Tag: ಮುಖ್ಯ ಸುದ್ದಿ

  • ಪ್ರವಾದಿ ಮುಹಮ್ಮದ್(ಸ) ಜಗತ್ತು ಕಂಡ ಮಾದರಿ ಶಿಕ್ಷಕ

    ಪ್ರವಾದಿ ಮುಹಮ್ಮದ್(ಸ) ಜಗತ್ತು ಕಂಡ ಮಾದರಿ ಶಿಕ್ಷಕ

    ಮುಹಮ್ಮದರು(ಸ) ಪ್ರವಾದಿಯಾಗಿದ್ದರು. ದೇವನು ಇವರನ್ನು ಜನರಿಗೆ ದೇವನ ಆದೇಶ ಮತ್ತು ಸದ್ವಿವೇಕವನ್ನು ಕಲಿಸಿ ಕೊಡಲಿಕ್ಕಾಗಿ ಕಳುಹಿಸಿಕೊಟ್ಟರು. ಇವರು ಜಗತ್ತು ಕಂಡ ಅದ್ವಿತೀಯ ಶಿಕ್ಷಕರಾಗಿದ್ದರು. ಮುಹಮ್ಮದರು ಮೊತ್ತ ಮೊದಲು ಮದೀನಾದ ಮಸೀದಿಯ ಒಂದು ಭಾಗದಲ್ಲಿ ಶಿಕ್ಷಣ ಕೇಂದ್ರವನ್ನು ಆರಂಭಿಸಿದರು. ಅಲ್ಲಿ ಸರಿ ಸುಮಾರು 70ರಿಂದ 80 ವಿದ್ಯಾರ್ಥಿಗಳಿದ್ದರು. ಪ್ರವಾದಿಯವರಿಂದ ನೇರವಾಗಿ ಶಿಕ್ಷಣ ಮತ್ತು ತರಬೇತಿಯನ್ನು ಗಳಿಸಿದವರಿಗೆ ಅವರ ಪ್ರತಿಭೆ ಸಾಮರ್ಥ್ಯಗಳ ಆಧಾರದಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಡಲಾಯಿತು. ಅವರ ಪೈಕಿ ಕೆಲವರು ಶಿಕ್ಷಕರಾಗಿಯೇ ಮುಂದುವರಿದರು. ಕೇವಲ ಮದೀನಾದಲ್ಲಿ ಮಾತ್ರವಲ್ಲ ಜಗತ್ತಿನ ವಿವಿಧೆಡೆಗಳಲ್ಲಿ ಹೆಚ್ಚಾಗಿ ಅವರು ತಮ್ಮ ಶಿಕ್ಷಕ ವೃತ್ತಿಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು ಮತ್ತು ದೊಡ್ಡ ಸಂಖ್ಯೆಯ ಶಿಕ್ಷಕ ವೃಂದವನ್ನು ಹೊಂದಿದ್ದರು.

    ಶಿಕ್ಷಕ ಎಂಬ ನೆಲೆಯಲ್ಲಿ ಪ್ರವಾದಿ ಮುಹಮ್ಮದರ(ಸ) ಜೀವನದಿಂದ ನಾವು ಗಳಿಸಬೇಕಾದ ಪಾಠಗಳು ಸಾಕಷ್ಟಿವೆ. ಇವುಗಳ ಪೈಕಿ ಮೊದಲನೆಯದು ಅವರ ಮಾದರಿ ಜೀವನ. ಪ್ರವಾದಿ ಮುಹಮ್ಮದರು(ಸ) ಸದಾ ಹೇಳುತ್ತಿದ್ದುದನ್ನು ಜೀವನದಲ್ಲಿಯೂ ಪಾಲಿಸಿ ತೋರಿಸುತ್ತಿದ್ದರು. ಇದರಿಂದಾಗಿ ಜನರಿಗೆ ಅವರನ್ನು ಅನುಸರಿಸಲು ಸುಲಭವಾಯಿತು. ಇತರರಿಗೆ ಬೋಧಿಸುತ್ತಾ ಎಲ್ಲ ವಿಷಯಗಳನ್ನು ಚಾಚು ತಪ್ಪದೆ ಸ್ವಂತ ಪಾಲಿಸಿದಾಗ ಜನರಿಗೆ ಅವರ ಆಜ್ಞೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅನುಸರಿಸಲು ಸುಲಭವಾಗುತ್ತದೆ. ಇದರ ಕಾರಣದಿಂದಾಗಿ ಅವರಿಂದ ಶಿಕ್ಷಣವನ್ನು ಗಳಿಸಿದವರ ಜೀವನದಲ್ಲಿಯೂ ಅವರ ಶಿಕ್ಷಣ ತರಬೇತಿಯ ಪ್ರತಿಫಲನವು ಕಂಡುಬರುತ್ತಿತ್ತು. ನಮ್ಮ ಶಿಕ್ಷಕ ವೃಂದವು ಈ ಆದರ್ಶವನ್ನು ಅಳವಡಿಸಿಕೊಂಡರೆ ಮಾದರಿ ಸಮಾಜವನ್ನು ಕಟ್ಟಿ ಬೆಳೆಸಲು ಖಂಡಿತ ಸಹಾಯಕವಾಗಬಹುದು.

    ಯಾರನ್ನು ಸುಶಿಕ್ಷಿತರನ್ನಾಗಿ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದರೋ ಅವರೊಂದಿಗೆ ಪ್ರವಾದಿಯವರು(ಸ) ಆತ್ಮೀಯವಾಗಿ ಒಡನಾಟ ಇಟ್ಟುಕೊಂಡಿದ್ದರು. ಪ್ರವಾದಿಯವರ ಒಡನಾಟದಿಂದಾಗಿ ಅನೇಕ ಜನರು ಶೂನ್ಯದಿಂದ ಎತ್ತರಕ್ಕೆ ಬೆಳೆದರು. ಜೀತದಾಳು ಆಗಿದ್ದ ಬಿಲಾಲ್ ಆಪ್ತ ಸಂಗಾತಿಯಾಗಿ ಮಾರ್ಪಟ್ಟರು. ಜಗಳಗಂಟಿಯಾಗಿದ್ದ ಝುಬೇರ್ ಸೇನಾನಿಯಾಗಿ ಮಾರ್ಪಟ್ಟರು. ಮಿತಬಾಷಿಯಾಗಿದ್ದ ಮಿಸ್‌ಅಬ್ ಬಿನ್ ಉಮೈರ್ ಪ್ರವಚನಕಾರರಾದರು. ಬೇಟೆಗಾರರಾಗಿದ್ದ ಹಂಝ ಸೇನಾ ಪಡೆಯ ನಾಯಕರಾದರು. ಮುಂಗೋಪಿಯಾಗಿದ್ದ ಉಮರ್ ನಾಯಕರಾಗಿ ಮಾರ್ಪಟ್ಟರು. ಗೃಹಿಣಿ ಯಾಗಿದ್ದ ಆಯಿಷ ಉಪದೇಶಕಿ ,ವೈದ್ಯಕೀಯ ಮತ್ತು ಸಂಖ್ಯಾಶಾಸ್ತ್ರದ ತಜ್ಞೆಯಾಗಿ ಬೆಳೆದು ನಿಂತರು. ನಮ್ಮ ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅವರ ಆಗುಹೋಗುಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅವರೊಂದಿಗೆ ಒಡನಾಡಿದ್ದೆ ಆದರೆ ಖಂಡಿತವಾಗಿಯೂ ಮಕ್ಕಳ ಪ್ರತಿಭೆಗಳನ್ನು ಸಕಾರಾತ್ಮಕಾಗಿ ಬೆಳೆಸಬಹುದಾಗಿದೆ.

    ಪ್ರವಾದಿಯವರು(ಸ) ಶಿಕ್ಷಣ ನೀಡುತ್ತಿದ್ದ ವಿಧಾನವೇ ಬಹಳ ಸುಂದರ .ವಿವಿಧ ರೀತಿಯ ಪರಿಕಲ್ಪನೆಗಳನ್ನು ವಿವರಿಸಲು ಹಲವಾರು ಉದಾಹರಣೆಗಳನ್ನು ಅವರು ಬಳಸುತ್ತಿದ್ದರು. ಸಾಮಾನ್ಯ ಮನುಷ್ಯನ ಮೆದುಳು ವಿಷಯವನ್ನು ಅರ್ಥಮಾಡಿಕೊಳ್ಳಲು ಹಲವಾರು ಮಿತಿಗಳನ್ನು ಹೊಂದಿರುತ್ತದೆ .ಆದುದರಿಂದ ಉದಾಹರಣೆಗಳ ಮೂಲಕ ವಿಷಯಗಳನ್ನು ತುಂಬಾ ಸರಳವಾಗಿ ಅರ್ಥ ಮಾಡಿಸಿಕೊಡಬಹುದಾಗಿದೆ.
    ಪ್ರವಾದಿ ಮುಹಮ್ಮದರು(ಸ) ಹೇಳಿದರು: “ಯಾರ ಕೈಯಲ್ಲಿ ನನ್ನ ಆತ್ಮ ಇದೆಯೋ ಅವನ ಆಣೆ .ಸತ್ಯ ವಿಶ್ವಾಸಿಯ ಉದಾಹರಣೆಯು ಜೇನುನೊಣದಂತಿದೆ. ಅದು ಶುದ್ಧ ಮತ್ತು ಆರೋಗ್ಯಕರವಾದದನ್ನು ಮಾತ್ರ ತಿನ್ನುತ್ತದೆ. ಶುದ್ಧವಾದದನ್ನು ಮತ್ತು ಉಪಯುಕ್ತವಾದದ್ದನ್ನೇ ನೀಡುತ್ತದೆ.”

    “ಮರುಭೂಮಿಯಲ್ಲಿ ತನ್ನ ಒಂಟೆಯನ್ನು ಕಳೆದುಕೊಂಡು ವ್ಯಥೆಪಡುವಂತಹ ವ್ಯಕ್ತಿಗೆ ಅನಿರೀಕ್ಷಿತವಾಗಿ ಆ ಒಂಟೆ ಮರಳಿ ಸಿಗುವಾಗ ಆಗುವ ಖುಷಿಗಿಂತಲೂ ತನ್ನ ಪಾಪಗಳಿಗೆ ಪ್ರಾಯಶ್ಚಿತಪಟ್ಟು ಮರಳುವ ದಾಸನ ಬಗ್ಗೆ ದೇವನು ಹೆಚ್ಚು ಸಂತೋಷಗೊಳ್ಳುತ್ತಾನೆ” ಈ ರೀತಿಯ ಮನಮುಟ್ಟುವ ಉದಾಹರಣೆಗಳನ್ನು ಯಾರು ಸುಲಭದಲ್ಲಿ ಮರೆತುಬಿಡುವುದಿಲ್ಲ .ನಮ್ಮ ಶಿಕ್ಷಕರು ಈ ಉದಾಹರಣೆಗಳ ಮೂಲಕ ಮಕ್ಕಳಿಗೆ ಪಾಠ ಮನದಟ್ಟು ಮಾಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು.

    ಕೆಲವರಿಗೆ ತಮ್ಮ ವಿದ್ವತ್ತನ್ನು ಅತಿಯಾಗಿ ಪ್ರದರ್ಶಿಸುವ ಅಭ್ಯಾಸವಿರುತ್ತದೆ. ಅಂತಹವರು ಕಠಿಣ ಪದಗಳನ್ನು ಬಳಸುವ ಮೂಲಕ ವಿಷಯಗಳನ್ನು ಪ್ರಸ್ತುತಪಡಿಸುತ್ತಾರೆ. ಆದರೆ ಇದು ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ. ಏಕೆಂದರೆ ವ್ಯಕ್ತಿಗೆ ವಿಷಯ ಅರ್ಥವಾಗಬೇಕೆಂದರೆ ಅದು ಸರಳವಾಗಿರಬೇಕು. ಸಂಕ್ಷಿಪ್ತವಾಗಿರಬೇಕು ಮತ್ತು ನೇರವಾದ ನುಡಿಯಾಗಿರಬೇಕು. ಪ್ರವಾದಿ ಮುಹಮ್ಮದರ(ಸ) ಜೀವನದುದ್ದಕ್ಕೂ ಅವರು ಬಳಸಿದಂತಹ ಕೆಲವು ವಚನಗಳು ನಮ್ಮ ಗಮನವನ್ನು ಸೆಳೆಯುತ್ತದೆ. ಎಷ್ಟು ಸಣ್ಣ ಮತ್ತು ನೇರವಾದ ನುಡಿಗಳ ಮೂಲಕ ಒಂದು ದೊಡ್ಡ ವಿಷಯವನ್ನು ಪ್ರಸ್ತುತಪಡಿಸಬಹುದು ಎಂಬ ಕಲೆಯನ್ನು ನಾವು ಪ್ರವಾದಿಯವರ ಶಿಕ್ಷಣ ರೀತಿಯಿಂದ ಅರ್ಥಮಾಡಿಕೊಳ್ಳಬಹುದು. ಸ್ವಚ್ಛತೆಯು ವಿಶ್ವಾಸದ ಅರ್ಧಾಂಶವಾಗಿದೆ. ಕುಡಿಯುವ ನೀರನ್ನು ಮೊದಲು ಗಮನಿಸಿ ನೋಡಿ. ವಿನಮ್ರತೆಯು ವಿಶ್ವಾಸದ ಒಂದು ಭಾಗವಾಗಿದೆ .ಸ್ವರ್ಗವು ತಾಯಿಯ ಪಾದದಡಿಯಲ್ಲಿದೆ. ನಿಮ್ಮ ನೆರೆಹೊರೆಯವರಿಗೂ ನಿಮ್ಮ ಮೇಲೆ ಹಕ್ಕಿದೆ. ಸಭ್ಯತೆ ವಿಶ್ವಾಸದ ಅರ್ಧಾಂಶವಾಗಿದೆ. ಅನುಚಿತ ವರ್ತನೆಯು ಅನ್ಯಾಯವಾಗಿದೆ. ಈ ರೀತಿಯ ಸುಲಭವಾದ ನೇರವಾದ ಸಂದೇಶಗಳು ಜನರು ಸುಲಭವಾಗಿ ಅರ್ಥ ಮಾಡಿಕೊಳ್ಳಲು ನೆನಪಿಟ್ಟುಕೊಳ್ಳಲು ಮತ್ತು ಅನುಸರಿಸಲು ಸಾಧ್ಯವಾಗುತ್ತದೆ.

    ಕಲಿಕೆಯ ಮಧ್ಯೆ ವಿರಾಮ ನೀಡುವುದು ಬಹಳ ಮುಖ್ಯ. ಪ್ರವಾದಿಯವರು ಇದನ್ನು ಚೆನ್ನಾಗಿ ಬಳಸುತ್ತಿದ್ದರು. ಜನರಿಗೆ ಬೇಸರವಾಗದಂತೆ ಸೂಕ್ತ ಸಮಯವನ್ನು ಉಪದೇಶ ನೀಡಲು ಆರಿಸಿಕೊಳ್ಳುತ್ತಿದ್ದರು. ಧರ್ಮೋಪದೇಶ ಮತ್ತು ಜ್ಞಾನ ಸಂಪಾದನೆ ಸಹಚರರಿಗೆ ಬೇಸರ ಮತ್ತು ಹೊರೆಯಾಗದಂತೆ ನೋಡಿಕೊಂಡರು. ಕೆಲವೊಮ್ಮೆ ಅವರು ಸಹಚರರಿಗೆ ಹೊಸದಾಗಿ ಏನನ್ನು ಕಲಿಸುತ್ತಿರಲಿಲ್ಲ. ಅದಕ್ಕೆ ಅವರೊಡನೆ ಕಾರಣವನ್ನು ಕೇಳಿದಾಗ ಹೆಚ್ಚು ಹೊರೆ ಮಾಡಲು ಬಯಸುವುದಿಲ್ಲ ಎಂದು ಉತ್ತರಿಸಿದರು. ಪ್ರವಾದಿಯವರು ತರಬೇತಿಗಳ ನಡುವೆ ಮನಸ್ಸನ್ನು ಉಲ್ಲಾಸಗೊಳಿಸುವಂತೆ ವಿರಾಮ ನೀಡುವುದರಲ್ಲಿ ನಂಬಿಕೆಯನ್ನು ಹೊಂದಿದ್ದರು. ಆಧುನಿಕ ಶಿಕ್ಷಣ ವ್ಯವಸ್ಥೆಯು ಕೇವಲ ಅಂಕಿಗಳ ಸುತ್ತ ಗಿರಕಿ ಹೊಡೆಯುತ್ತಿರುವುದರಿಂದ ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚಿನ ಶಾಲೆಗಳು ಮರೆತಿವೆ. ಪಠ್ಯೇತರ ಚಟುವಟಿಕೆಗಳಿಗಾಗಿ ಆ ತೋಟಗಳಿಗಾಗಿ ಮೀಸಲಾಗಿರುವ ತರಗತಿಗಳನ್ನು ಇತರ ವಿಷಯಗಳನ್ನು ಕಲಿಸುವುದಕ್ಕಾಗಿ ಉಪಯೋಗಿಸಲಾಗುತ್ತದೆ. ಈ ಮೂಲಕ ಮಕ್ಕಳಿಗೆ ವಿರಾಮ ಮತ್ತು ಮನಸ್ಸಿಗೆ ಉಲ್ಲಾಸ ಸಿಗುವ ಅವಕಾಶದಿಂದಲೂ ವಂಚಿತಗೊಳಿಸಲಾಗುತ್ತಿದೆ. ಈ ಬಗ್ಗೆ ಶಿಕ್ಷಕರು ವಿಶೇಷ ಗಮನವನ್ನು ಹರಿಸಬೇಕು.

    ಪ್ರವಾದಿಯವರು(ಸ) ಎಂದೂ ಸುದೀರ್ಘವಾಗಿ ವಿಷಯ ಮಂಡನೆ ಮಾಡುತ್ತಿರಲಿಲ್ಲ. ಕೇಳುಗರು ಆಲಿಸಲು ಬಯಸಿದ್ದಾರೆ ಎಂಬAತಹ ಪರಿಸ್ಥಿತಿ ಇದ್ದ ಸ್ಥಳದಲ್ಲಿ ಮಾತ್ರ ಅವರು ಮಾತನಾಡುತ್ತಿದ್ದರು. ಕೇಳುಗರನ್ನು ದಣಿಯುವಂತೆ ಮಾಡುವುದು ಪ್ರವಾದಿಯವರಿಗೆ ಇಷ್ಟವಿರಲಿಲ್ಲ .ಆದುದರಿಂದ ಕಲಿಯುವ ವಿಷಯದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವ ಹಂತ ತಲುಪದ ಹಾಗೆ ಶಿಕ್ಷಕರು ನೋಡಿಕೊಳ್ಳಬೇಕು ಮತ್ತು ಕಲಿಕೆಯನ್ನು ಮಕ್ಕಳು ಆಸ್ವಾದಿಸಿ ಕಲಿಯುವಂತಹ ವಾತಾವರಣವನ್ನು ತರಗತಿಯಲ್ಲಿ ಉಂಟು ಮಾಡಬೇಕು.

    ಪ್ರವಾದಿಯವರು(ಸ) ಯಾವುದಾದರೂ ಪ್ರಮುಖ ವಿಷಯವನ್ನು ಪ್ರಸ್ತಾಪಿಸುವಾಗ ಅದನ್ನು ಮೂರು ಬಾರಿ ಪುನರಾವರ್ತಿಸುತ್ತಿದ್ದರು. ಇದರಿಂದ ವಿಷಯವು ಸರಿಯಾಗಿ ಅರ್ಥವಾಗುತ್ತಿತ್ತು. ವಿವರಣೆಗಾಗಿ ಚಿತ್ರಗಳನ್ನು ಬಳಸುವುದು ಪ್ರವಾದಿಯವರ ಶಿಕ್ಷಣದ ಒಂದು ಪ್ರಮುಖ ಮಾಧ್ಯಮವಾಗಿತ್ತು. ಚಿಕ್ಕ ಆಕೃತಿಯ ಮೂಲಕ ವಿಷಯಕ್ಕೆ ಯಾವ ರೀತಿಯಲ್ಲಿ ಅದನ್ನು ಜೋಡಿಸಬಹುದು ಎಂಬುದನ್ನು ಅವರು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ರಸಪ್ರಶ್ನೆಗಳನ್ನು ಕೇಳುವುದು ಪ್ರವಾದಿಯವರಿಗೆ ಇಷ್ಟವಾದಂತಹ ಒಂದು ವಿಧಾನವಾಗಿತ್ತು. ಜನರಿಗೆ ಪ್ರಶ್ನೆಯನ್ನು ಕೇಳಿ, ಅವರು ಯೋಚಿಸುವಂತೆ ಮಾಡಿ ಜೀವನಕ್ಕೆ ಸಂಬAಧಿಸಿದ ವಿವಿಧ ಅಂಶಗಳನ್ನು ಅವರು ಅರಿತುಕೊಳ್ಳುವಂತೆ ಮಾಡುತ್ತಿದ್ದರು. ಇದೇ ವಿಧಾನವನ್ನು ನಮ್ಮ ಶಿಕ್ಷಕರು ಅಳವಡಿಸಿಕೊಳ್ಳಬಹುದು.
    ಕಥೆಗಳಿಗೆ ಎಲ್ಲ ಕಾಲಗಳಲ್ಲೂ ತನ್ನದೇ ಆದ ಮಹತ್ವವಿರುತ್ತದೆ.

    ಪ್ರವಾದಿಯವರು ಸಣ್ಣ ಸಣ್ಣ ಕಥೆಗಳನ್ನು ಹೇಳುವ ಮೂಲಕ ಸಂಗಾತಿಗಳಲ್ಲಿ ಜ್ಞಾನದ ಹಣತೆಯನ್ನು ಹಚ್ಚುತ್ತಿದ್ದರು. ಪ್ರವಾದಿಯವರು(ಸ) ಹೇಳಿದ ಕಥೆಯೊಂದು ಹೀಗಿದೆ: ನಾಯಿಯೊಂದು ಬಾವಿಯ ಸುತ್ತಲೂ ಓಡಾಡುತ್ತಿತ್ತು. ಅದು ಬಾಯಾರಿಕೆಯಿಂದ ಬಳಲಿತ್ತು. ಬನೀ ಇಸ್ರಾಈಲರಿಗೆ ಸೇರಿದ್ದ ದುರಾಚಾರಿ ಒಬ್ಬಳು ಈ ಸ್ಥಿತಿಯಲ್ಲಿ ನಾಯಿಯನ್ನು ನೋಡಿದಳು. ಅವಳು ತನ್ನ ಚರ್ಮದ ಕಾಲು ಚೀಲವನ್ನು ತೆಗೆದು ತಾನು ಧರಿಸಿದ್ದ ಮೇಲು ಹೊದಿಕೆಗೆ ಕಟ್ಟಿದಳು. ಅದನ್ನು ಇಳಿಬಿಟ್ಟು ಬಿಟ್ಟು ಬಾವಿಯಿಂದ ನೀರು ಸೇರಿದಳು. ನಂತರ ಅದನ್ನು ನಾಯಿಗೆ ಕುಡಿಯಲು ಕೊಟ್ಟಳು. ಈ ಕೃತ್ಯದಿಂದಾಗಿ ಆಕೆಯ ಹಿಂದಿನ ಪಾಪಗಳನ್ನು ಕ್ಷಮಿಸಲಾಯಿತು.

    ಆಧುನಿಕ ತಂತ್ರಜ್ಞಾನದ ಮಧ್ಯೆ ಬೆಳೆಯುತ್ತಿರುವ ಮಕ್ಕಳೂ, ನಮ್ಮ ಶಿಕ್ಷಕರ ಬಾಯಿಂದ ಕಥೆಗಳನ್ನು ಕೇಳುವುದನ್ನು ಇಷ್ಟಪಡುತ್ತಾರೆ. ಆದುದರಿಂದ ನೀತಿ ಬೋಧಕ ಕಥೆಗಳನ್ನು ಮಕ್ಕಳಿಗೆ ಹೇಳಲು ಶಿಕ್ಷಕರು ಆಸಕ್ತಿ ತೋರಬೇಕು.
    ಇತರರನ್ನು ತೆಗಳದಿರುವುದು ಅವಮಾನಿಸದಿರುವುದು ಪ್ರವಾದಿಯವರ(ಸ) ವಿಶೇಷ ಗುಣವಾಗಿತ್ತು. ತಪ್ಪುಗಳು ಯಾರಿಂದಲೂ ಸಂಭವಿಸಬಹುದು. ಆದರೆ ಸಾರ್ವಜನಿಕವಾಗಿ ವ್ಯಕ್ತಿಯನ್ನು ಅವನ ತಪ್ಪಿಗಾಗಿ ಅವಹೇಳನ ಮಾಡುವುದು ಸರಿಯಲ್ಲ. ಪ್ರವಾದಿಯವರು(ಸ) ಎಂದೂ ಈ ವಿಧಾನವನ್ನು ಬಳಸಲಿಲ್ಲ. ಅವರು ವೈಯಕ್ತಿಕವಾಗಿ ಅವರನ್ನು ಕರೆಸಿ ವಿಷಯವನ್ನು ಮನವರಿಕೆ ಮಾಡಿಸಿ ನಯವಾಗಿ ಇನ್ನು ಮುಂದೆ ಹೀಗೆ ಮಾಡಬಾರದು ಎಂದು ತಿಳಿಸುತ್ತಿದ್ದರು. ಸಹನೆಯಿಂದ ತಪ್ಪನ್ನು ತಿದ್ದಿ ಹೇಳುತ್ತಿದ್ದರು. ಈ ಅಭ್ಯಾಸವನ್ನು ಕೂಡ ನಮ್ಮ ಶಿಕ್ಷಕರು ತಮ್ಮ ಜೀವನದ ಭಾಗವಾಗಿಸಬೇಕು. ಸಣ್ಣಪುಟ್ಟ ವಿಷಯಗಳಿಗೂ ಜೀವನವನ್ನೇ ಮುಗಿಸಬೇಕು ಎಂಬ ಒತ್ತಡದೊಂದಿಗೆ ಬದುಕುತ್ತಿರುವ ಆಧುನಿಕ ಯುಗದ ಮಕ್ಕಳ ಮಧ್ಯೆ ಅವರಿಗೆ ಶಿಕ್ಷಣವನ್ನು ನೀಡುವ ಶಿಕ್ಷಕರು ಸಹನೆಯ ಮೂರ್ತಿಗಳಾಗಿ ವರ್ತಿಸಬೇಕು .ಎಂದೂ ಯಾವ ಮಕ್ಕಳನ್ನು ಅವಮಾನಿಸುವುದು ತೆಗಳುವುದು ಸಲ್ಲದು. ಒಂದು ವೇಳೆ ಈ ಅಭ್ಯಾಸ ನಮ್ಮಲ್ಲಿದ್ದರೆ ಅದನ್ನು ಸರಿಪಡಿಸಿಕೊಂಡು ಮುಂದುವರಿಯಬೇಕು.

    ಸಣ್ಣ ವಯಸ್ಸಿನಲ್ಲಿಯೇ ಮಕ್ಕಳನ್ನು ಅತ್ಯುತ್ತಮ ರೀತಿಯಲ್ಲಿ ಶಿಕ್ಷಣ ತರಬೇತಿ ನೀಡಲು ಪ್ರವಾದಿ ಮುಹಮ್ಮದರು(ಸ) ತಾಕೀತು ಮಾಡಿರುವರು. ನೀವು ನಿಮ್ಮ ಮಕ್ಕಳಿಗೆ ಕೊಡುವ ಅತ್ಯುತ್ತಮವಾದಂತಹ ಉಡುಗೊರೆ ಅದು ಉತ್ತಮ ತರಬೇತಿ ಮತ್ತು ಶಿಕ್ಷಣವಾಗಿದೆ ಎಂಬ ಪ್ರವಾದಿ ವಚನ ಬಹಳ ಮಾರ್ಮಿಕವಾದುದಾಗಿದೆ. ಮಕ್ಕಳಿಗಾಗಿ ಸಂಪತ್ತನ್ನು ಕೂಡಿಡುವ ಓಟದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ತರಬೇತಿಯನ್ನು ನೀಡಲು ವಿಫಲರಾಗುವ ಹೆತ್ತವರು ಜೀವಿಸುತ್ತಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ .ಪ್ರವಾದಿ ಮುಹಮ್ಮದರ(ಸ) ಈ ಶಿಕ್ಷಣ ರೀತಿಯನ್ನು ಹೆತ್ತವರು ಮತ್ತು ಶಿಕ್ಷಕರು ಅಳವಡಿಸಿಕೊಂಡರೆ ಖಂಡಿತವಾಗಿಯೂ ನಮ್ಮ ಮಕ್ಕಳಲ್ಲಿ ಮತ್ತು ಸಮಾಜದಲ್ಲಿ ಬದಲಾವಣೆ ಗೋಚರಿಸಬಹುದು.

    ಸಬೀಹ ಫಾತಿಮ, ಮಂಗಳೂರು

  • ವಿದ್ಯಾರ್ಥಿಗಳ ಗೌರವ ಗಳಿಸಲು ವಿಫಲರಾಗುತ್ತಿರುವರೇ ಅಧ್ಯಾಪಕರು? 
ಇಲ್ಲಿವೆ ಡಾ| ಸಿ.ಜೆ. ಜೋನ್ ರ 10 ಸೂತ್ರಗಳು

    ವಿದ್ಯಾರ್ಥಿಗಳ ಗೌರವ ಗಳಿಸಲು ವಿಫಲರಾಗುತ್ತಿರುವರೇ ಅಧ್ಯಾಪಕರು? ಇಲ್ಲಿವೆ ಡಾ| ಸಿ.ಜೆ. ಜೋನ್ ರ 10 ಸೂತ್ರಗಳು

    ವಿದ್ಯಾರ್ಥಿಗಳೊಂದಿಗೆ ಸ್ವಲ್ಪ ಜೋರಾಗಿ ಮಾತನಾಡಿದರೂ ಶಿಕ್ಷಕರ ವಿರುದ್ಧ ದೂರು ನೀಡಲು ಹಿಂದೆ ಮುಂದೆ ನೋಡದ ಹೆತ್ತವರು ಇರುವ ಕಾಲವಿದು. ಶಿಕ್ಷಣ ವ್ಯವಸ್ಥೆಗೆ ವಿರುದ್ಧವಾಗಿ ವ್ಯವಹರಿಸುವ ವಿದ್ಯಾರ್ಥಿಗಳೂ ಇರುತ್ತಾರೆ. ಇವೆಲ್ಲವುಗಳು ಅಧ್ಯಾಪಕರ ಆತ್ಮಸ್ಥೈರ್ಯವನ್ನು ಕಡಿಮೆ ಮಾಡುತ್ತದೆ.

    ಮಕ್ಕಳು ಅತಿಯಾದ ತುಂಟಾಟವನ್ನು ತೋರಿಸಿದರೆ ಅಧ್ಯಾಪಕರು ಜೋರು ಮಾಡಿದರೆ ಅಥವಾ ಶಬ್ದವನ್ನು ಎತ್ತರಿಸಿ ಮಾತನಾಡಿದರೆ ಕಣ್ಣು ದೊಡ್ಡದು ಮಾಡಿ ನೋಡಿದರೆ ಮಕ್ಕಳ ಮನಸ್ಸಿನಲ್ಲಿ ಗಾಯ ಉಂಟಾಗುತ್ತದೆ. ಆದರೆ ತಪ್ಪುಗಳನ್ನು ಪುನರಾವರ್ತಿಸದೆ ಇರುವ ರೀತಿಯಲ್ಲಿ ವಿಷಯಗಳನ್ನು ಪ್ರೀತಿಯೊಂದಿಗೆ ಮನವರಿಕೆ ಮಾಡಿ ಹೃದಯದಲ್ಲಿ ಬೆಳಕನ್ನು ಹಚ್ಚುವ ಒಳ್ಳೆಯ ಅಧ್ಯಾಪಕರು ಇಂದಿಗೂ ಇದ್ದಾರೆ .ಅವರು ಕೂಡ ನಿಷ್ಕ್ರಿಯರಾಗಿ ಮಾರ್ಪಡುವ ರೀತಿಯಲ್ಲಿ ಇಂದಿನ ಹಲವು ವಿದ್ಯಾಸಂಸ್ಥೆಗಳ ಪರಿಸ್ಥಿತಿ ಬದಲಾಗಿದೆ. “ನನ್ನ ಮಗನನ್ನು ಶಿಕ್ಷಿಸುವ ಅಧಿಕಾರವನ್ನು ನಾನು ಯಾರಿಗೂ ನೀಡಿಲ್ಲ” ಎಂಬ ರೀತಿಯ ಹೇಳಿಕೆಗಳು. `ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬ ವಿಧಾನವನ್ನು ಸ್ವೀಕರಿಸಿದ ಅಹಂಕಾರದಿAದ ವರ್ತಿಸುವ ಹೆತ್ತವರ ಸಂಖ್ಯೆ ಇಂದು ಹೆಚ್ಚುತ್ತಿದೆ.

    ವಿದ್ಯಾರ್ಥಿಗಳ ಗೌರವವನ್ನು ಗಳಿಸಲು ವಿಫಲರಾದ ಶಿಕ್ಷಕರು
    ಕಲಿಕೆಯ ಜೊತೆಗೆ ವ್ಯಕ್ತಿತ್ವವನ್ನು ರೂಪಿಸುವಂತಹ ಕೆಲಸದಲ್ಲಿ ಅಧ್ಯಾಪಕರ ಪಾತ್ರವನ್ನು ಇಂದಿನ ಶೈಕ್ಷಣಿಕ ವ್ಯವಸ್ಥೆ ಕಡಿಮೆ ಮಾಡುತ್ತಿದೆ ಎಂಬುದರ ಸೂಚನೆಗಳು ಲಭಿಸುತ್ತಿವೆ. ಮಾದರಿ ಯೋಗ್ಯವಾದಂತಹ ವ್ಯವಹಾರ ಮತ್ತು ಶೈಲಿಗಳ ಅಭಾವ, ಜೊತೆಗೆ ಅಧ್ಯಾಪಕ ವೃತ್ತಿಯಲ್ಲಿ ವಿಶಿಷ್ಟತೆಯನ್ನು ತೋರ್ಪಡಿಸಲು ಸಾಧ್ಯವಾಗದೆ ಇರುವ ಕಾರಣ ವಿದ್ಯಾರ್ಥಿಗಳಿಂದ ಗೌರವವನ್ನು ಗಳಿಸಲು ಸಾಧ್ಯವಾಗದ ಶಿಕ್ಷಕರ ಸಂಖ್ಯೆ ಹೆಚ್ಚುತ್ತಿದೆ.

    ಹೆತ್ತವರು ವಿದ್ಯಾರ್ಥಿಗಳು ಅಧ್ಯಾಪಕರು ಮುಂತಾದವರೆಲ್ಲ ಸೇರಿ ಉಂಟಾಗುವ ವಿದ್ಯಾಲಯದ ಪರಿಸರದ ಬಗ್ಗೆ ಅನೇಕ ಪ್ರಶ್ನೆಗಳು ಏಳುತ್ತಿವೆ. ತಾಂತ್ರಿಕತೆಯ ಡಿಜಿಟಲ್ ಯುಗವು ಮಕ್ಕಳ ಸ್ವಭಾವವನ್ನು ಉಂಟು ಮಾಡುವುದರಲ್ಲಿ, ಅವರ ಸಾಮಾಜಿಕ ವರ್ತನೆಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಅಮಲು ಪದಾರ್ಥಗಳ ವ್ಯಾಪಕವಾದ ಬಳಕೆಯು ಇನ್ನೊಂದು ಮುಖ್ಯ ಸಮಸ್ಯೆಯಾಗಿದೆ. ಕಾಲಕ್ಕೆ ಅನುಗುಣವಾಗಿ ಪ್ರತಿಯೊಬ್ಬರ ಪಾತ್ರವು ಪುನರ್ನವೀಕರಿಸಲ್ಪಡುತ್ತಿದೆ. ಅರ್ಥಪೂರ್ಣವಾಗಿ ಎಲ್ಲರೂ ಜೊತೆಗೂಡಿ ವಿಷಯಗಳನ್ನು ಗಮನಿಸದೇ ಹೋದರೆ, ಕ್ರಮಗಳನ್ನು ಕೈಗೊಳ್ಳದಿದ್ದರೆ ಮಕ್ಕಳು ನಮ್ಮ ಕೈಯಿಂದ ಹೊರಟು ಹೋಗಬಹುದು.

    ಸರ್ ಸ್ವಲ್ಪ ಬದಲಾಗೋಣ
    ಯಾವುದೇ ವಿಷಯದಲ್ಲಾದರೂ ಒಂದಕ್ಕಿಂತ ಒಂದು ಉತ್ತಮವಾದಂತಹ ಆನ್‌ಲೈನ್ ಕ್ಲಾಸುಗಳು ಇಂದು ಲಭ್ಯವಿದೆ. ಗೂಗಲ್‌ನಲ್ಲಿ ಸರ್ಚ್ ಮಾಡಿದರೆ ಎಲ್ಲ ರೀತಿಯ ಮಾಹಿತಿಗಳು ಒಳ್ಳೆಯ ರೀತಿಯಲ್ಲಿ ಸಿಗುತ್ತದೆ. ಅದೇ ರೀತಿ ಆರ್ಟಿಫಿಶಿಯಲ್ ಇಂಟಲಿಜೆನ್ಸಿಯ ಸಹಾಯವು ಇದೆ. ಜ್ಞಾನವನ್ನು ಗಳಿಸಬೇಕೆಂದು ಬಯಸುವ ವಿದ್ಯಾರ್ಥಿಗಳಿಗೆ ಅಪಾರವಾದಂತಹ ಸಾಧ್ಯತೆಗಳು ಮುಂದಿವೆ. ಅವರಿಗೆ ಅಧ್ಯಾಪಕರನ್ನು ಆಶ್ರಯಿಸದೆಯೇ ಜ್ಞಾನವನ್ನು ಗಳಿಸಬಹುದಾಗಿದೆ. ಪರೀಕ್ಷೆಗಳಿಗೆ ಸಿದ್ಧತೆಯನ್ನು ನಡೆಸಬಹುದಾಗಿದೆ. ಆದರೆ ತರಗತಿಗಳಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಜೊತೆಗೂಡಿ ಗಳಿಸುವ ವಿದ್ಯೆಯಲ್ಲಿ ಅದರದ್ದೇ ಆದ ವಿಶೇಷತೆ ಇದೆ.

    ಇದರಲ್ಲಿ ವೀಕ್ಷಣಾ ಸಾಮರ್ಥ್ಯವು ಶಕ್ತಿಯುತವಾಗುತ್ತದೆ. ಇದೆಲ್ಲಾ ಸಾಧ್ಯವಾಗಬೇಕಾದರೆ ಇಂದಿನ ಕಾಲದಲ್ಲಿ ಅಧ್ಯಾಪಕರು ಹೆಚ್ಚು ಪಕ್ವತೆಯೊಂದಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಆ ರೀತಿಯಲ್ಲಿ ನಮ್ಮ ಬೋಧನಾ ರೀತಿಯನ್ನು ನವೀಕರಿಸಲು ಅಧ್ಯಾಪಕರಿಗೆ ಸಾಧ್ಯವಾಗಬೇಕು. ತಾವು ಬೋಧಿಸುತ್ತಿರುವ ವಿಷಯಗಳು ಯಾವ ಮೂಲದಿಂದೆಲ್ಲ ಗಳಿಸಿ ಜ್ಞಾನದ ಪರಿಪೂರ್ಣತೆಯೆಡೆಗೆ ತಲುಪಲು ಸಾಧ್ಯ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡಲು ಅಧ್ಯಾಪಕರಿಗೆ ಸಾಧ್ಯವಾಗಬೇಕು.

    ಪ್ರತಿ ವರ್ಷ ಮೊದಲೇ ಸಿದ್ದಪಡಿಸುತ್ತಿರುವ ಒಂದು ನೋಟ್ಸ್ ನ ಭಾಗಗಳನ್ನು ಹಿಡಿದುಕೊಂಡು ಪ್ರತಿ ವರ್ಷವೂ ಅದನ್ನೇ ಪುನರಾವರ್ತಿಸುತ್ತಿದ್ದ ಅದೇ ಹಳೆಯ ಕಥೆಗಳನ್ನು ಹೇಳುತ್ತಾ ಮುಂದೆ ಸಾಗುವುದು ಈ ವೈಜ್ಞಾನಿಕ ಕ್ರಾಂತಿಯ ಯುಗದಲ್ಲಿ ಇರುವಂತಹ ಅಧ್ಯಾಪಕರಿಗೆ ಸೂಕ್ತವಾದ ವಿಧಾನವಲ್ಲ. ವಿಷಯಗಳ ಸಂಗ್ರಹ ಮತ್ತು ಕಲಿಸುವಂತಹ ಶೈಲಿಯನ್ನು ನವೀಕರಿಸುತ್ತಲೇ ಇರಬೇಕಾಗುತ್ತದೆ. ಗುರುಗಳಿಗಿಂತ ಹೆಚ್ಚು ಅರಿವನ್ನು ಹೊಂದಿರುವ ಬಹಳ ಬುದ್ಧಿವಂತರಾದ ಮಕ್ಕಳನ್ನು ಹೊಂದಿದ ತರಗತಿಗಳು ಇರುತ್ತವೆ. ಅವರ ಸಂಶಯಗಳಿಗೆ ಸರಿಯಾದ ಉತ್ತರವನ್ನು ನೀಡಲು, ಅದು ಎಲ್ಲಿಂದ ಸಿಗುತ್ತದೆ ಎಂಬುದನ್ನು ಗುರುತಿಸಿ ಹೇಳಲು ಶಿಕ್ಷಕರಿಗೆ ಸಾಧ್ಯವಾಗಬೇಕು.

    ವಿವಿಧ ಕಾರಣಗಳಿಂದಾಗಿ ಕುಟುಂಬದಲ್ಲಿ ಮಕ್ಕಳಿಗೆ ಸಿಗಬೇಕಾದಂತಹ ಗಮನ ಸಿಗದೇ ಹೋದ ಪರಿಸ್ಥಿತಿಯಲ್ಲಿ ಅಧ್ಯಾಪಕರ ಹೊಣೆಗಾರಿಕೆ ಬಹಳ ಹೆಚ್ಚಿದೆ. ವಿದ್ಯಾರ್ಥಿಗಳನ್ನು ಒಳ್ಳೆಯ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು, ಉತ್ತಮವಾದಂತಹ ಮಾರ್ಗದಲ್ಲಿ ಅವರನ್ನು ಮುಂದೆ ಕೊಂಡು ಹೋಗುವಂತಹ ಮಾರ್ಗದರ್ಶನವನ್ನು ನೀಡಲು ಓರ್ವ ಮಾರ್ಗದರ್ಶಕನ ವೇಷವನ್ನು ಅವರು ಧರಿಸಬೇಕಾಗಿ ಬರುತ್ತದೆ. ಈ ಪಾತ್ರವನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾದರೆ ಖಂಡಿತವಾಗಿಯೂ ಅಂತಹ ಅಧ್ಯಾಪಕರಿಗೆ ಉತ್ತಮ ಗೌರವ ಲಭಿಸುತ್ತದೆ.

    ಮಾದರಿ ಅಧ್ಯಾಪಕರಾಗೋಣ
    ಯಾರು ಅತ್ಯುತ್ತಮ ಅಧ್ಯಾಪಕರು ಎಂಬ ವಿಷಯದಲ್ಲಿ ಈ ಹಿಂದೆ ಶಾಲೆಗಳಲ್ಲಿ ನಡೆಸಿದಂತಹ ಒಂದು ಅಧ್ಯಯನವಿದೆ. ಅದು ಇಂದಿಗೂ ಪ್ರಸಕ್ತವಾಗಿದೆ. ಯಾರು ವಿದ್ಯಾರ್ಥಿಗಳೊಂದಿಗೆ ಬಹಳ ಆತ್ಮೀಯತೆಯೊಂದಿಗೆ, ಸಹಕಾರ ನೀಡಿ, ಪ್ರಜಾಪ್ರಭುತ್ವ ಶೈಲಿಯಲ್ಲಿ ವರ್ತಿಸುತ್ತಾರೋ ಅಂತಹ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಪ್ರೀತಿ ಪಾತ್ರ ಎನಿಸಿಕೊಳ್ಳುತ್ತಾರೆ. ಪ್ರೀತಿಯ ಮನಸ್ಸುಳ್ಳ, ಸಣ್ಣವರನ್ನು ಅಂಗೀಕರಿಸುವAತಹ, ಕ್ಷಮೆಯೊಂದಿಗೆ ವರ್ತಿಸುವಂತಹ, ಅನುಭವಿಗಳಾಗಿ ವ್ಯವಹರಿಸುವಂತಹ ಮನೋಭಾವವನ್ನು ಮತ್ತು ವಿದ್ಯಾರ್ಥಿಗಳ ಹಿತವನ್ನು ಬಯಸುವಂತಹ ಶಿಕ್ಷಕರನ್ನು ಮಕ್ಕಳು ಸದಾ ಇಷ್ಟಪಡುತ್ತಾರೆ. ಮೃದುಮನಸ್ಕರಾದ, ಎಲ್ಲರನ್ನೂ ಪರಿಗಣಿಸುವ ಸಹನೆಯೊಂದಿಗೆ ಸಹಾನುಭೂತಿಯೊಂದಿಗೆ ವರ್ತಿಸುವ ಅಧ್ಯಾಪಕರನ್ನು ಎಲ್ಲ ವಿದ್ಯಾರ್ಥಿಗಳು ಇಷ್ಟಪಡುತ್ತಾರೆ.

    ಯಾರಾದರೂ ಒಂದಿಬ್ಬರು ವಿದ್ಯಾರ್ಥಿಗಳ ಹಿಂದೆ ಬಿದ್ದು ಅವರನ್ನೇ ಇಷ್ಟಪಡುವ ಇತರ ವಿದ್ಯಾರ್ಥಿಗಳೊಂದಿಗೆ ತಾರತಮ್ಯವನ್ನು ತೋರುವ ಅಧ್ಯಾಪಕರನ್ನು ಯಾರೂ ಇಷ್ಟಪಡುವುದಿಲ್ಲ. ಬದಲಾಗಿ ಪಕ್ಷಪಾತ ರಹಿತವಾಗಿ ಎಲ್ಲರೊಂದಿಗೂ ವ್ಯವಹರಿಸುವ ಶಿಕ್ಷಕರೇ ವಿದ್ಯಾರ್ಥಿಗಳ ಪಾಲಿಗೆ ಶ್ರೇಷ್ಠ ಅಧ್ಯಾಪಕರು.

    ಏನಾದರೂ ಸಮಸ್ಯೆಗಳು ಉಂಟಾದರೆ ಅದನ್ನು ಬಗೆಹರಿಸಲು ಸಾಧ್ಯವಿರುವ ಮತ್ತು ಅದರಲ್ಲಿ ಆಸಕ್ತಿಯನ್ನು ತೋರಿಸುವ ಶಿಕ್ಷಕರು ಒಳ್ಳೆಯ ಮನಸ್ಸುಳ್ಳ ಶಿಕ್ಷಕರಾಗಿರುತ್ತಾರೆ. ವಿದ್ಯಾರ್ಥಿಗಳ ಮಧ್ಯೆ ಇರುವ ವೈಮನಸನ್ನು ತಮ್ಮ ಹಾಸ್ಯ ಮಿಶ್ರಿತ ರೀತಿಯಲ್ಲಿ ಹೋಗಲಾಡಿಸಿ ಅವರ ಹೃದಯವನ್ನು ಗೆಲ್ಲಲು ಸಾಧ್ಯವಾದರೆ ಅದು ಬಹಳಷ್ಟು ಉಪಯುಕ್ತ.

    ಆಹ್ಲಾದಕರವಾದ ವ್ಯಕ್ತಿತ್ವ, ವರ್ತನೆಗಳು, ಶರೀರ ಭಾಷೆ ಮುಂತಾದವುಗಳನ್ನು ಹೊಂದಿರುವ ಅಧ್ಯಾಪಕರು ವಿದ್ಯಾರ್ಥಿಗಳ ಪ್ರೀತಿಯನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಅಧ್ಯಯನಗಳ ಮೂಲಕ ತಿಳಿದುಬಂದಿದೆ. ಪರಿಸ್ಥಿತಿಗೆ ಅನುಗುಣವಾಗಿ ಬೋಧನಾ ಶೈಲಿಯಲ್ಲಿ ಬದಲಾವಣೆಯನ್ನು ಮಾಡುವ, ಹೊಸ ವಿಧಾನಗಳನ್ನು ಸ್ವೀಕರಿಸುವ ಅರ್ಥಪೂರ್ಣವಾದ ಬದಲಾವಣೆಗಳನ್ನು ಮಾಡುವ ಸಾಮರ್ಥ್ಯ, ಉತ್ತಮ ಅಧ್ಯಾಪಕನಿಗೆ ಇರುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ. ವಿದ್ಯಾರ್ಥಿಗಳಲ್ಲಿ ಕಂಡು ಬರುವ ಸಣ್ಣ ವಿಶೇಷತೆಯನ್ನು ಗಮನಿಸಿ ಅದನ್ನು ಗೌರವಿಸಿ ಪ್ರೋತ್ಸಾಹಿಸುವ ಸಾಮರ್ಥ್ಯವಿರುವ ಅಧ್ಯಾಪಕರು ಸದಾ ವಿದ್ಯಾರ್ಥಿಗಳ ಮನಸ್ಸಿನಾಳದಲ್ಲಿ ಉಳಿಯುತ್ತಾರೆ. ಕಲಿಸುವ ವಿಷಯದ ಬಗ್ಗೆ ಆಳವಾದ ಅರಿವು ಉತ್ತಮ ಅಧ್ಯಾಪಕನ ಗುಣಗಳ ಪೈಕಿ ಒಂದಾಗಿದೆ.

    ಕಠೋರವಾಗಿ ವರ್ತಿಸಿ ಶಿಸ್ತನ್ನು ಪಾಲಿಸುವಂತೆ ಮಾಡಲು ಸಾಧ್ಯವಿಲ್ಲ
    ವಿದ್ಯಾರ್ಥಿಗಳು ತಮಗೆ ವಿಧೇಯರಾಗಿರಬೇಕು ಮತ್ತು ಅವರು ಸದಾ ಶಿಸ್ತಿನೊಂದಿಗೆ ವರ್ತಿಸಬೇಕು ಎಂಬುದು ಎಲ್ಲ ಶಿಕ್ಷಕರ ಕನಸಾಗಿರುತ್ತದೆ. ಇದು ಪಠ್ಯ ಪಠ್ಯೇತರ ಚಟುವಟಿಕೆಗಳು ಸುಗಮ ರೀತಿಯಲ್ಲಿ ನಡೆಸಿಕೊಂಡು ಹೋಗಲು ಅತ್ಯಂತ ಅಗತ್ಯವಾದ ವಿಷಯವಾಗಿದೆ. ಅನುಚಿತವಾದಂತಹ ವರ್ತನೆಗಳನ್ನು ನಡವಳಿಕೆಗಳನ್ನು ಇಲ್ಲವಾಗಿಸಲು ಶಿಸ್ತು ಬಹಳ ಅಗತ್ಯವಾಗಿದೆ. ಶಿಸ್ತನ್ನು ಉಲ್ಲಂಘಿಸಿದರೆ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ. ಇದು ಒಂದು ವಿದ್ಯಾಸಂಸ್ಥೆಯು ಸಮಾಧಾನಪೂರ್ವಕವಾದಂತಹ ವಾತಾವರಣದಲ್ಲಿ ಮುಂದುವರಿಯಲು ಬಹಳ ಅಗತ್ಯವಾದಂತಹ ವಿಷಯವಾಗಿದೆ ಎಂಬುದು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಚೆನ್ನಾಗಿ ತಿಳಿದಿರಬೇಕು. ಶಾಲಾ ನಿಯಮಗಳಿಗೆ ಬದ್ಧರಾಗಿ ವರ್ತಿಸಲು ಮತ್ತು ಇತರರನ್ನು ಗೌರವಿಸಿ ಜೀವಿಸುವುದನ್ನು, ತಮ್ಮ ಮೇಲೆ ಸ್ವಯಂ ನಿಯಂತ್ರಣವನ್ನು ಇಟ್ಟುಕೊಳ್ಳುವುದನ್ನು ಅಭ್ಯಾಸ ಮಾಡುವುದು ವಿದ್ಯಾರ್ಥಿಗಳಿಗೂ ಪಾಲಕರಿಗೂ ಅತ್ಯಂತ ಅಗತ್ಯದ ವಿಷಯವಾಗಿದೆ. ನಿಯಮಗಳನ್ನು ಪಾಲಿಸಲು ಮಾನಸಿಕವಾಗಿಯೂ ಸಿದ್ಧತೆಯ ಅಗತ್ಯವಿರುತ್ತದೆ. ಅದಕ್ಕಾಗಿ ಕೆಲವು ತತ್ವಗಳನ್ನು ಪಾಲಿಸಬೇಕು.

    1. ಯಾವ ರೀತಿಯಲ್ಲಿ ವ್ಯವಹರಿಸಬೇಕು ಯಾವ ನಿಯಮಗಳನ್ನೆಲ್ಲ ಪಾಲಿಸಬೇಕು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಬೇಕು. ಅದೇ ರೀತಿ ಇವುಗಳನ್ನು ಉಲ್ಲಂಘಿಸಿದರೆ ಉಂಟಾಗುವAತಹ ಪರಿಣಾಮಗಳ ಬಗ್ಗೆಯೂ ಕೂಡ ಮುನ್ನೆಚ್ಚರಿಕೆಯನ್ನು ನೀಡಬೇಕು. ಶಾಲಾ ದಿನಚರಿಯಯಲ್ಲಿ ಇವುಗಳನ್ನೆಲ್ಲ ಹೇಗೆ ಅಳವಡಿಸಬಹುದು ಎಂಬುದರ ಬಗ್ಗೆ ಪ್ರೇರಣೆಯನ್ನು ನೀಡಬೇಕು.

    2. ಶಿಸ್ತನ್ನು ಪಾಲಿಸಿದರೆ ಮಾದರಿ ಯೋಗ್ಯವಾಗಿ ವರ್ತಿಸಿದರೆ ಅಂತಹ ವಿದ್ಯಾರ್ಥಿಗಳು ಪ್ರೋತ್ಸಾಹಿಸಲ್ಪಡಬೇಕು. ಅದರ ಬಗ್ಗೆ ಹೆತ್ತವರಿಗೆ ತಿಳಿಸಬೇಕು.

    3. ವಿದ್ಯಾರ್ಥಿಗಳು ಶಿಸ್ತನ್ನು ಉಲ್ಲಂಘಿಸಿದರೆ, ಅನುಚಿತ ರೀತಿಯಲ್ಲಿ ವರ್ತಿಸಿದರೆ ಶಿಕ್ಷಕರು ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡು ಶಬ್ದವನ್ನು ಎತ್ತರಿಸದೆ ಶಾಂತ ರೀತಿಯಲ್ಲಿ ಪರಿಸ್ಥಿತಿಯನ್ನು ಎದುರಿಸಬೇಕು. ನಾವು ಅವರಿಗೆ ಶಿಸ್ತನ್ನು ಕಲಿಸುವವರು ಶಿಸ್ತನ್ನು ಉಲ್ಲಂಘಿಸದಂತೆ ನೋಡಿಕೊಂಡು ಅವರಿಗೆ ಅವರ ತಪ್ಪಿನ ಮನವರಿಕೆಯಾಗುವಂತೆ ಮಾಡಬೇಕು. ಪ್ರಥಮವಾಗಿ ಮಾಡುವ ಶಿಸ್ತಿನ ಉಲ್ಲಂಘನಿಗೆ ಕೇವಲ ಬಾಯಿ ಮಾತಿನ ಎಚ್ಚರಿಕೆ ಸಾಕು. ಪುನಃ ಪುನಃ ಅದು ಆವರ್ತನೆಯಾಗುತ್ತಿದ್ದರೆ ಶಿಸ್ತುಕ್ರಮವನ್ನು ಕೈಗೊಳ್ಳಬಹುದು. ಪೆಟ್ಟು ಕೊಡುವುದಕ್ಕಿಂತ, ದೈಹಿಕ ದಂಡನೆಗಿAತ ಹೆಚ್ಚಾಗಿ ಮನಶಾಸ್ತ್ರ ತಿಳಿಸಿ ಕೊಡುವ ವಿಧಾನವನ್ನು ಬಳಸಬಹುದು. ಶಿಕ್ಷೆಯ ರೂಪದಲ್ಲಿ ಅವರು ಇಷ್ಟಪಡುವ ಆಟೋಟ ಚಟುವಟಿಕೆಗಳಿಂದ ತಾತ್ಕಾಲಿಕವಾಗಿ ಅವರನ್ನು ದೂರವಿರಿಸಬಹುದು. ಹೆಚ್ಚು ಹೊಣೆಗಾರಿಕೆಗಳನ್ನು ವಹಿಸಬಹುದು. ಪ್ರತಿಯೊಬ್ಬ ವಿದ್ಯಾರ್ಥಿಗೂ ಇಷ್ಟವಿಲ್ಲದ್ದು ಏನು ಎಂಬುದನ್ನು ಕಂಡುಹಿಡಿಯುವ ಸಾಮರ್ಥ್ಯ ಅಧ್ಯಾಪಕರಿಗೆ ಇರಬೇಕು. ಮಾಡಿದ ತಪ್ಪನ್ನು ನೆನಪಿಸಲಿಕ್ಕಾಗಿ ಈ ರೀತಿಯಲ್ಲಿ ನಿನ್ನನ್ನು ಶಿಕ್ಷಿಸಲಾಗುತ್ತಿದೆ ಎಂಬುದು ಅವರಿಗೆ ಮನವರಿಕೆಯಾಗಬೇಕು. ಯಾವ ರೀತಿಯ ಶಿಸ್ತಿನ ಉಲ್ಲಂಘನೆ ಆಗಿದೆಯೋ ಅದಕ್ಕೆ ತಕ್ಕುದಾದ ಶಿಕ್ಷೆಯನ್ನು ಮಾತ್ರ ನೀಡತಕ್ಕದ್ದು .ಹೆಚ್ಚು ಕ್ಲಿಷ್ಟಕರವಾದ ಪರಿಸ್ಥಿತಿ ಎದುರಾದರೆ ಮಕ್ಕಳ ಸ್ವಭಾವವನ್ನು ತಿದ್ದಲು ಹೆತ್ತವರ ಸಹಾಯವನ್ನು ಪಡೆಯಬೇಕು.

    4. ತಪ್ಪು ಮಾಡಿದರೂ ಕೆಲವು ವಿದ್ಯಾರ್ಥಿಗಳನ್ನು ಸುಮ್ಮನೆ ಬಿಟ್ಟು ಬಿಡುವುದು ಉಚಿತವಲ್ಲ. ಎಲ್ಲರಿಗೂ ಒಂದೇ ರೀತಿಯಲ್ಲಿ ಕಾನೂನನ್ನು ಅನ್ವಯಿಸಬೇಕು. ಅಚ್ಚುಕಟ್ಟುತನ, ಒಳ್ಳೆಯ ವರ್ತನೆ ಮುಂತಾದವುಗಳ ಬಗ್ಗೆ ಮಕ್ಕಳಿಗೆ ಕಾಳಜಿ ಉಂಟಾಗಬೇಕಿದ್ದರೆ ಈ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಶಿಕ್ಷೆಯನ್ನು ನೀಡುತ್ತೇನೆ ಅಥವಾ ತರಗತಿಯಿಂದ ಹೊರ ಹಾಕುತ್ತೇನೆ ಎಂದು ಬೆದರಿಸಿ ಮಕ್ಕಳನ್ನು ಸರಿಪಡಿಸಲು ಪ್ರಯತ್ನಿಸಬಾರದು. ಅದಕ್ಕೆ ಹೆಚ್ಚು ಬೆಲೆ ಇರುವುದಿಲ್ಲ. ಮಕ್ಕಳನ್ನು ಕಾಳಜಿಯೊಂದಿಗೆ ಪರಿಗಣಿಸುವುದು ಮತ್ತು ಪ್ರೀತಿಯೊಂದಿಗೆ ಅವರಿಗೆ ಬೆಂಬಲವಾಗಿ ನಿಂತು ಅವರನ್ನು ತಿದ್ದಲು ಪ್ರಯತ್ನಿಸಿದರೆ ಖಂಡಿತವಾಗಿಯೂ ಅದು ಮಕ್ಕಳ ಮನಸ್ಸನ್ನು ತಟ್ಟುತ್ತದೆ .ಈ ರೀತಿ ಅವರೊಳಗಿಂದಲೇ ತಾವು ಬದಲಾಗಬೇಕು, ಒಳ್ಳೆಯವರಾಗಬೇಕು ಎಂಬ ಪ್ರೇರಣೆ ಬರುವಂತೆ ಅವರಲ್ಲಿ ಪ್ರೀತಿಯ ವರ್ತನೆ ತೋರುವ ಶಿಕ್ಷಕರು ನಾವಾಗಬೇಕು.

    ವಿದ್ಯಾರ್ಥಿಗಳು ದ್ವೇಷಿಸುವ ಅಧ್ಯಾಪಕರು

    ವಿದ್ಯಾರ್ಥಿಗಳು ದ್ವೇಷಿಸುವ ಅಧ್ಯಾಪಕರ ಕುರಿತು ಅಧ್ಯಯನಗಳು ನಡೆದಿವೆ. ಮುಂಗೋಪ, ಅಸಹಿಷ್ಣುತೆ ಇರುವ ಅಧ್ಯಾಪಕರನ್ನು ವಿದ್ಯಾರ್ಥಿಗಳು ಇಷ್ಟಪಟ್ಟಿಲ್ಲ. ಕೇವಲ ತಮಗಿಷ್ಟ ಬಂದ ವಿದ್ಯಾರ್ಥಿಗಳಿಗೆ ಮಾತ್ರ ಮಹತ್ವವನ್ನು ನೀಡುವ, ಇತರ ವಿದ್ಯಾರ್ಥಿಗಳನ್ನು ಕಡೆಗಣಿಸುವ ಭೇದಭಾವ ತೋರಿಸುವ ಅಧ್ಯಾಪಕರನ್ನು ವಿದ್ಯಾರ್ಥಿಗಳು ದ್ವೇಷಿಸುತ್ತಾರೆ. ವಿದ್ಯಾರ್ಥಿಗಳನ್ನು ಬಹಿರಂಗವಾಗಿ ತಮಾಷೆ ಮಾಡುವ, ಕೀಳಾಗಿ ತೋರಿಸುವ ಸಾಮಾನ್ಯವಾಗಿ ಗೆಳೆತನವಿಲ್ಲದ ರೀತಿಯಲ್ಲಿ ವ್ಯವಹರಿಸುವ ಅಧ್ಯಾಪಕರನ್ನು ಕೂಡ ವಿದ್ಯಾರ್ಥಿಗಳು ದ್ವೇಷಿಸುತ್ತಾರೆ ಎಂಬುದಾಗಿ ಅಧ್ಯಯನಗಳು ಸೂಚಿಸುತ್ತವೆ.

    ಅಧ್ಯಾಪಕರ ಅತಿಯಾದ ಶಿಸ್ತು ಮತ್ತು ಸಹನೆಯ ಕೊರತೆಯು ತರಗತಿಗಳಲ್ಲಿ ಸಂಘರ್ಷವನ್ನು ಉಂಟುಮಾಡುತ್ತದೆ. ವಿದ್ಯಾರ್ಥಿಗಳೊಂದಿಗೆ ಆಗಲಿ ಅಧ್ಯಾಪಕ ವೃತ್ತಿಯೊಂದಿಗೆ ಬದ್ಧತೆ ಇಲ್ಲದ ರೀತಿಯಲ್ಲಿ ಶರೀರಭಾಷೆಯನ್ನು ತೋರಿಸುವ ಅನಾಕರ್ಷಕವಾದ ಶೈಲಿಯನ್ನು ಹೊಂದಿರುವುದು ಒಳ್ಳೆಯ ಅಧ್ಯಾಪಕರ ಲಕ್ಷಣವಲ್ಲ.


    ವಿದ್ಯಾರ್ಥಿಗಳಿಗಾಗಿ ಅಧ್ಯಾಪಕರು ಮಾಡಬೇಕಾದುದು

    ತರಗತಿಯ ಎಲ್ಲ ವಿದ್ಯಾರ್ಥಿಗಳ ಸ್ವಭಾವ, ಅವರ ವಿಶೇಷತೆಗಳು, ಅವರ ಹಿನ್ನೆಲೆ, ಅವರ ಸಾಮರ್ಥ್ಯ, ಅಸಾಮರ್ಥ್ಯ ಇವುಗಳನ್ನು ಕೃತ್ಯವಾಗಿ ಅರಿಯಲು ಪ್ರಯತ್ನಿಸಿ. ಅವರ ಸಂತೋಷ ಮತ್ತು ದುಃಖದಲ್ಲಿ ಅಧ್ಯಾಪಕರು ಜೊತೆಗಿರುತ್ತಾರೆ ಎಂಬ ವಿಶ್ವಾಸವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ. ನಿಮಗೆ ಅವರ ಬಗ್ಗೆ ಕಾಳಜಿ ಇದೆ ಮತ್ತು ವಿಶ್ವಾಸವಿದೆ ಎಂಬುದು ಅವರಿಗೆ ಮನವರಿಕೆಯಾದರೆ ಹಲವು ರೀತಿಯ ಸ್ವಭಾವಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸುಲಭವಾಗುತ್ತದೆ.

    ಯಾವುದೇ ರೀತಿಯ ನಾಟಕೀಯತೆ ಇಲ್ಲದೆ ಪ್ರಾಮಾಣಿಕವಾಗಿ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವುದು ಒಳ್ಳೆಯದು. ಮೃದು ಮನಸ್ಸಿಗೆ ಗಾಯ ಉಂಟಾಗುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಆಕ್ಷೇಪಿಸಬಾರದು ಮತ್ತು ಅವರ ಬಗ್ಗೆ ತೀರ್ಮಾನವನ್ನು ಹೇಳಿಬಿಡಬಾರದು. ಒಳ್ಳೆಯ ಅಭ್ಯಾಸಗಳ ಬಗ್ಗೆ ಇರುವಂತಹ ಮಾರ್ಗದರ್ಶನಗಳು ಮುಕ್ತ ಮಾತುಕತೆಗಳ ಮೂಲಕ ಅವರಿಗೆ ಮನವರಿಕೆಯಾಗಬೇಕು. ಉಪದೇಶಗಳನ್ನು ನೀಡುವ ಮೂಲಕ ಅವರನ್ನು ಬೋರು ಹೊಡೆಸಬಾರದು.

    ವಿದ್ಯಾರ್ಥಿಯ ಭಾವನೆಗಳನ್ನು ಅವನ ವಿಚಾರಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಹೊರಗೆಡಹಲು ಅವಕಾಶ ನೀಡಬೇಕು .ಅಧ್ಯಾಪಕರು ಒಳ್ಳೆಯ ಕೇಳುಗರಾಗಬೇಕು .ಎಲ್ಲರನ್ನೂ ಒಂದೇ ರೀತಿಯಲ್ಲಿ ಸಮಾನತೆಯೊಂದಿಗೆ ನೋಡಬೇಕು. ಕೆಲವು ನಿರ್ದಿಷ್ಟ ವಿದ್ಯಾರ್ಥಿಗಳೊಂದಿಗೆ ಹೆಚ್ಚು ಒಲವನ್ನು ಹೊಂದಿರಬಾರದು.

    ವಿದ್ಯಾರ್ಥಿಗಳಿಗೆ ಉತ್ತರ ತಿಳಿದಿಲ್ಲದ ಪ್ರಶ್ನೆಗಳನ್ನು ಕೇವಲ ಅವರನ್ನು ಕೀಳಾಗಿಸಲಿಕ್ಕಾಗಿ ಕೇಳಬಾರದು. ಅವರಿಗೆ ತಿಳಿದಿರುವ ವಿಷಯಗಳನ್ನೇ ಪ್ರಶ್ನೆಗಳ ರೂಪದಲ್ಲಿ ಕೇಳಿ ಅವರಿಂದ ಉತ್ತರ ಹೇಳಿಸಿ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು. ಈ ಆತ್ಮವಿಶ್ವಾಸದೊಂದಿಗೆ ಅವರು ತಮಗೆ ತಿಳಿದಿಲ್ಲದ ವಿಷಯಗಳನ್ನು ಕಲಿತು ಮುಂದೆ ಬರಲು ಸಹಾಯವಾಗುತ್ತದೆ.

    ತರಗತಿಯನ್ನು ನಡೆಸುವ ವಿಷಯದಲ್ಲಿ ವಿದ್ಯಾರ್ಥಿಗಳನ್ನು ಸಾಧ್ಯವಾದ ರೀತಿಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಅವರು ನಿಮಗಾಗಿ ಏನಾದರೂ ಸಹಾಯ ಮಾಡಿದರೆ ಅದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿ ಪ್ರೋತ್ಸಾಹಿಸಬೇಕು.

    ಒಳ್ಳೆಯ ಕಥೆಗಳನ್ನು ,ಜೀವನದ ಅನುಭವ ಪಾಠಗಳನ್ನು, ವೈಯಕ್ತಿಕವಾದ ಅನುಭವಗಳನ್ನು, ದಿನಪತ್ರಿಕೆಗಳಲ್ಲಿ ಬರುವಂತಹ ವಾರ್ತೆಗಳನ್ನು ತರಗತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ತರಗತಿಗಳನ್ನು ಉತ್ತಮಪಡಿಸಬಹುದು. ವಿದ್ಯಾರ್ಥಿಗಳು ಅಂತಹ ಅಧ್ಯಾಪಕರ ತರಗತಿಗಳನ್ನು ಕಾದಿರುತ್ತಾರೆ. ಇಂತಹ ತರಗತಿಗಳಲ್ಲಿ ಅವರು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ.

    ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಡಿಜಿಟಲ್ ಅಭ್ಯಾಸಗಳು ಯಾವುದು ಎಂಬುದರ ಕುರಿತು ಸರಿಯಾದ ಅರಿವು ಗಳಿಸಲು ಅಧ್ಯಾಪಕರು ಶ್ರಮಿಸುವುದು ಒಳ್ಳೆಯದು .ಡಿಜಿಟಲ್ ಲೋಕದಲ್ಲಿ ಪಾಲಿಸಬೇಕಾದ ಶಿಸ್ತಿನ ಕುರಿತು, ಸುರಕ್ಷಾ ಕ್ರಮಗಳ ಕುರಿತು ತರಗತಿಯಲ್ಲಿ ನೆನಪಿಸುತ್ತಿರಬೇಕು.

    ಓದುವುದರಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಹೊಸ ಪುಸ್ತಕಗಳನ್ನು ನೀವಾಗಿಯೇ ನೀಡಬಹುದು. ಅದರ ಸಾರಾಂಶವನ್ನು ವಿದ್ಯಾರ್ಥಿಗಳು ತರಗತಿಯಲ್ಲಿ ಪ್ರಸ್ತುತಪಡಿಸಲಿ.

    ಮನೆಯಲ್ಲಿ ಉತ್ತಮ ಕೌಟುಂಬಿಕ ಪರಿಸ್ಥಿತಿ ಇಲ್ಲದೆ ಇರುವಂತಹ ವಿದ್ಯಾರ್ಥಿಗಳ ಪಾಲಿಗೆ ನೀವು ಉತ್ತಮ ರಕ್ಷಕರ ಪಾತ್ರವನ್ನು ವಹಿಸಬೇಕು. ಅವರು ಆ ಕಾರಣದಿಂದ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಅವರ ಬೆಂಬಲಕ್ಕೆ ಸದಾ ನೀವು ನಿಲ್ಲಬೇಕು.

    ಅಧ್ಯಾಪಕರು ಮತ್ತು ಹೆತ್ತವರ ಒಂದು ಸಂಘ ಇರಬೇಕು
    ಮಕ್ಕಳು ಚೆನ್ನಾಗಿ ಕಲಿಯಬೇಕು ಮತ್ತು ಯುವ ಪ್ರಾಯಕ್ಕೆ ತಲುಪಿದರೆ ಒಳ್ಳೆಯ ಕಂಪನಿಯಲ್ಲಿ ದೊಡ್ಡ ಸಂಬಳದ ಕೆಲಸ ಸಿಗಬೇಕು ಎಂದು ಬಯಸುವ ಹೆತ್ತವರ ಸಂಖ್ಯೆ ಇಂದು ಹೆಚ್ಚುತ್ತಿದೆ. ಇದಕ್ಕಾಗಿ ಅವರನ್ನು ಆಕ್ಷೇಪಿಸಲು ಸಾಧ್ಯವಿಲ್ಲ. ಆದರೆ ಮನುಷ್ಯ ಒಳ್ಳೆಯ ರೀತಿಯಲ್ಲಿ ಬೆಳೆಯಬೇಕಾದರೆ ಜೀವನದ ಮೌಲ್ಯಗಳನ್ನು ಅಭ್ಯಾಸ ಮಾಡಿಕೊಳ್ಳಬೇಕಾದರೆ ಪಕ್ವತೆಯುಳ್ಳ ವ್ಯಕ್ತಿತ್ವ ಉಂಟಾಗಬೇಕಾದರೆ ಯಾವುದಕ್ಕೆ ಮಹತ್ವ ನೀಡಬೇಕು ಮತ್ತು ನಮ್ಮ ಜೀವನದ ಗುರಿ ಏನಾಗಿರಬೇಕು ಎಂಬುದನ್ನು ಮರೆತುಬಿಡುತ್ತೇವೆ. ಮಕ್ಕಳಿಗೆ ಮೀಸಲಾಗಿರುವ ಸಮಯದಲ್ಲಿ ಹೋಂವರ್ಕ್ ಮಾಡಿಸಲು ಮಾರ್ಕ್ ಮತ್ತು ಗ್ರೇಡ್‌ಗಳನ್ನು ಹೆಚ್ಚಿಸಬೇಕಾದ ಅವಶ್ಯಕತೆಯ ಬಗ್ಗೆ ಅವರಿಗೆ ತಿಳಿಹೇಳಲು ಹೆತ್ತವರು ಸೀಮಿತರಾಗಿ ಬಿಡುತ್ತಾರೆ.

    ನನ್ನ ಹೆತ್ತವರೊಂದಿಗೆ ಯಾವುದೇ ವಿಷಯವನ್ನು ತೆರೆದು ಹೇಳಬಹುದು ಮತ್ತು ನಾನು ಏನು ಹೇಳಿದರೂ ಅದನ್ನು ಪೂರ್ವಗ್ರಹದೊಂದಿಗೆ ನೋಡುವುದಿಲ್ಲ ಎಂದು ಧೈರ್ಯವಿರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳ ದೈನಂದಿನ ದಿನಚರಿಯನ್ನು ಡಿಜಿಟಲ್ ಮಾಧ್ಯಮಗಳು ನುಂಗಿ ಹಾಕಲು ಆರಂಭಿಸಿದ ಬಳಿಕ ಎಲ್ಲರೂ ಜೊತೆ ಸೇರಿ ಸಾಮೂಹಿಕತೆಯನ್ನು ಬೆಳೆಸಲು ಸಾಧ್ಯವಿರುವ ಆಟೋಟಗಳ ಸಂಖ್ಯೆ ಕಡಿಮೆಯಾಯಿತು. ಇವುಗಳಿಂದಾಗಿ ಭಾವನಾತ್ಮಕ ಶುಷ್ಕತೆಯನ್ನು ಅನುಭವಿಸುವಂತೆ ಆಗಿದೆ. ವಿವಿಧ ರೀತಿಯ ಸ್ವಭಾವ ಸಂಬAಧಿ ನ್ಯೂನತೆಗಳಿಂದ ಮಕ್ಕಳು ಬಳಲುತ್ತಿದ್ದಾರೆ.

    ಮಕ್ಕಳು ಇಂದು ಯಾವುದನ್ನು ನೋಡಬಾರದು ಅದನ್ನು ನೋಡುತ್ತಿದ್ದಾರೆ. ಯಾವುದರ ಬಗ್ಗೆ ಆಲೋಚಿಸುವ ಅಗತ್ಯವಿಲ್ಲವೋ ಅವುಗಳನ್ನು ಆಲೋಚಿಸುತ್ತಿದ್ದಾರೆ. ಸಣ್ಣ ಮೆದುಳಿನಲ್ಲಿ ಹಲವು ಅನಗತ್ಯ ವಸ್ತುಗಳು ಸೇರಿಸಲ್ಪಡುತ್ತಿವೆ. ಈ ವಾಸ್ತವಿಕತೆಗಳನ್ನು ಹೆತ್ತವರು ಚರ್ಚಿಸುವುದಿಲ್ಲ. ಅದರಲ್ಲಿ ಲೈಂಗಿಕತೆ ಇದೆ. ಅಕ್ರಮವಿದೆ .ಅಪರಾಧಿ ಕೃತ್ಯಗಳಿವೆ. “ಯಾಕೆ ಈ ಮಗು ಹೀಗಿದೆ” ಎಂದು ಏನಾದರೂ ಸಂಭವಿಸಿದ ಬಳಿಕ ಚಿಂತಿಸುವುದಕ್ಕಿಂತ ಮೊದಲೇ ಮಕ್ಕಳಿಗಾಗಿ ಏನನ್ನು ಮಾಡಲಿಕ್ಕೆ ಸಾಧ್ಯವಿದೆ ಎಂಬುದರ ಬಗ್ಗೆ ಹೆತ್ತವರು ಅಧ್ಯಾಪಕರು ಜೊತೆ ಸೇರಿ ಆಲೋಚಿಸಬೇಕು. ಎಳೆಯ ಮನಸ್ಸುಗಳನ್ನು ಅರಿಯಲು ಸಾಧ್ಯವಾಗದೆ ಹೋದಾಗ ಹೆತ್ತವರು ಮತ್ತು ಮಕ್ಕಳು ಅದೇ ರೀತಿ ಅಧ್ಯಾಪಕರು ಮತ್ತು ಮಕ್ಕಳ ಮಧ್ಯೆ ಅಂತರವು ಹೆಚ್ಚುತ್ತಲೇ ಸಾಗುತ್ತದೆ.

    ಇಂದಿನ ಪರಿಸ್ಥಿತಿಯಲ್ಲಿ ಹೆತ್ತವರು ಮತ್ತು ಅಧ್ಯಾಪಕರ ಮಧ್ಯೆ ಕ್ರಿಯಾತ್ಮಕವಾದ ಸಂಘಟನೆ ಅನಿವಾರ್ಯವಾಗಿದೆ. ಅಧ್ಯಾಪಕರನ್ನು ಅಪರಾಧಿಗಳನ್ನಾಗಿಸುವ, ಅವರ ಆತ್ಮಸ್ಥೆöÊರ್ಯವನ್ನು ಕುಂದಿಸುವ ಕೆಲಸಗಳನ್ನು ಮಾಡಬಾರದು. ಏನಾದರೂ ತಪ್ಪುಗಳು ಸಂಭವಿಸಿದರೆ ಮಾನವೀಯ ದೃಷ್ಟಿಯಿಂದ ವಿದ್ಯಾಲಯದೊಳಗೆ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಹೆತ್ತವರು ಅರ್ಥಪೂರ್ಣವಾಗಿ ಇಂತಹ ರಕ್ಷಕ ಶಿಕ್ಷಕರ ಸಂಘದ ಭಾಗವಾಗಲು ಪ್ರಯತ್ನಿಸಬೇಕು. ಈ ಬಗ್ಗೆ ಕೆಲವು ಮಾರ್ಗ ನಿರ್ದೇಶನಗಳು ಈ ಕೆಳಗಿವೆ.

    1. ಮಕ್ಕಳನ್ನು ನೋಡಿಕೊಳ್ಳುವ ವಿಷಯದಲ್ಲಿ ಶೈಲಿಯಲ್ಲಿ ಹೆತ್ತವರಿಂದ ತಪ್ಪುಗಳು ಸಂಭವಿಸಬಹುದು. ಆದರೆ ಅವರ ಉದ್ದೇಶವು ಒಳ್ಳೆಯದಾಗಿರುತ್ತದೆ. ಮಾಡಿದ ರೀತಿಯಲ್ಲಿ ತೊಂದರೆ ಸಂಭವಿಸಿರುತ್ತದೆ. ಆದುದರಿಂದ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸದೆ ಅವರಿಗೆ ಮಾರ್ಗ ನಿರ್ದೇಶನಗಳನ್ನು ನೀಡಬೇಕು. ನಾವು ಅವರ ಮೇಲೆ ಆರೋಪಿಸಿದರೆ, ಅವರು ಅಧ್ಯಾಪಕರ ಮೇಲೆ ಆರೋಪವನ್ನು ಹೊರಿಸಲಾರಂಭಿಸುತ್ತಾರೆ. ಅದು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಉಪಕಾರವನ್ನು ಮಾಡುವುದಿಲ್ಲ.

    2. ಉಪದೇಶ ನೀಡುವ, ಕಲಿಸುವ ವಿಷಯದಲ್ಲಿ ಇರುವ ಪ್ರೇರಣೆಯಲ್ಲಿ ಯಾವುದೇ ಬದಲಾವಣೆಯನ್ನು ಉಂಟು ಮಾಡದೆ, ಹೆತ್ತವರೊಂದಿಗೆ ಅಧ್ಯಾಪಕರು ಶಾಂತ ರೀತಿಯಲ್ಲಿ ಅವರ ಮಾತುಗಳನ್ನು ಆಲಿಸುವವರಾಗಬೇಕು. ಮನಬಿಚ್ಚಿ ಮಾತನಾಡಲು ಅವರು ತಯಾರಿರಬೇಕು.

    3. ಒಂದು ಮಗುವಿನ ವರ್ತನೆಯಲ್ಲಿ ನ್ಯೂನತೆ ಇದ್ದರೆ ಅದು ಕಲಿಕೆಯಲ್ಲಿ ಹಿಂದುಳುವಿಕೆ ಆಗಿದ್ದರೆ ಅಧ್ಯಾಪಕರು ಅದಕ್ಕಾಗಿ ಕೆಲವು ಕಾರಣಗಳನ್ನು ಗುರುತಿಸಿರಬಹುದು. ಅದೇ ರೀತಿ ಹೆತ್ತವರು ಕೂಡ ಈ ಬಗ್ಗೆ ಭಿನ್ನವಾದ ವೀಕ್ಷಣೆಯನ್ನು ಹೊಂದಿರಬಹುದು. ಅಧ್ಯಾಪಕರು ಮತ್ತು ಹೆತ್ತವರ ಕಾರಣಗಳನ್ನು ಜೊತೆಗೂಡಿಸಿ ಒಂದು ಸರಿಯಾದ ನಿರ್ಧಾರಕ್ಕೆ ಬರಬಹುದು. ಆಗ ಒಂದು ಸರಿಯಾದ ಪರಿಹಾರವನ್ನು ಸೂಚಿಸಲು ಸಾಧ್ಯವಾಗಬಹುದು.

    4. ಮಕ್ಕಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಒಳಿತು ಮತ್ತು ತುಂಟತನಗಳ ಬಗ್ಗೆ ಹೆತ್ತವರು ಮನಬಿಚ್ಚಿ ಮಾತನಾಡಲು ಪ್ರೇರೇಪಿಸಬಹುದು.
    ಅವರ ವರ್ತನೆಯಲ್ಲಿರುವ ಒಳ್ಳೆಯ ವಿಷಯಗಳನ್ನು ಎತ್ತಿ ತೋರಿಸಿ ಪ್ರೋತ್ಸಾಹಿಸಬೇಕು.

    5. ಹೆತ್ತವರ ಮಾತುಗಳನ್ನು ಆಲಿಸಿದ ಬಳಿಕ ಆ ವಿದ್ಯಾರ್ಥಿಯು ಶಾಲೆಯಲ್ಲಿ ಮಾಡುವ ಉತ್ತಮ ವಿಷಯಗಳ ಕುರಿತು ಪ್ರಸ್ತಾಪಿಸಬೇಕು. ಅದು ಎಷ್ಟರವರೆಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಸಬಹುದು. ಯಾಕೆ ಮಗು ಈ ಸಾಮರ್ಥ್ಯವನ್ನು ಎಲ್ಲ ವಿಷಯಗಳಲ್ಲಿಯೂ ಬಳಸುತ್ತಿಲ್ಲ ಎಂಬುದರ ಕುರಿತು ಒಟ್ಟಿಗೆ ಚರ್ಚಿಸಬಹುದು. ಯಾವುದನ್ನು ಅಧ್ಯಾಪಕರಿಂದ ಮಾಡಬಹುದು ಮತ್ತು ಯಾವುದನ್ನು ಹೆತ್ತವರು ಮಾಡಬೇಕು ಎಂಬುದರ ಬಗ್ಗೆ ಒಂದು ತೀರ್ಮಾನಕ್ಕೆ ಬರಬಹುದು. ವರ್ತನೆಯಲ್ಲಿರುವ ವೈಕಲ್ಯಗಳನ್ನು ಪರಿಹರಿಸುವುದಕ್ಕೆ ಮತ್ತು ಡಿಜಿಟಲ್ ಅಡಿಕ್ಷನ್ ಅನ್ನು ನಿವಾರಿಸಲು ಈ ರೀತಿಯ ಹೆತ್ತವರ ಮತ್ತು ಅಧ್ಯಾಪಕರ ಪರಸ್ಪರ ಚರ್ಚೆಯು ಸಹಕಾರಿಯಾಗಬಹುದು.

    6. ಶಿಕ್ಷಕ-ರಕ್ಷಕ ಸಂಘದ ಕುರಿತು ಹೆತ್ತವರು ಇಟ್ಟುಕೊಂಡಿರುವ ನಿರೀಕ್ಷೆ ಬಗ್ಗೆ ಹೆತ್ತವರು ಹೇಳಬೇಕು. ವಿದ್ಯಾರ್ಥಿಗಳ ಪಠ್ಯ ಪಠ್ಯೇತರ ಸಾಮರ್ಥ್ಯಗಳ ಬಗ್ಗೆ ಹೆತ್ತವರಿಗೆ ಶಿಕ್ಷಕರು ಹೇಳಿಕೊಡಬಹುದು. ಅವನ ಭವಿಷ್ಯವನ್ನು ರೂಪಿಸಲಿಕ್ಕೆ ಪ್ರೇರಣೆಯನ್ನು ನೀಡಬಹುದು. ವಿದ್ಯಾರ್ಥಿಗಳ ಕೆಲಸಗಳನ್ನು ವಿವರಿಸಿದ ಬಳಿಕ ಹೀಗೆ ಮಾಡಬಹುದು. ಜೊತೆಗೆ ಸ್ವಲ್ಪ ಸಮಯ ಕಳೆದ ಬಳಿಕ ಬದಲಾಗಬಹುದು ಎಂಬುದನ್ನು ನೆನಪಿಸಿಕೊಡಬೇಕು.

    7. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ತರಗತಿಯಲ್ಲಿ, ಅದೇ ರೀತಿಯಲ್ಲಿ ಆಯಾಸ ರಹಿತವಾಗಿ ಮನೆಗೆ ಬಂದ ಬಳಿಕವು ಶಿಕ್ಷಣದ ಬಗ್ಗೆ ಒಲವುಂಟಾಗಿ ಕಲಿಯುವಂತಾಗಲು ಏನು ಮಾಡಬೇಕು? ಯಾವ ವಿಧಾನವನ್ನು ಅಳವಡಿಸಬಹುದು ಎಂಬುದರ ಕುರಿತು ಹೆತ್ತವರು ಮತ್ತು ಶಿಕ್ಷಕರು ಜೊತೆಗೂಡಿ ಏನಾದರೂ ತೀರ್ಮಾನಕ್ಕೆ ಬರಬೇಕು. ಮತ್ತು ಅದನ್ನು ಹಂತ ಹಂತವಾಗಿ ಜಾರಿಗೊಳಿಸಲು ಪ್ರಯತ್ನಿಸಬೇಕು.

    8. ವಿದ್ಯಾರ್ಥಿಯ ಒಂದು ಅಥವಾ ಎರಡು ವಿಷಯಗಳ ಮೇಲೆ ಒತ್ತು ನೀಡುವ ಮೂಲಕ ಸಹಕಾರ ಆರಂಭಿಸಬಹುದು. ಅದು ಯಶಸ್ವಿಯಾದಾಗ ಇತರ ಕ್ಷೇತ್ರಗಳಿಗೂ ಪ್ರೇರಣೆಯಾಗುತ್ತದೆ. ಸಹಕಾರದ ಫಲಿತಾಂಶ ಲಭಿಸುತ್ತಿದೆಯೇ ಎಂಬುದನ್ನು ನಿರ್ದಿಷ್ಟ ಸಮಯದ ಅವಧಿಯಲ್ಲಿ ಮರುಪರಿಶೀಲಿಸಬೇಕು. ಯಶಸ್ಸು ಕಂಡರೆ ಸಹಕರಿಸಿದ ಪೋಷಕರನ್ನು ಪ್ರಶಂಸಿಸಲು ಲೋಭ ತೋರಬಾರದು. ವಿದ್ಯಾರ್ಥಿಗೆ ಶ್ರೇಯಸ್ಸು ಸಲ್ಲಿಸುವಂತೆ ಪೋಷಕರನ್ನು ಪ್ರೇರೇಪಿಸಬೇಕು. ಶಿಕ್ಷಕರೂ ಕೂಡ ಶಾಲೆಯಲ್ಲಿ ಇದನ್ನು ಪಾಲಿಸಬೇಕು.

    9. ಸಹಕಾರದ ಫಲಿತಾಂಶ ತೃಪ್ತಿಕರವಾಗಿಲ್ಲದಿದ್ದರೂ ನಿರಾಶರಾಗಬಾರದು. ಪೋಷಕರ ಮೇಲೆ ಒತ್ತಡ ಹಾಕಬಾರದು. ಇದು ಪರಸ್ಪರ ದೋಷಾರೋಪಣೆಗೆ ದಾರಿ ನೀಡಬಹುದು. ಬದಲಾವಣೆಯನ್ನು ತರಲು ಸಾಧ್ಯವೆಂಬ ಆತ್ಮವಿಶ್ವಾಸವನ್ನು ಪೋಷಕರಿಗೆ ಸದಾ ನೀಡಬೇಕು. ಶಿಕ್ಷಕರೂ ಕೂಡ ಅದನ್ನು ಬೆಳೆಸಿಕೊಳ್ಳಬೇಕು. ಇದರ ಪರಿಣಾಮ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂಬAಧದಲ್ಲಿರುವಾಗ ಕಾಣಿಸುತ್ತದೆ.

    10. ಗುರಿಯಾಗಿಟ್ಟುಕೊಂಡ ಕಾರ್ಯಗಳಲ್ಲಿ ಸಹಕರಿಸುವ ಮೂಲಕ ವಿದ್ಯಾರ್ಥಿ ಪ್ರಗತಿ ಸಾಧಿಸಿದರೂ ಕೆಲವು ಪೋಷಕರು ಶಿಕ್ಷಕರಿಗೆ ಧನ್ಯವಾದ ಹೇಳದಿರಬಹುದು. ಹತಾಶರಾಗಬೇಡಿ. ನಿಮ್ಮನ್ನು ನೀವು ‘ವೆರಿ ಗುಡ್’ ಎಂದು ಶ್ಲಾಘಿಸಿಕೊಳ್ಳಿ.

    ಡಾ. ಸಿ.ಜೆ. ಜೋನ್
    ಸೀನಿಯರ್ ಸೈಕಿಯಾ ಟ್ರಿಸ್ಟ್

  • ಪತ್ನಿಗೆ ಆರ್ಥಿಕ ಸ್ಥಿತಿ ತಿಳಿಸಿದರೆ ಏನಾಗಬಹುದು..?

    ಪತ್ನಿಗೆ ಆರ್ಥಿಕ ಸ್ಥಿತಿ ತಿಳಿಸಿದರೆ ಏನಾಗಬಹುದು..?

    ಪತಿ-ಪತ್ನಿಯರ ಸಂಬಂಧ ಕೇವಲ ಶಾರೀರಿಕ ಸುಖಕ್ಕೆ ಮಾತ್ರ ಮೀಸಲು ಎಂಬ ನಂಬಿಕೆ ಕೆಲವರಿಗೆ, ವಂಶ ಬೆಳೆಸುವುದೇ ಮದುವೆಯ ಉದ್ದೇಶ ಎಂದು ಭಾವಿಸುವವರೂ ಇದ್ದಾರೆ. ಇದಕ್ಕಿಂತಲೂ ಮಿಗಿಲಾಗಿ ಪತಿ-ಪತ್ನಿಯು ಪರಸ್ಪರರ ಹಿತಚಿಂತಕರಾಗಿರುತ್ತಾರೆ.

    ಆದ್ದರಿಂದಲೇ ಕುರ್‌ಆನ್‌ನಲ್ಲಿ ಪತಿ-ಪತ್ನಿಯನ್ನು ಪರಸ್ಪರರ ಉಡುಪು ಎನ್ನಲಾಗಿದೆ. ಅವರನ್ನು ಜೋಡಿ’ ಎನ್ನಲಾಗಿದೆ.ಉಡುಪು’ ಯಾವ ರೀತಿ ಒಂದು ಶರೀರದ ನಗ್ನತೆಯನ್ನು ಮರೆಮಾಡುವ ಮೂಲಕ ಗೌರವಕ್ಕೆ ಪಾತ್ರವಾಗಿರುತ್ತದೋ… ಅದೇ ರೀತಿ ದಂಪತಿಗಳು ಪರಸ್ಪರರ ಗೌರವ ಉಳಿಸುವ ವ್ಯಕ್ತಿತ್ವ ಉಳ್ಳವರಾಗಿರುತ್ತಾರೆ. ಪತಿಯು ಆರ್ಥಿಕ ಸ್ತಂಭವಾಗಿದ್ದರೆ, ಪತ್ನಿಯು ಮನೆಯ ಜವಾಬ್ದಾರಿಯನ್ನು ಹೊರುವವಳಾಗಿರುತ್ತಾಳೆ. ಅಂತಹದರಲ್ಲಿ ಪತಿಯು ತನ್ನ ಎಲ್ಲಾ ವ್ಯವಹಾರಗಳ ಬಗ್ಗೆ ತನ್ನ ಸಂಗಾತಿಯೊAದಿಗೆ ಸಮಾಲೋಚನೆ ಮಾಡಬೇಕು. ಇಂದು ಕೆಲವು ಪುರುಷರು ಮಾಡುವ ತಪ್ಪು ಏನೆಂದರೆ ತನ್ನ ಕಾರುಬಾರು ವ್ಯವಹಾರದ ಬಗ್ಗೆ, ತನ್ನ ದುಡಿಮೆಯ ಸ್ಥಿತಿಗತಿ ಬಗ್ಗೆ ಹೆಂಡತಿಗೆ ಯಾವುದೇ ವಿಷಯ ತಿಳಿಸುವುದಿಲ್ಲ. ತಾನು ಸಂಪಾದಿಸುವ ಹಣ ಯಾವ ರೀತಿಯದು, ಹೇಗೆ ಸಂಪಾದಿಸುತ್ತಿದ್ದೇನೆAಬ ವಿವರವನ್ನು ರಹಸ್ಯ ಆಗಿ ಇಡುತ್ತಾರೆ.

    ಒಂದು ಘಟನೆ ಹೀಗಿದೆ. ಇಕ್ಬಾಲ್ ದೊಡ್ಡ ಉದ್ಯಮಿ. ನಗರದಲ್ಲಿ ಅವನು ಎಲ್ಲರ ಗೌರವಕ್ಕೆ ಪಾತ್ರನಾದ ದೊಡ್ಡ ಶ್ರೀಮಂತ ಸಾಲಿಗೆ ಸೇರಿದವನು. ಮನೆಯಲ್ಲಿ ಐದಾರು ಅದ್ಧೂರಿ ಕಾರುಗಳು, ಹೆಂಡತಿ ಮಕ್ಕಳೊಂದಿಗೆ ವಿದೇಶ ತಿರುಗಾಟ, ಹಲವು ಪಾರ್ಟಿಗಳನ್ನು ಅಯೋಜಿಸುತ್ತಾ ಆಡಂಬರದ ಜೀವನದಲ್ಲಿ ಮಜಾದಲ್ಲಿದ್ದ. ಹೆಂಡತಿಗೆ ತನ್ನ ಪತಿಯು ಇಷ್ಟೊಂದು ಹಣ ಎಲ್ಲಿಂದ ತರುತ್ತಿದ್ದಾನೆಂಬ ಚಿಂತೆ ಬಂದಾಗ ಆಕೆ ಪ್ರಶ್ನಿಸುತ್ತಾಳೆ. ಅವನು ಹೇಳಿದ ನನಗೆ ಈ ಸಲ ಉದ್ಯಮದಲ್ಲಿ ಕೋಟಿಗಟ್ಟಲೇ ಲಾಭ ಬಂತು… ನಿನಗೆ ಅದೆಲ್ಲಾ ವಿಷಯ ಬೇಡಾ, ನಿನಗೆ ಏನು ಬೇಕೋ ಅದನ್ನು ಖರೀದಿಸು, ಎಂಜಾಯ್ ಮಾಡು… ಎಂದ. ಒಂದಿನ ಪತಿಯನ್ನು ಪೊಲೀಸರು ಬಂದು ಕರೆದೊಯ್ದಾಗ ಹೆಂಡತಿಗೆ ಅರಿವಾಯಿತು ತಾನಿರುವ ಮನೆ, ತನ್ನ ಸಂಪತ್ತು ಎಲ್ಲವೂ ಮುಳುಗಿ ಹೋಗಿದೆ ಬ್ಯಾಂಕ್‌ನವರು ಅವರ ಅದ್ಧೂರಿ ಮನೆ, ಕಾರು ಎಲ್ಲವನ್ನೂ ಸೀಝ್’ ಮಾಡಿದ್ದರು. ವಿಷಯ ಏನೆಂದರೆ ಈ ಉದ್ಯಮಿ ಪತಿರಾಯ ಬ್ಯಾಂಕ್‌ನಿAದ ಕೋಟಿಗಟ್ಟಲೇ ಲೋನ್ ತೆಗೆದು, ಜನರಿಂದ ಲಕ್ಷಗಟ್ಟಲೇ ಹೂಡಿಕೆಯನ್ನು ಮಾಡಿಸಿ ಎಲ್ಲರಿಗೂ ಪಂಗನಾಮ ಹಾಕಿದ್ದ. ಜನರು ತಾವು ಈ ವ್ಯಕ್ತಿಯನ್ನು ನಂಬಿ ಕೊಟ್ಟ ಕೋಟಿಗಟ್ಟಲೇ ಹಣದಿಂದ ಆತ ಆಡಂಬರದ ಜೀವನ ನಡೆಸುತ್ತಿದ್ದ. ಜನರ ಬೆವರಿನ, ಶ್ರಮದ ಹಣದಲ್ಲಿ ಬೆಲೆಬಾಳುವ ಕಾರುಗಳಲ್ಲಿ ವಿದೇಶಿ ಪ್ರಯಾಣದಲ್ಲಿ ಮಜಾವಾಗಿದ್ದ. ಅರಮನೆಯಿಂದ ಸೀದಾ ಬೀದಿಗೆ ಬಿದ್ದ ಮನೆ ಒಡತಿಗೆ ಸತ್ಯ ತಿಳಿದಾಗ ಆಕೆ ಎಲ್ಲವನ್ನೂ ಕಳೆದುಕೊಂಡು ಬರಿಗೈ ಆಗಿದ್ದಳು. ಪತಿಯು ತನಗೆ ಹೆಚ್ಚು ಆದಾಯ ಬರುತ್ತಿದೆ, ತನ್ನ ಉದ್ಯಮದಲ್ಲಿ ತುಂಬಾ ಲಾಭ ಆಗಿದೆ ಎಂದು ಸದಾ ಅವಳ ಬಳಿ ಹೇಳುತ್ತಿದ್ದ. ಆಕೆ ಅದನ್ನು ನಂಬಿದ್ದಳು. ಇಂದು ಆ ಉದ್ಯಮಿ ಎಲ್ಲಾ ಸಂಪತ್ತು ಕಳೆದುಕಂಡು ಮೂಲೆ ಸೇರಿದ್ದಾನೆ. ಇಲ್ಲಿ ನಮಗೆ ತಿಳಿಯುವ ಒಂದು ಪಾಠ ಏನೆಂದರೆ… ಮನೆಯ ಯಜಮಾನಿ (ಪತ್ನಿ) ತನ್ನ ಪತಿಯ ಸಂಪಾದನೆಯ ಬಗ್ಗೆ ಅಲಕ್ಷö್ಯದಿಂದ ಇರುವುದು, ಅವಳಿಗೆ ಬೇಕಾದಷ್ಟು ಹಣ ಕೈಗೆ ನೀಡಿದಾಗ ಅವಳೂ ಖುಶಿಪಟ್ಟಳು. ಪತಿಯು ಯಾವ ರೀತಿ ಸಂಪಾದಿಸುತ್ತಿದ್ದಾನೆAಬ ಚಿಂತನೆ ಅವಳಿಗೆ ಇರಬೇಕಾಗಿತ್ತು. ಬೆಲೆಬಾಳುವ ವಸ್ತç, ಬಂಗಾರ, ಫರ್ನಿರ‍್ಸ್, ವಿದೇಶ ಯಾತ್ರೆ ಇತ್ಯಾದಿಗಳಲ್ಲಿ ಮೈಮರೆತ ಪತ್ನಿಗೆ ಒಂದು ದಿನ ಇದೆಲ್ಲಾ ನ್ಯಾಯದ ಹಣ ಅಲ್ಲ ಎಂದು ತಿಳಿದಾಗ ಆಕೆ ಕುಸಿದು ಬಿದ್ದಳು.

    ಇಂದು ಹೃದಯಾಘಾತ ಹೆಚ್ಚುತ್ತಿದೆ. ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನು ಅಪ್ಪುತ್ತಿದ್ದಾರೆ. ದಿಢೀರನೇ ಬಂದು ಎರಗುವ ಸಾವಿಗೆ ಪತಿಯನ್ನು ಕಳೆದುಕೊಂಡಾಗ ಪತಿಯು ಎಷ್ಟು ಜನರಿಗೆ ಸಾಲ’ ನೀಡಲು ಬಾಕಿ ಇದೆ? ಎಷ್ಟು ಕಡೆ ಅದನ್ನು ಬಿಸಿನೆಸ್‌ಗೆ ಹಣ ಹೂಡಿಕೆ ಮಾಡಿರುತ್ತಾನೇ ಎಷ್ಟು ಹಣ ಆತನಿಗೆ ಬರಬೇಕಾಗಿದೆ, ಆತನ ವ್ಯವಹಾರ ಏನೂ… ಇತ್ಯಾದಿ ಏನೂ ಪತ್ನಿಗೆ ತಿಳಿಯದೇ ಹೋದಾಗ ನಷ್ಟ’ ಉಂಟಾಗುತ್ತದೆ. ಆದರಿಂದಲೇ ಪತಿ-ಪತ್ನಿಯ ನಡುವೆ ಸಮಾಲೋಚನೆ ಇರಬೇಕು. ತಮ್ಮ ವ್ಯವಹಾರ, ಹಣ, ಬಿಸಿನೆಸ್ ವಿಷಯ ಇತ್ಯಾದಿ ವಿಷಯವನ್ನು ಪತ್ನಿಗೆ ತಿಳಿಸಬೇಕು. ಹೆಂಡತಿಗೆ ಹೇಳುವುದರಿಂದ ತಮ್ಮ ಗಂಡಸುತನಕ್ಕೆ ಪೆಟ್ಟಾಗುವುದಿಲ್ಲ. ಯಾಕೆ ಹೆಂಗಸರಿಗೆ ಹೇಳಬೇಕೆಂದು ಚಿಂತಿಸುವುದೇ ದೊಡ್ಡ ತಪ್ಪು. ಪ್ರತೀಯೊಬ್ಬರೂ ತಮ್ಮ ವ್ಯವಹಾರದ ಸಂಗತಿಯನ್ನು ಪತ್ನಿಗೆ ತಿಳಿಸಬೇಕು. ಅವಳು ನಿಮ್ಮ ಬಾಳಸಂಗಾತಿ. ಭವಿಷ್ಯದ ಲಾಭ, ನಷ್ಟಕ್ಕೆ ಅವಳೂ ಭಾಗಿಯಾಗುತ್ತಾಳೆ. ನನ್ನ ಪತಿ ಈ ರೀತಿ ಜನರಿಗೆ ಮೋಸ ಮಾಡಿ ಹಣ ಸಂಪಾದಿಸುತಿದ್ದ ಎಂದು ಗೊತ್ತಿದ್ದರೆ… ನಾನು ದುಂದುವೆಚ್ಚ ಮಾಡದೇ ಬದುಕುತ್ತಿದ್ದೆ. ನಾನು ಆತನನ್ನು ಅನ್ಯಾಯದ ಗಳಿಕೆಯಿಂದ ತಡೆಯುತ್ತಾ ಇದ್ದೆ… ಎಂದು ನಂತರ ಪಶ್ಚಾತ್ತಾಪ ಪಡುವುದು ಬೇಡ.

    ಇಂದು ಪತಿ ಸಾಲ ಮಾಡಿ ಮಕ್ಕಳ ಬರ್ತ್ಡೇ ಮಾಡುವುದು, ಸಾಲಮಾಡಿ ಪ್ರವಾಸಕ್ಕೆ ಹೋಗುವುದು, ಮದುವೆಗೆ ಗಿಫ್ಟ್ ಖರೀದಿಸುವುದು, ಬಸುರಿಯ ಸೀಮಂತ ಮಾಡುವುದೂ… ಎಲ್ಲವೂ ಮಹಿಳೆಯರ ಒತ್ತಾಯದಿಂದಲೇ ಆಗಿರುತ್ತದೆ. ಗಂಡಸರು ಹಣ ಸಾಲ ಮಾಡಿ ಖರ್ಚು ಮಾಡುವುದು ಕೇವಲ ಮಹಿಳೆಯರಿಗೆ ನೆಮ್ಮದಿ ಸಿಗಲಿ ಎಂದಾಗಿದೆ. ಒಡವೆ, ಸೀರೆ, ಪಾತ್ರೆ… ಸ್ಕೀಮ್‌ನಲ್ಲಿ ಖರೀದಿಸಿ, ತಿಂಗಳ ಹಣ ಕಟ್ಟಲು ಗಂಡಸರನ್ನು ಒತ್ತಾಯಿಸುವುದು ಅವರು ಎಲ್ಲಿಂದಲಾದರೂ ತರಲಿ ಎಂದು ಸುಮ್ಮನಿರುವುದು ತಪ್ಪು.ಹಾಸಿಗೆ ಇದ್ದಷ್ಟೇ ಕಾಲು ಚಾಚು’ ಎಂಬ ಗಾದೆ ಮಾತಿದೆ. ಪತಿಯು ತನ್ನ ಕುಟುಂಬದ ಖುಶಿಗಾಗಿ ಸಾಲಗಾರನಾಗುತ್ತಾನೆ.

    ಗಲ್ಫ್ನಲ್ಲಿ ಬೆವರು ಸುರಿಸಿ ಶ್ರಮವಹಿಸಿ ದುಡಿದು ಕಳಿಸುವ ಪತಿಯ ಹಣವನ್ನು ಇಲ್ಲಿ ಶಾಪಿಂಗ್‌ಗಾಗಿ, ಬಗೆ ಬಗೆಯ ತಿಂಡಿ, ಪಾರ್ಟಿಗಾಗಿ ಖರ್ಚು ಮಾಡುವ ಮಹಿಳೆಯರಿಗೆ ಭರವಿಲ್ಲ. ಹಣ ಇರುವಾಗ ಮಾತ್ರ ಪತಿಗೆ ಗೌರವ, ಮನ್ನಣೆ ನೀಡುವ ಆತನು ಬರಿಕೈಯವನಾದಾಗ ಆತನನ್ನು ದೂರ ಮಾಡುವ ಪತ್ನಿಯರೂ ಇದ್ದಾರೆ. ಇಂತಹ ಪತ್ನಿಯರನ್ನು ಕೃತಜ್ಞತೆ ಇಲ್ಲದ ವರ್ಗಕ್ಕೆ ಸೇರಿಸಬಹುದು. ಪತಿ-ಪತ್ನಿಯ ನಡುವೆ ಯಾವುದೇ ವಿಷಯಕ್ಕೂ ರಹಸ್ಯ ಇರಬಾರದು. ಅವರಿಬ್ಬರು ತೆರೆದ ಪುಸ್ತಕದಂತೇ ಪ್ರತೀ ಒಂದು ವ್ಯವಹಾರ, ವಿಷಯ ಪರಸ್ಪರರ ನಡುವೆ ಚರ್ಚೆ ಆಗಬೇಕು. ಪತಿಯನ್ನು ವಿನಾಶದಿಂದ ರಕ್ಷಿಸುವುದು ಪತ್ನಿಯ ಧರ್ಮವಾಗಿದೆ.

    ಕೆಲವು ಪತಿಯಂದಿರು ಊರಲ್ಲಿ ತುಂಬಾ ಸಾಲ ಮಾಡಿ ನಂತರ ವಿದೇಶಕ್ಕೆ ಪರಾರಿಯಾಗಿ ಬಿಡುತ್ತಾರೆ. ಊರಲ್ಲಿ ಸಾಲಗಾರರು ಪತ್ನಿಯನ್ನು ಬದುಕಲೂ ಬಿಡುವುದಿಲ್ಲ. ಅವಳಿಗೆ ಕಿರುಕುಳ ನೀಡುತ್ತಾರೆ. ಇಂತಹ ಹಲವು ಕೇಸ್‌ಗಳು ನಮ್ಮ ಕೌನ್ಸಿಲಿಂಗ್‌ಗೆ ಬಂದಿದೆ. ಇದರಿಂದ ಬಚಾವ್ ಆಗಲು ಹೆಂಡತಿ ಪತಿಗೆ ತಲಾಕ್ ಕೇಳುತ್ತಾಳೆ. ಆತನ ಹೆಂಡತಿ ಆಗಿ ತಾನು ಈಗ ಇಲ್ಲ ಎಂದು ಸಾಲಗಾರರಿಗೆ ಹೇಳಿ ಆಕೆ ಬಚಾವ್ ಆಗಲು ನೋಡುತ್ತಾಳೆ. ಸಾಲ ಮಾಡಿ ಪರಾರಿ ಆಗುವವರ ಸಂಖ್ಯೆ ಇಂದು ಹೆಚ್ಚುತ್ತಿದೆ. ಅವರ ಕುಟುಂಬ ಜೀವನವೂ ನಷ್ಟ ಆಗುತ್ತದೆ. ಪತ್ನಿಯ ಆತಿ ಆಶೆ, ಬೇಕಾಬಿಟ್ಟಿ ಖರ್ಚು, ಪತಿಯನ್ನು ಸಾಲಗಾರನನ್ನಾಗಿ ಮಾಡುವುದೇ ಸತ್ಯ. ಆದುದರಿಂದ ಪತಿ-ಪತ್ನಿಯರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಜೀವನ ನಡೆಸಬೇಕು. ಸಾಲ' ಬದುಕನ್ನು ನರಕ ಮಾಡುತ್ತದೆ.ಸಾಲ’ ಬದುಕನ್ನೇ ಅಂತ್ಯ’ ಮಾಡುತ್ತದೆ. ಪತ್ನಿಯ ಬಳಿ ತಮ್ಮ ವ್ಯವಹಾರವನ್ನು, ಹಣಕಾಸು ವಿಷಯವನ್ನು ಹೇಳುವುದು ತಮ್ಮ ಪುರುಷತ್ವ(ಅಹಂಕಾರ)ಕ್ಕೆ ಅಡ್ಡಿ ಎಂದು ಭಾವಿಸುವುದು ಮೂರ್ಖತನ.

    ಪತ್ನಿಯು ಪತಿಯ ಹಿತವನ್ನೇ ಬಯಸುವವಳು. ಅವಳು ಪತಿಯನ್ನುಹರಾಮ್’ ದಾರಿಗೆ ಸಾಗಲು ಅವಕಾಶ ನೀಡಲಾರಳು. ಹರಾಮ್ ಅಥವಾ ವಂಚನೆಯ ಸಂಪಾದನೆಗೆ ಹೆಂಡತಿ, ಮಕ್ಕಳು ಭಾಗೀದಾರರಾಗಿರಲು ಆಶಿಸುವುದಿಲ್ಲ. ಜೀವನ ನ್ಯಾಯದ ಸಂಪಾದನೆಯಲ್ಲಿರಲಿ. ನಾಳೆ ದೇವನ ಬಳಿ ಅಪರಾಧಿ ಆಗಿ ನಿಲ್ಲುವ ಹೀನ ಸ್ಥಿತಿ ಬಾರದಿರಲಿ.

    ಶಮು

  • 40ರ ಆಸುಪಾಸಿನ ಮಹಿಳೆಯರ ‘ಮರೆವಿನ’ ಕವನವಿದು…

    40ರ ಆಸುಪಾಸಿನ ಮಹಿಳೆಯರ ‘ಮರೆವಿನ’ ಕವನವಿದು…

    ಈಗೀಗ ನನಗೆ ಅತೀವ ಮರೆವು,
    ಫ್ರಿಜ್ಜು ತೆರೆಯುತ್ತೇನೆ,
    ಯಾಕೆ ತೆರೆದೆ ಎಂದು ಮರೆಯುತ್ತೇನೆ.

    ಬಟ್ಟೆ ಬರೆಗಳನ್ನು ಮಡಚಲೆಂದು
    ಕೋಣೆಗೆ ತೆರಳುತ್ತೇನೆ.
    ಅಲ್ಲಿ ಮತ್ತೇನೋ ಕೆಲಸ ಕಂಡೊಡನೆ
    ಈ ಕೆಲಸ ಮರೆಯುತ್ತೇನೆ.

    ವಿಶೇಷ ಅಡುಗೆ ಮಾಡಲೆಂದು
    ಹೊರಟಾಗಲೂ ಅಷ್ಟೇ,
    ಕೆಲವೊಂದು ಸಾಮಗ್ರಿಗಳನ್ನು
    ಹಾಕಲೂ ಮರೆಯುತ್ತೇನೆ.

    ಏನೋ ಹೇಳಲೆಂದು
    ಬಾಯಿ ತೆರೆಯುತ್ತೇನೆ,
    ಮಧ್ಯದಲ್ಲಿ ಮತ್ತೇನೋ ಮಾತು ಬಂದರೆ ಸಾಕು
    ಈ ವಿಷಯ ಮರೆತೇಹೋಗುತ್ತೇನೆ.

    ಇದು ನನ್ನ ಸಮಸ್ಯೆ ಮಾತ್ರವೇ
    ಪ್ರಶ್ನಿಸುವೆ ಹಲವು ಬಾರಿ
    ಇಲ್ಲ ನಮ್ಮದೂ ಕೂಡಾ
    ಅನ್ನುತ್ತಾರೆ ಗೆಳತಿಯರು ಸಾರಿ.

    ಬಹುಷಃ ನಲ್ವತ್ತರ ಅಂಚಿನಲ್ಲಿರುವ
    ನಮಗೆ ಇದು ಸಾಮಾನ್ಯ
    ಆದರೂ ಈ ಬಗ್ಗೆ
    ಮುಗಿಯದು ತಲ್ಲಣ

    ಮತ್ತೊಮ್ಮೆ ನನ್ನಲ್ಲೇ ಪ್ರಶ್ನಿಸುತ್ತೇನೆ.
    ಅದೇಕೆ ನನಗೆ ನನ್ನ
    ಸಮಸ್ಯೆಗಳು ಮರೆಯುವುದಿಲ್ಲ,
    ಹಿಂದೊಮ್ಮೆ ಘಟಿಸಿದ ಕಹಿಘಟನೆ
    ಮರೆತುಹೋಗುವುದಿಲ್ಲ,

    ಬದುಕಿಗೆ ವಿದಾಯ ಹೇಳಿದ
    ಅಪ್ಪನ ಅಗಲಿಕೆಯ ನೋವೇಕೆ
    ಮರೆತು ಹೋಗುವುದಿಲ್ಲ,
    ಜವಾಬ್ದಾರಿಗಳೂ ಮರೆತು ಹೋಗುವುದಿಲ್ಲ.

    ನಾನು ಮರೆಯುವುದು ಅತ್ಯಂತ ಕ್ಷುಲ್ಲಕ ವಿಷಯಗಳನ್ನು.
    ಮನೆಯನ್ನು ನಡೆಸುವುದಾಗಲಿ,
    ಮಕ್ಕಳಿಗೆ ಉಣಿಸುವುದಾಗಲಿ ನಾನು ಮರೆಯುವುದಿಲ್ಲ.
    ಆದರೂ ನನಗೀಗ ಹೆಸರು
    ಮಹಾನ್ ಮರೆಗುಳಿ.

    ಹೌದು ಕೆಲವೊಮ್ಮೆ ಅನಿಸುವುದು
    ಮರೆಯಬೇಕು ಎಲ್ಲವನ್ನು,
    ತಿಂಗಳು ತಿಂಗಳು ಅನುಭವಿಸುವ ನೋವನ್ನು,
    ಎಂದೋ ಅನುಭವಿಸಿದ,
    ಇಂದಿಗೂ ಚುಚ್ಚುವ ಅವಮಾನವನ್ನು,
    ಮನದಲ್ಲಿ ಅದುಮಿಟ್ಟುಕೊಂಡಿರುವ ಆಸೆಯನ್ನು,

    ನಾಳೆ ಎನ್ನುವುದನ್ನು
    ಮರೆಯಬೇಕು, ಮರೆತು ಬದುಕಬೇಕು.
    ಬದುಕಲ್ಲಿ ಒಂದು ದಿನವನ್ನು ನನಗಾಗಿ ಬದುಕಬೇಕು.
    ಯಾವುದೇ ಧಾವಂತವಿಲ್ಲದೆ,
    ಯಾವುದೇ ಒತ್ತಡವಿಲ್ಲದೆ,
    ಯಾವ ಜವಾಬ್ದಾರಿಯ ಹಂಗೂ ಇಲ್ಲದೇ.
    ನಾನಾಗಿ, ನನಗಾಗಿ.

    ಅಸ್ಮತ್ ವಗ್ಗ

  • ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳಲ್ಲಿ 308 ಶಿಕ್ಷಕರು: 
ಸರಕಾರದ ಸಬೂಬು ಏನು?

    ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳಲ್ಲಿ 308 ಶಿಕ್ಷಕರು: ಸರಕಾರದ ಸಬೂಬು ಏನು?

    ಕರ್ನಾಟಕದಲ್ಲಿ ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ 308ಕ್ಕೆ ಇಳಿದಿದೆ. ಕಳೆದ ಸಾಲಿನಲ್ಲಿ ಇಂತಹ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ 1,572 ಇತ್ತು.

    ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ 2024–24ನೇ ಸಾಲಿನ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ (ಯುಡೈಸ್‌) ವರದಿ ಪ್ರಕಾರ, ವಿದ್ಯಾರ್ಥಿಗಳ ದಾಖಲೆ ಹೆಚ್ಚಿರುವ ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೂ, ಸರ್ಕಾರ ವಿದ್ಯಾರ್ಥಿಗಳಿಲ್ಲದ ಶಾಲೆಗಳಲ್ಲಿ ಶಿಕ್ಷಕರನ್ನು ಉಳಿಸಿಕೊಂಡಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಇದೆ. ಹಾಗೆಯೇ, ಶೂನ್ಯ ದಾಖಲೆ ಹೊಂದಿದ್ದ ಶಾಲೆಗಳ ಸಂಖ್ಯೆ 1,078ರಿಂದ 270ಕ್ಕೆ ಇಳಿಕೆಯಾಗಿದೆ.

    ‘ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚಬಾರದು ಎಂಬ ಸರ್ಕಾರದ ನೀತಿಗೆ ಅನುಗುಣವಾಗಿ ಅಂತಹ ಶಾಲೆಗಳಲ್ಲಿ ಒಬ್ಬ ಶಿಕ್ಷಕರನ್ನು ಉಳಿಸಿಕೊಂಡಿದ್ದೇವೆ. ಶಿಕ್ಷಕರು ಇದ್ದಾರೆ ಎಂಬ ಕಾರಣಕ್ಕೆ ಪೋಷಕರು ಮಕ್ಕಳನ್ನು ಕಳುಹಿಸುವ ಸಾಧ್ಯತೆ ಇರುತ್ತದೆ. ಕೆಲವು ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಗಾಗಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ’ ಎಂದು ವಿದ್ಯಾರ್ಥಿಗಳಿಲ್ಲದ ಶಾಲೆಗಳಲ್ಲಿ ಶಿಕ್ಷಕರನ್ನು ನೇಮಕ ಮಾಡಿದ ಕ್ರಮವನ್ನು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

    ವರದಿ ಪ್ರಕಾರ ಕರ್ನಾಟಕದಲ್ಲಿ 74,859 ಶಾಲೆಗಳಿದ್ದು, 1,17,80,251 ವಿದ್ಯಾರ್ಥಿಗಳು ಹಾಗೂ 4,52,602 ಶಿಕ್ಷಕರು ಇದ್ದಾರೆ. ಶೇ 69ರಷ್ಟು ಶಿಕ್ಷಕರು ಮಾತ್ರ ತರಬೇತಿ ಪಡೆದಿದ್ದಾರೆ. ಶೇ 63.7ರಷ್ಟು ಶಿಕ್ಷಕರು ವೃತ್ತಿಪರ ಅರ್ಹತೆ ಹೊಂದಿದ್ದಾರೆ. 2.23 ಲಕ್ಷ ವಿದ್ಯಾರ್ಥಿಗಳಿರುವ 7,349 ಏಕ ಶಿಕ್ಷಕರ ಶಾಲೆಗಳಿವೆ. ಕಳೆದ ವರ್ಷ 2,74,814 ವಿದ್ಯಾರ್ಥಿಗಳಿದ್ದ 7,821 ಏಕಶಿಕ್ಷಕರ ಶಾಲೆಗಳಿದ್ದವು.

  • ಇಸ್ರೇಲಿನಿಂದ ಕೊಲ್ಲಲ್ಪಟ್ಟ ಗಾಝ ವರದಿಗಾರ ಅನಸ್: 
ಜಗತ್ತಿಗೆ ಮಾಡಿದ ಕೊನೆಯ ವಿನಂತಿಯೇನು?

    ಇಸ್ರೇಲಿನಿಂದ ಕೊಲ್ಲಲ್ಪಟ್ಟ ಗಾಝ ವರದಿಗಾರ ಅನಸ್: ಜಗತ್ತಿಗೆ ಮಾಡಿದ ಕೊನೆಯ ವಿನಂತಿಯೇನು?

    ಇತ್ತೀಚಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಮತ್ತು ವಾರ್ತಾ ಮಾಧ್ಯಮಗಳಲ್ಲಿ ಒಂದು ಟ್ವೀಟ್ ಸಂದೇಶ ಬಹಳ ವೈರಲ್ ಆಗಿದೆ. ಅದು ಗಾಝ ನಗರದಾದ್ಯಂತ ಇಸ್ರೇಲ್ ಎಂಬ ನರಹಂತಕರ ಬಾಂಬರ್ ಮತ್ತು ಮಿಸೈಲ್ ಆಕ್ರಮಣದ ಲೈವ್ ರಿಪೋರ್ಟ್ ಮಾಡುತ್ತಿದ್ದ ಅಲ್ ಜಝೀರ ಚಾನೆಲ್‌ನ ಅನಸ್ ಅಲ್ ಶರೀಫ್ ಅವರ ಬರಹ.

    ನಿರೀಕ್ಷೆಯಂತೆ ಏಕದೇವೋಪಾಸನೆಯನ್ನು ಉಚ್ಚರಿಸುತ್ತಾ ರಕ್ತದಾಹಿಗಳ ಮಿಸೈಲ್‌ಗಳಿಗೆ ತಲೆಯೊಡ್ಡಿ ವೀರ ಮರಣವನ್ನಪ್ಪಿದ ಅನಸ್ ಅಲ್ ಶರೀಫ್ ಅವರ ಹುತಾತ್ಮತೆಯು ಕಸ್ತೂರಿಯ ಪರಿಮಳದಂತೆ ಜಗತ್ತಿನಾದ್ಯಂತ ಪಸರಿಸಿದೆ. ಗಾಝ ನಗರದಾದ್ಯಂತ (ವಂಶಹತ್ಯೆಯ ರಣಭೂಮಿ) ಓಡಾಡುತ್ತಾ ಅಲ್ ಜಝೀರಾದ ಕ್ಯಾಮರ ಮತ್ತು ಮೈಕ್ ನೊಂದಿಗೆ ವಂಶಹತ್ಯೆಯ ದೃಶ್ಯವನ್ನು ಹೊರಜಗತ್ತಿಗೆ ತಿಳಿಸುತ್ತಿದ್ದ ಆ ಧೀರ ಯೋಧ ತನ್ನ ಸಂದೇಶವನ್ನು ಉಯಿಲು ಬರೆದು ಇನ್ನಿಲ್ಲದ ಲೋಕಕ್ಕೆ ಮರಳಿದ್ದಾರೆ.

    ಇದು ಅವರ ಟ್ವೀಟ್ ಸಂದೇಶದ ಸಾರಾಂಶ
    ಇದು ನನ್ನ ಕೊನೆಯ ಉಯಿಲು ಮತ್ತು ಸಂದೇಶ. ನನ್ನ ಈ ಮಾತು ನಿಮಗೆ ತಲುಪುವುದಿದ್ದರೆ ನನ್ನ ಶಬ್ದವನ್ನಡಗಿಸುವುದರಲ್ಲಿ ಮತ್ತು ನನ್ನನ್ನು ವಧಿಸುವುದರಲ್ಲಿ ಇಸ್ರೇಲ್ ಯಶಸ್ಸಿಯಾಗಿದೆ ಎಂದು ತಿಳಿಯಿರಿ. ಸರ್ವಶಕ್ತನ ಶಾಂತಿ ಮತ್ತು ಕರುಣೆ ನಿಮ್ಮ ಮೇಲಿರಲಿ. ಜಬಾಲಿಯ ಅಭಯಾರ್ಥಿ ಶಿಬಿರದಲ್ಲಿ ಮತ್ತು ಪರಿಸರದಲ್ಲಿ ನಾನು ಬದುಕಿಗೆ ಕಣ್ಣು ತೆರೆದಂದಿನಿAದ ನಾನು ನನ್ನ ಶಕ್ತಿ ಮತ್ತು ಸಾಮರ್ಥ್ಯಕ್ಕನುಸಾರ ಎಲ್ಲಾ ರೀತಿಯ ಕಠಿಣ ಪ್ರಯತ್ನ ಮತ್ತು ಸಹಕಾರ ನನ್ನ ಜನರಿಗೆ ನಾನು ನೀಡುತ್ತಾ ಬಂದಿದ್ದೇನೆ ಎಂದು ಸೃಷ್ಟಿಕರ್ತನಿಗೆ ಗೊತ್ತು. ನನ್ನ ಕುಟುಂಬ ಮತ್ತು ತಾಯ್ನಾಡಿನ ಜನತೆಯೊಂದಿಗೆ ನನ್ನ ಹುಟ್ಟೂರಾದ ಅಶ್ಕಲೋನಿಯಾಗೆ ಮರಳಲು ಸಾಧ್ಯವಾಗುವ ರೀತಿಯಲ್ಲಿ ನನ್ನ ಆಯಸ್ಸು ಹೆಚ್ಚಾಗಲಿ ಮತ್ತು ನನ್ನ ಮರಣ ಸಂಭವಿಸದಿರಲಿ ಎಂದು ನಾನು ಬಯಸಿದ್ದೆ. ಆದರೆ ವಿಧಿಯಾಟವನ್ನು ಬಲ್ಲವರಾರು. ಸೃಷ್ಟಿಕರ್ತನ ತೀರ್ಮಾನ ಬೇರೆಯೇ ಆಗಿತ್ತು. ಅವನ ಇಚ್ಛೆಯೇ ಅಂತಿಮ.

    ಬದುಕಿನ ಎಲ್ಲಾ ಸಂಕಟದಲ್ಲೂ ಮತ್ತು ಸಂಕಷ್ಟದಲ್ಲೂ ನಾನು ತುಂಬಾ ನೊಂದಿದ್ದೇನೆ. ಆದರೂ ನನ್ನ ವೃತ್ತಿಯಲ್ಲಿ ಯಾವುದೇ ಕಳಂಕ ಮತ್ತು ಅಸತ್ಯದ ಹಾದಿಯನ್ನು ನಾನು ಆಯ್ಕೆ ಮಾಡಿರಲಿಲ್ಲ. ಸತ್ಯವನ್ನು ಅದರ ನಿಜಾರ್ಥದಲ್ಲಿ ಜನರ ಮುಂದಿಡಲು ನಾನು ಹಿಂದೇಟು ಹಾಕಿರಲಿಲ್ಲ. ನಮ್ಮನ್ನು ನಿರ್ಮೂಲನ ಮಾಡಲು ಸಂಕಲ್ಪ ಮತ್ತು ಪ್ರತಿಜ್ಞೆ ಮಾಡಿದವರೊಂದಿಗೆ ಮೌನ ವಹಿಸಿದವರು, ಉಸಿರು ಬಿಗಿಹಿಡಿದವರು, ನಮ್ಮ ಮಕ್ಕಳು ಮತ್ತು ಸ್ತ್ರೀಯರ ಮಾರಣಹೋಮ ಮತ್ತು ಅವುಗಳ ಅವಶೇಷಗಳನ್ನು ನೋಡಿ ಹೃದಯ ಕಂಪಿಸದವರು, ಒಂದೂವರೆ ವರ್ಷಗಳಿಂದ ನಮ್ಮ ಜನತೆ ಅನುಭವಿಸುತ್ತಿರುವ ವಂಶಹತ್ಯೆಯನ್ನು ಮಾಡುವ ಮತ್ತು ಅದನ್ನು ಪ್ರೋತ್ಸಾಹಿಸುವವರ ವಿರುದ್ಧ ಸೃಷ್ಟಿಕರ್ತನು ಸಾಕ್ಷಿಯಾಗಲಿ.

    ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯ ಹೃದಯ ಮಿಡಿತವಾದ ಫೆಲೆಸ್ತೀನ್ ಅನ್ನು ನಾನು ನಿಮಗೆ ವಹಿಸುತ್ತಿದ್ದೇನೆ. ಸ್ವತಂತ್ರ ಫೆಲೆಸ್ತೀನಿನ ಕನಸು ಮತ್ತು ಸುರಕ್ಷಿತವಾಗಿ ಮತ್ತು ಶಾಂತಿ ಹಾಗೂ ಸಮಾಧಾನದಿಂದ ಬದುಕುವ ಅವಕಾಶವನ್ನು ನಿಷೇಧಿಸಲ್ಪಟ್ಟ ಫೆಲೆಸ್ತೀನ್ ಜನತೆಯ ಮತ್ತು ಪುಟ್ಟ ಮಕ್ಕಳ ಹಾಗೂ ಮರ್ದಿತರನ್ನು ನಾನು ನಿಮಗೆ ಬಿಟ್ಟು ಹೋಗುತ್ತಿದ್ದೇನೆ. ಅವರ ಪವಿತ್ರವಾದ ಶರೀರಗಳು ಮತ್ತು ಅವಶೇಷಗಳು ಗಾಝದ ಬಿರುಕುಬಿಟ್ಟ ಮತ್ತು ಹುಡಿ ಹುಡಿಯಾಗಿ ನೆಲಕ್ಕಪ್ಪಳಿಸಿದ ಕಟ್ಟಡಗಳ ರಾಶಿಗಳ ಮಧ್ಯೆ ಗುರುತು ಪತ್ತೆ ಹಚ್ಚಲ್ಪಡದ ರೀತಿಯಲ್ಲಿ ಅಪ್ಪಚ್ಚಿಯಾಗಿ ಬಿದ್ದುಹೋಗಿವೆ. ಗಡಿ ರೇಖೆಯಲ್ಲಿ ನಿರ್ಬಂಧಗಳ ಕಾರಣದಿಂದ ತಡೆಯಲ್ಪಡಬಾರದೆಂದೂ ನಿಯಂತ್ರಣದ ಕಾರಣದಿಂದ ಮೌನ ವಹಿಸಬಾರದೆಂದೂ ನಾನು ನಿಮಗೆ ಉಪದೇಶಿಸುತ್ತಿದ್ದೇನೆ.

    ನಮ್ಮ ಕೈಯಿಂದ ಕಿತ್ತು ತೆಗೆದ ಫೆಲೆಸ್ತೀನ್ ಎಂಬ ಮಾತೃಭೂಮಿಯ ಗೌರವ ಮತ್ತು ಅಭಿಮಾನ ಹಾಗೂ ಸ್ವಾತಂತ್ರ‍್ಯದ ಪ್ರಕಾಶವಾಗುವ ರೀತಿಯಲ್ಲಿ ನೀವು ಅದರ ವಿಮೋಚನೆಯ ವಾಹಕರಾಗಬೇಕು. ನನ್ನ ಕುಟುಂಬ ಮತ್ತು ನನ್ನ ಬದುಕಿನ ಕಣ್ಣು ಎಂದು ವಿಶ್ಲೇಷಿಸುವ ನನ್ನ ಮುದ್ದಿನ ಮಗಳು ಶಾಮ್ ಇದುವರೆಗೂ ಕನಸು ಕಾಣದಿದ್ದ ಅವಳನ್ನು ನಾನು ನಿಮ್ಮ ಕೈಗಿಡುತ್ತಿದ್ದೇನೆ. ನನ್ನ ಅಮ್ಮನನ್ನ ನಿಮಗೆ ವಹಿಸಿಕೊಡುತ್ತಿದ್ದೇನೆ. ಅವರ ಪ್ರಾರ್ಥನೆ ನನಗೆ ಅನುಗ್ರವಾದೀತು. ನನ್ನ ಪ್ರಿಯ ಪತ್ನಿ ಉಮ್ಮು ಸಲಾಹ್ ಬಯಾನ್ ಳನ್ನು ಕೂಡ ನಾನು ನಿಮಗೆ ವಹಿಸಿಕೊಡುತ್ತಿದ್ದೇನೆ. ಯುದ್ಧ ನಮ್ಮಿಬ್ಬರನ್ನು ತಿಂಗಳುಗಳ ಕಾಲ ಬೇರ್ಪಡಿಸಿತು. ಆದರೂ ಅವಳು ಸನ್ನಿವೇಶವನ್ನರಿತು ಓಲಿವ್ ವೃಕ್ಷದ ಹಾಗೆ ಗಟ್ಟಿಯಾಗಿ ನಿಂತಳು. ಸೃಷ್ಟಿಕರ್ತನ ಹೊರತಾಗಿ ನೀವು ಅವಳನ್ನು ಸುತ್ತುವರಿದು ಅವಳ ಸಂರಕ್ಷಣೆಯನ್ನು ವಹಿಸಿಕೊಳ್ಳಬೇಕಾಗಿ ವಿನಂತಿಸುತ್ತಿದ್ದೇನೆ.

    ನನಗೆ ತಪ್ಪು ಸಂಭವಿಸಿದ್ದರೆ ನೀವು ನನಗೆ ಕ್ಷಮಿಸಬೇಕು. ನಾನು ನನ್ನ ಕರಾರನ್ನು ಪಾಲಿಸಿದ್ದೇನೆ. ನಾನು ವಹಿಸಿರುವ ದೌತ್ಯವನ್ನು ಚೆನ್ನಾಗಿ ನಿಭಾಯಿಸಿದೆನೆಂಬ ಸಂತೃಪ್ತಿ ನನಗಿದೆ. ಗಾಝವನ್ನು ನೀವೆಂದೂ ಮರೆಯಬಾರದು. ಅದರ ವಿಮೋಚನೆಗಾಗಿ ಮತ್ತು ಸ್ವತಂತ್ರ ಫೆಲೆಸ್ತೀನ್ ಗಾಗಿ ಹಾಗೂ ಫೆಲೆಸ್ತೀನ್ ಜನತೆ ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ನಿರಂತರವಾಗಿ ಸಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ.

    ಸುಮಾರು ಒಂದುವರೆ ವರ್ಷದಿಂದ ಫೆಲೆಸ್ತೀನ್ ಜನತೆ ಇಸ್ರೇಲಿನ ವಂಶಹತ್ಯೆ, ಆಹಾರೋತ್ಪನ್ನಗಳ ತಡೆ, ನಿರಂತರ ಮರ್ದನ, ಲೈಂಗಿಕ ದೌರ್ಜನ್ಯಗಳಿಂದ ಕಂಗೆಟ್ಟು ಹೋಗಿದ್ದಾರೆ. ವಿಶ್ವಸಂಸ್ಥೆ ಮತ್ತು ವಿಶ್ವ ಮಾನವ ಹಕ್ಕು ಹೋರಾಟಗಾರರು ಅಸಾಹಾಯಕರಾಗಿದ್ದಾರೆ. ಇಸ್ರೇಲ್ ಮತ್ತು ಅದಕ್ಕೆ ಬೆನ್ನೆಲುಬಾಗಿ ನಿಂತ ಅಮೇರಿಕ ವಂಶಹತ್ಯೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇವೆಲ್ಲವನ್ನೂ ಮೂಕವಾಗಿ ನೋಡುತ್ತಿರುವ ಜಗತ್ತಿನ ಇತರೆಲ್ಲಾ ಸ್ವತಂತ್ರ ರಾಷ್ತ್ರಗಳು ಮೌನವಹಿಸಿವೆ. ಗಾಝ ನಗರದಲ್ಲಿ ಇನ್ನು ಬಾಂಬ್ ವರ್ಷಿಸಲು ಸ್ಥಳವೇ ಇಲ್ಲ ಎಂಬಷ್ಟರ ಮಟ್ಟಿಗೆ ನಶಿಸಿ ಹೋಗಿವೆ.

    ಗಾಝದ ಜನರಿಗೆ ಪತ್ರಕರ್ತರೆಂದರೆ ಎಲ್ಲಿಲ್ಲದ ಸಿಟ್ಟು. ಆದಕ್ಕೆ ಕಾರಣವೂ ಇದೆ. ಸುಳ್ಳು ಸುದ್ಧಿ ಮತ್ತು ಇಸ್ರೇಲ್ ಕಿರಾತಕರು ನಿರಂತರವಾಗಿ ಸುರಿಸುವ ಬಾಂಬರ್‌ಗಳು ಮತ್ತು ಮಿಸೈಲ್‌ಗಳಿಂದ ಸಂಕಷ್ಟದಿAದ ಬದುಕು ಮುನ್ನಡೆಸುತ್ತಿರುವ ಫೆಲೆಸ್ತೀನಿಯರಿಗೆ ಆಹಾರದ ಅಲಭ್ಯತೆಯನ್ನು ಕೂಡ ಸರಿಯಾದ ರೀತಿಯಲ್ಲಿ ವಾರ್ತೆ ನೀಡದಿರುವುದೇ ಅದಕ್ಕೆ ಕಾರಣ. ಮಾತ್ರವಲ್ಲ ಅವರನ್ನು ಭಯೋತ್ಪಾದಕರಂತೆ ಬಿಂಬಿಸುತ್ತಾ ಮಹಿಳೆಯರ ಮತ್ತು ಮಕ್ಕಳ ವಂಶ ಹತ್ಯೆಯನ್ನು ವಿಜೃಂಭಿಸುವ ಪತ್ರಕರ್ತರನ್ನು ಅವರಿಗೆ ಕಂಡರಾಗದು. ಆದರೆ ಅನಸ್ ಇವೆಲ್ಲದಕ್ಕಿಂತಲೂ ವಿಭಿನ್ನ. ಅವರು ಸತ್ಯದ ವಾಹಕರು. ಫೆಲೆಸ್ತೀನಿ ಜನತೆಯನ್ನು ಹತ್ತಿರದಿಂದ ತಿಳಿದವರು ಹಾಗೂ ತನ್ನವರಿಗಾಗಿ ಸದಾ ಮಿಡಿಯುವ ಹೃದಯವಂತರು.

    ಇತ್ತೀಚಿಗೆ ವರದಿ ಮಾಡುತ್ತಿದ್ದ ವೇಳೆ ಅನಸ್ ಬಳಲಿ ತನ್ನ ಕ್ಯಾಮಾರದೊಂದಿಗೆ ಕೆಳಗೆ ಬಿದ್ದಾಗ ಜನರು ಈ ರೀತಿ ಆಡುತ್ತಿದ್ದರು. ಅನಸ್ ಎದೆಗುಂದದಿರು, ಸ್ಥೆöÊರ್ಯದಿಂದಿರು. ಧೀರವಾಗಿ ಮುನ್ನುಗ್ಗಿ ದೌತ್ಯವನ್ನು ನಿರ್ವಹಿಸು. ಅನಸ್ ನಂತಹ ನೂರಾರು ಅನಸ್‌ಗಳು ಫೆಲೆಸ್ತೀನ್‌ನಲ್ಲಿ ಹುಟ್ಟಿ ಬರಬಹುದು ಆದರೆ ಅವರಾರು ಅನಸ್‌ಗಳಾಗಲು ಸಾಧ್ಯವಿಲ್ಲ. ಏಕೆಂದರೆ ಅನಸ್‌ರ ವ್ಯಕ್ತಿತ್ವ, ಆತ್ಮ ಸ್ಥೆöÊರ್ಯ ಹಾಗೂ ವೀರಾವೇಶದಿಂದ ತನ್ನ ಕೆಲಸವನ್ನು ನಿರ್ವಹಿಸುವ ಶೈಲಿ ಅದ್ಭುತವಾಗಿತ್ತು.

    ಜನವರಿ ತಿಂಗಳಲ್ಲಿ ಕದನ ವಿರಾಮ ಘೋಷಿಸಲಾಗಿತ್ತು. ಆದರೆ ಇಸ್ರೇಲ್ ಅದನ್ನು ಉಲ್ಲಂಘಿಸಿ ನಿರಂತರವಾಗಿ ಬಾಂಬ್ ಗಳನ್ನು ಸುರಿದ ಪರಿಣಾಮ ಅನಸ್ ಮತ್ತು ಅವರ ಸ್ನೇಹಿತರು ಸೇರಿದಂತೆ ಒಟ್ಟು ಐದು ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ. ಅವರಲ್ಲಿ 28 ವರ್ಷ ಪ್ರಾಯದ ಅನಸ್ ಗಾಝದ ಹೆಸರಾಂತ ಪತ್ರಕರ್ತನಾಗಿದ್ದು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ನಿಷೇಧ ಹೇರಿದ್ದರೂ ಬಹಳ ಅಚ್ಚುಕಟ್ಟಾಗಿ ಧೈರ್ಯದಿಂದ ಅನಸ್ ತನ್ನ ದೌತ್ಯವನ್ನು ನಿರ್ವಹಿಸುತ್ತಿದ್ದರು. ಅವರ ವಧೆ ಇಡೀ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ಪ್ರತಿಭಟನೆಗೆ ಕಾರಣವಾಗಿದೆ.

    ಇಂದಿನ ಜಗತ್ತು ರಕ್ತದಾಹಿಗಳ ರಣಭೂಮಿಯಾಗಿದೆ, ಯುದ್ಧ ಸರಕು ಮತ್ತು ಆಯುಧ ವ್ಯಾಪಾರಿಗಳ ಮಾರುಕಟ್ಟೆಯಾಗಿದೆ. ಮಾನವೀಯತೆ ನಶಿಸಿ ಹೋದ, ವಂಶಹತ್ಯೆಯನ್ನೇ ಬಂಡವಾಳವಾಗಿಸಿದ ದುರುಳರು ಇಂದು ಜಗತ್ತನ್ನು ಆಳುತ್ತಿದ್ದಾರೆ. ಅದನ್ನು ನೋಡುತ್ತಾ ಮೌನ ಸಮ್ಮತಿಯನ್ನು ನೀಡುವವರು ಅದಕ್ಕಿಂತಲೂ ನೀಚರು. ಅಸಹಾಯಕರಾದ ಬಡಪಾಯಿಗಳನ್ನು ನಿಷ್ಕಾರುಣ್ಯವಾಗಿ ವಧಿಸುವ ವ್ಯಾಘ್ರರಿಗೆ ಗಾಝದ ಜನತೆ ತಕ್ಕ ಪಾಠ ಕಲಿಸುವಂತಾಗಲಿ ಮತ್ತು ಅದಕ್ಕಾಗಿ ಲಕ್ಷಾಂತರ ಅನಸ್‌ಗಳು ಜನ್ಮ ತಾಳಲಿ. ತನ್ನ ಹೊಣೆಗಾರಿಕೆಯನ್ನು ನಿಭಾಯಿಸಿ ವೀರ ಮರಣವನ್ನಪ್ಪಿದ ಹುತಾತ್ಮತೆಯ ಉತ್ತುಂಗಕ್ಕೇರಿದ ಅನಸ್‌ರಂತಹ ಮುತ್ತುರತ್ನಗಳು ಸಮಾಜಕ್ಕೆ ಮಾದರಿಯಾಗಲಿ ಎಂಬ ಹಾರೈಕೆ.

    ಅಬ್ದುಸ್ಸಲಾಮ್ ದೇರಳಕಟ್ಟೆ

  • ಬೆಂಗಳೂರು ಮಹದೇವಪುರ ಕ್ಷೇತ್ರ `ಮತಗಳ್ಳತನ’: 
ಸುಪ್ರೀಮ್ ಕೋರ್ಟ್ ಮಧ್ಯೆ ಪ್ರವೇಶಿಸಲಿ

    ಬೆಂಗಳೂರು ಮಹದೇವಪುರ ಕ್ಷೇತ್ರ `ಮತಗಳ್ಳತನ’: ಸುಪ್ರೀಮ್ ಕೋರ್ಟ್ ಮಧ್ಯೆ ಪ್ರವೇಶಿಸಲಿ

    ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ, ಸಂಪೂರ್ಣ ಜವಾಬ್ದಾರಿ ಮತ್ತು ಪುರಾವೆಗಳೊಂದಿಗೆ ಚುನಾವಣಾ ಆಯೋಗದ ವಿರುದ್ಧ “ಮತದಾನದಲ್ಲಿ ಅಕ್ರಮ ನಡೆದಿದೆ” ಎಂದು ನೀಡಿರುವ ದೂರಿಗೆ, ಚುನಾವಣಾ ಆಯೋಗವು ನೀಡಿರುವ ಪ್ರತಿಕ್ರಿಯೆಯು ಅನುಮಾನಗಳನ್ನು ಹುಟ್ಟು ಹಾಕುವಂತಿದೆ. ಆಯೋಗದ ಸ್ವಂತ ದಾಖಲೆಗಳು ಮತ್ತು ದತ್ತಾಂಶಗಳನ್ನು ಪರಿಶೀಲಿಸಿ ಆರು ತಿಂಗಳ ಬಳಿಕ ಪತ್ರಿಕಾಗೋಷ್ಠಿಯ ಮೂಲಕ ವಿವರವಾದ ವರದಿಯನ್ನು ರಾಷ್ಟ್ರಕ್ಕೆ ಮಂಡಿಸಿರುವ ರಾಹುಲ್ ಗಾಂಧಿಯವರಿಗೆ ಅಫಿದಾವಿತ್‌ನಲ್ಲಿ ನೀಡುವಂತೆ ಆಯೋಗ ನಿರ್ದೇಶಿಸಿದೆ. ರಾಹುಲ್ ಹೇಳಿದ್ದು ತಪ್ಪು ಎಂದು ಹೇಳಲು ಅಥವಾ ವಿವರಿಸಲು ಆಯೋಗ ಸಿದ್ದವಿಲ್ಲ. ಅನಗತ್ಯ ವಾದಗಳನ್ನು ಮುಂದಿರಿಸಿ ಅದನ್ನು ಎದುರಿಸುವಷ್ಟು ಆರೋಪಗಳು ಕ್ಷುಲ್ಲಕವಲ್ಲ. ಆಯೋಗವು ಮತದಾರ ಪಟ್ಟಿಯನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ನೀಡದ ಕಾರಣ ಮುದ್ರಿತ ಪುಟಗಳ ಭಂಡಾರವನ್ನೇ ಪರಿಶೀಲಿಸಬೇಕಾಯಿತು. ಆದ್ದರಿಂದ ಹೆಚ್ಚಿನ ತಪಾಸಣೆಯನ್ನು ಕರ್ನಾಟಕದ ಬೆಂಗಳೂರು ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಸಲ್ಲಿಸಲು ಸಾಧ್ಯವಾಗಿದೆ. ಇದರಲ್ಲಿ ಬಹಿರಂಗಗೊAಡಿರುವ ಅಕ್ರಮಗಳು ಇತರ ಹಲವು ಕ್ಷೇತ್ರಗಳಲ್ಲಿ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ನಡೆದಿರಲು ಸಾಧ್ಯತೆ ಇದೆ ಎಂದು ರಾಹುಲ್ ಗಮನ ಸೆಳೆದಿದ್ದಾರೆ.

    ಮಹದೇವಪುರ ಕ್ಷೇತ್ರದ ಆರೂವರೆ ಲಕ್ಷ ಮತಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳು ನಕಲಿ. ನಕಲಿ ಹೆಸರುಗಳು, ವಿಳಾಸಗಳು ಮತ್ತು ಫೋಟೋಗಳು ಮುಂತಾದ ವಿವಿಧ ಕುಶಲತೆಯ ಮೂಲಕ ಮತದಾರರ ಪಟ್ಟಿಯನ್ನು ಉಬ್ಬಿಸಲಾಗಿದೆ. ಪರಿಶೀಲಿಸಿದರೆ ಇತರ ಹಲವು ಕ್ಷೇತ್ರಗಳಲ್ಲಿ ಇಂತಹ ಕ್ರಿಮಿನಲ್ ಭ್ರಷ್ಟಾಚಾರ ಬಯಲಾಗುತ್ತದೆ. ದಾಖಲೆಗಳು ಡಿಜಿಟಲ್ ರೂಪದಲ್ಲಿ ಇರಬೇಕೆಂದು ರಾಹುಲ್ ಒತ್ತಾಯಿಸುತ್ತಾರೆ. ಈ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡದೆ ಮೌನವಾಗಿದೆ. ಆರೋಪಗಳು ಚುನಾವಣಾ ಆಯೋಗದ ಅಧಿಕೃತ ದಾಖಲೆಗಳನ್ನು ಆಧರಿಸಿವೆ. ಮಾತ್ರವಲ್ಲದೆ ಅವು ಇದ್ದಕ್ಕಿದ್ದಂತೆ ಹೊರಹೊಮ್ಮಿದ ದೂರುಗಳಲ್ಲ. ಸಂವಿಧಾನವು ಚುನಾವಣಾ ಆಯೋಗವನ್ನು ಸರಕಾರದ ನಿಯಂತ್ರಣದಿಂದ ಸ್ವತಂತ್ರವಾದ ಮತ್ತು ಸ್ವಾಯತ್ತ ಸಂಸ್ಥೆಯಾಗಿ ರೂಪಿಸಿದೆ. ಆದರೂ ಪ್ರಸಕ್ತ ಸರಕಾರವು ಅದರ ಸ್ವತಂತ್ರ ರೂಪವನ್ನು ನಾಶಪಡಿಸಿದೆ. ಕೇಂದ್ರ ಸರಕಾರದ ಪರವಾಗಿರುವ ಮತ್ತು ಅಧೀನ ಅಧಿಕಾರಗಳಲ್ಲಿ ಆಯುಕ್ತರಾಗಿ ನೇಮಿಸಲು ಸಾಧ್ಯವಾಗುವ ರೀತಿಯಲ್ಲಿ ಸರಕಾರವು ನೇಮಕಾತಿ ನಿಯಮಗಳನ್ನು ಬದಲಿಸಿದೆ.

    ಚುನಾವಣಾ ಆಯೋಗವು ಮುದ್ರಣಕ್ಕೆ ಎಷ್ಟು ಶ್ರಮ ಮತ್ತು ವೆಚ್ಚವನ್ನು ವಹಿಸಿರಬಹುದು? ತಪಾಸಣೆಯನ್ನು ತಡೆಯಲು ಆಯೋಗವು ಇಷ್ಟೊಂದು ತೊಂದರೆಯನ್ನು ಅನುಭವಿಸುವ ನಿರ್ಧಾರದ ಹಿಂದಿನ ಉದ್ದೇಶವೇನು? ಮುಂತಾದ ವಿಷಯದಲ್ಲಿ ಪಾರದರ್ಶಕತೆ ತರಲು ಒಂದೇ ಒಂದು ಮಾರ್ಗವಿದೆ. ಅದು ಸುಪ್ರೀಂ ಕೋರ್ಟ್ ಹಸ್ತಕ್ಷೇಪ ನಡೆಸುವುದಾಗಿದೆ. ಚುನಾವಣಾ ಬಾಂಡ್‌ಗಳ ಬೃಹತ್ ಭ್ರಷ್ಟಾಚಾರವನ್ನು ನ್ಯಾಯಾಲಯ ಹಸ್ತಕ್ಷೇಪದ ಮೂಲಕ ತೆಗೆಯಲಾಯಿತು. ಈಗ ಚುನಾವಣೆಯಲ್ಲಿ ಗಮನಾರ್ಹ ವಂಚನೆ ನಡೆದಿದೆ ಎಂಬುದಕ್ಕೆ ಆಯೋಗದ ದಾಖಲೆಗಳಿಂದ ಪುರಾವೆಗಳು ಲಭ್ಯವಾಗಿವೆ. ದೇಶ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಸ್ವಯಂ ಪ್ರೇರಿತ ತನಿಖೆ ನಡೆಸುವುದು ಸುಪ್ರೀಂಕೋರ್ಟಿನ ಕರ್ತವ್ಯವಾಗಿದೆ .ನ್ಯಾಯಾಂಗವು ಹಾಗೆ ಮಾಡುವ ಅಧಿಕಾರ ಮತ್ತು ಹಕ್ಕು ಮಾತ್ರವಲ್ಲ ಬಾಧ್ಯತೆಯನ್ನು ಸಹ ಹೊಂದಿದೆ..

    ಕರ್ನಾಟಕದಲ್ಲಿ ಪ್ರಜ್ವಲ್ ರೇವಣ್ಣ ಗೌಡ ದುರಂತವು ಯುವ ನಾಯಕರಿಗೆ ಪಾಠವಾಗಬೇಕಾಗಿದೆ. ಖಾಸಗಿ ಕೋಣೆಯೊಳಗೆ ಒಪ್ಪಿತ ಅನೈತಿಕ ಲೈಂಗಿಕ ಸಂಬಂಧವನ್ನು ಗುಟ್ಟಾಗಿ ಚಿತ್ರೀಕರಿಸಿ ಅವರನ್ನು ಬ್ಲಾಕ್ ಮೇಲ್ ಮಾಡುವುದು ಮಹಾ ಅಪರಾಧವಾಗಿದೆ. ಪ್ರಜ್ವಲ್ ಪ್ರಕರಣ ಬಹಳ ಭಿನ್ನವಾದದ್ದು ಮಾತ್ರವಲ್ಲ ಆಘಾತಕಾರಿಯಾದದ್ದು .ಇಲ್ಲಿ ನಡೆದಿರುವುದು ಒಪ್ಪಿತ ಲೈಂಗಿಕ ಕ್ರಿಯೆಗಳಲ್ಲ. ಬದಲಿಗೆ ಅತ್ಯಾಚಾರ ಎನ್ನುವುದು ಮೊದಲ ಆರೋಪ. ಎರಡನೆಯದು ಈ ಅಕ್ರಮಗಳನ್ನು ಸೆರೆಹಿಡಿದಿರುವುದು ಯಾರೋ ವಿರೋಧ ಪಕ್ಷದ ನಾಯಕರ ಜನರಲ್ಲ. ಸ್ವತಹ ಪ್ರಜ್ವಲನೇ ಮಹಿಳೆಯರ ಅಶ್ಲೀಲ ದೃಶ್ಯಗಳನ್ನು ಸೆರೆಹಿಡಿದು ತನ್ನ ಮೊಬೈಲ್ ನಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದ. ತನ್ನ ಕೆಲಸದ ಅಳುಗಳ ಜೊತೆ, ಪಕ್ಷದ ಕಾರ್ಯಕರ್ತೆಯ ಜೊತೆ ಅತ್ಯಂತ ಕೀಳಾಗಿ ವರ್ತಿಸಿದ ದೃಶ್ಯಗಳು ಆತನ ಮೊಬೈಲ್‌ನಲ್ಲಿ ಇದ್ದವು. ಜೊತೆಗೆ ಅದನ್ನು ಆತ ಪೆನ್ ಡ್ರೈವ್ನಲ್ಲಿ ತೆಗೆದಿಟ್ಟುಕೊಂಡಿದ್ದ. ಈ ಪೆನ್‌ಡ್ರೆöÊವ್‌ಗಳನ್ನು ಮುಂದಿಟ್ಟು ಮಹಿಳೆಯರನ್ನು ಬ್ಲ್ಯಾಕ್ ಮೇಲ್ ಮಾಡಿರುವ ಸಾಧ್ಯತೆಗಳು ಇವೆ. ಆತನ ಕೃತ್ಯಗಳಲ್ಲಿ ಒಬ್ಬ ಸೈಕೋಪಾತ್‌ನ ಲಕ್ಷಣಗಳಿದ್ದವು. ತನ್ನ ನೀಚ ಕೃತ್ಯವನ್ನು ಕುಟುಂಬ ಬಲ, ಜಾತಿ, ಹಣಬಲಗಳಿಂದ ಆತ ಧಕ್ಕಿಸಿಕೊಂಡಿದ್ದ. ಆದರೆ ಇದೀಗ ಪ್ರಜ್ವಲ್ ತಾನು ಮಾಡಿದ ಕರ್ಮಕ್ಕೆ ಶಿಕ್ಷೆ ಅನುಭವಿಸುತ್ತಿರುವನು. ಇದು ನ್ಯಾಯಾಂಗದ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ. ಜೊತೆಗೆ ಯುವ ನಾಯಕರಿಗೆ ಪಾಠವಾಗಿದೆ.

  • ಹೃದಯದ ಮಾತು: 
ಶಹನಾಝ್ ಎಂ.

    ಹೃದಯದ ಮಾತು: ಶಹನಾಝ್ ಎಂ.

    ಇಂದಿನ ಆಧುನಿಕ ಶೈಕ್ಷಣಿಕವಾಗಿ ಮುಂದುವರಿದ ಸಮಾಜದಲ್ಲೂ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಮೌಢ್ಯಗಳು ನೆಲೆಸಿದೆ ಎಂದರೆ ನಾಚಿಗೆಕೇಡು. ನಮ್ಮ ಮಹಾರಾಷ್ಟçದಲ್ಲಿ ಶಾಲೆಯ ಶೌಚಾಲಯದಲ್ಲಿ ಹೆಣ್ಣಿನ ಮಾಸಿಕ ಮುಟ್ಟುವಿನ ರಕ್ತದ ಕಲೆಗಳು ಕಾಣಿಸಿದಕ್ಕಾಗಿ ಶಿಕ್ಷಕನೋರ್ವ ವಿದ್ಯಾರ್ಥಿನಿಯರ ವಸ್ತç ಬಿಚ್ಚಿಸಿ ತನಿಖೆ ಮಾಡಿದರಂತೆ! ಮಹಿಳಾ ಸಮೂಹಕ್ಕೇ ಇದು ಅವಮಾನದ ಸಂಗತಿ. ಹೆಣ್ಣಿಗೆ ತಾನು ಯಾವ ದಿನಕ್ಕೆ ಮುಟ್ಟಾಗುತ್ತೇನೆಂದು ಸರಿಯಾಗಿ ತಿಳಿಯದೇ ಇರುವ ಪರಿಸ್ಥಿತಿಯಲ್ಲಿರುವಾಗ ಶಾಲೆಯಲ್ಲಿ ರಕ್ತಸ್ರಾವ ಆದಾಗ ಏನು ಮಾಡಬೇಕು? ಹಾರ್ಮೋನಿನ ಏರುಪೇರಿನಿಂದ ಯಾವಾಗಬೇಕಾದರೂ ರಕ್ತ ಕಾಣಿಸಬಹುದು. ಅಂತಹ ಸಮಯದಲ್ಲಿ ಈ ಹೆಣ್ಣಿಗೆ ಸಾಂತ್ವನ, ನೆರವು ನೀಡಬೇಕಾದದ್ದು ಹತ್ತಿರ ಇರುವವರ ಧರ್ಮ. ಶಾಲೆಗಳಲ್ಲಿ, ಕಾಲೇಜಿನಲ್ಲಿ, ಆಫೀಸ್, ಕಚೇರಿಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ, ಬಸ್‌ಸ್ಟಾಂಡ್‌ಗಳಲ್ಲಿ ಇಂತಹ ತುರ್ತು ಸಮಯಕ್ಕಾಗಿ ಅಲ್ಪದರದಲ್ಲಿ ಕೈಗೆಟುಕುವಂತೆಪ್ಯಾಡ್’ಗಳು ಸುಲಭವಾಗಿ ಸಿಗುವಂತೆ ಏರ್ಪಾಡು ಇರಬೇಕು. ಶಾಲೆಯಲ್ಲಿ ಇದು ಬಹಳ ಮುಖ್ಯ. ಆ ಸಮಯದಲ್ಲಿ ಮಾನಸಿಕವಾಗಿ ಖಿನ್ನತೆಗೆ ಒಳಪಡುವ ಹದಿಹರೆಯದ ಹುಡುಗಿಯರಿಗೆ ಶಿಕ್ಷಕರಿಂದ ಸಾಂತ್ವನ ಮುಖ್ಯ. ಇಂತಹ ಮೂರ್ಖ ಶಿಕ್ಷಕನಿಗೆ ಅಮಾನತು ಮಾಡುವುದೇ ಉತ್ತಮ ಶಿಕ್ಷೆ.

    ಭಾರತದಲ್ಲಿ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ, ಅವಮಾನಗಳ ಬಗ್ಗೆ ಪತ್ರಿಕೆಯಲ್ಲಿ ಓದುವಾಗ ಮೈ ಉರಿಯುತ್ತದೆ. ಯಾಕೆ ದಲಿತರು ಇನ್ನೂ ಮೌನ ಆಗಿದ್ದಾರೆ! ಒಗ್ಗಟ್ಟಾಗಿ ಈ ಅನ್ಯಾಯ, ಅಸ್ಪೃಶ್ಯತೆಯ ವಿರುದ್ಧ ಬೀದಿಗೆ ಇಳಿದು ಹೋರಾಟ ನಡೆಸಬಾರದೇಕೆ! ಮೌನ'ವೇ ಇವರ ದುರಂತಕ್ಕೆ ಕಾರಣವಲ್ಲವೇ? ಮೈಸೂರಿನ ಶಾಲೆ ಒಂದರಲ್ಲಿ ಬಿಸಿ ಊಟಕ್ಕೆ ಓರ್ವ ದಲಿತ ಮಹಿಳೆಯನ್ನು ನೇಮಿಸಿದಕ್ಕೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಗೈರು ಹಾಜರಿಯಾಗಿ ಒಬ್ಬನೇ ವಿದ್ಯಾರ್ಥಿ ಉಳಿದನೆಂದು ಸುದ್ದಿ ಓದಿದೆ. ಇದೆಂತಹಾ ಮನಃಸ್ಥಿತಿ! ಕರುವನ್ನು ಮಾರಲು ಬಂದ ದಲಿತರಿಬ್ಬರ ತಲೆ ಬೋಳಿಸಿ ಅವರ ಬಾಯಲ್ಲಿ ಹುಲ್ಲು ತುಂಬಿ ಮೊಣಕಾಲಿನಲ್ಲಿ ತೆವಳಿಸಿಕೊಂಡು ದೌರ್ಜನ್ಯ ನಡೆಸಿದರು ಮೇಲು ಜಾತಿಯವರು. ದಲಿತರ ಓಟು ಈ ದೇಶದ ರಾಜಕೀಯ ಪಕ್ಷಕ್ಕೆ ಅತೀ ಮುಖ್ಯ. ಅವರ ಸಹವಾಸ ಬೇಡ. ಇವರನ್ನು ಉ. ಭಾರತದಲ್ಲಿ ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಾರೆಂದರೆ ದಲಿತ ಯುವತಿಯರನ್ನು ಅತ್ಯಾಚಾರ ಮಾಡಿ ಕೊಂದು ಮರಗಳಲ್ಲಿ ನೇತು ಹಾಕುತ್ತಾರೆ. ಅವರೂ ಮನುಷ್ಯರೇ ಅಲ್ಲವೇ? ಮಾನವರೆಲ್ಲರೂ ಒಂದೇ ತಂದೆ-ತಾಯಿಯ ಮಕ್ಕಳೆಂದು ಹೇಳುತ್ತದೆ ಧರ್ಮ. ಬಿಳಿಯನೂ-ಕರಿಯನೂ ಸಮಾನರೆಂದು, ಶ್ರೀಮಂತ-ಬಡನೂ ಸಮಾನರೆಂದೂ ಬೋಧಿಸುತ್ತದೆ ಇಸ್ಲಾಮ್. ಅನ್ಯಾಯವನ್ನು ಮೌನವಾಗಿ ಸಹಿಸುವುದೂ ಒಂದು ಅಪರಾಧವೇ ಆಗಿದೆ. ಇನ್ನಾದರೂ ದಲಿತರು ಧ್ವನಿ ಎತ್ತುವಂತಾಗಲಿ. ಭಾರತಕ್ಕೆ ಸ್ವಾತಂತ್ರö್ಯ ಲಭಿಸಿ ಎಪ್ಪತ್ತೆಂಟನೇ ವರ್ಷ. ದಲಿತರಿಗೆ, ಅಲ್ಪಸಂಖ್ಯಾತರಿಗೆ ಸ್ವಾತಂತ್ರö್ಯ ಲಭಿಸಿದೆಯೇ?! ಕೋಮುದ್ವೇಷಿ ರಾಜಕೀಯ ನಮ್ಮನ್ನು ಇಂದು ಬ್ರಿಟಿಷರ ಕಾಲಕ್ಕೆ ದೂಡಿ ಬಿಟ್ಟಿದೆ. ನಾವಿಂದು ಹೋರಾಡ ಬೇಕಾಗಿದೆ ಈಶತ್ರು’ಗಳ ವಿರುದ್ಧ.

  • ಶೀಘ್ರ ತೂಕ ಇಳಿಸುವ ಡಯೆಟ್ ಆರೋಗ್ಯಕ್ಕೆ ಅಪಾಯಕಾರಿ: 
ಅಡ್ಡ ಪರಿಣಾಮಗಳೇನು? 
ಡಾ। ಲೀನಾ ಸಾಜು

    ಶೀಘ್ರ ತೂಕ ಇಳಿಸುವ ಡಯೆಟ್ ಆರೋಗ್ಯಕ್ಕೆ ಅಪಾಯಕಾರಿ: ಅಡ್ಡ ಪರಿಣಾಮಗಳೇನು? ಡಾ। ಲೀನಾ ಸಾಜು

    ಸಮೀಕೃತ ಆಹಾರವನ್ನು ಸೇವಿಸುವುದರಿಂದ ಉಂಟಾಗುವ ಪ್ರಯೋಜನಗಳು

    ಶಾರೀರಿಕ ಚಟುವಟಿಕೆಗಳಿಗೆ ಹೆಚ್ಚು ಶಕ್ತಿ ಸಿಗುತ್ತದೆ.

    ಶರೀರ ಭಾರವನ್ನು ನಿಯಂತ್ರಿಸುವುದಕ್ಕೆ ಹೆಚ್ಚು ಸುಲಭವಾಗುತ್ತದೆ.

    ಮಧುಮೇಹ, ಹೃದ್ರೋಗ ಮುಂತಾದ ಜೀವನಶೈಲಿ ರೋಗಗಳ ಸಾಧ್ಯತೆ ಕಡಿಮೆಯಾಗುತ್ತದೆ.

    ಮನಸ್ಸಿಗೆ ಹೆಚ್ಚು ಉಲ್ಲಾಸ ಉಂಟಾಗುತ್ತದೆ.

    ಪಥ್ಯದ (ಡಯಟ್) ಅಡ್ಡಪರಿಣಾಮಗಳು:

    ಅನಾರೋಗ್ಯಕರವಾದ ಆಹಾರಕ್ರಮಗಳು ಅಥವಾ ಕೊಬ್ಬಿರುವ ಆಹಾರವು ದೇಹಭಾರವು ಹೆಚ್ಚಾಗಲು ಮತ್ತು ದೀರ್ಘಕಾಲ ರೋಗಗಳಿಗೆ ಕಾರಣವಾಗುತ್ತದೆ. ಜನರು ತ್ವರಿತ. ಫಲಿತಾಂಶ ಬಯಸುವವರಾಗಿರುತ್ತಾರೆ. ಹೊಸ ಡಯಟ್ ಪ್ಲಾನ್‌ಗಳು ಅವರನ್ನು ಶೀಘ್ರ ಆಕರ್ಷಿಸುತ್ತದೆ. ಅವರು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನಹರಿಸುವುದಿಲ್ಲ. ಆದುದರಿಂದ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣಗಳಲ್ಲಿ, ಆನ್‌ಲೈನ್ ಫ್ಲಾಟ್‌ಫಾರ್ಮ್ಗಳಲ್ಲಿ ಕಾಣಿಸುವ ಆಹಾರ ಪಥ್ಯಗಳನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಇದು ಪ್ರಯೋಜನಕ್ಕಿಂತ ಹೆಚ್ಚು ದುಷ್ಪರಿಣಾಮಗಳನ್ನುಂಟು ಮಾಡುತ್ತದೆ.

    ವೇಗವಾಗಿ ಶರೀರ ಭಾರತವನ್ನು ಇಳಿಸಲಿಕ್ಕಿರುವ ಪಥ್ಯಗಳು ದೇಹದ ಆರೋಗ್ಯಕ್ಕೆ ಬಹಳ ಹಾನಿಕರ. ವೇಗವಾಗಿ ಶರೀರ ಭಾರವನ್ನು ಕಡಿಮೆ ಮಾಡಲು ಹೊರಟರೆ ಪಿತ್ತಕೋಶದಲ್ಲಿ ಕಲ್ಲುಗಳುಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಧಾನ್ಯಗಳು, ಹಸಿರು ತರಕಾರಿಗಳು, ಹಣ್ಣುಗಳು, ಹಾಲು ಮುಂತಾದ ಕಾರ್ಬೋ ಹೈಡ್ರೇಡ್‌ಗಳು ಇರುವ ಆಹಾರವನ್ನು ಬಿಟ್ಟು ಬಿಟ್ಟರೆ ಮಲಬದ್ಧತೆ, ಬಲಹೀನತೆ, ಆಯಾಸ, ಕೂದಲು ಉದುರುವುದು, ಎಲುಬಿನ ಸಾಂಧ್ಯತೆಯು ಕಡಿಮೆಯಾಗುವುದು. ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು ಮುಂತಾದವುಗಳ ಸಾಧ್ಯತೆ ಹೆಚ್ಚುತ್ತದೆ.

    ಒಬ್ಬರಿಗೆ ಸೂಕ್ತವಾದ ಆಹಾರ ಪದ್ಧತಿ ಎಲ್ಲರಿಗೂ ಅನ್ವಯಿಸುವುದಿಲ್ಲ ಎಂಬ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಬ್ಬರು ತಮ್ಮ ವೈಯಕ್ತಿಕ ದೇಹ ಪ್ರಕೃತಿ ಮತ್ತು ರೋಗಗಳಿಗೆ ಅನುಗುಣವಾಗಿ ಯಾವ ರೀತಿಯ ಆಹಾರವನ್ನು ತಿನ್ನಬೇಕೆಂದು ಡಯಟೀಶಿಯನ್‌ಗಳನ್ನು ಸಮೀಪಿಸಿ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.

    ಸಸ್ಯಾಹಾರಿ ಮತ್ತು ಮಾಂಸಹಾರಿ ಡಯಟ್‌ಗಳು (ಪಥ್ಯ)

    ಶರೀರದ ತೂಕ ಕಡಿಮೆ ಮಾಡಲು ಏನು ಒಳ್ಳೆಯದು?

    ಸಸ್ಯಾಹಾರವಾದರೂ, ಮಾಂಸಾಹಾರವಾದರೂ ಎಲ್ಲರ ಮುಖ್ಯ ಉದ್ದೇಶ ದೇಹದ ತೂಕವನ್ನು ಕಡಿಮೆ ಮಾಡುವುದೇ ಆಗಿರುತ್ತದೆ. ಸಸ್ಯಾಹಾರ ಮಾಂಸಾಹಾರ ಮನುಷ್ಯನ ವೈಯಕ್ತಿಕ ಮತ್ತು ಸಾಂಸ್ಕೃತಿಕ ಹಿನ್ನಲೆಯಿಂದ ಬರುತ್ತದೆ. ಪೋಷಕಾಂಶ ಭರಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.

    ಸಸ್ಯಾಹಾರದ ಪ್ರಯೋಜನ ಮತ್ತು ಕೆಡುಕುಗಳು

    ಹೆಚ್ಚಿನ ಪ್ರಮಾಣದಲ್ಲಿ ನಾರಿನಾಂಶ ಲಭ್ಯವಾಗುವುದರಿಂದ ಸಸ್ಯಾಹಾರ ಸೇವಿಸುವುದರಿಂದ ಪೋಷಕಾಂಶಗಳು ಲಭಿಸಲು ಮತ್ತು ಹಸಿವು ನೀಗಲು, ಸಂತೃಪ್ತಿ ಸಿಗಲು ಕಾರಣವಾಗುತ್ತದೆ. ವಿಟಮಿನ್ ಸಿ. ವಿಟಮಿನ್ ಇ. ಫಾರಿಕ್ ಆಸಿಡ್, ಪೊಟಾಶಿಯಮ್, ಮೆಗ್ನೇಶಯಿಮ್, ಕಾರೇಡಿನೋಯ್ಡಾ, ಫ್ಲೋವನೋಯ್ಡ್ ಮುಂತಾದವುಗಳು ಸಸ್ಯಾಹಾರದಿಂದಲೇ ಲಭಿಸುತ್ತವೆ.

    ಬೇಳೆಕಾಳುಗಳು, ದಾನ್ಯಗಳು, ಕಡಲೆ ಅಪೂರ್ಣವಾದುದಾಗಿದೆ. ಇದರಲ್ಲಿ ಒಂದೋ ಅದಕ್ಕಿಂತ ಹೆಚ್ಚು ಅಮಿನೊ ಆ್ಯಸಿಡ್‌ಗಳು ಇರುವುದಿಲ್ಲ. ಧಾನ್ಯಗಳಲ್ಲಿ ಲೈಸಿನ್, ಪ್ರೆಯೋನಿಸ್, ಟ್ರಿಸ್ಟೋಪೆನ್ ಮುಂತಾದವುಗಳ ಕೊರತೆ ಇದೆ. ಬೇಳೆಕಾಳುಗಳಲ್ಲಿ ಮೆಥಿಯೋನಿಲ್, ಲೈಸಿಲ್ ಮುಂತಾದ ಅಮಿನೋ ಆಸಿಡ್‌ಗಳು ಇರುವುದಿಲ್ಲ. ಸಸ್ಯಾಹಾರಿಗಳಲ್ಲಿ ವಿಟಮಿನ್ ಬಿ12 ಕೊರತೆ ಮತ್ತು ಒಮೆಗಾ- 3ರ ಕೊರತೆಯು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

    ಮಾಂಸಾಹಾರದ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳು

    ಬಿ12, ಕಬ್ಬಿಣ, ಸತು ಮತ್ತು ಒಮೆಗಾ- 3 ಕೊಲ್ಸಿನಾಮ್ಲಗಳಂತಹ ಜೈವಿಕ ಮೂಲಕ ಪ್ರೊಟೀನ್‌ಗಳು ಪ್ರಾಣಿ ಉತ್ಪನ್ನಗಳಲ್ಲಿ ಹೇರಳವಾಗಿ ಕಂಡು ಬರುತ್ತದೆ. ಈ ಪೋಷಕಾಂಶಗಳು ಸ್ನಾಯುಗಳ ಚಟುವಟಿಕೆ, ಕೆಂಪು ರಕ್ತ ಕಣಗಳ ಉತ್ಪಾದನೆ ಮತ್ತು ಒಟ್ಟು ಆರೋಗ್ಯವನ್ನು ಉತ್ತಮಪಡಿಸುತ್ತದೆ. ಜೊತೆಗೆ ಲೀನ್ ಮಾಂಸವನ್ನು ಸೇವಿಸುವುದರಿಂದ ಶರೀರ ಭಾರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

    ಆದರೆ ಮಾಂಸಹಾರದಲ್ಲಿ ಸೇರಿಕೊಂಡಿರುವ ಕೊಬ್ಬಿನಾಂಶ ದೇಹತೂಕವನ್ನು ಹೆಚ್ಚಿಸುತ್ತದೆ. ಹೃದ್ರೋಗ ಸಾಧ್ಯತೆಗಳು, ಬೊಜ್ಜು, ರಕ್ತದೊತ್ತಡ ಹೆಚ್ಚಲು, ಮಧುಮೇಹ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಆರೋಗ್ಯವನ್ನು ಚೆನ್ನಾಗಿರಿಸಲು ಸಸ್ಯಾಹಾರಿಗಳಾದರೂ, ಮಾಂಸಾಹಾರಿಗಳಾದರೂ ನಿಯಂತ್ರಿತ ರೀತಿಯಲ್ಲಿ ಆಹಾರವನ್ನು ಕ್ರಮಬದ್ಧಗೊಳಿಸುವುದು ಬಹಳ ಮುಖ್ಯ.

    ಅತ್ಯುತ್ತಮ ಆಹಾರ ಯೋಜನೆಯನ್ನು ಆರಿಸುವುದು ಹೇಗೆ?

    ನಿಮ್ಮ ಆಹಾರದಲ್ಲಿ ಈ ಕೆಳಗಿನ ಆಹಾರಗಳು ಸೇರಿವೆಯೇ ಎಂದು ನಿರ್ಣಯಿಸಿ.

    ಸ್ಥಿರವಾಗಿ ಸೇವಿಸಲು ಮತ್ತು ರೂಢಿಗೊಳಿಸಲು ಸಾಧ್ಯವಾಗುವ ಆಹಾರ ಕ್ರಮ.

    ದೈಹಿಕ ಸ್ಥಿತಿ ಮತ್ತು ಆದ್ಯತೆಯ ಆಹಾರ ಪದಾರ್ಥಗಳನ್ನು ಪರಿಗಣಿಸಿ ಆಹಾರ ಪದ್ಧತಿ ರೂಪಿಸುವುದು.

    ಆಹಾರ ಗುಂಪುಗಳು (ತರಕಾರಿ, ಹಣ್ಣುಗಳು, ಧಾನ್ಯಗಳು, ಕಡಿಮೆ ಕೊಬ್ಬಿನ ಮಾಂಸ, ಮೀನು ಮತ್ತು ಡೈರಿ

    ಉತ್ಪನ್ನಗಳು ಮತ್ತು ಬೀಜಗಳು) ಸೇರಿದಂತೆ ಸಮತೋಲಿತ ಮತ್ತು ವೈವಿದ್ಯಮಯ ಆಹಾರ

    ಶರೀರಕ್ಕೆ ಅಗತ್ಯವಾದ ಶಕ್ತಿಗೆ ಬೇಕಾದ ಪ್ರೊಟೀನ್, ಪಿಷ್ಠ ಮತ್ತು ಉತ್ತಮ ಕೊಬ್ಬುಗಳು ಇರುವಂತಹ ಆಹಾರ.

    ಆರೋಗ್ಯಪೂರ್ಣವಾದ ಆಹಾರ ಕ್ರಮವನ್ನು ಕರಾರುವಾಕ್ಕಾಗಿ ಸೂಚಿಸುವ ಶಿಫಾರಸುಗಳನ್ನು ಆಧರಿಸಿದ ಆಹಾರ

    ಕ್ರಮ.

    ಶರೀರವನ್ನು ಆರೋಗ್ಯದಿಂದಿರಿಸಲು ಕೆಲವು ಸಲಹೆಗಳು

    ನೀವು ಸೇವಿಸುತ್ತಿರುವ ಆಹಾರದಲ್ಲಿ ಯಾವ ಪೋಷಕಾಂಶಗಳಿವೆ ಎಂಬುವುದರ ಬಗ್ಗೆ ಅರಿವಿರಲಿ.

    ಆಸ್ವಾದಿಸುತ್ತಾ ತಿನ್ನುವುದು ಮುಖ್ಯ. ಆಹಾರ ಪದ್ಧತಿ ಶಿಕ್ಷೆಯಂತೆ ಭಾಸವಾದರೆ ಅದನ್ನು ಹೆಚ್ಚು ಕಾಲ

    ಮುಂದುವರಿಸಿಕೊAಡು ಹೋಗಲು ಸಾಧ್ಯವಾಗುವುದಿಲ್ಲ.

    ಯಾವುದೇ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸುವುದಕ್ಕಿಂತ ಮಿತವಾದ ಪ್ರಮಾಣದಲ್ಲಿ ಪೌಷ್ಠಿಕ ಆಹಾರವನ್ನು

    ಅನುಸರಿಸುವುದು ಉತ್ತಮ.

    ಉಗುರು ಬೆಚ್ಚಗಿನ ನೀರಿನಿಂದ ದಿನವನ್ನು ಆರಂಭಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

    ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ಬೆಳಿಗ್ಗೆ 9 ಗಂಟೆಯ ಮೊದಲು ಉಪಹಾರ. ಮಧ್ಯಾಹ್ನ 1.30ಕ್ಕೆ ಮೊದಲು

    ಮಧ್ಯಾಹ್ನದ ಊಟ ಮತ್ತು ರಾತ್ರಿ 8.30ಕ್ಕಿಂತ ಮೊದಲು ರಾತ್ರಿಯ ಊಟ ಮುಗಿಸಲು ಪ್ರಯತ್ನಿಸಿ.

    ಮಲಗುವುದಕ್ಕಿಂತ ಕನಿಷ್ಟ ಎರಡು ಗಂಟೆಗಳ ಮೊದಲು ಊಟ ಮುಗಿಸಿ.

    ಸಾಕಷ್ಟು ತರಕಾರಿ ಮತ್ತು ಹಣ್ಣುಗಳನ್ನು ತಿನ್ನಿರಿ.

    ವ್ಯಾಯಾಮ, ನಿದ್ರೆ ಮತ್ತು ನೀರಿನ ಸೇವನೆಯನ್ನು ಸರಿಯಾದ ಮಟ್ಟದಲ್ಲಿ ಕಾಪಾಡಿಕೊಳ್ಳಬೇಕು. ದಿನಕ್ಕೆ ಕನಿಷ್ಟ

    8-12 ಗ್ಲಾಸ್ ನೀರು ಕುಡಿಯಬೇಕು.

    ಹೊರಗಿನ ಆಹಾರವನ್ನು ಸಾಧ್ಯವಾದಷ್ಟು ತಪ್ಪಿಸಿ.

    ಆಹಾರವನ್ನು ನಿಧಾನವಾಗಿ ಸೇವಿಸಬೇಕು ಮತ್ತು ಚೆನ್ನಾಗಿ ಅಗಿಯಬೇಕು. ಇದು ಹೆಚ್ಚು ತಿನ್ನುವುದರಿಂದ

    ತಡೆಯುತ್ತದೆ ಮತ್ತು ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ.

    ಟಿ.ವಿ. ಮೊಬೈಲ್ ನೋಡುತ್ತಾ ಊಟ ಮಾಡುವ ಅಭ್ಯಾಸವನ್ನು ತೊರೆಯಿರಿ.

    ಇಂದು ಪ್ರಚಾರದಲ್ಲಿರುವ ವಿವಿಧ ರೀತಿಯ ಡಯಟ್ ಪ್ಲಾನ್‌ಗಳು

    1. ಕಿಟೋ ಡಯಟ್‌

    ಇದು ಕಡಿಮೆ ಪ್ರಮಾಣದಲ್ಲಿ ಪಿಷ್ಟ ಸೇವಿಸುವ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬನ್ನು ಹೊಂದಿರುವ ಆಹಾರ ಕ್ರಮ.

    ಕೀಟೋ ಡಯಟ್‌ನ ಪ್ರಯೋಜನಗಳು:

    ಔಷಧಗಳಿಗೆ ಪ್ರತಿಕ್ರಿಯಿಸದ ಅಪಸ್ಮಾರ ರೋಗಿಗಳಿಗೆ ಅನುಕೂಲಕರ ಡಯಟ್.

    ಹಸಿವನ್ನು ನಿಯಂತ್ರಿಸುತ್ತದೆ.

    ಶೀಘ್ರವಾಗಿ ದೇಹತೂಕ ಕಡಿಮೆ ಮಾಡಲು ಸಹಾಯಕ.

    ಕಿಟೋ ಡಯಟ್‌ನ ದುಷ್ಪರಿಣಾಮಗಳು

    ಯೂರಿಕ್ ಆ್ಯಸಿಡ್, ಎಲ್.ಡಿ.ಎಲ್. ಕೊಲೆಸ್ಟಾçಲ್, ಹೃದ್ರೋಗದ ಹೆಚ್ಚಳಕ್ಕೆ ಕಾರಣವಾಗುತ್ತದೆ.

    ಆಸ್ಟಿಯೇ ಪೊರೋಸಿಸ್, ಮೂತ್ರಪಿಂಡದ ಕಾಯಿಲೆಗಳಂತಹ ರೋಗಗಳಿಗೆ ಕಾರಣವಾಗುತ್ತದೆ.

    ದೀರ್ಘಕಾಲ ಇದನ್ನು ಅನುಸರಿಸುವುದು ಒಳ್ಳೆಯದಲ್ಲ.

    2. ಮೆಡಿಟರೇನಿಯನ್ ಡಯಟ್:

    ನ್ಯಾಚುರೇಟೆಡ್ ಕೊಬ್ಬುಗಳ (ಕೆಂಪು ಮಾಂಸ, ಬೆಣ್ಣೆ) ಬದಲಾಗಿ ಅಪರ್ಯಾಪ್ತ ಕೊಬ್ಬುಗಳನ್ನು (ಆಲಿವ್ ಎಣ್ಣೆ, ಬೀಜಗಳು, ಮೀನುಗಳು) ಬಳಸಲಾಗುತ್ತದೆ. ಹಣ್ಣುಗಳು, ಹಸಿರು ತರಕಾರಿಗಳು, ದಾನ್ಯಗಳು, ಬೀಜಗಳು ಮುಂತಾದವುಗಳನ್ನು ಒಳಗೊಂಡ ಪೋಷಕಾಂಶಗಳಿರುವ ಆಹಾರ ಕ್ರಮ.

    ಮೆಡಿಟರೇನಿಯನ್ ಡಯಟ್‌ನ ಪ್ರಯೋಜನಗಳು:

    ಎದೆಯುರಿ ಕಡಿಮೆ ಮಾಡುತ್ತದೆ.

    ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

    ಹೃದ್ರೋಗ, ಪಾರ್ಶ್ವವಾಯು ಮುಂತಾದವುಗಳನ್ನು ತಡೆಯುತ್ತದೆ.

    ಬೊಜ್ಜು, ಮಧುಮೇಹ, ಕೊಲೆಸ್ಟಾçಲ್ ಹೆಚ್ಚುವುದು, ರಕ್ತದೊತ್ತಡ ಹೆಚ್ಚುವುದು ಮುಂತಾದವುಗಳ ಸಾಧ್ಯತೆಯನ್ನು

    ಕಡಿಮೆ ಮಾಡುತ್ತದೆ.

    ಇದರ ದುಷ್ಪರಿಣಾಮಗಳು

    ಪ್ಯಾಂಕ್ರಿಯಾಟೈಸಿಸ್, ಗ್ಯಾಸ್ಟೊçÃ, ಈಸೋ ಫೇಜಿಯಲ್ ರಿಫ್ಲೆಕ್ಟ್ ಡಿಸೀಸ್ ಮುಂತಾದ ಕಾಯಿಲೆಗಳು ಇರುವವರಿಗೆ ಸೂಕ್ತವಲ್ಲ.

    3. ವೀಗನ್ ಡಯಟ್: ಮಾಂಸದ

    ಜೊತೆಗೆ ಡೈರಿ ಉತ್ಪನ್ನಗಳು, ಮೊಟ್ಟೆಗಳು, ಜಿಲಾಟಿನ್ ಮತ್ತು ಜೇನು ತುಪ್ಪಂದAತಹ ಪ್ರಾಣಿ ಉತ್ಪನ್ನಗಳನ್ನು ಸಂಪೂರ್ಣ ತ್ಯಜಿಸಲಾಗುತ್ತದೆ. ಇದಕ್ಕೆ ಬದಲಾಗಿ ಸೋಯಾ ಉತ್ಪನ್ನಗಳು, ಬೀಜಗಳು, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು, ಹಣ್ಣುಗಳನ್ನು ಈ ಆಹಾರದಲ್ಲಿ ಸೇರಿಸಲಾಗುತ್ತದೆ.

    ವೀಗನ್ ಡಯಟ್‌ನ ಪ್ರಯೋಜನಗಳು:

    ಸಸ್ಯಾಹಾರಿ ಆಹಾರ ಕ್ರಮವು ಹೃದ್ರೋಗ ಮತ್ತು ಮಧುಮೇಹದ ಟೈಪ್ 2 ಅಪಾಯವನ್ನು ಕಡಿಮೆ ಮಾಡುತ್ತದೆ.

    ವೀಗನ್ ಡಯಟ್‌ನ ದುಷ್ಪರಿಣಾಮಗಳು

    ವಿಟಮಿನ್ ಬಿ12 ಮತ್ತು ಕಬ್ಬಿಣಾಂಶದAತಹ ಪೋಷಕಾಂಶಗಳ ಕೊರತೆ ಸಂಭವಿಸಬಹುದು.

    4. ಮಧ್ಯಂತರ ಉಪವಾಸ (ಇಂಟರ್ ಮೀಡಿಯೇಟ್ ಫಾಸ್ಟಿಂಗ್).

    ಇದು ನಿರ್ದಿಷ್ಟ ಸಮಯದಲ್ಲಿ ಊಟ ಮಾಡಿ ಉಳಿದ ಸಮಯವನ್ನು ಉಪವಾಸದಲ್ಲಿ ಕಳೆಯುವ ವಿಧಾನವಾಗಿದೆ. ಇದನ್ನು ಎರಡು ರೀತಿಯಲ್ಲಿ ಮಾಡಬಹುದು. ಪ್ರತಿದಿನ ಸಮಯ ನಿರ್ಬಂಧಿತ ಆಹಾರ ಸೇವನೆ. ನಿದ್ರೆ ಸೇರಿದಂತೆ ದಿನಕ್ಕೆ 16-18 ಗಂಟೆಗಳ ಕಾಲ ಉಪವಾಸ. ಉಳಿದ 6-8 ಗಂಟೆಗಳ ಕಾಲ ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಪ್ರೋಟೀನ್ ಒಳಗೊಂಡ ಆಹಾರವನ್ನು ಸೇವಿಸಲಾಗುತ್ತದೆ. ವಾರದಲ್ಲಿ ಕೆಲವು ದಿನ ಉಪವಾಸ. ವಾರದಲ್ಲಿ ಎರಡು ದಿನ ಉಪವಾಸ. ಉಳಿದ 5 ದಿನ ಸಾಮಾನ್ಯ ಆಹಾರ ಸೇವನೆ.

    ಇದರ ಪ್ರಯೋಜನಗಳು:

    ದೇಹದ ತೂಕ ಕಡಿಮೆ ಮಾಡಲು ಸಹಾಯಕ

    ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಿಸುತ್ತದೆ.

    ಉರಿಯೂತವನ್ನು ಕಡಿಮೆ ಮಾಡುತ್ತದೆ.

    ಇನ್ಸುಲಿನ್, ಸಂವೇದನಾಶೀಲತೆ, ಜೀರ್ಣಕ್ರಿಯೆ ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

    ಇದರ ದುಷ್ಪರಿಣಾಮಗಳು:

    ಇದು ಉತ್ತಮ ಪೋಷಣೆ ಮತ್ತು ಆರೋಗ್ಯವಂತ ಜನರಿಗೆ ಸುರಕ್ಷಿತವಾಗಿದ್ದರೂ ಎಲ್ಲರಿಗೂ ಸೂಕ್ತವಲ್ಲ. ಇದು ತಲೆನೋವು ಮತ್ತು ಆಯಾಸ ನಿದ್ರಾಹೀನತೆಗೆ ಕಾರಣವಾಗಬಲ್ಲದು.

  • “ಅಪ್ಪಾ ನನ್ನನ್ನು ಕ್ಷಮಿಸಿ” 
Whatsapp Voice ಮಾಡಿ ಆತ್ಮಹತ್ಯೆಗೈದ ಮಗಳು…

    “ಅಪ್ಪಾ ನನ್ನನ್ನು ಕ್ಷಮಿಸಿ” Whatsapp Voice ಮಾಡಿ ಆತ್ಮಹತ್ಯೆಗೈದ ಮಗಳು…

    “ಅಪ್ಪಾ, ನನ್ನನ್ನು ಕ್ಷಮಿಸಿ. ನಾನೀ ಚಿತ್ರಹಿಂಸೆಯನ್ನು ಸಹಿಸಬಹುದು ಎಂದು ಭಾವಿಸಿದ್ದೆ. ಆದರೆ ಅವರು ಮನುಷ್ಯರಲ್ಲ, ಕ್ರೂರಿಗಳು. ನನಗೆ ಹೀಗೆಯೇ ಬದುಕು ಮುಂದುವರಿಸಲು ಸಾಧ್ಯವಿಲ್ಲ” ಇದು ನವ ವಿವಾಹಿತೆ ರಿಧನ್ಯಾ ತನ್ನ ಸಾವಿನ ಮೊದಲು ತಂದೆಗೆ ಕಳಿಸಿದ ಧ್ವನಿ ಸಂದೇಶದ ಚುಟುಕು.

    ತಮಿಳುನಾಡಿನ ತಿರುಪುರ ಜಿಲ್ಲೆಯ 27 ವರ್ಷದ ನವವಿವಾಹಿತೆ ರಿಧನ್ಯಾ ಜೂನ್ 28 ರಂದು ದಾಂಪತ್ಯದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಈ ಘಟನೆ ತಮಿಳುನಾಡಿನೆಲ್ಲೆಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಅವಳು ತನ್ನ ಸಾವಿಗೆ ಮೊದಲು ತಂದೆಗೆ ಕಳಿಸಿದ್ದ ಹೃದಯವೇ ಒಡೆಯುವಂತಹ ಧ್ವನಿ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಮೃತರಾದ ರಿಧನ್ಯಾ, 2025ರ ಏಪ್ರಿಲ್ 11ರಂದು ಕವಿನ್ ಕುಮಾರ್ (28) ಎಂಬವರೊಂದಿಗೆ ವಿವಾಹವಾಗಿದ್ದರು. ವಿವಾಹಕ್ಕಾಗಿ ಅವರ ಕುಟುಂಬವು ಸುಮಾರು 100 ಪವನ್ ಚಿನ್ನ (800 ಗ್ರಾಂ) ಹಾಗೂ 70 ಲಕ್ಷ ಮೌಲ್ಯದ ವೋಲ್ವೋ ಕಾರ್ ವರದಕ್ಷಿಣೆ ರೂಪದಲ್ಲಿ ನೀಡಿದ್ದರೂ, ಪುನಹ 500 ಪವನ್ ವರದಕ್ಷಿಣೆ ಹೆಚ್ಚು ನೀಡಬೇಕೆಂದು ಅವರ ಪತಿಯ ಕುಟುಂಬದವರು ನಿರಂತರ ಕಿರುಕುಳಗಳು ನೀಡುತ್ತಿದ್ದರೆಂದು ಕುಟುಂಬದವರು ಆರೋಪಿಸಿದ್ದಾರೆ.

    “ಅವಳನ್ನು ಗಂಟೆಗಟ್ಟಲೇ ನಿಲ್ಲಿಸಿಟ್ಟು, ಊಟ ಕೊಡದೆ ಕೋಣೆಯಲ್ಲಿ ಕೂಡಿ ಹಾಕಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.” “ವಿವಾಹವು ಅವಳಿಗೆ ಸಂತೋಷ ನೀಡುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಅದು ಅವಳಿಗೆ ಹಿಂಸೆಯೊಂದಿಗೆ ಅಂತ್ಯಕ್ಕೆ ಕಾರಣವಾಯಿತು” ಎಂದು ಆಕೆಯ ತಂದೆ ದಿ ಇಂಡಿಯನ್ ಎಕ್ಸ್ಪ್ರೆಸ್‌ಗೆ ತಿಳಿಸಿದ್ದಾರೆ.
    ಜೂನ್ 28ರಂದು ರಿಧನ್ಯಾ ದೇವಸ್ಥಾನಕ್ಕೆ ಹೋಗುತ್ತಿದ್ದೇನೆಂದು ಹೇಳಿ ಹೊರಟು, ಕಾರನ್ನು ಮಂಡಿಪಾಳ್ಯಮ್ನಲ್ಲಿ ನಿಲ್ಲಿಸಿ ಸಾಮಾನ್ಯವಾಗಿ ಗ್ರಾಮೀಣ ಜನರು ಆತ್ಮಹತ್ಯೆಗೆ ಬಳಸುವ ವಿಷ ಪದಾರ್ಥವನ್ನು ಖರೀದಿಸಿದಳು ಎಂದು
    ದಿ ನ್ಯೂಸ್ ಮಿನಿಟ್‌ನಲ್ಲಿ ವರದಿಯಾಗಿದೆ.

    ವಿಷ ಸೇವಿಸಿ ಅರೆ ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ದ ಆಕೆಯನ್ನು ದಾರಿಹೋಕರು ಅವಿನಾಶಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಆಕೆ ಮೃತಪಟ್ಟಿದ್ದಳು.
    ಸಾವಿಗೆ ಮುನ್ನ ಆ ಹೆಣ್ಣು ಮಗಳು ತಂದೆಗೆ ವಾಟ್ಸಾಪ್ ಮೂಲಕ ಏಳು ಧ್ವನಿಸಂದೇಶಗಳನ್ನು ಕಳಿಸಿದ್ದಳು.. ಅವುಗಳಲ್ಲಿ ಒಂದು
    “ಅಪ್ಪಾ, ನನ್ನನ್ನು ಕ್ಷಮಿಸಿ. ನಾನೀ ಚಿತ್ರಹಿಂಸೆಯನ್ನು ಸಹಿಸಬಹುದು ಎಂದು ಭಾವಿಸಿದ್ದೆ. ಆದರೆ ಅವರು ಮನುಷ್ಯರಲ್ಲ, ಕ್ರೂರಿಗಳು. ನನಗೆ ಹೀಗೆಯೇ ಮುಂದುವರಿಸಿ ಬದುಕುವುದು ಸಾಧ್ಯವಿಲ್ಲ” ಎಂದು ರಿಧನ್ಯಾಳ ರೋದನ.”

    ಸಾರ್ವಜನಿಕರ ಪ್ರತಿಭಟನೆ ಹಾಗೂ ಮಾಧ್ಯಮದ ಒತ್ತಡದಿಂದಾಗಿ, ಸೇವೂರು ಪೊಲೀಸರು ಆಕೆಯ ಪತಿ ಕವಿನ್ ಕುಮಾರ್, ಮಾವ ಈಶ್ವರಮೂರ್ತಿ ಮತ್ತು ಅತ್ತೆ ಚಿತ್ರಾದೇವಿ ಅವರ ಮೇಲೆ IPಅ ಸೆಕ್ಷನ್ 498 A, 304 B ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ, 1961ರ ಅನ್ವಯ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ (ಹಿಂದುಸ್ತಾನ್ ಟೈಮ್ಸ್).ವಿವಾಹದ ಸಮಯದಲ್ಲಿ ನಡೆದ ಹಣಕಾಸು ಮತ್ತು ವಸ್ತು ವಿನಿಮಯಗಳ ಕುರಿತು ಆದಾಯ ವಿಭಾಗ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ.

    ವರದಕ್ಷಿಣೆ ನಿಷೇಧ ಕಾನೂನು 1961ರಲ್ಲಿ ಜಾರಿಗೆ ಬಂದರೂ ಭಾರತದಲ್ಲಿ ಪ್ರತಿ ವರ್ಷ ಸರಾಸರಿ 6,500 ವರದಕ್ಷಿಣೆ ಸಂಬಂಧಿತ ಸಾವುಗಳ ವರದಿಯಾಗುತ್ತಿವೆ. (ದಿ ನ್ಯೂಸ್ ಮಿನಿಟ್). 2022ರಲ್ಲಿ ಕೇವಲ ತಮಿಳುನಾಡಿನಲ್ಲಿ ಮಾತ್ರ 29 ಪ್ರಕರಣಗಳು ದಾಖಲಾಗಿವೆ (The CSR Journal)

    “ಇದು ಬರೇ ಚಿನ್ನ ಅಥವಾ ಐಶಾರಾಮಿ ಕಾರಿನ ವಿಷಯವಲ್ಲ” ಎನ್ನುತ್ತಾರೆ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಪ್ರಿಯಾ ರಾಜನ್. “ಎಷ್ಟೇ ಶ್ರೀಮಂತ ಕುಟುಂಬದ ಹೆಣ್ಣುಮಕ್ಕಳಿಗಾದರೂ ಶೋಷಣೆಯಿಂದ ರಕ್ಷಣೆ ಸಿಗುವುದಿಲ್ಲ. ರಿಧನ್ಯಾಳ ಅಂತಿಮ ಧ್ವನಿ ಸಂದೇಶಗಳು- ಕ್ಷಮಾಪಣೆಯ ನೋವಿನ ಧ್ವನಿ- ಈ ರಾಷ್ಟ್ರವನ್ನು ಎಚ್ಚರಿಸಬೇಕು” (ದಿ ಇಂಡಿಯನ್ ಎಕ್ಸ್ಪ್ರೆಸ್).

    ಮಹಿಳಾ ಹಕ್ಕು ಹೋರಾಟಗಾರರು ಅಧಿಕಾರಿಗಳ ಮೇಲೆ ಹೆಚ್ಚಿನ ಹೊಣೆಗಾರಿಕೆಯನ್ನು ವಿಧಿಸಬೇಕೆಂದು ಹಾಗೂ ಮಹಿಳೆಯರಿಗಾಗಿ ಜಿಲ್ಲಾಮಟ್ಟದ ದೂರು ಸ್ವೀಕಾರ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಆಗ್ರಹಿಸುತ್ತಿದ್ದಾರೆ..
    ಈ ಘಟನೆ ಭಾರತದೆಲ್ಲೆಡೆ ಭಾವನಾತ್ಮಕ, ನೋವಿನ ಹಾಗೂ ಚೀತ್ಕಾರದ ಪ್ರತಿಧ್ವನಿಯನ್ನು ಉಂಟುಮಾಡಿದೆ. ಹಣವಿರುವ ಕುಟುಂಬದಿಂದ ಬಂದಿದ್ದರೂ ರಿಧನ್ಯಾಳಿಗೆ ವರದಕ್ಷಿಣೆಯ ಶಾಪದಿಂದ ಪಾರಾಗಲು ಸಾಧ್ಯವಾಗಲಿಲ್ಲ. ಈ ಪ್ರಕರಣವು ಎಲ್ಲ ವರ್ಗಗಳಲ್ಲಿಯೂ ಶೋಷಣೆಯ ಆಳವನ್ನು ತೋರಿಸುವ ಸಂಕೇತವಾಗಿದೆ.

    ಸಾಮಾಜಿಕ ಮಾಧ್ಯಮಗಳಲ್ಲಿ Justice For Ridhanya ಮತ್ತು End Dowry Deaths ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ. ನಟರು, ಹಕ್ಕು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಎಲ್ಲರೂ ನ್ಯಾಯ ಮತ್ತು ಸಕಾರಾತ್ಮಕ ಬದಲಾವಣೆಗೆ ಬೊಬ್ಬಿಡುತ್ತಿದ್ದಾರೆ.

    ವರದಕ್ಷಿಣೆ ಸಂಬಂಧಿಸಿದ ಸಾವುಗಳು ಭಾರತದಲ್ಲಿ ಬೃಹತ್ ಸಮಸ್ಯೆಯಾಗಿ ಉಳಿದಿವೆ. ಪಿತೃಪ್ರಧಾನ ರೂಢಿಗಳು, ಕಳಪೆ ಕಾನೂನು ಜಾರಿ ಮತ್ತು ಆಳವಾಗಿ ಬೇರೂರಿರುವ ದುರಾಸೆಯಿಂದಾಗಿ ಇದಕ್ಕೆ ಕಾರಣವಾಗಿವೆ
    ಅವಿನಾಶಿಯಲ್ಲಿ ರಿಧನ್ಯಾಳ ಅಂತ್ಯಕ್ರಿಯೆಯ ವೇಳೆ ತಂದೆ ಕಣ್ಣೀರಿಡುತ್ತಾ ಹೇಳಿದರು: “ನಮಗೆ ಅವಳ ಸಂತೋಷ ಬೇಕಿತ್ತು. ಆದರೆ ನಮ್ಮ ಹೃದಯದಲ್ಲಿ ಉತ್ತರವಿಲ್ಲದ ಅದೆಷ್ಟೋ ಪ್ರಶ್ನೆಗಳೊಂದಿಗೆ ಸಹಿಸಲಾಗದ ನೋವಿನೊಂದಿಗೆ ಈಗ ಅವಳ ಸಮಾಧಿಯ ಮುಂದೆ ನಿಂತಿದ್ದೇವೆ.”

    ಭವಿಷ್ಯದಲ್ಲಿ ಆಶೆ ಮತ್ತು ಆಕಾಂಕ್ಷೆಗಳೊಂದಿಗೆ ಪತಿಯ ಮನೆಯಲ್ಲಿ ಬದುಕಬೇಕು ಎಂಬ ಮಗಳ ಕನಸುಗಳು ಬಾಲ್ಯದಿಂದ ಯೌವನದವರೆಗೆ ಯಾವುದೆ ನೋವೂ ಸಂಕಷ್ಟವೂ ಆಗದಂತೆ ತೊಟ್ಟಿಲಿನಿಂದ ಜೀವರಕ್ಷೆ ಮಾಡಿದ ತಂದೆ-ತಾಯಿಯ ಮಮತೆಯನ್ನೂ ಕೊನೆಗೆ ಬೆಂಕಿಗೆ ಆಹುತಿಯಾಗುತ್ತವೆಂದರೆ, ಅದನ್ನು ಹೇಗೆ ಸಹಿಸಬೇಕು?
    ನಮ್ಮ ಕಾನೂನು ವ್ಯವಸ್ಥೆ ಎಲ್ಲಿ ತಪ್ಪುತ್ತಿದೆ? ಮಾನವೀಯ ಮೌಲ್ಯಗಳು ಎಲ್ಲಿ ಕುಸಿದುಹೋಗಿವೆ? ಇವು ಚಿಂತನೆಗೆ ಗಂಭೀರ ಕಾರಣಗಳಾಗಿವೆ.

    ಉತ್ತಮ ನಾಗರಿಕರೆಂಬ ನಿಟ್ಟಿನಲ್ಲಿ, ಗೃಹಹಿಂಸೆ ಅಥವಾ ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಯಾರಾದರೂ ಕಂಡಾಗ, ತಕ್ಷಣವೇ ಸಂಬAಧಿತ ಸಹಾಯವಾಣಿಗೆ ಕರೆಮಾಡುವುದು ಅಥವಾ ಸ್ಥಳೀಯ ಮಾನಸಿಕ ಆರೋಗ್ಯ ತಜ್ಞರ ಬಳಿ ಮಾಹಿತಿ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
    ಕುಲ್ಸೂಮ್ ಅಬೂಬಕರ್