ಗೋಡೆ, ಬೇಲಿ ನಿರ್ಮಿಸಿ ಗಡಿಯನ್ನು ಸೃಷ್ಟಿಸಲಾಗುತ್ತದೆ. ನಗರ ಪ್ರದೇಶಗಳಲ್ಲಿ ಮನೆಗಳ ನಾಲ್ಕೂ ಕಡೆ ಗೋಡೆಗಳಿರುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ಮುಂದಿನ ಬಾಗಿಲಿನ ಭಾಗದಲ್ಲಿ ಗೋಡೆ ಇರುತ್ತದೆ. ಇಂತಹ ಸ್ಥಳಗಳಲ್ಲಿ ಗೋಡೆಗಳ ಮೇಲೆ ದ್ವಾರ ಸೃಷ್ಟಿಸಿ ಮಳೆ ನೀರನ್ನು ಹೊರಗೆ ಹಾಕಲಾಗುತ್ತದೆ. ಇದರಿಂದ ಬಾವಿಯಲ್ಲಿ ನೀರಿನ ಸಂಗ್ರಹವು ಕಡಿಮೆಯಾಗುತ್ತದೆ. ಮಲಿನ ಜಲವು ಕೂಡಾ ಇದೇ ರೀತಿಯಲ್ಲಿ ಹರಿಸುವುದರಿಂದ ಪರಿಸರವೂ ಕಲುಷಿತವಾಗುತ್ತದೆ.

    ಹಳೆಯ ಕಾಲದಲ್ಲಿ ಸುರಿಯುವ ನೀರು ಅಡುಗೆ ಮನೆ, ತೊಟ್ಟಿಗೆ, ತೆಂಗಿನ ಮರದ ಬುಡಕ್ಕೆ ಹರಿಸುವ ವ್ಯವಸ್ಥೆ ಇತ್ತು. ಆದರೆ ಇಂದು ಎಲ್ಲ ನೀರನ್ನೂ ರಸ್ತೆಯ ಮೇಲೆ ಹರಿಯ ಬಿಡಲಾಗುತ್ತದೆ. ಇದರಿಂದ ನೀರು ಅಲ್ಲಲ್ಲಿ ಸಂಗ್ರಹವಾಗಿ ಸೊಳ್ಳೆಗಳು ಹೆಚ್ಚಾಗಿ ಬೆಳೆಯುತ್ತವೆ. ಹಲವು ರೀತಿಯ ಜ್ವರಗಳು ಬರಲು ಕಾರಣವಾಗುತ್ತದೆ. ಮನೆ ಮಠಗಳಿಂದ ಹರಿಯುವ ಮಳೆಯ ನೀರನ್ನು ಅಡ್ಡಗಟ್ಟಿದರೆ ಬಾವಿಯಲ್ಲಿ ನೀರು ಹೆಚ್ಚಾಗಿ ಸಂಗ್ರಹವಾಗಬಹುದು.

    ಮನೆಯ ಅಂಗಳ ಮತ್ತು ಹಿತ್ತಿಲನ್ನು ಕಾಂಕ್ರೀಟ್ ಮಾಡಿದರೆ ಮಾತ್ರ ಆಕರ್ಷಕವಾಗುತ್ತದೆ ಎಂಬ ಭಾವನೆ ಇಂದು ಸರ್ವೇ ಸಾಮಾನ್ಯವಾಗಿದೆ. ಮಳೆ ನೀರು ನಮ್ಮ ಹಿತ್ತಿಲಲ್ಲಿ ಇಂಗಬೇಕು. ಆಗ ಬಾವಿಯಲ್ಲಿ ನೀರು ಸಂಗ್ರಹವಾಗುತ್ತದೆ. ಇಲ್ಲದಿದ್ದರೆ ಕುಡಿಯುವ ಶುದ್ಧ ನೀರಿಗೂ ಕಷ್ಟಪಡಬೇಕಾಗಿ ಬರಬಹುದು.

    ಮನೆಯ ಸುತ್ತಲೂ ಜೈವಿಕ ಬೇಲಿಯನ್ನು ನಿರ್ಮಿಸಿದರೆ ಮಳೆಯ ನೀರನ್ನು ಸಂಗ್ರಹಿಸಬಹುದು. ಈ ಮೂಲಕ ಮಳೆ ನೀರನ್ನು ಸಂರಕ್ಷಿಸಬಹುದು. ಮಣ್ಣಿನ ಗೋಡೆಗಳನ್ನು ನಿರ್ಮಿಸಿ ಅವರಲ್ಲಿ ದಾಸವಾಳ, ಹನಿಗುಬ್ಬಿ, ರಾಮಪತ್ರೆಯಂತಹ ಗಿಡಗಳನ್ನು ನಾಟಿ ಮಾಡಿ ಬೆಳೆಸಬಹುದು. ಹಿತ್ತಲಲ್ಲಿ ಸುರಿಯುವ ಮಳೆ ನೀರು ಹೊರಗೆ ಹರಿಯದಂತೆ ಹಿತ್ತಲಿನಲ್ಲಿಯೇ ನೆನೆಸಲು ಅವಕಾಶ ನೀಡಬೇಕು. ಈ ವಿಧಾನವು ಮಣ್ಣಿನ ಗುಣಮಟ್ಟದ ಸುಧಾರಣೆಗೂ ಸಹಾಯಕವಾಗಿದೆ. ಮೇಲ್ಮಟ್ಟದ ಮಣ್ಣು ಫಲವತ್ತಾಗುತ್ತದೆ. ಇದರಿಂದ ಬೆಳೆಗಳಿಗೆಉತ್ತಮ ಮಣ್ಣು ಲಭ್ಯವಾಗುತ್ತದೆ. ಜೊತೆಗೆ ಬಾವಿಯಲ್ಲಿಯೂ ಧಾರಾಳ ನೀರು ಸಂಗ್ರಹವಾಗುತ್ತದೆ.

    ಮಣ್ಣಿನ ತಡೆಗೋಡೆ ಮತ್ತು ಗಿಡಗಳನ್ನು ಬೆಳೆಸುವುದರಿಂದ ಒಳ್ಳೆಯ ರೀತಿಯಲ್ಲಿ ಮಳೆ ನೀರು ಸಂರಕ್ಷಣೆ ಸಾಧ್ಯವಾಗುತ್ತದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಈ ರೀತಿಯ ಜೈವಿಕ ಬೇಲಿಗಳನ್ನು ನಿರ್ಮಿಸಬಹುದಾಗಿದೆ.

    ಮಳೆ ನೀರು ಮನೆಯ ಹಿತ್ತಲಿನಿಂದ ಹೊರಗೆ ಹರಿಯದಿದ್ದರೆ ಹಿತ್ತಲಿನಲ್ಲಿ ಹೆಚ್ಚು ನೀರು ಸಂಗ್ರಹವಾಗಬಹುದು. ಈ ನೀರಿನ ಜಮಾವಣೆಯನ್ನು ತಪ್ಪಿಸಲು ಇಂಗು ಗುಂಡಿಗಳನ್ನು ರಚಿಸಬಹುದು. ಬಾವಿ ಇರುವ ಸ್ಥಳ, ಮಣ್ಣಿನ ಗುಣಮಟ್ಟವನ್ನು ಗಮನದಲ್ಲಿರಿಸಿ ಇಂತಹ ವೇಳೆ ಕೊಯ್ಲು ಗುಂಡಿಗಳನ್ನು ರಚಿಸಬೇಕು. ಪ್ರತಿ ಮನೆಗಳಲ್ಲಿ ಇಂತಹ ಪ್ರಯತ್ನ ಮಾಡಿದರೆ ನಮ್ಮ ಮನೆಗಳಲ್ಲಿರುವ ಬಾವಿಗಳೇ ಶುದ್ಧ ನೀರಿನ ಮೂಲಗಳಾಗಿ ಮಾರ್ಪಾಟಾಗಬಲ್ಲದು.

    ಮೇಲ್ಛಾವಣೆ ಮಳೆ ನೀರು ಸಂಗ್ರಹಣೆ

    ಮನೆಯ ಮೇಲ್ಛಾವಣೆಯಿಂದ ಬೀಳುವ ಮಳೆ ನೀರನ್ನು ಪೈಪುಗಳು ಮತ್ತು ತೊಟ್ಟಿಗಳ ಸಹಾಯದಿಂದ ನೇರವಾಗಿ ಸಂಗ್ರಹಿಸುವ ವಿಧಾನವನ್ನು ಮೇಲ್ಛಾವಣೆ ಮಳೆ ನೀರು ಸಂಗ್ರಹಣೆ (Roof Top Rain Water Harvesting) ಎಂದು ಕರೆಯಲಾಗುತ್ತದೆ.

    ಈ ಪೈಪುಗಳು ಮತ್ತು ತೊಟ್ಟಿಗಳ ಮೂಲಕ ಹರಿದು ಬರುವ ಮಳೆ ನೀರನ್ನು ಫಿಲ್ಟರ್ ವ್ಯವಸ್ಥೆ ಮೂಲಕ ಶುದ್ಧೀಕರಿಸಬಹುದು.

    ಒಬ್ಬ ವ್ಯಕ್ತಿಗೆ ದಿನಕ್ಕೆ 20 ಲೀಟರ್ ನೀರಿನಂತೆ 5 ಜನರಿರುವ ಒಂದು ಕುಟುಂಬಕ್ಕೆ 100 ಲೀಟರ್ ನೀರು ಬೇಕಾಗುತ್ತದೆ ಎಂಬುದು ಸಾಮಾನ್ಯ ಲೆಕ್ಕಾಚಾರ. ಒಂದು ವರ್ಷದಲ್ಲಿ ಸುಮಾರು 100 ದಿನಗಳಷ್ಟು ಬೇಸಿಗೆ ಇರುತ್ತದೆ ಎಂದು ಲೆಕ್ಕ ಹಾಕಿದರೆ, ಪ್ರತಿದಿನ 40 ಲೀಟರ್‌ನಂತೆ 10,000 ಲೀಟರ್ ಸಾಮರ್ಥ್ಯವಿರುವ ಟ್ಯಾಂಕ್ ಬೇಕಾಗುತ್ತದೆ. ನೀರಿನ ಅಗತ್ಯ ಹೆಚ್ಚಾದರೆ ಟ್ಯಾಂಕಿನ ಸಾಮರ್ಥ್ಯವನ್ನು ಹೆಚ್ಚಿಸಬೇಕು.

    ಮೇಲ್ಛಾವಣೆಯಿಂದ ಸಂಗ್ರಹಿಸಿದ ಮಳೆ ನೀರನ್ನು ಶುದ್ಧಿಕರಿಸಿ ಟ್ಯಾಂಕುಗಳಲ್ಲಿ ಸಂಗ್ರಹಿಸಿಟ್ಟರೆ ಅದನ್ನು ಕುಡಿಯಲು ಉಪಯೋಗಿಸಬಹುದು. ಈ ಟ್ಯಾಂಕುಗಳನ್ನು ಸಿಮೆಂಟ್, ಫೈಬರ್ ಅಥವಾ ಫೆರೋ ಸಿಮೆಂಟ್‌ಗಳಿAದ ರಚಿಸಬಹುದಾಗಿದೆ. ಇದರಿಂದಲೇ ಬಾವಿಗೂ ನೀರನ್ನು ಹರಿಯಬಿಟ್ಟು ಬಾವಿಯ ನೀರಿನ ಪ್ರಮಾಣವನ್ನು ಹೆಚ್ಚಿಸಬಹುದು.

    ಭೂಮಟ್ಟದಲ್ಲಿ ಮಳೆ ನೀರು ಸಂರಕ್ಷಣೆ

    ಮಳೆ ನೀರನ್ನು ಮಣ್ಣಿನಲ್ಲಿ ಮತ್ತು ವಿವಿಧ ರೀತಿಯ ನೀರಿನ ಸಂರಕ್ಷಣೆಯ ವಿಧಾನದಲ್ಲಿ ಶೇಖರಿಸಿಡುವುದೇ ಭೂಮಟ್ಟದಲ್ಲಿ ಮಳೆ ನಿರು ಸಂಗ್ರಹಣೆ. ಮಹಾತ್ಮಾಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಾವಿಗಳ ಪುನಶ್ಚೇತನ (ರೀಚಾರ್ಚ್) ಸಾಧ್ಯವಿದೆ. ಸರಾಸರಿ 10,000 ರೂಪಾಯಿ ಖರ್ಚಿನಲ್ಲಿ ಇದನ್ನು ಅಳವಡಿಸಬಹುದು.

    ಮಳೆ ನೀರು ಸಂರಕ್ಷಣೆಯ ಕೊಳಗಳು

    ಮಳೆ ನೀರನ್ನು ನೇರವಾಗಿ ಅಥವಾ ಹರಿದು ಹೋಗುತ್ತಿರುವ ನೀರನ್ನೂ ಸಂಗ್ರಹಿಸಿ ಕುಡಿಯುವ ಹೊರತಾಗಿ ಇತರ ಅಗತ್ಯಗಳಿಗೆ ಬಳಸಬಹುದು. ಇದಕ್ಕಾಗಿ ಕಡಿಮೆ ವೆಚ್ಚದ ಸಾಮಗ್ರಿಗಳನ್ನು, ಟರ್ಪಾಲನ್ನು ಬಳಸಿಯೂ ಸರಳ ನಿರ್ಮಾಣಗಳನ್ನು ಮಾಡಬಹುದು. ಬಾವಿಯ ಸುತ್ತಲೂ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಬಹುದು.

    ಮಳೆ ನೀರನ್ನು ಭೂಮಿಯೊಳಗೆ ಇಂಗಿಸಲು ಕಡಿಮೆ ವೆಚ್ಚದ ಗುಂಡಿಗಳನ್ನು ನಿರ್ಮಿಸಬೇಕು. ಮಳೆಯ ಸಮಯದಲ್ಲಿ ನೀರು ಸಂಗ್ರಹವಾಗಿ ನಿಧಾನವಾಗಿ ಭೂಮಿಯೊಳಗೆ ಇಂಗುವAತೆ ಮಾಡಬಹುದು. 0.6 ಮೀಟರ್ ಅಗಲ ಮತ್ತು ಆಳವಿರುವ ಗುಂಡಿಗಳ ನಿರ್ಮಾಣ ಉತ್ತಮ. ಇದರಿಂದ ಭೂಮಿಯೊಳಗಿನ ನೀರಿನ ಮಟ್ಟವೂ ಹೆಚ್ಚಾಗುತ್ತದೆ.

    ಕೆಂಪು ಕಲ್ಲುಗಳು ಮತ್ತು ಕಲ್ಲಿನ ಕ್ವಾರಿಗಳು

    ಬಳಕೆಯಾಗದ ಕೆಂಪು ಕಲ್ಲಿನ ಗುಂಡಿಗಳು. ಬಾವಿಗಳು ಇತ್ಯಾದಿಗಳನ್ನು ಜಲಾಶಯಗಳಾಗಿ ಪರಿವರ್ತಿಸಬಹುದಾಗಿದೆ. ಮನೆಗಳ ಛಾವಣೆ ಮತ್ತು ಅಂಗಳಗಳ ಮೇಲೆ ಬೀಳುವ ನೀರನ್ನು ಪೈಪ್‌ಗಳು ಅಥವಾ ಕಾಲುವೆಗಳ ಮೂಲಕ ಅಂತಹ ಹೊಂಡ ಮತ್ತು ಕ್ವಾರಿಗಳಿಗೆ ಹರಿಸಿದರೆ ಅದು ಮಣ್ಣಿನಲ್ಲಿ ಇಂಗಲು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಉಪಯುಕ್ತವಾಗುತ್ತದೆ.

    ತಡೆಗೋಡೆಗಳು

    ಹೊಳೆಗಳು ನದಿಗಳ ಕಿರಿದಾದ ಭಾಗಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ನೀರನ್ನು ಉಳಿಸಬಹುದು. ಮರಳು ಚೀಲಗಳು ಮತ್ತು ಇತರ ವಸ್ತುಗಳನ್ನು ಬಳಸುವ ಮೂಲಕ ಇದನ್ನು ಹೆಚ್ಚು ಖರ್ಚಿಲ್ಲದೆ ಪರಿಣಾಮಕಾರಿ ರೀತಿಯಲ್ಲಿ ಮಾಡಬಹದು.

    ಹೊದಿಕೆ ಮಾಡುವುದು

    ಮಣ್ಣನ್ನು ಹೊದಿಕೆ ಮಾಡುವುದರಿಂದ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ. ನೀವು ಒಣ ಎಲೆಗಳು, ಕಸ, ಒಣ ಹುಲ್ಲಿನ ಇತ್ಯಾದಿಗಳನ್ನು ಹೊದಿಕೆ ಮಾಡಲು ಬಳಸಬಹುದು. ಇದು ಮಣ್ಣಿನ ಸಾವಯವ ಪದಾರ್ಥವನ್ನು ಹೆಚ್ಚಿಸುತ್ತದೆ ಮತ್ತು ನೀರು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

    ಅಂತರ್ಜಲದ ಯೋಜನಾಬದ್ಧ ಬಳಕೆ

    ಅಂತರ್ಜಲವನ್ನು ನಾವೆಂದೂ ಅನಿಯಂತ್ರಿತವಾಗಿ ಬಳಸಬಾರದು ಎಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಅದು ತನ್ನ ಮೂಲ ಅವಸ್ಥೆಗೆ ತಲುಪಲು ಸಮಯ ತೆಗೆದುಕೊಳ್ಳುತ್ತದೆ. ಅಂತರ್ಜಲವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಮಾತ್ರ ಅದನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ.

    ಕೊಳವೆ ಬಾವಿಗಳನ್ನು ಕಡಿಮೆ ಮಾಡಬೇಕು

    ಭೂಗರ್ಭ ಜಲವು ನಿರಂತರವಾಗಿ ಕಡಿಮೆಯಾಗುತ್ತಿರುವುದಾಗಿ ಅಧ್ಯಯನಗಳು ತಿಳಿಸುತ್ತವೆ. ಅವೈಜ್ಞಾನಿಕವಾದ ಕೊಳವೆ ಬಾವಿಗಳ ನಿರ್ಮಾಣವು ಇದಕ್ಕೆ ಪ್ರಮುಖ ಕಾರಣವೆನ್ನಲಾಗುತ್ತಿದೆ.

    ಅನಿಯಂತ್ರಿತವಾಗಿ ಕೊಳವೆ ಬಾವಿ ಕೊರೆಯುವುದರ ಮೇಲೆ ನಿಯಂತ್ರಣ ಹೇರಬೇಕು.

    ವಿವಿಧ ಅಲರ್ಟುಗಳು

    ಮಳೆ ಬರುವುದಕ್ಕೆ ಮುಂಚೆಯೇ ಹವಾಮಾನ ವರದಿ ಕೇಂದ್ರವು ವಿವಿಧ ಅಲರ್ಟುಗಳನ್ನು ಘೋಷಿಸುತ್ತದೆ. ನಾಲ್ಕು ಬಣ್ಣಗಳ ಅಲರ್ಟುಗಳನ್ನು ಕೇಂದ್ರ ಹವಾಮಾನ ಇಲಾಖೆ ಹೊರಡಿಸುತ್ತದೆ. ಕೆಂಪು, ಆರೆಂಜ್, ಹಳದಿ ಮತ್ತು ಹಸಿರು. ಮಳೆ ಉಂಟಾಗುವ ಸಾಧ್ಯತೆಯನ್ನು ಗುರುತಿಸಿ ತಯಾರಿ ನಡೆಸಲಿಕ್ಕಾಗಿ ಮತ್ತು ಎಲ್ಲ ವಿಷಯಗಳಲ್ಲೂ ಸಿದ್ಧರಾಗಿರಲು ಈ ಅಲರ್ಟನ್ನು ಘೋಷಿಸಲಾಗುತ್ತದೆ. ಕೆಂಪು ಅಲರ್ಟ್ ಹೊರತುಪಡಿಸಿ ಉಳಿದವುಗಳ ಬಗ್ಗೆ ಹೆಚ್ಚು ಭೀತಿ ಪಡಬೇಕಾದ ಅಗತ್ಯವಿರುವುದಿಲ್ಲ. ಆರೆಂಜ್, ಹಳದಿ ಅಲರ್ಟ್ಗಳನ್ನು ಘೋಷಿಸಿದರೆ ಎಚ್ಚರಿಕೆ ಮತ್ತು ಜಾಗರೂಕತೆ ವಹಿಸಬೇಕು.

    ರೆಡ್ ಅಲರ್ಟ್

    ಅತಿಯಾದ ಮಳೆ ಉಂಟಾಗುವ ಸಾಧ್ಯತೆ ಇದ್ದರೆ ರೆಡ್ ಆಲರ್ಟ್ ಘೋಷಣೆಯಾಗುತ್ತದೆ. 24 ಗಂಟೆಗಳೊಳಗೆ 204.4 ಮಿಲಿ ಮೀಟರ್‌ಗಿಂತ ಹೆಚ್ಚಿದ್ದರೆ ಅತಿ ತೀವ್ರವಾದ ಮಳೆ ಬರುವ ಸಾಧ್ಯತೆ ಇರುತ್ತದೆ.

    ಆರೆಂಜ್ ಅಲರ್ಟ್

    ಭಾರಿ ಮಳೆ ಸಾಧ್ಯತೆ ಇದ್ದರೆ ಆರೆಂಜ್ ಅಲರ್ಟ್ ಘೋಷಣೆಯಾಗುತ್ತದೆ. 24 ಗಂಟೆಗಳೊಳಗೆ 115.6 ಮಿಲಿಮೀಟರ್‌ನಿಂದ 204.4 ಮಿಲಿ ಮೀಟರ್ ವರೆಗೆ ಮಳೆ ಲಭಿಸುವ ಅತಿಯಾದ ಮಳೆ ಎಂಬುದು ಇದರಿಂದ ಅರ್ಥವಾಗುತ್ತದೆ. ಆರೆಂಜ್ ಅಲರ್ಟ್ ಅತಿ ಗಂಭೀರವಾದ ಮುನ್ನೆಚ್ಚರಿಕೆ ನೀಡುತ್ತದೆ. ಸುರಕ್ಷಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು.

    ಎಲ್ಲೋ ಅಲರ್ಟ್

    ಒಮ್ಮೆಲೆ ಸುರಿಯುವ ಸಾಧ್ಯತೆ ಇರುವ ಮಳೆ ಇದ್ದರೆ ಎಲ್ಲೋ ಅಲರ್ಟ್ ಘೋಷಿಸಲಾಗುತ್ತದೆ. 24 ಗಂಟೆಗಳೊಳಗೆ 64.5 ಮಿಲಿ ಲೀಟರ್‌ನಿಂದ 115.5 ಮಿಲಿ ಲೀಟರ್ ವರೆಗೆ ಮಳೆಯಾಗುವ ಸಾಧ್ಯತೆ ಇದ್ದರೆ ಅದನ್ನು ಎಲ್ಲೋ ಅಲರ್ಟ್ ಎನ್ನಲಾಗುತ್ತದೆ. ಸುರಕ್ಷಾ ಕ್ರಮವನ್ನು ಜಾಗೃತಗೊಳಿಸಬೇಕು. ವಾತಾವರಣದ ಮೇಲೆ ನಿಗಾ ಇರಲಿ.

    ಗ್ರೀನ್ ಅಲರ್ಟ್

    ಇದು ಹೆಚ್ಚು ಭಯ ಪಡಬೇಕಾದ ಅವಸ್ಥೆಯಲ್ಲ.

    ಮುಹಮ್ಮದ್ ಮುರ್ಸಿ