Category: ದಿನನಿತ್ಯದ ಸುದ್ದಿ

  • “ಕರ್ನಾಟಕದ 1 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಚುನಾವಣಾ ಆಯೋಗ ನೇರ ಕೈ ಜೋಡಿಸಿದೆ” 
ದಾಖಲೆ ಹಂಚಿಕೊಂಡ ರಾಹುಲ್ ಗಾಂಧಿ

    “ಕರ್ನಾಟಕದ 1 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಚುನಾವಣಾ ಆಯೋಗ ನೇರ ಕೈ ಜೋಡಿಸಿದೆ” ದಾಖಲೆ ಹಂಚಿಕೊಂಡ ರಾಹುಲ್ ಗಾಂಧಿ

    ನವದೆಹಲಿ: ಶುಕ್ರವಾರ ಬೆಂಗಳೂರಿಗೆ (Bengaluru) ಬರುವ ಮುನ್ನ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಮಹಾದೇವಪುರದಲ್ಲಿ ಮತಗಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಆನ್‌ಲೈನ್ ಮೂಲಕ ದಾಖಲೆಗಳನ್ನು ಪ್ರಕಟಿಸಿದ ಅವರು, 2024ರ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ಹಾಗೂ ಅದರ ವ್ಯಾಪ್ತಿಯ ಮಹದೇವಪುರ ವಿಧಾನಸಭೆ ಕ್ಷೇತ್ರದ ದತ್ತಾಂಶಗಳನ್ನು ವಿಶ್ಲೇಷಿಸಿರುವುದಾಗಿ ಹೇಳಿದ್ದಾರೆ. ಹಾಗೆಯೇ, ಅಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂಬುದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

    ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 16 ಸ್ಥಾನ ಹಾಗೂ ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಅಚ್ಚರಿಯಾಗಿ ಸೋಲನ್ನು ಅನುಭವಿಸಿತು. ಹೀಗಾಗಿ ಕಡಿಮೆ ಅಂತರದಲ್ಲಿ ಸೋತ ಏಳು ಕ್ಷೇತ್ರಗಳ ಪೈಕಿ ಮಹಾದೇವಪುರ ಕ್ಷೇತ್ರದಲ್ಲಿ ತನಿಖೆ ನಡೆಸಿದೆವು. ಈ ವೇಳೆ ಕಾಂಗ್ರೆಸ್ 1,15,586 ಮತಗಳನ್ನು ಪಡೆದರೆ, ಬಿಜೆಪಿ 2,29,632 ಮತಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್‌ಗಿಂತ ಬಿಜೆಪಿ 1,14,046 ಮತಗಳ ಬಹುಮತ ಪಡೆದುಕೊಂಡಿದೆ. ಈ ಮತಗಳಲ್ಲಿ 11,965 ನಕಲಿ ಮತದಾರರು, 40,009 ನಕಲಿ ವಿಳಾಸದ ಮತಗಳು, ಒಂದೇ ವಿಳಾಸದಲ್ಲಿ ಹತ್ತಾರು ಮತಗಳಿರುವಂತಹ 10,452 ಮತಗಳು, ಫೋಟೋ ಇಲ್ಲದಿರುವ 4,132 ಹಾಗೂ ಫಾರಂ 6 ದುರ್ಬಳಕೆಯಾದ 33,692 ಮತಗಳಿವೆ ಸ್ಫೋಟಕ ಆರೋಪ ಮಾಡಿದರು.

    ಮಹಾರಾಷ್ಟ್ರ, ಹರಿಯಾಣ, ಕರ್ನಾಟಕ ಚುನಾವಣೆ ಸೇರಿ ಹಲವೆಡೆ ಮತಗಳ್ಳತನ ಆಗಿದೆ. ಇನ್ನೂ ಕಳೆದ ಐದು ತಿಂಗಳಲ್ಲಿ ಮಹಾರಾಷ್ಟ್ರಕ್ಕೆ ಅತಿ ಹೆಚ್ಚು ಮತದಾರರು ಸೇರ್ಪಡೆಯಾಗಿದ್ದಾರೆ. ಜನಸಂಖ್ಯೆಗಿಂತ ಹೆಚ್ಚು ಮತದಾರರಿದ್ದಾರೆ. ಸಂಜೆ ಐದು ಗಂಟೆಯ ಬಳಿಕ ಅತಿ ಹೆಚ್ಚು ಮತದಾನವಾಗುತ್ತದೆ ಎಂದು ಆರೋಪಿಸಿದ್ದಾರೆ.

    ಈ ಕುರಿತು ನಾವು ಚುನಾವಣಾ ಆಯೋಗವನ್ನು ಸಂಪರ್ಕಿಸಿದರೆ ನಮಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಆಯೋಗ ನಮಗೆ ಮತದಾರರ ಪಟ್ಟಿ ನೀಡಲು ನಿರಾಕರಿಸಿದೆ. ಅದಲ್ಲದೇ ರಾಜಕೀಯ ಪಕ್ಷಗಳಿಗೂ ಕೂಡ ಮತದಾರರ ಪಟ್ಟಿ ನೀಡಿಲ್ಲ. ಜೊತೆಗೆ ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಆಗ್ರಹಿಸಿದ್ದಾರೆ.

    ದೇಶದಾದ್ಯಂತ ಇದೇ ರೀತಿಯ ಅಕ್ರಮಗಳು ನಡೆದಿವೆ ಎಂದು ಪ್ರತಿಪಾದಿಸಿರುವ ರಾಹುಲ್, ಇದು ಸಂವಿಧಾನ ಹಾಗೂ ರಾಷ್ಟ್ರದ ಸಮಗ್ರತೆಯ ವಿರುದ್ಧದ ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಕ್ರಿಯೆಯನ್ನು ರಕ್ಷಿಸುವ ಕೆಲಸ ಮಾಡುತ್ತದೆ ಎಂಬುದನ್ನು ಆಯೋಗಕ್ಕೆ ನೆನಪಿಸಲು ಬಯಸುವುದಾಗಿಯೂ ಹೇಳಿದ್ದಾರೆ.

  • ಬರೋಬ್ಬರಿ 300 ಲೀ. ಎದೆಹಾಲು ದಾನ ಮಾಡಿದ ಮಹಾತಾಯಿ: 
ತಾಯಿಗೆ ಸಿಕ್ಕ ಸರ್ಟಿಫಿಕೇಟ್ ಏನು ಗೊತ್ತೇ..?

    ಬರೋಬ್ಬರಿ 300 ಲೀ. ಎದೆಹಾಲು ದಾನ ಮಾಡಿದ ಮಹಾತಾಯಿ: ತಾಯಿಗೆ ಸಿಕ್ಕ ಸರ್ಟಿಫಿಕೇಟ್ ಏನು ಗೊತ್ತೇ..?

    ತಮಿಳುನಾಡಿನ ಮಹಿಳೆಯೊಬ್ಬರು ಸುಮಾರು 300 ಲೀಟರ್‌ ಎದೆಹಾಲನ್ನು ದಾನ ಮಾಡುವ ಮೂಲಕ ‘ಏಷ್ಯಾ ಬುಕ್ ಆಫ್ ರೆಕಾರ್ಡ್‌’ ಮತ್ತು ‘ಇಂಡಿಯಾ ಬುಕ್ ಆಫ್ ರೆಕಾರ್ಡ್‌’ ಎರಡರಲ್ಲೂ ಸ್ಥಾನ ಪಡೆದಿದ್ದಾರೆ.

    ಎರಡು ಮಕ್ಕಳ ತಾಯಿಯಾದ ಸೆಲ್ವಾ ಬೃಂದಾ, 2023ರ ಏಪ್ರಿಲ್‌ನಿಂದ 2025ರ ಫೆಬ್ರುವರಿಯವರೆಗೆ 22 ತಿಂಗಳುಗಳಲ್ಲಿ ಒಟ್ಟು 300.17 ಲೀಟರ್‌ ಎದೆಹಾಲನ್ನು ಚಿರುಚಿರಾಪಳ್ಳಿ ಜಿಲ್ಲೆಯ ಮಹಾತ್ಮಾ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಯ (ಎಂಜಿಎಂಜಿಎಚ್‌) ಎದೆಹಾಲಿನ ಬ್ಯಾಂಕ್‌ಗೆ ದಾನ ಮಾಡಿದ್ದಾರೆ.

    ಈ ಮೂಲಕ ಅವರು ಸಾವಿರಾರು ಅಕಾಲಿಕ ಸಾವು ಮತ್ತು ಅಸ್ವಸ್ಥ ಶಿಶುಗಳ ಜೀವ ಉಳಿಸಲು ಸಹಾಯ ಮಾಡಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    2023-24ರ ಅವಧಿಯಲ್ಲಿ ಆಸ್ಪತ್ರೆಯ ಎದೆಹಾಲಿನ ಬ್ಯಾಂಕ್‌ನಲ್ಲಿ ಸಂಗ್ರಹಿಸಿದ್ದ ಒಟ್ಟಾರೆ ಎದೆ ಹಾಲಿನಲ್ಲಿ ಪ್ರಮಾಣದಲ್ಲಿ ಬೃಂದಾ ಅವರ ಕೊಡುಗೆ ಅರ್ಧದಷ್ಟು ಇತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಬೃಂದಾ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಆಸ್ಪತ್ರೆಯ ಅಧಿಕಾರಿಗಳು ‘ವಿಶ್ವ ಸ್ತನ್ಯಪಾನ ಸಪ್ತಾಹ’ದ ಸಮಾರೋಪ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿಲಿದ್ದಾರೆ.

  • ಮಗಳ ಕಣ್ಣೆದುರೇ ಗಂಡನನ್ನು ಕೊಂದ ತಂದೆ! 
ಕಾರಣವೇನು ಗೊತ್ತೇ?

    ಮಗಳ ಕಣ್ಣೆದುರೇ ಗಂಡನನ್ನು ಕೊಂದ ತಂದೆ! ಕಾರಣವೇನು ಗೊತ್ತೇ?

    ಬಿಹಾರದ ದರ್ಭಾಂಗಾದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 25 ವರ್ಷದ ವ್ಯಕ್ತಿಯೊಬ್ಬನನ್ನು ಆತನ ಮಾವನೇ ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ರಾಹುಲ್ ಕುಮಾರ್ ಹತ್ಯೆಯಾದ ವ್ಯಕ್ತಿ. ದರ್ಭಾಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇವರು ವ್ಯಾಸಂಗ ಮಾಡುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಅದೇ ಕಾಲೇಜಿನ ವಿದ್ಯಾರ್ಥಿನಿ ತನ್ನು ಪ್ರಿಯಾ ಅವರನ್ನು ಆಕೆಯ ಕುಟುಂಬದ ವಿರೋಧದ ನಡುವೆಯೇ ರಾಹುಲ್‌ ವಿವಾಹವಾಗಿದ್ದರು.

    ಹತ್ಯೆಯ ಬೆನ್ನಲ್ಲೇ ರಾಹುಲ್‌ನ ಸಹಪಾಠಿಗಳು ತನ್ನುವಿನ ತಂದೆ ಆರೋಪಿ ಪ್ರೇಮ್‌ಶಂಕರ್ ಝಾ ಅವರನ್ನು ಥಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ‘ನಿನ್ನೆ ಸಂಜೆ ಹೂಡಿ ಧರಿಸಿದ್ದ ವ್ಯಕ್ತಿಯೊಬ್ಬ ರಾಹುಲ್‌ ಬಳಿಗೆ ಬಂದಿದ್ದರು. ಹತ್ತಿರ ಬಂದಾಗ ಅದು ನನ್ನ ತಂದೆ ಎಂದು ತಿಳಿಯಿತು. ಅವರು ಬಂದೂಕು ಹಿಡಿದುಕೊಂಡಿದ್ದರು. ನನ್ನ ಕಣ್ಣೆದುರೇ ನನ್ನ ಗಂಡನ ಎದೆಗೆ ಗುಂಡು ಹಾರಿಸಿದರು. ನನ್ನ ಗಂಡ ನನ್ನ ಮಡಿಲಲ್ಲಿ ಪ್ರಾಣ ಬಿಟ್ಟರು’ ಎಂದು ತನ್ನು ಪ್ರಿಯಾ ಕಣ್ಣೀರು ಸುರಿಸಿದ್ದಾರೆ.

    ‘ನನ್ನ ಇಡೀ ಕುಟುಂಬ ಈ ಪಿತೂರಿಯಲ್ಲಿ ಭಾಗಿಯಾಗಿದೆ. ನನ್ನ ಸಹೋದರ ಮತ್ತು ತಂದೆಯಿಂದ ನಮ್ಮ ಜೀವಕ್ಕೆ ಬೆದರಿಕೆಯಿದೆ ಎಂದು ದೂರು ನೀಡಿ ನ್ಯಾಯಾಲಯಕ್ಕೂ ಹೋಗಿದ್ದೆವು’ ಎಂದು ತಿಳಿಸಿದ್ದಾರೆ.

    ಮೇಲ್ನೋಟಕ್ಕೆ ಇದು ಮರ್ಯಾದೆಗೇಡು ಹತ್ಯೆ ಎಂದು ತಿಳಿದುಬಂದಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • “ರಸ್ತೆಗಿಳಿದು ಪ್ರತಿಭಟಿಸದ ಕಾರಣದಿಂದಾಗಿ ಕ್ರೈಸ್ತರ ಮೇಲೆ ದೌರ್ಜನ್ಯ” ಪ್ರತಿಭಟನೆ ವಿಡಿಯೋ

    “ರಸ್ತೆಗಿಳಿದು ಪ್ರತಿಭಟಿಸದ ಕಾರಣದಿಂದಾಗಿ ಕ್ರೈಸ್ತರ ಮೇಲೆ ದೌರ್ಜನ್ಯ” ಪ್ರತಿಭಟನೆ ವಿಡಿಯೋ

    ಛತ್ತೀಸ್‌ ಗಢದಲ್ಲಿ ಇಬ್ಬರು ಮಲಯಾಳಿ ಸನ್ಯಾಸಿನಿಯರನ್ನು ಬಂಧಿಸಲಾಗಿದ್ದು, ಇದಕ್ಕೆ ಕೇರಳದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಹುಲ್ ಗಾಂಧಿ ಸೇರಿದಂತೆ ರಾಜಕೀಯ ಪಕ್ಷಗಳ ನಾಯಕರು ಬಂಧನವನ್ನು ಖಂಡಿಸಿದ್ದಾರೆ. ಈ ಕುರಿತಂತೆ ಪ್ರತಿಭಟನೆಗಳು ನಡೆದಿವೆ. ಮುಖ್ಯಮಂತ್ರಿ ಪಿಣರಾಜಿ ವಿಜಯನ್, ತಕ್ಷಣ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇದು ಸಂಘ ಪರಿವಾರದ ಬೂಟಾಟಿಕೆಗಳ ಭಾಗವಾಗಿದೆ ಎಂದು ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಹೇಳಿದ್ದಾರೆ.

    ಮಂಗಳೂರು : ಸುಳ್ಳು ಆರೋಪ ಹೊರಿಸಿ ಕ್ರೈಸ್ತ ಸನ್ಯಾಸಿನಿಯರನ್ನು ಬಂಧಿಸಿ ಜೈಲಿಗಟ್ಟಿದ ಛತ್ತೀಸ್‌ಗಢ ಸರಕಾರದ ಫ್ಯಾಸಿಸ್ಟ್ ಸರಕಾರದ ರಾಜಕಾರಣವನ್ನು ವಿರೋಧಿಸಿ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ನೇತೃತ್ವದಲ್ಲಿ ಸೋಮವಾರ ಮಂಗಳೂರಿನ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಧಾರ್ಮಿಕ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಫಾ. ಡೊಮಿನಿಕ್ ವಾಸ್ ಅವರು ಭಾರತದ ಕ್ರೈಸ್ತರು ಈ ಮಣ್ಣಿನ ಮಕ್ಕಳು, ದೇಶಭಕ್ತರು. ಮತಾಂಧರಲ್ಲ. ಒಂದು ಕೈಯಲ್ಲಿ ಬೈಬಲ್ ಹಿಡಿದುಕೊಂಡು ಮತ್ತು ಇನ್ನೊಂದು ಕೈಯಲ್ಲಿ ಸಂವಿಧಾನವನ್ನು ಹಿಡಿದು ಈ ದೇಶವನ್ನು ಅಪಾರವಾಗಿ ಪ್ರೀತಿಸುವರು ಎಂದು ಹೇಳಿದರು.

  • “ಮೇಲು-ಕೀಳು ಜಾತಿ ರೂಢಿ ಪಾಲಿಸುತ್ತಿವೆ  ನ್ಯಾಯಾಲಯಗಳು”
ಮಧ್ಯಪ್ರದೇಶ ಹೈಕೋರ್ಟ್ ಹೇಳಲು ಕಾರಣವೇನು?

    “ಮೇಲು-ಕೀಳು ಜಾತಿ ರೂಢಿ ಪಾಲಿಸುತ್ತಿವೆ ನ್ಯಾಯಾಲಯಗಳು” ಮಧ್ಯಪ್ರದೇಶ ಹೈಕೋರ್ಟ್ ಹೇಳಲು ಕಾರಣವೇನು?

    ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನಡುವಿನ ಸಂಬಂಧವು ಊಳಿಗಮಾನ್ಯ ಪದ್ಧತಿಯ ಪ್ರಭು ಮತ್ತು ಸೇವಕರ ರೀತಿಯಲ್ಲಿ ಮೇಲು ಕೀಳು ಸೃಷ್ಟಿಸಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

    ಜಿಲ್ಲಾ ನ್ಯಾಯಾಲಯದಲ್ಲಿದ್ದ ವಿಶೇಷ ನ್ಯಾಯಾಧೀಶ (ಪರಿಶಿಷ್ಟ ಜಾತಿ/ ಪಂಗಡ) ಅವರನ್ನು ವಜಾಗೊಳಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅತುಲ್ ಶ್ರೀಧರನ್‌, ‘ಸದ್ಯ ಇರುವ ವ್ಯವಸ್ಥೆಯಲ್ಲಿ ಪರಸ್ಪರರ ನಡುವೆ ಗೌರವ ಭಾವ ಇರಬೇಕಾದ ಜಾಗದಲ್ಲಿ ಭಯ, ಅಧೀನತೆ ಮತ್ತು ಮಾನಸಿಕ ಅಧೀನತೆಗಳೇ ಆಳವಾಗಿ ಬೇರೂರಿವೆ’ ಎಂದಿದ್ದಾರೆ.

    ‘ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಶುಭಕೋರುವಾಗ ಜಿಲ್ಲಾ ನ್ಯಾಯಾಧೀಶರು ಸಂಪೂರ್ಣ ಊಳಿಗಮಾನ್ಯ ಪದ್ಧತಿಯ ಸೇವಕರಂತೆ ವರ್ತಿಸುತ್ತಾರೆ. ಅವರ ದೇಹ ಭಾಷೆಯೂ ಹಾಗೇ ಇರುತ್ತದೆ. ನ್ಯಾಯಾಧೀಶರ ಹಾವಭಾವವು ಬೆನ್ನುಮೂಳೆಯೇ ಇಲ್ಲದ ಸಸ್ತನಿಗಳ ಪ್ರಬೇಧದಂತೆ ಕಾಣಿಸುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ‘ಹೈಕೋರ್ಟ್‌ನ ನ್ಯಾಯಮೂರ್ತಿಗಳು ಬರುತ್ತಿದ್ದಾರೆ ಎಂದರೆ ಜಿಲ್ಲಾ ನ್ಯಾಯಾಧೀಶರು ರೈಲ್ವೆ ನಿಲ್ದಾಣಗಳಲ್ಲಿ ಅವರಿಗಾಗಿ ಉಪಾಹಾರ ಮತ್ತಿತರ ವಸ್ತುಗಳನ್ನು ಹಿಡಿದು ಕಾಯುವುದು ವಸಾಹತುಶಾಹಿ ವ್ಯವಸ್ಥೆ ಇಂದಿಗೂ ಬೇರೂರಿರುವುದನ್ನು ಪ್ರತಿಬಿಂಬಿಸುತ್ತದೆ’ ಎಂದಿದ್ದಾರೆ.

    ‘ಜಿಲ್ಲಾ ನ್ಯಾಯಾಧೀಶರು ಹೈಕೋರ್ಟ್‌ನ ರಿಜಿಸ್ಟ್ರಾರ್‌ ಆದಾಗಲೂ ಅವರಿಗೆ ಆಸನವನ್ನು ನೀಡಲಾಗುವುದಿಲ್ಲ. ಒಂದೊಮ್ಮೆ ಆಸನ ನೀಡಿದರೂ ಅವರು ಕೂರಲು ಹಿಂಜರಿಯುತ್ತಾರೆ. ಇದು ವ್ಯವಸ್ಥಿತ ಅಸಮಾನತೆಯ ಸಂಪೂರ್ಣ ಮಾನಸಿಕ ದಾಸ್ಯದಂತೆ ಕಾಣಿಸುತ್ತದೆ. ಹೈಕೋರ್ಟ್ ಎಲ್ಲಿ ಅಸಮಾಧಾನಗೊಳ್ಳುತ್ತದೋ ಎಂಬ ಭಯದಲ್ಲೇ ಜಿಲ್ಲಾ ನ್ಯಾಯಾಲಯ ಕಾರ್ಯ ನಿರ್ವಹಿಸುತ್ತಿದೆ’ ಎಂದು ನ್ಯಾ. ಶ್ರೀಧರನ್ ಆತಂಕ ವ್ಯಕ್ತಪಡಿಸಿದ್ದಾರೆ.
    ‘ಈ ಭಯವು ನ್ಯಾಯದ ಅಡಿಪಾಯದೊಂದಿಗೆ ರಾಜಿ ಮಾಡಿಕೊಳ್ಳಲು ನೂಕುತ್ತದೆ. ಹೀಗಾಗಿ ಅರ್ಹ ಪ್ರಕರಣಗಳಲ್ಲೂ ಜಾಮೀನು ನಿರಾಕರಿಸುವುದು, ಸಾಕಷ್ಟು ಸಾಕ್ಷಿಗಳಿಲ್ಲದಿದ್ದರೂ ದೋಷಾರೋಪಣೆ ದಾಖಲಿಸುವುದು ಮತ್ತು ಮೇಲಿನ ನ್ಯಾಯಾಲಯಗಳ ಕೆಂಗಣ್ಣಿಗೆ ಗುರಿಯಾಗುತ್ತೇವೆ ಎಂಬ ಭಾವನೆಯಿಂದ ಆರೋಪಿಗಳನ್ನು ಬಿಡುಗಡೆ ಮಾಡುವುದನ್ನು ಜಿಲ್ಲಾ ನ್ಯಾಯಾಲಯ ತಪ್ಪಿಸುತ್ತದೆ ಎಂಬುದನ್ನೂ ಕೆಲ ಆದೇಶಗಳಲ್ಲಿ ಗಮನಿಸಬಹುದು’ ಎಂದಿದ್ದಾರೆ.

    ‘ಇವು ಶ್ರೇಣೀಕೃತ ವ್ಯವಸ್ಥೆಗಷ್ಟೇ ಸೀಮಿತವಾಗದೆ, ಜಾತಿ ವ್ಯವಸ್ಥೆಯನ್ನೂ ರೂಪಕವಾಗಿ ಉಲ್ಲೇಖಿಸಿವೆ. ಒಂದು ಸೂಕ್ಷ್ಮ ಮಟ್ಟದಲ್ಲಿ ಜಾತಿ ವ್ಯವಸ್ಥೆಯ ನೆರಳು ರಾಜ್ಯದ ನ್ಯಾಯಾಂಗ ರಚನೆಯಲ್ಲಿ ಕಾಣಬಹುದು. ಇಲ್ಲಿ ಹೈಕೋರ್ಟ್‌ ಸವರ್ಣೀಯರಂತೆ ಹಾಗೂ ಜಿಲ್ಲಾ ನ್ಯಾಯಾಲಯ ಶೂದ್ರರಂತೆ ಗೋಚರಿಸುತ್ತದೆ’ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

    ‘ಯಾವುದೇ ರಾಜ್ಯದಲ್ಲಿ ಕಾನೂನು ವ್ಯವಸ್ಥೆಯ ಸ್ವಾತಂತ್ರ್ಯವು ಸಾಮಾನ್ಯ ಜನರು ತಲುಪಲು ಸಾಧ್ಯವಾಗದ ಹೈಕೋರ್ಟ್‌ಗಿಂತ ನ್ಯಾಯಾಂಗ ವ್ಯವಸ್ಥೆಯ ಮೊದಲ ಹಂತವಾದ ಜಿಲ್ಲಾ ನ್ಯಾಯಾಲಯದ ನಿರ್ಭೀತಿ ವಾತಾವರಣದಲ್ಲಿರುತ್ತದೆ’
    ನ್ಯಾ. ಅತುಲ್ ಶ್ರೀಧರನ್, ನ್ಯಾಯಮೂರ್ತಿ, ಮಧ್ಯಪ್ರದೇಶ ಹೈಕೋರ್ಟ್

    ಭಯದ ವಾತಾವರಣದಿಂದ ನ್ಯಾಯಾಧೀಶರಲ್ಲಿ ಖಿನ್ನತೆಯ ಭಾವ:

    ‘ವ್ಯವಸ್ಥೆಯಲ್ಲಿನ ಈ ಭಯದ ಪರಿಣಾಮವು ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರ ಮನಸ್ಸಿನಲ್ಲಿ ಖಿನ್ನತೆಯ ಭಾವ ಹೆಚ್ಚಿಸುತ್ತಿದೆ. ಇದು ಅಂತಿಮವಾಗಿ ನ್ಯಾಯಾಂಗದ ಕಾರ್ಯವಿಧಾನ ಮತ್ತು ಕಾನೂನಿನ ನಿಯಮಗಳಿಗೇ ಬೆದರಿಕೆಯೊಡ್ಡುತ್ತಿದೆ’ ಎಂದು ಹೇಳಿದ್ದಾರೆ.

    ‘ಅಪಾಯಕಾರಿಯಲ್ಲದ ಬಹಳಷ್ಟು ತಪ್ಪುಗಳನ್ನು ನಿಂದಿಸಲು ಸದಾ ಸಿದ್ಧವಿರುವ ಹೈಕೋರ್ಟ್‌, ಜಿಲ್ಲಾ ನ್ಯಾಯಾಲಯಗಳನ್ನು ಸದಾ ಭಯದಲ್ಲೇ ಇರಿಸುತ್ತದೆ. ಹೀಗಾಗಿ ಶಿಕ್ಷೆಯ ಭಯದಲ್ಲೇ ಅವರು ಕಾರ್ಯ ನಿರ್ವಹಿಸುವಂತಾಗಿದೆ. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಿಗೂ ಕುಟುಂಬವಿದೆ. ಮಕ್ಕಳಿದ್ದಾರೆ. ಅನಾರೋಗ್ಯಕ್ಕೆ ತುತ್ತಾದ ಪಾಲಕರು ಇರುತ್ತಾರೆ, ಆರ್ಥಿಕ ಜವಾಬ್ದಾರಿಗಳಿರುತ್ತವೆ. ಒಂದು ಆದೇಶಕ್ಕಾಗಿ ಅವರನ್ನು ಹಠಾತ್ತಾಗಿ ವಜಾಗೊಳಿಸಿದರೆ ಅವರು ಮತ್ತು ಅವರ ಕುಟುಂಬವನ್ನು ಬೀದಿಗೆ ನೂಕಿದಂತಾಗಲಿದೆ. ಅಷ್ಟು ಮಾತ್ರವಲ್ಲ, ಅವರ ಪ್ರಾಮಾಣಿಕತೆಯನ್ನೇ ಸಮಾಜ ಪ್ರಶ್ನಿಸುವಂತೆ ಮಾಡಿದಂತಾಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

    ‘ಇಂಥ ಭಯದಲ್ಲೇ ಸದಾ ಕಾರ್ಯನಿರ್ವಹಿಸುವ ನ್ಯಾಯಾಂಗದಿಂದ ನ್ಯಾಯವನ್ನು ನಿರ್ವಹಿಸುವದನ್ನು ಬಿಟ್ಟರೆ, ನ್ಯಾಯದಾನ ಸಾಧ್ಯವಿಲ್ಲ. ಹೀಗಾಗಿ ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿನ ಅಧಿಕಾರ ಸಮತೋಲನವನ್ನು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ನ್ಯಾ. ಶ್ರೀಧರನ್ ಹೇಳಿದ್ದಾರೆ.

    ಹೈ ಕೋರ್ಟಿನ ಹೇಳಿಕೆಗೆ ಕಾರಣವಾದ ಪ್ರಕರಣ ಹೀಗಿದೆ:

    ವ್ಯಾಪಂ ಪ್ರಕರಣದಲ್ಲಿ ಕೆಲ ಜಾಮೀನುಗಳಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನ್ಯಾಯಾಲಯದ ವಿಶೇಷ ನ್ಯಾಯಾಧೀಶರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, 2015ರ ಅ. 19ರಂದು ಕರ್ತವ್ಯದಿಂದ ವಜಾಗೊಳಿಸಲಾಗಿತ್ತು. 28 ವರ್ಷಗಳ ವೃತ್ತಿ ಜೀವನದಲ್ಲಿ ಕಳಂಕವಿಲ್ಲದ ದಾಖಲೆ ಇದ್ದರೂ ಕೆಲ ಪೊಲೀಸ್ ಅಧಿಕಾರಿಗಳ ಹೇಳಿಕೆಯನ್ನು ಆಧರಿಸಿ ಅವರ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು. ಅವರ ನ್ಯಾಯಾಂಗ ವಿವೇಚನೆಯೊಂದಿಗೆ ಆಡಳಿತಾತ್ಮಕ ಭಿನ್ನಾಭಿಪ್ರಾಯಗಳಿಂದ ವಜಾಗೊಳಿಸಿರುವುದು ನ್ಯಾಯಾಂಗ ವ್ಯವಸ್ಥೆಗೇ ಧಕ್ಕೆಯನ್ನುಂಟು ಮಾಡಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.

    ಅಪ್ರಾಮಾಣಿಕತೆ ಅಥವಾ ಭ್ರಷ್ಟಾಚಾರದ ಪುರಾವೆ ಇಲ್ಲದಿದ್ದರೆ ನ್ಯಾಯಾಂಗ ಆದೇಶಗಳು ಶಿಸ್ತು ಕ್ರಮಕ್ಕೆ ಆಧಾರವಾಗುವುದಿಲ್ಲ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು. ನ್ಯಾಯಾಧೀಶರ ವಿರುದ್ಧದ ವಜಾ ಆದೇಶವನ್ನು ಪೀಠ ವಜಾಗೊಳಿಸಿತು. ಅವರಿಗೆ ಸಿಗಬೇಕಾದ ಎಲ್ಲಾ ನಿವೃತ್ತಿ ಪ್ರಯೋಜನಗಳು, ಬಡ್ಡಿಯೊಂದಿಗೆ ಬಾಕಿ ವೇತನಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಪೀಠ ಆದೇಶಿಸಿತು. ಅವರ ವಿರುದ್ಧದ ಕಾನೂನುಬಾಹಿರ ಕ್ರಮ, ಅವಮಾನ ಮತ್ತು ಆಘಾತಕ್ಕಾಗಿ ₹5 ಲಕ್ಷ ಪರಿಹಾರ ನೀಡುವಂತೆಯೂ ಸರ್ಕಾರಕ್ಕೆ ನಿರ್ದೇಶಿಸಿದೆ.

  • ಪ್ರವಾಹದಿಂದ ರಸ್ತೆಗೆ ಹರಿದು ಬಂತು 12 ಕೋಟಿಯ ಬಂಗಾರ: 
ಚಿನ್ನ ಹೆಕ್ಕುವರನ್ನು ನೋಡೋದೇ ಚೆನ್ನ..!

    ಪ್ರವಾಹದಿಂದ ರಸ್ತೆಗೆ ಹರಿದು ಬಂತು 12 ಕೋಟಿಯ ಬಂಗಾರ: ಚಿನ್ನ ಹೆಕ್ಕುವರನ್ನು ನೋಡೋದೇ ಚೆನ್ನ..!

    ಒಂದು ಆಭರಣ ಅಂಗಡಿಯಿಂದ 20 ಕಿಲೋಗ್ರಾಂ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ! ಅಂದ್ರೆ ನೀವೇನು ಮಾಡುತ್ತೀರಿ. ಹೌದು, ನೀವು ಯೋಚಿಸಿದಂತೆಯೇ ಇಲ್ಲಿಯೂ ಆಗಿದೆ. ಜನರು ಆಭರಣಗಳನ್ನು ಹುಡುಕಲು ಧಾವಿಸಿದ್ದಾರೆ , ನಾವು ಈ ಚಿನ್ನದ ಹಿಂದಿನ ಕಥೆಯನ್ನು ಅಗೆದು, ಬಗೆಯೋಣ ಬನ್ನಿ.

    ಇದು ಚೀನಾದಿಂದ ಬಂದ ವರದಿ, ಜುಲೈ 25, ರಂದು, ಶಾಂಕ್ಸಿ ಪ್ರಾಂತ್ಯದ ವುಕಿ ಕೌಂಟಿಯಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಹಠಾತ್ ಪ್ರವಾಹವು ಲಾವೊಫೆಂಗ್‌ಕ್ಸಿಯಾಂಗ್ ಎಂಬ ಆಭರಣ ಅಂಗಡಿಯನ್ನು ಕಬಳಿಸಿತು. ಕೇವಲ ಕೆಲವೇ ನಿಮಿಷಗಳಲ್ಲಿ, ಒಂದು ಮೀಟರ್‌ಗಿಂತಲೂ ಎತ್ತರದ ನೀರು ಅಂಗಡಿಯೊಳಗೆ ನುಗ್ಗಿ, ಚಿನ್ನದ ಹಾರಗಳು, ಬಳೆಗಳು, ಉಂಗುರಗಳು, ಕಿವಿಯೋಲೆಗಳು, ವಜ್ರದ ಆಭರಣಗಳು ಮತ್ತು ಬೆಳ್ಳಿಯ ವಸ್ತುಗಳಿಂದ ಕೂಡಿದ ಕ್ಯಾಬಿನೆಟ್‌ ಕೊಚ್ಚಿಕೊಂಡು ಹೋಯಿತು. ಇದರ ಜೊತೆಗೆ, ದೊಡ್ಡ ಪ್ರಮಾಣದ ನಗದು ಮತ್ತು ಮರುಬಳಕೆಯ ಚಿನ್ನ ಇದ್ದ ತಿಜೋರಿಯೂ ಕಾಣೆಯಾಗಿದೆ. ಒಟ್ಟು ನಷ್ಟ? 12 ಕೋಟಿ ರೂಪಾಯಿಗಿಂತಲೂ ಹೆಚ್ಚು.

    ದೃಶ್ಯ: ಸ್ಥಳೀಯರು ಕೈಯಿಂದ ಮಣ್ಣು ಅಗೆಯುವುದು, ಲೋಹ ಶೋಧಕಗಳನ್ನು ಬಳಸುವ ದೃಶ್ಯಗಳು

    ಈ ಸುದ್ದಿ ಹರಡಿದ ಕೂಡಲೇ, ಸ್ಥಳೀಯರಲ್ಲಿ ಒಂದು ರೀತಿಯ “ಗೋಲ್ಡ್ ರಶ್” ಶುರುವಾಯಿತು! ಜನರು ಕಾಣೆಯಾದ ಆಭರಣಗಳನ್ನು ಹುಡುಕಲು ಧಾವಿಸಿದರು. ಕೆಲವರು ಕೈಯಿಂದ ಮಣ್ಣು ಅಗೆದರೆ, ಲೋಹ ಶೋಧಕಗಳನ್ನು ತಂದು ಚಿನ್ನ ಹುಡುಕಿದವರೂ ಇದ್ದಾರೆ.. ಈ ದೃಶ್ಯಗಳು ವೈರಲ್ ಆಗಿವೆ, ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಅಂಗಡಿಯವನಿಗೆ ಸಿಕ್ಕಿದ್ದು ಕೇವಲ 1 ಕಿಲೋಗ್ರಾಂ ಆಭರಣಗಳು ಮಾತ್ರ ಆದರೆ, ತಿಜೋರಿ ಇನ್ನೂ ಒಂದು ರಹಸ್ಯವಾಗಿಯೇ ಉಳಿದಿದೆ!

    ದೃಶ್ಯ: ಅಂಗಡಿ ಮಾಲೀಕ ಕ್ಸಿಯಾವೋಯ್ ಮಾತನಾಡುವ ಕ್ಲಿಪ್, ಜನರಿಗೆ ಮನವಿ ಮಾಡುವ ದೃಶ್ಯ

    ಅಂಗಡಿಯ ಮಾಲೀಕ ಕ್ಸಿಯಾವೋಯ್ ಆಭರಣಗಳನ್ನು ಹಿಂತಿರುಗಿಸಿದವರಿಗೆ ಬಹುಮಾನ ಘೋಷಿಸಿದ್ದಾರೆ, ಆದರೆ ಕೆಲವರು ಉದ್ದೇಶಪೂರ್ವಕವಾಗಿ ವಸ್ತುಗಳನ್ನು ಇಟ್ಟುಕೊಂಡರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ, ಇಲ್ಲಿ ಒಂದು ದೊಡ್ಡ ತೊಡಕು ಇದೆ – ಅಂಗಡಿಯ ಸಿಸಿಟಿವಿ ಕಾರ್ಯನಿರ್ವಹಿಸುತ್ತಿರಲಿಲ್ಲ, ಮತ್ತು ಪ್ರವಾಹದ ಸಮಯದಲ್ಲಿ ವಿದ್ಯುತ್ ಕಡಿತಗೊಂಡಿತ್ತು. ಇದರಿಂದ ತನಿಖೆಗೆ ದೊಡ್ಡ ಸವಾಲು ಎದುರಾಗಿದೆ.

    ಪ್ರವಾಹದ ಪ್ರಭಾವ ಒಂದು ಅಂಗಡಿಯ ನಷ್ಟಕ್ಕೆ ಸೀಮಿತವಾಗಿಲ್ಲ. ಶಾಂಕ್ಸಿ ಮತ್ತು ಹೆಬೈ ಪ್ರಾಂತ್ಯಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿವೆ, ಇದರಿಂದ ಆಸ್ತಿಪಾಸ್ತಿಗೆ ಭಾರೀ ಹಾನಿಯಾಗಿದೆ. ಈ ಆಭರಣ ಅಂಗಡಿಯ ಕಥೆ, ತೀವ್ರ ಹವಾಮಾನದಿಂದ ಸ್ಥಳೀಯ ವ್ಯವಹಾರಗಳ ಮೇಲೆ ಆಗಿರುವ ಆರ್ಥಿಕ ಆಘಾತವನ್ನು ಎತ್ತಿ ತೋರಿಸುತ್ತದೆ.

    ಆಭರಣಗಳು ಎಲ್ಲಿಗೆ ಕೊಚ್ಚಿಹೋದವು?

    ತಿಜೋರಿಯ ರಹಸ್ಯ ಯಾವಾಗ ಬಿಚ್ಚಿಕೊಳ್ಳಲಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕಾಯುತ್ತಾ, ಸ್ಥಳೀಯರು ಮತ್ತು ಅಧಿಕಾರಿಗಳು ತಮ್ಮ ಹುಡುಕಾಟವನ್ನು ಮುಂದುವರೆಸಿದ್ದಾರೆ.

  • ಧರ್ಮಸ್ಥಳ: 6ನೇ ಜಾಗದಲ್ಲಿ ಮೃತದೇಹದ ಕುರುಹು ಪತ್ತೆ

    ಧರ್ಮಸ್ಥಳ: 6ನೇ ಜಾಗದಲ್ಲಿ ಮೃತದೇಹದ ಕುರುಹು ಪತ್ತೆ

    ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳ ಸಂಬಂಧ ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣದ ಸಾಕ್ಷಿ ದೂರುದಾರ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ತೋರಿಸಿದ ಆರನೇ ಜಾಗದಲ್ಲಿ ಗುರುವಾರ ಮೃತದೇಹದ ಕುರುಹು ಪತ್ತೆಯಾಗಿದೆ.

    ‘ಮೃತದೇಹದ ಕುರುಹು ಸಿಕ್ಕಿದೆ.‌ಅದು ಗಂಡಸಿನ ಮೃತದೇಹದ ಅವಶೇಷದಂತಿದೆ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.

    ವಿಧಿವಿಜ್ಞಾನ ತಜ್ಞರ ತಂಡವು ಸ್ಥಳದಲ್ಲೇ ಇದ್ದು, ಮೃತದೇಹದ ಅವಶೇಷಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದೆ.

  • ‘ನಿಸಾರ್’ ಉಪಗ್ರಹ ಉಡಾಯಿಸಲಿರುವ ಇಸ್ರೋ: 
ನಾಸಾ-ಇಸ್ರೋ ಜಂಟಿ ಕಾರ್ಯಾಚರಣೆ

    ‘ನಿಸಾರ್’ ಉಪಗ್ರಹ ಉಡಾಯಿಸಲಿರುವ ಇಸ್ರೋ: ನಾಸಾ-ಇಸ್ರೋ ಜಂಟಿ ಕಾರ್ಯಾಚರಣೆ

    ಬೆಂಗಳೂರು: ಇಸ್ರೋ ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಜಂಟಿ ಕಾರ್ಯಾಚರಣೆಯಾದ ಭೂ ವೀಕ್ಷಣಾ ಉಪಗ್ರಹ ‘ನಿಸಾರ್’ (ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್) ಬುಧವಾರ ಉಡಾವಣೆಗೊಳ್ಳಲಿದೆ.

    ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಉಡಾವಣಾ ಪ್ಯಾಡ್‌ನಿಂದ ನಿಸಾರ್ ಸಂಜೆ 5.40 ಕ್ಕೆ GSLV-F-16 ರಾಕೆಟ್ ಮೂಲಕ ಉಡಾವಣೆಗೊಳ್ಳಲಿದೆ. ಇದು ಇಸ್ರೋ ಮತ್ತು ನಾಸಾದ ಮೊದಲ ಜಂಟಿ ಕಾರ್ಯಾಚರಣೆಯಾಗಿದೆ. ಭೂಮಿಯಿಂದ 743 ಕಿ.ಮೀ ದೂರದಲ್ಲಿರುವ ಸೂರ್ಯ-ಸ್ಥಾಯಿ ಕಕ್ಷೆಯಲ್ಲಿ ಪ್ರಯಾಣಿಸುವುದು ಮತ್ತು ಭೂಮಿಯ ಮೇಲ್ಮೈಯಲ್ಲಿನ ಸಣ್ಣ ಬದಲಾವಣೆಗಳನ್ನು ಸಹ ಗಮನಿಸುವುದು ಇದರ ಉದ್ದೇಶವಾಗಿದೆ.

    ಈ ಉಪಗ್ರಹವು 12 ದಿನಗಳ ಮಧ್ಯಂತರದಲ್ಲಿ ಭೂಮಿಯ ಪ್ರತಿಯೊಂದು ಪ್ರದೇಶದ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸುತ್ತದೆ. ಈ ಮಾಹಿತಿಯು ನಾಸಾ ಮತ್ತು ರಾಷ್ಟ್ರೀಯ ದೂರಸ್ಥ ಸಂವೇದಿ ಕೇಂದ್ರದ (NRSC) ವೆಬ್‌ಸೈಟ್‌ಗಳ ಮೂಲಕ ಸಾರ್ವಜನಿಕರಿಗೆ ಉಚಿತವಾಗಿ ಲಭ್ಯವಿರುತ್ತದೆ.

    2,392 ಕೆಜಿ ತೂಕದ NISAR, ನಾಸಾ ಮತ್ತು ಇಸ್ರೋ ಅಭಿವೃದ್ಧಿಪಡಿಸಿದ ವಿಭಿನ್ನ ಆವರ್ತನಗಳಲ್ಲಿ ಕಾರ್ಯನಿರ್ವಹಿಸುವ ಎರಡು ರಾಡಾರ್‌ಗಳನ್ನು ಹೊಂದಿದೆ. ಇದು ನೈಸರ್ಗಿಕ ವಿಕೋಪಗಳನ್ನು ಪತ್ತೆಹಚ್ಚಲು ಮತ್ತು ಅವುಗಳ ಕಾರಣಗಳನ್ನು ನಿರ್ಣಯಿಸಲು ಮಾಹಿತಿಯನ್ನು ಒದಗಿಸುತ್ತದೆ. ವೀಕ್ಷಣಾ ದತ್ತಾಂಶವು ಎರಡು ಮೂರು ದಿನಗಳಲ್ಲಿ ಉಚಿತವಾಗಿ ಲಭ್ಯವಿರುತ್ತದೆ.

    ಇಸ್ರೋದ ಮುಂದಿನ ಯೋಜನೆ:

    ಭೂಮಿಯಿಂದ 400 ಕಿ.ಮೀ ಎತ್ತರದ ಕಕ್ಷೆಗೆ ಬಾಹ್ಯಾಕಾಶ ನೌಕೆಯಲ್ಲಿ ಮೂರು ಪ್ರವಾಸಿಗರನ್ನು ಕರೆದೊಯ್ಯುವ ಗಗನಯಾನ ಕಾರ್ಯಾಚರಣೆಯ ಪ್ರಮುಖ ಉಡಾವಣೆಗಳಲ್ಲಿ ಒಂದು ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಘೋಷಿಸಿದರು. ಮಾನವರಹಿತ ಸಿಬ್ಬಂದಿ ಮಾಡ್ಯೂಲ್ ಅನ್ನು ಕಕ್ಷೆಗೆ ಸೇರಿಸಲಾಗುತ್ತದೆ. ಈ ಕಾರ್ಯಾಚರಣೆಯು ವ್ಯೋಮಿತ್ರ ಎಂಬ ರೋಬೋಟ್ ಅನ್ನು ಸಹ ಹೊತ್ತೊಯ್ಯುತ್ತದೆ. ಇದರ ನಂತರ, ಇನ್ನೂ ಎರಡು ಮಾನವರಹಿತ ಉಡಾವಣೆಗಳನ್ನು ಕೈಗೊಳ್ಳಲಾಗುವುದು ಮತ್ತು ಮಾನವರೊಂದಿಗೆ ಬಾಹ್ಯಾಕಾಶ ಹಾರಾಟವು ಮಾರ್ಚ್ 2027 ರಲ್ಲಿ ನಡೆಯಲಿದೆ.

  • ಯೆಮೆನಿನಲ್ಲಿ ನಿಮಿಷಾ ಪ್ರಿಯಾ ಮರಣದಂಡನೆ ರದ್ದು: ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಚೇರಿ ಸ್ಪಷ್ಟನೆ

    ಯೆಮೆನಿನಲ್ಲಿ ನಿಮಿಷಾ ಪ್ರಿಯಾ ಮರಣದಂಡನೆ ರದ್ದು: ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಚೇರಿ ಸ್ಪಷ್ಟನೆ

    ಯೆಮೆನ್‌ನಲ್ಲಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಚೇರಿ ಸೋಮವಾರ ತಿಳಿಸಿದೆ.

    ಗ್ರಾಂಡ್ ಮುಫ್ತಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಯೆಮೆನ್ ರಾಜಧಾನಿ ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲಿ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದ್ದ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಲಾಯಿತು ಎಂದು ಅದು ತಿಳಿಸಿದೆ.

    ಕೇರಳದ 37 ವರ್ಷದ ನರ್ಸ್ ನಿಮಿಷಾ ಪ್ರಿಯಾ, ಜೂನ್ 2018ರಲ್ಲಿ ಯೆಮೆನ್ ಪ್ರಜೆಯೊಬ್ಬರನ್ನು ಕೊಂದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದರು. ನಂತರ ಈ ವರ್ಷ ಜುಲೈ 16ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿತ್ತು, ಈ ನಿರ್ಧಾರವನ್ನು ಯೆಮೆನ್‌ನ ಸುಪ್ರೀಂ ನ್ಯಾಯಾಂಗ ಮಂಡಳಿಯು ಎತ್ತಿಹಿಡಿದಿತ್ತು. ಈ ನಡುವೆ ಮುಸ್ಲಿಯಾರರ ಸತತ ಪ್ರಯತ್ನದ ಫಲವಾಗಿ ಮರಣದಂಡನೆ ಮುಂದೂಡಲ್ಪಟ್ಟಿತ್ತು.
    ಈ ನಡುವೆ ಷರಿಯಾ ಕಾನೂನು ಅಡಿ ಕ್ಷಮೆ ಸೇರಿದಂತೆ ಇತರೆ ಕಾನೂನು ಹೋರಾಟದಲ್ಲಿ ನಿಮಿಷಾ ಕುಟುಂಬ ತೊಡಗಿಸಿಕೊಂಡಿತ್ತು.

    ಯೆಮೆನ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೆಲ ವರ್ಷಗಳ ಕಾಲ ನಿಮಿಷಾ ಕೆಲಸ ಮಾಡಿದ್ದರು. 2014ರಲ್ಲಿ ಆರ್ಥಿಕ ಕಾರಣಗಳಿಂದಾಗಿ ಆಕೆಯ ಪತಿ ಮತ್ತು ಮಗಳು ಭಾರತಕ್ಕೆ ಹಿಂದಿರುಗಿದ್ದರು. ಬಳಿಕ, ಯೆಮೆನ್‌ನಲ್ಲಿ ನಾಗರಿಕ ಸಂಘರ್ಷ ಭುಗೆಲೆದ್ದಿದ್ದರಿಂದ ವೀಸಾ ಸಿಗದೆ ಭಾರತದಲ್ಲೇ ಉಳಿದರು.
    ಬಳಿಕ, 2015ರಲ್ಲಿ ಯೆಮೆನ್ ನಿವಾಸಿ ತಲಾಲ್ ಅಬ್ಡೊ ಮಹದಿ ಜೊತೆ ಸೇರಿ ಸನಾದಲ್ಲಿ ಖಾಸಗಿ ಕ್ಲಿನಿಕ್ ಆರಂಭಿಸಲು ನಿಮಿಷಾ ಮುಂದಾಗಿದ್ದರು. ಯೆಮೆನ್ ನಿಯಮಗಳ ಪ್ರಕಾರ, ಅಲ್ಲಿನ ಸ್ಥಳೀಯರು ಮಾತ್ರ ಕ್ಲಿನಿಕ್ ಆರಂಭಿಸಲು ಅನುಮತಿ ಇದೆ. ಇದೇ ಸ್ನೇಹದಲ್ಲಿ 2015ರಲ್ಲಿ ನಿಮಿಷಾ ಜೊತೆ ಕೇರಳಕ್ಕೆ ಬಂದಿದ್ದ ತಲಾಲ್, ತಿಂಗಳ ಕಾಲ ಉಳಿದಿದ್ದ. ಬಳಿಕ, ಆಕೆಯ ಮದುವೆ ಫೋಟೊ ಕದ್ದು ಅದನ್ನು ತಿರುಚಿ ತಾವಿಬ್ಬರೂ ಮದುವೆಯಾಗಿರುವುದಾಗಿ ಪ್ರಚಾರ ಮಾಡಿದ್ದ.

    ನಿಮಿಷಾಳ ಕ್ಲಿನಿಕ್ ಆರಂಭವಾಗಿ ಸ್ವಲ್ಪ ಸಮಯದ ನಂತರ ಮಹದಿ ಕ್ಲಿನಿಕ್‌ನ ಮಾಲೀಕತ್ವದ ದಾಖಲೆಗಳನ್ನು ತಿರುಚಿದನು. ನಿಮಿಷಾ ತನ್ನ ಹೆಂಡತಿ ಎಂದು ಹೇಳಿಕೊಂಡಿದ್ದ ಆತ, ಆಕೆಯ ಸಂಪಾದನೆಯ ಹಣ ಲಪಟಾಯಿಸಲು ಶುರು ಮಾಡಿದ್ದನು. ಬಳಿಕ, ಪಾಸ್‌ಪೋರ್ಟ್ ಕಸಿದು ಇಟ್ಟುಕೊಂಡಿದ್ದ ಆತ, ನಿಮಿಷಾ ಮತ್ತು ಅವರ ಕುಟುಂಬಕ್ಕೆ ಕಿರುಕುಳ ನೀಡಿದ್ದ ಎಂದು ನಿಮಿಷಾ ತಾಯಿ ಆರೋಪಿಸಿದ್ದರು.

    “ಆತ ನಿಮಿಷಾಳ ಆಭರಣ, ಸಂಪಾದನೆಯನ್ನು ಕಸಿದು ಇನ್ನಿಲ್ಲದಂತೆ ಹಿಂಸಿಸುತ್ತಿದ್ದ” ಎಂದು ತಾಯಿ ದೂರಿದ್ದಾರೆ.
    ಮಹದಿ ಕಾಟ ಸಹಿಸಲಾಗದೇ ನಿಮಿಷಾ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರು ಮಹದಿಯನ್ನು ವಿಚಾರಿಸುವ ಬದಲು ನಿಮಿಷಾಳನ್ನೇ 6 ದಿನ ಜೈಲಿಗೆ ಹಾಕಿದ್ದರು. ಜೈಲಿನಿಂದ ಹೊರಬಂದ ಬಳಿಕ ನಿಮಿಷಾಗೆ ಹಿಂಸೆ ನೀಡುವುದನ್ನು ಮಹದಿ ಮತ್ತಷ್ಟು ತೀವ್ರಗೊಳಿಸಿದ್ದ. ನಿಮಿಷಾ ಕಾಡಿಬೇಡಿಕೊಂಡರೂ ಪಾಸ್‌ಪೋರ್ಟ್ ನೀಡಿರಲಿಲ್ಲ. ಬಳಿಕ, ಒಂದು ದಿನ ಮೆಡಿಸಿನ್ ಓವರ್‌ಡೋಸ್ ಆಗಿ ಮಹದಿ ಮೃತಪಟ್ಟಿದ್ದು. ಬಳಿಕ, ಹತ್ಯೆ ಆರೋಪ ನಿಮಿಷಾ ಮೇಲೆ ಬಂದು ಶಿಕ್ಷೆಗೆ ಒಳಗಾಗಿದ್ದರು.

  • “ಬಾಹ್ಯಾಕಾಶ ಪ್ರವಾಸ” ಇನ್ನು ಸಾರ್ವಜನಿಕರಿಗೂ ಮುಕ್ತವಾಗಲಿದೆ: ಟಿಕೆಟ್ ದರ ಎಷ್ಟು ಗೊತ್ತೇ?

    “ಬಾಹ್ಯಾಕಾಶ ಪ್ರವಾಸ” ಇನ್ನು ಸಾರ್ವಜನಿಕರಿಗೂ ಮುಕ್ತವಾಗಲಿದೆ: ಟಿಕೆಟ್ ದರ ಎಷ್ಟು ಗೊತ್ತೇ?

    ವಿಜ್ಞಾನಿಗಳಿಗಷ್ಟೇ ಮೀಸಲು ಎಂದು ಪರಿಗಣಿಸಲಾಗಿದ್ದ ಬಾಹ್ಯಾಕಾಶ ಯಾತ್ರೆಯು, ಒಂದೆರಡು ಕೋಟಿ ರೂಪಾಯಿ ಖರ್ಚು ಮಾಡಿದರೆ, ಸಾರ್ವಜನಿಕರಿಗೂ ಎಟಕುವಂತಾಗಿದೆ. ವಿಜ್ಞಾನಿಗಳಲ್ಲದವರೂ ಆಗಸಕ್ಕೆ ಜಿಗಿಯಬಹುದು ಎಂಬ ಕನಸು ಬಾಹ್ಯಾಕಾಶ ಪ್ರವಾಸೋದ್ಯಮ’ದಿಂದ ವಾಸ್ತವರೂಪ ತಳೆದಿದೆ. ಖಾಸಗಿ ಕಂಪನಿಗಳು ಬಾಹ್ಯಾಕಾಶ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಬಾಹ್ಯಾಕಾಶ ಪ್ರವಾಸೋದ್ಯಮವು ಉದ್ದಿಮೆಯ ಸ್ವರೂಪ ಪಡೆದಿದೆ.

    ಭೂಮಿಯ ವಾತಾವರಣವನ್ನು ದಾಟಿ ದಿಗಂತದಲ್ಲಿ ಪ್ರಯಾಣಿಸುವ ಕಲ್ಪನೆ ಯುಗದಿಂದಲೂ ಮಾನವನನ್ನು ಆಕರ್ಷಿಸುತ್ತಲೇ ಇದೆ. ಮನುಷ್ಯನ ಸಾಹಸಗುಣಕ್ಕೆ, ತಂತ್ರಜ್ಞಾನ ಬಲ ನೀಡಿದ್ದರಿಂದ ಅಂತರಿಕ್ಷಕ್ಕೆ ಗಗನಯಾತ್ರಿಗಳು ಹೋಗಿ ಬರುವುದು ಸಾಧ್ಯವಾಗಿದೆ. ವಿಜ್ಞಾನಿಗಳಲ್ಲದವರಿಗೂ ಈ ಅವಕಾಶ ಈಗ ಲಭ್ಯವಾಗುತ್ತಿದೆ. ಇದನ್ನು ಸಾಧ್ಯವಾಗಿಸಿದ್ದು, ‘ಬಾಹ್ಯಾಕಾಶ ಪ್ರವಾಸೋದ್ಯಮ’. ಭೂಮಿಯಿಂದ 100 ಕಿಲೋಮೀಟರ್ ಎತ್ತರದಲ್ಲಿ (ಕಕ್ಷೆ) ಹಾಗೂ ಅದಕ್ಕಿಂತ ಕೆಳಗಿನ (ಉಪಕಕ್ಷೆ) ನೀಲಾಗಸದಲ್ಲಿ ಕೆಲವೇ ನಿಮಿಷ ಇದ್ದು, ಭೂಮಿಯ ಚೆಲುವನ್ನು ಕಣ್ಣುತುಂಬಿಕೊಳ್ಳುವುದು ಹಾಗೂ ತೂಕ ರಹಿತ ದೇಹ ಸ್ಥಿತಿಯನ್ನು ಅನುಭವಿಸುವುದು ಈಗ ಸುಲಭವಾಗಿದೆ.

    ಬಾಹ್ಯಾಕಾಶ ಪ್ರವಾಸೋದ್ಯಮ ಸಾಕಾರಕ್ಕೆ ಅಂತರಿಕ್ಷ ಸಂಸ್ಥೆಗಳ ನಡುವೆ ಪೈಪೋಟಿಯೇ ಏರ್ಪಟ್ಟಿದ್ದು, ಅವು ಹೊಸ ತಂತ್ರಜ್ಞಾನ, ಹಣ ಹಾಗೂ ಮಾನವ ಶ್ರಮವನ್ನು ಹೂಡಿಕೆ ಮಾಡುತ್ತಿವೆ.
    2000 ಇಸವಿಯಲ್ಲಿ ತಮ್ಮ ಕಂಪೆನಿ ಬ್ಲೂ ಒರಿಜಿನ್ ಮೂಲಕ ಅಂತರಿಕ್ಷ ಕ್ಷೇತ್ರವನ್ನು ಪ್ರವೇಶಿಸಿದ ಉದ್ಯಮಿ ಜೆಫ್ ಬಿಜೋಸ್, 2018ರಲ್ಲಿ ಮಾನವ ರಹಿತ ರಾಕೆಟ್ ಉಡ್ಡಾಯನ ಪರೀಕ್ಷೆ ನಡೆಸಿದ್ದರು. 2021ರ ಜುಲೈನಲ್ಲಿ ಸ್ವತಹ ಬಿಜೋಸ್ ತಮ್ಮ ಸಂಸ್ಥೆ ಅಭಿವೃದ್ಧಿಪಡಿಸಿದ “ನ್ಯೂ ಡೆಫೆಲ್ಡ್ ರಾಕೆಟ್” ಮೂಲಕ ಆಗಸಕ್ಕೆ ಸ್ವತಹ ಜಿಗಿದು ಇತಿಹಾಸ ಬರೆದರು. ಭೂಮಿಯಿಂದ ಮೇಲಕ್ಕೆ 100 ಕಿಲೋಮೀಟರ್ ದೂರದಲ್ಲಿ ಗುರುತಿಸಿರುವ ಕಾರ್ಮನ್ ಲೈನ್ ಪ್ರವೇಶಿಸಿದ ಮೊದಲ ಕೋಟ್ಯಾಧೀಶ ಎಂಬುದಾಗಿ ಕರೆಯಿಸಿಕೊಂಡರು. ಅಲ್ಲಿಂದ ಈವರೆಗೆ ಬ್ಲೂ ಒರಿಜಿನ್ ಸಂಸ್ಥೆಯು 11 ಅಂತರಿಕ್ಷಯಾನಗಳನ್ನು ಪೂರೈಸಿದ್ದು, 58 ನಾಗರಿಕರನ್ನ ಬಾಹ್ಯಾಕಾಶದಲ್ಲಿ ಸುತ್ತಾಡಿಸಿದೆ.
    ಅಂತರಿಕ್ಷ ಯಾನದ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಬಿಜೋಸ್ ಅವರು ಅಭಿವೃದ್ಧಿಪಡಿಸಿರುವ ಮರು ಬಳಕೆಯ ರಾಕೆಟ್ ತಂತ್ರಜ್ಞಾನವು ಈ ಉದ್ಯಮದಲ್ಲಿ ಹೊಸ ದಿಕ್ಕು ತೋರಿದ್ದು ಇದರ ಬಳಕೆಯಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ.

    ವಿನ್ಯಾಸ ಹೇಗಿದೆ?
    ಎರಡು ಹಂತಗಳಲ್ಲಿ ರಾಕೆಟ್ ನ ವಿನ್ಯಾಸವಿದೆ. ಯಾತ್ರಿಗಳು ಇರುವ ಕ್ಯಾಪ್ಸುಲ್ ಮೇಲ್ಬಾಗದಲ್ಲಿ ಮತ್ತು ಅವರನ್ನು ಹೊತ್ತಯ್ಯುವ ರಾಕೆಟ್ ಕೆಳಭಾಗದಲ್ಲಿ ಇರುತ್ತದೆ. ನಿಗದಿತ ಕಕ್ಷೆಯನ್ನು ತಲುಪಿದ ಬಳಿಕ ಕ್ಯಾಪ್ಸುಲ್ ರಾಕೆಟ್ ನಿಂದ ಬೇರ್ಪಡುತ್ತದೆ. ಭೂಮಿಯ ಮೇಲ್ಮೈನಲ್ಲಿ, ಉಡ್ದಾಯನ ಮಾಡಿದ ಜಾಗದ ಸಮೀಪದಲ್ಲಿ ರಾಕೆಟ್ ಬಂದು ಲ್ಯಾಂಡ್ ಆಗುತ್ತದೆ. ಕ್ಯಾಪ್ಸುಲ್ ಸ್ವಲ್ಪ ಹೊತ್ತಿನ ಬಳಿಕ ಭೂಮಿಯತ್ತ ವಾಪಸ್ ಆಗುತ್ತದೆ ಭೂಮಿ ಮೇಲ್ಮೈಯನ್ನು ಸಮೀಪಿಸುವ ಹೊತ್ತಿಗೆ ಅಳವಡಿಸಿರುವ ಪ್ಯಾರಾಚೂಟು ತೆರೆದುಕೊಂಡು ಯಾತ್ರಿಕರು ಸುರಕ್ಷಿತವಾಗಿ ಲ್ಯಾಂಡ್ ಆಗುತ್ತಾರೆ.

    ಪ್ರಯಾಣದ ಪರಿಮಿತಿ ಎಷ್ಟು?
    1. ಉಪಕಕ್ಷೆ (Sub Oribit): ಭೂಮಿಯಿಂದ ನೂರು ಕಿಲೋಮೀಟರ್ ಎತ್ತರದಲ್ಲಿರುವ ಕಾರ್ಮನ್ ಲೈನಿನಲ್ಲಿ ಪ್ರಯಾಣಿಕರಿಗೆ ಸುಮಾರು 10 ನಿಮಿಷ ಸೂಕ್ಷ್ಮ ಗುರುತ್ವ ಬಲದ, ಅಂದರೆ ದೇಹ ತೇಲಾಡುವ ಅನುಭವ ಸಿಗುತ್ತದೆ. ಇಲ್ಲಿ ಭೂಮಿಯ ಗೋಳಾಕಾರದ ದರ್ಶನವಾಗುತ್ತದೆ.
    2 ಕಕ್ಷೆ: ಕಾರ್ಮೆಲ್ ಗಿಂತ ಮೇಲಕ್ಕೆ ಇರುವ ಪ್ರದೇಶ ಇದು ದೀರ್ಘಕಾಲದ ಉಳಿದುಕೊಳ್ಳುವಿಕೆ. ಐಎಸ್ಎಸ್ ಹಾಗೂ ಇತರ ಬಾಹ್ಯಾಕಾಶ ನಿಲ್ದಾಣಗಳಿಗೆ ಪ್ರವೇಶಿಸುವ ಹಾಗೂ ಅಲ್ಲಿಂದ ವಾಪಸ್ ಆಗುವ ಪ್ರಕ್ರಿಯೆ ನಡೆಯುವ ವಲಯವಾಗಿದೆ. “ಲೂನಾರ್ ಟೂರಿಸಮ್” ಎಂಬ ಖಾಸಗಿ ಬಾಹ್ಯಾಕಾಶ ಯೋಜನೆ ಅಭಿವೃದ್ಹಿಯ ಹಂತದಲ್ಲಿದೆ. ಸ್ಪೇಸ್ ಎಕ್ಸ್ ಸಂಸ್ಥೆಯ “ಡಿಯರ್ ಮೂನ್” ಹಾಗೂ ಬ್ಲೂ ಒರಿಜಿನ್ ಸಂಸ್ಥೆಯ “ಬ್ಲೂ ಮೂನ್” ಮುಂದಿನ ದಿನಗಳಲ್ಲಿ ಸಾಕಾರಗೊಳ್ಳುವ ನಿರೀಕ್ಷೆ ಇದೆ.

    ಟಿಕೆಟ್ ದರ ಎಷ್ಟು ?
    ಬಹುತೇಕ ಯಾವ ಕಂಪನಿಯೂ ಟಿಕೆಟ್ ದರ ಬಹಿರಂಗಪಡಿಸಿಲ್ಲ. ತಮ್ಮನ್ನು ನೇರವಾಗಿ ಸಂಪರ್ಕಿಸುವಂತೆ ಸೂಚಿಸಿವೆ . ಉಪಕಕ್ಷೆಗೆ ತೆರಳುವ ಪ್ರಯಾಣಿಕರ ಟಿಕೆಟ್ ದರ ಅಂದಾಜು 2.10 ಕೋಟಿಯಿಂದ 3.80 ವರೆಗೆ ಇದೆ ಎಂದು ವರದಿಗಳು ಹೇಳಿವೆ. ಸ್ಪೇಸ್ ಪರ್ಸ್ ಪೆಕ್ಟಿವ್ ಯೋಜನೆಯಲ್ಲಿ ಒಂದು ಟಿಕೆಟಿಗೆ ಅಂದಾಜು ಒಂದು ಕೋಟಿ ದರ ನಿಗದಿಯಾಗುವ ಸಾಧ್ಯತೆ ಇದೆ. ಡೀಪ್ ಬ್ಲೂ ಸಂಸ್ಥೆಯು 1.75 ಕೋಟಿ ದರದ ಟಿಕೆಟ್ ನಿಗದಿಪಡಿಸಿದೆ. ಈಗಾಗಲೇ ಎರಡು ಟಿಕೆಟ್ ಮಾರಾಟವಾಗಿದೆ ಎನ್ನಲಾಗಿದೆ. ಆದರೆ ಕಾರ್ಮನ್ ಲೈನ್ ದಾಟಿದ 400 ಕಿಲೋಮೀಟರ್ ದೂರದಲ್ಲಿರುವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ವೆಚ್ಚ ಅತ್ಯಂತ ದುಬಾರಿ. ಸ್ಪೇಸ್ ಎಕ್ಸ್ ನ “ಡ್ರ್ಯಾಗನ್” ರೀತಿಯ ಕ್ಯಾಪ್ಸೂಲ್ ಗಳಲ್ಲಿ ತೆರಳುವ ಪ್ರತಿಯೊಬ್ಬರೂ 450 ಕೋಟಿ ತೆರಬೇಕಾಗಿದೆ.

    ಭಾರತದ ಹೆಜ್ಜೆ
    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಸದ್ಯ ಗಗನಯಾನದತ್ತ ದೃಷ್ಟಿ ನೆಟ್ಟಿದೆ. ಇದಕ್ಕಾಗಿ ಆಕ್ಸಿಯಂ ಫೋರ್ ಎಂಬ ಅಂತರಿಕ್ಷ ಅಭಿಯಾನದ ಭಾಗವಾಗಿ ಸುಭಂಶು ಶುಕ್ಲ ಅವರನ್ನು ಈಚೆಗಷ್ಟೇ ISS ಗೆ ಕಳುಹಿಸಿತ್ತು. ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳು, ಬಾಹ್ಯಾಕಾಶ ಪ್ರವಾಸೋದ್ಯಮದತ್ತ ದೃಷ್ಟಿ ನೆಟ್ಟಿವೆ. “ಅಗ್ನಿಕುಲ್” “ಸ್ಕೈರೂಟ್” ಹಾಗೂ ಇತರೆ ಕೆಲವು ಸಂಸ್ಥೆಗಳು ವಿವಿಧ ಉಡ್ಡಾಯನ ಸಾಮರ್ಥ್ಯದ ವಾಹನಗಳ ವಿನ್ಯಾಸ ಹಾಗೂ ಅಭಿವೃದ್ಧಿಯಲ್ಲಿ ತೊಡಗಿವೆ. ಅವುಗಳಲ್ಲಿ ಕೆಲವು ಬಾಹ್ಯಾಕಾಶ ಪ್ರವಾಸೋದ್ಯಮವನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ.

    ಆಧಾರ: ಸ್ಪೇಸ್ ಎಕ್ಸ್ ಬ್ಲೂ ಒರಿಜಿನ್, ವರ್ಜಿನ್ ಗೆಲಾಕ್ಟಿಕ್, ಎ.ಎಫ್.ಪಿ., ರಾಯಿಟರ್ಸ್