Category: ಮುಖಪುಟ

  • ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ 
ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    ಮಹಿಳೆಯರೇ ನಡೆಸುತ್ತಿರುವ ರಾಜ್ಯದ ಏಕೈಕ ಮಹಿಳಾ ಮಾಸಿಕ ಅನುಪಮ ಮಾಸಿಕಕ್ಕೆ 25 ವರ್ಷಗಳು ತುಂಬಿದೆ. ಈ ಹಿನ್ನೆಲೆಯಲ್ಲಿ 25 ವರ್ಷಗಳ ಯಶಸ್ಸಿನ ಹಿನ್ನೋಟವಿರುವ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಗುರುವಾರ ಬಿಡುಗಡೆ ಮಾಡಿದರು.

    ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಪತ್ರಿಕೋದ್ಯಮದಲ್ಲಿ ಮುಸ್ಲಿಂ ಮಹಿಳೆಯರು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಈ ನಡುವೆ ಕೂಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಂ ಸಮುದಾಯದ ಮಹಿಳೆಯರೇ ನಡೆಸುತ್ತಿರುವ ಅನುಪಮ ಮಹಿಳಾ ಮಾಸಿಕವು 25 ವರ್ಷಗಳನ್ನು ಪೂರೈಸಿರುವುದು ಶ್ಲಾಘನೀಯ”ಎಂದು ಅಭಿನಂದನೆ ಸಲ್ಲಿಸಿದರು.

    ಬಳಿಕ ಮಾತನಾಡಿದ ಅನುಪಮ ಸಂಪಾದಕಿ ಶಹನಾಝ್ ಎಂ, “ರಾಜ್ಯದಲ್ಲಿ ಮಹಿಳೆಯರಿಗೆ ಗ್ಯಾರಂಟಿಗಳನ್ನು ಘೋಷಿಸಿ, ಅದನ್ನು ಅನುಷ್ಠಾನಕ್ಕೆ ತಂದ ನಂತರ ಮಹಿಳೆಯರ ಬದುಕಿನಲ್ಲಿ ಹಲವಾರು ಬದಲಾವಣೆ ಆಗಲು ನೆರವಾಗಿದೆ. ಮಹಿಳೆಯರ ಅಭಿವೃದ್ಧಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಅನುಪಮ ಬಳಗ ಹಾಗೂ ಎಲ್ಲ ಮಹಿಳೆಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಬಿಎಂಟಿಸಿ ನಿಗಮದ ಉಪಾಧ್ಯಕ್ಷರಾದ ನಿಕೇತ್ ರಾಜ್ ಮೌರ್ಯ, ಅನುಪಮ ಮಹಿಳಾ ಮಾಸಿಕದ ಉಪಸಂಪಾದಕಿಯರಾದ ಸಮೀನಾ ಉಪ್ಪಿನಂಗಡಿ, ಸಾಜಿದಾ ಮೂಮಿನ್, ಕುಲ್ಸುಮ್ ಅಬೂಬಕ್ಕರ್, ಎಸ್.ಎಂ. ಮುತ್ತಲಿಬ್, ಫೈಝಲ್ ಇಸ್ಮಾಯೀಲ್, ಸಲೀಂ ಬೋಳಂಗಡಿ ಉಪಸ್ಥಿತರಿದ್ದರು.

    ಬಳಿಕ ಅನುಪಮ ಬಳಗವು ಈ ಸ್ಮರಣ ಸಂಚಿಕೆಯನ್ನು ಕರ್ನಾಟಕ ಸರಕಾರದಲ್ಲಿ ವಿವಿಧ ಸ್ಥಾನಗಳನ್ನುಅಲಂಕರಿಸಿರುವ ಹಾಗೂ ಸರಕಾರದ ಅಧಿಕಾರಿಗಳಾಗಿರುವ ಹೊಣೆಗಾರರನ್ನು ಭೇಟಿ ಮಾಡಿ ನೀಡಿತು.

    ಸನ್ಮಾನ್ಯ ನಿಕೇತ್ ರಾಜ್ ಮೌರ್ಯ [ಉಪಾಧ್ಯಕ್ಷರು, (BMTC) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ (KPYCC) ರಾಜ್ಯ ಪ್ರಧಾನ ಕಾರ್ಯದರ್ಶಿ]

    ಸನ್ಮಾನ್ಯ ರಿಜ್ವಾನ್ ಅರ್ಷದ್ [ಸದಸ್ಯರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ಹಾಗೂ MLA ಶಿವಾಜಿ ನಗರ, ಬೆಂಗಳೂರು]

    ಸನ್ಮಾನ್ಯ ನಸೀರ್ ಅಹ್ಮದ್ [ವಿಧಾನ ಪರಿಷತ್ ಸದಸ್ಯ (MLC) ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ]

    ಸನ್ಮಾನ್ಯ ಅಬ್ದುಲ್ ಅಹದ್ [DIG, ಪೊಲೀಸ್ ಉಪ ಮಹಾನಿರೀಕ್ಷಕರು, ಕರ್ನಾಟಕ ಸರಕಾರ]

  • ಬಲೆಗೆ ಬೀಳಿಸುವ ನಾರ್ಸಿಸಿಸ್ಟಿಕ್ ಗಂಡಂದಿರು..!

    ಬಲೆಗೆ ಬೀಳಿಸುವ ನಾರ್ಸಿಸಿಸ್ಟಿಕ್ ಗಂಡಂದಿರು..!


    “ನೀವು ಅತಿಯಾಗಿ ಪ್ರತಿಕ್ರಿಯಿಸುತ್ತಿದ್ದೀರಿ” ಎಂಬುದು ಕುಟುಂಬ ಸಮಾಲೋಚನೆ ಅವಧಿಗಳಲ್ಲಿ ನಿಯಮಿತವಾಗಿ ಕೇಳಿಬರುವ ಮಾತು. ಯಾವಾಗಲು ನೀವು ನನ್ನ ಮೇಲೆಯೇ ಆರೋಪ ಹೊರಿಸುತ್ತೀರಿ ಅಂದರೆ ಯಾವಾಗಲೂ ನನ್ನದೇ ತಪ್ಪಾ. ಇದು ಕೂಡ ನಿರಂತರ ಪಲ್ಲವಿ.”

    ನೀವು ತುಂಬಾ ಭಾವನಾತ್ಮಕ ವಾಗಿರುವ ಸಂದರ್ಭದಲ್ಲಿ ನಿಮ್ಮ ಸಂಗಾತಿ ತನ್ನ ಶರ್ಟ್ ಅಥವಾ ತನ್ನ ಶಾಂಪೂವಿನ ಬಗ್ಗೆ ಮಾತನಾಡುತ್ತಾರೆಯೇ? ಪಾರ್ಟಿಗಳಲ್ಲಿ ನಿಮ್ಮನ್ನು ಒಂಟಿಯಾಗಿ ಬಿಟ್ಟು ಹೋಗುತ್ತಾರೆಯೇ? ಹಾಗಿದ್ದಲ್ಲಿ, ನೀವು ನಾರ್ಸಿಸಿಸ್ಟ್ನೊಂದಿಗೆ ವಾಸಿಸುತ್ತಿದ್ದೀರಿ ಎಂದು ನೀವು ಹೇಳಬಹುದು. ನೀವು ನಾರ್ಸಿಸಿಸ್ಟ್ನೊಂದಿಗೆ ವಾಸಿಸುವಾಗ ನೀವು ಎದುರಿಸಬೇಕಾದ ಮಾನಸಿಕ ಸಮಸ್ಯೆಗಳು ಚಿಕ್ಕದಲ್ಲ. ಅವರು ಯಾವಾಗಲೂ ತಮ್ಮ ಸಂಗಾತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ ಮತ್ತು ವಿವಿಧ ತಂತ್ರಗಳ ಮೂಲಕ ತಮ್ಮ ಸಂಗಾತಿಯನ್ನು ತಮ್ಮ ಗುಲಾಮರನ್ನಾಗಿ ಮಾಡುವ ರೀತಿ ಇವರಲ್ಲಿ ಕಾಣಬಹುದು.

    ಅವರು ತಮ್ಮನ್ನು ತಾವು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ ಮತ್ತು ತಾವು ಮಾಡುವ ಎಲ್ಲವೂ ಸರಿ ಮತ್ತು ಅವರಲ್ಲಿ ಯಾವುದೇ ದೋಷಗಳು ಅಥವಾ ನ್ಯೂನತೆಗಳಿಲ್ಲ ಎಂದು ನಂಬುತ್ತಾರೆ. ಈ ಮನೋಭಾವವನ್ನು ಅವರ ನಡವಳಿಕೆ ಮತ್ತು ಮಾತಿನಲ್ಲಿ ಕಾಣಬಹುದು. ಅವರು ತಾವು ಶ್ರೇಷ್ಠರು ಎಂಬ ಭಾವನೆಯಲ್ಲಿರುತ್ತಾರೆ. ಅವರ ಸಂಗಾತಿಗಳ ಜೀವನವು ದುಃಖಕರವಾಗಿರುತ್ತದೆ. ಪರಸ್ಪರ ಹಂಚಿಕೊಳ್ಳುವ ವರ್ತನೆ ಅವರಲ್ಲಿ ಇರುವುದಿಲ್ಲ ಅವರು ತಮ್ಮ ಸಂಗಾತಿಯನ್ನು ಎಂದಿಗೂ ಪರಿಗಣಿಸುವುದಿಲ್ಲ.

    ನಿಮ್ಮ ಸಂಗಾತಿಯ ಆತ್ಮವಿಶ್ವಾಸವನ್ನು ಕೆಡಿಸುವುದು ಮತ್ತು ಸಂಗಾತಿಯ ಯೋಚನೆಯೇ ತಪ್ಪು ಎಂದು ತೋರಿಸಿ ಕೊಡಲು ಇವರು ಪ್ರಯತ್ನಿಸುತ್ತಾರೆ.

    ಅವರೊಂದಿಗೆ ವಾದಿಸಲು ಪ್ರಯತ್ನಿಸುವುದು ಮತ್ತು ತಪ್ಪುಗಳನ್ನು ಎತ್ತಿ ತೋರಿಸುವುದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಅಂತಹ ವ್ಯಕ್ತಿಗಳಿಂದ ಭಾವನಾತ್ಮಕವಾಗಿ ದೂರವಿರುವುದು ನೋವನ್ನು ತಪ್ಪಿಸಲು ಉತ್ತಮ ಮಾರ್ಗವಾಗಿದೆ. ನಾವು ಸಾಮಾನ್ಯವಾಗಿ ಕೆಲವು ಜನರನ್ನು ಸ್ವಾರ್ಥಿಗಳೆಂದು ಮಾತನಾಡುತ್ತೇವೆ, ಆದರೆ ನಾರ್ಸಿಸಿಸ್ಟಿಕ್ ವ್ಯಕ್ತಿತ್ವ ಹೊಂದಿರುವ ಜನರು ಇದಕ್ಕಿಂತ ಸಂಪೂರ್ಣವಾಗಿ ಭಿನ್ನರಾಗಿರುತ್ತಾರೆ. ಸ್ವಾರ್ಥ ಮತ್ತು ಸಹಾನುಭೂತಿಯ ಕೊರತೆಯು ನೈಸರ್ಗಿಕ ಲಕ್ಷಣವಾಗಿ ಮಾರ್ಪಟ್ಟಾಗ ಮತ್ತು ಎಲ್ಲಾ ಸಂದರ್ಭಗಳಲ್ಲಿಯೂ ಸ್ಪಷ್ಟವಾಗಿ ಕಂಡುಬAದಾಗ, ಅದು ನಾರ್ಸಿಸಿಸ್ಟಿಕ್ ವ್ಯಕ್ತಿಯ ಸಂಗಾತಿಗಳಲ್ಲಿ ಆತಂಕ, ಖಿನ್ನತೆ ಮತ್ತು ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥತೆಯನ್ನು ಉಂಟುಮಾಡುವ ಸಾಧ್ಯತೆಯಿದೆ.

    ಮದುವೆಗೆ ಮುಂಚೆ ಚೆನ್ನಾಗಿದ್ದು ನಂತರ ಪ್ರತಿದಿನ “ನಿನ್ನ ದೇಹವು ಸುಂದರವಾಗಿಲ್ಲ, ಬಣ್ಣವಿಲ್ಲ, ನನಗೆ ಸರಿಹೊಂದುವುದಿಲ್ಲ” ಎಂದು ಹತ್ತು ವರ್ಷಗಳಿಂದ ಹೇಳುತ್ತಾ ಮಾನಸಿಕ ಒತ್ತಡ ಹೇರುತ್ತಿದ್ದ ಒಬ್ಬನ ಹೆಂಡತಿ ಕೌನ್ಸೆಲಿಂಗ್‌ಗೆ ಬಂದಿದ್ದಳು. ಮಕ್ಕಳ ಬಗ್ಗೆ ಯೋಚಿಸುವುದರಿಂದ ಮಾತ್ರ ತಾನು ತಡೆದುಕೊಳ್ಳುತ್ತಿದ್ದೇನೆ ಎಂದು ಅವಳು ಹೇಳುತ್ತಾಳೆ.

    ಭಾರತದಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ, 20 ರಿಂದ 30 ವರ್ಷ ವಯಸ್ಸಿನ 100 ಪುರುಷರ ಸಮೀಕ್ಷೆಯನ್ನು ನಡೆಸಿ ನಾಸಿಸ್ಟಿಕ್ ಸ್ವಭಾವ ಮತ್ತು ಹಿಂಸೆಯ ನಡುವೆ ಸಂಬAಧ ಇದೆಯೇ ಎಂದು ಅಧ್ಯಯನ ನಡೆಸಿದಾಗ ನಾಸಿಸ್ಟಿಕ್ ಸ್ವಭಾವವಿರುವ ಜನರಲ್ಲಿ ಶತ್ರುತ್ವ ಮನೋಭಾವ ಮತ್ತು ಮೌಖಿಕ ಮತ್ತು ದೈಹಿಕ ಆಕ್ರಮಣಶೀಲತೆ ಹೆಚ್ಚು ಸಾಮಾನ್ಯವಾಗಿದೆ ಎಂದು ಕಂಡುಬAದಿದೆ.

    ಇಸ್ಲಾಮಿಕ್ ದೃಷ್ಟಿಕೋನ
    ಇಸ್ಲಾಮಿನಲ್ಲಿ ವಿವಾಹವು ಸ್ಥಿರ ಮತ್ತು ಸಾಮರಸ್ಯದ ಸಮಾಜದ ಮೂಲಾಧಾರವಾಗಿ ಕಾರ್ಯನಿರ್ವಹಿಸುವ ಪವಿತ್ರ ಸಂಬAಧವಾಗಿದೆ. ಇದು ಪರಸ್ಪರ ಗೌರವ, ಘನತೆ ತತ್ವಗಳನ್ನು ಆಧರಿಸಿದೆ. ಕುರ್ ಆನ್, ಹದೀಸ್ ಮತ್ತು ಇಸ್ಲಾಮಿ ಶರೀಯತ್ ಒದಗಿಸಿದ ಮಾರ್ಗಸೂಚಿಗಳು ಇಬ್ಬರೂ ಸಂಗಾತಿಗಳು ಅಲ್ಲಾಹನಿಗೆ ಇಷ್ಟವಾಗುವ ರೀತಿಯಲ್ಲಿ ತಮ್ಮ ಕರ್ತವ್ಯಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸುತ್ತದೆ. ಕುರ್‌ಆನ್‌ನಲ್ಲಿ ಸೂಚಿಸಿದಂತೆ, ಗಂಡನು ತನ್ನ ಹೆಂಡತಿಯನ್ನು ದಯೆ ಮತ್ತು ಗೌರವದಿಂದ ನಡೆಸಿಕೊಳ್ಳಬೇಕು:

    “ನೀವು ಅವರೊಂದಿಗೆ ಉತ್ತಮ ರೀತಿಯಿಂದ ಜೀವನ ನಡೆಸಿರಿ. ಅವರು ನಿಮಗೆ ಅಪ್ರಿಯರಾಗಿದ್ದರೆ ಒಂದು ವಸ್ತುವು ನಿಮಗೆ ಅಪ್ರಿಯವಾಗಿದ್ದರೂ ಅಲ್ಲಾಹನು ಅದರಲ್ಲೇ ಅತಿ ಹೆಚ್ಚು ಒಳಿತನ್ನಿರಿಸಿರಲೂಬಹುದು.” (4:19). ಪ್ರವಾದಿ ಮುಹಮ್ಮದ್(ಸ) ತಮ್ಮ ವಿದಾಯ ಧರ್ಮೋಪದೇಶದಲ್ಲಿಯೂ ಇದನ್ನು ಒತ್ತಿ ಹೇಳಿದರು.
    “ಮಹಿಳೆಯರ ವಿಷಯದಲ್ಲಿ ಅಲ್ಲಾಹನಿಗೆ ಭಯಪಡಿರಿ! ನಿಜಕ್ಕೂ, ನೀವು ಅವರನ್ನು ಅಲ್ಲಾಹನ ರಕ್ಷಣೆಯಲ್ಲಿ ತೆಗೆದುಕೊಂಡಿದ್ದೀರಿ. ಅಲ್ಲಾಹನ ಮಾತಿನ ಪ್ರಕಾರ ಅವರೊಂದಿಗೆ ಲೈಂಗಿಕ ಸಂಬಂಧವು ನಿಮಗೆ ಕಾನೂನುಬದ್ಧವಾಗಿದೆ. ನಿಮ್ಮ ಹೆಂಡತಿಯರ ಮೇಲೆ ನಿಮಗೆ ಹಕ್ಕುಗಳಿವೆ ಮತ್ತು ಅವರಿಗೂ ನಿಮ್ಮ ಮೇಲೆ ಹಕ್ಕುಗಳಿವೆ. ಗಂಡ ಮತ್ತು ಹೆಂಡತಿ ಇಬ್ಬರೂ ಪರಸ್ಪರ ಭಾವನಾತ್ಮಕ ಮತ್ತು ದೈಹಿಕ ಬೆಂಬಲವನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ. ಪ್ರವಾದಿ(ಸ) ಹೇಳಿದ್ದಾರೆ: ನಿಮ್ಮಲ್ಲಿ ತನ್ನ ಪತ್ನಿಯೊಂದಿಗೆ ಅತ್ಯುತ್ತಮವಾಗಿ ವರ್ತಿಸುವವನೇ ನಿಮ್ಮಲ್ಲಿ ಉತ್ತಮರು.

    ವ್ಯಕ್ತಿತ್ವ ಅಸ್ವಸ್ಥತೆಗಳಿಗೆ ಆನುವಂಶಿಕ ಅಂಶಗಳು ಕಾರಣವಾಗಿದ್ದರೂ, ಜೀವನದ ಸಂದರ್ಭಗಳು ಮತ್ತು ಅನುಭವಗಳು ಸಹ ಜನರನ್ನು ಅವುಗಳ ಕಡೆಗೆ ಕರೆದೊಯ್ಯುತ್ತವೆ. ಎರಡು ಮತ್ತು ನಾಲ್ಕು ವರ್ಷದೊಳಗೆ ಸಹಾನುಭೂತಿ ಅಥವಾ ಕರುಣೆಯನ್ನು ತೋರಿಸದ ಮಕ್ಕಳನ್ನು ಗುರುತಿಸಲು ಪೋಷಕರು ಸಿದ್ಧರಾಗಿರಬೇಕು ಮತ್ತು ಭವಿಷ್ಯದ ಪೀಳಿಗೆಗೆ ನೈತಿಕತೆಯ ಪ್ರಜ್ಞೆಯನ್ನು ಬೆಳೆಸಲು ವೃತ್ತಿಪರರಿಂದ ಸಮಯೋಚಿತ ಸಹಾಯವನ್ನು ನೀಡಬೇಕು.

    ಗುರುತಿಸುವುದು ಹೇಗೆ?
    1. ಸಹಾನುಭೂತಿಯ ಕೊರತೆ – ಸಂಗಾತಿಯ ಭಾವನೆಗಳು, ಅಗತ್ಯಗಳು ಮತ್ತು ಆಸೆಗಳನ್ನು ಗುರುತಿಸಲು ಅಥವಾ ಸಮರ್ಪಕವಾಗಿ ಪರಿಗಣಿಸಲು ಪ್ರಯತ್ನಿಸದಿರುವುದು.

    2. ಅವರು ತಮ್ಮದೇ ಆದ ಸಾಧನೆಗಳು ಮತ್ತು ಸಾಮರ್ಥ್ಯಗಳನ್ನು ಉತ್ಪ್ರೇಕ್ಷಿಸುತ್ತಾರೆ ಮತ್ತು ತಮ್ಮ ಸಂಗಾತಿಯ ಸಾಮರ್ಥ್ಯಗಳನ್ನು ಕಡಿಮೆ ಅಂದಾಜು ಮಾಡುತ್ತಾರೆ.

    3. ನಾರ್ಸಿಸಿಸ್ಟ್ಗರು ಸಾಮಾನ್ಯವಾಗಿ ಕಡಿಮೆ ಸ್ವಾಭಿಮಾನವನ್ನು ಹೊಂದಿರುತ್ತಾರೆ. ಪರಿಣಾಮವಾಗಿ, ಅವರು ನಿರಂತರ ಹೊಗಳಿಕೆ, ಗಮನ ಮತ್ತು ವಿಶೇಷ ಪರಿಗಣನೆಯನ್ನು ಬಯಸುತ್ತಾರೆ. ಅವರಿಗೆ ಇದು ಸಿಗದಿದ್ದಾಗ, ಅವರು ಕೋಪಗೊಳ್ಳಬಹುದು ಅಥವಾ ಅಸಹನೆ ಹೊಂದಬಹುದು.

    4. ರಾಜಿ ಮಾಡಿಕೊಳ್ಳದೆ ಎಲ್ಲಾ ಅಗತ್ಯಗಳನ್ನು ಪೂರೈಸಬೇಕು ಎಂಬ ಹಠ.

    5. ಅವರು ಸನ್ನಿವೇಶಗಳು ಮತ್ತು ಜನರನ್ನು ನಿಯಂತ್ರಿಸುತ್ತಾರೆ ಮತ್ತು ತಮ್ಮ ಸ್ವಂತ ಲಾಭಕ್ಕಾಗಿ ಅವರನ್ನು ಭಾವನಾತ್ಮಕವಾಗಿ ಅಪರಾಧಿ ಅಥವಾ ಪಶ್ಚಾತ್ತಾಪಭಾವವಿಲ್ಲದೆ. ಬ್ಲ್ಯಾಕ್‌ಮೇಲ್ ಮಾಡುತ್ತಾರೆ,

    6 ಸೌಮ್ಯ ಮತ್ತು ಸಕಾಲಿಕ ಟೀಕೆಗಳು ಸಹ ಅವರನ್ನು ಕೋಪಗೊಳ್ಳುವಂತೆ ಮಾಡುತ್ತವೆ ಮತ್ತು ಇತರರ ಮೇಲೆ ವೈಯಕ್ತಿಕವಾಗಿ ದಾಳಿ ಮಾಡುತ್ತವೆ. ಅವರು ತಮ್ಮ ಕ್ರಿಯೆಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಅವರು ತಮ್ಮ ಕ್ರಿಯೆಗಳಿಗೆ ಇತರರನ್ನು ದೂಷಿಸುತ್ತಾರೆ.

    7. ಅತಿಯಾದ ನಿಯಂತ್ರಣ – ಅವರು ತಮ್ಮ ಸಂಗಾತಿಯ ವೈಯಕ್ತಿಕ, ಆರ್ಥಿಕ ನಿರ್ಧಾರಗಳು ಮತ್ತು ಸಾಮಾಜಿಕ ಜೀವನದ ಮೇಲೆ ನಿರ್ಬಂಧಗಳನ್ನು ವಿಧಿಸುತ್ತಾರೆ. ಅವರು ಆಗಾಗ್ಗೆ ತಮ್ಮ ಸಂಗಾತಿಯ ಸ್ನೇಹಿತರು ಮತ್ತು ಕುಟುಂಬವನ್ನು ಟೀಕಿಸುತ್ತಾರೆ, ಅವರನ್ನು ಪ್ರತ್ಯೇಕಿಸಲು ಮತ್ತು ತನ್ನ ಮೇಲೆ ಹೆಚ್ಚು ಅವಲಂಬಿತರಾಗುವAತೆ ಮಾಡಲು ಪ್ರಯತ್ನಿಸುತ್ತಾರೆ.

    8. ಅವರು ಸಾರ್ವಜನಿಕವಾಗಿ ತುಂಬಾ ಆತ್ಮವಿಶ್ವಾಸ ಮತ್ತು ಆಕರ್ಷಕವಾಗಿ ಕಾಣಿಸಬಹುದು, ಆದರೆ ಖಾಸಗಿಯಾಗಿ, ಅವರು ನಿಮ್ಮನ್ನು ಅತಿಯಾಗಿ ಟೀಕಿಸಲು, ತಿರಸ್ಕರಿಸಲು ಅಥವಾ ನಿಮ್ಮನ್ನು ಕೆಟ್ಟದಾಗಿ ಕಾಣುವಂತೆ ಮಾಡಲು ಹಿಂಜರಿಯುವುದಿಲ್ಲ.

  • ಮಹಿಳೆ ಮಸೀದಿ ಪ್ರವೇಶಿಸಬಹುದೇ..?

    ಮಹಿಳೆ ಮಸೀದಿ ಪ್ರವೇಶಿಸಬಹುದೇ..?

    ಇಸ್ಲಾಮ್ ಭಾರತಕ್ಕೆ ಆಗಮಿಸಿ ಸಾವಿರ ವರ್ಷಗಳೇ ಕಳೆದಿದ್ದರೂ ಅದರ ಧರ್ಮಗ್ರಂಥ ಕುರ್‌ಆನ್ ಮತ್ತು ಆರಾಧನಾ ಕೇಂದ್ರವಾಗಿರುವ ಮಸೀದಿಗಳು, ಉಪವಾಸ ವ್ರತ, ಹಬ್ಬಗಳು ಮತ್ತು ಮುಸ್ಲಿಮರ ಆಚಾರ-ವಿಚಾರಗಳೆಲ್ಲ ಈ ದೇಶಕ್ಕೆ ತೆರೆದುಕೊಂಡಿರುವುದು ಬಹಳ ಕಡಿಮೆ. ಇದರಿಂದಾಗಿ ಸಮಾಜದಲ್ಲಿ ಮಸೀದಿಗಳ ಬಗ್ಗೆ, ಮುಸ್ಲಿಮರ ಬಗ್ಗೆ, ಅವರ ಗ್ರಂಥದ ಬಗ್ಗೆ ಮತ್ತು ಸಾಂಸ್ಕೃತಿಕ, ಸಂಗತಿಗಳ ಬಗ್ಗೆ ಹಲವು ಅನುಮಾನ, ಕುತೂಹಲಗಳುಳ್ಳ ಅಭಿಪ್ರಾಯ ಸೃಷ್ಟಿಯಾಗುವುದಕ್ಕೆ ಕಾರಣವಾಗಿದೆ. ಆರೋಪಗಳಿಗೂ ಕೊರತೆ ಇಲ್ಲ. ಮುಚ್ಚಿಟ್ಟ ಯಾವುದೇ ವಸ್ತು ಕುತೂಹಲಕ್ಕೂ ಅನುಮಾನಗಳಿಗೂ ಕಾರಣವಾಗುವುದು ಸಹಜ. ಆದ್ದರಿಂದಲೇ ಈ ವಿಷಯದಲ್ಲಿ ಸಮಾಜವನ್ನು ವಿಶ್ವಾಸಕ್ಕೆ ಪಡಕೊಳ್ಳಬೇಕು ಮತ್ತು ಎಲ್ಲವುಗಳು ಬಗ್ಗೆ ತೆರೆದ ಮನಸ್ಸಿನಿಂದ ಸಮಾಜಕ್ಕೆ ತಿಳಿಸಬೇಕು ಎಂದು ತೀರ್ಮಾನಿಸಿ “ಮಸೀದಿ ದರ್ಶನ” ಎಂಬ ಕಾರ್ಯಕ್ರಮಗಳನ್ನು ದೇಶದ ಹಲವೆಡೆ ಏರ್ಪಡಿಸಲಾಯಿತು.

    ಮಸೀದಿ ಹೇಗಿದೆ, ಏನಿದೆ, ಏನಿಲ್ಲ, ಅಲ್ಲಿ ನಡೆಯುವ ಪ್ರಾರ್ಥನೆ ಹೇಗಿರುತ್ತದೆ, ಅದನ್ನು ಯಾಕೆ ಕಟ್ಟಲಾಯಿತು, ಮಸೀದಿಯಿಂದ ಕೊಡುವ ಅಝಾನ್ (ಪ್ರಾರ್ಥನಾ ಕರೆ) ಹಿನ್ನಲೆ ಏನು, ಅದನ್ನು ಕೊಡುವುದಕ್ಕೆ ಕಾರಣ ಏನು, ಅದರ ಅರ್ಥ ಏನು, ವುಝೂ (ಅಂಗಸ್ನಾನ) ಹೇಗೆ ಮಾಡುವುದು, ಇತ್ಯಾದಿ ಹಲವು ಸಂಗತಿಯನ್ನು ದೇಶ ಬಾಂಧವರಿಗಾಗಿ ತಿಳಿಸುವ ಅಗತ್ಯ ಇದೆ.

    ಈ ಹಿನ್ನಲೆಯಲ್ಲಿ ಮಂಗಳೂರಿನ ಕುದ್ರೋಳಿ ಎಂಬ ಪ್ರದೇಶದಲ್ಲಿ ಜಾಮಿಯಾ ಮಸೀದಿಯನ್ನು ದರ್ಶನಕ್ಕಾಗಿ ತೆರೆದಿಡಲಾಯಿತು. ಸರ್ವ ಧರ್ಮೀಯರು ಈ ಒಂದು ಅವಕಾಶವನ್ನು ಪಡೆದುಕೊಂಡರು. ಸಂದರ್ಶಕರಿಗೆ ಕಾರ್ಯಕರ್ತರಾದ ಪುರುಷರೂ, ಮಹಿಳೆಯರೂ ಸಂಭ್ರಮದಿಂದ ವಿವರಣೆ ನೀಡಿದರು. ಸಮಾಜ ಸೇವಕರು, ಸಾಹಿತಿಗಳು, ರಾಜಕೀಯದಲ್ಲಿರುವವರು, ವಿದ್ಯಾರ್ಥಿಗಳು, ಸಾಮಾನ್ಯ ನಾಗರಿಕರು ಮಸೀದಿಯ ಸಂದರ್ಶನ ಮಾಡಿದರು. ಮಸೀದಿಯಲ್ಲಿ ಅಂದು ನಡೆದ ಸಾಮೂಹಿಕ ನಮಾಝ್‌ನ ಶಿಸ್ತುಬದ್ಧ ಸಾಲು, ಭಕ್ತಿಯ ವಾತಾವರಣ ನೋಡಿದರು. ಮಸೀದಿ ಎಂಬುವುದು ನಿಗೂಢ ಸ್ಥಳ ಎಂಬ ಭಾವನೆ ಇದ್ದ ಹಲವರಿಗೆ ಅಲ್ಲಿಯ ತೆರೆದ ಪ್ರಾರ್ಥನಾ ಸ್ಥಳದ ಪವಿತ್ರತೆ ನೋಡಿ ಮನಸ್ಸು ತಿಳಿಯಾಗಿತ್ತು. ದೇಶಬಾಂಧವರು ಸಂಭ್ರಮದಿAದ ಒಳಗೆ ಓಡಾಡಿ ಪ್ರತಿಯೊಂದು ಸ್ಥಳವನ್ನೂ ವೀಕ್ಷಿಸಿ ವಿವರ ಪಡೆದುಕೊಂಡದ್ದು ಮಾತ್ರವಲ್ಲ ಟಿ.ವಿ. ಮಾಧ್ಯಮಗಳಿಗೆ ಸೋಶಿಯಲ್ ಮೀಡಿಯಾಗಳ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಅನುಭವಗಳನ್ನು ಹಂಚಿಕೊAಡರು. ಬಹಳಷ್ಟು ಗಣ್ಯ ಪುರುಷರೂ ಆಗಮಿಸಿದ್ದರು.

    ಇಲ್ಲಿ ಮುಖ್ಯವಾಗಿ ಪುರುಷರಿಂದ ಹಾಗೂ ಮಹಿಳೆಯರಿಂದ ಬಂದ ಒಂದು ಪ್ರಶ್ನೆ ಮಸೀದಿಗೆ ಮಹಿಳೆಯರಿಗೆ ಪ್ರವೇಶ ಇದೆಯೇ?” ಎಂದಾಗಿತ್ತು. ಯಾಕಾಗಿ ಒಟ್ಟಿಗೆ ನಮಾಝಿಲ್ಲ ಎಂದಾಗಿತ್ತು. ಸಂದರ್ಶಕರ ಪ್ರಶ್ನೆ ನಮಗೆ ಅನಿರೀಕ್ಷಿತವೂ ಆಗಿರಲಿಲ್ಲ. ಸಹಜವಾಗಿಯೇ ಅವರ ಮನಸ್ಸಿನಲ್ಲಿದ್ದ ಸಂಶಯ! ಆಕ್ಷೇಪನೂ ಇದಾಗಿತ್ತು. ಮಸೀದಿ ಒಳಗೆ ಅಂದು ಇದ್ದ ಅಪಾರ ಸಂಖ್ಯೆಯ ಬುರ್ಖಾಧಾರಿಣಿಗಳ ಸಂಖ್ಯೆಯನ್ನು ನೋಡಿ ಅವರಿಗೂ ಆಶ್ಚರ್ಯವಾಗಿತ್ತು.

    ನಮ್ಮ ಪ್ರವಾದಿ ಮುಹಮ್ಮದ್(ಸ)ರ ಬಳಿ ಇದೇ ಪ್ರಶ್ನೆಯನ್ನು ಸಾವಿರದ ನಾನೂರೈವತ್ತು ವರ್ಷದ ಹಿಂದೆ ಅಂದಿನ ಮಹಿಳೆಯರು ಕೇಳಿದ್ದರು. ಆಗ ಪ್ರವಾದಿಯವರು(ಸ) ಹೇಳಿದರು, ದೇವನ ಆರಾಧಾನಾಲಯ ಎಲ್ಲರಿಗೂ ಸೇರಿದ್ದು. ಪುರುಷರಂತೆಯೇ ಮಹಿಳೆಯರಿಗೂ ಮಸೀದಿಗೆ ಬರುವ ಸ್ವಾತಂತ್ರ್ಯ ಇದೆ. ಆದ್ರೆ ಮಹಿಳೆಯರಿಗೆ ಈ ಬಗ್ಗೆ ಕಡ್ಡಾಯ’ ವಿಧಿಸಲಾಗಿಲ್ಲ. ಪುರುಷರು ಐದು ಹೊತ್ತು ಮಸೀದಿಗೆ ಬಂದು ನಮಾಝ್ ಮಾಡುವಂತೆ ಮಹಿಳೆಯರಿಗೂ ಒಂದು ವೇಳೆ ಕಡ್ಡಾಯ ಮಾಡಿರುತ್ತಿದ್ದರೆ ಮಹಿಳೆಯರಿಗೆ ಅದು ಕಷ್ಟಕರವಾಗುತ್ತಿತ್ತು. ಕಾರಣ ಪ್ರಥಮವಾಗಿ ಮಹಿಳೆಯರ ದೈಹಿಕವಾದ ಮಾಸಿಕ ಮುಟ್ಟು, ಬಾಣಂತನ, ಬಸುರಿ ಇತ್ಯಾದಿ ಆರೋಗ್ಯ ಸಮಸ್ಯೆಗಳು ಮಹಿಳೆಯರಿಗೆ ಮಸೀದಿಯ ಪ್ರಾರ್ಥನೆಗೆ ಅನುಕೂಲವಾಗಿರದು. ಮಹಿಳೆಯರು ಮಸೀದಿಗೆ ಹೋಗಿ ಪ್ರಾರ್ಥನೆ ಮಾಡಲು ಬಯಸಿದರೆ ಅವರನ್ನು ತಡೆಯಬಾರದು, ಹೋಗಲು ಇಷ್ಟ ಪಡದಿದ್ದರೆ ಅವರನ್ನು ಒತ್ತಾಯಿಸಲೂ ಬಾರದು, ಅವರಿಗೆ ಮಸೀದಿಗಿಂತಲೂ ಮನೆಯ ಒಳ ಕೋಣೆಯೇ ಹೆಚ್ಚು ಅನುಕೂಲ ಆಗಿರುತ್ತದೆ” ಎಂದರು ಪ್ರವಾದಿ(ಸ).

    ರಾಜಕಾರಣಿಗಳು ಮತ್ತು ಧರ್ಮದ್ವೇಷಿಗಳು “ಮಸೀದಿಗೆ ಮುಸ್ಲಿಮ್ ಮಹಿಳೆಯರಿಗೆ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ” ಎಂದು ಅಪಪ್ರಚಾರ ಮಾಡುತ್ತಾರೆ. ಇಂತಹ ತಪ್ಪು ಭಾವನೆಯನ್ನು ಹೋಗಲಾಡಿಸಲು ಈ ಮಸೀದಿ ಸಂದರ್ಶನ ಕಾರ್ಯಕ್ರಮ ಪ್ರಯೋಜನವಾಗುತ್ತದೆ. ಪುರುಷರೊಂದಿಗೇ ಯಾಕೆ ಮಹಿಳೆಯರಿಗೂ ಒಂದೇ ಜಾಗದಲ್ಲಿ ನಮಾಝ್‌ಗೆ ಅವಕಾಶ ಇರಲ್ಲ… ಎಂದು ಓರ್ವರು ಕೇಳಿದರು. ಅದಕ್ಕೆ ನಮ್ಮ ಉತ್ತರ ಮುಸ್ಲಿಮರ ನಮಾಝ್ ರೀತಿ ತಲೆ ಬಾಗುವುದು ಮತ್ತು ನೆಲಕ್ಕೆ ಸಾಷ್ಟಾಂಗವಾಗಿ ಎರಗುವ ಶೈಲಿಯು ಪುರುಷರು ಮುಂದೆ ನಿಂತು ನಮಾಝ್ ಮಾಡಿದರೆ ಮಹಿಳೆಯರು ಪುರುಷರ ಹಿಂದೆ ನಿಂತು ನಮಾಝ್ ಮಾಡುವುದು ಹೆಚ್ಚು ಅನುಕೂಲ ಹಾಗೂ ಒಳಿತು ಅನಿಸುತ್ತದೆ. ಮಹಿಳೆಯರು ಯಾವುದೇ ಸಂಕೋಚ, ಮುಜುಗರ, ಸಂದೇಹದ ಒದ್ದಾಟವಿಲ್ಲದೆ ನಿರಾಳವಾಗಿ ನಮಾಝ್ ಮಾಡಬಹುದು. ಹೆಚ್ಚಾಗಿ ಪರ್ಧಾಧಾರಿಣಿ ಮಹಿಳೆಯರು ಪ್ರತ್ಯೇಕವಾಗಿಯೇ ನಮಾಝ್ ನಿರ್ವಹಿಸಲು ಬಯಸುತ್ತಾರೆ. ಆರಾಧನೆಗೆ ಯಾವುದೇ ತೊಂದರೆ ಆಗದೇ ಇರುವುದು ಮುಖ್ಯ.

    ಮಸೀದಿಯನ್ನು ಒಂದು ನಿಗೂಢವಾಗಿ ಎಂದೂ ಇರಿಸಬಾರದು, ನಾವು ಪರಸ್ಪರ ಎಲ್ಲರ ಧರ್ಮದ ಆಚಾರ, ವಿಚಾರವನ್ನು ಅರಿಯಬೇಕು. ನಮ್ಮ ನಡುವೆ ಇರುವ ಒಂದು ಭೀತಿಯ ಗೋಡೆ ತೊಲಗಬೇಕು, ಇಗರ್ಜಿ, ಮಂದಿರ, ದೇವಸ್ಥಾನ ಎಲ್ಲರ ಪಾಲಿಗೂ ತೆರೆದ ಮನೆಯಾಗಬೇಕು. ಒಬ್ಬಕ್ರೈಸ್ತ ಸಮುದಾಯದ ಸಹೋದರಿ ಉಪನ್ಯಾಸಕಿ ಕೇಳಿದರು, “ನಿಮ್ಮ ಮಸೀದಿಯಲ್ಲಿ ಕೇವಲ ಆರಾಧನೆ ಮಾತ್ರವೇ ನಿರ್ವಹಿಸುವುದೇ? ಯಾಕೆ ಇಲ್ಲಿ ಸಮಾಜಕ್ಕೆ ಒಳಿತಾಗುವ ಕೆಲಸಕ್ಕೆ ಪ್ರೇರಣೆ ಕೊಡಬಾರದು, ಉದಾ: ಮುಸ್ಲಿಮ್ ಸಮುದಾಯದ ಯುವಕರು ಹೆಚ್ಚಾಗಿ ಡ್ರಗ್ಸ್ ಪೀಡಿತರೆಂಬ ಅಪವಾದ ಇದೆ. ಇಂತಹ ಡ್ರಗ್ಸ್’ನ ಅಪಾಯದ ಬಗ್ಗೆ ಇಲ್ಲಿ ಏನೂ ಕ್ರಮ ಕೈಗೊಳ್ಳುವುದಿಲ್ಲವೇ? ಎಂದರು. ನಾವು ಇದಕ್ಕೆ ಅವರಿಗೆ ಹೇಳಿದೆವು, “ಮಸೀದಿಯಲ್ಲಿ ಕೇವಲ ನಮಾಝ್ ಮಾತ್ರವಲ್ಲ, ಶುಕ್ರವಾರದ ದಿವಸ ಜುಮಾ ಪ್ರವಚನ ಇರುತ್ತದೆ. ಅಂದು ಸಾಮಾಜಿಕವಾದ ವಿಷಯಗಳ ಉಪನ್ಯಾಸ ಕೂಡಾ ಇರುತ್ತದೆ. ಸಮಾಜದಲ್ಲಿದ್ದ ಕೆಡುಕಿನ ವಿರುದ್ಧ ಜನ ಜಾಗೃತಿ ಹುಟ್ಟಿಸುವ ಪ್ರವಚನ ಕಾರ್ಯ ನೀಡಲ್ಪಡುತ್ತದೆ.

    ಅದೇ ರೀತಿ ಮಸೀದಿಯಲ್ಲಿ ಸಮುದಾಯದ ಕೌಟುಂಬಿಕ ಸಮಸ್ಯೆಗಳ ಕೌನ್ಸಿಲಿಂಗ್ ಕೂಡಾ ಇಲ್ಲಿಯ ಧರ್ಮ ಗುರುಗಳು ನಡೆಸುತ್ತಾರೆ. ಡ್ರಗ್ಸ್ನ ನಿರ್ಮೂಲನೆ ಜನ ಜಾಗೃತಿ ಕಾರ್ಯಕ್ರಮವನ್ನು ಎಲ್ಲಾ ಕಡೆ ಮುಸ್ಲಿಮ್ ಸಮುದಾಯದ ಸಮಾಜ ಸೇವಾ ಘಟಕದವರು ನಡೆಸುತ್ತಾ ಬಂದಿದ್ದಾರೆ ಎಂದೆವು.ಮಸೀದಿ’ ಎಂಬುವುದು ದೇವನ ಸ್ತುತಿ, ಸ್ತೋತ್ರ ಮಾಡುವ ಪವಿತ್ರ ಸ್ಥಳ. ನಿರ್ಮಲ ಮನಸ್ಸು ಎಲ್ಲರಲ್ಲೂ ಮುಖ್ಯ. ಇಲ್ಲಿ ಮದ್ರಸಾ' ಇದೆ. ಈಮದ್ರಸಾ’ದಲ್ಲಿ ಮಕ್ಕಳಿಗೆ ಕುರ್‌ಆನ್ ಮತ್ತು ಧಾರ್ಮಿಕ ವಿಧಿ, ವಿಧಾನ ಕಲಿಸಲಾಗುತ್ತದೆ. ಒಳಿತು ಮತ್ತು ಕೆಡುಕಿನ ವ್ಯತ್ಯಾಸ ಕಲಿಸಲಾಗುತ್ತದೆ. ಸತ್ಯ, ನ್ಯಾಯ, ನೀತಿ ಕಲಿಸಲಾಗುತ್ತದೆ. ಮೊಸರಿನಲ್ಲೂ ಕಲ್ಲು ಹುಡುಕುವ ದುಷ್ಟ ಮನಃಸ್ಥಿತಿಯನ್ನು ತೊರೆದಾಗಲೇ ನಾವು ನೈಜ ಮಾನವರಾಗಲು ಸಾಧ್ಯ ಅಲ್ಲವೇ?

    ಸಾರ್ವಜನಿಕರಿಗೆ ಮಸೀದಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಇಂತಹ ಅದ್ಭುತ ಕಾರ್ಯಕ್ರಮ ಸಂಘಟಿಸಿದ ಕುದ್ರೋಳಿ ಜಾಮಿಯಾ ಮಸೀದಿ ಕಮಿಟಿ, ಮುಸ್ಲಿಮ್ ಐಕ್ಯತಾ ವೇದಿಕೆ ಕುದ್ರೋಳಿ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕ ನಿಜಕ್ಕೂ ಅಭಿನಂದನಾರ್ಹರು.

    ಶಮು

  • ವೃದ್ಯಾಪ್ಯವು ಆನಂದವಾಗಿರಲಿ

    ವೃದ್ಯಾಪ್ಯವು ಆನಂದವಾಗಿರಲಿ

    ಮಾನವನ ಜೀವನಕ್ಕೆ ನಾಲ್ಕು ಹಂತಗಳು ಇವೆ. ಅದೃಷ್ಟವಂತರು ಈ ನಾಲ್ಕು ಹಂತಗಳನ್ನು ಅನುಭವಿಸುತ್ತಾರೆ- ಬಾಲ್ಯ, ಯೌವ್ವನ, ಪ್ರೌಢಾವಸ್ಥೆ ಮತ್ತು ವೃದ್ಧಾಪ್ಯ. ಬಾಲ್ಯವು ಜೀವನದ ಅತಿ ಸೊಗಸಾದ ಹಂತ. ಕುತೂಹಲ ಮತ್ತು ಕಲಿಕೆಯ ಆಸಕ್ತಿ ಬಾಲ್ಯದ ವೈಶಿಷ್ಟ್ಯ. ಈ ಹಂತದಲ್ಲಿ ವ್ಯಕ್ತಿ ಭವಿಷ್ಯಕ್ಕೆ ಭದ್ರವಾದ ಅಡಿಕಲ್ಲುಗಳನ್ನು ಇಡುವುದು ಮುಖ್ಯ.

    ಯೌವ್ವನವು ಉತ್ಸಾಹದ ಹಾಗೂ ಕನಸುಗಳ ಹಂತ. ಒಳ್ಳೆಯ ಚಿಂತನೆಗಳು, ಕೆಟ್ಟ ಚಿಂತನೆಗಳು, ಉತ್ತಮ ಸ್ನೇಹಿತರು, ಕೆಟ್ಟ ಸ್ನೇಹಿತರು ಹಾಗೂ ಜೀವನದ ಗುರಿಗಳನ್ನು ನಿರ್ಧರಿಸುವ ಹಂತ. ಪ್ರೌಢಾವಸ್ಥೆ ಜೀವನದ ಹೊಣೆಗಾರಿಕೆಯ ಹಂತ. ಕುಟುಂಬ, ಸಮಾಜ, ಉದ್ಯೋಗ ಇತ್ಯಾದಿ ಕ್ಷೇತ್ರಗಳಲ್ಲಿ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ಪ್ರಮುಖ ಹಂತ. ಅನುಭವಗಳನ್ನು ಪಡೆಯುವುದು. ಇತರರ ಅನುಭವಗಳನ್ನು ಅವಲೋಕಿಸಿ ಅದರ ಬೆಳಕಿನಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇದೇ ಹಂತದಲ್ಲಿ ಆಗುತ್ತದೆ.
    ವೃದ್ಧಾಪ್ಯವು ಮಾನವ ಜೀವನದ ಅಂತಿಮ ಹಂತ. ಈ ಹಂತದಲ್ಲಿ ದೈಹಿಕ ಶಕ್ತಿ ಕುಂದುತ್ತದೆ. ವೃದ್ಧಾಪ್ಯವು ಮಾನವ ಜೀವನದ ಅತ್ಯಂತ ಮಹತ್ವದ ಹಂತ. ಏಕೆಂದರೆ ಈ ಹಂತದಲ್ಲಿ ವ್ಯಕ್ತಿ ತನ್ನ ಹಿಂದಿನ ಜೀವನದ ಅನುಭವಗಳನ್ನು ಮುಂದಿಟ್ಟು ಯುವಪೀಳಿಗೆಗೆ ಮಾರ್ಗದರ್ಶನ ನೀಡುತ್ತಾನೆ.

    ಮಾನವ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸುಖ-ಸಂತೋಷ, ಜಯ-ಸೋಲು, ಏರುಪೇರುಗಳು… ಅಂಗಗಳು. ಆದರೆ, ಪ್ರತಿಯೊಬ್ಬರೂ ಅವುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿರಲಾರರು.

    ಕೆಲವರಲ್ಲಿ ಸ್ವಾಭಾವಿಕವಾಗಿ ಜೀವನದ ಸವಾಲುಗಳನ್ನು ಎದುರಿಸುವ ಶಕ್ತಿ ಇರುತ್ತದೆ. ಅವರು ಕಷ್ಟಗಳನ್ನು ಹೊಸ ಅವಕಾಶಗಳೆಂದು ನೋಡುತ್ತಾರೆ ಮತ್ತು ಸೋಲುಗಳಿಂದ ಪಾಠ ಕಲಿಯುತ್ತಾರೆ. ಇನ್ನೂ ಕೆಲವರಿಗೆ ಈ ಸಾಮರ್ಥ್ಯಗಳನ್ನು ಬೆಳೆಸಲು ತರಬೇತಿಯ ಅಗತ್ಯವಿರುತ್ತದೆ. ಸರಿಯಾದ ಮಾರ್ಗದರ್ಶನ ಮತ್ತು ಪ್ರೇರಣೆ ದೊರೆತರೆ ಅವರು ಸಹ ಸಮರ್ಥ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ.

    ಒಬ್ಬ ವ್ಯಕ್ತಿ ತನ್ನ ಜೀವನದ ಅರವತ್ತು ವರ್ಷಗಳನ್ನೂ ದಾಟಿದನು ಅಂದರೆ, ಅವನು ತನ್ನ ಜೀವನದ ಬಹು ದೊಡ್ಡ ಹಂತವನ್ನು ದಾಟಿದ್ದಾನೆ ಎಂದರ್ಥ. ಈ ಹಂತವು ಕೇವಲ ವಯಸ್ಸಿನ ಅಂಕಿ ಅಂಶ ಅಷ್ಟೇ ಅಲ್ಲ. ಅದು ಜೀವನದ ಅನುಭವದ ಮಹಾ ಸಂಪತ್ತು.

    ಮಾನವನನ್ನು ಮಣ್ಣಿನಿಂದ ಸೃಷ್ಟಿಸಿ, ನಂತರ ವೀರ್ಯದಿಂದ, ಬಳಿಕ ರಕ್ತಪಿಂಡದಿಂದ ರೂಪಿಸಿ, ಶಿಶುವಾಗಿ ಜನಿಸಿ, ಬಾಲ್ಯವನ್ನು ದಾಟಿ, ಯುವಕನಾಗಿ ಬೆಳೆಸಿ. ನಂತರ ಅತಿ ವೃದ್ಧಾಪ್ಯಕ್ಕೆ ತಲುಪಿ, ಕೊನೆಯಲ್ಲಿ ತಿಳಿಯದವನಾಗುವ ವರೆಗೂ ಹಾದು ಹೋಗುತ್ತಾನೆ ಎಂದು ಪವಿತ್ರ ಕುರ್‌ಆನ್ ಸ್ಪಷ್ಟಪಡಿಸುತ್ತದೆ. ಆತ ತನ್ನನ್ನು, ತನ್ನವರನ್ನು, ಎಲ್ಲವನ್ನು, ಎಲ್ಲರನ್ನೂ ಮರೆಯುತ್ತಾನೆ. ಅಂದರೆ ಆತ `ಡೆಮಿನ್ಶಿಯ’ ಎಂಬ ರೋಗಕ್ಕೆ ತುತ್ತಾಗಿದ್ದಾನೆ ಎಂದರ್ಥ.
    ಆಯುಷ್ಯ ಇದ್ದಲ್ಲಿ ವೃದ್ಧಾಪ್ಯವು ಮಾನವನ ಜೀವನದಲ್ಲಿ ತಪ್ಪಿಸಲಾಗದ ಸಹಜ ಹಂತ. ಶರೀರದ ಶಕ್ತಿ ಕ್ಷೀಣಿಸಿದರೂ, ಮನಸ್ಸು ಚುರುಕಾಗಿರಲು ಮತ್ತು ಆತ್ಮಬಲ ಹೆಚ್ಚಿಸಲು ಸಾಧ್ಯ. ವೃದ್ಧಾಪ್ಯವನ್ನು ಭಾರವೆಂದು ಭಾವಿಸುವ ಬದಲು, ಅದನ್ನು ಅನುಭವಗಳ ಸಂಪತ್ತಿನAತೆ ಆಗಲು ಯೌವ್ವನದಲ್ಲಿ ಪ್ರಯತ್ನಿಸುವುದು ಮುಖ್ಯ. ವೃದ್ಧಾಪ್ಯದಲ್ಲಿಯೂ ಮಾನವನಿಗೆ ತನ್ನದೇ ಆದ ಮಹತ್ವವಿದೆ. ಯಶಸ್ವೀ ಜೀವನ ಎಂದರೆ ಕೇವಲ ಯೌವ್ವನದಲ್ಲಿ ಮಾತ್ರ ಸಾಧನೆಗಳನ್ನು ಮಾಡುವುದಲ್ಲ, ವೃದ್ಧಾಪ್ಯದಲ್ಲಿಯೂ ಸಂತೋಷ, ಶಾಂತಿ ಮತ್ತು ಆಧ್ಯಾತ್ಮಿಕ ಸಮಾಧಾನವನ್ನು ಕಂಡುಕೊಳ್ಳುವುದು.

    ಪ್ರವಾದಿ ಮುಹಮ್ಮದ್(ಸ)ರು ಹೇಳುತ್ತಾರೆ, “ಅಂತಿಮವು ಒಳ್ಳೆಯದಾದರೆ ಎಲ್ಲವೂ ಒಳ್ಳೆಯದು”. ಅಂದರೆ ಮನುಷ್ಯನ ಜೀವನದ ಕೊನೆಯ ಹಂತವೇ ಅವನ ಜೀವನದ ನಿಜವಾದ ಮೌಲ್ಯವನ್ನು ನಿರ್ಧರಿಸುತ್ತದೆ.
    ಕೆಲವರು ಪ್ರಪಂಚದಲ್ಲಿ ತುಂಬಾ ಒಳ್ಳೆಯವರಂತೆ ಕಾಣಬಹುದು. ಜನರ ಕಣ್ಣಿಗೆ ಅವರು ಧಾರ್ಮಿಕರೂ, ಸಜ್ಜನರೂ, ಸಮಾಜದಲ್ಲಿ ನಿಷ್ಠಾವಂತರೂ ಆಗಿ ತೋರುತ್ತಾರೆ. ಆದರೆ ಅವರ ಅಂತರAಗ ಬೇರೆ ರೀತಿಯದ್ದಾಗಿರುತ್ತದೆ. ಅವರ ಕೊನೆಯ ವಾಸ ಸ್ಥಳ ನರಕವಾಗಬಹುದು. ಆ ಸಮಯದಲ್ಲಿ ಅವರ ಜೀವನದ ಬಾಹ್ಯ ಗೌರವ, ಹೆಸರು-ಮೆಚ್ಚುಗೆ ಎಲ್ಲವೂ ಅರ್ಥವಿಲ್ಲದಂತಾಗುತ್ತದೆ.

    ಇನ್ನು ಕೆಲವರು ಸಮಾಜದ ದೃಷ್ಟಿಯಲ್ಲಿ ಕೆಟ್ಟವರಾಗಿರಬಹುದು. ಜನರಿಂದ ತಪ್ಪಾಗಿ ಅರ್ಥೈಸಲ್ಪಟ್ಟವರಾಗಿರಬಹುದು. ಆದರೆ ಅವರ ಹೃದಯದಲ್ಲಿದ್ದ ಸತ್ಯತೆ, ಪಶ್ಚಾತ್ತಾಪ ಮತ್ತು ದಯೆಯ ಕಾರಣದಿಂದ ಅವರ ಅಂತಿಮ ಹಂತ ಶ್ರೇಷ್ಠವಾಗಬಹುದು. ಅಂತಹವರಿಗೆ ಸ್ವರ್ಗವೇ ಅಂತಿಮ ವಾಸ ಸ್ಥಳವಾಗಬಹುದು.

    ಒಂದು ವೇಳೆ ನಮ್ಮ ಜೀವನವು ಹಲವು ತಪ್ಪುಗಳು, ದೋಷಗಳು, ಕೆಟ್ಟ ಕೆಲಸಗಳಿಂದ ಕೂಡಿದ್ದರೂ, ನಿರಾಶರಾಗುವ ಅಗತ್ಯವಿಲ್ಲ. ಏಕೆಂದರೆ ಅಲ್ಲಾಹನು ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುವವನಾಗಿದ್ದಾನೆ. ಆದ್ದರಿಂದ ಪ್ರತಿಯೊಬ್ಬ ಮನುಷ್ಯನು ತನ್ನ ಜೀವನವನ್ನು ಸರಿಪಡಿಸುವ ಪ್ರಯತ್ನ ಮಾಡಬೇಕು. “ಇಂದು” ಮಾಡಿದ ಸುಧಾರಣೆ ನಾಳೆಯ ಸುಂದರ ಅಂತ್ಯಕ್ಕೆ ದಾರಿ ತೆರೆದುಕೊಡುತ್ತದೆ.

    ಹಾಗಾದರೆ ನಮ್ಮ ವೃದ್ಧಾಪ್ಯ ಹೇಗಿರಬೇಕು? ಚೆನ್ನಾಗಿರಲು ಏನು ಮಾಡಬೇಕು? ಕೆಲವರ ವೃದ್ಧಾಪ್ಯ ದುಃಖಭರಿತವಾಗಿರುತ್ತದೆ. ಅವರ ಜೀವನದ ಕೊನೆಯ ಹಂತವು ವೃದ್ಧಾಶ್ರಮದಲ್ಲಿ ಕೊನೆಗೊಳ್ಳುತ್ತದೆ. ತಮ್ಮ ಮನೆ, ಕುಟುಂಬದಿAದ ದೂರವಾಗಿ ನೆನಪುಗಳೊಂದಿಗೆ ಏಕಾಂತದಲ್ಲಿ ದಿನ ಕಳೆಯುತ್ತಾರೆ.

    ಇನ್ನು ಕೆಲವರ ವೃದ್ಧಾಪ್ಯ ಉಲ್ಲಾಸದಿಂದ ಕೂಡಿರುತ್ತದೆ. ಅವರು ತಮ್ಮ ಮಕ್ಕಳ, ಮೊಮ್ಮಕ್ಕಳ ಜೊತೆಗಿದ್ದು ಪ್ರೀತಿ ಮತ್ತು ಗೌರವವನ್ನು ಅನುಭವಿಸುತ್ತಾರೆ. ಕುಟುಂಬ ಸಾನಿಧ್ಯವು ಅವರಿಗೆ ನೆಮ್ಮದಿ ಮತ್ತು ಶಾಂತಿಯನ್ನು ನೀಡುತ್ತದೆ.

    ಮುಸ್ಲಿಮ್ ಸಮುದಾಯದಲ್ಲಿ ಕೌಟುಂಬಿಕ ಜೀವನಕ್ಕೆ ವಿಶೇಷ ಮಹತ್ವವಿದೆ. ಇಸ್ಲಾಮ್ ಧರ್ಮವು ತಂದೆ-ತಾಯಿ ಮತ್ತು ಹಿರಿಯರ ಸೇವೆಗೆ ಬಹಳ ಮಹತ್ವವನ್ನು ಕೊಡುತ್ತದೆ. ಆದ್ದರಿಂದ ವೃದ್ಧರನ್ನು ಪ್ರೀತಿಯಿಂದ, ಗೌರವದಿಂದ ನೋಡಿಕೊಳ್ಳುತ್ತಾರೆ.

    ನಮ್ಮ ವೃದ್ಧಾಪ್ಯದ ಬಗ್ಗೆ ನಮಗೆ ಕಾಳಜಿ ಇರಬೇಕು. ಯೌವ್ವನದಲ್ಲಿಯೇ ದೂರದೃಷ್ಟಿಯೊಂದಿಗೆ ಬದುಕಿದರೆ ವೃದ್ಧಾಪ್ಯವನ್ನು ಸಂತೋಷಭರಿತವಾಗುವAತೆ ರೂಪಿಸಬಹುದು. ಸಕಾರಾತ್ಮಕ ಚಿಂತನೆ, ಆರೋಗ್ಯದ ಕಾಳಜಿ, ಅಧ್ಯಾತ್ಮಿಕತೆ ಮತ್ತು ಕುಟುಂಬದೊAದಿಗೆ ಒಗ್ಗಟ್ಟಿನಿಂದ ಬಾಳುವ ಜೀವನವೇ ವೃದ್ಧಾಪ್ಯದ ನೆಮ್ಮದಿ, ಗೌರವ ಮತ್ತು ಸಂತೋಷಕ್ಕೆ ದಾರಿ.

    ವೃದ್ಧಾಪ್ಯದಲ್ಲಿ ನಮ್ಮ ಬದುಕು ಇತರರಿಗೆ ಆದರ್ಶವಾಗುವಂತಿರಬೇಕು. ನಮ್ಮ ಮಾತು, ನಡೆ-ನುಡಿ, ಪ್ರಾಮಾಣಿಕತೆ ಮತ್ತು ಅನುಭವದಿಂದ ಮುಂದಿನ ಪೀಳಿಗೆಗೆ ದಾರಿ ತೋರಿಸಬೇಕು. ಮಕ್ಕಳಿಗೂ, ಮೊಮ್ಮಕ್ಕಳಿಗೂ ನಾವು ಜ್ಞಾನ, ಮೌಲ್ಯಗಳು ಮತ್ತು ಧರ್ಮನಿಷ್ಠೆಯ ಮಾದರಿಯಾಗಿದ್ದರೆ ನಮ್ಮ ಜೀವನ ಉತ್ತಮವಾಗುತ್ತದೆ.
    ಮನೋ ವೈದ್ಯರು ಹೇಳುವಂತೆ, ವೃದ್ಧಾಪ್ಯವನ್ನು ಆರೋಗ್ಯಕರವಾಗಿಯೂ ಸುಂದರವಾಗಿಯೂ ನಡೆಸಲು ಮೂರು ಮುಖ್ಯ ಅಂಶಗಳನ್ನು ಅಳವಡಿಸಬೇಕು.

    1. ಶಾರೀರಿಕ ಆರೋಗ್ಯದ ಕಾಳಜಿ.
    ಸರಿಯಾದ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ತಕ್ಕ ಮಟ್ಟದ ವಿಶ್ರಾಂತಿ ಹಾಗೂ ಸಮಯಕ್ಕೆ ಸರಿಯಾದ ವೈದ್ಯಕೀಯ ಪರೀಕ್ಷೆಗಳು ವೃದ್ಧಾಪ್ಯದಲ್ಲಿ ದೇಹವನ್ನು ಚುರುಕಾಗಿಡುತ್ತದೆ.
    ಆರೋಗ್ಯದ ವೃದ್ಧಾಪ್ಯಕ್ಕಾಗಿ ರೋಗಗಳು ಬಂದು ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಅವುಗಳನ್ನು ಮುಂಚಿತವಾಗಿ ತಡೆಗಟ್ಟುವುದು ಅತ್ಯಂತ ಮುಖ್ಯ.

    ಜಾಗ್ರತೆ- ರೋಗಗಳು ಉಂಟಾಗುವ ದಾರಿಯನ್ನು ತಿಳಿದುಕೊಳ್ಳುವುದು. ಆಹಾರದಲ್ಲಿ ಅಸಮತೋಲನ, ವ್ಯಾಯಾಮದ ಕೊರತೆ, ಒತ್ತಡ, ಕೆಟ್ಟ ಅಭ್ಯಾಸಗಳು ಹಲವಾರು ರೋಗಗಳಿಗೆ ಕಾರಣವಾಗುತ್ತದೆ.
    ಅದನ್ನು ತಡೆಗಟ್ಟಲು ಸರಿಯಾದ ಜೀವನ ಶೈಲಿ, ಶುದ್ಧ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ, ಮಾನಸಿಕ ಶಾಂತಿ ಅತಿ ಮುಖ್ಯ. ರೋಗಗಳಿಗೆ ತುತ್ತಾಗದೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಪರೀಕ್ಷೆ ಮತ್ತು ಉತ್ತಮ ಜೀವನ ಶೈಲಿ ಅತಿ ಮುಖ್ಯ.

    ವೃದ್ಧಾಪ್ಯದಲ್ಲಿ ಈ ಜಾಗ್ರತೆಗೆ ಹೆಚ್ಚಿನ ಗಮನ ಕೊಡಬೇಕು. ಏಕೆಂದರೆ ವಯಸ್ಸಿನೊಂದಿಗೆ ದೇಹದ ರೋಗನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆಗೆ ಹೆಚ್ಚಿನ ಮಹತ್ವ ಕೊಡಬೇಕು.
    ಮಾನಸಿಕ ಆರೋಗ್ಯವು ಬಹಳ ಮಹತ್ವಪೂರ್ಣವಾಗಿದೆ. ಕೆಲವೊಮ್ಮೆ ವೃದ್ಧಾಪ್ಯದಲ್ಲಿ ಮಾನಸಿಕ ಒತ್ತಡ, ಡಿಪ್ರೇಶನ್, ಪಶ್ಚಾತ್ತಾಪ ಅಥವಾ ಅಪರಾಧ ಭಾವನೆಗಳು ಕಾಡುತ್ತದೆ. ಇಂತಹ ನಕಾರಾತ್ಮಕ ಭಾವನೆಗಳು ಮಾನವನನ್ನು ರೋಗಿಗಳನ್ನಾಗಿ ಮಾಡುತ್ತದೆ. ಮನಸ್ಸಿನ ಆಶಾಂತಿ ದೇಹದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಈ ರೀತಿಯ ಜಾಗ್ರತೆಗಳಿಂದ ವೃದ್ಧಾಪ್ಯವನ್ನು ಆರೋಗ್ಯಕರ, ಸಂತೋಷಕರ ಮತ್ತು ಶಾಂತಿಯುತವಾಗಿಸಬಹುದು.

    2. ಯಶಸ್ವಿ ಅಥವಾ ಸುಂದರವಾದ ವೃದ್ಧಾಪ್ಯವನ್ನು ಪಡೆಯಬೇಕೆಂದರೆ, ಬದುಕಿನ ಎಲ್ಲಾ ವಿಷಯಗಳಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಅತ್ಯಗತ್ಯ. ಶರೀರವನ್ನು ಚುರುಕಾಗಿಡುವ ಶಿಸ್ತಿನ ಜೀವನ.

    ಮನಸ್ಸಿಗೆ ನೆಮ್ಮದಿ ನೀಡುವ ಸಕಾರಾತ್ಮಕ ಚಿಂತನೆ.

    ಸಮಾಜದೊAದಿಗೆ ಬೆಸೆದುಕೊಳ್ಳುವ ಒಡನಾಟ ಮತ್ತು ಆಧ್ಯಾತ್ಮಿಕತೆಯಿಂದ ಆತ್ಮಶಾಂತಿ ಪಡೆಯುವುದು. ಇವೆಲ್ಲವನ್ನು ಸಮಾನವಾಗಿ ಪಾಲಿಸಿದಾಗ ವೃದ್ಧಾಪ್ಯವು ನಿಜವಾಗಿಯೂ ಯಶಸ್ವಿ ಮತ್ತು ಸುಂದರವಾಗಲು ಸಾಧ್ಯ.

    ವೃದ್ಧಾಪ್ಯದಲ್ಲಿ ಅನೇಕರು ತಮ್ಮ ಉದ್ಯೋಗದಿಂದ ನಿವೃತ್ತಿಯಾಗುತ್ತಾರೆ. “ಆಫೀಸಿನಿಂದ ನಿವೃತ್ತಿಯಾದರೂ, ಜೀವನದಿಂದ ನಿವೃತ್ತಿಯಾಗಬಾರದು.” ಸಮಾಜಕ್ಕೆ ಸೇವೆ ಸಲ್ಲಿಸುವ ಅನೇಕ ಅವಕಾಶಗಳು ನಮ್ಮ ಸುತ್ತಲಿವೆ.

    ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ವೃದ್ಧಾಪ್ಯ ಚೈತನ್ಯದಿಂದ ಕೂಡಿರುತ್ತದೆ. ಧಾರ್ಮಿಕ ಕೇಂದ್ರಗಳು, ಶಾಲೆಗಳು, ಸ್ವಯಂ ಸೇವಾ ಸಂಘಟನೆಗಳು, ಕುಟುಂಬಸ್ಥರನ್ನು ಭೇಟಿ ಆಗುವುದು. ನೆರೆ ಹೊರೆಯ ಸಮಿತಿಗಳು ಎಲ್ಲೆಡೆ ಹಿರಿಯ ಮಾರ್ಗದರ್ಶನ ಮತ್ತು ಅನುಭವ ಅಗತ್ಯ. ನಿವೃತ್ತಿ ಹೊಂದಿದರೂ, ಇದು ಹೊಸ ರೀತಿಯ ಬದುಕಿನ ಆರಂಭ- ಯುವಕರಿಗೆ ದಾರಿದೀಪ ಆಗಬಹುದು. ತಮ್ಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ಹೀಗೆ, ವೃದ್ಧಾಪ್ಯದಲ್ಲಿ “ನಾನು ನಿವೃತ್ತ” ಎಂಬ ಯೋಚನೆಯ ಬದಲು ನಾನು ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ತಿಳಿದುಕೊಳ್ಳುವುದು, ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುವುದರಿಂದ ಪ್ರಗತಿಶೀಲರಾಗಿರಲು ನೆರವಾಗುತ್ತದೆ.

    ಪೋಷಕರ ಸೇವೆ ಎಂಬುದು ಕೇವಲ ಅವರು ಬದುಕಿದ್ದಷ್ಟರ ಮಟ್ಟಿಗೆ ಮಾತ್ರ ಸೀಮಿತವಾಗಿಲ್ಲ. ಅವರ ಮರಣಾ ನಂತರವೂ ಮಾಡಬಹುದು ಎಂದು ಇಸ್ಲಾಮಿನ ಈ ಶಿಕ್ಷಣದಿಂದ ಸ್ಪಷ್ಟವಾಗುತ್ತದೆ.

    ಇಂದಿನ ಸ್ವಾರ್ಥಪರ ಸಮಾಜದಲ್ಲಿ, ತಮಗೆ ಜೀವನವನ್ನು ನೀಡಿದ ತಂದೆ-ತಾಯಿಗಳಿಗೆ ಗೌರವ, ಕಾಳಜಿ ತೋರಿಸದೆ ಇರುವಾಗ, ತಮ್ಮ ಆಪ್ತ ಬಂಧುಗಳ ಬಗ್ಗೆ ಕಾಳಜಿ ವಹಿಸುವರೆ!

    ತಂದೆ-ತಾಯಿಗಾಗಿ ಖರ್ಚು ಮಾಡುವುದು ಮಕ್ಕಳ ಕರ್ತವ್ಯ. ಅವರಿಗೆ ಮಾಸಿಕವಾಗಿ ಹಣ ನೀಡುವುದು, ಅವರ ಅಗತ್ಯಗಳನ್ನು ಪೂರೈಸುವುದು ಮಕ್ಕಳ ಜವಾಬ್ದಾರಿಯಾಗಿದೆ. ಪೋಷಕರಿಗೆ ಪಿಂಚಣಿ ಸಿಗುತ್ತಿದ್ದರು, ಅದನ್ನು ಕಾರಣವನ್ನಾಗಿ ಮಾಡದೆ ಮಕ್ಕಳು ತಮ್ಮಿಂದ ಸಾಧ್ಯವಾದಷ್ಟು ಸಹಾಯವನ್ನು ಮಾಡಬೇಕು. ಅವರಿಗೆ ನೀಡಿದ ಪ್ರೀತಿ ಮತ್ತು ಕಾಳಜಿ ಯಾವತ್ತೂ ವ್ಯರ್ಥವಾಗುವುದಿಲ್ಲ.

    ವೃದ್ಧಾಪ್ಯದಲ್ಲಿ ದೈಹಿಕವಾಗಿಯೂ, ಮಾನಸಿಕವಾಗಿಯೂ ದುರ್ಬಲರಾಗುವುದು ಸಹಜ. ಆದರೆ ದೈಹಿಕವಾಗಿಯೂ, ಮಾನಸಿಕವಾಗಿಯು ಬಲಿಷ್ಠರಾಗಿರುವುದು ಜೀವನ ನಿಜವಾದ ಶಕ್ತಿ ಮತ್ತು ಯಶಸ್ಸು. ಇದರ ಅತ್ಯುತ್ತಮ ಉದಾಹರಣೆ ಪ್ರವಾದಿ ಮುಹಮ್ಮದ್(ಸ)ರು.

    ಪ್ರವಾದಿ ಮುಹಮ್ಮದ್(ಸ)ರು ವೃದ್ಧಾಪ್ಯದಲ್ಲಿಯೂ ದೈಹಿಕವಾಗಿ ಚುರುಕಾಗಿದ್ದು, ಮಾನಸಿಕವಾಗಿ ದೃಢವಾಗಿದ್ದರು. ತಮ್ಮ ಜೀವನದ ಅಂತಿಮ ಹಂತದಲ್ಲಿಯೂ ಸಮಾಜವನ್ನು ಮುನ್ನಡೆಸುವ ಶಕ್ತಿ, ಧೈರ್ಯ ಮತ್ತು ತಾಳ್ಮೆ ಅವರಲ್ಲಿತ್ತು.

    ಇದರಿಂದ ಹುದೈಬಿಯಾ, ಖೈಬರ್ ಯುದ್ಧಗಳಲ್ಲಿ ಜಯಗೊಳಿಸಿದರು, ಹುನೈನ್ ಯುದ್ಧ ಆ ಕಾಲದ ಪ್ರಮುಖ ಯುದ್ಧಗಳಲ್ಲಿ ಒಂದು. ಇದನ್ನು ಜಯಗೊಳಿಸಿದ್ದು, ತನ್ನ ಜೀವನದ ಕೊನೆಯ ಐದು ವರ್ಷಗಳಲ್ಲಿ. ಇದೇ ಸಮಯದಲ್ಲಿ ತಾಯಿಫನ್ನು ವಶಪಡೆದು ಕೊಂಡರು. ಅದೇ ಸಮಯದಲ್ಲಿ “ಯುದ್ಧವಿಲ್ಲದೆಯೇ ಮಕ್ಕಾ ವಿಜಯವನ್ನು ಸಾಧಿಸಲಾಯಿತು.” ಹಜ್ಜ್ನ ಸಮಯ ವಿದಾಯ ಭಾಷಣದಲ್ಲಿ 1,40,000 ಸಂಗಾತಿಗಳೆದುರು ಭಾಷಣ ಮಾಡಿದರು. ಈ ಉದಾಹರಣೆಗಳನ್ನು ಮುಂದಿಟ್ಟು ನೋಡಿದಾಗ, ಪ್ರವಾದಿವರ್ಯರ(ಸ) ಜೀವನ ಯಾವಾಗಲೂ ಮೇಲೇರುತ್ತಾ ಹೋದದಲ್ಲದೆ, ಕೆಳಕ್ಕೆ ಇಳಿಯಲಿಲ್ಲ. ಅವರು ಯಶಸ್ಸು ಸಾಧಿಸುತ್ತಾ ಹೋದರು. ಅವರ(ಸ) ಜೀವನ ನಮಗೆ ಪಾಠದಾಯಕವಾಗಿದೆ.

    “ಹಿರಿಯರು ದೈಹಿಕ ಚಟುವಟಿಕೆಗಳನ್ನು ಸತತವಾಗಿ ಮಾಡಬೇಕು. ಸಮಾಜದಲ್ಲಿ ಸೇವೆಗೆ ಸಿದ್ಧ” ಎಂಬ ಮನೋಭಾವನೆ ಬೆಳೆಸಿಕೊಳ್ಳುವುದು ಯಶಸ್ವಿ ವೃದ್ಧಾಪ್ಯದ ಗುಟ್ಟು.

    3. ವೃದ್ಧಾಪ್ಯದಲ್ಲಿ ಹಿರಿಯರಿಗೆ ಭಾವನಾತ್ಮಕ ಬೆಂಬಲವೂ ಅತ್ಯಂತ ಮುಖ್ಯ.
    ಭಾವನಾತ್ಮಕ ಬೆಂಬಲದ ಕೊರತೆಯಿಂದ ವೃದ್ಧರು ಏಕಾಂತತೆ, ಒತ್ತಡ ಮತ್ತು ನಿರಾಶೆಗೆ ಒಳಗಾಗುತ್ತಾರೆ. ಆದರೆ ಮನೆಯವರ ಗೌರವ, ಪ್ರೀತಿ ದೊರೆತರೆ, ಮನೆಯವರು ಅವರನ್ನು ಗೌರವಿಸಿದರೆ, ಅವರೊಂದಿಗೆ ಸಮಯ ಕಳೆದರೆ, ಅವರ ಸೇವೆ ಮಾಡಿದರೆ ಅವರಿಗೆ ಸಂತೋಷ ಮತ್ತು ನೆಮ್ಮದಿ ದೊರೆಯುತ್ತದೆ.

    ವೃದ್ಧರು, ವೃದ್ಧಾಪ್ಯವನ್ನು ಆರೋಗ್ಯಕರವಾಗಿ ಕಳೆಯಲು ಅಧ್ಯಯನ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಪತ್ರಿಕೆಗಳನ್ನು ಓದುವುದು, ಚರ್ಚೆಗಳಲ್ಲಿ ಪಾಲ್ಗೊಳ್ಳುವುದು, ಹೊಸ ವಿಷಯಗಳನ್ನು ಕಲಿಯುವುದು, ವಿಚಾರ ವಿನಿಮಯಗಳಂತಹ ಚಟುವಟಿಕೆಗಳನ್ನು ಮಾಡುತ್ತಿದ್ದರೆ, ಮಾನಸಿಕವಾಗಿ ಸಕ್ರಿಯರಾಗಿರುತ್ತಾರೆ. ಬುದ್ಧಿಹೀನತೆಗೆ ಒಳಗಾಗುವುದಿಲ್ಲ. ಅವರ ಸ್ಮರಣ ಶಕ್ತಿ ಕುಗ್ಗುವುದಿಲ್ಲ. ಮಾನಸಿಕ ದುರ್ಬಲತೆಗೆ ತುತ್ತಾಗುವುದಿಲ್ಲ.

    ಕೆಲವರು ತಮ್ಮ ವೃದ್ಧಾಪ್ಯದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಉದ್ಯೋಗ ಮುಗಿದ ನಂತರ ಉದ್ಯಮ ಇಲ್ಲ. ಪಿಂಚಣಿ ಸಿಗುವುದಿಲ್ಲ. ಆದಾಯದ ಮೂಲವಿಲ್ಲ, ಇಂತಹ ಸ್ಥಿತಿಯಲ್ಲಿ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಕೆಲವೊಮ್ಮೆ ಕುಟುಂಬದವರು ಸಹ ವೃದ್ಧರನ್ನು ನಿರ್ಲಕ್ಷಿಸಿ ಮನೆಯಿಂದ ಹೊರಹಾಕುವ ಘಟನೆಗಳು ಸಂಭವಿಸುತ್ತವೆ. ಇಂತಹ ಸಂದರ್ಭದಲ್ಲಿ ವೃದ್ಧರು ಆಶ್ರಯವಿಲ್ಲದೆ ಫುಟ್‌ಪಾತ್‌ಗಳಲ್ಲಿ ವಾಸಿಸುವಂತಾಗುತ್ತದೆ. ನೀವು ನಗರಗಳಲ್ಲಿ ಭಿಕ್ಷೆ ಬೇಡುವ ವೃದ್ಧರನ್ನು ನೋಡಬಹುದು.

    ಪ್ರವಾದಿ ಶುಯೈಬ್(ಅ)ರು ವೃದ್ಧಾಪ್ಯದಲ್ಲಿ ದುಡಿಯಲು ಅಸಮರ್ಥರಾದಾಗ, ಅವರಿಬ್ಬರು ಪುತ್ರಿಯರು ತಂದೆಯ ಜವಾಬ್ದಾರಿಯನ್ನು ಹೊತ್ತುಕೊಂಡರು. ತಂದೆಗೆ ಆರ್ಥಿಕವಾಗಿ ಸಹಕರಿಸಲು ಮೇಕೆಗಳನ್ನು ಮೇಯಿಸುವ ಜವಾಬ್ದಾರಿಯನ್ನು ತಮ್ಮ ಮೇಲೆ ತೆಗೆದುಕೊಂಡರು.

    ತAದೆ ವೃದ್ಧರಾದಾಗ ಮಕ್ಕಳು ಅವರನ್ನು ಆರ್ಥಿಕವಾಗಿ ಸಹಕರಿಸಬೇಕು. ಅವರ ಆವಶ್ಯಕತೆಗಳನ್ನು ಗಮನಿಸಿ ಪೂರೈಸುವುದು ಕೇವಲ ನೈತಿಕ ಕರ್ತವ್ಯವಷ್ಟೇ ಅಲ್ಲ ಇಸ್ಲಾಮಿನ ಬೋಧನೆಯೂ ಆಗಿದೆ.
    ಪ್ರವಾದಿ ಮುಹಮ್ಮದ್(ಸ)ರು ಹೇಳಿದ್ದಾರೆ- “ಮಾತಾಪಿತರು ಮರಣ ಹೊಂದಿದ ಬಳಿಕವೂ ಅವರ ಆಪ್ತ ಸಂಬAಧಿಕರ ಬಗ್ಗೆ ಕಾಳಜಿ ತೋರಿಸುವುದು, ಸಹಾಯ ಮಾಡುವುದು ಮತ್ತು ಅವರ ಸ್ನೇಹಿತರಿಗೆ ಗೌರವ ನೀಡುವುದು ಪೋಷಕರಿಗೆ ಮಾಡಿದ ಸೇವೆಯಂತೆಯೇ ಆಗುತ್ತದೆ.”

    ಸಕ್ರಿಯರಾಗಿರಿ. ಮಾನಸಿಕವಾಗಿ ನಿವೃತ್ತರಾಗಬೇಡಿ. 40 ವರ್ಷಗಳಿಂದ ಸೇವಿಸಿದ ಆಹಾರವನ್ನು ಬದಲಾಯಿಸಿ. ಆರೋಗ್ಯಕರ ಆಹಾರ, ನಿದ್ರೆ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಹಳ ಅಗತ್ಯ. ವಯಸ್ಸಿಗೆ ತಕ್ಕ ಆಹಾರ ಸೇವಿಸಿ. ಜೀವನಕ್ಕೆ ಒಂದು ಉದ್ದೇಶವನ್ನು ಇಟ್ಟುಕೊಳ್ಳಿ. ಸಾಮಾಜಿಕ ಜೀವನ, ಧಾರ್ಮಿಕತೆ, ಸಮಾಜದ ಹಿತಕ್ಕಾಗಿ ದುಡಿಯುವ ಉದ್ದೇಶಗಳನ್ನು ಮುಂದಿಟ್ಟಾಗ ವೃದ್ಧಾಪ್ಯವು ಉತ್ತಮವಾಗಬಹುದು ಮತ್ತು ಸಮಾಜದಲ್ಲಿ ಗೌರವಿಸಲ್ಪಡುವಿರಿ. ಸಂತೋಷ ನೆಮ್ಮದಿ ನಿಮ್ಮ ಜೀವನದ ಪಾಲಾಗುವುದು.

    ಸಜ್‌ರೂನ್

  • “ಶಿಷ್ಟರ ರಕ್ಷೆ ಮತ್ತು ದುಷ್ಟರಿಗೆ ಶಿಕ್ಷೆ”: 
ಇದು ದಸರಾದ ಪರಿಕಲ್ಪನೆ

    “ಶಿಷ್ಟರ ರಕ್ಷೆ ಮತ್ತು ದುಷ್ಟರಿಗೆ ಶಿಕ್ಷೆ”: ಇದು ದಸರಾದ ಪರಿಕಲ್ಪನೆ

    [ಭಾರತ ಬಹುಸಂಸ್ಕೃತಿಯ ಆಚರಣೆಗಳ ದೇಶ. ಕರ್ನಾಟಕದಲ್ಲಿ ದಸರಾ’ವನ್ನು ನಾಡ ಹಬ್ಬವಾಗಿ ಆಚರಿಸಲಾಗುತ್ತದೆ. ನವರಾತ್ರಿಗಳ ಈ ಉತ್ಸವದ ಹಿನ್ನೆಲೆಯು ಹಿಂದೂ ಬಾಂಧವರಲ್ಲಿ ಶುಭ ದಿನಗಳಾಗಿವೆ. ದುಷ್ಟ ಶಕ್ತಿಯ ದಮನ, ಸಂಕಷ್ಟ ನಿವಾರಣೆಯ ನಂಬಿಕೆಯಲ್ಲಿ ಈ ಉತ್ಸವ ಆಚರಿಸುತ್ತಾರೆ. ಅಂತೆಯೇ ಇದೇ ತಿಂಗಳಲ್ಲಿ ದೀಪಾವಳಿ’ಯ ಬೆಳಕಿನ ಹಬ್ಬದ ಸಂಭ್ರಮವನ್ನೂ ದೇಶಬಾಂಧವರು ಸಂಭ್ರಮದಿಂದ ಆಚರಿಸುತ್ತಾರೆ. ನಾವು ಎಲ್ಲಾ ಧರ್ಮವನ್ನೂ ಗೌರವಿಸುವವರಾಗಬೇಕು. ಪರಸ್ಪರ ಧಾರ್ಮಿಕ ಅರಿವು’ ಉಳ್ಳವರಾಗಬೇಕು. ಹಬ್ಬಗಳು ಮನಸ್ಸನ್ನು ಬೆಸೆಯುವ, ಸೌಹಾರ್ದತೆಯನ್ನು ಹುಟ್ಟಿಸುವ ಆಚರಣೆಯಾಗುತ್ತದೆ. ದಸರಾ ಮತ್ತು ದೀಪಾವಳಿಯ ಹಿನ್ನಲೆಯ ಬಗ್ಗೆ ಲೇಖಕಿ ಸುಖಲಾಕ್ಷಿ ವೈ. ಸುವರ್ಣರವರು ಬರೆದಿರುವ ಈ ಲೇಖನವನ್ನು ಓದುಗರಿಗಾಗಿ ಇಲ್ಲಿ ಕೊಡುತ್ತಿದ್ದೇವೆ. ಅಂತೆಯೇ ದೇಶ ಬಾಂಧವರಿಗೆ ಶುಭಾಶಯಗಳನ್ನೂ ಕೋರುತ್ತೇವೆ.] -ಸಂಪಾದಕಿ.

    ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸುತ್ತಾರೆ. ಪ್ರಕೃತಿಯನ್ನು ವಿಕೃತಿಗೊಳಿಸುವ ದುಷ್ಟಶಕ್ತಿಗಳ ದಮನ ಮಾತೃಶಕ್ತಿಯಿಂದ ಮಾತ್ರ ಸಾಧ್ಯ. ಒಟ್ಟಿನಲ್ಲಿ ದುಷ್ಟರ ಶಿಕ್ಷೆ ಶಿಷ್ಟ ರಕ್ಷಣೆಗಾಗಿ ಒಂಭತ್ತು ಅವತಾರಗಳನ್ನೆತ್ತಿದ ದುರ್ಗಾಮಾತೆ ಸಕಲ ಸಂಕಷ್ಟ ನಿವಾರಕಳೆಂದು ಕರೆಯಲ್ಪಟ್ಟು ಆದಿಶಕ್ತಿಯ ರೂಪದಲ್ಲಿ ದೇಶದೆಲ್ಲೆಡೆ ಪೂಜಿಸಲ್ಪಡುತ್ತಿದ್ದಾಳೆ.

    ‘ದಸರಾ’ ಎಂದು ಕರೆಯಲ್ಪಡುವ ನವರಾತ್ರಿಯನ್ನು ದೇಶದ ನಾನಾ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತಿದೆ. ಒಂಬತ್ತು ರಾತ್ರಿಗಳ ದುರ್ಗೆಯ ಆರಾಧನೆಯ ಬಳಿಕ ಹತ್ತನೆಯ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಉತ್ತರ ಮತ್ತು ಪಶ್ಚಿಮ ರಾಜ್ಯಗಳಲ್ಲಿ ವಿಜಯದಶಮಿಯನ್ನು ದಶಶಿರನಾದ ರಾವಣ ಸಂಹಾರ ಮಾಡಿದ ವಿಜಯದ ದ್ಯೋತಕವಾಗಿ ದಶಹರ/ದಸರಾ ಎಂದು ಕರೆಯುತ್ತಾರೆ. ಈ ದಿನವನ್ನು ಶ್ರೀರಾಮಚಂದ್ರ ರಾವಣ ಸಂಹಾರ ಮಾಡಿದ ದಿನವೆಂದು ನಂಬಲಾಗುತ್ತಿದ್ದು, ಉತ್ತರಭಾರತದಲ್ಲಿ ನವರಾತ್ರಿಯನ್ನು ‘ರಾಮ್ ಲೀಲಾ’ ಎಂದೇ ಪೂಜಿಸಲಾಗುತ್ತಿದೆ. ವಿಜಯ ದಶಮಿಯಂದು ರಾವಣ ಸಂಹಾರದ ದ್ಯೋತಕವಾಗಿ ಉದ್ದನೆಯ ಮರದ ತುಂಡಿಗೆ ರಾವಣನ ಆಕಾರ ನೀಡಿ ಅದಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ಇದನ್ನು ‘ಲಂಕಾ ದಹನ’ ಎಂದು ಕರೆದು ಜನ ಸಂಭ್ರಮಿಸುತ್ತಾರೆ. ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನವೂ ಇದೆಂದು ನಂಬಲಾಗುತ್ತದೆ. ಪಾಂಡವರು ವೇಷ ಬದಲಾಯಿಸಿ ವಿರಾಟ ನಗರಕ್ಕೆ ತೆರಳಿದ ಸಂದರ್ಭದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಶಮೀ ಮರದೊಳಗೆ ಸಂರಕ್ಷಿಸಿಟ್ಟಿದ್ದು ಅವರ ವಿಜಯದ ಸಂಕೇತವಾಗಿ ವಿಜಯದಶಮಿಯಂದು ಆಯುಧ ಪೂಜೆ ಮತ್ತು ಶಮೀ ಮರವನ್ನು ಪೂಜಿಸಲಾಗುತ್ತದೆ.

    ಗುಜರಾತಿನಲ್ಲಿ ನವರಾತ್ರಿಯನ್ನು ಸಂಗೀತ-ನೃತ್ಯಗಳಿಂದ ಆರಾಧಿಸಲಾಗುತ್ತದೆ. ಗುಜರಾತಿಗಳು ಘಟಸ್ಥಾಪನೆಯ ದಿನದಿಂದ ಒಂಭತ್ತು ದಿನಗಳವರೆಗೆ ಉಪವಾಸವಿದ್ದು ದುರ್ಗೆಯ ಆರಾಧನೆ ಮಾಡುತ್ತಾರೆ. ಅಗತ್ಯವುಳ್ಳವರಿಗೆ ಉಚಿತ ಖಾದ್ಯ ವಿತರಣೆ ಮಾಡಿ ಸಹಾಯ ಮಾಡಲಾಗುತ್ತದೆ. ಒಂಭತ್ತು ರಾತ್ರಿಗಳಲ್ಲಿ ಸಾವಿರಾರು ಜನ ಸೇರಿ ವರ್ತುಲ ರೂಪಿಸಿ ಗಾರ್ಭ ನೃತ್ಯ ಸೇವೆ ನಡೆಯುತ್ತದೆ. ಹೆಣ್ಣುಮಕ್ಕಳು ಬಣ್ಣಬಣ್ಣದ ಛನಿಯಾ ಚೋಲಿ, ಗಾಗರಾ ಹಾಗೂ ಪುರುಷರು ಕುರ್ತಾ ಪ್ಶೆಜಾಮದಂತಹ ಸಾಂಪ್ರದಾಯಿಕ ಉಡುಪು ತೊಟ್ಟು ಆವೇಶದಿಂದ ಕುಣಿಯುತ್ತಾ ಗಾರ್ಭಾ ನೃತ್ಯದ ಮೂಲಕ ದುರ್ಗಾಮಾತೆಯನ್ನು ಆರಾಧಿಸುತ್ತಾರೆ.
    ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ದೊಡ್ಡಹಬ್ಬ. ಈ ದಿನಗಳಲ್ಲಿ ಕೋಲ್ಕತ್ತಾದ ಗಲ್ಲಿಗಲ್ಲಿಗಳಲ್ಲಿ ದುರ್ಗಾಮಾತೆಯ ಪೆಂಡಾಲ್‌ಗಳನ್ನು ಹಾಕಲಾಗುತ್ತದೆ. ದುರ್ಗಾಪೂಜೆಯ ಒಂಬತ್ತು ದಿನಗಳಲ್ಲಿಯೂ ಇಡೀ ಕೋಲ್ಕತ್ತಾ ನಗರ ಸಂಭ್ರಮದ ನಗರಿಯಾಗಿ ಬದಲಾಗುತ್ತದೆ. ಪಶ್ಚಿಮಬಂಗಾಳ ಸೇರಿದಂತೆ ಉತ್ತರಭಾರತದ ಹಲವು ರಾಜ್ಯಗಳಲ್ಲಿ ಅಶ್ವಯುಜ ಶುಕ್ಲ ಪಂಚಮಿಯಿAದ ತೊಡಗಿ ದಶಮಿಯವರೆಗಿನ ಆರು ದಿನಗಳ ತನಕ ದುರ್ಗಾಪೂಜೆ ನಡೆಯುತ್ತದೆ.

    ಕರ್ನಾಟಕದಲ್ಲಿ ನಾಡಹಬ್ಬ

    ಅಥವಾ ‘ದಸರಾ’ ಎಂದು ಕರೆಯಲ್ಪಡುತ್ತಿರುವ ನವರಾತ್ರಿ ಮಹೋತ್ಸವ ರಾಜ್ಯದ ಹೆಮ್ಮೆಯ ಮತ್ತು ಪ್ರಮುಖ ಹಬ್ಬವಾಗಿದೆ. ಮೈಸೂರು ದಸರಾ ಎಂದೇ ಖ್ಯಾತಿ ಹೊಂದಿರುವ ಮೈಸೂರಿನಲ್ಲಿ ವಿಜಯನಗರ ಕಾಲದಿಂದಲೂ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ವಧಿಸಿದ ದಿನವೆಂದು ವಿಜಯದಶಮಿಯನ್ನು ‘ಕೆಟ್ಟದರ ಮೇಲೆ ಒಳ್ಳೆಯವರ ವಿಜಯ’ ಎಂದು ಸಾಂಕೇತಿಸುವ ಹಬ್ಬವಾಗಿದೆ. ರಾಜ್ಯದ ಕಲೆ ಮತ್ತು ಸಂಸ್ಕೃತಿಯ ಪ್ರದರ್ಶನಕ್ಕಾಗಿ ದಸರಾ ಮಹೋತ್ಸವವನ್ನು ‘ನಾಡ ಹಬ್ಬ’ವೆಂದು ಕರೆಯಲಾಗುತ್ತದೆ. ವಿಶ್ವ ವಿಖ್ಯಾತವಾದ ಮೈಸೂರು ದಸರಾ 10 ದಿನಗಳ ಕಾಲ ಸಂಭ್ರಮದಿAದ ಆಚರಿಸಲಾಗುತ್ತಿದ್ದು, ನಾಡಿನ ಎಲ್ಲಾ ದೇವಾಲಯಗಳಲ್ಲಿ ದುರ್ಗೆಯನ್ನು ನವರೂಪಗಳಲ್ಲಿ ಅಲಂಕರಿಸಿ ನವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಲಾಗುತ್ತದೆ.

    ತುಳುನಾಡಿನಲ್ಲಿ ನವರಾತ್ರಿಯನ್ನು ‘ಮಾರ್ನೆಮಿ’ ಎಂದು ಕರೆಯುತ್ತಾರೆ. ಒಂಭತ್ತು ರಾತ್ರಿಯ ಹಬ್ಬವಾದ ನವರಾತ್ರಿಯ ಒಂಭತ್ತನೆಯ ದಿನ ‘ಮಹಾನವಮಿ’ ತುಳುಭಾಷೆಯಲ್ಲಿ ‘ಮಾರ್ನೆಮಿ’ ಎಂದಾಗಿದೆ. ದುರ್ಗೆ ಹತ್ತು ರಾಕ್ಷಸರನ್ನು ಸಂಹರಿಸಿದ ರಾತ್ರಿಯೆಂದು ದಶಹರ/ದಸರಾ ಎಂದು ಕನ್ನಡದಲ್ಲಿ ಕರೆಯಲಾಗುತ್ತದೆ. ತುಳುನಾಡಿನ ದೇವಾಲಯಗಳಲ್ಲಿ ಮಾರ್ನೆಮಿಯ ಪ್ರಥಮ ದಿನದಂದು ‘ಕೊಪ್ಪರಿಗೆ’ ಏರಿಸಲಾಗುತ್ತದೆ. ಕೊಪ್ಪರಿಗೆ ಅಂದ್ರೆ ‘ನಿಧಿ’ ಎಂದರ್ಥ. ಭತ್ತಬೇಸಾಯ ಸಂಸ್ಕçತಿಯ ತುಳುನಾಡಿನಲ್ಲಿ ನವರಾತ್ರಿಯ ಒಂಭತ್ತು ದಿನಗಳಲ್ಲಿಯೂ ಧಾರ್ಮಿಕ ಕೇಂದ್ರಗಳಲ್ಲಿ ‘ಅನ್ನಪ್ರಸಾದ’ ಸೇವೆ ನಡೆಯುತ್ತದೆ. ಅನ್ನದಾನ ಎಂಬುದು ಪುಣ್ಯದಾನವೆಂದು ನಂಬಲಾಗುತ್ತಿದ್ದು ‘ಅನ್ನಪ್ರಸಾದ’ದ ಸೇವೆಗೆ ದೊಡ್ಡ ‘ಕಟಾರ’ದ ಅವಶ್ಯಕತೆ ಇದ್ದು ತುಳುವಿನಲ್ಲಿ ‘ಕೊಪ್ಪರಿಗೆ ಏರಾವುನಿ’ ಎಂದು ಶ್ರದ್ಧಾಭಕ್ತಿಯಿಂದ ಪೂಜಿಸಿ ಅನ್ನ ಬೇಯಿಸಲಾಗುತ್ತದೆ. ಮಾರ್ನೆಮಿಯ ಒಂಭತ್ತು ದಿನಗಳಲ್ಲಿಯೂ ವಿವಿಧ ವೇಷಗಳಿಂದ ವಿಶೇಷವಾಗಿ ಹುಲಿವೇಷ ಹಾಕಿ ದುರ್ಗೆಯನ್ನು ಆರಾಧಿಸಲಾಗುತ್ತದೆ. ನವರಾತ್ರಿ ಉತ್ಸವಕ್ಕೆ ಮತ್ತು ಹುಲಿವೇಷಕ್ಕೆ ನೇರವಾದ ಸಂಬಂಧವಿದೆ. ಹುಲಿ ದುರ್ಗಾದೇವಿಯ ವಾಹನ. ದುರ್ಗಾಮಾತೆ ಹುಲಿಯ ಮೇಲೆ ಕುಳಿತುಕೊಂಡು ರಕ್ಕಸರನ್ನು ಸಂಹರಿಸಿದ ಸಂಕೇತವಾಗಿ ಹುಲಿವೇಷ ಹಾಕಿ ದೇವಿಯನ್ನು ಆರಾಧಿಸುತ್ತಾರೆ. ಇದು ದುಷ್ಟಶಕ್ತಿಗಳನ್ನು ನಿಗ್ರಹಿಸಿದ ಸಂಕೇತವೂ ಆಗಿದೆ.

    ತುಳುನಾಡಿನಲ್ಲಿ ಹುಲಿ ವೇಷದ ಹಿಂದೆ ಜನಪದ ಕತೆ ಇದ್ದು ಮಕ್ಕಳಲ್ಲಿ ಅಂಗವಿಕಲತೆ, ಆರೋಗ್ಯ ಸಮಸ್ಯೆ ಇದ್ದರೆ ಮಾರ್ನೆಮಿಯ ದಿನಗಳಲ್ಲಿ ಮಕ್ಕಳಿಗೆ ಹುಲಿ ವೇಷ ಹಾಕುವ ಹರಕೆ ಹೊತ್ತರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ತುಳುನಾಡಿನಲ್ಲಿ ನವರಾತ್ರಿಯನ್ನು ‘ಶಾರದಾ ಮಹೋತ್ಸವ’ ಎಂದೂ ಕರೆಯುತ್ತಾರೆ. ಐದನೇ ದಿನದ ಲಲಿತ ಪಂಚಮಿಯಂದು ವಿದ್ಯೆಯ ಅಧಿದೇವತೆಯಾದ ಶಾರದೆಯ ಪ್ರತಿಷ್ಠಾಪನೆ ಮಾಡಿ ಪುಟ್ಟ ಮಕ್ಕಳನ್ನು ಶಾರದೆಯ ಮುಂದೆ ಕೂರಿಸಿ ಅಕ್ಷರಾಭ್ಯಾಸದ ಆರಂಭ ಮಾಡಲಾಗುತ್ತದೆ. ವಿದ್ಯೆಯೇ ಬದುಕಿನ ಮೂಲಾಧಾರ. ಉತ್ತಮ ಶಿಕ್ಷಣದಲ್ಲಿಯೇ ಮಕ್ಕಳ ಉಜ್ವಲ ಭವಿಷ್ಯ ಅಡಗಿದೆ.

    ಪ್ರಸ್ತುತ ಪ್ರಪಂಚವು ಎದುರಿಸುತ್ತಿರುವ ಅತ್ಯಾಚಾರ, ದುರಾಚಾರ, ಪೈಶಾಚಿಕತ್ವ ಎಲ್ಲದರ ಪರಿಹಾರಕ್ಕೆ ದುರ್ಗಾರಾಧನೆ ಪರಿಣಾಮಕಾರಿ ಎಂದು ನಂಬಲಾಗುತ್ತದೆ. ಈ ಮುಖೇನ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ, ರಾಕ್ಷಸತನದ ದಮನಕ್ಕೆ ‘ದುರ್ಗತಿಹಾರಿಣಿ ದುರ್ಗಾಮಾತೆಯ’ ಆರಾಧನೆ ಮಹತ್ವದ್ದಾಗಿದೆ. ಅಧರ್ಮದ ವಿರುದ್ಧದ ಯುದ್ಧದಲ್ಲಿ ಕೊನೆಗೆ ಧರ್ಮ ವಿಜಯದ ಸಂದೇಶವೇ ‘ದುರ್ಗಾರಾಧನೆ’
    ಸುಜ್ಞಾನದ ದೀಪ ಬೆಳಗುವ ಹಬ್ಬ ‘ದೀಪಾವಳಿ’. ರಾಷ್ಟ್ರೀಯ ಹಬ್ಬವೆಂದು ಖ್ಯಾತಿ ಪಡೆದ ‘ದೀಪಾವಳಿ’ ಹಬ್ಬಕ್ಕೆ ವಿಶಿಷ್ಟವಾದ ಸ್ಥಾನವಿದೆ. ದೀಪಾವಳಿ ಇತರ ಹಬ್ಬಗಳಂತೆ ಕೇವಲ ಆರಾಧನೆಯನ್ನು ಕೇಂದ್ರೀಕರಿಸುವ ಹಬ್ಬವಲ್ಲ. ಮನುಷ್ಯನ ಮನಸ್ಸಿನ ಕತ್ತಲೆಯನ್ನು ನೀಗಿಸಿ, ಅಜ್ಞಾನವನ್ನು ತೊಲಗಿಸಿ ಸುಜ್ಞಾನದ ಬೆಳಕಿನ ಹಣತೆ ಹಚ್ಚುವ ಮೂಲಕ ಮಾನವೀಯ ಸಂತಸಗಳನ್ನು ಸಂಭ್ರಮಿಸುವ ಹಬ್ಬ. ಜ್ಞಾನದ ಬೆಳಕೆಂದರೆ ಗುರುವಿದ್ದಂತೆ. ‘ಅರಿವೇ ಗುರು’. ಒಳ್ಳೆಯತನವನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಲೌಕಿಕ ಬದುಕಿನ ಬೆಳಕೇ ಬೆಳಕು… ಸೊಗಸೇ ಸೊಗಸು… ಕಾರ್ತಿಕ ಮಾಸದಲ್ಲಿ ಬರುವ ದೀಪಾವಳಿ, ದೀಪ ಮತ್ತು ಆವಳಿ ಎಂಬ ಎರಡು ಪದಗಳ ಸಂಯೋಜನೆಯಿಂದ ರೂಪುಗೊಂಡಿದೆ. ಆವಳಿ ಎಂದರೆ ಸಾಲು ಅಥವಾ ಗುಂಪು ಎಂದರ್ಥ.

    ದೀಪಾವಳಿಯೊಂದಿಗೆ ಹಲವು ಪೌರಾಣಿಕ ಕತೆಗಳು ಮಿಳಿತಗೊಂಡಿವೆ. ಶ್ರೀರಾಮಚಂದ್ರ ವಿಜಯದಶಮಿಯಂದು ರಾವಣ ಸಂಹಾರ ಮಾಡಿ ಸರಿಯಾಗಿ ಇಪ್ಪತ್ತು ದಿನಕ್ಕೆ ಲಂಕೆಯಿಂದ ಅಯೋಧ್ಯಾ ತಲುಪಿದ್ದಾನೆ ಎಂದೂ, 14 ವರ್ಷಗಳ ವನವಾಸದ ಬಳಿಕ ತಮ್ಮ ಪ್ರಭುವಿನ ಅಯೋಧ್ಯಾಗಮನದ ಸಂಭ್ರಮವಾಗಿ ಪ್ರಜೆಗಳು ಸುತ್ತಲೂ ದೀಪಗಳನ್ನು ಬೆಳಗಿ ಶ್ರೀರಾಮಚಂದ್ರನನ್ನು ಸ್ವಾಗತಿಸಿದರು ಎಂಬುದು ಪೌರಾಣಿಕ ಐತಿಹ್ಯ. ಉತ್ತರಭಾರತದ ಸುತ್ತಮುತ್ತಲಿನ ರಾಜ್ಯಗಳ ಜನರು ಇಂದಿಗೂ ಈ ನಂಬಿಕೆಯನ್ನು ಉಳಿಸಿಕೊಂಡು ಶ್ರದ್ಧಾಭಕ್ತಿಯಿಂದ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಭಾರತದ ಪೂರ್ವಭಾಗಗಳಲ್ಲಿ ಮುಖ್ಯವಾಗಿ ಪಶ್ಚಿಮಬಂಗಾಳ, ಒಡಿಶಾ, ಅಸ್ಸಾಂನಲ್ಲಿ ದೀಪಾವಳಿ ಅಮವಾಸ್ಯೆಯಂದು ಕಾಳಿದೇವಿಯನ್ನು ಆರಾಧಿಸಲಾಗುತ್ತಿದ್ದು ಈ ಪೂಜೆಯನ್ನು ‘ಶ್ಯಾಮ ಪೂಜೆ’ಯೆಂದು ಕರೆಯಲಾಗುತ್ತದೆ.

    ಮಹಾರಾಷ್ಟ್ರದಲ್ಲಿ ಐದು ದಿನಗಳ ಕಾಲ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಅಲ್ಲಿ ಈ ಹಬ್ಬವನ್ನು ‘ದಿವಾಳಿ’ ಎಂದು ಕರೆಯುತ್ತಾರೆ. ಮೊದಲನೇ ದಿನ ‘ಧನ್ ತೇರಸ್’ ನಂದು ಮನೆಗೆ ಬೇಕಾದ ಹೊಸವಸ್ತುಗಳನ್ನು ಖರೀದಿಸಲು ಶುಭದಿನವೆಂದು ನಂಬಲಾಗುತ್ತಿದೆ. ಮಾರನೇ ದಿನ ಬರುವ ನರಕ ಚತುರ್ದಶಿಯನ್ನು ‘ಛೋಟಿ ದಿವಾಲಿ’ ಎಂದು ಕರೆಯುತ್ತಾರೆ. ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿ ಅವನ ಬಂಧನದಲ್ಲಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ಬಂಧಮುಕ್ತಗೊಳಿಸಿದ ಸಂಭ್ರಮವನ್ನು ಲೋಕದ ಜನರು ಸೂರ್ಯೋದಯಕ್ಕೆ ಮೊದಲೇ ಎದ್ದು ಅಭ್ಯಂಜನ ಸ್ನಾನ ಮಾಡಿ ಸುತ್ತಲೂ ದೀಪಗಳನ್ನು ಬೆಳಗಿ ಪಟಾಕಿ ಸಿಡಿಸಿ, ಸಿಹಿ ಹಂಚುತ್ತಾರೆ. ಸಂಜೆ ಲಕ್ಷ್ಮೀ ಪೂಜೆ. ದೀಪಾವಳಿ ಅಮವಾಸ್ಯೆಯಲ್ಲಿ ಲಕ್ಷ್ಮೀ ಪೂಜೆ ಮಾಡುವುದು ಶುಭದಾಯಕವೆಂದು ನಂಬಲಾಗುತ್ತದೆ. ದೇವಾಸುರರು ಅಮೃತ ಪ್ರಾಪ್ತಿಗಾಗಿ ಹಾಲ್ಗಡಲನ್ನು ಕಡೆವಾಗ ‘ಲಕ್ಷ್ಮೀ’ ಎಂಬ ಸಂಪತ್ತಿನ ದೇವತೆ ಉದ್ಭವವಾದ ಹಿನ್ನೆಲೆಯಲ್ಲಿ ಲಕ್ಷ್ಮೀ ಪೂಜೆ ಆಚರಿಸಲಾಗುತ್ತದೆ.

    ಕರ್ನಾಟಕದಲ್ಲಿ ಒಂದೊಂದು ಭಾಗದಲ್ಲಿ ಭಿನ್ನಭಿನ್ನವಾಗಿ ದೀಪಾವಳಿ ಆಚರಿಸಲಾಗುತ್ತದೆ. ಮೂರುದಿನಗಳ ದೀಪಾವಳಿ ಆಚರಣೆಯಲ್ಲಿ ನರಕ ಚತುರ್ದಶಿಯಂದು ಅಭ್ಯಂಜನ ಸ್ನಾನ, ಲಕ್ಷ್ಮೀ ಪೂಜೆಯಂದು ಗಣೇಶ ಮತ್ತು ಲಕ್ಷ್ಮೀ ಪೂಜೆ, ಮೂರನೇ ದಿನ ಬಲಿಪಾಡ್ಯಮಿಯಂದು ಬಲೀಂದ್ರ ಪೂಜೆ ಮಾಡಲಾಗುತ್ತದೆ. ಅಂದು ರೈತರು ತಮ್ಮ ಗದ್ದೆ ಸುತ್ತಲೂ ದೀಪವಿಟ್ಟು ಬಲಿಚಕ್ರವರ್ತಿಯನ್ನು ಸ್ಮರಿಸುತ್ತಾರೆ. ಅಂದು ಶಿವಪಾರ್ವತಿಯರು ಪಗಡೆಯಾಟವಾಡಿದ ಸಂಕೇತವಾಗಿ ಬಹಳಷ್ಟು ಮನೆಗಳಲ್ಲಿ ಪಗಡೆಯಾಡುವುದು ವಾಡಿಕೆ.

    ತುಳುನಾಡಿನಲ್ಲಿ ನಾಲ್ಕು ದಿನಗಳ ಕಾಲ ದೀಪಾವಳಿ ಆಚರಿಸಲಾಗುತ್ತದೆ. ಮನೆಗಳ ಸುತ್ತಲೂ ದೀಪಗಳನ್ನು ಬೆಳಗಿ ಪಟಾಕಿ ಸಿಡಿಸಿ ಸಿಹಿ ತಿನಿಸುಗಳನ್ನು ಹಂಚಲಾಗುತ್ತದೆ. ಮೊದಲ ದಿನ ಸಂಧ್ಯಾಕಾಲದಲ್ಲಿ ನೀರು ತುಂಬುವ ಹಬ್ಬ, ಮಾರನೇ ದಿನ ನರಕ ಚತುರ್ದಶಿಯಂದು ಸೂರ್ಯೋದಯಕ್ಕೆ ಮೊದಲೇ ಅಭ್ಯಂಜನ ಸ್ನಾನ, ಮೂರನೇ ದಿನ ಲಕ್ಷ್ಮೀ ಪೂಜೆಯಂದು ಮನೆಮನೆಗಳಲ್ಲಿ ಪೂಜಾ ಸಂಭ್ರಮ, ಅಂದು ವರ್ತಕರು ಲಕ್ಷ್ಮೀ ಪೂಜೆ ಮಾಡಿ ಹೊಸ ಲೆಕ್ಕಗಳನ್ನು ಪ್ರಾರಂಭಿಸುವ ಪರಿಪಾಠ ಹಿಂದಿನಿAದಲೂ ನಡೆದುಕೊಂಡು ಬಂದಿದೆ. ನಾಲ್ಕನೆಯ ದಿನ ಗೋಪೂಜೆ ಮತ್ತು ಬಲೀಂದ್ರ ಪೂಜೆ. ಅಂದು ಹಸುಗಳನ್ನು ಮೀಯಿಸಿ ಅರತಿ ಬೆಳಗಿ ಸಿಹಿ ತಿನ್ನಿಸಲಾಗುತ್ತದೆ. ರೈತರು ಸಂಜೆ ಹೊತ್ತು ಗದ್ದೆತೋಟಗಳ ಅಂಚಿನಲ್ಲಿ ಸಾಲು ದೀಪಗಳನ್ನು ಬೆಳಗಿ ಬಲೀಂದ್ರನನ್ನು ಕರೆಯುತ್ತಾರೆ. ಈ ಪದ್ಧತಿ ಫಲವಂತಿಕೆಯನ್ನು ನೀಡುವ ಶಕ್ತಿಮಾತೆಯ ಆರಾಧನಾ ಕ್ರಮವಾಗಿದೆ.

    ಒಟ್ಟಿನಲ್ಲಿ ದೀಪಾವಳಿಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಮನೆಮಂದಿಗೆ ಹೊಸಬಟ್ಟೆ, ಹೊಸ ವಸ್ತುಗಳ ಖರೀದಿ, ಮಹಿಳೆಯರಿಗೆ ಬಗೆಬಗೆಯ ಸಿಹಿತಿನಿಸುಗಳ ತಯಾರಿಯ ಸಂಭ್ರಮ ಜೊತೆಗೆ ಬಣ್ಣಬಣ್ಣದ ಗೂಡುದೀಪಗಳ ತಯಾರಿ, ಮಕ್ಕಳಿಗೆ ಕಿವಿಗಡಚಿಕ್ಕುವ ಪಟಾಕಿ ಸುಡುವ ಸಂಭ್ರಮವೇ ಸಂಭ್ರಮ…. ವಿವಿಧ ಧರ್ಮಗಳ, ವೈವಿಧ್ಯಮಯ ಸಂಸ್ಕೃತಿಯ ಭಾರತದಲ್ಲಿ ದೀಪಾವಳಿ ಬರಿಯ ದೀಪಗಳ ಹಬ್ಬವಲ್ಲ. ನಂಬಿಕೆ-ಆಚರಣೆ, ಪುರಾಣ ಕಥನಗಳ ಮಿಳಿತದೊಂದಿಗೆ ಪ್ರಕೃತಿಯೊಂದಿಗಿನ ಅನುಸಂಧಾನದ ಪರ್ವ ದಿನವಾಗಿದೆ. ಮಾನವೀಯ ಸಂಬಂಧಗಳನ್ನು ಬೆಸೆದು ಚಿರನೂತನಗೊಳಿಸುವ ಸಂಭ್ರಮದ ಹಬ್ಬವಾಗಿದೆ.

    ಸುಖಲಾಕ್ಷಿ ವೈ. ಸುವರ್ಣ

  • ವಿದ್ಯಾರ್ಥಿಗಳ ಗೌರವ ಗಳಿಸಲು ವಿಫಲರಾಗುತ್ತಿರುವರೇ ಅಧ್ಯಾಪಕರು? 
ಇಲ್ಲಿವೆ ಡಾ| ಸಿ.ಜೆ. ಜೋನ್ ರ 10 ಸೂತ್ರಗಳು

    ವಿದ್ಯಾರ್ಥಿಗಳ ಗೌರವ ಗಳಿಸಲು ವಿಫಲರಾಗುತ್ತಿರುವರೇ ಅಧ್ಯಾಪಕರು? ಇಲ್ಲಿವೆ ಡಾ| ಸಿ.ಜೆ. ಜೋನ್ ರ 10 ಸೂತ್ರಗಳು

    ವಿದ್ಯಾರ್ಥಿಗಳೊಂದಿಗೆ ಸ್ವಲ್ಪ ಜೋರಾಗಿ ಮಾತನಾಡಿದರೂ ಶಿಕ್ಷಕರ ವಿರುದ್ಧ ದೂರು ನೀಡಲು ಹಿಂದೆ ಮುಂದೆ ನೋಡದ ಹೆತ್ತವರು ಇರುವ ಕಾಲವಿದು. ಶಿಕ್ಷಣ ವ್ಯವಸ್ಥೆಗೆ ವಿರುದ್ಧವಾಗಿ ವ್ಯವಹರಿಸುವ ವಿದ್ಯಾರ್ಥಿಗಳೂ ಇರುತ್ತಾರೆ. ಇವೆಲ್ಲವುಗಳು ಅಧ್ಯಾಪಕರ ಆತ್ಮಸ್ಥೈರ್ಯವನ್ನು ಕಡಿಮೆ ಮಾಡುತ್ತದೆ.

    ಮಕ್ಕಳು ಅತಿಯಾದ ತುಂಟಾಟವನ್ನು ತೋರಿಸಿದರೆ ಅಧ್ಯಾಪಕರು ಜೋರು ಮಾಡಿದರೆ ಅಥವಾ ಶಬ್ದವನ್ನು ಎತ್ತರಿಸಿ ಮಾತನಾಡಿದರೆ ಕಣ್ಣು ದೊಡ್ಡದು ಮಾಡಿ ನೋಡಿದರೆ ಮಕ್ಕಳ ಮನಸ್ಸಿನಲ್ಲಿ ಗಾಯ ಉಂಟಾಗುತ್ತದೆ. ಆದರೆ ತಪ್ಪುಗಳನ್ನು ಪುನರಾವರ್ತಿಸದೆ ಇರುವ ರೀತಿಯಲ್ಲಿ ವಿಷಯಗಳನ್ನು ಪ್ರೀತಿಯೊಂದಿಗೆ ಮನವರಿಕೆ ಮಾಡಿ ಹೃದಯದಲ್ಲಿ ಬೆಳಕನ್ನು ಹಚ್ಚುವ ಒಳ್ಳೆಯ ಅಧ್ಯಾಪಕರು ಇಂದಿಗೂ ಇದ್ದಾರೆ .ಅವರು ಕೂಡ ನಿಷ್ಕ್ರಿಯರಾಗಿ ಮಾರ್ಪಡುವ ರೀತಿಯಲ್ಲಿ ಇಂದಿನ ಹಲವು ವಿದ್ಯಾಸಂಸ್ಥೆಗಳ ಪರಿಸ್ಥಿತಿ ಬದಲಾಗಿದೆ. “ನನ್ನ ಮಗನನ್ನು ಶಿಕ್ಷಿಸುವ ಅಧಿಕಾರವನ್ನು ನಾನು ಯಾರಿಗೂ ನೀಡಿಲ್ಲ” ಎಂಬ ರೀತಿಯ ಹೇಳಿಕೆಗಳು. `ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬ ವಿಧಾನವನ್ನು ಸ್ವೀಕರಿಸಿದ ಅಹಂಕಾರದಿAದ ವರ್ತಿಸುವ ಹೆತ್ತವರ ಸಂಖ್ಯೆ ಇಂದು ಹೆಚ್ಚುತ್ತಿದೆ.

    ವಿದ್ಯಾರ್ಥಿಗಳ ಗೌರವವನ್ನು ಗಳಿಸಲು ವಿಫಲರಾದ ಶಿಕ್ಷಕರು
    ಕಲಿಕೆಯ ಜೊತೆಗೆ ವ್ಯಕ್ತಿತ್ವವನ್ನು ರೂಪಿಸುವಂತಹ ಕೆಲಸದಲ್ಲಿ ಅಧ್ಯಾಪಕರ ಪಾತ್ರವನ್ನು ಇಂದಿನ ಶೈಕ್ಷಣಿಕ ವ್ಯವಸ್ಥೆ ಕಡಿಮೆ ಮಾಡುತ್ತಿದೆ ಎಂಬುದರ ಸೂಚನೆಗಳು ಲಭಿಸುತ್ತಿವೆ. ಮಾದರಿ ಯೋಗ್ಯವಾದಂತಹ ವ್ಯವಹಾರ ಮತ್ತು ಶೈಲಿಗಳ ಅಭಾವ, ಜೊತೆಗೆ ಅಧ್ಯಾಪಕ ವೃತ್ತಿಯಲ್ಲಿ ವಿಶಿಷ್ಟತೆಯನ್ನು ತೋರ್ಪಡಿಸಲು ಸಾಧ್ಯವಾಗದೆ ಇರುವ ಕಾರಣ ವಿದ್ಯಾರ್ಥಿಗಳಿಂದ ಗೌರವವನ್ನು ಗಳಿಸಲು ಸಾಧ್ಯವಾಗದ ಶಿಕ್ಷಕರ ಸಂಖ್ಯೆ ಹೆಚ್ಚುತ್ತಿದೆ.

    ಹೆತ್ತವರು ವಿದ್ಯಾರ್ಥಿಗಳು ಅಧ್ಯಾಪಕರು ಮುಂತಾದವರೆಲ್ಲ ಸೇರಿ ಉಂಟಾಗುವ ವಿದ್ಯಾಲಯದ ಪರಿಸರದ ಬಗ್ಗೆ ಅನೇಕ ಪ್ರಶ್ನೆಗಳು ಏಳುತ್ತಿವೆ. ತಾಂತ್ರಿಕತೆಯ ಡಿಜಿಟಲ್ ಯುಗವು ಮಕ್ಕಳ ಸ್ವಭಾವವನ್ನು ಉಂಟು ಮಾಡುವುದರಲ್ಲಿ, ಅವರ ಸಾಮಾಜಿಕ ವರ್ತನೆಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಅಮಲು ಪದಾರ್ಥಗಳ ವ್ಯಾಪಕವಾದ ಬಳಕೆಯು ಇನ್ನೊಂದು ಮುಖ್ಯ ಸಮಸ್ಯೆಯಾಗಿದೆ. ಕಾಲಕ್ಕೆ ಅನುಗುಣವಾಗಿ ಪ್ರತಿಯೊಬ್ಬರ ಪಾತ್ರವು ಪುನರ್ನವೀಕರಿಸಲ್ಪಡುತ್ತಿದೆ. ಅರ್ಥಪೂರ್ಣವಾಗಿ ಎಲ್ಲರೂ ಜೊತೆಗೂಡಿ ವಿಷಯಗಳನ್ನು ಗಮನಿಸದೇ ಹೋದರೆ, ಕ್ರಮಗಳನ್ನು ಕೈಗೊಳ್ಳದಿದ್ದರೆ ಮಕ್ಕಳು ನಮ್ಮ ಕೈಯಿಂದ ಹೊರಟು ಹೋಗಬಹುದು.

    ಸರ್ ಸ್ವಲ್ಪ ಬದಲಾಗೋಣ
    ಯಾವುದೇ ವಿಷಯದಲ್ಲಾದರೂ ಒಂದಕ್ಕಿಂತ ಒಂದು ಉತ್ತಮವಾದಂತಹ ಆನ್‌ಲೈನ್ ಕ್ಲಾಸುಗಳು ಇಂದು ಲಭ್ಯವಿದೆ. ಗೂಗಲ್‌ನಲ್ಲಿ ಸರ್ಚ್ ಮಾಡಿದರೆ ಎಲ್ಲ ರೀತಿಯ ಮಾಹಿತಿಗಳು ಒಳ್ಳೆಯ ರೀತಿಯಲ್ಲಿ ಸಿಗುತ್ತದೆ. ಅದೇ ರೀತಿ ಆರ್ಟಿಫಿಶಿಯಲ್ ಇಂಟಲಿಜೆನ್ಸಿಯ ಸಹಾಯವು ಇದೆ. ಜ್ಞಾನವನ್ನು ಗಳಿಸಬೇಕೆಂದು ಬಯಸುವ ವಿದ್ಯಾರ್ಥಿಗಳಿಗೆ ಅಪಾರವಾದಂತಹ ಸಾಧ್ಯತೆಗಳು ಮುಂದಿವೆ. ಅವರಿಗೆ ಅಧ್ಯಾಪಕರನ್ನು ಆಶ್ರಯಿಸದೆಯೇ ಜ್ಞಾನವನ್ನು ಗಳಿಸಬಹುದಾಗಿದೆ. ಪರೀಕ್ಷೆಗಳಿಗೆ ಸಿದ್ಧತೆಯನ್ನು ನಡೆಸಬಹುದಾಗಿದೆ. ಆದರೆ ತರಗತಿಗಳಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಜೊತೆಗೂಡಿ ಗಳಿಸುವ ವಿದ್ಯೆಯಲ್ಲಿ ಅದರದ್ದೇ ಆದ ವಿಶೇಷತೆ ಇದೆ.

    ಇದರಲ್ಲಿ ವೀಕ್ಷಣಾ ಸಾಮರ್ಥ್ಯವು ಶಕ್ತಿಯುತವಾಗುತ್ತದೆ. ಇದೆಲ್ಲಾ ಸಾಧ್ಯವಾಗಬೇಕಾದರೆ ಇಂದಿನ ಕಾಲದಲ್ಲಿ ಅಧ್ಯಾಪಕರು ಹೆಚ್ಚು ಪಕ್ವತೆಯೊಂದಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಆ ರೀತಿಯಲ್ಲಿ ನಮ್ಮ ಬೋಧನಾ ರೀತಿಯನ್ನು ನವೀಕರಿಸಲು ಅಧ್ಯಾಪಕರಿಗೆ ಸಾಧ್ಯವಾಗಬೇಕು. ತಾವು ಬೋಧಿಸುತ್ತಿರುವ ವಿಷಯಗಳು ಯಾವ ಮೂಲದಿಂದೆಲ್ಲ ಗಳಿಸಿ ಜ್ಞಾನದ ಪರಿಪೂರ್ಣತೆಯೆಡೆಗೆ ತಲುಪಲು ಸಾಧ್ಯ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡಲು ಅಧ್ಯಾಪಕರಿಗೆ ಸಾಧ್ಯವಾಗಬೇಕು.

    ಪ್ರತಿ ವರ್ಷ ಮೊದಲೇ ಸಿದ್ದಪಡಿಸುತ್ತಿರುವ ಒಂದು ನೋಟ್ಸ್ ನ ಭಾಗಗಳನ್ನು ಹಿಡಿದುಕೊಂಡು ಪ್ರತಿ ವರ್ಷವೂ ಅದನ್ನೇ ಪುನರಾವರ್ತಿಸುತ್ತಿದ್ದ ಅದೇ ಹಳೆಯ ಕಥೆಗಳನ್ನು ಹೇಳುತ್ತಾ ಮುಂದೆ ಸಾಗುವುದು ಈ ವೈಜ್ಞಾನಿಕ ಕ್ರಾಂತಿಯ ಯುಗದಲ್ಲಿ ಇರುವಂತಹ ಅಧ್ಯಾಪಕರಿಗೆ ಸೂಕ್ತವಾದ ವಿಧಾನವಲ್ಲ. ವಿಷಯಗಳ ಸಂಗ್ರಹ ಮತ್ತು ಕಲಿಸುವಂತಹ ಶೈಲಿಯನ್ನು ನವೀಕರಿಸುತ್ತಲೇ ಇರಬೇಕಾಗುತ್ತದೆ. ಗುರುಗಳಿಗಿಂತ ಹೆಚ್ಚು ಅರಿವನ್ನು ಹೊಂದಿರುವ ಬಹಳ ಬುದ್ಧಿವಂತರಾದ ಮಕ್ಕಳನ್ನು ಹೊಂದಿದ ತರಗತಿಗಳು ಇರುತ್ತವೆ. ಅವರ ಸಂಶಯಗಳಿಗೆ ಸರಿಯಾದ ಉತ್ತರವನ್ನು ನೀಡಲು, ಅದು ಎಲ್ಲಿಂದ ಸಿಗುತ್ತದೆ ಎಂಬುದನ್ನು ಗುರುತಿಸಿ ಹೇಳಲು ಶಿಕ್ಷಕರಿಗೆ ಸಾಧ್ಯವಾಗಬೇಕು.

    ವಿವಿಧ ಕಾರಣಗಳಿಂದಾಗಿ ಕುಟುಂಬದಲ್ಲಿ ಮಕ್ಕಳಿಗೆ ಸಿಗಬೇಕಾದಂತಹ ಗಮನ ಸಿಗದೇ ಹೋದ ಪರಿಸ್ಥಿತಿಯಲ್ಲಿ ಅಧ್ಯಾಪಕರ ಹೊಣೆಗಾರಿಕೆ ಬಹಳ ಹೆಚ್ಚಿದೆ. ವಿದ್ಯಾರ್ಥಿಗಳನ್ನು ಒಳ್ಳೆಯ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು, ಉತ್ತಮವಾದಂತಹ ಮಾರ್ಗದಲ್ಲಿ ಅವರನ್ನು ಮುಂದೆ ಕೊಂಡು ಹೋಗುವಂತಹ ಮಾರ್ಗದರ್ಶನವನ್ನು ನೀಡಲು ಓರ್ವ ಮಾರ್ಗದರ್ಶಕನ ವೇಷವನ್ನು ಅವರು ಧರಿಸಬೇಕಾಗಿ ಬರುತ್ತದೆ. ಈ ಪಾತ್ರವನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾದರೆ ಖಂಡಿತವಾಗಿಯೂ ಅಂತಹ ಅಧ್ಯಾಪಕರಿಗೆ ಉತ್ತಮ ಗೌರವ ಲಭಿಸುತ್ತದೆ.

    ಮಾದರಿ ಅಧ್ಯಾಪಕರಾಗೋಣ
    ಯಾರು ಅತ್ಯುತ್ತಮ ಅಧ್ಯಾಪಕರು ಎಂಬ ವಿಷಯದಲ್ಲಿ ಈ ಹಿಂದೆ ಶಾಲೆಗಳಲ್ಲಿ ನಡೆಸಿದಂತಹ ಒಂದು ಅಧ್ಯಯನವಿದೆ. ಅದು ಇಂದಿಗೂ ಪ್ರಸಕ್ತವಾಗಿದೆ. ಯಾರು ವಿದ್ಯಾರ್ಥಿಗಳೊಂದಿಗೆ ಬಹಳ ಆತ್ಮೀಯತೆಯೊಂದಿಗೆ, ಸಹಕಾರ ನೀಡಿ, ಪ್ರಜಾಪ್ರಭುತ್ವ ಶೈಲಿಯಲ್ಲಿ ವರ್ತಿಸುತ್ತಾರೋ ಅಂತಹ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಪ್ರೀತಿ ಪಾತ್ರ ಎನಿಸಿಕೊಳ್ಳುತ್ತಾರೆ. ಪ್ರೀತಿಯ ಮನಸ್ಸುಳ್ಳ, ಸಣ್ಣವರನ್ನು ಅಂಗೀಕರಿಸುವAತಹ, ಕ್ಷಮೆಯೊಂದಿಗೆ ವರ್ತಿಸುವಂತಹ, ಅನುಭವಿಗಳಾಗಿ ವ್ಯವಹರಿಸುವಂತಹ ಮನೋಭಾವವನ್ನು ಮತ್ತು ವಿದ್ಯಾರ್ಥಿಗಳ ಹಿತವನ್ನು ಬಯಸುವಂತಹ ಶಿಕ್ಷಕರನ್ನು ಮಕ್ಕಳು ಸದಾ ಇಷ್ಟಪಡುತ್ತಾರೆ. ಮೃದುಮನಸ್ಕರಾದ, ಎಲ್ಲರನ್ನೂ ಪರಿಗಣಿಸುವ ಸಹನೆಯೊಂದಿಗೆ ಸಹಾನುಭೂತಿಯೊಂದಿಗೆ ವರ್ತಿಸುವ ಅಧ್ಯಾಪಕರನ್ನು ಎಲ್ಲ ವಿದ್ಯಾರ್ಥಿಗಳು ಇಷ್ಟಪಡುತ್ತಾರೆ.

    ಯಾರಾದರೂ ಒಂದಿಬ್ಬರು ವಿದ್ಯಾರ್ಥಿಗಳ ಹಿಂದೆ ಬಿದ್ದು ಅವರನ್ನೇ ಇಷ್ಟಪಡುವ ಇತರ ವಿದ್ಯಾರ್ಥಿಗಳೊಂದಿಗೆ ತಾರತಮ್ಯವನ್ನು ತೋರುವ ಅಧ್ಯಾಪಕರನ್ನು ಯಾರೂ ಇಷ್ಟಪಡುವುದಿಲ್ಲ. ಬದಲಾಗಿ ಪಕ್ಷಪಾತ ರಹಿತವಾಗಿ ಎಲ್ಲರೊಂದಿಗೂ ವ್ಯವಹರಿಸುವ ಶಿಕ್ಷಕರೇ ವಿದ್ಯಾರ್ಥಿಗಳ ಪಾಲಿಗೆ ಶ್ರೇಷ್ಠ ಅಧ್ಯಾಪಕರು.

    ಏನಾದರೂ ಸಮಸ್ಯೆಗಳು ಉಂಟಾದರೆ ಅದನ್ನು ಬಗೆಹರಿಸಲು ಸಾಧ್ಯವಿರುವ ಮತ್ತು ಅದರಲ್ಲಿ ಆಸಕ್ತಿಯನ್ನು ತೋರಿಸುವ ಶಿಕ್ಷಕರು ಒಳ್ಳೆಯ ಮನಸ್ಸುಳ್ಳ ಶಿಕ್ಷಕರಾಗಿರುತ್ತಾರೆ. ವಿದ್ಯಾರ್ಥಿಗಳ ಮಧ್ಯೆ ಇರುವ ವೈಮನಸನ್ನು ತಮ್ಮ ಹಾಸ್ಯ ಮಿಶ್ರಿತ ರೀತಿಯಲ್ಲಿ ಹೋಗಲಾಡಿಸಿ ಅವರ ಹೃದಯವನ್ನು ಗೆಲ್ಲಲು ಸಾಧ್ಯವಾದರೆ ಅದು ಬಹಳಷ್ಟು ಉಪಯುಕ್ತ.

    ಆಹ್ಲಾದಕರವಾದ ವ್ಯಕ್ತಿತ್ವ, ವರ್ತನೆಗಳು, ಶರೀರ ಭಾಷೆ ಮುಂತಾದವುಗಳನ್ನು ಹೊಂದಿರುವ ಅಧ್ಯಾಪಕರು ವಿದ್ಯಾರ್ಥಿಗಳ ಪ್ರೀತಿಯನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಅಧ್ಯಯನಗಳ ಮೂಲಕ ತಿಳಿದುಬಂದಿದೆ. ಪರಿಸ್ಥಿತಿಗೆ ಅನುಗುಣವಾಗಿ ಬೋಧನಾ ಶೈಲಿಯಲ್ಲಿ ಬದಲಾವಣೆಯನ್ನು ಮಾಡುವ, ಹೊಸ ವಿಧಾನಗಳನ್ನು ಸ್ವೀಕರಿಸುವ ಅರ್ಥಪೂರ್ಣವಾದ ಬದಲಾವಣೆಗಳನ್ನು ಮಾಡುವ ಸಾಮರ್ಥ್ಯ, ಉತ್ತಮ ಅಧ್ಯಾಪಕನಿಗೆ ಇರುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ. ವಿದ್ಯಾರ್ಥಿಗಳಲ್ಲಿ ಕಂಡು ಬರುವ ಸಣ್ಣ ವಿಶೇಷತೆಯನ್ನು ಗಮನಿಸಿ ಅದನ್ನು ಗೌರವಿಸಿ ಪ್ರೋತ್ಸಾಹಿಸುವ ಸಾಮರ್ಥ್ಯವಿರುವ ಅಧ್ಯಾಪಕರು ಸದಾ ವಿದ್ಯಾರ್ಥಿಗಳ ಮನಸ್ಸಿನಾಳದಲ್ಲಿ ಉಳಿಯುತ್ತಾರೆ. ಕಲಿಸುವ ವಿಷಯದ ಬಗ್ಗೆ ಆಳವಾದ ಅರಿವು ಉತ್ತಮ ಅಧ್ಯಾಪಕನ ಗುಣಗಳ ಪೈಕಿ ಒಂದಾಗಿದೆ.

    ಕಠೋರವಾಗಿ ವರ್ತಿಸಿ ಶಿಸ್ತನ್ನು ಪಾಲಿಸುವಂತೆ ಮಾಡಲು ಸಾಧ್ಯವಿಲ್ಲ
    ವಿದ್ಯಾರ್ಥಿಗಳು ತಮಗೆ ವಿಧೇಯರಾಗಿರಬೇಕು ಮತ್ತು ಅವರು ಸದಾ ಶಿಸ್ತಿನೊಂದಿಗೆ ವರ್ತಿಸಬೇಕು ಎಂಬುದು ಎಲ್ಲ ಶಿಕ್ಷಕರ ಕನಸಾಗಿರುತ್ತದೆ. ಇದು ಪಠ್ಯ ಪಠ್ಯೇತರ ಚಟುವಟಿಕೆಗಳು ಸುಗಮ ರೀತಿಯಲ್ಲಿ ನಡೆಸಿಕೊಂಡು ಹೋಗಲು ಅತ್ಯಂತ ಅಗತ್ಯವಾದ ವಿಷಯವಾಗಿದೆ. ಅನುಚಿತವಾದಂತಹ ವರ್ತನೆಗಳನ್ನು ನಡವಳಿಕೆಗಳನ್ನು ಇಲ್ಲವಾಗಿಸಲು ಶಿಸ್ತು ಬಹಳ ಅಗತ್ಯವಾಗಿದೆ. ಶಿಸ್ತನ್ನು ಉಲ್ಲಂಘಿಸಿದರೆ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ. ಇದು ಒಂದು ವಿದ್ಯಾಸಂಸ್ಥೆಯು ಸಮಾಧಾನಪೂರ್ವಕವಾದಂತಹ ವಾತಾವರಣದಲ್ಲಿ ಮುಂದುವರಿಯಲು ಬಹಳ ಅಗತ್ಯವಾದಂತಹ ವಿಷಯವಾಗಿದೆ ಎಂಬುದು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಚೆನ್ನಾಗಿ ತಿಳಿದಿರಬೇಕು. ಶಾಲಾ ನಿಯಮಗಳಿಗೆ ಬದ್ಧರಾಗಿ ವರ್ತಿಸಲು ಮತ್ತು ಇತರರನ್ನು ಗೌರವಿಸಿ ಜೀವಿಸುವುದನ್ನು, ತಮ್ಮ ಮೇಲೆ ಸ್ವಯಂ ನಿಯಂತ್ರಣವನ್ನು ಇಟ್ಟುಕೊಳ್ಳುವುದನ್ನು ಅಭ್ಯಾಸ ಮಾಡುವುದು ವಿದ್ಯಾರ್ಥಿಗಳಿಗೂ ಪಾಲಕರಿಗೂ ಅತ್ಯಂತ ಅಗತ್ಯದ ವಿಷಯವಾಗಿದೆ. ನಿಯಮಗಳನ್ನು ಪಾಲಿಸಲು ಮಾನಸಿಕವಾಗಿಯೂ ಸಿದ್ಧತೆಯ ಅಗತ್ಯವಿರುತ್ತದೆ. ಅದಕ್ಕಾಗಿ ಕೆಲವು ತತ್ವಗಳನ್ನು ಪಾಲಿಸಬೇಕು.

    1. ಯಾವ ರೀತಿಯಲ್ಲಿ ವ್ಯವಹರಿಸಬೇಕು ಯಾವ ನಿಯಮಗಳನ್ನೆಲ್ಲ ಪಾಲಿಸಬೇಕು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಬೇಕು. ಅದೇ ರೀತಿ ಇವುಗಳನ್ನು ಉಲ್ಲಂಘಿಸಿದರೆ ಉಂಟಾಗುವAತಹ ಪರಿಣಾಮಗಳ ಬಗ್ಗೆಯೂ ಕೂಡ ಮುನ್ನೆಚ್ಚರಿಕೆಯನ್ನು ನೀಡಬೇಕು. ಶಾಲಾ ದಿನಚರಿಯಯಲ್ಲಿ ಇವುಗಳನ್ನೆಲ್ಲ ಹೇಗೆ ಅಳವಡಿಸಬಹುದು ಎಂಬುದರ ಬಗ್ಗೆ ಪ್ರೇರಣೆಯನ್ನು ನೀಡಬೇಕು.

    2. ಶಿಸ್ತನ್ನು ಪಾಲಿಸಿದರೆ ಮಾದರಿ ಯೋಗ್ಯವಾಗಿ ವರ್ತಿಸಿದರೆ ಅಂತಹ ವಿದ್ಯಾರ್ಥಿಗಳು ಪ್ರೋತ್ಸಾಹಿಸಲ್ಪಡಬೇಕು. ಅದರ ಬಗ್ಗೆ ಹೆತ್ತವರಿಗೆ ತಿಳಿಸಬೇಕು.

    3. ವಿದ್ಯಾರ್ಥಿಗಳು ಶಿಸ್ತನ್ನು ಉಲ್ಲಂಘಿಸಿದರೆ, ಅನುಚಿತ ರೀತಿಯಲ್ಲಿ ವರ್ತಿಸಿದರೆ ಶಿಕ್ಷಕರು ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡು ಶಬ್ದವನ್ನು ಎತ್ತರಿಸದೆ ಶಾಂತ ರೀತಿಯಲ್ಲಿ ಪರಿಸ್ಥಿತಿಯನ್ನು ಎದುರಿಸಬೇಕು. ನಾವು ಅವರಿಗೆ ಶಿಸ್ತನ್ನು ಕಲಿಸುವವರು ಶಿಸ್ತನ್ನು ಉಲ್ಲಂಘಿಸದಂತೆ ನೋಡಿಕೊಂಡು ಅವರಿಗೆ ಅವರ ತಪ್ಪಿನ ಮನವರಿಕೆಯಾಗುವಂತೆ ಮಾಡಬೇಕು. ಪ್ರಥಮವಾಗಿ ಮಾಡುವ ಶಿಸ್ತಿನ ಉಲ್ಲಂಘನಿಗೆ ಕೇವಲ ಬಾಯಿ ಮಾತಿನ ಎಚ್ಚರಿಕೆ ಸಾಕು. ಪುನಃ ಪುನಃ ಅದು ಆವರ್ತನೆಯಾಗುತ್ತಿದ್ದರೆ ಶಿಸ್ತುಕ್ರಮವನ್ನು ಕೈಗೊಳ್ಳಬಹುದು. ಪೆಟ್ಟು ಕೊಡುವುದಕ್ಕಿಂತ, ದೈಹಿಕ ದಂಡನೆಗಿAತ ಹೆಚ್ಚಾಗಿ ಮನಶಾಸ್ತ್ರ ತಿಳಿಸಿ ಕೊಡುವ ವಿಧಾನವನ್ನು ಬಳಸಬಹುದು. ಶಿಕ್ಷೆಯ ರೂಪದಲ್ಲಿ ಅವರು ಇಷ್ಟಪಡುವ ಆಟೋಟ ಚಟುವಟಿಕೆಗಳಿಂದ ತಾತ್ಕಾಲಿಕವಾಗಿ ಅವರನ್ನು ದೂರವಿರಿಸಬಹುದು. ಹೆಚ್ಚು ಹೊಣೆಗಾರಿಕೆಗಳನ್ನು ವಹಿಸಬಹುದು. ಪ್ರತಿಯೊಬ್ಬ ವಿದ್ಯಾರ್ಥಿಗೂ ಇಷ್ಟವಿಲ್ಲದ್ದು ಏನು ಎಂಬುದನ್ನು ಕಂಡುಹಿಡಿಯುವ ಸಾಮರ್ಥ್ಯ ಅಧ್ಯಾಪಕರಿಗೆ ಇರಬೇಕು. ಮಾಡಿದ ತಪ್ಪನ್ನು ನೆನಪಿಸಲಿಕ್ಕಾಗಿ ಈ ರೀತಿಯಲ್ಲಿ ನಿನ್ನನ್ನು ಶಿಕ್ಷಿಸಲಾಗುತ್ತಿದೆ ಎಂಬುದು ಅವರಿಗೆ ಮನವರಿಕೆಯಾಗಬೇಕು. ಯಾವ ರೀತಿಯ ಶಿಸ್ತಿನ ಉಲ್ಲಂಘನೆ ಆಗಿದೆಯೋ ಅದಕ್ಕೆ ತಕ್ಕುದಾದ ಶಿಕ್ಷೆಯನ್ನು ಮಾತ್ರ ನೀಡತಕ್ಕದ್ದು .ಹೆಚ್ಚು ಕ್ಲಿಷ್ಟಕರವಾದ ಪರಿಸ್ಥಿತಿ ಎದುರಾದರೆ ಮಕ್ಕಳ ಸ್ವಭಾವವನ್ನು ತಿದ್ದಲು ಹೆತ್ತವರ ಸಹಾಯವನ್ನು ಪಡೆಯಬೇಕು.

    4. ತಪ್ಪು ಮಾಡಿದರೂ ಕೆಲವು ವಿದ್ಯಾರ್ಥಿಗಳನ್ನು ಸುಮ್ಮನೆ ಬಿಟ್ಟು ಬಿಡುವುದು ಉಚಿತವಲ್ಲ. ಎಲ್ಲರಿಗೂ ಒಂದೇ ರೀತಿಯಲ್ಲಿ ಕಾನೂನನ್ನು ಅನ್ವಯಿಸಬೇಕು. ಅಚ್ಚುಕಟ್ಟುತನ, ಒಳ್ಳೆಯ ವರ್ತನೆ ಮುಂತಾದವುಗಳ ಬಗ್ಗೆ ಮಕ್ಕಳಿಗೆ ಕಾಳಜಿ ಉಂಟಾಗಬೇಕಿದ್ದರೆ ಈ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಶಿಕ್ಷೆಯನ್ನು ನೀಡುತ್ತೇನೆ ಅಥವಾ ತರಗತಿಯಿಂದ ಹೊರ ಹಾಕುತ್ತೇನೆ ಎಂದು ಬೆದರಿಸಿ ಮಕ್ಕಳನ್ನು ಸರಿಪಡಿಸಲು ಪ್ರಯತ್ನಿಸಬಾರದು. ಅದಕ್ಕೆ ಹೆಚ್ಚು ಬೆಲೆ ಇರುವುದಿಲ್ಲ. ಮಕ್ಕಳನ್ನು ಕಾಳಜಿಯೊಂದಿಗೆ ಪರಿಗಣಿಸುವುದು ಮತ್ತು ಪ್ರೀತಿಯೊಂದಿಗೆ ಅವರಿಗೆ ಬೆಂಬಲವಾಗಿ ನಿಂತು ಅವರನ್ನು ತಿದ್ದಲು ಪ್ರಯತ್ನಿಸಿದರೆ ಖಂಡಿತವಾಗಿಯೂ ಅದು ಮಕ್ಕಳ ಮನಸ್ಸನ್ನು ತಟ್ಟುತ್ತದೆ .ಈ ರೀತಿ ಅವರೊಳಗಿಂದಲೇ ತಾವು ಬದಲಾಗಬೇಕು, ಒಳ್ಳೆಯವರಾಗಬೇಕು ಎಂಬ ಪ್ರೇರಣೆ ಬರುವಂತೆ ಅವರಲ್ಲಿ ಪ್ರೀತಿಯ ವರ್ತನೆ ತೋರುವ ಶಿಕ್ಷಕರು ನಾವಾಗಬೇಕು.

    ವಿದ್ಯಾರ್ಥಿಗಳು ದ್ವೇಷಿಸುವ ಅಧ್ಯಾಪಕರು

    ವಿದ್ಯಾರ್ಥಿಗಳು ದ್ವೇಷಿಸುವ ಅಧ್ಯಾಪಕರ ಕುರಿತು ಅಧ್ಯಯನಗಳು ನಡೆದಿವೆ. ಮುಂಗೋಪ, ಅಸಹಿಷ್ಣುತೆ ಇರುವ ಅಧ್ಯಾಪಕರನ್ನು ವಿದ್ಯಾರ್ಥಿಗಳು ಇಷ್ಟಪಟ್ಟಿಲ್ಲ. ಕೇವಲ ತಮಗಿಷ್ಟ ಬಂದ ವಿದ್ಯಾರ್ಥಿಗಳಿಗೆ ಮಾತ್ರ ಮಹತ್ವವನ್ನು ನೀಡುವ, ಇತರ ವಿದ್ಯಾರ್ಥಿಗಳನ್ನು ಕಡೆಗಣಿಸುವ ಭೇದಭಾವ ತೋರಿಸುವ ಅಧ್ಯಾಪಕರನ್ನು ವಿದ್ಯಾರ್ಥಿಗಳು ದ್ವೇಷಿಸುತ್ತಾರೆ. ವಿದ್ಯಾರ್ಥಿಗಳನ್ನು ಬಹಿರಂಗವಾಗಿ ತಮಾಷೆ ಮಾಡುವ, ಕೀಳಾಗಿ ತೋರಿಸುವ ಸಾಮಾನ್ಯವಾಗಿ ಗೆಳೆತನವಿಲ್ಲದ ರೀತಿಯಲ್ಲಿ ವ್ಯವಹರಿಸುವ ಅಧ್ಯಾಪಕರನ್ನು ಕೂಡ ವಿದ್ಯಾರ್ಥಿಗಳು ದ್ವೇಷಿಸುತ್ತಾರೆ ಎಂಬುದಾಗಿ ಅಧ್ಯಯನಗಳು ಸೂಚಿಸುತ್ತವೆ.

    ಅಧ್ಯಾಪಕರ ಅತಿಯಾದ ಶಿಸ್ತು ಮತ್ತು ಸಹನೆಯ ಕೊರತೆಯು ತರಗತಿಗಳಲ್ಲಿ ಸಂಘರ್ಷವನ್ನು ಉಂಟುಮಾಡುತ್ತದೆ. ವಿದ್ಯಾರ್ಥಿಗಳೊಂದಿಗೆ ಆಗಲಿ ಅಧ್ಯಾಪಕ ವೃತ್ತಿಯೊಂದಿಗೆ ಬದ್ಧತೆ ಇಲ್ಲದ ರೀತಿಯಲ್ಲಿ ಶರೀರಭಾಷೆಯನ್ನು ತೋರಿಸುವ ಅನಾಕರ್ಷಕವಾದ ಶೈಲಿಯನ್ನು ಹೊಂದಿರುವುದು ಒಳ್ಳೆಯ ಅಧ್ಯಾಪಕರ ಲಕ್ಷಣವಲ್ಲ.


    ವಿದ್ಯಾರ್ಥಿಗಳಿಗಾಗಿ ಅಧ್ಯಾಪಕರು ಮಾಡಬೇಕಾದುದು

    ತರಗತಿಯ ಎಲ್ಲ ವಿದ್ಯಾರ್ಥಿಗಳ ಸ್ವಭಾವ, ಅವರ ವಿಶೇಷತೆಗಳು, ಅವರ ಹಿನ್ನೆಲೆ, ಅವರ ಸಾಮರ್ಥ್ಯ, ಅಸಾಮರ್ಥ್ಯ ಇವುಗಳನ್ನು ಕೃತ್ಯವಾಗಿ ಅರಿಯಲು ಪ್ರಯತ್ನಿಸಿ. ಅವರ ಸಂತೋಷ ಮತ್ತು ದುಃಖದಲ್ಲಿ ಅಧ್ಯಾಪಕರು ಜೊತೆಗಿರುತ್ತಾರೆ ಎಂಬ ವಿಶ್ವಾಸವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ. ನಿಮಗೆ ಅವರ ಬಗ್ಗೆ ಕಾಳಜಿ ಇದೆ ಮತ್ತು ವಿಶ್ವಾಸವಿದೆ ಎಂಬುದು ಅವರಿಗೆ ಮನವರಿಕೆಯಾದರೆ ಹಲವು ರೀತಿಯ ಸ್ವಭಾವಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸುಲಭವಾಗುತ್ತದೆ.

    ಯಾವುದೇ ರೀತಿಯ ನಾಟಕೀಯತೆ ಇಲ್ಲದೆ ಪ್ರಾಮಾಣಿಕವಾಗಿ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವುದು ಒಳ್ಳೆಯದು. ಮೃದು ಮನಸ್ಸಿಗೆ ಗಾಯ ಉಂಟಾಗುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಆಕ್ಷೇಪಿಸಬಾರದು ಮತ್ತು ಅವರ ಬಗ್ಗೆ ತೀರ್ಮಾನವನ್ನು ಹೇಳಿಬಿಡಬಾರದು. ಒಳ್ಳೆಯ ಅಭ್ಯಾಸಗಳ ಬಗ್ಗೆ ಇರುವಂತಹ ಮಾರ್ಗದರ್ಶನಗಳು ಮುಕ್ತ ಮಾತುಕತೆಗಳ ಮೂಲಕ ಅವರಿಗೆ ಮನವರಿಕೆಯಾಗಬೇಕು. ಉಪದೇಶಗಳನ್ನು ನೀಡುವ ಮೂಲಕ ಅವರನ್ನು ಬೋರು ಹೊಡೆಸಬಾರದು.

    ವಿದ್ಯಾರ್ಥಿಯ ಭಾವನೆಗಳನ್ನು ಅವನ ವಿಚಾರಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಹೊರಗೆಡಹಲು ಅವಕಾಶ ನೀಡಬೇಕು .ಅಧ್ಯಾಪಕರು ಒಳ್ಳೆಯ ಕೇಳುಗರಾಗಬೇಕು .ಎಲ್ಲರನ್ನೂ ಒಂದೇ ರೀತಿಯಲ್ಲಿ ಸಮಾನತೆಯೊಂದಿಗೆ ನೋಡಬೇಕು. ಕೆಲವು ನಿರ್ದಿಷ್ಟ ವಿದ್ಯಾರ್ಥಿಗಳೊಂದಿಗೆ ಹೆಚ್ಚು ಒಲವನ್ನು ಹೊಂದಿರಬಾರದು.

    ವಿದ್ಯಾರ್ಥಿಗಳಿಗೆ ಉತ್ತರ ತಿಳಿದಿಲ್ಲದ ಪ್ರಶ್ನೆಗಳನ್ನು ಕೇವಲ ಅವರನ್ನು ಕೀಳಾಗಿಸಲಿಕ್ಕಾಗಿ ಕೇಳಬಾರದು. ಅವರಿಗೆ ತಿಳಿದಿರುವ ವಿಷಯಗಳನ್ನೇ ಪ್ರಶ್ನೆಗಳ ರೂಪದಲ್ಲಿ ಕೇಳಿ ಅವರಿಂದ ಉತ್ತರ ಹೇಳಿಸಿ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು. ಈ ಆತ್ಮವಿಶ್ವಾಸದೊಂದಿಗೆ ಅವರು ತಮಗೆ ತಿಳಿದಿಲ್ಲದ ವಿಷಯಗಳನ್ನು ಕಲಿತು ಮುಂದೆ ಬರಲು ಸಹಾಯವಾಗುತ್ತದೆ.

    ತರಗತಿಯನ್ನು ನಡೆಸುವ ವಿಷಯದಲ್ಲಿ ವಿದ್ಯಾರ್ಥಿಗಳನ್ನು ಸಾಧ್ಯವಾದ ರೀತಿಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಅವರು ನಿಮಗಾಗಿ ಏನಾದರೂ ಸಹಾಯ ಮಾಡಿದರೆ ಅದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿ ಪ್ರೋತ್ಸಾಹಿಸಬೇಕು.

    ಒಳ್ಳೆಯ ಕಥೆಗಳನ್ನು ,ಜೀವನದ ಅನುಭವ ಪಾಠಗಳನ್ನು, ವೈಯಕ್ತಿಕವಾದ ಅನುಭವಗಳನ್ನು, ದಿನಪತ್ರಿಕೆಗಳಲ್ಲಿ ಬರುವಂತಹ ವಾರ್ತೆಗಳನ್ನು ತರಗತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ತರಗತಿಗಳನ್ನು ಉತ್ತಮಪಡಿಸಬಹುದು. ವಿದ್ಯಾರ್ಥಿಗಳು ಅಂತಹ ಅಧ್ಯಾಪಕರ ತರಗತಿಗಳನ್ನು ಕಾದಿರುತ್ತಾರೆ. ಇಂತಹ ತರಗತಿಗಳಲ್ಲಿ ಅವರು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ.

    ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಡಿಜಿಟಲ್ ಅಭ್ಯಾಸಗಳು ಯಾವುದು ಎಂಬುದರ ಕುರಿತು ಸರಿಯಾದ ಅರಿವು ಗಳಿಸಲು ಅಧ್ಯಾಪಕರು ಶ್ರಮಿಸುವುದು ಒಳ್ಳೆಯದು .ಡಿಜಿಟಲ್ ಲೋಕದಲ್ಲಿ ಪಾಲಿಸಬೇಕಾದ ಶಿಸ್ತಿನ ಕುರಿತು, ಸುರಕ್ಷಾ ಕ್ರಮಗಳ ಕುರಿತು ತರಗತಿಯಲ್ಲಿ ನೆನಪಿಸುತ್ತಿರಬೇಕು.

    ಓದುವುದರಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಹೊಸ ಪುಸ್ತಕಗಳನ್ನು ನೀವಾಗಿಯೇ ನೀಡಬಹುದು. ಅದರ ಸಾರಾಂಶವನ್ನು ವಿದ್ಯಾರ್ಥಿಗಳು ತರಗತಿಯಲ್ಲಿ ಪ್ರಸ್ತುತಪಡಿಸಲಿ.

    ಮನೆಯಲ್ಲಿ ಉತ್ತಮ ಕೌಟುಂಬಿಕ ಪರಿಸ್ಥಿತಿ ಇಲ್ಲದೆ ಇರುವಂತಹ ವಿದ್ಯಾರ್ಥಿಗಳ ಪಾಲಿಗೆ ನೀವು ಉತ್ತಮ ರಕ್ಷಕರ ಪಾತ್ರವನ್ನು ವಹಿಸಬೇಕು. ಅವರು ಆ ಕಾರಣದಿಂದ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಅವರ ಬೆಂಬಲಕ್ಕೆ ಸದಾ ನೀವು ನಿಲ್ಲಬೇಕು.

    ಅಧ್ಯಾಪಕರು ಮತ್ತು ಹೆತ್ತವರ ಒಂದು ಸಂಘ ಇರಬೇಕು
    ಮಕ್ಕಳು ಚೆನ್ನಾಗಿ ಕಲಿಯಬೇಕು ಮತ್ತು ಯುವ ಪ್ರಾಯಕ್ಕೆ ತಲುಪಿದರೆ ಒಳ್ಳೆಯ ಕಂಪನಿಯಲ್ಲಿ ದೊಡ್ಡ ಸಂಬಳದ ಕೆಲಸ ಸಿಗಬೇಕು ಎಂದು ಬಯಸುವ ಹೆತ್ತವರ ಸಂಖ್ಯೆ ಇಂದು ಹೆಚ್ಚುತ್ತಿದೆ. ಇದಕ್ಕಾಗಿ ಅವರನ್ನು ಆಕ್ಷೇಪಿಸಲು ಸಾಧ್ಯವಿಲ್ಲ. ಆದರೆ ಮನುಷ್ಯ ಒಳ್ಳೆಯ ರೀತಿಯಲ್ಲಿ ಬೆಳೆಯಬೇಕಾದರೆ ಜೀವನದ ಮೌಲ್ಯಗಳನ್ನು ಅಭ್ಯಾಸ ಮಾಡಿಕೊಳ್ಳಬೇಕಾದರೆ ಪಕ್ವತೆಯುಳ್ಳ ವ್ಯಕ್ತಿತ್ವ ಉಂಟಾಗಬೇಕಾದರೆ ಯಾವುದಕ್ಕೆ ಮಹತ್ವ ನೀಡಬೇಕು ಮತ್ತು ನಮ್ಮ ಜೀವನದ ಗುರಿ ಏನಾಗಿರಬೇಕು ಎಂಬುದನ್ನು ಮರೆತುಬಿಡುತ್ತೇವೆ. ಮಕ್ಕಳಿಗೆ ಮೀಸಲಾಗಿರುವ ಸಮಯದಲ್ಲಿ ಹೋಂವರ್ಕ್ ಮಾಡಿಸಲು ಮಾರ್ಕ್ ಮತ್ತು ಗ್ರೇಡ್‌ಗಳನ್ನು ಹೆಚ್ಚಿಸಬೇಕಾದ ಅವಶ್ಯಕತೆಯ ಬಗ್ಗೆ ಅವರಿಗೆ ತಿಳಿಹೇಳಲು ಹೆತ್ತವರು ಸೀಮಿತರಾಗಿ ಬಿಡುತ್ತಾರೆ.

    ನನ್ನ ಹೆತ್ತವರೊಂದಿಗೆ ಯಾವುದೇ ವಿಷಯವನ್ನು ತೆರೆದು ಹೇಳಬಹುದು ಮತ್ತು ನಾನು ಏನು ಹೇಳಿದರೂ ಅದನ್ನು ಪೂರ್ವಗ್ರಹದೊಂದಿಗೆ ನೋಡುವುದಿಲ್ಲ ಎಂದು ಧೈರ್ಯವಿರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳ ದೈನಂದಿನ ದಿನಚರಿಯನ್ನು ಡಿಜಿಟಲ್ ಮಾಧ್ಯಮಗಳು ನುಂಗಿ ಹಾಕಲು ಆರಂಭಿಸಿದ ಬಳಿಕ ಎಲ್ಲರೂ ಜೊತೆ ಸೇರಿ ಸಾಮೂಹಿಕತೆಯನ್ನು ಬೆಳೆಸಲು ಸಾಧ್ಯವಿರುವ ಆಟೋಟಗಳ ಸಂಖ್ಯೆ ಕಡಿಮೆಯಾಯಿತು. ಇವುಗಳಿಂದಾಗಿ ಭಾವನಾತ್ಮಕ ಶುಷ್ಕತೆಯನ್ನು ಅನುಭವಿಸುವಂತೆ ಆಗಿದೆ. ವಿವಿಧ ರೀತಿಯ ಸ್ವಭಾವ ಸಂಬAಧಿ ನ್ಯೂನತೆಗಳಿಂದ ಮಕ್ಕಳು ಬಳಲುತ್ತಿದ್ದಾರೆ.

    ಮಕ್ಕಳು ಇಂದು ಯಾವುದನ್ನು ನೋಡಬಾರದು ಅದನ್ನು ನೋಡುತ್ತಿದ್ದಾರೆ. ಯಾವುದರ ಬಗ್ಗೆ ಆಲೋಚಿಸುವ ಅಗತ್ಯವಿಲ್ಲವೋ ಅವುಗಳನ್ನು ಆಲೋಚಿಸುತ್ತಿದ್ದಾರೆ. ಸಣ್ಣ ಮೆದುಳಿನಲ್ಲಿ ಹಲವು ಅನಗತ್ಯ ವಸ್ತುಗಳು ಸೇರಿಸಲ್ಪಡುತ್ತಿವೆ. ಈ ವಾಸ್ತವಿಕತೆಗಳನ್ನು ಹೆತ್ತವರು ಚರ್ಚಿಸುವುದಿಲ್ಲ. ಅದರಲ್ಲಿ ಲೈಂಗಿಕತೆ ಇದೆ. ಅಕ್ರಮವಿದೆ .ಅಪರಾಧಿ ಕೃತ್ಯಗಳಿವೆ. “ಯಾಕೆ ಈ ಮಗು ಹೀಗಿದೆ” ಎಂದು ಏನಾದರೂ ಸಂಭವಿಸಿದ ಬಳಿಕ ಚಿಂತಿಸುವುದಕ್ಕಿಂತ ಮೊದಲೇ ಮಕ್ಕಳಿಗಾಗಿ ಏನನ್ನು ಮಾಡಲಿಕ್ಕೆ ಸಾಧ್ಯವಿದೆ ಎಂಬುದರ ಬಗ್ಗೆ ಹೆತ್ತವರು ಅಧ್ಯಾಪಕರು ಜೊತೆ ಸೇರಿ ಆಲೋಚಿಸಬೇಕು. ಎಳೆಯ ಮನಸ್ಸುಗಳನ್ನು ಅರಿಯಲು ಸಾಧ್ಯವಾಗದೆ ಹೋದಾಗ ಹೆತ್ತವರು ಮತ್ತು ಮಕ್ಕಳು ಅದೇ ರೀತಿ ಅಧ್ಯಾಪಕರು ಮತ್ತು ಮಕ್ಕಳ ಮಧ್ಯೆ ಅಂತರವು ಹೆಚ್ಚುತ್ತಲೇ ಸಾಗುತ್ತದೆ.

    ಇಂದಿನ ಪರಿಸ್ಥಿತಿಯಲ್ಲಿ ಹೆತ್ತವರು ಮತ್ತು ಅಧ್ಯಾಪಕರ ಮಧ್ಯೆ ಕ್ರಿಯಾತ್ಮಕವಾದ ಸಂಘಟನೆ ಅನಿವಾರ್ಯವಾಗಿದೆ. ಅಧ್ಯಾಪಕರನ್ನು ಅಪರಾಧಿಗಳನ್ನಾಗಿಸುವ, ಅವರ ಆತ್ಮಸ್ಥೆöÊರ್ಯವನ್ನು ಕುಂದಿಸುವ ಕೆಲಸಗಳನ್ನು ಮಾಡಬಾರದು. ಏನಾದರೂ ತಪ್ಪುಗಳು ಸಂಭವಿಸಿದರೆ ಮಾನವೀಯ ದೃಷ್ಟಿಯಿಂದ ವಿದ್ಯಾಲಯದೊಳಗೆ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಹೆತ್ತವರು ಅರ್ಥಪೂರ್ಣವಾಗಿ ಇಂತಹ ರಕ್ಷಕ ಶಿಕ್ಷಕರ ಸಂಘದ ಭಾಗವಾಗಲು ಪ್ರಯತ್ನಿಸಬೇಕು. ಈ ಬಗ್ಗೆ ಕೆಲವು ಮಾರ್ಗ ನಿರ್ದೇಶನಗಳು ಈ ಕೆಳಗಿವೆ.

    1. ಮಕ್ಕಳನ್ನು ನೋಡಿಕೊಳ್ಳುವ ವಿಷಯದಲ್ಲಿ ಶೈಲಿಯಲ್ಲಿ ಹೆತ್ತವರಿಂದ ತಪ್ಪುಗಳು ಸಂಭವಿಸಬಹುದು. ಆದರೆ ಅವರ ಉದ್ದೇಶವು ಒಳ್ಳೆಯದಾಗಿರುತ್ತದೆ. ಮಾಡಿದ ರೀತಿಯಲ್ಲಿ ತೊಂದರೆ ಸಂಭವಿಸಿರುತ್ತದೆ. ಆದುದರಿಂದ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸದೆ ಅವರಿಗೆ ಮಾರ್ಗ ನಿರ್ದೇಶನಗಳನ್ನು ನೀಡಬೇಕು. ನಾವು ಅವರ ಮೇಲೆ ಆರೋಪಿಸಿದರೆ, ಅವರು ಅಧ್ಯಾಪಕರ ಮೇಲೆ ಆರೋಪವನ್ನು ಹೊರಿಸಲಾರಂಭಿಸುತ್ತಾರೆ. ಅದು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಉಪಕಾರವನ್ನು ಮಾಡುವುದಿಲ್ಲ.

    2. ಉಪದೇಶ ನೀಡುವ, ಕಲಿಸುವ ವಿಷಯದಲ್ಲಿ ಇರುವ ಪ್ರೇರಣೆಯಲ್ಲಿ ಯಾವುದೇ ಬದಲಾವಣೆಯನ್ನು ಉಂಟು ಮಾಡದೆ, ಹೆತ್ತವರೊಂದಿಗೆ ಅಧ್ಯಾಪಕರು ಶಾಂತ ರೀತಿಯಲ್ಲಿ ಅವರ ಮಾತುಗಳನ್ನು ಆಲಿಸುವವರಾಗಬೇಕು. ಮನಬಿಚ್ಚಿ ಮಾತನಾಡಲು ಅವರು ತಯಾರಿರಬೇಕು.

    3. ಒಂದು ಮಗುವಿನ ವರ್ತನೆಯಲ್ಲಿ ನ್ಯೂನತೆ ಇದ್ದರೆ ಅದು ಕಲಿಕೆಯಲ್ಲಿ ಹಿಂದುಳುವಿಕೆ ಆಗಿದ್ದರೆ ಅಧ್ಯಾಪಕರು ಅದಕ್ಕಾಗಿ ಕೆಲವು ಕಾರಣಗಳನ್ನು ಗುರುತಿಸಿರಬಹುದು. ಅದೇ ರೀತಿ ಹೆತ್ತವರು ಕೂಡ ಈ ಬಗ್ಗೆ ಭಿನ್ನವಾದ ವೀಕ್ಷಣೆಯನ್ನು ಹೊಂದಿರಬಹುದು. ಅಧ್ಯಾಪಕರು ಮತ್ತು ಹೆತ್ತವರ ಕಾರಣಗಳನ್ನು ಜೊತೆಗೂಡಿಸಿ ಒಂದು ಸರಿಯಾದ ನಿರ್ಧಾರಕ್ಕೆ ಬರಬಹುದು. ಆಗ ಒಂದು ಸರಿಯಾದ ಪರಿಹಾರವನ್ನು ಸೂಚಿಸಲು ಸಾಧ್ಯವಾಗಬಹುದು.

    4. ಮಕ್ಕಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಒಳಿತು ಮತ್ತು ತುಂಟತನಗಳ ಬಗ್ಗೆ ಹೆತ್ತವರು ಮನಬಿಚ್ಚಿ ಮಾತನಾಡಲು ಪ್ರೇರೇಪಿಸಬಹುದು.
    ಅವರ ವರ್ತನೆಯಲ್ಲಿರುವ ಒಳ್ಳೆಯ ವಿಷಯಗಳನ್ನು ಎತ್ತಿ ತೋರಿಸಿ ಪ್ರೋತ್ಸಾಹಿಸಬೇಕು.

    5. ಹೆತ್ತವರ ಮಾತುಗಳನ್ನು ಆಲಿಸಿದ ಬಳಿಕ ಆ ವಿದ್ಯಾರ್ಥಿಯು ಶಾಲೆಯಲ್ಲಿ ಮಾಡುವ ಉತ್ತಮ ವಿಷಯಗಳ ಕುರಿತು ಪ್ರಸ್ತಾಪಿಸಬೇಕು. ಅದು ಎಷ್ಟರವರೆಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಸಬಹುದು. ಯಾಕೆ ಮಗು ಈ ಸಾಮರ್ಥ್ಯವನ್ನು ಎಲ್ಲ ವಿಷಯಗಳಲ್ಲಿಯೂ ಬಳಸುತ್ತಿಲ್ಲ ಎಂಬುದರ ಕುರಿತು ಒಟ್ಟಿಗೆ ಚರ್ಚಿಸಬಹುದು. ಯಾವುದನ್ನು ಅಧ್ಯಾಪಕರಿಂದ ಮಾಡಬಹುದು ಮತ್ತು ಯಾವುದನ್ನು ಹೆತ್ತವರು ಮಾಡಬೇಕು ಎಂಬುದರ ಬಗ್ಗೆ ಒಂದು ತೀರ್ಮಾನಕ್ಕೆ ಬರಬಹುದು. ವರ್ತನೆಯಲ್ಲಿರುವ ವೈಕಲ್ಯಗಳನ್ನು ಪರಿಹರಿಸುವುದಕ್ಕೆ ಮತ್ತು ಡಿಜಿಟಲ್ ಅಡಿಕ್ಷನ್ ಅನ್ನು ನಿವಾರಿಸಲು ಈ ರೀತಿಯ ಹೆತ್ತವರ ಮತ್ತು ಅಧ್ಯಾಪಕರ ಪರಸ್ಪರ ಚರ್ಚೆಯು ಸಹಕಾರಿಯಾಗಬಹುದು.

    6. ಶಿಕ್ಷಕ-ರಕ್ಷಕ ಸಂಘದ ಕುರಿತು ಹೆತ್ತವರು ಇಟ್ಟುಕೊಂಡಿರುವ ನಿರೀಕ್ಷೆ ಬಗ್ಗೆ ಹೆತ್ತವರು ಹೇಳಬೇಕು. ವಿದ್ಯಾರ್ಥಿಗಳ ಪಠ್ಯ ಪಠ್ಯೇತರ ಸಾಮರ್ಥ್ಯಗಳ ಬಗ್ಗೆ ಹೆತ್ತವರಿಗೆ ಶಿಕ್ಷಕರು ಹೇಳಿಕೊಡಬಹುದು. ಅವನ ಭವಿಷ್ಯವನ್ನು ರೂಪಿಸಲಿಕ್ಕೆ ಪ್ರೇರಣೆಯನ್ನು ನೀಡಬಹುದು. ವಿದ್ಯಾರ್ಥಿಗಳ ಕೆಲಸಗಳನ್ನು ವಿವರಿಸಿದ ಬಳಿಕ ಹೀಗೆ ಮಾಡಬಹುದು. ಜೊತೆಗೆ ಸ್ವಲ್ಪ ಸಮಯ ಕಳೆದ ಬಳಿಕ ಬದಲಾಗಬಹುದು ಎಂಬುದನ್ನು ನೆನಪಿಸಿಕೊಡಬೇಕು.

    7. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ತರಗತಿಯಲ್ಲಿ, ಅದೇ ರೀತಿಯಲ್ಲಿ ಆಯಾಸ ರಹಿತವಾಗಿ ಮನೆಗೆ ಬಂದ ಬಳಿಕವು ಶಿಕ್ಷಣದ ಬಗ್ಗೆ ಒಲವುಂಟಾಗಿ ಕಲಿಯುವಂತಾಗಲು ಏನು ಮಾಡಬೇಕು? ಯಾವ ವಿಧಾನವನ್ನು ಅಳವಡಿಸಬಹುದು ಎಂಬುದರ ಕುರಿತು ಹೆತ್ತವರು ಮತ್ತು ಶಿಕ್ಷಕರು ಜೊತೆಗೂಡಿ ಏನಾದರೂ ತೀರ್ಮಾನಕ್ಕೆ ಬರಬೇಕು. ಮತ್ತು ಅದನ್ನು ಹಂತ ಹಂತವಾಗಿ ಜಾರಿಗೊಳಿಸಲು ಪ್ರಯತ್ನಿಸಬೇಕು.

    8. ವಿದ್ಯಾರ್ಥಿಯ ಒಂದು ಅಥವಾ ಎರಡು ವಿಷಯಗಳ ಮೇಲೆ ಒತ್ತು ನೀಡುವ ಮೂಲಕ ಸಹಕಾರ ಆರಂಭಿಸಬಹುದು. ಅದು ಯಶಸ್ವಿಯಾದಾಗ ಇತರ ಕ್ಷೇತ್ರಗಳಿಗೂ ಪ್ರೇರಣೆಯಾಗುತ್ತದೆ. ಸಹಕಾರದ ಫಲಿತಾಂಶ ಲಭಿಸುತ್ತಿದೆಯೇ ಎಂಬುದನ್ನು ನಿರ್ದಿಷ್ಟ ಸಮಯದ ಅವಧಿಯಲ್ಲಿ ಮರುಪರಿಶೀಲಿಸಬೇಕು. ಯಶಸ್ಸು ಕಂಡರೆ ಸಹಕರಿಸಿದ ಪೋಷಕರನ್ನು ಪ್ರಶಂಸಿಸಲು ಲೋಭ ತೋರಬಾರದು. ವಿದ್ಯಾರ್ಥಿಗೆ ಶ್ರೇಯಸ್ಸು ಸಲ್ಲಿಸುವಂತೆ ಪೋಷಕರನ್ನು ಪ್ರೇರೇಪಿಸಬೇಕು. ಶಿಕ್ಷಕರೂ ಕೂಡ ಶಾಲೆಯಲ್ಲಿ ಇದನ್ನು ಪಾಲಿಸಬೇಕು.

    9. ಸಹಕಾರದ ಫಲಿತಾಂಶ ತೃಪ್ತಿಕರವಾಗಿಲ್ಲದಿದ್ದರೂ ನಿರಾಶರಾಗಬಾರದು. ಪೋಷಕರ ಮೇಲೆ ಒತ್ತಡ ಹಾಕಬಾರದು. ಇದು ಪರಸ್ಪರ ದೋಷಾರೋಪಣೆಗೆ ದಾರಿ ನೀಡಬಹುದು. ಬದಲಾವಣೆಯನ್ನು ತರಲು ಸಾಧ್ಯವೆಂಬ ಆತ್ಮವಿಶ್ವಾಸವನ್ನು ಪೋಷಕರಿಗೆ ಸದಾ ನೀಡಬೇಕು. ಶಿಕ್ಷಕರೂ ಕೂಡ ಅದನ್ನು ಬೆಳೆಸಿಕೊಳ್ಳಬೇಕು. ಇದರ ಪರಿಣಾಮ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂಬAಧದಲ್ಲಿರುವಾಗ ಕಾಣಿಸುತ್ತದೆ.

    10. ಗುರಿಯಾಗಿಟ್ಟುಕೊಂಡ ಕಾರ್ಯಗಳಲ್ಲಿ ಸಹಕರಿಸುವ ಮೂಲಕ ವಿದ್ಯಾರ್ಥಿ ಪ್ರಗತಿ ಸಾಧಿಸಿದರೂ ಕೆಲವು ಪೋಷಕರು ಶಿಕ್ಷಕರಿಗೆ ಧನ್ಯವಾದ ಹೇಳದಿರಬಹುದು. ಹತಾಶರಾಗಬೇಡಿ. ನಿಮ್ಮನ್ನು ನೀವು ‘ವೆರಿ ಗುಡ್’ ಎಂದು ಶ್ಲಾಘಿಸಿಕೊಳ್ಳಿ.

    ಡಾ. ಸಿ.ಜೆ. ಜೋನ್
    ಸೀನಿಯರ್ ಸೈಕಿಯಾ ಟ್ರಿಸ್ಟ್

  • “ಬ್ರಿಟಿಷರ ಆಮಿಷಕ್ಕೆ ಒಪ್ಪಿದರೆ ಮಕ್ಕಳ ಕತ್ತು ಹಿಸುಕಿ ಕೊಲ್ಲುವೆ” 
ಪುತ್ರರನ್ನು ದೇಶಕ್ಕಾಗಿ ಸಮರ್ಪಿಸಿದ ಬೀಅಮ್ಮರನ್ನು ನಾವು ಅರಿಯಲೇಬೇಕು

    “ಬ್ರಿಟಿಷರ ಆಮಿಷಕ್ಕೆ ಒಪ್ಪಿದರೆ ಮಕ್ಕಳ ಕತ್ತು ಹಿಸುಕಿ ಕೊಲ್ಲುವೆ” ಪುತ್ರರನ್ನು ದೇಶಕ್ಕಾಗಿ ಸಮರ್ಪಿಸಿದ ಬೀಅಮ್ಮರನ್ನು ನಾವು ಅರಿಯಲೇಬೇಕು

    ಬೀ ಅಮ್ಮ ಆಬಾದಿ ಬೇಗಮ್ (1852-1924)
    ಮೌಲಾನಾ ಮುಹಮ್ಮದ್ ಅಲಿ ಮತ್ತು ಶೌಕತ್ ಅಲಿಯವರ ತಾಯಿ .ಬೀಅಮ್ಮರ ನೈಜ ಹೆಸರು ಆಬಾದಿ ಬೇಗಮ್ ಆಗಿತ್ತು. ಅವರ ಮೊಮ್ಮಕ್ಕಳೂ ಸೇರಿದಂತೆ ಎಲ್ಲರೂ ಅವರನ್ನು ಬೀಅಮ್ಮ ಎಂದೇ ಕರೆಯುತ್ತಿದ್ದರು.

    ಬೀಅಮ್ಮರ ತಂದೆಯೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬೀಅಮ್ಮರವರ 5ನೆಯ ವಯಸ್ಸಿನಲ್ಲಿ ಅವರ ತಂದೆ ನಿಧನ ಹೊಂದಿದರು. 28ನೆಯ ವಯಸ್ಸಿನಲ್ಲಿ, ಅವರ ಪತಿ ಅಬ್ದುಲ್ ಅಲಿ ಖಾನ್ ಪ್ಲೇಗ್ ರೋಗದಿಂದ ನಿಧನ ಹೊಂದಿದರು. ಚಿಕ್ಕ ವಯಸ್ಸಿ ನಲ್ಲಿಯೇ ಆಬಾದಿ ಬೇಗಮ್ ವಿಧವೆಯಾದರು. ಆರು ಗಂಡು ಮತ್ತು ಒಂದು ಹೆಣ್ಣು ಹೀಗೆ ಏಳು ಮಕ್ಕಳು ಇದ್ದರು.

    ಅವರು ಅಷ್ಟು ಸ್ಥಿತಿವಂತರೇನೂ ಆಗಿರಲಿಲ್ಲ. ಆದರೆ ಬೀ ಅಮ್ಮ ಧೃತಿಗೆಡಲಿಲ್ಲ. ಈ ಸಂಕಷ್ಟವನ್ನು ಧೈರ್ಯದಿಂದ ಎದುರಿಸಿದರು. ತಮ್ಮ ಸರ್ವಸ್ವವನ್ನೂ ಮಕ್ಕಳ ಪಾಲನೆ, ಪೋಷಣೆಗಾಗಿ ಧಾರೆ ಎರೆದರು. ಇದ್ದ ದುಡ್ಡಿನಲ್ಲಿಯೇ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿದರು. ಉನ್ನತ ಶಿಕ್ಷಣಕ್ಕಾಗಿ ಮುಹಮ್ಮದಲಿ ಮತ್ತು ಶೌಕತ್ ಅಲಿಯವರನ್ನು ಅಲೀಗಢದ ಎಮ್.ವಿ.ಓ. ಕಾಲೇಜಿಗೆ ಕಳುಹಿಸ ಬಯಸಿದಾಗ, ಸ್ವಲ್ಪ ಆರ್ಥಿಕ ಸಹಾಯ ನೀಡುತ್ತಿದ್ದ ಮಕ್ಕಳ ಚಿಕ್ಕಪ್ಪ, ಮಕ್ಕಳಿಗೆ “ಇಂಗ್ಲಿಷ್ ಶಿಕ್ಷಣ”ಕ್ಕಾಗಿ ಧನ ಸಹಾಯ ನೀಡಲು ನಿರಾಕರಿಸಿದರು. ಆದರೆ ಬೀ ಅಮ್ಮ ಇದಕ್ಕೆಲ್ಲಾ ಸೊಪ್ಪು ಹಾಕುವವರಾಗಿರಲಿಲ್ಲ. ತಮ್ಮ ಒಡವೆಗಳನ್ನು ಮಾರಿ ಮಕ್ಕಳ ಶಿಕ್ಷಣವನ್ನು ಮುಂದುವರಿಸಿದರು.

    1898ರಲ್ಲಿ ಮುಹಮ್ಮದಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದರು. ಮುಹಮ್ಮದ್ ಅಲಿ ತಮ್ಮ ತಾಯಿಯವರ ಬಗ್ಗೆ ಈ ರೀತಿ ಹೇಳುತ್ತಿದ್ದರು: “ನನ್ನ ತಾಯಿ ವಿದ್ಯಾಭ್ಯಾಸ ಪಡೆದವರಾಗಿರಲಿಲ್ಲ. ಆದರೆ ಅವರಷ್ಟು ವ್ಯವಹಾರ ಚತುರೆಯನ್ನು ನಾನೆಲ್ಲೂ ಕಂಡಿಲ್ಲ.”

    ಒಂದು ಘಟನೆ ಇಲ್ಲಿ ಸ್ಮರಣೀಯವಾಗಿದೆ. ಗುಪ್ತಚರ ವಿಭಾಗದ ನಿರ್ದೇಶಕರಾಗಿದ್ದ ಸರ್ ಚಾರ್ಲ್ಸ್ ಕ್ಲೈವ್ ಲೆಂಡ್ (Sir Charles Clive Lend) ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಬ್ದುಲ್ ಮಜೀದ್‌ರ ಮುಖಾಂತರ ಅಲಿ ಸಹೋದರರಿಗೆ ಒಂದು ಪತ್ರವನ್ನು ರವಾನಿಸಿದರು. ಈ ಪತ್ರದಲ್ಲಿ ಬ್ರಿಟಿಷ್ ಸರಕಾರದ ಶರತ್ತುಗಳನ್ನು ಒಪ್ಪಿಕೊಂಡರೆ ಎರಡೂವರೆ ವರ್ಷಗಳ ಕಠಿಣ ಸೆರೆಮನೆಯ ಶಿಕ್ಷೆಯನ್ನು ಕೊನೆಗೊಳಿಸುವ ಪ್ರಸ್ತಾವನೆ ಇತ್ತು. ಮುಹಮ್ಮದಲಿ ಪತ್ರವನ್ನು ಓದಿದ ನಂತರ, ಕಾಗದದ ಮೇಲೆ ಏನೋ ಬರೆಯಲಾರಂಭಿಸಿದರು. ಅಲ್ಲಿಯೇ ಅಡ್ಡಾಡುತ್ತಿದ್ದ ಬೀಅಮ್ಮ ಡಿ.ಎಸ್.ಪಿ.ಯವರನ್ನು ಉದ್ದೇಶಿಸಿ ಹೇಳಿದರು: “ಸರಕಾರ ನನ್ನ ಮಕ್ಕಳನ್ನು ಬಿಡುಗಡೆಗೊಳಿಸಿ ಅವರಿಗೆ ನ್ಯಾಯ ಒದಗಿಸಲು ಮುಂದೆ ಬಂದಿರುವುದು ಸಂತೋಷದ ವಿಷಯ. ಕಳೆದ 30 ತಿಂಗಳಿನಿಂದ ಜೈಲಿನಲ್ಲಿ ಅವರು ಎಷ್ಟು ಸಂಕಷ್ಟಗಳಿಗೆ ಈಡಾಗಿದ್ದಾರೆ ಮತ್ತು ಎಷ್ಟು ಸಹನೆಯಿಂದ ಅವುಗಳನ್ನು ಎದುರಿಸಿದ್ದಾರೆಂಬುದನ್ನು ನಾನು ಚೆನ್ನಾಗಿ ಬಲ್ಲೆ. ಸರಕಾರ ಅವರೊಂದಿಗೆ ಕರಾರು ಮಾಡಿಕೊಳ್ಳ ಬಯಸಿದೆಯೆಂದು ನನ್ನ ಗಮನಕ್ಕೆ ಬಂದಿದೆ. ಮುಹಮ್ಮದಲಿ ಮತ್ತು ಶೌಕತ್‌ಅಲಿ ಇಸ್ಲಾಮಿನ ಸಿಪಾಯಿಗಳು, ಖಂಡಿತವಾಗಿ ಇಸ್ಲಾಮಿನ ಮತ್ತು ದೇಶದ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕಾರ್ಯವನ್ನು ಅವರು ಮಾಡಲಾರರು ಎಂಬ ವಿಶ್ವಾಸ ನನಗಿದೆ. ಒಂದು ವೇಳೆ ಜೈಲಿನಿಂದ ಬಿಡುಗಡೆ ಹೊಂದಲಿಕ್ಕಾಗಿ ಇಂತಹ ಕಾರ್ಯ ಮಾಡಲು ಅವರು ಮುಂದಾಗಿರುವರು ಎಂದು ನನಗೆ ತಿಳಿದು ಬಂದಲ್ಲಿ, ಅವರ ಕತ್ತು ಹಿಸುಕಿ ಕೊಲ್ಲುವಷ್ಟು ಶಕ್ತಿ ನನ್ನ ರಟ್ಟೆಗಳಲ್ಲಿ ಇನ್ನೂ ಇದೆ.”

    ಸ್ವಾತಂತ್ರ್ಯವೆಂಬುದು ಅಮೂಲ್ಯ ಸಂಪತ್ತು. ಅದನ್ನು ಪಡೆಯಲು ಮನುಷ್ಯನು ಯಾವುದೇ ಮಟ್ಟಕ್ಕೆ ಇಳಿಯಬಲ್ಲನು. ಅತ್ಯಂತ ಧೈರ್ಯ ಶಾಲಿಗಳ ಕಾಲುಗಳು ಕೆಲವೊಮ್ಮೆ ನಡುಗಿ ಹೋಗುತ್ತವೆ. ಬ್ರಿಟಿಷ್ ಸರಕಾರದ ಉನ್ನತ ಅಧಿಕಾರಿಯ ಎದುರು ಮೇಲಿನ ಮಾತುಗಳನ್ನು ಹೇಳಿದ ಬೀಅಮ್ಮನವರ ನಿಸ್ವಾರ್ಥ ದೇಶಪ್ರೇಮ ಎಂತಹವರನ್ನೂ ನಾಚಿಸುವಂತಿದೆ!

    ಸ್ವಾತಂತ್ರ್ಯ ಸಂಗ್ರಾಮದ ಕಾರ್ಯಕರ್ತರ ಬಗ್ಗೆ ಅವರಿಗೆ ಅಪಾರ ಕಾಳಜಿ ಇತ್ತು. ಈ ಬಗ್ಗೆ ಅವರು ಬರೆದಿದ್ದ ಪತ್ರ, ಅವರ ಮಾನವ ಪ್ರೇಮವನ್ನು ಎತ್ತಿ ತೋರಿಸುತ್ತದೆ. “ನನ್ನ ಮನಸ್ಸು ಜೈಲಿನಲ್ಲಿ ಕೊಳೆಯುತ್ತಿರುವ ಸಹಸ್ರಾರು ನಿರಪರಾಧಿ ಯುವಕರ ಬಗ್ಗೆ ರೋಧಿಸುತ್ತದೆ. ಜೀವನದ ಅವಶ್ಯಕತೆಳಿಗಾಗಿ ಸಂಪಾದನೆ ಮಾಡುವ ಸ್ವಾತಂತ್ರ್ಯವನ್ನು ಅವರು ಕಳೆದುಕೊಂಡಿದ್ದಾರೆ. ಹೋಂ ರೂಲ್ ಲೀಗ್ ಸಂಘಟನೆಯು ಪ್ರಮುಖ ಕೈದಿಗಳಲ್ಲದೇ, ಇತರ ಸುಮಾನ್ಯ ಕೈದಿಗಳ ಬಗ್ಗೆಯೂ ಮಾಹಿತಿಯನ್ನು ಸಂಗ್ರಹಿಸಿದೆಯೇ? ಅವರು ಮತ್ತು ಅವರ ಸಂಬಂಧಿಕರು ಹಸಿವೆಯಿಂದ ಏಕೆ ನರಳಬೇಕು? ಅವರ ಸಹಾಯಾರ್ಥ ಮನವಿ ಮಾಡಿದಲ್ಲಿ, ಭಾರತದ ಪ್ರತಿಯೊಂದು ಮನೆಯಿಂದಲೂ ಏನಾದರೂ ಸಹಾಯ, ಖಂಡಿತ ಒದಗಿ ಬರುತ್ತದೆಂಬ ವಿಶ್ವಾಸ ನನಗಿದೆ.”

    1917 ಡಿಸೆಂಬರ್ 18ರಂದು ಮಾಂಟಿಗೋರನ್ನು ಭೇಟಿ ಮಾಡಲು ನಿಯುಕ್ತಗೊಂಡಿದ್ದ ಭಾರತೀಯ ಮಹಿಳಾ ತಂಡದ ಸದಸ್ಯರಾಗಿದ್ದರು. 1917 ಡಿಸೆಂಬರ್ 12ರಂದು ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್‌ ಎರಡನೆಯ ಸಮ್ಮೇಳನದಲ್ಲಿ ಬೀಅಮ್ಮ ಉಪಸ್ಥಿತರಿದ್ದರು. ಬಿಳಿಯ ಬುರ್ಖಾ ಧರಿಸಿ, ಕೋಲು ಹಿಡಿದು ಸಭಾಂಗಣಕ್ಕೆ ಬಂದಾಗ, ಅವರ ಸಹಾಯಕ್ಕೆ ಶ್ರೀಮತಿ ಅನ್ನಿ ಬೆಸೆಂಟ್ ಧಾವಿಸಿದರು.

    ಅನ್ನಿ ಬೆಸೆಂಟ್ ಭಾಷಣ ಮಾಡುತ್ತಾ ಹೇಳಿದರು: ” ಮುಹಮ್ಮದಲಿ ಮತ್ತು ಶೌಕತ್ ಅಲಿಯವರ ಮಾತೆ ನಮ್ಮೊಂದಿಗೆ ಇದ್ದಾರೆ. ಅವರು ನೈಜ ಮುಸ್ಲಿಮರೂ, ನಿಷ್ಟಾವಂತ ದೇಶಪ್ರೇಮಿಯೂ ಆಗಿರುವರು, ಅವರಲ್ಲಿ ಮಾತೃ ವಾತ್ಸಲ್ಯವಿದ್ದರೂ, ಅವರ ಹೃದಯ ಸಿಂಹದ ಹೃದಯ. ಅವರಿಗೆ ದುಃಖ ಮತ್ತು ಸಂಕಟ ಬಾಧಿಸುವುದಿಲ್ಲ, ಅವರ ಮಕ್ಕಳು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವುದು ಅವರಿಗೆ ಹರ್ಷವನ್ನೊದಗಿಸಿದೆ…”

    1921 ಡಿಸೆಂಬರ್ 30ರಂದು ಅಹ್ಮದಾಬಾದ್‌ನಲ್ಲಿ ನಡೆದ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷತೆಯನ್ನು ಬೀಅಮ್ಮ ವಹಿಸಿದ್ದರು. ಈ ಸಮ್ಮೇಳನದಲ್ಲಿ ಶ್ರೀಮತಿ ಕಸ್ತೂರ್‌ಬಾ ಗಾಂಧಿ, ಸರೋಜಿನಿ ನಾಯ್ಡು, ಬೇಗಮ್ ಹಝ್ರತ್ ಮೋಹಾನಿ, ಅನುಸೂಯ ಬಾಯಿ, ಬೇಗಮ್ ಸೈಫುದ್ದೀನ್ ಕೀಚಲು, ಶ್ರೀಮತಿ ಸರಳಾದೇವಿ ಮೊದಲಾದವರು ಇದ್ದರು.

    ಖಿಲಾಫತ್ ಚಳವಳಿಯಲ್ಲಿ ಬೀಅಮ್ಮ ವಹಿಸಿದ ಪಾತ್ರದ ಕುರಿತು ಗಾಂಧೀಜಿಯವರು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಈ ರೀತಿ ಬರೆದಿದ್ದರು: “… ಅವರು ಇಳಿ ವಯಸ್ಸಿನಲ್ಲಿಯೂ ಯುವಕರಂತೆ ಶ್ರಮವಹಿಸುತ್ತಿದ್ದರು. ಖಿಲಾಫತ್ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ದೇಶದಾದ್ಯಂತ ಸಂಚರಿಸಿದರು. ಬೀ ಅಮ್ಮ ಇಸ್ಲಾಮಿನ ಕಟ್ಟಾ ಅನುಯಾಯಿಗಳಾಗಿದ್ದರು. ಹಿಂದೂ-ಮುಸ್ಲಿಮ್ ಐಕ್ಯತೆ ಅವರಿಲ್ಲದೇ ಸಾಧ್ಯವಿರಲಿಲ್ಲ. ಇದಕ್ಕಾಗಿ ಅವರು ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ…”
    1921ರಲ್ಲಿ ಅಲಿ ಸಹೋದರರ ವಿಚಾರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಒಬ್ಬರು ‘ಸದಾಯ ಖಾತೂನ್'(ಮಹಿಳೆಯ ಧ್ವನಿ) ಎಂಬ ಶೀರ್ಷಿಕೆಯಡಿಯಲ್ಲಿ ಕವನವನ್ನು ರಚಿಸಿದರು. ಕೆಲವೇ ದಿನಗಳಲ್ಲಿ ಈ ಕವನ ಎಲ್ಲಾ ಜನರಿಗೂ ಸುಪರಿಚಿತವಾಯಿತು. ಇಂದಿಗೂ ಈ ಕವನ ಉರ್ದುವಲಯದಲ್ಲಿ ಪ್ರಸಿದ್ಧವಾಗಿದೆ. ಕವನ ಹೀಗಿದೆ:
    ಬೋಲಿ ಅಮ್ಮ ಮುಹಮ್ಮದಲಿ ಕೀ
    ಸಾಥ್ ತೇರೇ ಹೈ ಶೌಕತ್ ಅಲಿ ಭೀ
    ಜಾನ್ ಬೇಟಾ ಖಿಲಾಫತ್ ಪೆ ದೇ ದೋ
    ಜಾನ್ ಬೇಟಾ ಖಿಲಾಫತ್ ಪೆ ದೇದೋ.
    ಸಬರ್‌ಸೆ ಜೈಲ್ ಖಾನೆಮೆ ರಹನಾ
    ಕುಚ್ ಯೂ ಅಪ್ನಿ ಅಮ್ಮಾ ಕಾ ಕಹನಾ
    ಜೋ ಮುಸೀಬತ್ ಪಡೇ ಉಸ್‌ಕೋ ಸಹನಾ
    ಜಾನ್ ಬೇಟಾ ಖಿಲಾಫತ್ ದೇದೋ
    ಫಾಂಸಿ ಆಯೆ ಅಗರ್ ತುಮ್ ಕೋ ಜಾನಿ
    ಕಲಿಮಾ ಪಡ್‌ಪಡ್‌ಕೆ ಫಾಂಸಿ ಪೆ ಚಡ್ ನಾ
    ಮಾಂಗನಾ ಮತ್ ಹುಕೂಮತ್ ಸೆ ಪಾನಿ
    ಜಾನ್ ಬೇಟಾ ಖಿಲಾಫತ್ ಪೆ ದೇ ದೋ

    ಆಬಾದಿ ಬೇಗಮ್‌ರವರು ನವೆಂಬರ್ 1924ರಲ್ಲಿ ನಿಧನ ಹೊಂದಿದರು. ಅವರ ನಿಧನದ ಕುರಿತು ಗಾಂಧೀಜಿ ‘ಯಂಗ್ ಇಂಡಿಯಾ’ದಲ್ಲಿ ಈ ರೀತಿ ಬರೆದರು: “ಬೀ ಅಮ್ಮ ಇನ್ನಿಲ್ಲವೆಂದು ನಂಬುವುದು ಕಷ್ಟಕರವಾಗಿದೆ. ಅವರ ವ್ಯಕ್ತಿತ್ವದಿಂದ ಮತ್ತು ಸಾರ್ವಜನಿಕ ಸಭೆಗಳಲ್ಲಿ ಅವರ ಪ್ರಭಾವ ಪೂರ್ಣ ಭಾಷಣಗಳಿಂದ ಪ್ರಭಾವಿತರಾಗದೇ ಉಳಿದವರಾರೂ ಇಲ್ಲ. ಅವರ ನಿಧನದ ವೇಳೆ ಅವರ ಸನಿಹವಿದ್ದುದು ನನ್ನ ಅದೃಷ್ಟವಾಗಿತ್ತು…”
    ಸ್ವಾಮಿ ಶ್ರದ್ಧಾನಂದ ಸರಸ್ವತಿಯವರು ದೆಹಲಿಯ ಪಟೌಡಿ ಹೌಸ್‌ನಲ್ಲಿ ಶ್ರದ್ಧಾಂಜಲಿ ಸಭೆಯೊಂದರಲ್ಲಿ ಪಾಲ್ಗೊಳ್ಳುತ್ತಾ ಈ ರೀತಿ ಹೇಳಿದ್ದರು.”… ಹಿಂದೂ-ಮುಸ್ಲಿಮ್ ಐಕ್ಯತೆಗಾಗಿ ಯಾರಲ್ಲಿಯಾದರೂ ಉತ್ಕಟ ಅಭಿಲಾಷೆ ಇದ್ದರೆ, ಅದು ಬೀ ಅಮ್ಮರವರಲ್ಲಿತ್ತು. ಸ್ವಾತಂತ್ರ್ಯಕ್ಕಾಗಿ ಅವರು ಮೆರೆದ ಸಾಹಸ ಮತ್ತು ಧೈರ್ಯಗಳನ್ನು ರಾಜಕೀಯ ಮುಖಂಡರೂ ಸಹ ತೋರಲು ಸಾಧ್ಯವಿರಲಿಲ್ಲ.”

    ಸ್ವಾತಂತ್ರ ಸಂಗ್ರಾಮದ ಚಳವಳಿಯಲ್ಲಿದ್ದ ಇನ್ನೊಂದು ಪ್ರಮುಖ ಹೆಸರು ‘ಅಮ್‌ಜದೀ ಬೇಗಮ್’- ಇವರು ಬೀಅಮ್ಮನ ಸೊಸೆ, ಮುಹಮ್ಮದಾಲೀ ಅವರ ಪತ್ನಿ.

    ಇನ್ನೊ ಬ್ಬರು, ‘ಬೇಗಮ್ ಹರ್ಝತ್ ಮಹಲ್’. ಇವರನ್ನು ಬ್ರಿಟಿಷರು ಝಾನ್ಸಿ ರಾಣಿಗೆ ಹೋಲಿಸಿದ್ದರು. ಅಷ್ಟು ಧೈರ್ಯಶಾಲಿ ಮಹಿಳೆಯಾಗಿದ್ದರು ಮಹಲ್ ಅವರು. ಅಸ್ಟರಿ ಬೇಗಮ್,

    ಮಾಜಿದಾ ಬಾನು, ಹಾಜಿರಾ ಬೇಗಮ್, ಹಮೀದಾ ತಯ್ಯಬ್‌ಜೀ, ಫಾತಿಮಾ, ಸಫೀಯಾ ಖಾನ್, ಮರ್ಯಮ್ ಸಾದತ್, ಬಾನು ಕಿಚಲು, ಖುರ್ಶಿದಾ ಬೇಗಮ್, ಸಯೀದಾ ಬೇಗಮ್, ರೆಹನಾ ತಯ್ಯಬ್‌ಜೀ, ಮೆಹ‌ರ್ ತಾಜ್… ಮುಂತಾದ ಮುಸ್ಲಿಮ್ ಮಹಿಳೆ ಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಸೇವೆ ಸಲ್ಲಿಸಿದವರು ಮತ್ತು ಹುತಾತ್ಮರಾದವರೂ ಇದ್ದಾರೆ. ಬಿಳಿಯರಿಂದ ಈ ದೇಶ ಸ್ವತಂತ್ರ ಪಡೆಯುವಲ್ಲಿ ಪುರುಷರೂ ಬಹಳ ಸಂಖ್ಯೆಯಲ್ಲಿ ತ್ಯಾಗ ಮಾಡಿದ್ದಾರೆ.

    ಇವರ ಸ್ಟೋರಿಯು ಶಾಂತಿ ಪ್ರಕಾಶನ ಪ್ರಕಟಿಸಿದ ‘ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಮುಸ್ಲಿಮರು” ಎಂಬ ಪುಸ್ತಕದಲ್ಲಿ ವಿವರಿಸಲಾಗಿದೆ.

    ಲೇಖಕ: ಆಸಿಫ್ ಅಲಿ

    ಕೃತಿ: ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಮುಸ್ಲಿಮರು

  • ಗಲ್ಫಿಗನು ಅನುಭವಿಸುವ ಮನೋವೇದನೆ:ನಾವೆಲ್ಲರೂ ಅರಿಯಲೇಬೇಕು

    ಗಲ್ಫಿಗನು ಅನುಭವಿಸುವ ಮನೋವೇದನೆ:ನಾವೆಲ್ಲರೂ ಅರಿಯಲೇಬೇಕು

    ನಮ್ಮಂತಹ ಸಂಸಾರಿ ಅನಿವಾಸಿಗಳು ವರ್ಷಕ್ಕೊಮ್ಮೆ ಊರಿಗೆ ಹೊರಡುತ್ತೇವೆ. ಸುಮಾರು 30-40 ದಿನಗಳ ರಜೆಯನ್ನು ಕಳೆದು ಮತ್ತೆ ಮರಳಿ ಬರುತ್ತವೆ. ಆ ಅವಧಿಯಲ್ಲಿ ಹೊರಡುವ ಆನಂದ, ಹಿಂತಿರುಗಿ ಬರುವ ಸಂಕಟ, ನಡುವೆ ಊರಿನಲ್ಲಿ ಜರುಗುವ ಆಗು-ಹೋಗುಗಳು ನಿಜಕ್ಕೂ ಸ್ವಾರಸ್ಯಕರ. ಇದು ನನಗೆ ಮಾತ್ರವಲ್ಲ ಎಲ್ಲಾ ಗಲ್ಫ್ ವಾಸಿಗಳಿಗೂ ಆಗುವ ಅನುಭವ ಪಾಠ. ಈ ಕಥೆ-ವ್ಯಥೆಯನ್ನೇ ನಾನಿಲ್ಲಿ ನಿಮ್ಮ ನಡುವೆ ಬಿಚ್ಚಿಡುತ್ತಿದ್ದೇವೆ.

    ಜುಲೈ-ಆಗಸ್ಟ್ ಮಾಸವೆಂದರೆ ದುಬಾಯಿಯಲ್ಲಿ ಉರಿಯುವ ಸೆಖೆ. ನೆಲ ಅನ್ನುವುದು ಸುಡುವ ಕಾವಲಿ. ಆಕಾಶವನ್ನು ದಿಟ್ಟಿಸಿ ನೋಡಿದರೆ ದುರುಗುಟ್ಟಿ ನೋಡುವ ಸೂರ್ಯ. ಒಂದು ಫರ್ಲಾಂಗು ಹೆಜ್ಜೆಗಳು ಹಾಕಿದರೆ ಸಾಕು, ಹಣೆಯಿಂದ ನಾಭಿಯವರೆಗೆ ಇಳಿದು ಬರುವ ಬೆವರು. ಬೀಸುವ ಬಿಸಿ ಗಾಳಿಗೆ ಬದುಕೇ ಹೈರಾಣ. ಒಂದು ವಿಶೇಷವೆಂದರೆ, ಇಲ್ಲಿಯ ಸೆಖೆಗೆ ಊರಿನಂತೆ ತೇವಾಂಶವಿಲ್ಲ. ಅಲ್ಲಿ ಬೆವರಿಗೆ ಮೈಯೆಲ್ಲಾ ಅಂಟು-ಅAಟು. ಧರಿಸಿದ ಅಂಗಿಯ ಕಾಲರ್ ತಿರುಗಿಸಿ ನೋಡಿದರೆ ಜಿಡ್ಡು-ಕೊಳೆ. ಅಲ್ಲದೆ ಊರಿನಲ್ಲಿ ಬಹುತೇಕ ಮಂದಿ ಬಿಸಿಲಿಗೆ ಕೊಡೆ ಹಿಡಿಯುತ್ತಾರೆ. ಇಲ್ಲಿ ಸೆಖೆಯಾಗಲಿ-ಮಳೆಯಾಗಲಿ, ಕೊಡೆ ಅನ್ನುವುದೇ ಕಾಣೆ! ಮರುಭೂಮಿಯಾದರೂ ಸೈ, ಕೈ ಬೀಸಿಯೇ ಸಾಗುತ್ತಾರೆ. ಕೆಲವಡೆ ಫಿಲಿಪಿನೀ ಕನ್ಯೆಯರು ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾಟರಿಯಲ್ಲಿ ಚಲಿಸುವ ಮಿನಿ ಫ್ಯಾನು ಹಿಡಿಯುತ್ತಾರೆ. ಮುಖ್ಯವಾಗಿ ಅದು ತಂಪು ಗಾಳಿಗಲ್ಲ. ಮುಖಕ್ಕೆ ಮೆತ್ತಿಕೊಂಡ ಮೇಕಪ್ ಜಾರದಿರಲಿ ಅನ್ನುವ ಜಾಗೃತೆಗೆ!

    ದುಬಾಯಿಯಲ್ಲಿ ಜೂನ್ ಕೊನೆಯ ವಾರ ಸಮೀಪಿಸಿದಂತೆ, ಶಾಲಾ ಮಕ್ಕಳಿಗೆ ಎರಡು ತಿಂಗಳ ವಾರ್ಷಿಕ ರಜೆ ಆರಂಭವಾಗುತ್ತದೆ. ಆಗ ಎಲ್ಲರಿಗೂ ಊರಿಗೆ ಹೋಗುವ ಸಂಭ್ರಮ. ಮಕ್ಕಳಿಗೆ ಅಜ್ಜ-ಅಜ್ಜಿಯ ಜೊತೆ ಒಂದು ಗೂಡುವ ಸಂತೋಷ. ಮಳೆಯ ನೀರಿನಲ್ಲಿ ಕುಣಿಯುವ ಉತ್ಸಾಹ. ಊರಿನ ಬಗೆ ಬಗೆಯ ತಿಂಡಿ-ತಿನಿಸುಗಳು ತಿನ್ನುವ ಕಾತುರ. ಆದರೆ ಇದೇ ವೇಳೆಗೆ ಬೇಟೆಗೆ ಕುಳಿತ ಹುಲಿಯಂತೆ, ನಮ್ಮ ವಿಮಾನ ಸಂಸ್ಥೆಗಳು ಕಾದು ಕುಳಿತುಕೊಂಡಿರುತ್ತವೆ. ಅವರು ಮಿತಿ ಮೀರಿ ಏರಿಸುವ ಟಿಕೇಟ್ ದರವನ್ನು ಮಾತ್ರ ಕೇಳಬೇಡಿ! ಉಳಿದ ಸಮಯದಲ್ಲಿ ಮಂಗಳೂರಿಗೆ ವಿಮಾನದ ಹಾರಾಟದ ದರವು ದಿರಹಮ್ಸ್ 800-1000 ಇದ್ದರೆ, ಈಗ ಅದು ದಿರ್‌ಹಮ್ಸ್ 1800ರ (ಸುಮಾರು ರೂಪಾಯಿ 42,000) ಗಡಿಯನ್ನು ದಾಟಿಯೇ ಮುನ್ನುಗ್ಗಿರುತ್ತದೆ. ಚೌಕಾಸಿಗೆ ನಿಂತರೆ ಕೊನೆಗೆ ಅದೂ ಇಲ್ಲ. ಇಲ್ಲಿ ಪತಿ-ಪತ್ನಿ, ಎರಡು ಮೂರು ಮಕ್ಕಳಿದ್ದರೆ ದೊಡ್ಡ ಗಂಡಾತರ. ವರ್ಷವಿಡೀ ನಾಲ್ಕು ಕಾಸು ಕಮಾಯಿ ಮಾಡಿಟ್ಟರೆ, ಇವರ ಹಸಿದ ಹೊಟ್ಟೆಗೆ ಸುರಿಯಬೇಕು. ಈ ಅನ್ಯಾಯ-ದಬ್ಬಾಳಿಕೆಯನ್ನು ಸ್ಥಳೀಯ ಸರಕಾರ ಅಥವಾ ಭಾರತದ ಸರಕಾರಕ್ಕೆ ದೂರಿ ಕೊಂಡರೆ ಅವರಿಗೆ ಕಿವಿಯೇ ಕೇಳಿಸದು. ಅದು ಜಾಣ ಕುರುಡು! ಹಣವಿದ್ದರೆ ಹೊರಡಿ, ಇಲ್ಲದಿದ್ದರೆ ಮುಂದಿನ ಬಾರಿ ಸಾಗಿರಿ ಅನ್ನುವ ಪುಕ್ಕಟೆ ಸಲಹೆಯನ್ನು ನೀಡುತ್ತಾರೆ. ಹೀಗಾಗಿ “ದೊಡ್ಡ ಸಂಸಾರಸ್ಥ” ಮಕ್ಕಳು ಐದಾರು ವರ್ಷಗಳು ತಮ್ಮ ಊರಿನ ಮುಖವನ್ನೇ ನೋಡಿರುವುದಿಲ್ಲ. ಅವರ ಅಜ್ಜ-ಅಜ್ಜಿಯಂದಿರು ಇವರನ್ನು ಕಾಣುವ ನಿರೀಕ್ಷೆಯಲ್ಲಿ ಇನ್ನಷ್ಟು ಮುದಿಯಾಗಿರುತ್ತಾರೆ.

    ಎರಡು ಮೂರು ದಶಕಗಳ ಹಿಂದೆ ಹೆಚ್ಚಿನ ಕಂಪೆನಿಗಳು ತನ್ನಲ್ಲಿ ದುಡಿಯುವ ಉದ್ಯೋಗಿಗಳಿಗೆ ಫ್ಯಾಮಿಲಿ ಟಿಕೇಟ್ ನೀಡುತ್ತಿತ್ತು. ಈಗ ಬಹುತೇಕ ಅದು ನಿಂತು ಹೋಗಿದೆ. ಒಂದು ಹೆಜ್ಜೆ ಮುಂದಿಟ್ಟ ಕೆಲವು ಕಂಪೆನಿಗಳು, ಈಗ ಟಿಕೇಟಿಗೂ ಇಂತಿಷ್ಟು ಮೊತ್ತವೆಂದು ನಿಗದಿ ಪಡಿಸಿದ್ದಾರೆ. ಇಲ್ಲದಿದ್ದರೆ ಅವರಿಗೆ ಶಾಲಾ ರಜೆಯ ಸಮಯದಲ್ಲಿ, ಹಬ್ಬದ ದಿನಗಳಲ್ಲಿ ದುಪ್ಪಟ್ಟು ಟಿಕೇಟ್ ದರ ನೀಡಬೇಕಾಗುತ್ತದೆ. ವಿಮಾನಯಾನ ಸಂಸ್ಥೆಗಳ ಈ ಹಗಲು ದರೋಡೆಗೆ ಇವರು ಕೂಡ ತತ್ತರಿಸಿ ಹೋಗಿದ್ದಾರೆ. ಇದರ ನೇರ ಹೊಡೆತ ಬಿದ್ದಿರುವುದು ನಮ್ಮಂತಹ ಮಧ್ಯಮ ವರ್ಗದವರಿಗೆ. ಹೆಚ್ಚು ಮೊತ್ತವಾದರೆ, ನಾವೇ ಸ್ವಯಂ ಜೇಬಿನಿಂದ ತುಂಬಬೇಕು. ಇಲ್ಲದಿದ್ದರೆ ಶಾಲೆಗಳಿಗೆ ರಜೆಯಲ್ಲದ ದಿನಗಳಲ್ಲಿ ಪ್ರಯಾಣ ಬೆಳೆಸಬೇಕು. ಅದು ಸಾಧ್ಯವೇ?
    ಟಿಕೇಟಿನ ಈ ರಗಳೆ ಮುಗಿಯುತ್ತಿದ್ದಂತೆ ಈಗ ಖರೀದಿಯ ಸರದಿ. ಅಪರೂಪದಲ್ಲಿ ವರ್ಷಕ್ಕೊಮ್ಮೆ ಊರಿಗೆ ಹೊರಟಾಗ ಅದಕ್ಕೂ ದೊಡ್ಡ ಮೊತ್ತ ಕಾದಿರಿಸಬೇಕು. ಅಪ್ಪ-ಅಮ್ಮಾ, ಅಜ್ಜ, ಅಜ್ಜಿ, ತಂಗಿ, ತಮ್ಮ, ಅಕ್ಕ, ಭಾವ, ಚಿಕ್ಕಮ್ಮ, ಚಿಕ್ಕಪ್ಪ, ಮಾವ, ಅತ್ತೆ, ಅತ್ತಿಗೆ… ಅಂದಾಗ ಪ್ರತಿಯೊಬ್ಬರಿಗೂ ಏನಾದರೂ ಕಪ್ಪ ಕಾಣಿಕೆಗಳು ನೀಡಲೇಬೇಕು. ಇದು ಅನಿವಾಸಿಗಳ ಅಜನ್ಮ ಸಿದ್ಧ ಹಕ್ಕು! ಅವರು ಬೇಡ ಅಂದರೂ ನಮಗಂತೂ ಬರಿಗೈಯಲ್ಲಿ ಕೈ ಕಟ್ಟಿ ನಿಲ್ಲಲು ಸಾಧ್ಯವೇ? ನಮ್ಮ ನೆರೆಕರೆಯ ಮಕ್ಕಳಿಗೂ ಒಂದು ಮುಷ್ಠಿ ಚಾಕಲೇಟ್ ಆದರೂ ನೀಡಬೇಡವೇ? ಮಗಳನ್ನು ಕೈಗೆ ಒಪ್ಪಿಸಿದ ಅತ್ತೆ ಮಾವರಿಗೆ ಬಾದಮ್, ಪಿಸ್ತಾ, ಚೈನಾ ಗ್ರಾಸ್, ಇತ್ಯಾದಿ ನೀಡದೆ ಹೋದರೆ ಅಲ್ಲಿ ಮರ್ಯಾದೆ ಉಂಟೇ? ಜೊತೆಗೆ ಮಾವನಿಗೆ ಟೋಪಿ, ಅತ್ತರಿನ ಬಾಟಲಿ, ಅತ್ತೆಗೆ ಬಣ್ಣ ಬಣ್ಣದ ಸೀರೆ! ಹಾಗೆ ನಮ್ಮ ಮನೆ ಮಂದಿಗೆ ಬಟ್ಟೆ ಬರೆ. ಬೇಡಿಕೆ ಇಟ್ಟವರಿಗೆ ಮೊಬೈಲು, ಸನ್ ಗ್ಲಾಸು, ಪರ್ಸು, ವಾಚು ಇತ್ಯಾದಿ. ಆಗ ಬೆಳೆದ ನಿಂತ ಮಕ್ಕಳು ಉದ್ಗಾರ ತೆಗೆಯುವುದಿದೆ: ಅಪ್ಪ, ಇವೆಲ್ಲಾ ಇಂಡಿಯಾದಲ್ಲಿ ಧಾರಾಳ ಸಿಗುತ್ತದೆ. ಇಲ್ಲಿಂದ ಏಕೆ ಹೊತ್ತು ಸಾಗಬೇಕು?” ಅವರು ಹೇಳುವ ಮಾತಿಗೂ ಅರ್ಥವಿದೆ. ಆದರೆ ಪುಕ್ಕಟೆ ಸಿಗುತ್ತದೆಯೇ? ನಮಗೆ ಇಲ್ಲ ಅನ್ನಲು ಸಾಧ್ಯವೇ? ಎಲ್ಲವೂ ಆತ್ಮೀಯ ಬಂಧ!

    ನಮ್ಮ ಈ ಐದಾರು ಸೂಟು ಕೇಸು- ರಟ್ಟಿನ ಪೆಟ್ಟಿಗೆಗಳನ್ನು ತುಂಬಲು ಕೆಲವು ಸಮಯವೇ ಬೇಕಾಗುತ್ತದೆ. ಅದಕ್ಕೆ ದುಬಾಯಿಯ ಹತ್ತಾರು ಗಲ್ಲಿಗಳನ್ನು ಸುತ್ತಬೇಕು. ಶಾಪಿಂಗ್ ಮಹಲ್‌ಗಳ ಹಲವು ಲಿಫ್ಟ್ಗಳನ್ನು ಹತ್ತಬೇಕು. ಎಲ್ಲಿ ಅಗ್ಗದ ದರ, ಎಲ್ಲಿ ಕಡಿತದ ಮಾರಾಟ ಅನ್ನುವುದನ್ನೂ ಪತ್ತೆ ಹಚ್ಚಬೇಕು. ಬೀದಿ ಬದಿಯ ಅಂಗಡಿಗಳಲ್ಲಿ ಚೌಕಾಸಿಗೆ ನಿಲ್ಲಬೇಕು. ಬಿಸಿಲಿನ ಜಳಕ, ಜನರ ನೂಕು ನುಗ್ಗಾಟ, ಕಾರ್ ಪಾರ್ಕಿಂಗ್‌ನ ಹುಡುಕಾಟ, ಭಾರವಾದ ಚೀಲಗಳು ಹಿಡಿದು ನಡೆಯುವ ಆಯಾಸಕ್ಕೆ ಸಖತ್ ತಾಳ್ಮೆಯನ್ನು ವಹಿಸಬೇಕು. ಅದರಲ್ಲೂ ನಮ್ಮವರ ಲಗ್ನ, ಸಂಬಂಧಿಕರ ಮನೆ ಒಕ್ಕಲು, ಆತ್ಮೀಯರ ನಿಶ್ಚಯ ಇತ್ಯಾದಿಗಳಿದ್ದರೆ ಕೇಳಬೇಡಿ. ಈ ಹೆಂಡತಿ-ಮಕ್ಕಳಿಗೆ ಅದೆಷ್ಟು ಖರೀದಿಸಿದರೂ ಕಡಿಮೆ. ಆ ಕೊನೆಯ ದಿನಗಳ ಅವಸರವಂತೂ ನೋಡಿದರೆ ನಮ್ಮ ಮನೆಯಲ್ಲಿಯೇ ಮದುವೆಯಂತೆ ಕಾಣುತ್ತದೆ. “ಅದು ಬೇಕಿತ್ತು ಇದು ಬೇಕಿತ್ತು. ಅದು ಸಿಕ್ಕಿಲ್ಲ, ಇದು ತರಲಿಲ್ಲ” ಎಂಬ ಹತ್ತಾರು ತಕರಾರು. ಗಂಡ ಅನ್ನುವ ಪ್ರಾಣಿ ಇಲ್ಲಿ ಕೆಲವು ದಿನಗಳ ಮಟ್ಟಿಗೆ ಖಾಯಂ ಕೂಲಿಯಾಳು!

    ಪ್ರತಿಯೊಬ್ಬರಿಗೆ 30 ಕೆ.ಜಿ.ಯ ಲಗೇಜು, ಕೈಗೆ ಏಳು ಕೆ.ಜಿ.ಯ ಹ್ಯಾಂಡ್‌ಬ್ಯಾಗ್ ಅಂದಾಗ ನಾಲ್ಕು ಮಂದಿಯ ಪೆಟ್ಟಿಗೆಗಳ ಭಾರ 150 ಕೆ.ಜಿ. ದಾಟಿಕೊಂಡಿರುತ್ತದೆ. (ಹೆಗಲಿಗೆ ಜೋತು ಬಿದ್ದ ವಾನಿಟಿ ಬ್ಯಾಗು, ಲ್ಯಾಪ್‌ಟಾಪ್ ಬ್ಯಾಗು ಪ್ರತ್ಯೇಕ). ಈ ಸಾಮಾಗ್ರಿ ಗಳನ್ನು 20 ಕೆ.ಜಿ.ಯ ಮಿತಿಯಂತೆ ಸೂಟುಕೇಸ್ ಅಥವಾ ರಟ್ಟಿನ ಪೆಟ್ಟಿಗೆಯಲ್ಲಿ ತುಂಬುವ ಭಾರ ಪಾಪಿ’ ಗಂಡನ ಪಾಲಿಗೆ! ಅದನ್ನು ಐದಾರು ಬಾರಿ ತೂಕದ ತಕ್ಕಡಿಯಲ್ಲಿಟ್ಟು ತೂಗಬೇಕು. ಎತ್ತಿ-ಇಳಿಸಿ ಭಾರವನ್ನು ಸರಿ ತೂಗಿಸಬೇಕು. ಇಲ್ಲದಿದ್ದರೆ ವಿಮಾನ ನಿಲ್ದಾಣದಲ್ಲಿ ಒಂದು-ಎರಡು ಕೆ.ಜಿ. ಹೆಚ್ಚಾದರೂ ದಂಡ ಕಟ್ಟಲು ಆಜ್ಞೆ ಮಾಡುತ್ತಾರೆ! ಹೀಗೆ ಹಗ್ಗ ಸುತ್ತಿದ ಈ ಪೆಟ್ಟಿಗೆಗಳನ್ನು ಮರುದಿನ ಕಾರಿಗೆ ತುಂಬಬೇಕು. ನಿಲ್ದಾಣದಲ್ಲಿ ಮತ್ತೆ ಇಳಿಸಿ, ನೂಕುವ ಟ್ರಾಲಿಗೆ ವರ್ಗಾಯಿಸಬೇಕು. ಇನ್ನು ಟಿಕೇಟ್ ಕೌಂಟರ್‌ನಲ್ಲಿ ನಡು ಬಗ್ಗಿಸಿ ಲಗೇಜ್ ಬೆಲ್ಟ್ಗೆ ಎತ್ತಿ ಹಾಕಬೇಕು. ಅಲ್ಲಿಗೆ ಸೊಂಟದ ಒಂದು ಮೂಲೆಯಲ್ಲಿ ನೋವು ಕಾಣಿಸಿಕೊಂಡಿರುತ್ತದೆ. ಮೂರುವರೆ ತಾಸಿನ ಪ್ರಯಾಣದಲ್ಲಿ ಅದಕ್ಕೆ ಒಂದಿಷ್ಟು ಆರಾಮ ಸಿಕ್ಕಿತು ಅನ್ನುವಾಗ ಮತ್ತೆ ಅದನ್ನು ಊರಿನ ಲಗೇಜ್ ಬೆಲ್ಟ್ನಿಂದ ಇಳಿಸುವ ಸಂಕಷ್ಟ. ಟ್ರಾಲಿಯಲ್ಲಿ ತುಂಬಿಸಿ, ಕಾರಿಗೆ ಏರಿಸುವ ಪ್ರಯಾಸ. ಆದರೆ ಅದೇಕೋ ವಿಮಾನ ನಿಲ್ದಾಣದಲ್ಲಿ ನಮ್ಮವರ ನಗುಮುಖವನ್ನು ಕಂಡಾಗ ಎಲ್ಲಾ ನೋವುಗಳು ಮಾಯಾ!

    ಈಗ ಈ ಲಗೇಜಿನ ಸಹಾಯಕ್ಕೆ ಅವರು ಕೂಡ ಮುನ್ನುಗುತ್ತಾರೆ. ಜೊತೆಯಲ್ಲಿ ಆಗಮಿಸಿದ ಪುಟ್ಟ ಮಕ್ಕಳಿಗಂತೂ ನಮ್ಮ ಸೂಟ್‌ಕೇಸಿನ ಮೇಲೆಯೇ ಕಣ್ಣು. “ಮಾರಿ ಕಣ್ಣು ಕುರಿಯ ಮ್ಯಾಗೆ” ಅನ್ನುವ ಹಾಗೆ! ಅವರಿಗೆ ಅದರ ಹಗ್ಗವನ್ನು ಬಿಚ್ಚುವ ವರೆಗೂ ತಳಮಳ-ಕುತೂಹಲ. ಈ ಬಾರಿ ಆಟವಾಡಲು ಯಾವ ಆಟಿಕೆ ತಂದಿದ್ದಾರೆಯೆAಬ ಕಾತುರ!

    ಪ್ರತಿಬಾರಿ ಊರಿಗೆ ಬಂದಾಗ ಹಸಿರು ಚಾದರ ಹೊದ್ದು ಕೊಂಡ ಪ್ರಕೃತಿ, ಬೀಸುವ ತಂಪುಗಾಳಿ, ಬೆಳಗುವ ಮಿಂಚು, ಸ್ವಾಗತ-ಸುಸ್ವಾಗತ ತೋರುವ ಮಳೆ. ದೀರ್ಘ ಕಾಲ ಮರು ಭೂಮಿಯಲ್ಲಿ ನೆಲನಿಂತ ನಮಗೆ ಇವು ನೆಮ್ಮದಿ-ಆಹ್ಲಾದ ನೀಡುವ ನೋಟ. ಮುಂಜಾನೆಯಿಂದ ನಮ್ಮ ದಾರಿಯನ್ನೇ ಕಾಯುವ ಅಪ್ಪ-ಅಮ್ಮವನ್ನು ಬಿಗಿದಪ್ಪಿದಾಗ ಕಣ್ಣು ತುಂಬಾ ಆನಂದಬಾಷ್ಪ! ಅಜ್ಜ-ಅಜ್ಜಿಯನ್ನು ಭೇಟಿ ಆದಾಗ ಅವರ ಮುಪ್ಪಿನ ಚಹರೆಯ ನೆರಿಗೆಗಳಲ್ಲೂ ಸಂತೋಷದ ಅಲೆಗಳು. ಮಕ್ಕಳನ್ನು ಕಂಡಾಗ “ಇಷ್ಟು ದೊಡ್ಡವರು ಆದಿರಾ?” ಅನ್ನುವ ಉದ್ಗಾರ!

    ಅಂದು ಮನೆಯಲ್ಲಿ ಹಬ್ಬದ ಸಡಗರ. ಅದಕ್ಕೆ ತಕ್ಕಂತೆ ಬಗೆ ಬಗೆಯ ರುಚಿಯಾದ ಅಡುಗೆ. ಊಟದ ಬಳಿಕ ಸೂಟ್‌ಕೇಸ್ ಪೆಟ್ಟಿಗೆಯನ್ನು ತೆರೆಯಲು ಕೂತಾಗ ಎಲ್ಲರ ಕಣ್ಣುಗಳಲ್ಲಿ ಹೊಳಪು. ತನಗೆ ಏನು ಸಿಗಬಹುದೆಂಬ ಕುತೂಹಲ. ಮಕ್ಕಳು ಅದನ್ನು ಒಂದೊAದಾಗಿ ಅಲ್ಲಿದ್ದವರ ಕೈಗೆ ಒಪ್ಪಿಸುವಾಗ ಅವರಿಗೂ ಖುಷಿ. ಆಗ ಸುತ್ತ-ಮುತ್ತ ಲವಂಗ-ಏಲಕ್ಕಿಯದ್ದೇ ಸುಗಂಧ-ಪರಿಮಳ.

    ಊರಿನಲ್ಲಿರುವಷ್ಟು ದಿನ ಅಮ್ಮನಿಗೆ ಅದೆಷ್ಟು ಬಗೆಯ ತಿಂಡಿ-ತಿನಿಸು ಬಡಿಸಿದರೂ ಕಡಿಮೆ. ಅದು ಕರಂಡೆಯ ಉಪ್ಪಿನಕಾಯಿ, ದೀವು ಗುಜ್ಜದ ಸುಕ್ಕ, ಹಳದಿ ಎಲೆಯ ರೊಟ್ಟಿ, ಅಣಬೆಯ ಸಾರು, ಹಲಸಿನ ದೋಸೆ, ತೊರಾಟ ಎಲೆಗಳ ಪಲ್ಯ, ಬಾಳೆದಂಡಿನ ಗೊಜ್ಜು, ಮೆತ್ತೆಯ ಗಂಜಿ, ಸಣ್ಣಕ್ಕಿಯ ಪಾಯಸ ಇತ್ಯಾದಿ ಇತ್ಯಾದಿ. ಸಂಜೆಯಾದರೆ ಮತ್ತೆ ಟೀ ಜೊತೆಗೆ ಕುರುಕುರು ತಿಂಡಿಗಳು. ಆಲೂಬೋಂಡಾ, ಮಿರ್ಚಿ, ಭಜೆಗಳಲ್ಲಿ ಎಣ್ಣೆ ಇರುತ್ತದೆ ಬೇಡವೇ ಬೇಡವೆಂದರೂ ಆಕೆ ಕೇಳಬೇಕಲ್ಲ? “ನಿನ್ನ ಒಂದು ತಿಂಗಳ ಪಥ್ಯವನ್ನು ದುಬಾಯಿಯಲ್ಲಿಡು, ಈಗ ನಾನು ಮಾಡಿದ್ದು ತಿನ್ನಬೇಕೆಂಬ ಒತ್ತಡ. ರಾತ್ರಿ ಮತ್ತೆ ಭರ್ಜರಿ ಭೋಜನ. ಅತ್ತ ಅತ್ತೆ ಮನೆಗೆ ಹೋದರೂ ಅಷ್ಟೇ. ವಿಶೇಷ ಅಡುಗೆಗಳು. ಕೊನೆಗೆ ಒಂದೇ ಆರೋಪ- “ನಮ್ಮ ಮನೆಯಲ್ಲಿ ಅಳಿಯ ಏನೂ ತಿನ್ನಲೇ ಇಲ್ಲ”! ಅಂತೂ-ಇಂತೂ ಊರು ಬಿಡುವಾಗ ತೂಕದಲ್ಲಿ ಎರಡು-ಮೂರು ಕೆ.ಜಿ. ಹೆಚ್ಚಳವಾಗಿರುತ್ತದೆ.

    ಮೊದಲ ದಿನ ಮಾವನ ಮನೆಗೆ ಹೋದಾಗ ರಾತ್ರಿಯಲ್ಲಿ ಎಲ್ಲಾ ಕೋಣೆಗಳ ದೀಪಗಳು ಆರಿಕೊಂಡಿರುತ್ತವೆ. ಆದರೆ ಡೈನಿಂಗ್ ಹಾಲಿನ ದೀಪ ಮಾತ್ರ ಉರಿಯುತ್ತಿರುತ್ತದೆ. ಆ ಮೇಜಿನ ಮೇಲೆ ತಾಯಿ-ಮಗಳ ದುಂಡು ಮೇಜಿನ ಪರಿಷತ್ತು. ಇಬ್ಬರಿಗೂ ವಾರ್ಷಿಕ ವರದಿಯನ್ನು ಸಲ್ಲಿಸುವ ಸರದಿ. ಇವರ ಮಾತಿನ ಭರಟೆಗೆ ಹೊರಗೆ ಆರ್ಭಟಿಸುವ ಗುಡುಗು, ಹೊಳೆಯುವ ಮಿಂಚು ಕೂಡ ಅರಿವಿಗೆ ಬಾರದು. ಸುರಿಯುವ ಮುಸಲಧಾರೆ ನಿಂತರೂ ಇವರ ಪಟ್ಟಾಂಗ ನಿಲ್ಲದು. ಇವರು ಯಾವಾಗ ಮಲಗುತ್ತಾರೋ- ಯಾವಾಗ ಎಚ್ಚರವಾಗುತ್ತಾರೋ ಅವರಿಗೇ ಗೊತ್ತು!

    ನೋಡು ನೋಡುತ್ತಿದ್ದಂತೆ ಈ 30-40 ದಿನಗಳ ರಜೆಯು ಹೇಗೆ ಕಳೆದು ಹೋಯಿತೆಂದು ತಿಳಿಯುವುದಿಲ್ಲ. ಒಡ ಹುಟ್ಟಿದವರ ಮನೆಗೆ, ಬಂಧು-ಮಿತ್ರರ ಸಂದರ್ಶನಕ್ಕೆ, ಮದುವೆ ಸಮಾರಂಭದ ಹಾಜರಾತಿಗೆ, ರೋಗಿಗಳ ಭೇಟಿಗೆ… ಅಂದಾಗ ರಜೆಗಳ ಬತ್ತಳಿಕೆಯ ಬಾಣಗಳು ಖಾಲಿಯಾಗ ತೊಡಗುತ್ತದೆ. ಪ್ರತಿಬಾರಿ ಒಂದಿಷ್ಟು ರಜೆಗಳಲ್ಲಿ ಕೇರಳ ಹೋಗಬೇಕು, ಮುಂಬೈ ನೋಡಬೇಕು, ರಾಜಸ್ತಾನ ಸುತ್ತಬೇಕೆಂದು ಆಲೋಚಿಸಿಕೊಂಡು ಬರುವುದು. ಆದರೆ ಅಲ್ಲಿ ಸುರಿಯುವ ಮಳೆಗೆ, ನೆರೆ ಹಾವಳಿಗೆ, ಕುಸಿಯುವ ಗುಡ್ಡಗಳಿಗೆ, ಸಂಪರ್ಕ ಕಡಿದುಕೊಂಡ ರಸ್ತೆಗಳಿಗೆ ಭಯ ಬೀಳುತ್ತೇವೆ. ಆಗ ಮನೆಯ ಹಿರಿಯರು “ಈ ಮಳೆಗೆ, ಈ ಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಪ್ರವಾಸ? ಮಳೆ ಪೂರ್ಣ ತಿಳಿಯಾಗಲಿಯೆಂದು” ಲಕ್ಷ್ಮಣ ರೇಖೆಯನ್ನು ಎಳೆಯುತ್ತಾರೆ. ಅಲ್ಲಿಗೆ ಯೋಜಿಸಿದ ಕನಸಿಗೆ ಮುಕ್ತಿ ಸಿಕ್ಕಿದ ಹಾಗೆ!

    ಪ್ರತಿ ಶುಕ್ರವಾರದಂದು ಜುಮಾ ಪ್ರಾರ್ಥನೆಗೆ ದೊಡ್ಡ ಮಸೀದಿಗೆ ತೆರಳಿದರೆ, ಅಲ್ಲಿ ಹಿರಿಯ ತಲೆಗಳು, ಒಂದೆರಡು ಶಾಲಾ ಗುರುಗಳು, ನಮ್ಮಂತೆ ಗಲ್ಫ್ನಿಂದ ಆಗಮಿಸಿದ ಅನಿವಾಸಿಗಳು, ಚಡ್ಡಿ ದೋಸ್ತಿಗಳು, ಪರಿಚಿತರು ಮುಂತಾದವರು ಸಿಗುತ್ತಾರೆ. ನಮ್ಮ ಬಾಲ್ಯದಲ್ಲಿ ಹೀರೋ ಆಗಿ ಮರೆದವರು, ಈಗ ನಡೆದಾಡಲು ಆಶಕ್ತಗೊಂಡು, ಆಧಾರಕ್ಕೆ ಕುರ್ಚಿಯಲ್ಲಿ ಕೂತು ತಲೆ ಬಗ್ಗಿಸುತ್ತಾರೆ- ದೇವನ ಮುಂದೆ! ಅದೇ ಪಕ್ಕದ ಆವರಣದ ಕಬರಸ್ತಾನಕ್ಕೆ ಭೇಟಿ ನೀಡಿದರೆ ಇವರ ಅನೇಕ ಸಹಪಾಠಿ ಮಿತ್ರರು ಶಾಶ್ವತವಾಗಿ ಅಲ್ಲಿ ಮಲಗಿ ಕೊಂಡಿದ್ದಾರೆ. ಈ ಗೋರಿಗಳ ನಡುವೆ ನಮ್ಮವರನ್ನೂ ಹುಡುಕುತ್ತಾ ಸಾಗಿದಾಗ ಈ ಜೀವನ ಅದೆಷ್ಟು ವಿಚಿತ್ರ ಅನಿಸುತ್ತದೆ. ಈ ಬದುಕಿಗಾಗಿ ನಮ್ಮ ಹೋರಾಟ-ಹಾರಾಟ-ಅಲೆದಾಟ ಸುಮ್ಮನೆ ಅನಿಸಿ ಬಿಡುತ್ತದೆ. ಈ ಅಂತಸ್ತು, ಅಧಿಕಾರ, ವರ್ಚಸ್ಸು ಕೇವಲ ನಾಲ್ಕು ದಿನಗಳ ಬಯಲಾಟ ಅಂದುಕೊಳ್ಳುತ್ತದೆ. ದೇಶ-ವಿದೇಶ ಸುತ್ತಾಡಿದರೂ, ಗಗನದ ಮೇಲೆ ಹಾರಾಡಿದರೂ ಕೊನೆಗೆ ಈ ನೆಲವೇ ಕೊನೆಯ ನಿಲ್ದಾಣವಲ್ಲವೇ ಅನಿಸುತ್ತದೆ.

    ರಜೆ ಮುಗಿಯಲು ಇನ್ನೂ ಕೆಲವೇ ಕೆಲವು ದಿನಗಳಿರುವಾಗ ಏಕೋ ಊರು ತ್ಯಜಿಸಿ ಹೋಗಲು ಮನಸ್ಸೇ ಬಾರದು. ಮರಣ ಶಯ್ಯೆಯ ರೋಗಿಯ ಹಾಗೆ! ಹೆತ್ತವರ ಅಕ್ಕರೆ, ಮನೆಮಂದಿಗಳ ಪ್ರೀತಿ, ಪುಟ್ಟ ಮಕ್ಕಳ ಒಡನಾಟ ಆತ್ಮೀಯರ ಸ್ನೇಹ ಇತ್ಯಾದಿ ಅದೆಲ್ಲೂ ಗಾಢವಾಗಿ ಬಂಧಿಸಿ ಬಿಡುತ್ತದೆ. ದೇಶಿ ಅಡುಗೆಯ ರುಚಿಯಂತೂ ಬಾಯಿ ಚಪ್ಪರಿಸಿ ಬಿಡುತ್ತದೆ. ಈ ರುಚಿಯಂತೂ ದುಬಾಯಿಯಲ್ಲಿ ಸಿಗುವುದೇ ಇಲ್ಲ. ಇಲ್ಲಿಯಂತೆ, ಬಂಗುಡೆ, ಬೂತಾಯಿ, ಕಾಣೆಗೆ ಚೆನ್ನಾಗಿ ಮಸಾಲೆ ಹಚ್ಚಿ ಕಾಯಿಸಿದರೂ ಆ ಸ್ವಾದಿಷ್ಟವೇ ಕಾಣೆ!

    ಕೊನೆಯ ದಿನಗಳ್ಲಿ ಹೆಂಡತಿಯಂತೂ ತುಂಬಾ ಬ್ಯೂಸಿ. ಮನೆಗೆ ಅದು ಬೇಕು- ಇದು ಬೇಕೆಂಬುದು ಅರ್ಧ ದಿನವಂತೂ ಪೇಟೆಯಲ್ಲಿಯೇ ಸುತ್ತಾಡಿಕೊಂಡಿರುತ್ತಾರೆ. ಕಷಾಯ ಗುದ್ದುವ ಕಲ್ಲಿನಿಂದ ಹಿಡಿದು,ಪುನರ್‌ಪುಳಿ’ ಸಿಪ್ಪೆಯವರೆಗೆ ಎಲ್ಲವೂ ಅವರಿಗೆ ಬೇಕು. ಅಷ್ಟರಲ್ಲಿ ಖಾಲಿ ಬಿದ್ದಿದ್ದ ಸೂಟ್‌ಕೇಸ್‌ಗಳು ಒಂದೊಂದಾಗಿ ತುಂಬಿಕೊಳ್ಳುತ್ತದೆ. ಇದರ ನಡುವೆ ಊರಿನ ಆತ್ಮೀಯರ ಪಾರ್ಸಲ್‌ಗಳು ಬೇರೆ. ನನ್ನ ಮಗನಿಗೆ ಉಪ್ಪಿನಕಾಯಿ, ಮಗಳಿಗೆ ಪತ್‌ರೋಡೆ, ಮಗುವಿಗೆ ಚಿಕ್ಕಿ-ಚಕ್ಕುಲಿಯೆಂದು ಕೊಡುತ್ತಿರುತ್ತಾರೆ. ಅದರಲ್ಲಿ ಹಪ್ಪಳ, ಸಂಡಿಗೆ, ಚಿಪ್ಸ್ ಅಂತೂ ಮಾಮೂಲಿ. ಕೆಲವರು ತಮ್ಮ ಮಕ್ಕಳಿಗೆ ಹಲಸು, ಗೆಣಸು, ಅನನಾಸು, ತರಕಾರಿಗಳನ್ನೂ ಕೊಡುವುದಿದೆ. ಇವು ಎಲ್ಲಾ ಲೂಲು ಸೆಂಟರ್‌ನಲ್ಲಿ ಸಿಗುವುದಿಲ್ಲವೇ ಅಂದರೆ- “ಸಿಗಬಹುದು, ಆದರೆ ಮನೆಯಲ್ಲಿ ಬೆಳೆಸಿದ ಈ ರುಚಿಯುಂಟಾ?” ಎಂದು ಮರುಪ್ರಶ್ನೆ ಹಾಕುತ್ತಾರೆ. ನಮ್ಮಲ್ಲಿ ಅದಕ್ಕೆ ಉತ್ತರವೇ ಇರುವುದಿಲ್ಲ. ಪುಕ್ಕಟೆ ಹೊತ್ತುಕೊಂಡು ಸಾಗುವವರು ಸಿಕ್ಕರೆ, ಇವರು ಮಸಾಲೆ ಅರೆಯುವ ಕಲ್ಲು ಕೂಡ ನೀಡಲು ಸಿದ್ಧರಿರುತ್ತಾರೆ. ನಮಗಂತೂ ಮೈ ತುಂಬಾ ಹೆಪ್ಪುಗಟ್ಟಿದ ದಾಕ್ಷಿಣ್ಯ. “ಇಲ್ಲ” ಅನ್ನಲು ನಾಲಗೆಯೇ ಹೊರಳದು. ಕೆಲವು ಬಾರಿ ನಮ್ಮ ಹಳೇ ಬಟ್ಟೆಯನ್ನು ಇಲ್ಲೇ ತೊರೆದು, ಇವರ ಅಗ್ಗದ ಸರಕನ್ನೇ ಸೂಟುಕೇಸಿಗೆ ತುರುಕುವುದು ಹೆಚ್ಚು. ಬೇಸರವೆಂದರೆ, ಕೆಲವೊಮ್ಮೆ ಈ ವಸ್ತುಗಳಿಗೆ ಮೂರುಪಟ್ಟು ಬೆಲೆಯ ದಂಡ ಕಟ್ಟಿ ವಿಮಾನ ಹತ್ತುವುದೂ ಇದೆ. ಇವರು ನೀಡುವ ಬಸಳೆಗೆ ಬೀದಿ ಬದಿಯಲ್ಲಿ ನೂರು ರೂಪಾÊ ಇದ್ದರೆ, ಅಲ್ಲಿ ಆರು ನೂರು ರೂಪಾÊ ಪುಕ್ಕಟೆ ವಸೂಲಿ ಮಾಡುತ್ತಾರೆ. ನಮ್ಮವರಿಗೆ ಇದು ಅರ್ಥವೇ ಆಗುವುದಿಲ್ಲ.

    ಹೊರಡುವ ಹೊತ್ತು ಮನೆಗೆ ಒಡಹುಟ್ಟಿದವರು ಮಾತ್ರವಲ್ಲ, ವಠಾರದವರು ಬರುತ್ತಾರೆ. ಪುಟ್ಟ ಮಕ್ಕಳ ಕಿಸೆಗೆ ಒಂದಿಷ್ಟು ನೋಟು ತುರುಕಿ, ಎಲ್ಲರನ್ನು ಬೀಳ್ಕೊಂಡ ಬಳಿಕ ಉಳಿದವರು ಅಪ್ಪ-ಅಮ್ಮ. ಅವರನ್ನು ಆಲಂಗಿಸಿ ಕೊಂಡಾಗ ದುಃಖದ ಕಟ್ಟೆ ಒಡೆದು ಹೋಗುತ್ತದೆ. ಏನೋ ಸಂಕಟ ವೇದನೆ. ಅಲ್ಲಿ ಮತ್ತೆ ನಿಲ್ಲಲು ಸಾಧ್ಯವಾಗುವುದಿಲ್ಲ. ಕಾರು ಹತ್ತಿ ಎಲ್ಲರಿಗೂ ಕೈ ಬೀಸಿದಾಗ ಆ ಮಂಜಾದ ಕಣ್ಣುಗಳಲ್ಲಿ ಅಸ್ಪಷ್ಟ ಚಹರೆಗಳು, ಕಾರು ಮುಂದೆ ಮುಂದೆ ಸಾಗಿದಂತೆ, ಹೃದಯದ ಒಂದೊAದೇ ಬೇರುಗಳು ಕಡಿದು ಹೋದಂತಹ ನೋವು. ಮಕ್ಕಳ ನೇತ್ರಗಳಲ್ಲಿ ಹರಿಯುವ ಕಣ್ಣೀರು. ಹೆಂಡತಿಯ ಕಳೆಗುಂದಿದ ಮುಖ. ವಿಮಾನ ಏರಿ ಕೂತಾಗ ಎಲ್ಲರಲ್ಲೂ ಗಾಢ ಮೌನ. ಸಂತಸವೇ ಸತ್ತು ಹೋದ ಭಾವ.

    ದುಬಾಯಿಗೆ ಕಾಲಿಟ್ಟಾಗ ಅದೇ ಸುಡುವ ಬಿಸಿ ಗಾಳಿ, ಅಪರಿಚಿತ ಮುಖಗಳು, ಓಡಾಡುವ ಕಾರು-ಬಸ್ಸುಗಳು, ಚಲಿಸುವ ಮೆಟ್ರೋಗಳು, ಹಾರಾಡುವ ವಿಮಾನಗಳು. ಮರುದಿನ ಅದೇ ಕಛೇರಿ, ಅದೇ ಯಾಂತ್ರಿಕ ಬದುಕು. ನಾವು ಅದಕ್ಕೆ ಅನಿವಾರ್ಯವಾಗಿ ಹೊಂದಿಕೊಳ್ಳಲೇ ಬೇಕು. ಈ ದೇಶ ಅದೆಷ್ಟೋ ಶ್ರೀಮಂತವಾದರೂ, ಊರಿನ ಆ ಸುಖವಂತೂ ಇಲ್ಲಿ ಖಂಡಿತ ಸಿಗಲಾರದು. ಅಲ್ಲಿಯ ಗಾಳಿ, ಮಳೆ, ಚಳಿ, ನಮ್ಮವರ ಪ್ರೀತಿ, ಅಕ್ಕರೆ, ಒಲವು ಎಂದಿಗೂ ದೊರೆಯುವುದು. ಆ ಪುಟ್ಟ ಮಕ್ಕಳ ನಗು-ಕೇಕೆ-ಅಳು ಈಗ ಬರೇ ನೆನಪು ಮಾತ್ರ. ವಾರ ಕಳೆದರೂ ಮನಸ್ಸು ಊರಿನಿಂದ ಹೊರಗೆ ಬರಲು ಒಪ್ಪುವುದೇ ಇಲ್ಲ. ಅದಕ್ಕೆ ಕನಿಷ್ಟ ಎರಡು ವಾರವಾದರೂ ಬೇಕು. ಈಗ ರಾತ್ರಿ ಮಲಗಿದರೂ ಊರಿನದ್ದೇ ಕನಸು. ಅನಿವಾಸಿಗಳ ಬದುಕೇ ಹೀಗೆ. “ಇಲ್ಲಿ ಇರಲಾರೆ, ಅಲ್ಲಿ ಬದುಕಲಾರೆ” ಅನ್ನುವ ಆತಂತ್ರ ಸ್ಥಿತಿ. ಅದು ಹಣದ ಆಶೆಗೆ ಬೆನ್ನು ಹತ್ತಿ ಬಂದ ನಾಗಲೋಟವೋ, ಭವಿಷ್ಯದ ಬದುಕಿಗೆ ಹಾಕಿಕೊಂಡ ಅಡಿಪಾಯವೋ, ಸಂಸಾರವು ಕಟ್ಟಿ ಹಾಕಿದ ಬಂಧನವೋ ಅಥವಾ ನಮ್ಮ ಸ್ವದೇಶ ನಮಗೆ ಸೂಕ್ತ ಉದ್ಯೋಗ-ಅವಕಾಶ ನೀಡದ ವಂಚನೆಯೋ ತಿಳಿಯದು? ಆದರೆ ಮರುಭೂಮಿಯ ಕಾಂಕ್ರಿಟ್ ಕಾಡಿನಲ್ಲಿ ಬದುಕು ಸಾಗುತ್ತಲೇ ಇರುತ್ತದೆ. ಮತ್ತೆ ಆ ಮಳೆ, ತಂಪು, ಪ್ರೀತಿ, ಬಗೆ ಬಗೆಯ ಊಟ-ತಿಂಡಿ ಬೇಕು ಅನ್ನುವುದಾದರೆ ಒಂದು ವರುಷ ಕಾಯಲೇಬೇಕು. ಅಲ್ಲಿಯವರೆಗೆ ಸುಡುವ ಮರುಭೂಮಿಯಲ್ಲಿ ಹೆಜ್ಜೆಗಳು ಹಾಕುತ್ತಲೇ ಇರಬೇಕು ಪರದೇಶಿಯಾಗಿ.

  • ಕನಸುಗಳು ಕರಟಿ ಭಸ್ಮವಾದ ದುರಂತ ಯಾತ್ರೆ!

    ಕನಸುಗಳು ಕರಟಿ ಭಸ್ಮವಾದ ದುರಂತ ಯಾತ್ರೆ!

    ಅಹ್ಮದಾಬಾದ್‌ನಿಂದ ಲಂಡನ್‌ಗೆ ಹೊರಟ ಆ ವಿಮಾನದಲ್ಲಿ ನೂರಾರು ಕನಸುಗಳನ್ನು ಹೊತ್ತ ಪ್ರಯಾಣಿಕರಿದ್ದರು. ನಗು ನಗುತ್ತಾ ತಮ್ಮ ತವರಿನಿಂದ ಹೊರಟವರು, ತಮ್ಮ ಬಂಧುಗಳನ್ನು ಆಲಂಗಿಸಿಕೊಡು ಬಹುದೂರದ ಪ್ರದೇಶಕ್ಕೆ ಹೋಗುವಾಗ ಬಿಕ್ಕಿ ಬಿಕ್ಕಿ ಅತ್ತವರು, ನಗುತ್ತಾ ಟಾಟಾ ಹೇಳಿದವರು, ಭವಿಷ್ಯದ ಖುಶಿಯ ಕನಸನ್ನು ಹೊತ್ತು ಆ ವಿಮಾನವನ್ನು ಏರಿ ಸಂಭ್ರಮ ಪಟ್ಟವರು… ಮುಂದೆ ಏನಾಗುತ್ತೋ ಎಂಬ ಭೀತಿ ಇಲ್ಲದೇ ನಿರಾಳವಾಗಿ ಸೀಟಿನಲ್ಲಿ ಒರಗಿ ಸೆಲ್ಫಿ ತೆಗೆದವರು ಕೆಲವೇ ನಿಮಿಷದಲ್ಲಿ ಸುಟ್ಟು ಕರಕಲಾಗಿ ಭಸ್ಮವಾಗಿ ಬಿಟ್ಟರು!

    ತಾ. 12-6-25 ಒಂದು ಕರಾಳ ದಿನವಾಗಿತ್ತು ಭಾರತಕ್ಕೆ. ಟಿ.ವಿ. ನ್ಯೂಸ್‌ಗಳು, ಸೋಶಿಯಲ್ ನ್ಯೂಸ್‌ಗಳು ಈ ವಿಮಾನದ ಅಪಘಾತದ ಬಗ್ಗೆ ಹೇಳ ತೊಡಗಿದಾಗ, ದೃಶ್ಯಗಳನ್ನು ಕಂಡಾಗ ಕುಳಿತಲ್ಲೇ ಶಿಲೆಯಂತಾಗಿದ್ದೆ. ಅದೆಂತಹ ಭೀಕರ ದೃಶ್ಯ! ವಿಮಾನ ತನ್ನ ಒಡಲಿನವರ ಸಾವಿಗೆ ಕಾರಣವಾಗುವುದರ ಜೊತೆಗೆ ಈ ವಿಮಾನಕ್ಕೆ ಸಂಬAಧವೇ ಇಲ್ಲದೇ ತಮ್ಮ ಹಾಸ್ಟೆಲ್‌ನಲ್ಲಿ ಕುಳಿತು ಊಟ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನೂ ಬಲಿ ಪಡೆದಿತ್ತು! ಹಾಸ್ಟೆಲ್ ಮೇಲೆ ಭಾರೀ ಶಬ್ಧದೊಂದಿಗೆ ಅಪ್ಪಳಿಸಿದ ಬೋಯಿಂಗ್ |7| ವಿಮಾನ ಕಟ್ಟಡದ ಮೇಲೆ ಬಿತ್ತು. ಬೆಂಕಿಯ ಗೋಲದಲ್ಲಿ ಆಕಾಶದತ್ತೆರಕ್ಕೆ ಕಪ್ಪು ಹೊಗೆ ಎದ್ದಿತ್ತು. 274 ಜನರು ಸಜೀವ ದಹನ ಆಯಿತು. ಪೈಲೆಟ್ ಕೊನೆಯ ಕ್ಷಣ ಅಸಹಾಯಕನಾಗಿ `ಮೇಡೇ’ ಎಂದು ಕೂಗುತ್ತಿದ್ದದ್ದು (ನಮಗೆ ನೆರವು ಬೇಕು) ಕೇಳಿ ಬಂತು. ವಿಮಾನದ ಪತನ ಇಡೀ ವಿಶ್ವದಲ್ಲೇ ಬೆರಗು ಹುಟ್ಟಿಸಿತ್ತು.

    2010ರಲ್ಲಿ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ದುಬಾಯಿಯಿಂದ ಮುಂಜಾನೆಯಲ್ಲಿ ಬಂದ ವಿಮಾನ ಲ್ಯಾಂಡ್ ಆಗುವಾಗ ರನ್‌ವೇಯಿಂದ ಜಾರಿ ಆಳವಾದ ಕಂದಕಕ್ಕೆ ಬಿತ್ತು. ಆಗ ಬೆಂಕಿಯ ಜ್ವಾಲೆಯೊಂದಿಗೆ ಭೀಕರವಾದ ದೃಶ್ಯ ಕಂಡು ಬಂತು. ವಿಮಾನದಲ್ಲಿದ್ದ ಪ್ರಯಾಣಿಕರು ಬೆಂದು ಕರಟಿ ಹೋಗಿದ್ದರು. ಬೆರಳೆಣಿಕೆಯಷ್ಟು ಪ್ರಯಾಣಿಕರು ಬದುಕಿ ಉಳಿದಿದ್ದರು ಅಂದು. ಅದೇ ದೃಶ್ಯ ಬೆಂಕಿಯಲ್ಲಿ ಕರಟಿದ ಮಾನವರ ದೇಹಗಳು ಈಗಲೂ ಕಣ್ಣೆದುರು ಹಸಿಯಾಗಿ ಬಂತು. ಇಂತಹ ಭೀಕರ ಸಾವು ಯಾರಿಗೂ ಬಾರದಿರಲಿ. ಗೆಳತಿ ಶಾಹಿನ್ ಈ ಕರಾಳ ದಿನವನ್ನು ಹದಿನೈದು ವರ್ಷವಾದರೂ ಮರೆಯದೇ ದುಃಖಿಸುತ್ತಿರುತ್ತಾಳೆ. ಅವಳ ಪತಿ ಆ ನತದೃಷ್ಟ ವಿಮಾನದಲ್ಲಿದ್ದರು. ಅವರ ವಿವಾಹ ವಾರ್ಷಿಕೋತ್ಸದ ಸಂಭ್ರಮದಲ್ಲಿದ್ದ ಶಾಹಿನ್ ಮರುದಿನ ಮುಂಜಾವಿಗೆ ಬರುವ ತನ್ನ ಪತಿಯ ನಿರೀಕ್ಷೆಯಲ್ಲಿ ರಾತ್ರಿ ಕುಳಿತು ತನ್ನ ಎರಡೂ ಕೈಗೆ ಮೆಹಂದಿ ಹಚ್ಚಿದ್ದಳು. ಪತಿಯ ಪ್ರಿಯವಾದ ಬಸಲೆಪುಂಡಿಯನ್ನು ಬೆಳಗ್ಗಿನ ಉಪಹಾರಕ್ಕೆ ಸಿದ್ಧಪಡಿಸಿಟ್ಟಿದ್ದಳು. ಪತಿಯು ದುಬಾಯಿ ವಿಮಾನ ನಿಲ್ದಾಣದಲ್ಲಿದ್ದಾಗ ಹೇಳಿದ್ದ, “ಪ್ರಿಯೆ… ನೀನು ಪ್ರೀತಿಯಿಂದ ಕೊಟ್ಟ ಶರ್ಟ್ನ್ನೇ ನಾನು ಇಂದು ಧರಿಸಿದ್ದೇನೆ.” ಬಹುಶಃ ಆ ಮಾತೇ ಆತನ ಕೊನೆಯದಾಗಬಹುದು ಎಂದು ಶಾಹಿನ್‌ಗೆ ತಿಳಿದಿರಲಿಲ್ಲ. ತನ್ನ ಮಕ್ಕಳೊಂದಿಗೆ ಮುಂಜಾವಿಗೆ ವಿಮಾನ ನಿಲ್ದಾಣಕ್ಕೆ ಹೋದ ಶಾಹಿನ್‌ಗೆ ಅಲ್ಲಿಯ ವಾತಾವರಣ ನೋಡಿ ದಿಗಿಲಾಗಿತ್ತು. ಜನರು ಆಚೀಚೆ ಓಡಾಡುತ್ತಾ, “ವಿಮಾನ ಬಿತ್ತು” ಎನ್ನುವುದು ಮಾತ್ರ ಕೇಳಿಸಿತ್ತು. ಮತ್ತೆ ಆದದ್ದೆಲ್ಲಾ ಭೀಕರವಾದ ದುಃಸ್ವಪ್ನದಂತಾಗಿತ್ತು. ಕರಟಿ ಹೋದ ಶವಗಳನ್ನು ಒಂದಾಗಿ ತರುತ್ತಿರುವಾಗ ತನ್ನ ಪತಿಯ ಗುರುತನ್ನು ಪತ್ತೆ ಹಚ್ಚಲಾಗದಂತೇ ಎಲ್ಲವೂ ಕರಟಿ ಹೋಗಿತ್ತು. ಆಗ ಅವಳಿಗೆ ನೆನಪದಾದದ್ದು ತನ್ನ ಪತಿ ಅಂದು ಹಾಕಿದ್ದ ಶರ್ಟ್ ತಾನು ಪ್ರೆಸೆಂಟ್ ಮಾಡಿದ್ದು…! ಆಕೆಯ ಕಣ್ಣು ಒಂದು ಕರಟಿ ಹೋದ ಶರೀರದತ್ತ ನೆಟ್ಟಿತು. ಆ ಶರೀರದಲ್ಲಿ ಕೇವಲ ಒಂದು ಭಾಗದಲ್ಲಿ ಹಾಕಿದ್ದ ವಸ್ತç ಬೆಂಕಿ ಹಿಡಿಯದೇ ಉಳಿದಿತ್ತು. ಆ ತುಂಡು ವಸ್ತçದ ಗುರುತು ಹಿಡಿದ ಶಹೀನ್‌ಗೆ ಪತಿಯ ದೇಹ ದೊರಕಿತ್ತು! ಆಕೆಯು ಕುಸಿದು ಬಿದ್ದಳು. ಈ ಹದಿನೈದು ವರ್ಷದಲ್ಲಿ ಪ್ರತೀ ಮೇ ತಿಂಗಳು ಅವಳಿಗೆ ಈ ದೃಶ್ಯ ಹಸಿ ಹಸಿಯಾಗಿ ಕಾಡುತ್ತದೆ. ಅಹಮದಾಬಾದ್‌ನ ವಿಮಾನ ದುರಂತದ ದೃಶ್ಯಗಳನ್ನು ನೋಡುತ್ತಿದ್ದಾಗೇ ಶಾಹಿನ್ ಖಿನ್ನತೆಗೆ ಜಾರಿದ್ದಳು. ನನಗೆ ಕಾಲ್ ಮಾಡಿ ಬಹಳಷ್ಟು ಅತ್ತಳು. ಪತಿ ಇಲ್ಲದೇ ತನ್ನ ಮೂರು ಮಕ್ಕಳನ್ನು ಸಾಕಿ ಬೆಳೆಸಿ ವಿವಾಹ ಮಾಡಿದ ಆ ಕಷ್ಟಕರವಾದ ಸಮಯವನ್ನು ಮೆಲುಕು ಹಾಕಿಕೊಂಡಳು. ಮೂವತ್ತೆöÊದರ ಹರೆಯದಲ್ಲಿ ಆಕೆ ಪತಿಯನ್ನು ಕಳೆದುಕೊಂಡಿದ್ದಳು.

    ಅದೆಷ್ಟು ಕನಸುಗಳನ್ನು ಹೊತ್ತು ಲಂಡನ್‌ಗೆ ಹೊರಟಿರಬಹುದು ಜನರು. ಎಲ್ಲರದೂ ಒಂದೊAದು ದುಃಖಿತ ಕಥೆಗಳು. ಡಾಕ್ಟರ್ ಒಬ್ಬರು ತನ್ನ ಪತ್ನಿ ಹಾಗೂ ಮೂವರು ಮಕ್ಕಳನ್ನು ಲಂಡನ್‌ಗೆ ತಾನು ಖರೀದಿಸಿದ ಹೊಸ ಮನೆಗೆ ಶಾಶ್ವತವಾಗಿ ನೆಲೆಸಲು ಕರೆಯಲು ಬಂದು ಆ ಸುಂದರ ಕುಟುಂಬ ವಿಮಾನದಲ್ಲಿ ಕುಳಿತು ಸೆಲ್ಫಿ ತೆಗೆದು ತಮ್ಮವರಿಗೆ ಕಳಿಸಿದ್ದೇ ಕೊನೆಯ ಫೋಟೋ ಆಯಿತು. ನವವಧು ಒಬ್ಬಳು ತನ್ನ ಭಾವೀ ಕನಸನ್ನು ನನಸು ಮಾಡಲು ಪತಿಯನ್ನು ಸೇರಲು ಹೊರಟಿದ್ದಳು. ತನ್ನ ಪತ್ನಿಯ ಚಿತಾಭಸ್ಮವನ್ನು ಲಂಡನ್‌ನಿAದ ಭಾರತಕ್ಕೆ ತಂದು ಈ ನೆಲದಲ್ಲಿ ವಿಸರ್ಜಿಸಿ ಪುನಃ ಮರಳಿ ಲಂಡನ್‌ಗೆ ಹೋಗಲು ಈ ನತದೃಷ್ಟ ವಿಮಾನ ಹತ್ತಿದ್ದರು. ಲಂಡನ್‌ನಲ್ಲಿ ಅವರ ಎರಡು ಪುಟಾಣಿ ಮಕ್ಕಳನ್ನು ಬಿಟ್ಟು ಬಂದಿದ್ದರು. ಆ ಮುಗ್ಧ ಮಕ್ಕಳಿಗೆ ತಂದೆ ಶಾಶ್ವತವಾಗಿ ಬಾರದೇ ಹೋದದ್ದೂ ತಿಳಿಯಲಿಲ್ಲ! ಹೀಗೆ ನೂರಾರು ಹೃದಯ ಹಿಂಡುವ ಕಥೆಗಳು ಮಸಣ ಸೇರಿದೆ. ಗುಜರಾತಿನ ಮಾಜಿ ಸಿ.ಎಂ. ತನ್ನ ಪತ್ನಿಯನ್ನು ಕರೆತರಲು ಲಂಡನ್‌ಗೆ ಪ್ರಯಾಣಿಸಿದ್ದರು. ತಾಯಿ ಓರ್ವಳು ತನ್ನ ಮಕ್ಕಳನ್ನು ಕಾಣಲು ತೆರಳಿದ್ದಳು. ಬಕ್ರೀದ್ ಹಬ್ಬಕಾಗಿ ಊರಿಗೆ ಬಂದ ಒಂದೇ ಮನೆಯ ಐದು ಜನ ಗೋರಿ ಸೇರುವಂತಾಯಿತು!

    ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ನಲ್ಲಿ ವಿಮಾನ ಅಪ್ಪಳಿಸಿದಾಗ `ಬಲಿ’ ಆದ ವಿದ್ಯಾರ್ಥಿಗಳ ಹಿಂದೆಯೂ ಹಲವು ಹೆತ್ತವರ ಭವಿಷ್ಯದ ಕನಸುಗಳಿವೆ. ಹೆತ್ತವರ ಈ ಕನಸು ಬೆಂಕಿಯ ಜ್ವಾಲೆಗೆ ಭಸ್ಮವಾದವು. ಎಷ್ಟೆಲ್ಲಾ `ಸಾಲ’ ಮಾಡಿ ಈ ಮಕ್ಕಳಿಗೆ ಮೆಡಿಕಲ್ ಕಲಿಸಲು ಹೆತ್ತವರು ತಮ್ಮ ಜೀವನವನ್ನು ಮುಡಿಪ್ಪಾಗಿಟ್ಟಿರಬಹುದು! ನನಸಾಗದ ಕನಸಿನ ಹೆಸರಿನಲ್ಲಿ `ಸಾಲ’ ತೀರಿಸಲು ಪುನಃ ದುಡಿಯುವ ಶ್ರಮ ಜೀವಿಗಳಾಗಿ ಆ ಹೆತ್ತವರು ಜೀವಂತ ಇರಬೇಕಾಗಿದೆ. ಮಕ್ಕಳನ್ನು ಕಳೆದುಕೊಂಡ ಹೆತ್ತವರ ನೋವುಗಳು! ಸಂಗಾತಿಯನ್ನು ಕಳೆದು ಕೊಂಡವರ ನೋವುಗಳು, ಹೆತ್ತವರನ್ನು, ಸಹೋದರ-ಸಹೋದರಿಯರನ್ನು ಕಳೆದುಕೊಂಡ ನೋವುಗಳು ಅದೆಷ್ಟು ಕುಟುಂಬದ ಆರ್ಥಿಕ ಸ್ತಂಭವೇ ಕುಸಿದು ಬಿದ್ದಿರಬಹುದು… ದುರಂತಗಳು ನಮ್ಮ ಕಣ್ಣ ಎದುರು ನಡೆಯುತ್ತಾ ಇದ್ದರೂ ನಾವು ಮಾನವರಾಗುವುದಿಲ್ಲ. ಸಾವಿನಲ್ಲೂ ರಾಜಕೀಯ ಮಾಡುವ ರಾಜಕಾರಣ ಇರುವ ದೇಶ ನಮ್ಮದು. ನೀಚ, ಕ್ರೂರ, ಮನಃಸ್ಥಿತಿ ಇರುವ ಮನುಷ್ಯರು ಸಾವನ್ನೂ ಸಂಭ್ರಮಿಸುತ್ತಾರೆ. “ಕೋಮು ದ್ವೇಷ” ಎಂಬುವುದು ಸಾವಿನಲ್ಲೂ ಪಾಠ ಕಲಿಯುವುದಿಲ್ಲ.

    ನಾವಿಂದು ಇಂತಹ ದುರಂತಗಳ ಹಿಂದಿನ ಕಾರಣಗಳನ್ನು ಅವಲೋಕಿಸಿದರೆ ಎಲ್ಲವೂ `ಭ್ರಷ್ಟಾಚಾರ’ದ ರಾಕ್ಷಸ ಕೈಗೆ ಒಳಪಟ್ಟಿರುವಂತಹದ್ದು. ನಮ್ಮ ವಿಮಾನಗಳ ಅವಸ್ಥೆ ಹೇಗಿದೆ ಎಂದರೆ ಲೇಖಕರಾದ ಇರ್ಶಾದ್‌ರವರು ನಮ್ಮ ಈ ಮಾಸಿಕದ ಲೇಖನದಲ್ಲಿ ಭಾರತದ ವಿಮಾನಗಳನ್ನು “ಹಾರಾಡುವ ಶವ ಪೆಟ್ಟಿಗೆಗಳು” ಎಂದು ಉಲ್ಲೇಖಿಸಿದ್ದಾರೆ. ನಿಜ… ಭಾರತದ ಹೆಚ್ಚಿನ ವಿಮಾನಗಳು ಯೋಗ್ಯವಾಗಿಲ್ಲ ಪ್ರಯಾಣಕ್ಕೆ. ಅಹಮದಾಬಾದ್‌ನ ವಿಮಾನದಲ್ಲಿದ್ದ ಓರ್ವ ಯುವಕ ಈ ದುರಂತದ ಕೆಲವೇ ನಿಮಿಷಕ್ಕೆ ಮೊದಲು ತಾನು ಲಂಡನ್‌ಗೆ ಪ್ರಯಾಣಿಸುವ ವಿಮಾನ ಬೋಯಿಂಗ್ ಎಐ 171ರ ಅಸ್ತವ್ಯವಸ್ಥೆಯ ಬಗ್ಗೆ ವೀಡಿಯೋ ಮಾಡಿದ್ದಾನೆ. ಎಸಿ ವರ್ಕ್ ಆಗ್ತಾ ಇಲ್ಲ ಎಂದು ಹಲವು ವಿಮಾನದಲ್ಲಿ ಆಸನಗಳೂ ಸರಿಯಾಗಿಲ್ಲ… ಕಳಪೆ ಗುಣಮಟ್ಟದ ಹಲವು ವಿಮಾನಗಳ ಬಗ್ಗೆ ಹಲವರು ದೂರಿ ಹೇಳಿರುತ್ತಾರೆ. ಪ್ಲಾಸ್ಟರ್ ಅಂಟಿಸಿದ ಕಿಟಕಿಗಳು, ಹಲವು ವಿಮಾಣಗಳ ಸ್ಥಿತಿಗತಿ ಉತ್ತಮವಾಗಿಲ್ಲ ಎಂದು ಪ್ರಯಾಣಿಕರು ದೂರುತ್ತಾ ಇರುತ್ತಾರೆ. ದುಬಾಯಿ, ಸೌದಿಯ ವಿಮಾನಗಳನ್ನು ಕಂಡವರಿಗೆ ಭಾರತದ ವಿಮಾನಗಳು `ಹಾರುವ ಶವ ಪೆಟ್ಟಿಗೆಗಳಾಗಿ’ ಕಾಣುವುದು ಸಹಜ.

    ಏರ್ ಇಂಡಿಯಾದ ಬೋಯಿಂಗ್ ಎಐ 171 ವಿಮಾನದಲ್ಲಿ 242 ಮಂದಿ ಪ್ರಯಾಣಿಕರಿದ್ದು ಒಬ್ಬನೇ ಒಬ್ಬ ಬದುಕಿ ಉಳಿದದ್ದು ಪವಾಡವೇ. ತಾಂತ್ರಿಕ ದೋಷವೇ ಕಾರಣ ಎಂದು ದುರಂತಕ್ಕೆ ಹೇಳಲಾಗುತ್ತಿದೆ. ಇಂತಹ ತಾಂತ್ರಿಕ ದೋಷಗಳಿರುವ ವಿಮಾನಗಳನ್ನು ಪ್ರಯಾಣಕ್ಕೆ ಸಜ್ಜುಗೊಳಿಸುವ ಮೂಲಕ ವಿಮಾನ ಸಂಸ್ಥೆಗಳು ಜನರ ಜೀವದೊಂದಿಗೆ ಆಟ ಆಡುತ್ತಿರುವುದು ನಮ್ಮ ದುರಂತ.

    “ಗುಡ್ ಬೈ ಇಂಡಿಯಾ” ಎಂದು ಹೇಳಿದ ಬ್ರಿಟಿಶ್ ಯುವಕರು ಶಾಶ್ವತವಾಗಿ ಇಡೀ ವಿಶ್ವಕ್ಕೇ ಗುಡ್ ಬೈ ಹೇಳಿದ್ದಾರೆ. ಅವರ ಸಂತಸದ ಮುಖ ವೀಡಿಯೋದಲ್ಲಿ ವೈರಲ್ ಆಗಿದೆ. ಯಾಕಾಗಿ ಭಾರತಕ್ಕೆ ತಮ್ಮ ಮಕ್ಕಳು ಹೋದರು ಎಂಬ ಸಂಕಟ ಅವರ ಹೆತ್ತವರಿಗೆ ಆಗಿರಬಹುದು. ಕ್ರಿಕೆಟ್ ಆಟಗಾರ ಒಬ್ಬರು ತಾನು ಇನ್ನು ಮುಂದೆ ಭಾರತದ ವಿಮಾನದಲ್ಲಿ ಪ್ರಯಾಣಿಸುವುದಿಲ್ಲ ಎಂದು ಘೋಷಿಸಿದ್ದಾರೆ. ದುಬಾರಿ ಹಣ ಕೊಟ್ಟು ಟಿಕೇಟ್ ಖರೀದಿಸಿದರೂ ಒಂದು ಲಘು ಉಪಹಾರವನ್ನೂ ಕೊಡದ ದರಿದ್ರ ಸಂಸ್ಥೆ ಅಂದರೆ ಭಾರತದ ವಿಮಾನ ಸಂಸ್ಥೆ.

    ದುರAತ ಕಂಡ ವಿಮಾಣದಲ್ಲಿ ನತದೃಷ್ಟ ಎರಡು ಪೈಲಟ್‌ನಲ್ಲಿ ಒಬ್ಬರು ಮಂಗಳೂರು ಮೂಲದ ಕ್ಲೆöÊವ್ ಕುಂದರ್. ಅನುಭವೀ ಪೈಲಟ್‌ಗಳಿದ್ದರೂ ವಿಮಾಣವೇ ಕಳಪೆ ಸ್ಥಿತಿಯಲ್ಲಿದ್ದಾಗ ದುರಂತ ಸಂಭವಿಸುವುದು ಸತ್ಯ.

    ನಮ್ಮ ದೇಶದ ಶ್ರೀಮಂತ ಲಕ್ಷಾಧೀಶರಿಗೆಲ್ಲಾ ಹೆಚ್ಚಿನ ರಾಜಕಾರಣಿ, ಸೆಲೆಬ್ರಿಟಿಗಳಿಗೆಲ್ಲಾ ಏರ್‌ಜೆಟ್, ಹೆಲಿಕಾಫ್ಟರ್ ಇತ್ಯಾದಿ ಸುಸಜ್ಜಿತವಾದ ಖಾಸಗಿ ವಿಮಾನಗಳಿರುತ್ತದೆ. ಅಂತಹ ಸೌಲಭ್ಯ ಇರುವವರಿಗೆ ಜನಸಾಮಾನ್ಯರು ಸಂಚರಿಸುವ ಕಳಪೆ ವಿಮಾನದ ಪರಿಚಯವೂ ಇರುವುದಿಲ್ಲ. ಅದಾನಿ-ಅಂಬಾನಿ, ಟಾಟಾ ಮುಂತಾದ ಉದ್ಯಮಿಗಳ ಕುಟುಂಬ ಇಂತಹ ವಿಮಾನವನ್ನೂ ಹತ್ತುವುದಿಲ್ಲ. ದುರಂತದಲ್ಲಿ ಮಡಿದವರಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ಟಾಟಾ ಸಂಸ್ಥೆ ಘೋಷಿಸಿದೆ. ಒಂದು ದುಃಖಿತ ಕುಟುಂಬದ ಸದಸ್ಯರು ಹೇಳಿದರು. ನಾವು ನಿಮಗೆ ಎರಡು ಕೋಟಿ ಕೊಡುತ್ತೇವೆ, ನಾವು ಕಳೆದುಕೊಂಡ ಪ್ರೀತಿಪಾತ್ರರನ್ನು ನಮಗೆ ಮರಳಿಕೊಡುವಿರಾ?! ಎಂದು. ಸತ್ಯ… ಬೆಲೆ ಕಟ್ಟಲಾಗದ `ಜೀವ’ವನ್ನೇ ಕಳೆದುಕೊಂಡವರಿಗೆ `ಕೋಟಿ’ಯ ಪರಿಹಾರ ಅವರಿಗಾದ `ನಷ್ಟ’ ತುಂಬಲಾರದು.

    ವಿಮಾನದಲ್ಲಿದ್ದ ಪ್ರಯಾಣಿಕರು, ಗಗನ ಸಖಿಗಳು, ವಿಮಾನ ಬಿದ್ದ ಪ್ರದೇಶದಲ್ಲಿದ್ದ ಅಮಾಯಕ ನಾಗರಿಕರು, ವಿದ್ಯಾರ್ಥಿಗಳು ಎಲ್ಲಾ ಆ ಕರಾಳ ದಿನದ `ದುರಂತ’ದ ನತದೃಷ್ಟ ಮನುಷ್ಯರು. `ಸಾವು’ ಪರಮ ಸತ್ಯ. ಹುಟ್ಟಿದವರೆಲ್ಲಾ ಸಾಯಲೇಬೇಕು. ಆದ್ರೆ… ಈ ರೀತಿಯ ಭೀಕರತೆಯಲ್ಲಿ ನಮ್ಮ `ಅಂತ್ಯ’ ಆಗದಿರಲಿ. ದೇವನು ನಮ್ಮ ಸಾವಿನ ವಿಧಿ ಬರಹವನ್ನು ಉತ್ತಮವಾಗಿ ಬರೆದಿರಲಿ ಎಂದು ಪ್ರಾರ್ಥಿಸುತ್ತೇನೆ.

    ಶಮು