Blog

  • ಅಮ್ಮನ ಹೆಸರಲ್ಲೇ ವೃದ್ಧಾಶ್ರಮ ಕಟ್ಟಿಸಿದ ಮಗ: 
“ಸನ್ಮಾನ” ಕಥೆ

    ಅಮ್ಮನ ಹೆಸರಲ್ಲೇ ವೃದ್ಧಾಶ್ರಮ ಕಟ್ಟಿಸಿದ ಮಗ: “ಸನ್ಮಾನ” ಕಥೆ

    ಅಂದು ನಾನು ಎಂದಿನಂತೆ ಬೆಳಗಿನ ಜಾವ, ಚಹಾ ಕುಡಿಯುತ್ತಾ ಇದ್ದೆ. ನನ್ನ ಮೊಬೈಲ್ ಒಂದೇ ಸವನೆ ರಿಂಗಣಿಸತೊಡಗಿತು. ಇನ್ನೂ ಅರ್ಧ ಚಹಾ ಉಳಿದಿತ್ತು. ತಕ್ಷಣ ಟೀಪಾಯಿ ಮೇಲೆ ಅದನ್ನು ಇಟ್ಟು ಮೊಬೈಲನ್ನು ಕೈಗೆತ್ತಿಕೊಂಡೆ. ಅದು ಅಮೃತ ಫೌಂಡೇಶನ್ ನಿರಾಶ್ರಿತರ ಕೇಂದ್ರ ಮತ್ತು ವೃದ್ಧಾಶ್ರಮ’ದಿಂದ ಕರೆ ಬಂದಿತ್ತು. ಅದನ್ನು ನೋಡಿದಾಗಲೇ ನನಗೆ ಅಚ್ಚರಿ ಸಂತಸ ಏಕಕಾಲದಲ್ಲಿ ಉಂಟಾದವು. ಕರೆಯನ್ನು ಸ್ವೀಕರಿಸಿ ಕಿವಿಯ ಬಳಿ ತಂದೆ. “ಸರ್, ನೀವು ಬರಬೇಕು; ನಿರಾಶ್ರಿತರ ಕೇಂದ್ರ ಮತ್ತು ವೃದ್ಧಾಶ್ರಮ, ಅದು ಈಗ ಹತ್ತು ವರ್ಷಗಳನ್ನು ಪೂರೈಸಿದೆ; ಸಂಸ್ಥೆಯು ಪ್ರಾರಂಭವಾದಾಗಿನಿAದಲೂ ತಾವು ಇದಕ್ಕೆ ಹಣವನ್ನು ಸಂದಾಯ ಮಾಡುತ್ತಾ ಬಂದಿರುವಿರಿ; ಹಾಗಾಗಿ ದಶಮಾನೋತ್ಸವವನ್ನು ಇಟ್ಟುಕೊಂಡಿದ್ದೇವೆ; ಆದ್ದರಿಂದ ನಿಮಗೆ ಸನ್ಮಾನ ಸಮಾರಂಭದ ವ್ಯವಸ್ಥೆ ಮಾಡಿದ್ದೇವೆ” ಎಂದು ಅಲ್ಲಿಯ ವ್ಯವಸ್ಥಾಪಕರು ಹೇಳಿದರು. ಅವರ ಮಾತು ಕೇಳಿ ನನಗೆ ಇನ್ನಷ್ಟು ಖುಷಿಯಾಯಿತು. ಅಂದರೆ… ನಾನು ಸಂದಾಯ ಮಾಡುತ್ತಿರುವ ಹಣವು ಸಕಾಲಕ್ಕೆ ಸೇರುತ್ತದೆಂದಾಯಿತು. ಈಗ ನಾನು ಹತ್ತು ವರ್ಷಗಳ ಹಿಂದೆ ಸರಿಯಬೇಕಾಯಿತು. ನಾನು ಕಟ್ಟಡ ಕಾರ್ಮಿಕನಾಗಿದ್ದೆ. ಎಂದಿನAತೆ ಅಂದು ಕೆಲಸದಲ್ಲಿ ತೊಡಗಿರುವಾಗ, ಯಾರೋ ಒಬ್ಬರು ಕೈಯಲ್ಲಿಕರಪತ್ರ’ಗಳನ್ನು ಹಿಡಿದುಕೊಂಡು ನಾವು ನಿರ್ಮಿಸುತ್ತಿರುವ ಕಟ್ಟಡದ ಹತ್ತಿರ ಬಂದರು. ಅವರು ಎಲ್ಲರಿಗೂ ನೀಡುವಂತೆ ನನಗೂ ಒಂದು ಕರಪತ್ರವನ್ನು ನೀಡಿದರು. ನಾನು ಅದನ್ನು ಸರಿಯಾಗಿ ಮಡಿಕೆ ಮಾಡಿಕೊಂಡು ಜೇಬಿನಲ್ಲಿಟ್ಟುಕೊಂಡೆ. ಮಧ್ಯಾಹ್ನದ ಊಟದ ಸಮಯದಲ್ಲಿ ಅದನ್ನು ಬಿಡಿಸಿ ಓದಿಕೊಂಡೆ. ಮತ್ತೆ ಅದನ್ನು ಭದ್ರವಾಗಿ ಜೇಬಿಗೆ ಇಳಿಸಿದೆ. ಎಂದಿನAತೆ ನನ್ನ ಕಾಯಕದಲ್ಲಿ ಎಂದುತೊಡಗಿದೆ. ಕೆಲಸ ಬಿಟ್ಟು, ಸಾಯಂಕಾಲದ ಹೊತ್ತಿಗೆ ಮನೆಗೆ ಬಂದು ಮಡದಿಗೆ ಕರಪತ್ರವನ್ನು ತೋರಿಸಿದೆ. ಅವಳು ಅದನ್ನು ಬಿಡಿಸಿ ಓದಿಕೊಂಡಳು. ಅವಳ ಮುಖದ ಮೇಲೆ ಯಾವುದೋ ಉತ್ಸಾಹದ ಕಳೆಯು ಗೋಚರಿಸಿತು. ನಾನು ಅದನ್ನು ಸೂಕ್ಷö್ಮವಾಗಿ ಗಮನಿಸಿದ್ದೆ.

    “ನೋಡಿ, ನಾವು ನಮ್ಮ ಗಳಿಕೆಯ ಒಂದು ಭಾಗವನ್ನು ಯಾಕೆ ವೃದ್ಧಾಶ್ರಮಕ್ಕೆ ನೀಡಬಾರದು? ಇದರಿಂದ ನಾವು ಸಮಾಜಕ್ಕೆ ಒಂದು ಅಳಿಲು ಸೇವೆಯನ್ನು ಸಲ್ಲಿಸಿದಂತಾಗುತ್ತದೆ!”ಎAದು ಹೃದಯ ತುಂಬಿ ಹೇಳಿದಳು”. ಹೌದು, ನನ್ನ ವಿಚಾರವು ಅದೇ ಆಗಿತ್ತು. ಆದಾಯದ ಸ್ವಲ್ಪ ಭಾಗವನ್ನು ವೃದ್ದಾಶ್ರಮಕ್ಕೆ ಮೀಸಲಿಟ್ಟರೆ ….ಮುಂದೊAದು ದಿನ ಅದರಿಂದ ನಮಗೆ ನೆರವಾಗಬಹುದು. ಯಾವುದಕ್ಕೂ ಕಾಲವು ಹೀಗೆಯೇ ಇರುತ್ತದೆಂದು ಹೇಳಲು ಬರುವುದಿಲ್ಲ. ಇದ್ದ ಮಗನು ತನ್ನ ಮಡದಿ ಮಕ್ಕಳೊಂದಿಗೆ ಮಂಗಳೂರಿನ ಕೆಲಸಕ್ಕೆ ಹೊರಟು ಹೋಗಿದ್ದಾನೆ. ಅವನು ಕೂಡ ನನ್ನಂತೆಯೇ ಕಟ್ಟಡ ಕಾರ್ಮಿಕನಾಗಿದ್ದಾನೆ. ಇಲ್ಲಿಯ ಅಲ್ಪ ಆದಾಯವು ಅವನಿಗೆ ಹಿಡಿಸಿರಲಿಲ್ಲ. ಇತ್ತಿತ್ತಲಾಗಿ ಅವನು ಅಲ್ಲಿ ಫ್ಲಾಟ್ ಕೊಂಡು ಮನೆಯನ್ನು ಕಟ್ಟಿಸಿಕೊಂಡಿದ್ದಾನೆ. ಗೃಹಪ್ರವೇಶಕ್ಕೆ ನಾನು, ಮಡಿದಿಯೊಂದಿಗೆ ಅಲ್ಲಿ ಹೋಗಿ ಬಂದಿದ್ದೇನೆ. ಅವರು ಬರುವುದು ಊರಿನ ಜಾತ್ರೆ ಬಂದಾಗಲೆ! ಅವನು ಕೂಡ ನಮಗೆ ಅಲ್ಲಿಯೇ ಬರುವಂತೆ ಸತಾಯಿಸುತ್ತಿದ್ದ. ಆದರೆ ನಮಗೆ ಅಲ್ಲಿ ಹೊರಡಲು ಇಷ್ಟವಿರಲಿಲ್ಲ. ಹುಟ್ಟಿದ ಮನೆ, ಊರು ಬಿಡಲಾಗುತ್ತಿಲ್ಲ.ಅಲ್ಲದೆ ಮಡದಿಯು ಇಲ್ಲಿಯೆ ಟೈಲರಿಂಗ್ಅಂಗಡಿಯನ್ನು ಇಟ್ಟುಕೊಂಡಿದ್ದಾಳೆ. ಎಲ್ಲಿಯೂ ಹೋಗುವಂತಿಲ್ಲ! ಪರಿಚಿತರು ಬಟ್ಟೆಗಳನ್ನು ಹೊಲಿಸಿಕೊಳ್ಳಲು ಬರುತ್ತಿರುತ್ತಾರೆ.

    ಮಡದಿಯು ತನ್ನ ದುಡಿಮೆಯಲ್ಲಿನ ಒಂದು ಪಾಲನ್ನು ನನಗೆ ನೀಡಿದಾಗ ನಾನು, ನನ್ನದನ್ನು ಸೇರಿಸಿ ವೃದ್ಧಾಶ್ರಮಕ್ಕೆ ಸಂದಾಯ ಮಾಡುತ್ತಿದ್ದೆ. ಈ ನಡುವೆ ಮಡದಿಯ ಸಾವು ನನ್ನನ್ನು ದಿಕ್ಕು ತೋಚದಂತೆ ಮಾಡಿತು. ಮಗ, ಸೊಸೆ, ಮೊಮ್ಮಕ್ಕಳು ಅಂತಿಮ ಸಂಸ್ಕಾರಕ್ಕೆ ಅತಿಥಿಗಳಂತೆ ಬಂದು ಹೋದರು. ಮಡದಿಯ ನೆನಪು ಕಣ್ಣೀರು ತರಿಸಿತು… ಟೀಪಾಯಿ ಮೇಲಿದ್ದ ಚಹಾದ ಕಪ್‌ಗೆ ಇರುವೆಗಳು ಮುತ್ತಿಕ್ಕಿದ್ದವು, ಚಹಾದ ಕಪ್ ವೃದ್ಧಾಶ್ರಮದಂತೆ, ಇರುವೆಗಳು ವೃದ್ಧರು, ಅನಾಥರಂತೆ ಗೋಚರಿಸಿದಾಗ ಮತ್ತೆ ನಾನು ವಾಸ್ತವ ಲೋಕಕ್ಕೆ ಬಂದೆ.

    ಈಗ ನನಗೆ ಕಾರ್ಮಿಕರ ನಿವೃತ್ತಿ ವೇತನವು ಬರುತ್ತಿದೆ. ಆದರೆ ವದ್ಧಾಶ್ರಮಕ್ಕೆ ಹಣ ಸಂದಾಯ ಮಾಡುವುದನ್ನು ನಿಲ್ಲಿಸಿಲ್ಲ! ನಾನು ಮುಂದಾಲೋಚನೆಯಿಂದ ಈ ಕ್ರಮ ಕೈಗೊಂಡಿದ್ದು ಸರಿಯಾಗಿಯೇ ಇದೆ, ಎಂದು ಈಗ ಅನಿಸುತ್ತಿದೆ. ಎಲ್ಲವೂ ನಾನು ಅಂದುಕೊಳ್ಳುತ್ತಿರುವಂತೆ ನಡೆಯುತ್ತಾ ಬಂದಿದೆ, ಅತ್ತ ಮಗ ಬಂದುಬಿಡು, ಎಂದು ಪದೇಪದೇ ಫೋನಾಯಿಸುತ್ತಲೇ ಇರುತ್ತಾನೆ. ಈಗ ಅವನಿಗೇ ಬೇಸರವಾಗಿ ನಿಲ್ಲಿಸಿದ್ದಾನೆ. ಹಾಗಂತ ನಾನು ಅವರಿಗೆ ಬೇಸರವಾಗಿಲ್ಲ. ಆದರೆ ಅವರು ತಮ್ಮ ಜೀವನವನ್ನು ಕಟ್ಟಿಕೊಂಡಿದ್ದು ನನಗೆ ಸಂತೋಷ ತಂದಿದೆ. ಕೆಲವೊಂದು ಬಾರಿ ಮನಸ್ಸು ಯೋಚಿಸುತ್ತದೆ… ಅವರೊಂದಿಗೆ ಹೋಗಿ ಕಾಲ ಕಳೆಯಬೇಕೆಂದು! ಮರುಕ್ಷಣ ಮುಂದಿನದನ್ನು ನೆನೆಸಿಕೊಂಡಾಗ ನನಗೆ ತುಂಬಾ ವೇದನೆ ಆಗುತ್ತದೆ. ಇನ್ನೂ ಗಟ್ಟಿಮುಟ್ಟಾಗಿದ್ದೇನೆ. ಮುಂದೆ ಇನ್ನಷ್ಟು ವೃದ್ಧಾಪ್ಯವು ಸಮೀಪಿಸುವ ಪೂರ್ವದಲ್ಲಿಯೇ ವೃದ್ಧಾಶ್ರಮದಲ್ಲಿ ನನ್ನ ಅಂತಿಮ ದಿನಗಳನ್ನು ಕಳೆಯಬೇಕೆಂದಿದ್ದೇನೆ. ಆದರೆ ನಾನು ಆ ವಿಷಯವನ್ನು ಯಾರೊಂದಿಗೂ ಇನ್ನೂ ಹೇಳಿಕೊಂಡಿಲ್ಲ. ನಾನು ಈ ಹಿಂದೆ ತೆಗೆದುಕೊಂಡ ನಿರ್ಧಾರವು ಸರಿಯಾಗಿಯೇ ಇದೆ, ಎಂದೆನಿಸುತ್ತದೆ. ಹೇಗೂ ನಾನು ಅವರಿಗೆ ಹೊಸ ಪರಿಚಯ ಅಲ್ಲ! ಸತತ ಹತ್ತು ವರ್ಷಗಳಿಂದಲೂ ಅವರ ಒಡನಾಟದಲ್ಲಿದ್ದೇನೆ. ನನಗೆ ಅಲ್ಲಿ ಯಾವತ್ತೂ ಸ್ವಾಗತವಿದೆ. ಮುಂದಿನ ದಿನಗಳಲ್ಲಿ ಅವರು ನನ್ನನ್ನು ಚೆನ್ನಾಗಿಯೇ ನಡೆಸಿಕೊಳ್ಳುತ್ತಾರೆಂಬ ಭರವಸೆಯು ನನ್ನಲ್ಲಿದೆ.

    ಆಗಾಗ ಮಗ ಫೋನಾಯಿಸುತ್ತಲೇ ಇರುತ್ತಾನೆ. ಆರೋಗ್ಯದ ಬಗ್ಗೆ ಕೇಳುತ್ತಾನೆ. ನಾನು ಹೇಗೂ ನಿರ್ಧಾರ ಮಾಡಿ ಬಿಟ್ಟಾಗಿದೆ! ‘ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯರು ಹೇಳಿದ್ದು ಹಾಲು ಅನ್ಲ ‘ಎಂಬAತಾಗಿದೆ. ಈ ಹಿಂದೆ ಅದೆಷ್ಟೋ ಆ ಆಶ್ರಮದ ವಿಳಾಸವನ್ನು ಕೇಳಿಕೊಂಡು ಬಂದ ಅನಾಥರಿಗೆ, ಅಸಹಾಯಕರಿಗೆ, ವೃದ್ಧರಿಗೆ ನೀಡಿದ್ದೇನೆ. ಅವರೀಗ ನೆಮ್ಮದಿಯಿಂದಿರಬಹುದು. ಆದರೆ ನಾನೇ ಇದುವರೆಗೂ ಆ ಆಶ್ರಮವನ್ನು ನೋಡಿಯೇ ಇಲ್ಲ! ಈಗ ಅಂತಹ ಸುವರ್ಣಅವಕಾಶವು ಬಂದೊದಗಿದೆ.ಈಗ ವಿಷಯವನ್ನು ಮಗ, ಸೊಸೆಗೆ ಪ್ರಸ್ತಾಪ ಮಾಡಬೇಕೆಂದಿದ್ದೇನೆ. ಮರುಕ್ಷಣ ನನ್ನ ನಿರ್ಧಾರಕ್ಕೆ ಅವರು ಅಡ್ಡಿ ಬಂದರೆ… ನನ್ನ ಕನಸು ನುಚ್ಚುನೂರಾಗುವುದರಲ್ಲಿ ಸಂಶಯವೇ ಇಲ್ಲ!ಎಂದು ಆ ವಿಷಯವನ್ನು ಕೈಬಿಡುತ್ತೇನೆ. ಯಾವುದಕ್ಕೂ ನನ್ನಿಂದಾಗಿ ಅವರಿಗೆ ತೊಂದರೆಯು ಬರಬಾರದು!

    ಹೊರಡುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಮನೆಗೆ ಬೀಗ ಹಾಕಿ ಹೊರಬಂದೆ. ಮನೆಯಿಂದ ಹೊರಡುವಾಗ ಒಂದು ಸಲ ಮನೆಯನ್ನು ಹಿಂದಿರುಗಿ ನೋಡಿದೆ. ಮಡದಿ ಜ್ಞಾಪಕಕ್ಕೆ ಬಂದಳು. ‘ನನ್ನನ್ನು ಕರೆದುಕೊಂಡು ಹೋಗಿರಿ’ ಎನ್ನುತ್ತಿರುವಂತೆ ಭಾಸವಾಯಿತು. ಕಣ್ಣುಗಳ ತುಂಬಾ ದಳದಳ ನೀರು ಇಳಿಯತೊಡಗಿದವು…
    ಬಸ್ ನಿಲ್ದಾಣಕ್ಕೆ ಬಂದಾಗ ಬಸ್ಸು ಹೊರಡುವ ಸಿದ್ಧತೆಯಲ್ಲಿತ್ತು. ತಕ್ಷಣ ಬಸ್ ಏರಿದೆ. ಹುಟ್ಟಿದ ಊರು ಹಿಂದೆ ಸರಿಯತೊಡಗಿದಾಗ… ನಾನು ಏನನ್ನೋ ಕಳೆದುಕೊಂಡAತೆನಿಸಿತು. ನಾನು ಅಲ್ಲಿವರೆಗೂ ನಿರ್ಮಿಸಿದ ಕಟ್ಟಡಗಳು ಮಾತ್ರ ಶುಭಾಶಯಗಳು’ ಹೇಳುತ್ತಿರುವಂತೆ ತೋರಿತು. ಆ ಊರಿಗೆ ಬಂದಿದ್ದಾಯ್ತು. ಆಟೋರಿಕ್ಷಾದವನಿಗೆ ವಿಳಾಸ ತೋರಿಸಿ ಹತ್ತಿದ್ದಾಯ್ತು. ಕೆಲ ನಿಮಿಷಗಳಲ್ಲಿ ಆಟೋರಿಕ್ಷಾ ಆ ಊರಿನ ಹೊರವಲಯಕ್ಕೆ ಬಂದಿತು. ಕಟ್ಟಡದ ಮೇಲ್ಭಾಗದಲ್ಲಿ ನಾಮಫಲಕವು ಎದ್ದು ತೋರಿತು. ಅಮೃತ ಫೌಂಡೇಶನ್ ನೀರಾಶ್ರಿತರ ಕೇಂದ್ರ ಮತ್ತು ವೃದ್ಧಾಶ್ರಮ’. ನಾಮಫಲಕದಿಂದ ನನ್ನ ಬಾಳಿನಲ್ಲಿ ಹೊಸ ಬೆಳಕು ಮೂಡಿಬಂದAತಾಯಿತು. ಸ್ವರ್ಗಕ್ಕೆ ಮೂರೇ ಗೇಣು ಎಂಬAತಾಯಿತು…

    ವೃದ್ಧಾಶ್ರಮದ ಸುತ್ತಲೂ ಸುಂದರವಾದ ಪಾರ್ಕ್, ಅಲ್ಲಲ್ಲಿ ಕಲ್ಲಿನ ಬೆಂಚುಗಳು ಎತ್ತರವಾದ ಅಶೋಕ ವೃಕ್ಷಗಳು ಇನ್ನಿತರ ಮರಗಳು , ಅರಳಿದ ತರತರಸುಮಗಳು ಗೋಚರಿಸಿದವು. ಕ್ಷಣ ಕಾಲ ನನಗೆ ಸ್ವರ್ಗ ಲೋಕಕ್ಕೆ ಬಂದAತೆನಿಸಿತು. ಯಾರದೋ ಗಣ್ಯರ ಭಾಷಣವು ಸ್ಪೀಕರಿನಿಂದ ಕೇಳಿ ಬರುತ್ತಿತ್ತು. ಆಶ್ರಮವನ್ನು ಪ್ರವೇಶಿಸುತ್ತಿದ್ದಂತೆ … ನನ್ನಲ್ಲಿ ಶಕ್ತಿ ,ಧೈರ್ಯ ಮೈಯಲ್ಲಿ ತುಂಬಿದAತಾಯಿತು. ಸಭಾಭವನವು ಕ್ಕಿಕ್ಕಿರಿದಿತ್ತು. ವೇದಿಕೆಯಲ್ಲಿ ಗಣ್ಯರ ಭಾಷಣವು ಮುಂದುವರೆದಿತ್ತು. ನಾನು ಒಂದು ಮೂಲೆಯಲ್ಲಿದ್ದ ಕುರ್ಚಿಯ ಮೇಲೆ ಕುಳಿತುಕೊಂಡೆ. ಅಷ್ಟರಲ್ಲಿ, ಯಾರದೋ ಕರೆ ಬಂದಿತು. ನೋಡಿದಾಗ ಅದು ಮಗನ ಕರೆಯಾಗಿತ್ತು. ಸದ್ದು ಗದ್ದಲದಲ್ಲಿ ಸರಿಯಾಗಿ ಕೇಳಿಸುವುದಿಲ್ಲವೆಂದು ಸಭಾಭವನದಿಂದ ಹೊರಬಂದೆ. ಅವನು ವಾರದ ಹಿಂದೆಯೇ ಕರೆ ಮಾಡಿ ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದ್ದ. ಈಗ ನಾನು ಕರೆಯನ್ನು ಸ್ವೀಕರಿಸಿದೆ.

    “ಅಪ್ಪಾಜಿ, ಮುಂದಿನ ತಿಂಗಳು ಹತ್ತನೇಯ ತಾರೀಖಿಗೆ ‘ಅಮ್ಮನ ದಿನ’ ವಿದೆ. ನಾನು ನಗರದ ಹೊರವಲಯದಲ್ಲಿ ಮೂರು ಎಕರೆ, ಐದು ಗುಂಟೆ ಜಮೀನನ್ನು ಖರೀದಿಸಿದ್ದೇನೆ. ಅಲ್ಲಿ ಅಮ್ಮನ ಹೆಸರಿನಲ್ಲಿ ವೃದ್ಧಾಶ್ರಮವನ್ನು ಪ್ರಾರಂಭಿಸಬೇಕೆAದಿದ್ದೇನೆ. ಇದರಿಂದ ಸಮಾಜಕ್ಕೆ ನಾವು ಅಳಿಲು ಸೇವೆಯನ್ನು ಸಲ್ಲಿಸಿದಂತಾಗುತ್ತದೆ. ಭೂಮಿ ಪೂಜೆಯನ್ನು ಅಂದೆ ಇಟ್ಟುಕೊಳ್ಳಲು ಶಾಸ್ತ್ರಿಗಳು ಹೇಳಿದ್ದಾರೆ. ಇದರಿಂದ ಅಮ್ಮನ ಆತ್ಮಕ್ಕೆ ಶಾಂತಿಯು ಆದಂತಾಗುತ್ತದೆ. ನೀವು ಬೇಗ ಬಂದುಬಿಡಿ. ಉಳಿದ ವಿಷಯಗಳನ್ನು ಮನೆಯಲ್ಲಿ ಯೇ ಚರ್ಚಿಸೋಣ, ನನ್ನ ಗೆಳೆಯನ ಅಪ್ಪಾಜಿಯವರಿಂದ, ನೀವು ತಪ್ಪದೇ ವೃದ್ಧಾಶ್ರಮಕ್ಕೆ ಹಣವನ್ನು ಸಂದಾಯ ಮಾಡುತ್ತಿರುವಿರೆಂದು ತಿಳಿದು ಬಂದಿತ್ತು. ನಾನು ಆಗಿನಿಂದಲೇ ಒಂದು ನಿರ್ಧಾರಕ್ಕೆ ಬಂದಿದ್ದೆ. ಅಮ್ಮನ ಹೆಸರಿನಲ್ಲಿ ವ್ರದ್ಧಾಶ್ರಮವನ್ನು ಪ್ರಾರಂಭಿಸಬೇಕೆAದು….!” ಮಗನ ಮಾತು ಕೇಳಿ ಇದು ಕನಸೋ, ನನಸೋ ಒಂದೂ ತಿಳಿಯದಂತಾಯಿತು. ಅವನ ಮೇಲೆ ಅಪಾರ ಗೌರವ, ಹೆಮ್ಮೆ ಮೂಡ ತೊಡಗಿತು

    ನಾನು ವ್ರದ್ದಾಶ್ರಮವನ್ನು ಸೇರಲು ಹೊರಟರೆ… ಅವನು ಅಂತಹ ವ್ರದ್ದಾಶ್ರಮವನ್ನೇ ನಿರ್ಮಿಸಲು ಹೊರಟಿರುವುದು ನನ್ನ ಸಂತಸಕ್ಕೆ ಪಾರವೇ ಇಲ್ಲದಂತಾಯಿತು. ಯಾವುದಕ್ಕೂ ನನ್ನ ನಿರ್ಧಾರವನ್ನು ತಿಳಿಸದೆ ಒಳ್ಳೆಯದೇ ಆಯಿತು. ಇದು ಎಲ್ಲರಿಗೂ ಸಾಧ್ಯವಾಗದ ಕೆಲಸ! ಅವನ ನಿಸ್ವಾರ್ಥ ಸೇವೆಯ ಮುಂದೆ ನಾನು ಕುಬ್ಜನಾಗಿಬಿಟ್ಟೆ. ಅವನು ನೆರವೇರಿಸುವ ಕಾರ್ಯದಲ್ಲಿ ನಾನು ಭಾಗಿಯಾಗಬೇಕು. ಆಶ್ರಮದಿಂದ ಸಮಾಜದಲ್ಲಿಯ ದೀನದಲಿತರಿಗೆ, ದುರ್ಬಲರಿಗೆ, ವೃದ್ಧರಿಗೆ, ಅಸಹಾಯಕರಿಗೆ, ಅನಾಥರಿಗೆ ನೆಮ್ಮದಿಯ ಜೀವನವನ್ನು ಕಟ್ಟಿ ಕೊಟ್ಟಂತಾಗುತ್ತದೆ. ಮಗನನ್ನು ಹೇಗೆ ಹೊಗಳಿಕೊಳ್ಳಬೇಕೆಂದು ನನಗೆ ಒಂದೂ ತಿಳಿಯಲಿಲ್ಲ. ಆ ಒಂದು ಕರಪತ್ರವು ಮಗನಿಂದ ದೊಡ್ಡ ಸಾಧನೆಯನ್ನೇ ಮಾಡಿಸಿಬಿಟ್ಟಿತು. ಕೂಡಲೇ ನಾನು ಅಲ್ಲಿಂದ ಹಿಂದಿರುಗಿದೆ. ಅಷ್ಟರಲ್ಲಿ… ಧ್ವನಿವರ್ಧಕದಲ್ಲಿ ನನ್ನ ಹೆಸರು ಕೇಳಿ ಬಂದಿತು. ಈಗ ನಾನು ಸನ್ಮಾನಿಸಿಕೊಳ್ಳಲು ಬಯಸಲಿಲ್ಲ! ಮಗನ ಮಾತುಗಳಿಂದಲೇ ನನಗೆ ಹೆಚ್ಚಿನ ಸನ್ಮಾನವಾಗಿ ಬಿಟ್ಟಿತ್ತು. ಆ ವೃದ್ಧಾಶ್ರಮವನ್ನು ಒಂದು ಬಾರಿ ಕಣ್ಣುತುಂಬಾ ನೋಡಿದೆ. `ಅಮೃತ್ ಫೌಂಡೇಶನ್…’ ಎನ್ನುವ ಹೆಸರಿನಲ್ಲಿ ನನ್ನ ಮಡದಿಯ ಹೆಸರು ಗೋಚರಿಸಿತು.

  • ‘ನಿಸಾರ್’ ಉಪಗ್ರಹ ಉಡಾಯಿಸಲಿರುವ ಇಸ್ರೋ: 
ನಾಸಾ-ಇಸ್ರೋ ಜಂಟಿ ಕಾರ್ಯಾಚರಣೆ

    ‘ನಿಸಾರ್’ ಉಪಗ್ರಹ ಉಡಾಯಿಸಲಿರುವ ಇಸ್ರೋ: ನಾಸಾ-ಇಸ್ರೋ ಜಂಟಿ ಕಾರ್ಯಾಚರಣೆ

    ಬೆಂಗಳೂರು: ಇಸ್ರೋ ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಜಂಟಿ ಕಾರ್ಯಾಚರಣೆಯಾದ ಭೂ ವೀಕ್ಷಣಾ ಉಪಗ್ರಹ ‘ನಿಸಾರ್’ (ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್) ಬುಧವಾರ ಉಡಾವಣೆಗೊಳ್ಳಲಿದೆ.

    ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಉಡಾವಣಾ ಪ್ಯಾಡ್‌ನಿಂದ ನಿಸಾರ್ ಸಂಜೆ 5.40 ಕ್ಕೆ GSLV-F-16 ರಾಕೆಟ್ ಮೂಲಕ ಉಡಾವಣೆಗೊಳ್ಳಲಿದೆ. ಇದು ಇಸ್ರೋ ಮತ್ತು ನಾಸಾದ ಮೊದಲ ಜಂಟಿ ಕಾರ್ಯಾಚರಣೆಯಾಗಿದೆ. ಭೂಮಿಯಿಂದ 743 ಕಿ.ಮೀ ದೂರದಲ್ಲಿರುವ ಸೂರ್ಯ-ಸ್ಥಾಯಿ ಕಕ್ಷೆಯಲ್ಲಿ ಪ್ರಯಾಣಿಸುವುದು ಮತ್ತು ಭೂಮಿಯ ಮೇಲ್ಮೈಯಲ್ಲಿನ ಸಣ್ಣ ಬದಲಾವಣೆಗಳನ್ನು ಸಹ ಗಮನಿಸುವುದು ಇದರ ಉದ್ದೇಶವಾಗಿದೆ.

    ಈ ಉಪಗ್ರಹವು 12 ದಿನಗಳ ಮಧ್ಯಂತರದಲ್ಲಿ ಭೂಮಿಯ ಪ್ರತಿಯೊಂದು ಪ್ರದೇಶದ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸುತ್ತದೆ. ಈ ಮಾಹಿತಿಯು ನಾಸಾ ಮತ್ತು ರಾಷ್ಟ್ರೀಯ ದೂರಸ್ಥ ಸಂವೇದಿ ಕೇಂದ್ರದ (NRSC) ವೆಬ್‌ಸೈಟ್‌ಗಳ ಮೂಲಕ ಸಾರ್ವಜನಿಕರಿಗೆ ಉಚಿತವಾಗಿ ಲಭ್ಯವಿರುತ್ತದೆ.

    2,392 ಕೆಜಿ ತೂಕದ NISAR, ನಾಸಾ ಮತ್ತು ಇಸ್ರೋ ಅಭಿವೃದ್ಧಿಪಡಿಸಿದ ವಿಭಿನ್ನ ಆವರ್ತನಗಳಲ್ಲಿ ಕಾರ್ಯನಿರ್ವಹಿಸುವ ಎರಡು ರಾಡಾರ್‌ಗಳನ್ನು ಹೊಂದಿದೆ. ಇದು ನೈಸರ್ಗಿಕ ವಿಕೋಪಗಳನ್ನು ಪತ್ತೆಹಚ್ಚಲು ಮತ್ತು ಅವುಗಳ ಕಾರಣಗಳನ್ನು ನಿರ್ಣಯಿಸಲು ಮಾಹಿತಿಯನ್ನು ಒದಗಿಸುತ್ತದೆ. ವೀಕ್ಷಣಾ ದತ್ತಾಂಶವು ಎರಡು ಮೂರು ದಿನಗಳಲ್ಲಿ ಉಚಿತವಾಗಿ ಲಭ್ಯವಿರುತ್ತದೆ.

    ಇಸ್ರೋದ ಮುಂದಿನ ಯೋಜನೆ:

    ಭೂಮಿಯಿಂದ 400 ಕಿ.ಮೀ ಎತ್ತರದ ಕಕ್ಷೆಗೆ ಬಾಹ್ಯಾಕಾಶ ನೌಕೆಯಲ್ಲಿ ಮೂರು ಪ್ರವಾಸಿಗರನ್ನು ಕರೆದೊಯ್ಯುವ ಗಗನಯಾನ ಕಾರ್ಯಾಚರಣೆಯ ಪ್ರಮುಖ ಉಡಾವಣೆಗಳಲ್ಲಿ ಒಂದು ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಘೋಷಿಸಿದರು. ಮಾನವರಹಿತ ಸಿಬ್ಬಂದಿ ಮಾಡ್ಯೂಲ್ ಅನ್ನು ಕಕ್ಷೆಗೆ ಸೇರಿಸಲಾಗುತ್ತದೆ. ಈ ಕಾರ್ಯಾಚರಣೆಯು ವ್ಯೋಮಿತ್ರ ಎಂಬ ರೋಬೋಟ್ ಅನ್ನು ಸಹ ಹೊತ್ತೊಯ್ಯುತ್ತದೆ. ಇದರ ನಂತರ, ಇನ್ನೂ ಎರಡು ಮಾನವರಹಿತ ಉಡಾವಣೆಗಳನ್ನು ಕೈಗೊಳ್ಳಲಾಗುವುದು ಮತ್ತು ಮಾನವರೊಂದಿಗೆ ಬಾಹ್ಯಾಕಾಶ ಹಾರಾಟವು ಮಾರ್ಚ್ 2027 ರಲ್ಲಿ ನಡೆಯಲಿದೆ.

  • ಮಿಸೇಲ್ ಉಡಾಯಿಸುವ ಇರಾನಿ ಮಹಿಳೆಯರು: 
ಇವರ ಪರ್ಸೆಂಟೇಜ್ ಎಷ್ಟಿದೆ ಗೊತ್ತೇ?

    ಮಿಸೇಲ್ ಉಡಾಯಿಸುವ ಇರಾನಿ ಮಹಿಳೆಯರು: ಇವರ ಪರ್ಸೆಂಟೇಜ್ ಎಷ್ಟಿದೆ ಗೊತ್ತೇ?

    ಮಬ್ಬು ಬೆಳಕಿನ ನಿಯಂತ್ರಣ ಕೊಠಡಿಗಳಲ್ಲಿ ಕುಳಿತಿದ್ದು, ದಾಳಿಯ ಚಲನ ವಲನಗಳನ್ನು ವಿಶ್ಲೇಷಿಸುತ್ತಾ, ನಿಯಂತ್ರಿಸುತ್ತಾ, ಉಡಾವಣೆ ಪ್ರಕ್ರಿಯೆಗಳನ್ನು ಪರಿಶೀಲಿಸುತ್ತಾ, ಅತ್ಯಂತ ಶಿಸ್ತು ಮತ್ತು ನಿಖರತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದದ್ದು ಹಿಜಾಬ್ ಧರಿಸಿದ ಇರಾನಿನ ಮಹಿಳೆಯರು.

    ಖತಮ್ ಅಲ್-ಅಂಬಿಯಾ ಏರೋಸ್ಪೇಸ್ ಸಂಸ್ಥೆಗಳಲ್ಲಿ ಇರಾನಿನ ಮಹಿಳೆಯರು ಡೇಟಾ ವಿಶ್ಲೇಷಕರು, ಸಿಸ್ಟಂ ಪ್ರೋಗ್ರಾಮರ್‌ಗಳು ಮತ್ತು ನಿಯಂತ್ರಣ ಕೊಠಡಿಗಳ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಸಾಫ್ಟ್ವೇರ್ ವ್ಯವಸ್ಥೆಗಳನ್ನು, ಉಪಗ್ರಹ ನಕ್ಷೆಗಳನ್ನು ಮತ್ತು ಉಡಾವಣೆ ಸಮನ್ವಯಗಳನ್ನು ನಿಖರವಾಗಿ ನಿರ್ವಹಿಸುತ್ತಿದ್ದಾರೆ. ಅವರು ಇರಾನಿನ ರಕ್ಷಣಾ ರಚನೆಯೊಳಗೆ ಸಕ್ರಿಯ ಮತ್ತು ಅನಿವಾರ್ಯ ಪಾತ್ರದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಜಗತ್ತಿನ ಹಲವು ಭಾಗಗಳಲ್ಲಿ ಮಹಿಳೆಯರ ಸಾಧನೆಗಳನ್ನು ಸಾರ್ವಜನಿಕವಾಗಿ ಪ್ರದಶಿಸುವುದು, ಪ್ರಶಂಸೆ ಪಡೆಯುವುದು ಮತ್ತು ನಾಯಕತ್ವ ವಹಿಸುವ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಕ್ಷಿಪಣಿ ಉಡಾವಣಾ ಕನ್‌ಸೋಲ್ ಹಿಂದೆ ಹಿಜಾಬ್ ಧರಿಸಿದ ಮಹಿಳೆ ಆದುನಿಕತೆಗೆ ತಕ್ಕವಳಾಗಿ ಕಾಣಿಸದಿರಬಹುದು. ಆದರೆ ಅವಳು ಡೇಟಾ ಮೇಲೆ ಹಿಡಿತವಿಟ್ಟಿದ್ದಾಳೆ, ದೇಶದ ರಕ್ಷಣೆಯಲ್ಲಿ ಕೆಲಸಮಾಡುತ್ತಿದ್ದಾಳೆ ಮತ್ತು ರಾಷ್ಟ್ರಸೇವೆಯ ಕಾರ್ಯನಿರ್ವಹಿಸುತ್ತಿದ್ದಾಳೆ. ಇದು ಫ್ಯಾಶನ್ ಅಥವಾ ಸ್ವಾರ್ಥಕ್ಕಾಗಿ ಅಲ್ಲ. ಇದು ನಂಬಿಕೆ, ಶಿಕ್ಷಣ ಮತ್ತು ಕೌಶಲ್ಯದ ಮೇಲೆ ಆಧಾರಿತವಾದ ನಿಜವಾದ ಶಕ್ತಿ ಮಹಿಳಾ ಶಕ್ತಿಯಾಗಿದೆ.

    1979ರ ಕ್ರಾಂತಿಯ ಬಳಿಕ ಇರಾನ್‌ನಲ್ಲಿ ಮಹಿಳೆಯರ ಶಿಕ್ಷಣ, ವಿಶೇಷವಾಗಿ ಮೆಡಿಕಲ್ ಮತ್ತು ಎಂಜಿನಿಯರಿAಗ್ ಕ್ಷೇತ್ರಗಳಲ್ಲಿ, ಉನ್ನತ ಮಟ್ಟದಲ್ಲಿ ಉತ್ತೀರ್ಣರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಇಂದು ಯುನೆಸ್ಕೋ ಮತ್ತು ವಿಶ್ವ ಬ್ಯಾಂಕ್ ಮಾಹಿತಿಯ ಪ್ರಕಾರ, ಇರಾನ್‌ನಲ್ಲಿನ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿAಗ್, ಗಣಿತ) ಪದವೀಧರರಲ್ಲಿ 70%ಕ್ಕಿಂತ ಹೆಚ್ಚು ಮಂದಿ ಮಹಿಳೆಯರಿದ್ದಾರೆ. ಇಂದು ಇರಾನಿನ ನಿಲುವು ಮಹಿಳೆಯರೂ ರಾಷ್ಟ್ರದ ಹೆಗ್ಗಳಿಕೆಯ ಗುರುತು ಹಾಗೂ ಏಳಿಗೆಯಲ್ಲಿ ರಾಷ್ಟ್ರದ ಪರವಾಗಿ ಪ್ರತಿರೋಧ ಚಲನೆಯನ್ನು ರೂಪಿಸುವ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಪರಿಗಣಿಸಿದೆ.

    ಈ ದೃಷ್ಟಿಕೋನವೇ ಮಹಿಳೆಯರಿಗೆ ರಕ್ಷಣಾ ಕ್ಷೇತ್ರದಂತಹ ಅತ್ಯಂತ ವಿಶೇಷ ಹಾಗೂ ಸಂವೇದನಾಶೀಲ ವಿಭಾಗಗಳಲ್ಲಿ ಭಾಗವಹಿಸಲು ಅವಕಾಶ ನೀಡಿದೆ. ಪ್ರಮುಖವಾಗಿ ಇವರ ಪಾತ್ರಗಳನ್ನು ಪರಂಪರಾಗತವಾಗಿ ಸೌಮ್ಯ ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳಿಸಲಾಗಿಲ್ಲ. ಬದಲಾಗಿ ಯುದ್ಧತಂತ್ರ ಹಾಗೂ ಉನ್ನತ ತಾಂತ್ರಿಕ ಕಾರ್ಯಾಚರಣೆಗಳಲ್ಲೂ ಅವರು ಸಕ್ರಿಯವಾಗಿ ಭಾಗವಹಿಸಲು ಅವಕಾಶ ನೀಡಲಾಗುತ್ತಿದೆ.
    ಇಂದಿನ ಕಾಲದಲ್ಲಿ ಜಾಗತಿಕ ಮಾಧ್ಯಮಗಳು ಮುಸ್ಲಿಂ ಮಹಿಳೆಯರನ್ನು ಬಹುತೇಕ ಸಂದರ್ಭಗಳಲ್ಲಿ ಮೌನವಾಗಿರುವವರು ಅಥವಾ ದಬ್ಬಾಳಿಕೆಗೆ ಒಳಪಡುವವರು ಎಂದು ಚಿತ್ರಿಸಲಾಗುತ್ತದೆ. ಆದರೆ ಇರಾನಿನ ಈ ಒಂದು ಬೆಳವಣಿಗೆಯು ಬೇರೊಂದು ಪರ್ಯಾಯ ಚಿತ್ರಣವನ್ನು ನಮ್ಮ ಮುಂದಿಡುತ್ತದೆ.

    ಇದು ಧರ್ಮದ ಮೇರೆಯನ್ನು ನಿರಾಕರಿಸುವುದಲ್ಲ ಬದಲಾಗಿ ಅದನ್ನೇ ವೇದಿಕೆಯಾಗಿ ಬಳಸುತ್ತಿದೆ. ಕ್ಷಿಪಣಿ ಕಮಾಂಡ್ ಕೊಠಡಿಗಳಲ್ಲಿ ಈ ಮಹಿಳೆಯರ ಉಪಸ್ಥಿತಿಯು ಧಾಮಿಕತೆಯ ವಿರುದ್ಧವಲ್ಲ ಅದು ನಂಬಿಕೆಯಿAದಲೇ ಹುಟ್ಟಿಕೊಂಡಿರುವುದಾಗಿದೆ.

    ಇಸ್ರೇಲ್‌ನ ಬೆಂಜಮಿನ್ ನೆತನ್ಯಾಹೂ ಸೇರಿದಂತೆ ಪಶ್ಚಿಮಾತ್ಯ ನಾಯಕರು ಇರಾನಿನ ಸೇನಾ ಜಾಲವನ್ನು ನಾಶಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ಶಕ್ತಿ ಮತ್ತು ಸ್ಥೈರ್ಯದ ಹಿಂದೆ ಸಮಾನ ಶಿಕ್ಷಣ ಹಾಗೂ ಇರಾನ್ ಹೊಂದಿರುವ ನಿಷ್ಠೆ ಎದ್ದು ಕಾಣುತ್ತಿದೆ. ಈ ನಿಷ್ಠೆಯಲ್ಲಿ ಈಗ ಅಲ್ಲಿಯ ಮಹಿಳೆಯರೂ ಸೇರಿಕೊಂಡಿರುವುದು ಮಹತ್ತರ ಪಾತ್ರವನ್ನು ಹೊಂದಿದೆ.

    ಕ್ಷಿಪಣಿ ವ್ಯವಸ್ಥೆಗಳನ್ನು ನಿರ್ವಹಿಸುತ್ತಿರುವ ಇರಾನಿನ ಮಹಿಳೆಯರ ಚಿತ್ರಣ ಬಹುತೇಕ ಜನರಿಗೆ ಅಚ್ಚರಿಯಾಗಿ ಕಾಣಬಹುದು. ವಿಶೇಷವಾಗಿ ಮುಸ್ಲಿಂ ಮಹಿಳೆಯರನ್ನು ನಿಷ್ಕ್ರಿಯರು, ಮೌನವಾಗಿರುವವರು ಅಥವಾ ಕೇವಲ ಗೃಹ ಬಂಧನದಕ್ಕೆ ಸೀಮಿತವಾಗಿರುವವರು ಎಂದು ತಪ್ಪಾಗಿ ಪರಿಗಣಿಸಲಾಗುತ್ತಿರುವ ಜಾಗತಿಕ ಮಟ್ಟದವರಿಗೆ…!
    ಅದರ ರಾಜಕೀಯ ಜಟಿಲತೆಗಳೇನೇ ಇರಲಿ, ಇರಾನ್‌ನ ನಿಲುವು ನಮಗೆ ಒಂದು ಸ್ಪಷ್ಟ ಸಂದೇಶ ನೀಡುತ್ತದೆ: ಧರ್ಮಾಧಾರಿತ ಸಮಾಜಗಳು ಮಹಿಳಾ ನಾಯಕತ್ವಕ್ಕೆ ಸಹಜವಾಗಿ ವಿರೋಧಿಯಾಗಿಲ್ಲ. ಜಗತ್ತಿನ ಅನೇಕ ಮುಸ್ಲಿಂ ದೇಶಗಳು ಈಗಾಗಲೇ ಈ ದಾರಿಗೆ ಬೇಕಾದ ಮಾನವ ಸಂಪತ್ತು, ಶಿಕ್ಷಣ ವ್ಯವಸ್ಥೆ ಮತ್ತು ನೈತಿಕತೆ ಹೊಂದಿವೆ. ಇದೀಗ ಅಗತ್ಯವಿರುವುದು, ಮಹಿಳೆಯರನ್ನು ಕೇವಲ ನೈತಿಕ ಲಾಭಪಡೆಯುವವರಂತೆ ನೋಡದೆ ಅವರನ್ನು ಪ್ರಗತಿಯೆಡೆಗೆ ಮುನ್ನಡೆಸುವ ಧೈರ್ಯವನ್ನು ತುಂಬುವುದು ಕಾಲದ ಬೇಡಿಕೆಯಾಗಿದೆ.
    ಇರಾನಿನ ಮಾದರಿಯನ್ನೇ ಅನುಸರಿಸಬೇಕೆಂದಿಲ್ಲ. ಆದರೆ ಅದು ನಮ್ಮ ಕಲ್ಪನೆಗೆ ಆಹ್ವಾನ ನೀಡುತ್ತದೆ. ಇದು ಮುಸ್ಲಿಂ ಜಗತ್ತಿನಾದ್ಯಂತ ಇರುವ ಮಹಿಳೆಯರ ಅಪಾರ ಸಾಮರ್ಥ್ಯಗಳನ್ನು ಗುರುತಿಸಿ, ಅವರ ಬೆಳವಣಿಗೆಗೆ ತಡೆ ಹಾಕುವ ಅಂಶಗಳನ್ನು ತೊಡೆದು ಹಾಕಬೇಕಾಗಿದೆ.

    ಇರಾನ್-ಇಸ್ರೇಲ್ ಸಂಘರ್ಷ ಮುಂದುವರಿಯುತ್ತಿರುವಂತೆ, ಕ್ಷಿಪಣಿ ಉಡಾವಣೆ ಪರದೆಯ ಹಿಂದೆ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಚಿತ್ರಗಳು ಪರ್ಯಾಯ ಮಾಧ್ಯಮಗಳಲ್ಲಿ ನಿಧಾನವಾಗಿ ಹರಿದಾಡುತ್ತಿವೆ. ಇದರಿಂದಾಗಿ ಜಗತ್ತು ಈಗ ಒಂದು ಹೊಸ ದೃಷ್ಟಿಕೋನವನ್ನು ಅಂಗೀಕರಿಸಬೇಕಾದ ಅಗತ್ಯತೆ ಎದು ರಾಗಿದೆ.

  • ಯೆಮೆನಿನಲ್ಲಿ ನಿಮಿಷಾ ಪ್ರಿಯಾ ಮರಣದಂಡನೆ ರದ್ದು: ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಚೇರಿ ಸ್ಪಷ್ಟನೆ

    ಯೆಮೆನಿನಲ್ಲಿ ನಿಮಿಷಾ ಪ್ರಿಯಾ ಮರಣದಂಡನೆ ರದ್ದು: ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಚೇರಿ ಸ್ಪಷ್ಟನೆ

    ಯೆಮೆನ್‌ನಲ್ಲಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಚೇರಿ ಸೋಮವಾರ ತಿಳಿಸಿದೆ.

    ಗ್ರಾಂಡ್ ಮುಫ್ತಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಯೆಮೆನ್ ರಾಜಧಾನಿ ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲಿ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದ್ದ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಲಾಯಿತು ಎಂದು ಅದು ತಿಳಿಸಿದೆ.

    ಕೇರಳದ 37 ವರ್ಷದ ನರ್ಸ್ ನಿಮಿಷಾ ಪ್ರಿಯಾ, ಜೂನ್ 2018ರಲ್ಲಿ ಯೆಮೆನ್ ಪ್ರಜೆಯೊಬ್ಬರನ್ನು ಕೊಂದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದರು. ನಂತರ ಈ ವರ್ಷ ಜುಲೈ 16ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿತ್ತು, ಈ ನಿರ್ಧಾರವನ್ನು ಯೆಮೆನ್‌ನ ಸುಪ್ರೀಂ ನ್ಯಾಯಾಂಗ ಮಂಡಳಿಯು ಎತ್ತಿಹಿಡಿದಿತ್ತು. ಈ ನಡುವೆ ಮುಸ್ಲಿಯಾರರ ಸತತ ಪ್ರಯತ್ನದ ಫಲವಾಗಿ ಮರಣದಂಡನೆ ಮುಂದೂಡಲ್ಪಟ್ಟಿತ್ತು.
    ಈ ನಡುವೆ ಷರಿಯಾ ಕಾನೂನು ಅಡಿ ಕ್ಷಮೆ ಸೇರಿದಂತೆ ಇತರೆ ಕಾನೂನು ಹೋರಾಟದಲ್ಲಿ ನಿಮಿಷಾ ಕುಟುಂಬ ತೊಡಗಿಸಿಕೊಂಡಿತ್ತು.

    ಯೆಮೆನ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೆಲ ವರ್ಷಗಳ ಕಾಲ ನಿಮಿಷಾ ಕೆಲಸ ಮಾಡಿದ್ದರು. 2014ರಲ್ಲಿ ಆರ್ಥಿಕ ಕಾರಣಗಳಿಂದಾಗಿ ಆಕೆಯ ಪತಿ ಮತ್ತು ಮಗಳು ಭಾರತಕ್ಕೆ ಹಿಂದಿರುಗಿದ್ದರು. ಬಳಿಕ, ಯೆಮೆನ್‌ನಲ್ಲಿ ನಾಗರಿಕ ಸಂಘರ್ಷ ಭುಗೆಲೆದ್ದಿದ್ದರಿಂದ ವೀಸಾ ಸಿಗದೆ ಭಾರತದಲ್ಲೇ ಉಳಿದರು.
    ಬಳಿಕ, 2015ರಲ್ಲಿ ಯೆಮೆನ್ ನಿವಾಸಿ ತಲಾಲ್ ಅಬ್ಡೊ ಮಹದಿ ಜೊತೆ ಸೇರಿ ಸನಾದಲ್ಲಿ ಖಾಸಗಿ ಕ್ಲಿನಿಕ್ ಆರಂಭಿಸಲು ನಿಮಿಷಾ ಮುಂದಾಗಿದ್ದರು. ಯೆಮೆನ್ ನಿಯಮಗಳ ಪ್ರಕಾರ, ಅಲ್ಲಿನ ಸ್ಥಳೀಯರು ಮಾತ್ರ ಕ್ಲಿನಿಕ್ ಆರಂಭಿಸಲು ಅನುಮತಿ ಇದೆ. ಇದೇ ಸ್ನೇಹದಲ್ಲಿ 2015ರಲ್ಲಿ ನಿಮಿಷಾ ಜೊತೆ ಕೇರಳಕ್ಕೆ ಬಂದಿದ್ದ ತಲಾಲ್, ತಿಂಗಳ ಕಾಲ ಉಳಿದಿದ್ದ. ಬಳಿಕ, ಆಕೆಯ ಮದುವೆ ಫೋಟೊ ಕದ್ದು ಅದನ್ನು ತಿರುಚಿ ತಾವಿಬ್ಬರೂ ಮದುವೆಯಾಗಿರುವುದಾಗಿ ಪ್ರಚಾರ ಮಾಡಿದ್ದ.

    ನಿಮಿಷಾಳ ಕ್ಲಿನಿಕ್ ಆರಂಭವಾಗಿ ಸ್ವಲ್ಪ ಸಮಯದ ನಂತರ ಮಹದಿ ಕ್ಲಿನಿಕ್‌ನ ಮಾಲೀಕತ್ವದ ದಾಖಲೆಗಳನ್ನು ತಿರುಚಿದನು. ನಿಮಿಷಾ ತನ್ನ ಹೆಂಡತಿ ಎಂದು ಹೇಳಿಕೊಂಡಿದ್ದ ಆತ, ಆಕೆಯ ಸಂಪಾದನೆಯ ಹಣ ಲಪಟಾಯಿಸಲು ಶುರು ಮಾಡಿದ್ದನು. ಬಳಿಕ, ಪಾಸ್‌ಪೋರ್ಟ್ ಕಸಿದು ಇಟ್ಟುಕೊಂಡಿದ್ದ ಆತ, ನಿಮಿಷಾ ಮತ್ತು ಅವರ ಕುಟುಂಬಕ್ಕೆ ಕಿರುಕುಳ ನೀಡಿದ್ದ ಎಂದು ನಿಮಿಷಾ ತಾಯಿ ಆರೋಪಿಸಿದ್ದರು.

    “ಆತ ನಿಮಿಷಾಳ ಆಭರಣ, ಸಂಪಾದನೆಯನ್ನು ಕಸಿದು ಇನ್ನಿಲ್ಲದಂತೆ ಹಿಂಸಿಸುತ್ತಿದ್ದ” ಎಂದು ತಾಯಿ ದೂರಿದ್ದಾರೆ.
    ಮಹದಿ ಕಾಟ ಸಹಿಸಲಾಗದೇ ನಿಮಿಷಾ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರು ಮಹದಿಯನ್ನು ವಿಚಾರಿಸುವ ಬದಲು ನಿಮಿಷಾಳನ್ನೇ 6 ದಿನ ಜೈಲಿಗೆ ಹಾಕಿದ್ದರು. ಜೈಲಿನಿಂದ ಹೊರಬಂದ ಬಳಿಕ ನಿಮಿಷಾಗೆ ಹಿಂಸೆ ನೀಡುವುದನ್ನು ಮಹದಿ ಮತ್ತಷ್ಟು ತೀವ್ರಗೊಳಿಸಿದ್ದ. ನಿಮಿಷಾ ಕಾಡಿಬೇಡಿಕೊಂಡರೂ ಪಾಸ್‌ಪೋರ್ಟ್ ನೀಡಿರಲಿಲ್ಲ. ಬಳಿಕ, ಒಂದು ದಿನ ಮೆಡಿಸಿನ್ ಓವರ್‌ಡೋಸ್ ಆಗಿ ಮಹದಿ ಮೃತಪಟ್ಟಿದ್ದು. ಬಳಿಕ, ಹತ್ಯೆ ಆರೋಪ ನಿಮಿಷಾ ಮೇಲೆ ಬಂದು ಶಿಕ್ಷೆಗೆ ಒಳಗಾಗಿದ್ದರು.

  • “ಬಾಹ್ಯಾಕಾಶ ಪ್ರವಾಸ” ಇನ್ನು ಸಾರ್ವಜನಿಕರಿಗೂ ಮುಕ್ತವಾಗಲಿದೆ: ಟಿಕೆಟ್ ದರ ಎಷ್ಟು ಗೊತ್ತೇ?

    “ಬಾಹ್ಯಾಕಾಶ ಪ್ರವಾಸ” ಇನ್ನು ಸಾರ್ವಜನಿಕರಿಗೂ ಮುಕ್ತವಾಗಲಿದೆ: ಟಿಕೆಟ್ ದರ ಎಷ್ಟು ಗೊತ್ತೇ?

    ವಿಜ್ಞಾನಿಗಳಿಗಷ್ಟೇ ಮೀಸಲು ಎಂದು ಪರಿಗಣಿಸಲಾಗಿದ್ದ ಬಾಹ್ಯಾಕಾಶ ಯಾತ್ರೆಯು, ಒಂದೆರಡು ಕೋಟಿ ರೂಪಾಯಿ ಖರ್ಚು ಮಾಡಿದರೆ, ಸಾರ್ವಜನಿಕರಿಗೂ ಎಟಕುವಂತಾಗಿದೆ. ವಿಜ್ಞಾನಿಗಳಲ್ಲದವರೂ ಆಗಸಕ್ಕೆ ಜಿಗಿಯಬಹುದು ಎಂಬ ಕನಸು ಬಾಹ್ಯಾಕಾಶ ಪ್ರವಾಸೋದ್ಯಮ’ದಿಂದ ವಾಸ್ತವರೂಪ ತಳೆದಿದೆ. ಖಾಸಗಿ ಕಂಪನಿಗಳು ಬಾಹ್ಯಾಕಾಶ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಬಾಹ್ಯಾಕಾಶ ಪ್ರವಾಸೋದ್ಯಮವು ಉದ್ದಿಮೆಯ ಸ್ವರೂಪ ಪಡೆದಿದೆ.

    ಭೂಮಿಯ ವಾತಾವರಣವನ್ನು ದಾಟಿ ದಿಗಂತದಲ್ಲಿ ಪ್ರಯಾಣಿಸುವ ಕಲ್ಪನೆ ಯುಗದಿಂದಲೂ ಮಾನವನನ್ನು ಆಕರ್ಷಿಸುತ್ತಲೇ ಇದೆ. ಮನುಷ್ಯನ ಸಾಹಸಗುಣಕ್ಕೆ, ತಂತ್ರಜ್ಞಾನ ಬಲ ನೀಡಿದ್ದರಿಂದ ಅಂತರಿಕ್ಷಕ್ಕೆ ಗಗನಯಾತ್ರಿಗಳು ಹೋಗಿ ಬರುವುದು ಸಾಧ್ಯವಾಗಿದೆ. ವಿಜ್ಞಾನಿಗಳಲ್ಲದವರಿಗೂ ಈ ಅವಕಾಶ ಈಗ ಲಭ್ಯವಾಗುತ್ತಿದೆ. ಇದನ್ನು ಸಾಧ್ಯವಾಗಿಸಿದ್ದು, ‘ಬಾಹ್ಯಾಕಾಶ ಪ್ರವಾಸೋದ್ಯಮ’. ಭೂಮಿಯಿಂದ 100 ಕಿಲೋಮೀಟರ್ ಎತ್ತರದಲ್ಲಿ (ಕಕ್ಷೆ) ಹಾಗೂ ಅದಕ್ಕಿಂತ ಕೆಳಗಿನ (ಉಪಕಕ್ಷೆ) ನೀಲಾಗಸದಲ್ಲಿ ಕೆಲವೇ ನಿಮಿಷ ಇದ್ದು, ಭೂಮಿಯ ಚೆಲುವನ್ನು ಕಣ್ಣುತುಂಬಿಕೊಳ್ಳುವುದು ಹಾಗೂ ತೂಕ ರಹಿತ ದೇಹ ಸ್ಥಿತಿಯನ್ನು ಅನುಭವಿಸುವುದು ಈಗ ಸುಲಭವಾಗಿದೆ.

    ಬಾಹ್ಯಾಕಾಶ ಪ್ರವಾಸೋದ್ಯಮ ಸಾಕಾರಕ್ಕೆ ಅಂತರಿಕ್ಷ ಸಂಸ್ಥೆಗಳ ನಡುವೆ ಪೈಪೋಟಿಯೇ ಏರ್ಪಟ್ಟಿದ್ದು, ಅವು ಹೊಸ ತಂತ್ರಜ್ಞಾನ, ಹಣ ಹಾಗೂ ಮಾನವ ಶ್ರಮವನ್ನು ಹೂಡಿಕೆ ಮಾಡುತ್ತಿವೆ.
    2000 ಇಸವಿಯಲ್ಲಿ ತಮ್ಮ ಕಂಪೆನಿ ಬ್ಲೂ ಒರಿಜಿನ್ ಮೂಲಕ ಅಂತರಿಕ್ಷ ಕ್ಷೇತ್ರವನ್ನು ಪ್ರವೇಶಿಸಿದ ಉದ್ಯಮಿ ಜೆಫ್ ಬಿಜೋಸ್, 2018ರಲ್ಲಿ ಮಾನವ ರಹಿತ ರಾಕೆಟ್ ಉಡ್ಡಾಯನ ಪರೀಕ್ಷೆ ನಡೆಸಿದ್ದರು. 2021ರ ಜುಲೈನಲ್ಲಿ ಸ್ವತಹ ಬಿಜೋಸ್ ತಮ್ಮ ಸಂಸ್ಥೆ ಅಭಿವೃದ್ಧಿಪಡಿಸಿದ “ನ್ಯೂ ಡೆಫೆಲ್ಡ್ ರಾಕೆಟ್” ಮೂಲಕ ಆಗಸಕ್ಕೆ ಸ್ವತಹ ಜಿಗಿದು ಇತಿಹಾಸ ಬರೆದರು. ಭೂಮಿಯಿಂದ ಮೇಲಕ್ಕೆ 100 ಕಿಲೋಮೀಟರ್ ದೂರದಲ್ಲಿ ಗುರುತಿಸಿರುವ ಕಾರ್ಮನ್ ಲೈನ್ ಪ್ರವೇಶಿಸಿದ ಮೊದಲ ಕೋಟ್ಯಾಧೀಶ ಎಂಬುದಾಗಿ ಕರೆಯಿಸಿಕೊಂಡರು. ಅಲ್ಲಿಂದ ಈವರೆಗೆ ಬ್ಲೂ ಒರಿಜಿನ್ ಸಂಸ್ಥೆಯು 11 ಅಂತರಿಕ್ಷಯಾನಗಳನ್ನು ಪೂರೈಸಿದ್ದು, 58 ನಾಗರಿಕರನ್ನ ಬಾಹ್ಯಾಕಾಶದಲ್ಲಿ ಸುತ್ತಾಡಿಸಿದೆ.
    ಅಂತರಿಕ್ಷ ಯಾನದ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಬಿಜೋಸ್ ಅವರು ಅಭಿವೃದ್ಧಿಪಡಿಸಿರುವ ಮರು ಬಳಕೆಯ ರಾಕೆಟ್ ತಂತ್ರಜ್ಞಾನವು ಈ ಉದ್ಯಮದಲ್ಲಿ ಹೊಸ ದಿಕ್ಕು ತೋರಿದ್ದು ಇದರ ಬಳಕೆಯಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ.

    ವಿನ್ಯಾಸ ಹೇಗಿದೆ?
    ಎರಡು ಹಂತಗಳಲ್ಲಿ ರಾಕೆಟ್ ನ ವಿನ್ಯಾಸವಿದೆ. ಯಾತ್ರಿಗಳು ಇರುವ ಕ್ಯಾಪ್ಸುಲ್ ಮೇಲ್ಬಾಗದಲ್ಲಿ ಮತ್ತು ಅವರನ್ನು ಹೊತ್ತಯ್ಯುವ ರಾಕೆಟ್ ಕೆಳಭಾಗದಲ್ಲಿ ಇರುತ್ತದೆ. ನಿಗದಿತ ಕಕ್ಷೆಯನ್ನು ತಲುಪಿದ ಬಳಿಕ ಕ್ಯಾಪ್ಸುಲ್ ರಾಕೆಟ್ ನಿಂದ ಬೇರ್ಪಡುತ್ತದೆ. ಭೂಮಿಯ ಮೇಲ್ಮೈನಲ್ಲಿ, ಉಡ್ದಾಯನ ಮಾಡಿದ ಜಾಗದ ಸಮೀಪದಲ್ಲಿ ರಾಕೆಟ್ ಬಂದು ಲ್ಯಾಂಡ್ ಆಗುತ್ತದೆ. ಕ್ಯಾಪ್ಸುಲ್ ಸ್ವಲ್ಪ ಹೊತ್ತಿನ ಬಳಿಕ ಭೂಮಿಯತ್ತ ವಾಪಸ್ ಆಗುತ್ತದೆ ಭೂಮಿ ಮೇಲ್ಮೈಯನ್ನು ಸಮೀಪಿಸುವ ಹೊತ್ತಿಗೆ ಅಳವಡಿಸಿರುವ ಪ್ಯಾರಾಚೂಟು ತೆರೆದುಕೊಂಡು ಯಾತ್ರಿಕರು ಸುರಕ್ಷಿತವಾಗಿ ಲ್ಯಾಂಡ್ ಆಗುತ್ತಾರೆ.

    ಪ್ರಯಾಣದ ಪರಿಮಿತಿ ಎಷ್ಟು?
    1. ಉಪಕಕ್ಷೆ (Sub Oribit): ಭೂಮಿಯಿಂದ ನೂರು ಕಿಲೋಮೀಟರ್ ಎತ್ತರದಲ್ಲಿರುವ ಕಾರ್ಮನ್ ಲೈನಿನಲ್ಲಿ ಪ್ರಯಾಣಿಕರಿಗೆ ಸುಮಾರು 10 ನಿಮಿಷ ಸೂಕ್ಷ್ಮ ಗುರುತ್ವ ಬಲದ, ಅಂದರೆ ದೇಹ ತೇಲಾಡುವ ಅನುಭವ ಸಿಗುತ್ತದೆ. ಇಲ್ಲಿ ಭೂಮಿಯ ಗೋಳಾಕಾರದ ದರ್ಶನವಾಗುತ್ತದೆ.
    2 ಕಕ್ಷೆ: ಕಾರ್ಮೆಲ್ ಗಿಂತ ಮೇಲಕ್ಕೆ ಇರುವ ಪ್ರದೇಶ ಇದು ದೀರ್ಘಕಾಲದ ಉಳಿದುಕೊಳ್ಳುವಿಕೆ. ಐಎಸ್ಎಸ್ ಹಾಗೂ ಇತರ ಬಾಹ್ಯಾಕಾಶ ನಿಲ್ದಾಣಗಳಿಗೆ ಪ್ರವೇಶಿಸುವ ಹಾಗೂ ಅಲ್ಲಿಂದ ವಾಪಸ್ ಆಗುವ ಪ್ರಕ್ರಿಯೆ ನಡೆಯುವ ವಲಯವಾಗಿದೆ. “ಲೂನಾರ್ ಟೂರಿಸಮ್” ಎಂಬ ಖಾಸಗಿ ಬಾಹ್ಯಾಕಾಶ ಯೋಜನೆ ಅಭಿವೃದ್ಹಿಯ ಹಂತದಲ್ಲಿದೆ. ಸ್ಪೇಸ್ ಎಕ್ಸ್ ಸಂಸ್ಥೆಯ “ಡಿಯರ್ ಮೂನ್” ಹಾಗೂ ಬ್ಲೂ ಒರಿಜಿನ್ ಸಂಸ್ಥೆಯ “ಬ್ಲೂ ಮೂನ್” ಮುಂದಿನ ದಿನಗಳಲ್ಲಿ ಸಾಕಾರಗೊಳ್ಳುವ ನಿರೀಕ್ಷೆ ಇದೆ.

    ಟಿಕೆಟ್ ದರ ಎಷ್ಟು ?
    ಬಹುತೇಕ ಯಾವ ಕಂಪನಿಯೂ ಟಿಕೆಟ್ ದರ ಬಹಿರಂಗಪಡಿಸಿಲ್ಲ. ತಮ್ಮನ್ನು ನೇರವಾಗಿ ಸಂಪರ್ಕಿಸುವಂತೆ ಸೂಚಿಸಿವೆ . ಉಪಕಕ್ಷೆಗೆ ತೆರಳುವ ಪ್ರಯಾಣಿಕರ ಟಿಕೆಟ್ ದರ ಅಂದಾಜು 2.10 ಕೋಟಿಯಿಂದ 3.80 ವರೆಗೆ ಇದೆ ಎಂದು ವರದಿಗಳು ಹೇಳಿವೆ. ಸ್ಪೇಸ್ ಪರ್ಸ್ ಪೆಕ್ಟಿವ್ ಯೋಜನೆಯಲ್ಲಿ ಒಂದು ಟಿಕೆಟಿಗೆ ಅಂದಾಜು ಒಂದು ಕೋಟಿ ದರ ನಿಗದಿಯಾಗುವ ಸಾಧ್ಯತೆ ಇದೆ. ಡೀಪ್ ಬ್ಲೂ ಸಂಸ್ಥೆಯು 1.75 ಕೋಟಿ ದರದ ಟಿಕೆಟ್ ನಿಗದಿಪಡಿಸಿದೆ. ಈಗಾಗಲೇ ಎರಡು ಟಿಕೆಟ್ ಮಾರಾಟವಾಗಿದೆ ಎನ್ನಲಾಗಿದೆ. ಆದರೆ ಕಾರ್ಮನ್ ಲೈನ್ ದಾಟಿದ 400 ಕಿಲೋಮೀಟರ್ ದೂರದಲ್ಲಿರುವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ವೆಚ್ಚ ಅತ್ಯಂತ ದುಬಾರಿ. ಸ್ಪೇಸ್ ಎಕ್ಸ್ ನ “ಡ್ರ್ಯಾಗನ್” ರೀತಿಯ ಕ್ಯಾಪ್ಸೂಲ್ ಗಳಲ್ಲಿ ತೆರಳುವ ಪ್ರತಿಯೊಬ್ಬರೂ 450 ಕೋಟಿ ತೆರಬೇಕಾಗಿದೆ.

    ಭಾರತದ ಹೆಜ್ಜೆ
    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಸದ್ಯ ಗಗನಯಾನದತ್ತ ದೃಷ್ಟಿ ನೆಟ್ಟಿದೆ. ಇದಕ್ಕಾಗಿ ಆಕ್ಸಿಯಂ ಫೋರ್ ಎಂಬ ಅಂತರಿಕ್ಷ ಅಭಿಯಾನದ ಭಾಗವಾಗಿ ಸುಭಂಶು ಶುಕ್ಲ ಅವರನ್ನು ಈಚೆಗಷ್ಟೇ ISS ಗೆ ಕಳುಹಿಸಿತ್ತು. ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳು, ಬಾಹ್ಯಾಕಾಶ ಪ್ರವಾಸೋದ್ಯಮದತ್ತ ದೃಷ್ಟಿ ನೆಟ್ಟಿವೆ. “ಅಗ್ನಿಕುಲ್” “ಸ್ಕೈರೂಟ್” ಹಾಗೂ ಇತರೆ ಕೆಲವು ಸಂಸ್ಥೆಗಳು ವಿವಿಧ ಉಡ್ಡಾಯನ ಸಾಮರ್ಥ್ಯದ ವಾಹನಗಳ ವಿನ್ಯಾಸ ಹಾಗೂ ಅಭಿವೃದ್ಧಿಯಲ್ಲಿ ತೊಡಗಿವೆ. ಅವುಗಳಲ್ಲಿ ಕೆಲವು ಬಾಹ್ಯಾಕಾಶ ಪ್ರವಾಸೋದ್ಯಮವನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ.

    ಆಧಾರ: ಸ್ಪೇಸ್ ಎಕ್ಸ್ ಬ್ಲೂ ಒರಿಜಿನ್, ವರ್ಜಿನ್ ಗೆಲಾಕ್ಟಿಕ್, ಎ.ಎಫ್.ಪಿ., ರಾಯಿಟರ್ಸ್

  • ಗಲ್ಫಿಗನು ಅನುಭವಿಸುವ ಮನೋವೇದನೆ:ನಾವೆಲ್ಲರೂ ಅರಿಯಲೇಬೇಕು

    ಗಲ್ಫಿಗನು ಅನುಭವಿಸುವ ಮನೋವೇದನೆ:ನಾವೆಲ್ಲರೂ ಅರಿಯಲೇಬೇಕು

    ನಮ್ಮಂತಹ ಸಂಸಾರಿ ಅನಿವಾಸಿಗಳು ವರ್ಷಕ್ಕೊಮ್ಮೆ ಊರಿಗೆ ಹೊರಡುತ್ತೇವೆ. ಸುಮಾರು 30-40 ದಿನಗಳ ರಜೆಯನ್ನು ಕಳೆದು ಮತ್ತೆ ಮರಳಿ ಬರುತ್ತವೆ. ಆ ಅವಧಿಯಲ್ಲಿ ಹೊರಡುವ ಆನಂದ, ಹಿಂತಿರುಗಿ ಬರುವ ಸಂಕಟ, ನಡುವೆ ಊರಿನಲ್ಲಿ ಜರುಗುವ ಆಗು-ಹೋಗುಗಳು ನಿಜಕ್ಕೂ ಸ್ವಾರಸ್ಯಕರ. ಇದು ನನಗೆ ಮಾತ್ರವಲ್ಲ ಎಲ್ಲಾ ಗಲ್ಫ್ ವಾಸಿಗಳಿಗೂ ಆಗುವ ಅನುಭವ ಪಾಠ. ಈ ಕಥೆ-ವ್ಯಥೆಯನ್ನೇ ನಾನಿಲ್ಲಿ ನಿಮ್ಮ ನಡುವೆ ಬಿಚ್ಚಿಡುತ್ತಿದ್ದೇವೆ.

    ಜುಲೈ-ಆಗಸ್ಟ್ ಮಾಸವೆಂದರೆ ದುಬಾಯಿಯಲ್ಲಿ ಉರಿಯುವ ಸೆಖೆ. ನೆಲ ಅನ್ನುವುದು ಸುಡುವ ಕಾವಲಿ. ಆಕಾಶವನ್ನು ದಿಟ್ಟಿಸಿ ನೋಡಿದರೆ ದುರುಗುಟ್ಟಿ ನೋಡುವ ಸೂರ್ಯ. ಒಂದು ಫರ್ಲಾಂಗು ಹೆಜ್ಜೆಗಳು ಹಾಕಿದರೆ ಸಾಕು, ಹಣೆಯಿಂದ ನಾಭಿಯವರೆಗೆ ಇಳಿದು ಬರುವ ಬೆವರು. ಬೀಸುವ ಬಿಸಿ ಗಾಳಿಗೆ ಬದುಕೇ ಹೈರಾಣ. ಒಂದು ವಿಶೇಷವೆಂದರೆ, ಇಲ್ಲಿಯ ಸೆಖೆಗೆ ಊರಿನಂತೆ ತೇವಾಂಶವಿಲ್ಲ. ಅಲ್ಲಿ ಬೆವರಿಗೆ ಮೈಯೆಲ್ಲಾ ಅಂಟು-ಅAಟು. ಧರಿಸಿದ ಅಂಗಿಯ ಕಾಲರ್ ತಿರುಗಿಸಿ ನೋಡಿದರೆ ಜಿಡ್ಡು-ಕೊಳೆ. ಅಲ್ಲದೆ ಊರಿನಲ್ಲಿ ಬಹುತೇಕ ಮಂದಿ ಬಿಸಿಲಿಗೆ ಕೊಡೆ ಹಿಡಿಯುತ್ತಾರೆ. ಇಲ್ಲಿ ಸೆಖೆಯಾಗಲಿ-ಮಳೆಯಾಗಲಿ, ಕೊಡೆ ಅನ್ನುವುದೇ ಕಾಣೆ! ಮರುಭೂಮಿಯಾದರೂ ಸೈ, ಕೈ ಬೀಸಿಯೇ ಸಾಗುತ್ತಾರೆ. ಕೆಲವಡೆ ಫಿಲಿಪಿನೀ ಕನ್ಯೆಯರು ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾಟರಿಯಲ್ಲಿ ಚಲಿಸುವ ಮಿನಿ ಫ್ಯಾನು ಹಿಡಿಯುತ್ತಾರೆ. ಮುಖ್ಯವಾಗಿ ಅದು ತಂಪು ಗಾಳಿಗಲ್ಲ. ಮುಖಕ್ಕೆ ಮೆತ್ತಿಕೊಂಡ ಮೇಕಪ್ ಜಾರದಿರಲಿ ಅನ್ನುವ ಜಾಗೃತೆಗೆ!

    ದುಬಾಯಿಯಲ್ಲಿ ಜೂನ್ ಕೊನೆಯ ವಾರ ಸಮೀಪಿಸಿದಂತೆ, ಶಾಲಾ ಮಕ್ಕಳಿಗೆ ಎರಡು ತಿಂಗಳ ವಾರ್ಷಿಕ ರಜೆ ಆರಂಭವಾಗುತ್ತದೆ. ಆಗ ಎಲ್ಲರಿಗೂ ಊರಿಗೆ ಹೋಗುವ ಸಂಭ್ರಮ. ಮಕ್ಕಳಿಗೆ ಅಜ್ಜ-ಅಜ್ಜಿಯ ಜೊತೆ ಒಂದು ಗೂಡುವ ಸಂತೋಷ. ಮಳೆಯ ನೀರಿನಲ್ಲಿ ಕುಣಿಯುವ ಉತ್ಸಾಹ. ಊರಿನ ಬಗೆ ಬಗೆಯ ತಿಂಡಿ-ತಿನಿಸುಗಳು ತಿನ್ನುವ ಕಾತುರ. ಆದರೆ ಇದೇ ವೇಳೆಗೆ ಬೇಟೆಗೆ ಕುಳಿತ ಹುಲಿಯಂತೆ, ನಮ್ಮ ವಿಮಾನ ಸಂಸ್ಥೆಗಳು ಕಾದು ಕುಳಿತುಕೊಂಡಿರುತ್ತವೆ. ಅವರು ಮಿತಿ ಮೀರಿ ಏರಿಸುವ ಟಿಕೇಟ್ ದರವನ್ನು ಮಾತ್ರ ಕೇಳಬೇಡಿ! ಉಳಿದ ಸಮಯದಲ್ಲಿ ಮಂಗಳೂರಿಗೆ ವಿಮಾನದ ಹಾರಾಟದ ದರವು ದಿರಹಮ್ಸ್ 800-1000 ಇದ್ದರೆ, ಈಗ ಅದು ದಿರ್‌ಹಮ್ಸ್ 1800ರ (ಸುಮಾರು ರೂಪಾಯಿ 42,000) ಗಡಿಯನ್ನು ದಾಟಿಯೇ ಮುನ್ನುಗ್ಗಿರುತ್ತದೆ. ಚೌಕಾಸಿಗೆ ನಿಂತರೆ ಕೊನೆಗೆ ಅದೂ ಇಲ್ಲ. ಇಲ್ಲಿ ಪತಿ-ಪತ್ನಿ, ಎರಡು ಮೂರು ಮಕ್ಕಳಿದ್ದರೆ ದೊಡ್ಡ ಗಂಡಾತರ. ವರ್ಷವಿಡೀ ನಾಲ್ಕು ಕಾಸು ಕಮಾಯಿ ಮಾಡಿಟ್ಟರೆ, ಇವರ ಹಸಿದ ಹೊಟ್ಟೆಗೆ ಸುರಿಯಬೇಕು. ಈ ಅನ್ಯಾಯ-ದಬ್ಬಾಳಿಕೆಯನ್ನು ಸ್ಥಳೀಯ ಸರಕಾರ ಅಥವಾ ಭಾರತದ ಸರಕಾರಕ್ಕೆ ದೂರಿ ಕೊಂಡರೆ ಅವರಿಗೆ ಕಿವಿಯೇ ಕೇಳಿಸದು. ಅದು ಜಾಣ ಕುರುಡು! ಹಣವಿದ್ದರೆ ಹೊರಡಿ, ಇಲ್ಲದಿದ್ದರೆ ಮುಂದಿನ ಬಾರಿ ಸಾಗಿರಿ ಅನ್ನುವ ಪುಕ್ಕಟೆ ಸಲಹೆಯನ್ನು ನೀಡುತ್ತಾರೆ. ಹೀಗಾಗಿ “ದೊಡ್ಡ ಸಂಸಾರಸ್ಥ” ಮಕ್ಕಳು ಐದಾರು ವರ್ಷಗಳು ತಮ್ಮ ಊರಿನ ಮುಖವನ್ನೇ ನೋಡಿರುವುದಿಲ್ಲ. ಅವರ ಅಜ್ಜ-ಅಜ್ಜಿಯಂದಿರು ಇವರನ್ನು ಕಾಣುವ ನಿರೀಕ್ಷೆಯಲ್ಲಿ ಇನ್ನಷ್ಟು ಮುದಿಯಾಗಿರುತ್ತಾರೆ.

    ಎರಡು ಮೂರು ದಶಕಗಳ ಹಿಂದೆ ಹೆಚ್ಚಿನ ಕಂಪೆನಿಗಳು ತನ್ನಲ್ಲಿ ದುಡಿಯುವ ಉದ್ಯೋಗಿಗಳಿಗೆ ಫ್ಯಾಮಿಲಿ ಟಿಕೇಟ್ ನೀಡುತ್ತಿತ್ತು. ಈಗ ಬಹುತೇಕ ಅದು ನಿಂತು ಹೋಗಿದೆ. ಒಂದು ಹೆಜ್ಜೆ ಮುಂದಿಟ್ಟ ಕೆಲವು ಕಂಪೆನಿಗಳು, ಈಗ ಟಿಕೇಟಿಗೂ ಇಂತಿಷ್ಟು ಮೊತ್ತವೆಂದು ನಿಗದಿ ಪಡಿಸಿದ್ದಾರೆ. ಇಲ್ಲದಿದ್ದರೆ ಅವರಿಗೆ ಶಾಲಾ ರಜೆಯ ಸಮಯದಲ್ಲಿ, ಹಬ್ಬದ ದಿನಗಳಲ್ಲಿ ದುಪ್ಪಟ್ಟು ಟಿಕೇಟ್ ದರ ನೀಡಬೇಕಾಗುತ್ತದೆ. ವಿಮಾನಯಾನ ಸಂಸ್ಥೆಗಳ ಈ ಹಗಲು ದರೋಡೆಗೆ ಇವರು ಕೂಡ ತತ್ತರಿಸಿ ಹೋಗಿದ್ದಾರೆ. ಇದರ ನೇರ ಹೊಡೆತ ಬಿದ್ದಿರುವುದು ನಮ್ಮಂತಹ ಮಧ್ಯಮ ವರ್ಗದವರಿಗೆ. ಹೆಚ್ಚು ಮೊತ್ತವಾದರೆ, ನಾವೇ ಸ್ವಯಂ ಜೇಬಿನಿಂದ ತುಂಬಬೇಕು. ಇಲ್ಲದಿದ್ದರೆ ಶಾಲೆಗಳಿಗೆ ರಜೆಯಲ್ಲದ ದಿನಗಳಲ್ಲಿ ಪ್ರಯಾಣ ಬೆಳೆಸಬೇಕು. ಅದು ಸಾಧ್ಯವೇ?
    ಟಿಕೇಟಿನ ಈ ರಗಳೆ ಮುಗಿಯುತ್ತಿದ್ದಂತೆ ಈಗ ಖರೀದಿಯ ಸರದಿ. ಅಪರೂಪದಲ್ಲಿ ವರ್ಷಕ್ಕೊಮ್ಮೆ ಊರಿಗೆ ಹೊರಟಾಗ ಅದಕ್ಕೂ ದೊಡ್ಡ ಮೊತ್ತ ಕಾದಿರಿಸಬೇಕು. ಅಪ್ಪ-ಅಮ್ಮಾ, ಅಜ್ಜ, ಅಜ್ಜಿ, ತಂಗಿ, ತಮ್ಮ, ಅಕ್ಕ, ಭಾವ, ಚಿಕ್ಕಮ್ಮ, ಚಿಕ್ಕಪ್ಪ, ಮಾವ, ಅತ್ತೆ, ಅತ್ತಿಗೆ… ಅಂದಾಗ ಪ್ರತಿಯೊಬ್ಬರಿಗೂ ಏನಾದರೂ ಕಪ್ಪ ಕಾಣಿಕೆಗಳು ನೀಡಲೇಬೇಕು. ಇದು ಅನಿವಾಸಿಗಳ ಅಜನ್ಮ ಸಿದ್ಧ ಹಕ್ಕು! ಅವರು ಬೇಡ ಅಂದರೂ ನಮಗಂತೂ ಬರಿಗೈಯಲ್ಲಿ ಕೈ ಕಟ್ಟಿ ನಿಲ್ಲಲು ಸಾಧ್ಯವೇ? ನಮ್ಮ ನೆರೆಕರೆಯ ಮಕ್ಕಳಿಗೂ ಒಂದು ಮುಷ್ಠಿ ಚಾಕಲೇಟ್ ಆದರೂ ನೀಡಬೇಡವೇ? ಮಗಳನ್ನು ಕೈಗೆ ಒಪ್ಪಿಸಿದ ಅತ್ತೆ ಮಾವರಿಗೆ ಬಾದಮ್, ಪಿಸ್ತಾ, ಚೈನಾ ಗ್ರಾಸ್, ಇತ್ಯಾದಿ ನೀಡದೆ ಹೋದರೆ ಅಲ್ಲಿ ಮರ್ಯಾದೆ ಉಂಟೇ? ಜೊತೆಗೆ ಮಾವನಿಗೆ ಟೋಪಿ, ಅತ್ತರಿನ ಬಾಟಲಿ, ಅತ್ತೆಗೆ ಬಣ್ಣ ಬಣ್ಣದ ಸೀರೆ! ಹಾಗೆ ನಮ್ಮ ಮನೆ ಮಂದಿಗೆ ಬಟ್ಟೆ ಬರೆ. ಬೇಡಿಕೆ ಇಟ್ಟವರಿಗೆ ಮೊಬೈಲು, ಸನ್ ಗ್ಲಾಸು, ಪರ್ಸು, ವಾಚು ಇತ್ಯಾದಿ. ಆಗ ಬೆಳೆದ ನಿಂತ ಮಕ್ಕಳು ಉದ್ಗಾರ ತೆಗೆಯುವುದಿದೆ: ಅಪ್ಪ, ಇವೆಲ್ಲಾ ಇಂಡಿಯಾದಲ್ಲಿ ಧಾರಾಳ ಸಿಗುತ್ತದೆ. ಇಲ್ಲಿಂದ ಏಕೆ ಹೊತ್ತು ಸಾಗಬೇಕು?” ಅವರು ಹೇಳುವ ಮಾತಿಗೂ ಅರ್ಥವಿದೆ. ಆದರೆ ಪುಕ್ಕಟೆ ಸಿಗುತ್ತದೆಯೇ? ನಮಗೆ ಇಲ್ಲ ಅನ್ನಲು ಸಾಧ್ಯವೇ? ಎಲ್ಲವೂ ಆತ್ಮೀಯ ಬಂಧ!

    ನಮ್ಮ ಈ ಐದಾರು ಸೂಟು ಕೇಸು- ರಟ್ಟಿನ ಪೆಟ್ಟಿಗೆಗಳನ್ನು ತುಂಬಲು ಕೆಲವು ಸಮಯವೇ ಬೇಕಾಗುತ್ತದೆ. ಅದಕ್ಕೆ ದುಬಾಯಿಯ ಹತ್ತಾರು ಗಲ್ಲಿಗಳನ್ನು ಸುತ್ತಬೇಕು. ಶಾಪಿಂಗ್ ಮಹಲ್‌ಗಳ ಹಲವು ಲಿಫ್ಟ್ಗಳನ್ನು ಹತ್ತಬೇಕು. ಎಲ್ಲಿ ಅಗ್ಗದ ದರ, ಎಲ್ಲಿ ಕಡಿತದ ಮಾರಾಟ ಅನ್ನುವುದನ್ನೂ ಪತ್ತೆ ಹಚ್ಚಬೇಕು. ಬೀದಿ ಬದಿಯ ಅಂಗಡಿಗಳಲ್ಲಿ ಚೌಕಾಸಿಗೆ ನಿಲ್ಲಬೇಕು. ಬಿಸಿಲಿನ ಜಳಕ, ಜನರ ನೂಕು ನುಗ್ಗಾಟ, ಕಾರ್ ಪಾರ್ಕಿಂಗ್‌ನ ಹುಡುಕಾಟ, ಭಾರವಾದ ಚೀಲಗಳು ಹಿಡಿದು ನಡೆಯುವ ಆಯಾಸಕ್ಕೆ ಸಖತ್ ತಾಳ್ಮೆಯನ್ನು ವಹಿಸಬೇಕು. ಅದರಲ್ಲೂ ನಮ್ಮವರ ಲಗ್ನ, ಸಂಬಂಧಿಕರ ಮನೆ ಒಕ್ಕಲು, ಆತ್ಮೀಯರ ನಿಶ್ಚಯ ಇತ್ಯಾದಿಗಳಿದ್ದರೆ ಕೇಳಬೇಡಿ. ಈ ಹೆಂಡತಿ-ಮಕ್ಕಳಿಗೆ ಅದೆಷ್ಟು ಖರೀದಿಸಿದರೂ ಕಡಿಮೆ. ಆ ಕೊನೆಯ ದಿನಗಳ ಅವಸರವಂತೂ ನೋಡಿದರೆ ನಮ್ಮ ಮನೆಯಲ್ಲಿಯೇ ಮದುವೆಯಂತೆ ಕಾಣುತ್ತದೆ. “ಅದು ಬೇಕಿತ್ತು ಇದು ಬೇಕಿತ್ತು. ಅದು ಸಿಕ್ಕಿಲ್ಲ, ಇದು ತರಲಿಲ್ಲ” ಎಂಬ ಹತ್ತಾರು ತಕರಾರು. ಗಂಡ ಅನ್ನುವ ಪ್ರಾಣಿ ಇಲ್ಲಿ ಕೆಲವು ದಿನಗಳ ಮಟ್ಟಿಗೆ ಖಾಯಂ ಕೂಲಿಯಾಳು!

    ಪ್ರತಿಯೊಬ್ಬರಿಗೆ 30 ಕೆ.ಜಿ.ಯ ಲಗೇಜು, ಕೈಗೆ ಏಳು ಕೆ.ಜಿ.ಯ ಹ್ಯಾಂಡ್‌ಬ್ಯಾಗ್ ಅಂದಾಗ ನಾಲ್ಕು ಮಂದಿಯ ಪೆಟ್ಟಿಗೆಗಳ ಭಾರ 150 ಕೆ.ಜಿ. ದಾಟಿಕೊಂಡಿರುತ್ತದೆ. (ಹೆಗಲಿಗೆ ಜೋತು ಬಿದ್ದ ವಾನಿಟಿ ಬ್ಯಾಗು, ಲ್ಯಾಪ್‌ಟಾಪ್ ಬ್ಯಾಗು ಪ್ರತ್ಯೇಕ). ಈ ಸಾಮಾಗ್ರಿ ಗಳನ್ನು 20 ಕೆ.ಜಿ.ಯ ಮಿತಿಯಂತೆ ಸೂಟುಕೇಸ್ ಅಥವಾ ರಟ್ಟಿನ ಪೆಟ್ಟಿಗೆಯಲ್ಲಿ ತುಂಬುವ ಭಾರ ಪಾಪಿ’ ಗಂಡನ ಪಾಲಿಗೆ! ಅದನ್ನು ಐದಾರು ಬಾರಿ ತೂಕದ ತಕ್ಕಡಿಯಲ್ಲಿಟ್ಟು ತೂಗಬೇಕು. ಎತ್ತಿ-ಇಳಿಸಿ ಭಾರವನ್ನು ಸರಿ ತೂಗಿಸಬೇಕು. ಇಲ್ಲದಿದ್ದರೆ ವಿಮಾನ ನಿಲ್ದಾಣದಲ್ಲಿ ಒಂದು-ಎರಡು ಕೆ.ಜಿ. ಹೆಚ್ಚಾದರೂ ದಂಡ ಕಟ್ಟಲು ಆಜ್ಞೆ ಮಾಡುತ್ತಾರೆ! ಹೀಗೆ ಹಗ್ಗ ಸುತ್ತಿದ ಈ ಪೆಟ್ಟಿಗೆಗಳನ್ನು ಮರುದಿನ ಕಾರಿಗೆ ತುಂಬಬೇಕು. ನಿಲ್ದಾಣದಲ್ಲಿ ಮತ್ತೆ ಇಳಿಸಿ, ನೂಕುವ ಟ್ರಾಲಿಗೆ ವರ್ಗಾಯಿಸಬೇಕು. ಇನ್ನು ಟಿಕೇಟ್ ಕೌಂಟರ್‌ನಲ್ಲಿ ನಡು ಬಗ್ಗಿಸಿ ಲಗೇಜ್ ಬೆಲ್ಟ್ಗೆ ಎತ್ತಿ ಹಾಕಬೇಕು. ಅಲ್ಲಿಗೆ ಸೊಂಟದ ಒಂದು ಮೂಲೆಯಲ್ಲಿ ನೋವು ಕಾಣಿಸಿಕೊಂಡಿರುತ್ತದೆ. ಮೂರುವರೆ ತಾಸಿನ ಪ್ರಯಾಣದಲ್ಲಿ ಅದಕ್ಕೆ ಒಂದಿಷ್ಟು ಆರಾಮ ಸಿಕ್ಕಿತು ಅನ್ನುವಾಗ ಮತ್ತೆ ಅದನ್ನು ಊರಿನ ಲಗೇಜ್ ಬೆಲ್ಟ್ನಿಂದ ಇಳಿಸುವ ಸಂಕಷ್ಟ. ಟ್ರಾಲಿಯಲ್ಲಿ ತುಂಬಿಸಿ, ಕಾರಿಗೆ ಏರಿಸುವ ಪ್ರಯಾಸ. ಆದರೆ ಅದೇಕೋ ವಿಮಾನ ನಿಲ್ದಾಣದಲ್ಲಿ ನಮ್ಮವರ ನಗುಮುಖವನ್ನು ಕಂಡಾಗ ಎಲ್ಲಾ ನೋವುಗಳು ಮಾಯಾ!

    ಈಗ ಈ ಲಗೇಜಿನ ಸಹಾಯಕ್ಕೆ ಅವರು ಕೂಡ ಮುನ್ನುಗುತ್ತಾರೆ. ಜೊತೆಯಲ್ಲಿ ಆಗಮಿಸಿದ ಪುಟ್ಟ ಮಕ್ಕಳಿಗಂತೂ ನಮ್ಮ ಸೂಟ್‌ಕೇಸಿನ ಮೇಲೆಯೇ ಕಣ್ಣು. “ಮಾರಿ ಕಣ್ಣು ಕುರಿಯ ಮ್ಯಾಗೆ” ಅನ್ನುವ ಹಾಗೆ! ಅವರಿಗೆ ಅದರ ಹಗ್ಗವನ್ನು ಬಿಚ್ಚುವ ವರೆಗೂ ತಳಮಳ-ಕುತೂಹಲ. ಈ ಬಾರಿ ಆಟವಾಡಲು ಯಾವ ಆಟಿಕೆ ತಂದಿದ್ದಾರೆಯೆAಬ ಕಾತುರ!

    ಪ್ರತಿಬಾರಿ ಊರಿಗೆ ಬಂದಾಗ ಹಸಿರು ಚಾದರ ಹೊದ್ದು ಕೊಂಡ ಪ್ರಕೃತಿ, ಬೀಸುವ ತಂಪುಗಾಳಿ, ಬೆಳಗುವ ಮಿಂಚು, ಸ್ವಾಗತ-ಸುಸ್ವಾಗತ ತೋರುವ ಮಳೆ. ದೀರ್ಘ ಕಾಲ ಮರು ಭೂಮಿಯಲ್ಲಿ ನೆಲನಿಂತ ನಮಗೆ ಇವು ನೆಮ್ಮದಿ-ಆಹ್ಲಾದ ನೀಡುವ ನೋಟ. ಮುಂಜಾನೆಯಿಂದ ನಮ್ಮ ದಾರಿಯನ್ನೇ ಕಾಯುವ ಅಪ್ಪ-ಅಮ್ಮವನ್ನು ಬಿಗಿದಪ್ಪಿದಾಗ ಕಣ್ಣು ತುಂಬಾ ಆನಂದಬಾಷ್ಪ! ಅಜ್ಜ-ಅಜ್ಜಿಯನ್ನು ಭೇಟಿ ಆದಾಗ ಅವರ ಮುಪ್ಪಿನ ಚಹರೆಯ ನೆರಿಗೆಗಳಲ್ಲೂ ಸಂತೋಷದ ಅಲೆಗಳು. ಮಕ್ಕಳನ್ನು ಕಂಡಾಗ “ಇಷ್ಟು ದೊಡ್ಡವರು ಆದಿರಾ?” ಅನ್ನುವ ಉದ್ಗಾರ!

    ಅಂದು ಮನೆಯಲ್ಲಿ ಹಬ್ಬದ ಸಡಗರ. ಅದಕ್ಕೆ ತಕ್ಕಂತೆ ಬಗೆ ಬಗೆಯ ರುಚಿಯಾದ ಅಡುಗೆ. ಊಟದ ಬಳಿಕ ಸೂಟ್‌ಕೇಸ್ ಪೆಟ್ಟಿಗೆಯನ್ನು ತೆರೆಯಲು ಕೂತಾಗ ಎಲ್ಲರ ಕಣ್ಣುಗಳಲ್ಲಿ ಹೊಳಪು. ತನಗೆ ಏನು ಸಿಗಬಹುದೆಂಬ ಕುತೂಹಲ. ಮಕ್ಕಳು ಅದನ್ನು ಒಂದೊAದಾಗಿ ಅಲ್ಲಿದ್ದವರ ಕೈಗೆ ಒಪ್ಪಿಸುವಾಗ ಅವರಿಗೂ ಖುಷಿ. ಆಗ ಸುತ್ತ-ಮುತ್ತ ಲವಂಗ-ಏಲಕ್ಕಿಯದ್ದೇ ಸುಗಂಧ-ಪರಿಮಳ.

    ಊರಿನಲ್ಲಿರುವಷ್ಟು ದಿನ ಅಮ್ಮನಿಗೆ ಅದೆಷ್ಟು ಬಗೆಯ ತಿಂಡಿ-ತಿನಿಸು ಬಡಿಸಿದರೂ ಕಡಿಮೆ. ಅದು ಕರಂಡೆಯ ಉಪ್ಪಿನಕಾಯಿ, ದೀವು ಗುಜ್ಜದ ಸುಕ್ಕ, ಹಳದಿ ಎಲೆಯ ರೊಟ್ಟಿ, ಅಣಬೆಯ ಸಾರು, ಹಲಸಿನ ದೋಸೆ, ತೊರಾಟ ಎಲೆಗಳ ಪಲ್ಯ, ಬಾಳೆದಂಡಿನ ಗೊಜ್ಜು, ಮೆತ್ತೆಯ ಗಂಜಿ, ಸಣ್ಣಕ್ಕಿಯ ಪಾಯಸ ಇತ್ಯಾದಿ ಇತ್ಯಾದಿ. ಸಂಜೆಯಾದರೆ ಮತ್ತೆ ಟೀ ಜೊತೆಗೆ ಕುರುಕುರು ತಿಂಡಿಗಳು. ಆಲೂಬೋಂಡಾ, ಮಿರ್ಚಿ, ಭಜೆಗಳಲ್ಲಿ ಎಣ್ಣೆ ಇರುತ್ತದೆ ಬೇಡವೇ ಬೇಡವೆಂದರೂ ಆಕೆ ಕೇಳಬೇಕಲ್ಲ? “ನಿನ್ನ ಒಂದು ತಿಂಗಳ ಪಥ್ಯವನ್ನು ದುಬಾಯಿಯಲ್ಲಿಡು, ಈಗ ನಾನು ಮಾಡಿದ್ದು ತಿನ್ನಬೇಕೆಂಬ ಒತ್ತಡ. ರಾತ್ರಿ ಮತ್ತೆ ಭರ್ಜರಿ ಭೋಜನ. ಅತ್ತ ಅತ್ತೆ ಮನೆಗೆ ಹೋದರೂ ಅಷ್ಟೇ. ವಿಶೇಷ ಅಡುಗೆಗಳು. ಕೊನೆಗೆ ಒಂದೇ ಆರೋಪ- “ನಮ್ಮ ಮನೆಯಲ್ಲಿ ಅಳಿಯ ಏನೂ ತಿನ್ನಲೇ ಇಲ್ಲ”! ಅಂತೂ-ಇಂತೂ ಊರು ಬಿಡುವಾಗ ತೂಕದಲ್ಲಿ ಎರಡು-ಮೂರು ಕೆ.ಜಿ. ಹೆಚ್ಚಳವಾಗಿರುತ್ತದೆ.

    ಮೊದಲ ದಿನ ಮಾವನ ಮನೆಗೆ ಹೋದಾಗ ರಾತ್ರಿಯಲ್ಲಿ ಎಲ್ಲಾ ಕೋಣೆಗಳ ದೀಪಗಳು ಆರಿಕೊಂಡಿರುತ್ತವೆ. ಆದರೆ ಡೈನಿಂಗ್ ಹಾಲಿನ ದೀಪ ಮಾತ್ರ ಉರಿಯುತ್ತಿರುತ್ತದೆ. ಆ ಮೇಜಿನ ಮೇಲೆ ತಾಯಿ-ಮಗಳ ದುಂಡು ಮೇಜಿನ ಪರಿಷತ್ತು. ಇಬ್ಬರಿಗೂ ವಾರ್ಷಿಕ ವರದಿಯನ್ನು ಸಲ್ಲಿಸುವ ಸರದಿ. ಇವರ ಮಾತಿನ ಭರಟೆಗೆ ಹೊರಗೆ ಆರ್ಭಟಿಸುವ ಗುಡುಗು, ಹೊಳೆಯುವ ಮಿಂಚು ಕೂಡ ಅರಿವಿಗೆ ಬಾರದು. ಸುರಿಯುವ ಮುಸಲಧಾರೆ ನಿಂತರೂ ಇವರ ಪಟ್ಟಾಂಗ ನಿಲ್ಲದು. ಇವರು ಯಾವಾಗ ಮಲಗುತ್ತಾರೋ- ಯಾವಾಗ ಎಚ್ಚರವಾಗುತ್ತಾರೋ ಅವರಿಗೇ ಗೊತ್ತು!

    ನೋಡು ನೋಡುತ್ತಿದ್ದಂತೆ ಈ 30-40 ದಿನಗಳ ರಜೆಯು ಹೇಗೆ ಕಳೆದು ಹೋಯಿತೆಂದು ತಿಳಿಯುವುದಿಲ್ಲ. ಒಡ ಹುಟ್ಟಿದವರ ಮನೆಗೆ, ಬಂಧು-ಮಿತ್ರರ ಸಂದರ್ಶನಕ್ಕೆ, ಮದುವೆ ಸಮಾರಂಭದ ಹಾಜರಾತಿಗೆ, ರೋಗಿಗಳ ಭೇಟಿಗೆ… ಅಂದಾಗ ರಜೆಗಳ ಬತ್ತಳಿಕೆಯ ಬಾಣಗಳು ಖಾಲಿಯಾಗ ತೊಡಗುತ್ತದೆ. ಪ್ರತಿಬಾರಿ ಒಂದಿಷ್ಟು ರಜೆಗಳಲ್ಲಿ ಕೇರಳ ಹೋಗಬೇಕು, ಮುಂಬೈ ನೋಡಬೇಕು, ರಾಜಸ್ತಾನ ಸುತ್ತಬೇಕೆಂದು ಆಲೋಚಿಸಿಕೊಂಡು ಬರುವುದು. ಆದರೆ ಅಲ್ಲಿ ಸುರಿಯುವ ಮಳೆಗೆ, ನೆರೆ ಹಾವಳಿಗೆ, ಕುಸಿಯುವ ಗುಡ್ಡಗಳಿಗೆ, ಸಂಪರ್ಕ ಕಡಿದುಕೊಂಡ ರಸ್ತೆಗಳಿಗೆ ಭಯ ಬೀಳುತ್ತೇವೆ. ಆಗ ಮನೆಯ ಹಿರಿಯರು “ಈ ಮಳೆಗೆ, ಈ ಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಪ್ರವಾಸ? ಮಳೆ ಪೂರ್ಣ ತಿಳಿಯಾಗಲಿಯೆಂದು” ಲಕ್ಷ್ಮಣ ರೇಖೆಯನ್ನು ಎಳೆಯುತ್ತಾರೆ. ಅಲ್ಲಿಗೆ ಯೋಜಿಸಿದ ಕನಸಿಗೆ ಮುಕ್ತಿ ಸಿಕ್ಕಿದ ಹಾಗೆ!

    ಪ್ರತಿ ಶುಕ್ರವಾರದಂದು ಜುಮಾ ಪ್ರಾರ್ಥನೆಗೆ ದೊಡ್ಡ ಮಸೀದಿಗೆ ತೆರಳಿದರೆ, ಅಲ್ಲಿ ಹಿರಿಯ ತಲೆಗಳು, ಒಂದೆರಡು ಶಾಲಾ ಗುರುಗಳು, ನಮ್ಮಂತೆ ಗಲ್ಫ್ನಿಂದ ಆಗಮಿಸಿದ ಅನಿವಾಸಿಗಳು, ಚಡ್ಡಿ ದೋಸ್ತಿಗಳು, ಪರಿಚಿತರು ಮುಂತಾದವರು ಸಿಗುತ್ತಾರೆ. ನಮ್ಮ ಬಾಲ್ಯದಲ್ಲಿ ಹೀರೋ ಆಗಿ ಮರೆದವರು, ಈಗ ನಡೆದಾಡಲು ಆಶಕ್ತಗೊಂಡು, ಆಧಾರಕ್ಕೆ ಕುರ್ಚಿಯಲ್ಲಿ ಕೂತು ತಲೆ ಬಗ್ಗಿಸುತ್ತಾರೆ- ದೇವನ ಮುಂದೆ! ಅದೇ ಪಕ್ಕದ ಆವರಣದ ಕಬರಸ್ತಾನಕ್ಕೆ ಭೇಟಿ ನೀಡಿದರೆ ಇವರ ಅನೇಕ ಸಹಪಾಠಿ ಮಿತ್ರರು ಶಾಶ್ವತವಾಗಿ ಅಲ್ಲಿ ಮಲಗಿ ಕೊಂಡಿದ್ದಾರೆ. ಈ ಗೋರಿಗಳ ನಡುವೆ ನಮ್ಮವರನ್ನೂ ಹುಡುಕುತ್ತಾ ಸಾಗಿದಾಗ ಈ ಜೀವನ ಅದೆಷ್ಟು ವಿಚಿತ್ರ ಅನಿಸುತ್ತದೆ. ಈ ಬದುಕಿಗಾಗಿ ನಮ್ಮ ಹೋರಾಟ-ಹಾರಾಟ-ಅಲೆದಾಟ ಸುಮ್ಮನೆ ಅನಿಸಿ ಬಿಡುತ್ತದೆ. ಈ ಅಂತಸ್ತು, ಅಧಿಕಾರ, ವರ್ಚಸ್ಸು ಕೇವಲ ನಾಲ್ಕು ದಿನಗಳ ಬಯಲಾಟ ಅಂದುಕೊಳ್ಳುತ್ತದೆ. ದೇಶ-ವಿದೇಶ ಸುತ್ತಾಡಿದರೂ, ಗಗನದ ಮೇಲೆ ಹಾರಾಡಿದರೂ ಕೊನೆಗೆ ಈ ನೆಲವೇ ಕೊನೆಯ ನಿಲ್ದಾಣವಲ್ಲವೇ ಅನಿಸುತ್ತದೆ.

    ರಜೆ ಮುಗಿಯಲು ಇನ್ನೂ ಕೆಲವೇ ಕೆಲವು ದಿನಗಳಿರುವಾಗ ಏಕೋ ಊರು ತ್ಯಜಿಸಿ ಹೋಗಲು ಮನಸ್ಸೇ ಬಾರದು. ಮರಣ ಶಯ್ಯೆಯ ರೋಗಿಯ ಹಾಗೆ! ಹೆತ್ತವರ ಅಕ್ಕರೆ, ಮನೆಮಂದಿಗಳ ಪ್ರೀತಿ, ಪುಟ್ಟ ಮಕ್ಕಳ ಒಡನಾಟ ಆತ್ಮೀಯರ ಸ್ನೇಹ ಇತ್ಯಾದಿ ಅದೆಲ್ಲೂ ಗಾಢವಾಗಿ ಬಂಧಿಸಿ ಬಿಡುತ್ತದೆ. ದೇಶಿ ಅಡುಗೆಯ ರುಚಿಯಂತೂ ಬಾಯಿ ಚಪ್ಪರಿಸಿ ಬಿಡುತ್ತದೆ. ಈ ರುಚಿಯಂತೂ ದುಬಾಯಿಯಲ್ಲಿ ಸಿಗುವುದೇ ಇಲ್ಲ. ಇಲ್ಲಿಯಂತೆ, ಬಂಗುಡೆ, ಬೂತಾಯಿ, ಕಾಣೆಗೆ ಚೆನ್ನಾಗಿ ಮಸಾಲೆ ಹಚ್ಚಿ ಕಾಯಿಸಿದರೂ ಆ ಸ್ವಾದಿಷ್ಟವೇ ಕಾಣೆ!

    ಕೊನೆಯ ದಿನಗಳ್ಲಿ ಹೆಂಡತಿಯಂತೂ ತುಂಬಾ ಬ್ಯೂಸಿ. ಮನೆಗೆ ಅದು ಬೇಕು- ಇದು ಬೇಕೆಂಬುದು ಅರ್ಧ ದಿನವಂತೂ ಪೇಟೆಯಲ್ಲಿಯೇ ಸುತ್ತಾಡಿಕೊಂಡಿರುತ್ತಾರೆ. ಕಷಾಯ ಗುದ್ದುವ ಕಲ್ಲಿನಿಂದ ಹಿಡಿದು,ಪುನರ್‌ಪುಳಿ’ ಸಿಪ್ಪೆಯವರೆಗೆ ಎಲ್ಲವೂ ಅವರಿಗೆ ಬೇಕು. ಅಷ್ಟರಲ್ಲಿ ಖಾಲಿ ಬಿದ್ದಿದ್ದ ಸೂಟ್‌ಕೇಸ್‌ಗಳು ಒಂದೊಂದಾಗಿ ತುಂಬಿಕೊಳ್ಳುತ್ತದೆ. ಇದರ ನಡುವೆ ಊರಿನ ಆತ್ಮೀಯರ ಪಾರ್ಸಲ್‌ಗಳು ಬೇರೆ. ನನ್ನ ಮಗನಿಗೆ ಉಪ್ಪಿನಕಾಯಿ, ಮಗಳಿಗೆ ಪತ್‌ರೋಡೆ, ಮಗುವಿಗೆ ಚಿಕ್ಕಿ-ಚಕ್ಕುಲಿಯೆಂದು ಕೊಡುತ್ತಿರುತ್ತಾರೆ. ಅದರಲ್ಲಿ ಹಪ್ಪಳ, ಸಂಡಿಗೆ, ಚಿಪ್ಸ್ ಅಂತೂ ಮಾಮೂಲಿ. ಕೆಲವರು ತಮ್ಮ ಮಕ್ಕಳಿಗೆ ಹಲಸು, ಗೆಣಸು, ಅನನಾಸು, ತರಕಾರಿಗಳನ್ನೂ ಕೊಡುವುದಿದೆ. ಇವು ಎಲ್ಲಾ ಲೂಲು ಸೆಂಟರ್‌ನಲ್ಲಿ ಸಿಗುವುದಿಲ್ಲವೇ ಅಂದರೆ- “ಸಿಗಬಹುದು, ಆದರೆ ಮನೆಯಲ್ಲಿ ಬೆಳೆಸಿದ ಈ ರುಚಿಯುಂಟಾ?” ಎಂದು ಮರುಪ್ರಶ್ನೆ ಹಾಕುತ್ತಾರೆ. ನಮ್ಮಲ್ಲಿ ಅದಕ್ಕೆ ಉತ್ತರವೇ ಇರುವುದಿಲ್ಲ. ಪುಕ್ಕಟೆ ಹೊತ್ತುಕೊಂಡು ಸಾಗುವವರು ಸಿಕ್ಕರೆ, ಇವರು ಮಸಾಲೆ ಅರೆಯುವ ಕಲ್ಲು ಕೂಡ ನೀಡಲು ಸಿದ್ಧರಿರುತ್ತಾರೆ. ನಮಗಂತೂ ಮೈ ತುಂಬಾ ಹೆಪ್ಪುಗಟ್ಟಿದ ದಾಕ್ಷಿಣ್ಯ. “ಇಲ್ಲ” ಅನ್ನಲು ನಾಲಗೆಯೇ ಹೊರಳದು. ಕೆಲವು ಬಾರಿ ನಮ್ಮ ಹಳೇ ಬಟ್ಟೆಯನ್ನು ಇಲ್ಲೇ ತೊರೆದು, ಇವರ ಅಗ್ಗದ ಸರಕನ್ನೇ ಸೂಟುಕೇಸಿಗೆ ತುರುಕುವುದು ಹೆಚ್ಚು. ಬೇಸರವೆಂದರೆ, ಕೆಲವೊಮ್ಮೆ ಈ ವಸ್ತುಗಳಿಗೆ ಮೂರುಪಟ್ಟು ಬೆಲೆಯ ದಂಡ ಕಟ್ಟಿ ವಿಮಾನ ಹತ್ತುವುದೂ ಇದೆ. ಇವರು ನೀಡುವ ಬಸಳೆಗೆ ಬೀದಿ ಬದಿಯಲ್ಲಿ ನೂರು ರೂಪಾÊ ಇದ್ದರೆ, ಅಲ್ಲಿ ಆರು ನೂರು ರೂಪಾÊ ಪುಕ್ಕಟೆ ವಸೂಲಿ ಮಾಡುತ್ತಾರೆ. ನಮ್ಮವರಿಗೆ ಇದು ಅರ್ಥವೇ ಆಗುವುದಿಲ್ಲ.

    ಹೊರಡುವ ಹೊತ್ತು ಮನೆಗೆ ಒಡಹುಟ್ಟಿದವರು ಮಾತ್ರವಲ್ಲ, ವಠಾರದವರು ಬರುತ್ತಾರೆ. ಪುಟ್ಟ ಮಕ್ಕಳ ಕಿಸೆಗೆ ಒಂದಿಷ್ಟು ನೋಟು ತುರುಕಿ, ಎಲ್ಲರನ್ನು ಬೀಳ್ಕೊಂಡ ಬಳಿಕ ಉಳಿದವರು ಅಪ್ಪ-ಅಮ್ಮ. ಅವರನ್ನು ಆಲಂಗಿಸಿ ಕೊಂಡಾಗ ದುಃಖದ ಕಟ್ಟೆ ಒಡೆದು ಹೋಗುತ್ತದೆ. ಏನೋ ಸಂಕಟ ವೇದನೆ. ಅಲ್ಲಿ ಮತ್ತೆ ನಿಲ್ಲಲು ಸಾಧ್ಯವಾಗುವುದಿಲ್ಲ. ಕಾರು ಹತ್ತಿ ಎಲ್ಲರಿಗೂ ಕೈ ಬೀಸಿದಾಗ ಆ ಮಂಜಾದ ಕಣ್ಣುಗಳಲ್ಲಿ ಅಸ್ಪಷ್ಟ ಚಹರೆಗಳು, ಕಾರು ಮುಂದೆ ಮುಂದೆ ಸಾಗಿದಂತೆ, ಹೃದಯದ ಒಂದೊAದೇ ಬೇರುಗಳು ಕಡಿದು ಹೋದಂತಹ ನೋವು. ಮಕ್ಕಳ ನೇತ್ರಗಳಲ್ಲಿ ಹರಿಯುವ ಕಣ್ಣೀರು. ಹೆಂಡತಿಯ ಕಳೆಗುಂದಿದ ಮುಖ. ವಿಮಾನ ಏರಿ ಕೂತಾಗ ಎಲ್ಲರಲ್ಲೂ ಗಾಢ ಮೌನ. ಸಂತಸವೇ ಸತ್ತು ಹೋದ ಭಾವ.

    ದುಬಾಯಿಗೆ ಕಾಲಿಟ್ಟಾಗ ಅದೇ ಸುಡುವ ಬಿಸಿ ಗಾಳಿ, ಅಪರಿಚಿತ ಮುಖಗಳು, ಓಡಾಡುವ ಕಾರು-ಬಸ್ಸುಗಳು, ಚಲಿಸುವ ಮೆಟ್ರೋಗಳು, ಹಾರಾಡುವ ವಿಮಾನಗಳು. ಮರುದಿನ ಅದೇ ಕಛೇರಿ, ಅದೇ ಯಾಂತ್ರಿಕ ಬದುಕು. ನಾವು ಅದಕ್ಕೆ ಅನಿವಾರ್ಯವಾಗಿ ಹೊಂದಿಕೊಳ್ಳಲೇ ಬೇಕು. ಈ ದೇಶ ಅದೆಷ್ಟೋ ಶ್ರೀಮಂತವಾದರೂ, ಊರಿನ ಆ ಸುಖವಂತೂ ಇಲ್ಲಿ ಖಂಡಿತ ಸಿಗಲಾರದು. ಅಲ್ಲಿಯ ಗಾಳಿ, ಮಳೆ, ಚಳಿ, ನಮ್ಮವರ ಪ್ರೀತಿ, ಅಕ್ಕರೆ, ಒಲವು ಎಂದಿಗೂ ದೊರೆಯುವುದು. ಆ ಪುಟ್ಟ ಮಕ್ಕಳ ನಗು-ಕೇಕೆ-ಅಳು ಈಗ ಬರೇ ನೆನಪು ಮಾತ್ರ. ವಾರ ಕಳೆದರೂ ಮನಸ್ಸು ಊರಿನಿಂದ ಹೊರಗೆ ಬರಲು ಒಪ್ಪುವುದೇ ಇಲ್ಲ. ಅದಕ್ಕೆ ಕನಿಷ್ಟ ಎರಡು ವಾರವಾದರೂ ಬೇಕು. ಈಗ ರಾತ್ರಿ ಮಲಗಿದರೂ ಊರಿನದ್ದೇ ಕನಸು. ಅನಿವಾಸಿಗಳ ಬದುಕೇ ಹೀಗೆ. “ಇಲ್ಲಿ ಇರಲಾರೆ, ಅಲ್ಲಿ ಬದುಕಲಾರೆ” ಅನ್ನುವ ಆತಂತ್ರ ಸ್ಥಿತಿ. ಅದು ಹಣದ ಆಶೆಗೆ ಬೆನ್ನು ಹತ್ತಿ ಬಂದ ನಾಗಲೋಟವೋ, ಭವಿಷ್ಯದ ಬದುಕಿಗೆ ಹಾಕಿಕೊಂಡ ಅಡಿಪಾಯವೋ, ಸಂಸಾರವು ಕಟ್ಟಿ ಹಾಕಿದ ಬಂಧನವೋ ಅಥವಾ ನಮ್ಮ ಸ್ವದೇಶ ನಮಗೆ ಸೂಕ್ತ ಉದ್ಯೋಗ-ಅವಕಾಶ ನೀಡದ ವಂಚನೆಯೋ ತಿಳಿಯದು? ಆದರೆ ಮರುಭೂಮಿಯ ಕಾಂಕ್ರಿಟ್ ಕಾಡಿನಲ್ಲಿ ಬದುಕು ಸಾಗುತ್ತಲೇ ಇರುತ್ತದೆ. ಮತ್ತೆ ಆ ಮಳೆ, ತಂಪು, ಪ್ರೀತಿ, ಬಗೆ ಬಗೆಯ ಊಟ-ತಿಂಡಿ ಬೇಕು ಅನ್ನುವುದಾದರೆ ಒಂದು ವರುಷ ಕಾಯಲೇಬೇಕು. ಅಲ್ಲಿಯವರೆಗೆ ಸುಡುವ ಮರುಭೂಮಿಯಲ್ಲಿ ಹೆಜ್ಜೆಗಳು ಹಾಕುತ್ತಲೇ ಇರಬೇಕು ಪರದೇಶಿಯಾಗಿ.

  • ಮನೆಯಲ್ಲೇ ತಯಾರಿಸಬಹುದಾದ ವಿವಿಧ ಕ್ಲೀನಿಂಗ್ ಲಿಕ್ವಿಡ್ ಗಳು: ನೆಲ, ಬಟ್ಟೆ, ಪಾತ್ರೆ, ಕೈ ತೊಳೆಯಲು ಉಪಯೋಗ

    ಮನೆಯಲ್ಲೇ ತಯಾರಿಸಬಹುದಾದ ವಿವಿಧ ಕ್ಲೀನಿಂಗ್ ಲಿಕ್ವಿಡ್ ಗಳು: ನೆಲ, ಬಟ್ಟೆ, ಪಾತ್ರೆ, ಕೈ ತೊಳೆಯಲು ಉಪಯೋಗ

    ಮನೆಯನ್ನು ಸ್ವಚ್ಛಗೊಳಿಸಲು ನಾವು ಅನೇಕ ಬಗೆಯ ಕ್ಲೀನ‌ರ್ ಲಿಕ್ವಿಡ್‌ಗಳನ್ನು ಅಂಗಡಿಯಿಂದ ತಂದು ಬಳಸುತ್ತೇವೆ. ಆದರೆ ಕಡಿಮೆ ಬೆಲೆಯಲ್ಲಿ ಬಗೆ ಬಗೆಯ ಲಿಕ್ವಿಡ್‌ಗಳನ್ನು ಖುದ್ದಾಗಿ ಮನೆಯಲ್ಲಿಯೇ ತಯಾರಿಸಬಹುದು. ಇಲ್ಲಿದೆ ಅವುಗಳನ್ನು

    ತಯಾರಿಸುವ ಸುಲಭ ವಿಧಾನ:

    ಬಹೂಪಯೋಗಿ ಅಂಟುವಾಳ ಕಾಯಿ ನೀರು:
    ಎರಡು ಲೀಟರ್ ನೀರಿಗೆ 35 ಅಂಟುವಾಳ ಕಾಯಿಯನ್ನು ಹಾಕಿ. ಅರ್ಧ ಪ್ರಮಾಣ ಬರುವವರೆಗೆ, ಅಂದರೆ ಒಂದು ಲೀಟರ್ ಆಗುವವರೆಗೆ ಕುದಿಸಿ ನಂತರ ಅದರ ಬೀಜವನ್ನು ಬಿಸಾಡಿ. ಬೀಜ ತೆಗೆದ ಕಾಯಿಯನ್ನು ಪುನಃ ನೀರಿನಲ್ಲಿ ಹಾಕಿ ಸರಿಯಾಗಿ ಕಿವುಚಿ ತೆಗೆಯಿರಿ. ಬಳಿಕ ಅದನ್ನು ಸೋಸಿ ಅನೇಕ ರೀತಿಯಲ್ಲಿ ಈ ನೀರನ್ನು ಉಪಯೋಗಿಸಬಹುದು-
    A. ನೆಲ ಒರೆಸುವ ಲಿಕ್ವಿಡ್- ಮೂರು ಕಪ್ ಅಂಟುವಾಳ ಕಾಯಿ ನೀರು, ಎರಡು ಕಪ್ ವಿನೆಗರ್, ಎರಡು ಚಮಚ ಕಲ್ಲುಪ್ಪು ಬೆರೆಸಿ ಉಪಯೋಗಿಸಿ.
    B. ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಬೇರೇನೂ ಬೆರೆಸದೆ ಬರೀ ಅಂಟುವಾಳ ಕಾಯಿಯ ನೀರನ್ನಷ್ಟೇ ಉಪಯೋಗಿಸಬಹುದು.
    C. ಲೋಹದ ಪಾತ್ರೆಯನ್ನು ತೊಳೆಯಲು ಒಂದು ಕಪ್ ಅಂಟುವಾಳ ಕಾಯಿ ನೀರು ಹಾಗೂ ಒಂದು ಕಪ್ ವಿನೆಗರ್ ಬೆರೆಸಿ ಉಪಯೋಗಿಸಿ. ವಿನೆಗರ್ ಬದಲು ಹುಣಿಸೆಹಣ್ಣನ್ನೂ ಬಳಸಬಹುದು.
    D. ಹ್ಯಾಂಡ್‌ವಾಷ್ ಲಿಕ್ವಿಡ್. ಒಂದು ಕಪ್ ಅಂಟುವಾಳ ಕಾಯಿ ನೀರು, ಸ್ವಲ್ಪ ಆಲೊವೆರಾ ಜೆಲ್ ಬೆರೆಸಿ ಉಪಯೋಗಿಸಿ.

    ಅಡುಗೆ ಕೋಣೆಯಲ್ಲಿ ಬಳಸಿ:
    ಬಾಟಲಿಯಲ್ಲಿ ಒಂದು ಕಪ್ ನೀರು, ಕಾಲು ಕಪ್ ಕ್ಲೀನಿಂಗ್ ವೈಟ್ ವಿನೆಗರ್ (ಇದು ಲಭ್ಯವಿಲ್ಲದಿದ್ದರೆ ಅಡುಗೆಗೆ ಬಳಸುವ ವಿನೆಗರ್ ಅನ್ನೇ ಬಳಸಬಹುದು), ಮೂರ್ನಾಲ್ಕು ಹನಿ ಲಿಕ್ವಿಡ್ ಡಿಟರ್ಜೆಂಟ್ ಹಾಕಿದರೆ ಕ್ಲೀನಿಂಗ್ ಲಿಕ್ವಿಡ್ ರೆಡಿ. ಈ ದ್ರವವನ್ನು ಕಪಾಟು, ಫ್ರಿಜ್, ಅಡುಗೆ ಕೋಣೆಯ ಸಜ್ಜಾವನ್ನು ಸ್ವಚ್ಛಗೊಳಿಸಲು ಬಳಸಬಹುದು.

    ಜಿಡ್ಡು ಹೋಗಲಾಡಿಸಲು ಹೀಗೆ ಮಾಡಿ:
    ಒಂದು ಕಪ್ ಬಟ್ಟೆಸೋಪಿನ ಪುಡಿ ಅಥವಾ ಲಿಕ್ವಿಡ್, 4 ಚಮಚ ಅಡುಗೆ ಉಪ್ಪು, ಒಂದು ಚಮಚ ಟೂತ್‌ಪೇಸ್ಸು, ಅರ್ಧ ಕಪ್ ಕ್ಲೀನಿಂಗ್ ವೈಟ್ ವಿನೆಗರ್ ಮಿಕ್ಸ್ ಮಾಡಿ. ಅದನ್ನು ಸ್ಪೇ ಬಾಟಲಿಯಲ್ಲಿ ಹಾಕಿಡಿ.

    ನೊಣಗಳ ಕಾಟವೇ?:
    ಒಂದು ಬಾಟಲಿಯಲ್ಲಿ ಒಂದು ಕಪ್ ವಿನೆಗರ್, ಅದರಲ್ಲಿ ಮುಳುಗುವಷ್ಟು ಕಿತ್ತಳೆಹಣ್ಣಿನ ಸಿಪ್ಪೆಯನ್ನು ಹಾಕಿ. ಈ ಬಾಟಲಿಯನ್ನು ಮುಚ್ಚಿ, 15 ದಿನ ಬಿಸಿಲಿನಲ್ಲಿ ಇಡಿ. ನಂತರ ಅದನ್ನು ಸೋಸಿ, ನೊಣ ಬರುವ ಕಡೆ ಸ್ಪೇ ಮಾಡಬಹುದು.

    ಸಿಪ್ಪೆಯಿಂದ ಮಾಡಬಹುದು ಬಯೊ ಎನ್‌ಜೈಮ್:
    ಇದೊಂದು ಉತ್ತಮವಾದ ಕೆನ್ಸರ್. ಇದನ್ನು ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು, ನೆಲ ಒರೆಸಲು ಉಪಯೋಗಿಸಬಹುದು. ಒಂದು ದೊಡ್ಡ ಬಾಟಲಿಯಲ್ಲಿ ಒಂದು ಕಪ್ ಬೆಲ್ಲ, ಯಾವುದೇ ತರಕಾರಿ ಅಥವಾ ಹಣ್ಣಿನ ಸಿಪ್ಪೆ ಮೂರು ಕಪ್ (ಬಾಳೆಹಣ್ಣು, ಕಿತ್ತಳೆ, ಮೋಸಂಬಿ, ನಿಂಬೆಹಣ್ಣು, ಈರುಳ್ಳಿ, ಬೆಳ್ಳುಳ್ಳಿಯ ಯಾವುದಾದರೂ ಸಿಪ್ಪೆ ಬಳಸಬಹುದು. ಒಂದೇ ಬಗೆಯ ತರಕಾರಿ ಸಿಪ್ಪೆಯಾದರೂ ಸರಿ, ಮಿಶ್ರ ತರಕಾರಿ ಸಿಪ್ಪೆಯೂ ನಡೆದೀತು. ಬೇರೆ ಬೇರೆಯಾಗಿಯೂ ಉಪಯೋಗಿಸಬಹುದು ಅಥವಾ ಎಲ್ಲ ಬಗೆಯ ಸಿಪ್ಪೆಯನ್ನೂ ಒಂದರಲ್ಲೇ ಹಾಕಬಹುದು), 10 ಕಪ್ ನೀರು ಹಾಕಿ ಬಾಟಲಿಯನ್ನು ಮೂರು ತಿಂಗಳು ಮುಚ್ಚಿಡಬೇಕು.
    ಪ್ರತಿದಿನ ಒಮ್ಮೆ ಮುಚ್ಚಳವನ್ನು ತೆಗೆದು ಪುನಃ ಮುಚ್ಚಿಡಬೇಕು. ದಿನಾಲೂ ಅದರಲ್ಲಿ ಗ್ಯಾಸ್ ತುಂಬುತ್ತದೆ. ಆದ್ದರಿಂದ ದಿನಕ್ಕೊಮ್ಮೆ ಮುಚ್ಚಳ ತೆಗೆಯದಿದ್ದರೆ ಬಾಟಲಿ ಒಡೆದುಹೋಗುವ ಸಂಭವ ಇರುತ್ತದೆ. ಮೂರು ತಿಂಗಳಾದ ನಂತರ ಸೋಸಿ ಉಪಯೋಗಿಸಿ. ಇದನ್ನು ಗಿಡಗಳಿಗೆ ಫರ್ಟಿಲೈಜರ್ ರೀತಿ ಕೂಡ ಉಪಯೋಗಿಸಬಹುದು.

    ನೆಲ ಒರೆಸುವ ಲಿಕ್ವಿಡ್:
    ಒಂದು ಕಪ್ ನೀರಿಗೆ ನಾಲ್ಕು ಚಮಚ ಉಪ್ಪು, ಎರಡು ಚಮಚ ಅಡುಗೆ ಸೋಡ, ಅರ್ಧ ಕಪ್ ವೈಟ್ ವಿನೆಗರ್, ಐದು ಕರ್ಪೂರ ಹಾಕಿ ಬೆರೆಸಿ ಉಪಯೋಗಿಸಿ. ಇದನ್ನು ಕೂಡಲೇ ಉಪಯೋಗಿಸಬಹುದು. ಪರಿಮಳಭರಿತ ಆಗಬೇಕಾದರೆ ಎರಡು ಮೂರು ಹನಿ ಎಸೆನ್ಸಿಯಲ್ ಆಯಿಲ್ ಅನ್ನು ಬೆರೆಸಬಹುದು.

  • ‘ಆಟಿ ಅಮಾಸೆ’ ಕಷಾಯಕ್ಕೆ ಭಾರಿ ಬೇಡಿಕೆ:ಮಾಡುವ ವಿಧಾನ ಹೇಗೆ?

    ‘ಆಟಿ ಅಮಾಸೆ’ ಕಷಾಯಕ್ಕೆ ಭಾರಿ ಬೇಡಿಕೆ:ಮಾಡುವ ವಿಧಾನ ಹೇಗೆ?

    ನಸುಕಿನಿಂದ ಸರದಿ ಸಾಲಿನಲ್ಲಿ ನಿಂತ ಜನರು ಆಟಿ ಕಷಾಯ ವಿತರಣೆ ಆರಂಭವಾಗುತ್ತಿದ್ದಂತೆ ಉತ್ಸಾಹದಿಂದ ಸೇವಿಸಲು ಆರಂಭಿಸಿ ಬಾಟಲಿಗಳಲ್ಲೂ ತುಂಬಿಕೊಂಡು ಹೋದರು. ಕೃತಾರ್ಥ ಭಾವದೊಂದಿಗೆ ರೋಗನಿರೋಧಕ ಶಕ್ತಿ ಹೆಚ್ಚಾಗುವ ಭರವಸೆಯಿಂದ ಖುಷಿಪಟ್ಟರು.

    ಗುರುವಾರ ಮಂಗಳೂರು ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಪಾಲೆ (ಹಾಲೆ) ಮರದ ತೊಗಟೆಯ ಕಷಾಯ ಸೇವಿಸುವ ಸಂಭ್ರಮ ಕಂಡುಬಂದಿತು. ಮಂಗಳೂರು ನಗರದಲ್ಲಿ ವಿವಿಧ ಸಂಘಟನೆಗಳು, ಆಯುರ್ವೇದ ಆಸ್ಪತ್ರೆಗಳು ಮತ್ತು ಗಿಡಮೂಲಿಕೆಗಳಿಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಆಟಿ ಕಷಾಯ ವಿತರಣೆ ಕಾರ್ಯಕ್ರಮಗಳು ನಡೆದವು. ಮನೆಗಳಲ್ಲೂ ಕಷಾಯ ಮತ್ತು ಮೆಂತೆ ಗಂಜಿ ಸೇವನೆಯ ಖುಷಿ ಜೋರಾಗಿತ್ತು.

    ಕದ್ರಿ ಪಾರ್ಕ್‌ನಲ್ಲಿ ತುಳುವ ಬೊಳ್ಳಿ ಪ್ರತಿಷ್ಠಾನ ಹಾಗೂ ಡಿಂಕಿ ಡೈನ್ ಹೋಟೆಲ್, ಆಯುಷ್ ಇಲಾಖೆ ಮತ್ತು ಸಾವಯವ ಕೃಷಿಕ ಗ್ರಾಹಕರ ಬಳಗದ ವತಿಯಿಂದ ವೇದಮಾಯುರ್ವೇದ ಆಸ್ಪತ್ರೆಯಲ್ಲಿ, ಅಶೋಕನಗರದ ಕರ್ನಾಟಕ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಷರಬತ್ತುಕಟ್ಟೆ ಸಮೀಪದ ಪದವು ಪ್ರೌಢಶಾಲೆಯ ಆವರಣ, ಶಾರದಾ ಮಹಿಳಾ ಮಂಡಲ ಸೇರಿದಂತೆ ಅನೇಕ ಕಡೆಗಳಲ್ಲಿ ಕಷಾಯ, ಮೆಂತೆ ಗಂಜಿ ವಿತರಣೆ ನಡೆಯಿತು.

    ಕೆಲವು ಮನೆಗಳವರು ಬುಧವಾರವೇ ಪಾಲೆ ಮರವನ್ನು ಗುರುತಿಸಿ, ಅದಕ್ಕೆ ಬಾಳೆಗಿಡದ ಹಗ್ಗ ಅಥವಾ ನೂಲು ಕಟ್ಟಿ ಬುಡದಲ್ಲಿ ಬೆಣಚು ಕಲ್ಲೊಂದನ್ನು ಇರಿಸಿ ಬಂದಿದ್ದರು. ಶುಕ್ರವಾರ ಸೂರ್ಯೋದಯಕ್ಕೆ ಮೊದಲೇ ಹೋಗಿ ಬೆಣಚು ಕಲ್ಲಿನಿಂದ ಮರದ ತೊಗಟೆಯ ತುಂಡನ್ನು ತೆಗೆದುಕೊಂಡು ಬಂದಿದ್ದರು. ಕರಿಮೆಣಸು, ಓಮ, ಬೆಳ್ಳುಳ್ಳಿ, ಜೀರಿಗೆ ಸೇರಿಸಿ ರುಬ್ಬಿ ಸೋಸಿದ ನಂತರ ಬೆಣಚು ಕಲ್ಲನ್ನು ಕೆಂಡಕ್ಕೆ ಹಾಕಿದ ನಂತರ ಕಷಾಯಕ್ಕೆ ಹಾಕಿದರು. ನಂತರ ಕಷಾಯ ಸೇವನೆ ಮಾಡಿದರು.

    ಪಾಲೆ ಗಿಡ ನೆಡುವ ಸಂಕಲ್ಪ
    “ತುಳುವ ಬೊಳ್ಳಿ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲೆ ಮರಗಳನ್ನು ನೆಡುವ ಸಂಕಲ್ಪ ಮಾಡಲಾಯಿತು. ಅರಣ್ಯ ಇಲಾಖೆಯಿಂದ ತೆಗೆದುಕೊಂಡು ಬಂದ ಎರಡು ಗಿಡಗಳನ್ನು ಆಯ್ದ ಜಾಗದಲ್ಲಿ ಈ ವಾರದಲ್ಲೇ ಸಾಂಕೇತಿಕವಾಗಿ ನೆಡುವುದಾಗಿ ತಿಳಿಸಲಾಯಿತು. ‘ಒಂದು ವರ್ಷದಲ್ಲಿ ಎಷ್ಟು ಸಾಧ್ಯವೋ ಅಷ್ಟು ಗಿಡಗಳನ್ನು ನಗರದಲ್ಲಿ ನೆಡಲಾಗುವುದು” ಎಂದು ಪ್ರತಿಷ್ಠಾನದ ದಯಾನಂದ ಕತ್ತಲ್‌ಸಾರ್‌ ತಿಳಿಸಿದರು.

    “ಶರೀರದಲ್ಲಿರುವ ವಿಷಾಂಶಗಳನ್ನು ಹೊರಹಾಕಿ ವರ್ಷವಿಡೀ ಆರೋಗ್ಯವಂತರಾಗಿ ಲವಲವಿಕೆಯಿಂದಿರಲು ಪಾಲೆ ಮರದ ಕಷಾಯ ಸಹಕರಿಸುತ್ತದೆ. ಆಟಿಯ 30 ದಿನಗಳಲ್ಲಿ 30 ಬಗೆಯ ಸೊಪ್ಪುಗಳನ್ನು ತಿನ್ನುತ್ತಿದ್ದರು ಎನ್ನಲಾಗುತ್ತದೆ.”
    ರಾಜೇಶ್ ಆಳ್ವ ತುಳುವರ್ಲ್ಡ್ ಫೌಂಡೇಷನ್ ನಿರ್ದೇಶಕ

    “ನಾನು ಸಣ್ಣ ವಯಸ್ಸಿನಿಂದಲೇ ಆಟಿ ಕಷಾಯ ಕುಡಿಯುತ್ತಿದ್ದೇನೆ. ರೋಗನಿರೋಧಕ ಶಕ್ತಿ ಹೆಚ್ಚಿ ಜ್ವರ ಶೀತ ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಇದರಿಂದ ಪರಿಹಾರ ಸಿಗುತ್ತದೆ ಎಂಬುದನ್ನು ಅನುಭವಿಸಿ ತಿಳಿದುಕೊಂಡಿದ್ದೇನೆ.”
    ಸರಿತಾ ಜನಾರ್ದನ್‌ ಶಿಕ್ಷಕಿ

    73 ಬಗೆಯ ಖಾದ್ಯ; ಸಾವಿರಾರು ಮಂದಿಗೆ ಕಷಾಯ
    ಅರಣ್ಯದಲ್ಲಿ ಸಿಗುವ ಕಾಯಿಗಳು ಮತ್ತು ಗಡ್ಡೆಗಳು ಮನೆಗಳ ಹತ್ತಿರ ಬೆಳೆಯುವ ಸೊಪ್ಪುಗಳನ್ನು ಸಂಗ್ರಹಿಸುವುದರಲ್ಲಿ ಕಡಬ ತಾಲ್ಲೂಕಿನ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಮಕ್ಕಳು ಬುಧವಾರ ಬ್ಯುಸಿಯಾಗಿದ್ದರು. ಇವುಗಳನ್ನೆಲ್ಲ ಬುಟ್ಟಿಗಳಲ್ಲಿ ತೆಗೆದುಕೊಂಡು ಬಂದು ಕತ್ತಲಾಗುವಷ್ಟರಲ್ಲಿ ಆಯ್ದು ಅಡುಗೆಗೆ ಸಿದ್ಧ ಮಾಡಿಟ್ಟರು. ಗುರುವಾರ ಮುಂಜಾನೆಯಿಂದ ಶಾಲೆ ಆವರಣದಲ್ಲಿ ತುಳುನಾಡಿನ ಆಹಾರ ಪದಾರ್ಥಗಳ ಘಮ. ಹಿಂದಿನ ತಂದಿಟ್ಟ ಸೊಪ್ಪು ಕಾಯಿ ಗಡ್ಡೆ ಇತ್ಯಾದಿ ಸೇರಿ ಒಟ್ಟು 73 ಬಗೆಯ ಪದಾರ್ಥಗಳು ಕೆಲವೇ ತಾಸುಗಳಲ್ಲಿ ತಯಾರಾದವು.
    ಶಾಲೆಯ ಒಂದೂವರೆ ಸಾವಿರ ಮಕ್ಕಳು ಅವರ ಪಾಲಕರು ಗಣ್ಯರು ಸೇರಿ ಸಾವಿರಾರು ಮಂದಿ ‘ಆಟಿ ಕಷಾಯ’ ಕುಡಿದು ಆಹಾರದ ಸವಿಯನ್ನುಂಡರು. ಪ್ರದರ್ಶನಕ್ಕೆ ಇರಿಸಿದಲ್ಲಿ ಉಪಯೋಗ ಮತ್ತು ಸಿದ್ಧಪಡಿಸುವ ವಿಧಾನದ ಮಾಹಿತಿ ಫಲಕಗಳು ಇದ್ದವು. ಶಾಲೆಯಲ್ಲಿ ಹಲವಾರು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬರುತ್ತಿದೆ. ನೇತ್ರಾವತಿ ತುಳುಕೂಟದ ಸಹಯೋಗದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕೆಸುವಿನ ಎಲೆ ಕೆಸುವಿನ ದಂಟು ಕರಂಡೆಕಾಯಿ ಪುನರ್ಪುಳಿ ಸಿಪ್ಪೆ ಚೇವು ಕೇನೆ ತಿಮರೆ ಮುಂತಾದವುಗಳ ಜೊತೆ ಪ್ರಚಲಿತವಿಲ್ಲದ ಅನೇಕ ಆಹಾರ ಪದಾರ್ಥಗಳ ಪರಿಚಯ ಮಾಡಲಾಯಿತು.