Tag: ಮುಖ್ಯ ಸುದ್ದಿ

  • “ಕರ್ನಾಟಕದ 1 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಚುನಾವಣಾ ಆಯೋಗ ನೇರ ಕೈ ಜೋಡಿಸಿದೆ” 
ದಾಖಲೆ ಹಂಚಿಕೊಂಡ ರಾಹುಲ್ ಗಾಂಧಿ

    “ಕರ್ನಾಟಕದ 1 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಚುನಾವಣಾ ಆಯೋಗ ನೇರ ಕೈ ಜೋಡಿಸಿದೆ” ದಾಖಲೆ ಹಂಚಿಕೊಂಡ ರಾಹುಲ್ ಗಾಂಧಿ

    ನವದೆಹಲಿ: ಶುಕ್ರವಾರ ಬೆಂಗಳೂರಿಗೆ (Bengaluru) ಬರುವ ಮುನ್ನ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಮಹಾದೇವಪುರದಲ್ಲಿ ಮತಗಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಆನ್‌ಲೈನ್ ಮೂಲಕ ದಾಖಲೆಗಳನ್ನು ಪ್ರಕಟಿಸಿದ ಅವರು, 2024ರ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ಹಾಗೂ ಅದರ ವ್ಯಾಪ್ತಿಯ ಮಹದೇವಪುರ ವಿಧಾನಸಭೆ ಕ್ಷೇತ್ರದ ದತ್ತಾಂಶಗಳನ್ನು ವಿಶ್ಲೇಷಿಸಿರುವುದಾಗಿ ಹೇಳಿದ್ದಾರೆ. ಹಾಗೆಯೇ, ಅಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂಬುದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

    ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 16 ಸ್ಥಾನ ಹಾಗೂ ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಅಚ್ಚರಿಯಾಗಿ ಸೋಲನ್ನು ಅನುಭವಿಸಿತು. ಹೀಗಾಗಿ ಕಡಿಮೆ ಅಂತರದಲ್ಲಿ ಸೋತ ಏಳು ಕ್ಷೇತ್ರಗಳ ಪೈಕಿ ಮಹಾದೇವಪುರ ಕ್ಷೇತ್ರದಲ್ಲಿ ತನಿಖೆ ನಡೆಸಿದೆವು. ಈ ವೇಳೆ ಕಾಂಗ್ರೆಸ್ 1,15,586 ಮತಗಳನ್ನು ಪಡೆದರೆ, ಬಿಜೆಪಿ 2,29,632 ಮತಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್‌ಗಿಂತ ಬಿಜೆಪಿ 1,14,046 ಮತಗಳ ಬಹುಮತ ಪಡೆದುಕೊಂಡಿದೆ. ಈ ಮತಗಳಲ್ಲಿ 11,965 ನಕಲಿ ಮತದಾರರು, 40,009 ನಕಲಿ ವಿಳಾಸದ ಮತಗಳು, ಒಂದೇ ವಿಳಾಸದಲ್ಲಿ ಹತ್ತಾರು ಮತಗಳಿರುವಂತಹ 10,452 ಮತಗಳು, ಫೋಟೋ ಇಲ್ಲದಿರುವ 4,132 ಹಾಗೂ ಫಾರಂ 6 ದುರ್ಬಳಕೆಯಾದ 33,692 ಮತಗಳಿವೆ ಸ್ಫೋಟಕ ಆರೋಪ ಮಾಡಿದರು.

    ಮಹಾರಾಷ್ಟ್ರ, ಹರಿಯಾಣ, ಕರ್ನಾಟಕ ಚುನಾವಣೆ ಸೇರಿ ಹಲವೆಡೆ ಮತಗಳ್ಳತನ ಆಗಿದೆ. ಇನ್ನೂ ಕಳೆದ ಐದು ತಿಂಗಳಲ್ಲಿ ಮಹಾರಾಷ್ಟ್ರಕ್ಕೆ ಅತಿ ಹೆಚ್ಚು ಮತದಾರರು ಸೇರ್ಪಡೆಯಾಗಿದ್ದಾರೆ. ಜನಸಂಖ್ಯೆಗಿಂತ ಹೆಚ್ಚು ಮತದಾರರಿದ್ದಾರೆ. ಸಂಜೆ ಐದು ಗಂಟೆಯ ಬಳಿಕ ಅತಿ ಹೆಚ್ಚು ಮತದಾನವಾಗುತ್ತದೆ ಎಂದು ಆರೋಪಿಸಿದ್ದಾರೆ.

    ಈ ಕುರಿತು ನಾವು ಚುನಾವಣಾ ಆಯೋಗವನ್ನು ಸಂಪರ್ಕಿಸಿದರೆ ನಮಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಆಯೋಗ ನಮಗೆ ಮತದಾರರ ಪಟ್ಟಿ ನೀಡಲು ನಿರಾಕರಿಸಿದೆ. ಅದಲ್ಲದೇ ರಾಜಕೀಯ ಪಕ್ಷಗಳಿಗೂ ಕೂಡ ಮತದಾರರ ಪಟ್ಟಿ ನೀಡಿಲ್ಲ. ಜೊತೆಗೆ ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಆಗ್ರಹಿಸಿದ್ದಾರೆ.

    ದೇಶದಾದ್ಯಂತ ಇದೇ ರೀತಿಯ ಅಕ್ರಮಗಳು ನಡೆದಿವೆ ಎಂದು ಪ್ರತಿಪಾದಿಸಿರುವ ರಾಹುಲ್, ಇದು ಸಂವಿಧಾನ ಹಾಗೂ ರಾಷ್ಟ್ರದ ಸಮಗ್ರತೆಯ ವಿರುದ್ಧದ ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಕ್ರಿಯೆಯನ್ನು ರಕ್ಷಿಸುವ ಕೆಲಸ ಮಾಡುತ್ತದೆ ಎಂಬುದನ್ನು ಆಯೋಗಕ್ಕೆ ನೆನಪಿಸಲು ಬಯಸುವುದಾಗಿಯೂ ಹೇಳಿದ್ದಾರೆ.

  • ಬರೋಬ್ಬರಿ 300 ಲೀ. ಎದೆಹಾಲು ದಾನ ಮಾಡಿದ ಮಹಾತಾಯಿ: 
ತಾಯಿಗೆ ಸಿಕ್ಕ ಸರ್ಟಿಫಿಕೇಟ್ ಏನು ಗೊತ್ತೇ..?

    ಬರೋಬ್ಬರಿ 300 ಲೀ. ಎದೆಹಾಲು ದಾನ ಮಾಡಿದ ಮಹಾತಾಯಿ: ತಾಯಿಗೆ ಸಿಕ್ಕ ಸರ್ಟಿಫಿಕೇಟ್ ಏನು ಗೊತ್ತೇ..?

    ತಮಿಳುನಾಡಿನ ಮಹಿಳೆಯೊಬ್ಬರು ಸುಮಾರು 300 ಲೀಟರ್‌ ಎದೆಹಾಲನ್ನು ದಾನ ಮಾಡುವ ಮೂಲಕ ‘ಏಷ್ಯಾ ಬುಕ್ ಆಫ್ ರೆಕಾರ್ಡ್‌’ ಮತ್ತು ‘ಇಂಡಿಯಾ ಬುಕ್ ಆಫ್ ರೆಕಾರ್ಡ್‌’ ಎರಡರಲ್ಲೂ ಸ್ಥಾನ ಪಡೆದಿದ್ದಾರೆ.

    ಎರಡು ಮಕ್ಕಳ ತಾಯಿಯಾದ ಸೆಲ್ವಾ ಬೃಂದಾ, 2023ರ ಏಪ್ರಿಲ್‌ನಿಂದ 2025ರ ಫೆಬ್ರುವರಿಯವರೆಗೆ 22 ತಿಂಗಳುಗಳಲ್ಲಿ ಒಟ್ಟು 300.17 ಲೀಟರ್‌ ಎದೆಹಾಲನ್ನು ಚಿರುಚಿರಾಪಳ್ಳಿ ಜಿಲ್ಲೆಯ ಮಹಾತ್ಮಾ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಯ (ಎಂಜಿಎಂಜಿಎಚ್‌) ಎದೆಹಾಲಿನ ಬ್ಯಾಂಕ್‌ಗೆ ದಾನ ಮಾಡಿದ್ದಾರೆ.

    ಈ ಮೂಲಕ ಅವರು ಸಾವಿರಾರು ಅಕಾಲಿಕ ಸಾವು ಮತ್ತು ಅಸ್ವಸ್ಥ ಶಿಶುಗಳ ಜೀವ ಉಳಿಸಲು ಸಹಾಯ ಮಾಡಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    2023-24ರ ಅವಧಿಯಲ್ಲಿ ಆಸ್ಪತ್ರೆಯ ಎದೆಹಾಲಿನ ಬ್ಯಾಂಕ್‌ನಲ್ಲಿ ಸಂಗ್ರಹಿಸಿದ್ದ ಒಟ್ಟಾರೆ ಎದೆ ಹಾಲಿನಲ್ಲಿ ಪ್ರಮಾಣದಲ್ಲಿ ಬೃಂದಾ ಅವರ ಕೊಡುಗೆ ಅರ್ಧದಷ್ಟು ಇತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಬೃಂದಾ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಆಸ್ಪತ್ರೆಯ ಅಧಿಕಾರಿಗಳು ‘ವಿಶ್ವ ಸ್ತನ್ಯಪಾನ ಸಪ್ತಾಹ’ದ ಸಮಾರೋಪ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿಲಿದ್ದಾರೆ.

  • ಮಗಳ ಕಣ್ಣೆದುರೇ ಗಂಡನನ್ನು ಕೊಂದ ತಂದೆ! 
ಕಾರಣವೇನು ಗೊತ್ತೇ?

    ಮಗಳ ಕಣ್ಣೆದುರೇ ಗಂಡನನ್ನು ಕೊಂದ ತಂದೆ! ಕಾರಣವೇನು ಗೊತ್ತೇ?

    ಬಿಹಾರದ ದರ್ಭಾಂಗಾದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 25 ವರ್ಷದ ವ್ಯಕ್ತಿಯೊಬ್ಬನನ್ನು ಆತನ ಮಾವನೇ ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ರಾಹುಲ್ ಕುಮಾರ್ ಹತ್ಯೆಯಾದ ವ್ಯಕ್ತಿ. ದರ್ಭಾಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇವರು ವ್ಯಾಸಂಗ ಮಾಡುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಅದೇ ಕಾಲೇಜಿನ ವಿದ್ಯಾರ್ಥಿನಿ ತನ್ನು ಪ್ರಿಯಾ ಅವರನ್ನು ಆಕೆಯ ಕುಟುಂಬದ ವಿರೋಧದ ನಡುವೆಯೇ ರಾಹುಲ್‌ ವಿವಾಹವಾಗಿದ್ದರು.

    ಹತ್ಯೆಯ ಬೆನ್ನಲ್ಲೇ ರಾಹುಲ್‌ನ ಸಹಪಾಠಿಗಳು ತನ್ನುವಿನ ತಂದೆ ಆರೋಪಿ ಪ್ರೇಮ್‌ಶಂಕರ್ ಝಾ ಅವರನ್ನು ಥಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ‘ನಿನ್ನೆ ಸಂಜೆ ಹೂಡಿ ಧರಿಸಿದ್ದ ವ್ಯಕ್ತಿಯೊಬ್ಬ ರಾಹುಲ್‌ ಬಳಿಗೆ ಬಂದಿದ್ದರು. ಹತ್ತಿರ ಬಂದಾಗ ಅದು ನನ್ನ ತಂದೆ ಎಂದು ತಿಳಿಯಿತು. ಅವರು ಬಂದೂಕು ಹಿಡಿದುಕೊಂಡಿದ್ದರು. ನನ್ನ ಕಣ್ಣೆದುರೇ ನನ್ನ ಗಂಡನ ಎದೆಗೆ ಗುಂಡು ಹಾರಿಸಿದರು. ನನ್ನ ಗಂಡ ನನ್ನ ಮಡಿಲಲ್ಲಿ ಪ್ರಾಣ ಬಿಟ್ಟರು’ ಎಂದು ತನ್ನು ಪ್ರಿಯಾ ಕಣ್ಣೀರು ಸುರಿಸಿದ್ದಾರೆ.

    ‘ನನ್ನ ಇಡೀ ಕುಟುಂಬ ಈ ಪಿತೂರಿಯಲ್ಲಿ ಭಾಗಿಯಾಗಿದೆ. ನನ್ನ ಸಹೋದರ ಮತ್ತು ತಂದೆಯಿಂದ ನಮ್ಮ ಜೀವಕ್ಕೆ ಬೆದರಿಕೆಯಿದೆ ಎಂದು ದೂರು ನೀಡಿ ನ್ಯಾಯಾಲಯಕ್ಕೂ ಹೋಗಿದ್ದೆವು’ ಎಂದು ತಿಳಿಸಿದ್ದಾರೆ.

    ಮೇಲ್ನೋಟಕ್ಕೆ ಇದು ಮರ್ಯಾದೆಗೇಡು ಹತ್ಯೆ ಎಂದು ತಿಳಿದುಬಂದಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • “ರಸ್ತೆಗಿಳಿದು ಪ್ರತಿಭಟಿಸದ ಕಾರಣದಿಂದಾಗಿ ಕ್ರೈಸ್ತರ ಮೇಲೆ ದೌರ್ಜನ್ಯ” ಪ್ರತಿಭಟನೆ ವಿಡಿಯೋ

    “ರಸ್ತೆಗಿಳಿದು ಪ್ರತಿಭಟಿಸದ ಕಾರಣದಿಂದಾಗಿ ಕ್ರೈಸ್ತರ ಮೇಲೆ ದೌರ್ಜನ್ಯ” ಪ್ರತಿಭಟನೆ ವಿಡಿಯೋ

    ಛತ್ತೀಸ್‌ ಗಢದಲ್ಲಿ ಇಬ್ಬರು ಮಲಯಾಳಿ ಸನ್ಯಾಸಿನಿಯರನ್ನು ಬಂಧಿಸಲಾಗಿದ್ದು, ಇದಕ್ಕೆ ಕೇರಳದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಹುಲ್ ಗಾಂಧಿ ಸೇರಿದಂತೆ ರಾಜಕೀಯ ಪಕ್ಷಗಳ ನಾಯಕರು ಬಂಧನವನ್ನು ಖಂಡಿಸಿದ್ದಾರೆ. ಈ ಕುರಿತಂತೆ ಪ್ರತಿಭಟನೆಗಳು ನಡೆದಿವೆ. ಮುಖ್ಯಮಂತ್ರಿ ಪಿಣರಾಜಿ ವಿಜಯನ್, ತಕ್ಷಣ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇದು ಸಂಘ ಪರಿವಾರದ ಬೂಟಾಟಿಕೆಗಳ ಭಾಗವಾಗಿದೆ ಎಂದು ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಹೇಳಿದ್ದಾರೆ.

    ಮಂಗಳೂರು : ಸುಳ್ಳು ಆರೋಪ ಹೊರಿಸಿ ಕ್ರೈಸ್ತ ಸನ್ಯಾಸಿನಿಯರನ್ನು ಬಂಧಿಸಿ ಜೈಲಿಗಟ್ಟಿದ ಛತ್ತೀಸ್‌ಗಢ ಸರಕಾರದ ಫ್ಯಾಸಿಸ್ಟ್ ಸರಕಾರದ ರಾಜಕಾರಣವನ್ನು ವಿರೋಧಿಸಿ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ನೇತೃತ್ವದಲ್ಲಿ ಸೋಮವಾರ ಮಂಗಳೂರಿನ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಧಾರ್ಮಿಕ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಫಾ. ಡೊಮಿನಿಕ್ ವಾಸ್ ಅವರು ಭಾರತದ ಕ್ರೈಸ್ತರು ಈ ಮಣ್ಣಿನ ಮಕ್ಕಳು, ದೇಶಭಕ್ತರು. ಮತಾಂಧರಲ್ಲ. ಒಂದು ಕೈಯಲ್ಲಿ ಬೈಬಲ್ ಹಿಡಿದುಕೊಂಡು ಮತ್ತು ಇನ್ನೊಂದು ಕೈಯಲ್ಲಿ ಸಂವಿಧಾನವನ್ನು ಹಿಡಿದು ಈ ದೇಶವನ್ನು ಅಪಾರವಾಗಿ ಪ್ರೀತಿಸುವರು ಎಂದು ಹೇಳಿದರು.

  • “ಮೇಲು-ಕೀಳು ಜಾತಿ ರೂಢಿ ಪಾಲಿಸುತ್ತಿವೆ  ನ್ಯಾಯಾಲಯಗಳು”
ಮಧ್ಯಪ್ರದೇಶ ಹೈಕೋರ್ಟ್ ಹೇಳಲು ಕಾರಣವೇನು?

    “ಮೇಲು-ಕೀಳು ಜಾತಿ ರೂಢಿ ಪಾಲಿಸುತ್ತಿವೆ ನ್ಯಾಯಾಲಯಗಳು” ಮಧ್ಯಪ್ರದೇಶ ಹೈಕೋರ್ಟ್ ಹೇಳಲು ಕಾರಣವೇನು?

    ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನಡುವಿನ ಸಂಬಂಧವು ಊಳಿಗಮಾನ್ಯ ಪದ್ಧತಿಯ ಪ್ರಭು ಮತ್ತು ಸೇವಕರ ರೀತಿಯಲ್ಲಿ ಮೇಲು ಕೀಳು ಸೃಷ್ಟಿಸಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

    ಜಿಲ್ಲಾ ನ್ಯಾಯಾಲಯದಲ್ಲಿದ್ದ ವಿಶೇಷ ನ್ಯಾಯಾಧೀಶ (ಪರಿಶಿಷ್ಟ ಜಾತಿ/ ಪಂಗಡ) ಅವರನ್ನು ವಜಾಗೊಳಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅತುಲ್ ಶ್ರೀಧರನ್‌, ‘ಸದ್ಯ ಇರುವ ವ್ಯವಸ್ಥೆಯಲ್ಲಿ ಪರಸ್ಪರರ ನಡುವೆ ಗೌರವ ಭಾವ ಇರಬೇಕಾದ ಜಾಗದಲ್ಲಿ ಭಯ, ಅಧೀನತೆ ಮತ್ತು ಮಾನಸಿಕ ಅಧೀನತೆಗಳೇ ಆಳವಾಗಿ ಬೇರೂರಿವೆ’ ಎಂದಿದ್ದಾರೆ.

    ‘ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಶುಭಕೋರುವಾಗ ಜಿಲ್ಲಾ ನ್ಯಾಯಾಧೀಶರು ಸಂಪೂರ್ಣ ಊಳಿಗಮಾನ್ಯ ಪದ್ಧತಿಯ ಸೇವಕರಂತೆ ವರ್ತಿಸುತ್ತಾರೆ. ಅವರ ದೇಹ ಭಾಷೆಯೂ ಹಾಗೇ ಇರುತ್ತದೆ. ನ್ಯಾಯಾಧೀಶರ ಹಾವಭಾವವು ಬೆನ್ನುಮೂಳೆಯೇ ಇಲ್ಲದ ಸಸ್ತನಿಗಳ ಪ್ರಬೇಧದಂತೆ ಕಾಣಿಸುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ‘ಹೈಕೋರ್ಟ್‌ನ ನ್ಯಾಯಮೂರ್ತಿಗಳು ಬರುತ್ತಿದ್ದಾರೆ ಎಂದರೆ ಜಿಲ್ಲಾ ನ್ಯಾಯಾಧೀಶರು ರೈಲ್ವೆ ನಿಲ್ದಾಣಗಳಲ್ಲಿ ಅವರಿಗಾಗಿ ಉಪಾಹಾರ ಮತ್ತಿತರ ವಸ್ತುಗಳನ್ನು ಹಿಡಿದು ಕಾಯುವುದು ವಸಾಹತುಶಾಹಿ ವ್ಯವಸ್ಥೆ ಇಂದಿಗೂ ಬೇರೂರಿರುವುದನ್ನು ಪ್ರತಿಬಿಂಬಿಸುತ್ತದೆ’ ಎಂದಿದ್ದಾರೆ.

    ‘ಜಿಲ್ಲಾ ನ್ಯಾಯಾಧೀಶರು ಹೈಕೋರ್ಟ್‌ನ ರಿಜಿಸ್ಟ್ರಾರ್‌ ಆದಾಗಲೂ ಅವರಿಗೆ ಆಸನವನ್ನು ನೀಡಲಾಗುವುದಿಲ್ಲ. ಒಂದೊಮ್ಮೆ ಆಸನ ನೀಡಿದರೂ ಅವರು ಕೂರಲು ಹಿಂಜರಿಯುತ್ತಾರೆ. ಇದು ವ್ಯವಸ್ಥಿತ ಅಸಮಾನತೆಯ ಸಂಪೂರ್ಣ ಮಾನಸಿಕ ದಾಸ್ಯದಂತೆ ಕಾಣಿಸುತ್ತದೆ. ಹೈಕೋರ್ಟ್ ಎಲ್ಲಿ ಅಸಮಾಧಾನಗೊಳ್ಳುತ್ತದೋ ಎಂಬ ಭಯದಲ್ಲೇ ಜಿಲ್ಲಾ ನ್ಯಾಯಾಲಯ ಕಾರ್ಯ ನಿರ್ವಹಿಸುತ್ತಿದೆ’ ಎಂದು ನ್ಯಾ. ಶ್ರೀಧರನ್ ಆತಂಕ ವ್ಯಕ್ತಪಡಿಸಿದ್ದಾರೆ.
    ‘ಈ ಭಯವು ನ್ಯಾಯದ ಅಡಿಪಾಯದೊಂದಿಗೆ ರಾಜಿ ಮಾಡಿಕೊಳ್ಳಲು ನೂಕುತ್ತದೆ. ಹೀಗಾಗಿ ಅರ್ಹ ಪ್ರಕರಣಗಳಲ್ಲೂ ಜಾಮೀನು ನಿರಾಕರಿಸುವುದು, ಸಾಕಷ್ಟು ಸಾಕ್ಷಿಗಳಿಲ್ಲದಿದ್ದರೂ ದೋಷಾರೋಪಣೆ ದಾಖಲಿಸುವುದು ಮತ್ತು ಮೇಲಿನ ನ್ಯಾಯಾಲಯಗಳ ಕೆಂಗಣ್ಣಿಗೆ ಗುರಿಯಾಗುತ್ತೇವೆ ಎಂಬ ಭಾವನೆಯಿಂದ ಆರೋಪಿಗಳನ್ನು ಬಿಡುಗಡೆ ಮಾಡುವುದನ್ನು ಜಿಲ್ಲಾ ನ್ಯಾಯಾಲಯ ತಪ್ಪಿಸುತ್ತದೆ ಎಂಬುದನ್ನೂ ಕೆಲ ಆದೇಶಗಳಲ್ಲಿ ಗಮನಿಸಬಹುದು’ ಎಂದಿದ್ದಾರೆ.

    ‘ಇವು ಶ್ರೇಣೀಕೃತ ವ್ಯವಸ್ಥೆಗಷ್ಟೇ ಸೀಮಿತವಾಗದೆ, ಜಾತಿ ವ್ಯವಸ್ಥೆಯನ್ನೂ ರೂಪಕವಾಗಿ ಉಲ್ಲೇಖಿಸಿವೆ. ಒಂದು ಸೂಕ್ಷ್ಮ ಮಟ್ಟದಲ್ಲಿ ಜಾತಿ ವ್ಯವಸ್ಥೆಯ ನೆರಳು ರಾಜ್ಯದ ನ್ಯಾಯಾಂಗ ರಚನೆಯಲ್ಲಿ ಕಾಣಬಹುದು. ಇಲ್ಲಿ ಹೈಕೋರ್ಟ್‌ ಸವರ್ಣೀಯರಂತೆ ಹಾಗೂ ಜಿಲ್ಲಾ ನ್ಯಾಯಾಲಯ ಶೂದ್ರರಂತೆ ಗೋಚರಿಸುತ್ತದೆ’ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

    ‘ಯಾವುದೇ ರಾಜ್ಯದಲ್ಲಿ ಕಾನೂನು ವ್ಯವಸ್ಥೆಯ ಸ್ವಾತಂತ್ರ್ಯವು ಸಾಮಾನ್ಯ ಜನರು ತಲುಪಲು ಸಾಧ್ಯವಾಗದ ಹೈಕೋರ್ಟ್‌ಗಿಂತ ನ್ಯಾಯಾಂಗ ವ್ಯವಸ್ಥೆಯ ಮೊದಲ ಹಂತವಾದ ಜಿಲ್ಲಾ ನ್ಯಾಯಾಲಯದ ನಿರ್ಭೀತಿ ವಾತಾವರಣದಲ್ಲಿರುತ್ತದೆ’
    ನ್ಯಾ. ಅತುಲ್ ಶ್ರೀಧರನ್, ನ್ಯಾಯಮೂರ್ತಿ, ಮಧ್ಯಪ್ರದೇಶ ಹೈಕೋರ್ಟ್

    ಭಯದ ವಾತಾವರಣದಿಂದ ನ್ಯಾಯಾಧೀಶರಲ್ಲಿ ಖಿನ್ನತೆಯ ಭಾವ:

    ‘ವ್ಯವಸ್ಥೆಯಲ್ಲಿನ ಈ ಭಯದ ಪರಿಣಾಮವು ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರ ಮನಸ್ಸಿನಲ್ಲಿ ಖಿನ್ನತೆಯ ಭಾವ ಹೆಚ್ಚಿಸುತ್ತಿದೆ. ಇದು ಅಂತಿಮವಾಗಿ ನ್ಯಾಯಾಂಗದ ಕಾರ್ಯವಿಧಾನ ಮತ್ತು ಕಾನೂನಿನ ನಿಯಮಗಳಿಗೇ ಬೆದರಿಕೆಯೊಡ್ಡುತ್ತಿದೆ’ ಎಂದು ಹೇಳಿದ್ದಾರೆ.

    ‘ಅಪಾಯಕಾರಿಯಲ್ಲದ ಬಹಳಷ್ಟು ತಪ್ಪುಗಳನ್ನು ನಿಂದಿಸಲು ಸದಾ ಸಿದ್ಧವಿರುವ ಹೈಕೋರ್ಟ್‌, ಜಿಲ್ಲಾ ನ್ಯಾಯಾಲಯಗಳನ್ನು ಸದಾ ಭಯದಲ್ಲೇ ಇರಿಸುತ್ತದೆ. ಹೀಗಾಗಿ ಶಿಕ್ಷೆಯ ಭಯದಲ್ಲೇ ಅವರು ಕಾರ್ಯ ನಿರ್ವಹಿಸುವಂತಾಗಿದೆ. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಿಗೂ ಕುಟುಂಬವಿದೆ. ಮಕ್ಕಳಿದ್ದಾರೆ. ಅನಾರೋಗ್ಯಕ್ಕೆ ತುತ್ತಾದ ಪಾಲಕರು ಇರುತ್ತಾರೆ, ಆರ್ಥಿಕ ಜವಾಬ್ದಾರಿಗಳಿರುತ್ತವೆ. ಒಂದು ಆದೇಶಕ್ಕಾಗಿ ಅವರನ್ನು ಹಠಾತ್ತಾಗಿ ವಜಾಗೊಳಿಸಿದರೆ ಅವರು ಮತ್ತು ಅವರ ಕುಟುಂಬವನ್ನು ಬೀದಿಗೆ ನೂಕಿದಂತಾಗಲಿದೆ. ಅಷ್ಟು ಮಾತ್ರವಲ್ಲ, ಅವರ ಪ್ರಾಮಾಣಿಕತೆಯನ್ನೇ ಸಮಾಜ ಪ್ರಶ್ನಿಸುವಂತೆ ಮಾಡಿದಂತಾಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

    ‘ಇಂಥ ಭಯದಲ್ಲೇ ಸದಾ ಕಾರ್ಯನಿರ್ವಹಿಸುವ ನ್ಯಾಯಾಂಗದಿಂದ ನ್ಯಾಯವನ್ನು ನಿರ್ವಹಿಸುವದನ್ನು ಬಿಟ್ಟರೆ, ನ್ಯಾಯದಾನ ಸಾಧ್ಯವಿಲ್ಲ. ಹೀಗಾಗಿ ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿನ ಅಧಿಕಾರ ಸಮತೋಲನವನ್ನು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ನ್ಯಾ. ಶ್ರೀಧರನ್ ಹೇಳಿದ್ದಾರೆ.

    ಹೈ ಕೋರ್ಟಿನ ಹೇಳಿಕೆಗೆ ಕಾರಣವಾದ ಪ್ರಕರಣ ಹೀಗಿದೆ:

    ವ್ಯಾಪಂ ಪ್ರಕರಣದಲ್ಲಿ ಕೆಲ ಜಾಮೀನುಗಳಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನ್ಯಾಯಾಲಯದ ವಿಶೇಷ ನ್ಯಾಯಾಧೀಶರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, 2015ರ ಅ. 19ರಂದು ಕರ್ತವ್ಯದಿಂದ ವಜಾಗೊಳಿಸಲಾಗಿತ್ತು. 28 ವರ್ಷಗಳ ವೃತ್ತಿ ಜೀವನದಲ್ಲಿ ಕಳಂಕವಿಲ್ಲದ ದಾಖಲೆ ಇದ್ದರೂ ಕೆಲ ಪೊಲೀಸ್ ಅಧಿಕಾರಿಗಳ ಹೇಳಿಕೆಯನ್ನು ಆಧರಿಸಿ ಅವರ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು. ಅವರ ನ್ಯಾಯಾಂಗ ವಿವೇಚನೆಯೊಂದಿಗೆ ಆಡಳಿತಾತ್ಮಕ ಭಿನ್ನಾಭಿಪ್ರಾಯಗಳಿಂದ ವಜಾಗೊಳಿಸಿರುವುದು ನ್ಯಾಯಾಂಗ ವ್ಯವಸ್ಥೆಗೇ ಧಕ್ಕೆಯನ್ನುಂಟು ಮಾಡಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.

    ಅಪ್ರಾಮಾಣಿಕತೆ ಅಥವಾ ಭ್ರಷ್ಟಾಚಾರದ ಪುರಾವೆ ಇಲ್ಲದಿದ್ದರೆ ನ್ಯಾಯಾಂಗ ಆದೇಶಗಳು ಶಿಸ್ತು ಕ್ರಮಕ್ಕೆ ಆಧಾರವಾಗುವುದಿಲ್ಲ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು. ನ್ಯಾಯಾಧೀಶರ ವಿರುದ್ಧದ ವಜಾ ಆದೇಶವನ್ನು ಪೀಠ ವಜಾಗೊಳಿಸಿತು. ಅವರಿಗೆ ಸಿಗಬೇಕಾದ ಎಲ್ಲಾ ನಿವೃತ್ತಿ ಪ್ರಯೋಜನಗಳು, ಬಡ್ಡಿಯೊಂದಿಗೆ ಬಾಕಿ ವೇತನಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಪೀಠ ಆದೇಶಿಸಿತು. ಅವರ ವಿರುದ್ಧದ ಕಾನೂನುಬಾಹಿರ ಕ್ರಮ, ಅವಮಾನ ಮತ್ತು ಆಘಾತಕ್ಕಾಗಿ ₹5 ಲಕ್ಷ ಪರಿಹಾರ ನೀಡುವಂತೆಯೂ ಸರ್ಕಾರಕ್ಕೆ ನಿರ್ದೇಶಿಸಿದೆ.

  • “ಇಸ್ರೇಲಿ ಪ್ರಧಾನಿ ನ್ಯೂಯಾರ್ಕ್ ಪ್ರವೇಶಿಸಿದರೆ ಬಂಧಿಸುವೆ” 
ಘೋಷಿಸಿದ್ದ ಈ ಝೊಹ್ರಾನ್ ಮಮ್ದಾನಿ ಯಾರು?

    “ಇಸ್ರೇಲಿ ಪ್ರಧಾನಿ ನ್ಯೂಯಾರ್ಕ್ ಪ್ರವೇಶಿಸಿದರೆ ಬಂಧಿಸುವೆ” ಘೋಷಿಸಿದ್ದ ಈ ಝೊಹ್ರಾನ್ ಮಮ್ದಾನಿ ಯಾರು?

    ಇತ್ತೀಚಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಪ್ರಚಾರ ಪಡೆದ ಮತ್ತು ವೈರಲ್ ಆದ ಒಂದು ಹೆಸರು ಝೊಹ್ರಾನ್ ಮಮ್ದಾನಿ, ಅವರ ಬಗ್ಗೆ ಒಂದಿಷ್ಟು ಚರ್ಚಿಸೋಣ. ಝೊಹ್ರಾನ್ ಮಮ್ದಾನಿ 33 ವರ್ಷದ ಗುಜರಾತ್ ಮೂಲದ ಸ್ಪುರದ್ರೂಪಿ ಯುವಕ ತನ್ನ ಧೀರ ಧೋರಣೆ, ಜನಪರ ಕಾರ್ಯಕ್ರಮಗಳು ಮತ್ತು ಶೋಷಿತರ ಪರವಾಗಿ ನಡೆಸುವ ಹೋರಾಟಗಳಿಂದ ಇಂದು ಜಗತ್ತಿನ ಗಮನ ಸೆಳೆದಿದ್ದಾರೆ. ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ಜನಸಾಮಾನ್ಯರಿಗೆ ಝೊಹ್ರಾನ್ ಮಮ್ದಾನಿ ಒಂದು ಹೊಸ ಭರವಸೆಯ ಕಿರಣವಾಗಿದ್ದಾರೆ. ಝೊಹ್ರಾನ್ ಮಮ್ದಾನಿ ಮೂಲತಃ ಗುಜರಾತ್ ನವರಾಗಿದ್ದು ಉಗಾಂಡಾದಲ್ಲಿ ಜನಿಸಿ ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಬೆಳೆದವರು. ಅವರು ಖ್ಯಾತ ಚಲನ ಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಗುಜರಾತಿನ ಶಿಕ್ಷಣ ತಜ್ಞ ಮುಹಮ್ಮದ್ ಮಮ್ದಾನಿಯವರ ಪುತ್ರ. ಆದರೆ ಜಗತ್ತಿಗೆ ಅವರ ಪರಿಚಯವಾಗುವುದು ಅವರ ಪೋಷಕರ ಕಾರಣದಿಂದಲ್ಲ ಬದಲಾಗಿ ಅವರು ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಶೋಷಿತ ಮತ್ತು ಹಕ್ಕು ವಂಚನೆಗೊಳಗಾದವರ ಹಾಗೂ ದಮನಿತ ವರ್ಗದವರಿಗಾಗಿ ರೋಟಿ ಕಪ್ಡಾ ಮಕಾನ್ ಎಂಬ ಘೋಷಣೆಯೊಂದಿಗೆ ಹೋರಾಡಿ ಜನಪರ ಕೆಲಸ ಮಾಡುವವರಾಗಿದ್ದಾರೆ. ಅದು ಮಾತ್ರವಲ್ಲ ಸುಮಾರು ಅರವತ್ತು ಸಾವಿರ ಮಂದಿಯನ್ನು ಫೆಲೆಸ್ತೀನಿನಲ್ಲಿ ಮಾರಣ ಹೋಮಗೈದ ಕಿರಾತಕ ಇಸ್ರೇಲ್ ವಿರುದ್ಧ ಮಾತನಾಡಿದ ಧೈರ್ಯಶಾಲಿ ಯುವಕ. ಆದ್ದರಿಂದಲೇ ಅವರು ಸಾಮಾನ್ಯರ ಮತ್ತು ಯುವಜನರ ಹೃದಯಗಳಲ್ಲಿ ತರಂಗವನ್ನು ಸೃಷ್ಟಿಸಿದ್ದಾರೆ. ಅವರ ಈ ಖ್ಯಾತಿ ಇಂದು ನ್ಯೂಯಾರ್ಕ್ ನಗರದ ಮೇಯರ್ ಸ್ಥಾನಕ್ಕೆ ಮೊದಲ ಸುತ್ತಿನಲ್ಲಿ ಗೆಲುವನ್ನು ಕಂಡಿದ್ದಾರೆ.

    ಝೊಹ್ರಾನ್‌ನ ತಂದೆ ಗುಜರಾತ್ ಮೂಲದ ಶಿಕ್ಷಣ ತಜ್ಞ, ತಾಯಿ ಮೀರಾ ಒರಿಸ್ಸಾ ಮೂಲದ ಚಲನ ಚಿತ್ರ ನಿರ್ಮಾಪಕಿ. 1991 ಅವರು ಉಗಾಂಡದಲ್ಲಿ ಜನ್ಮ ತಾಳಿದರು. ತನ್ನ ಏಳನೆಯ ವಯಸ್ಸಿನಲ್ಲಿ ನ್ಯೂಯಾರ್ಕ್ಗೆ ವಲಸೆ ಬಂದ ಅವರು ಅಲ್ಲೇ ಬೆಳೆದು ಉನ್ನತ ಶಿಕ್ಷಣ ಪಡೆದು ತದ ನಂತರ ರಾಜಕೀಯಕ್ಕೆ ಧುಮುಕಿದರು. ಎಲ್ಲಾ ಕಾಲದಲ್ಲೂ ಜಗತ್ತಿನ ದೊಡ್ಡಣ್ಣನೆಂಬ ಹೆಸರನ್ನು ಉಳಿಸಿಕೊಂಡೇ ಜಗತ್ತನ್ನು ನಿಯಂತ್ರಿಸುವ ಅಮೇರಿಕ ಬಂಡವಾಳ ಶಾಹಿಗಳ ಕೂಪ. ಆದ್ದರಿಂದಲೇ ಜನಸಾಮಾನ್ಯರ ಕಷ್ಟಗಳನ್ನು ಅರಿತು ಅದಕ್ಕೆ ಸ್ಪಂದಿಸುವ ಗೋಜಿಗೆ ಅಲ್ಲಿನ ದೊಡ್ಡಣ್ಣ ಪ್ರಯತ್ನಿಸುವುದೇ ಇಲ್ಲ. ನ್ಯೂಯಾರ್ಕ್ ನಗರದ ಜನರ ಕಷ್ಟಗಳು ಮತ್ತು ಸಮಸ್ಯೆಗಳನ್ನು ಅರಿತ ಮಮ್ದಾನಿ ಡೆಮಾಕ್ರಟಿಕ್ ಪಕ್ಷದ ಸದಸ್ಯರಾಗಿ ನಂತರ 2020 ರಲ್ಲಿ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ ಅವರು ಅದುವರೆಗೆ ನಾಲ್ಕು ಬಾರಿ ಸದಸ್ಯರಾಗಿದ್ದಂತಹ ಅರವಿಲ್ಲಾ ಸಿಮೋಟಸ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಆಯ್ಕೆಯಾದರು. ತಮ್ಮ ಜನಪರ ಆಡಳಿತ, ದಿಟ್ಟ ಎಡಪಂತೀಯ ನಿಲುವು ಮತ್ತು ಹೋರಾಟಗಳ ಮೂಲಕ 2024ರಲ್ಲಿ ಕೂಡ ಅವರು ಮರು ಆಯ್ಕೆಯಾದರು. ಆಗಲೇ ಅವರು ನ್ಯೂಯಾರ್ಕ್ ನ ಮೇಯರ್ ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ತನ್ನ ನಿಲುವನ್ನು ಘೋಷಿಸಿ ನ್ಯೂಯಾರ್ಕ್ನ ಮಾಜಿ ಗವರ್ನರ್ ಆಂಡ್ರೋವನ್ನು ಸೋಲಿಸಿ ನ್ಯೂಯಾರ್ಕ್ನ ನೂತನ ಮೇಯರ್ ಆಗುವ ನಿಟ್ಟಿನಲ್ಲಿ ಆಯ್ಕೆಯಾಗಿದ್ದಾರೆ ಮತ್ತು ಅಧಿಕೃತ ಘೋಷಣೆ ಈ ವರ್ಷದ ಕೊನೆಯಲ್ಲಿ ಘೋಷಣೆಯಾಗಲಿದೆ.

    ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೇನೆAದರೆ ಇಡೀ ಜಗತ್ತು ಇಂದು ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿರುವಾಗ ಅದರಲ್ಲೂ ಬಂಡವಾಳಶಾಹಿಗಳ ತವರೂರು ಎಂದೇ ಖ್ಯಾತಿಯಲ್ಲಿರುವ ನ್ಯೂಯಾರ್ಕ್ ಶೇಕಡಾ ಮೂರರಷ್ಟು ಮಾತ್ರ ಮುಸ್ಲಿಮ್ ಜನಸಂಖ್ಯೆ ಇರುವ ನಗರದಲ್ಲಿ ಓರ್ವ ಮುಸ್ಲಿಮ್ ಮಾತ್ರವಲ್ಲ ಎಡಪಂಥೀಯ ವಿಚಾರಧಾರೆಯ ಯುವಕ ಮೇಯರ್ ಸ್ಥಾನಕ್ಕೆ ಗೆಲುವು ಸಾಧಿಸಿದ್ದು ಹೇಗೆ ಎಂಬುದು ಒಂದು ವಿಚಿತ್ರ. ಮಮ್ದಾನಿಗೆ ಗೆಲುವು ತಂದು ಕೊಡಲು ಕಾರಣ ಅವರ ವಿಭಿನ್ನ ಶೈಲಿಯ ಹೋರಾಟದ ಮಾದರಿಯಾಗಿತ್ತು. ರೋಟಿ ಕಪ್ಡಾ ಔರ್ ಮಕಾನ್ ಎಂಬ ಘೋಷಣೆಯೊಂದಿಗೆ ಜನಸಾಮಾನ್ಯರನ್ನು ಒಟ್ಟು ಸೇರಿಸಿ ಮಾಡಿದ ಹೋರಾಟ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.

    ಒಂದು ಕಡೆಯಲ್ಲಿ ಅವರ ಗೆಲುವಿನಲ್ಲಿ ಜನಸಾಮಾನ್ಯರು ಖುಷಿ ಪಟ್ಟರೆ, ಇನ್ನೊಂದು ಕಡೆ ಸೋಷಿಯಲಿಸ್ಟ್ ಮತ್ತು ಬಂಡವಾಳಶಾಹಿಗಳ ನಿದ್ರೆಗೆಡಿಸಿದೆ. ಏಕೆಂದರೆ ಅವರೊಬ್ಬ ಮುಸ್ಲಿಮ್, ಅವರು ಫೆಲೆಸ್ತೀನ್ ಪರ ಮಾತಾನಾಡುತ್ತಾರೆ, ನ್ಯೂಯಾರ್ಕ್ ನಗರಕ್ಕೆ ಬೆಂಜಮಿನ್ ನೆತನ್ಯಾಹು ಪ್ರವೇಶಿಸಿದರೆ ಅವರನ್ನು ಬಂಧಿಸುವೆ ಎಂದು ಎಚ್ಚರಿಸಿದ್ದಾರೆ, ಗುಜರಾತಿನಲ್ಲಿ ಗೋದ್ರಾ ಹತ್ಯಾಕಾಂಡದಲ್ಲಿ ನೇರ ಪಾತ್ರಧಾರಿಯಾದ ನರೇಂದ್ರ ಮೋದಿಯನ್ನು ದೂಷಿಸಿದ್ದಾರೆ ಮತ್ತು ಆರೆಸ್ಸೆಸ್ ಭಯೋತ್ಪಾದನೆಯನ್ನು ಖಂಡಿಸುತ್ತಾರೆ. ಆದಾಗ್ಯೂ ಅವರು ಮೇಯರ್ ಚುನಾವಣೆಯಲ್ಲಿ ಆಯ್ಕೆಯಾಗುವುದು ಒಂದು ವಿಶೇಷವೇ ಸರಿ. ಅದಕ್ಕೆ ಮುಖ್ಯ ಕಾರಣ ಅವರ ವಿಭಿನ್ನ ಶೈಲಿಯ ಚುನಾವಣಾ ಪ್ರಚಾರ.

    ಅವರು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಡ ಮತ್ತು ಸಾಧಾರಣ ವರ್ಗದವರನ್ನು ಪರಿಗಣಿಸಿ ಅವರಿಗೆ ವಿಶೇಷ ಕೆಲವೊಂದು ಸ್ಕೀಮ್‌ಗಳನ್ನು ಮುಂದಿಡುತ್ತಾರೆ. ಅದರಲ್ಲಿ ಅಗ್ಗದ ದರದಲ್ಲಿ ಮನೆ ಮತ್ತು ಕಡಿಮೆ ಬಾಡಿಗೆಗೆ ಮನೆ ಸಿಗುವಂತೆ ಮಾಡುವುದು, ಜನರಿಗೆ ದಿನನಿತ್ಯ ಓಡಾಡುವ ನಿಟ್ಟಿನಲ್ಲಿ ಉಚಿತ ಸಾರಿಗೆ ಸೌಲಭ್ಯ, ಆರೋಗ್ಯ ಮತ್ತು ಸುರಕ್ಷತೆಯ ಭರವಸೆ, ದಿನಸಿ ಸಾಮಾಗ್ರಿಗಳನ್ನು ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡುವುದು, ಬಡ ಮತ್ತು ಮಧ್ಯಮ ವರ್ಗಕ್ಕೆ ಕೈಗೆಟುವ ರೀತಿಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ತೆರಿಗೆಯಲ್ಲಿ ಪರಿಷ್ಕರಣೆ ಅರ್ಥಾತ್ ಇದೆಲ್ಲವೂ ಹೇಗೆ ಸಾಧ್ಯ ಎಂದು ಕೇಳಿದರೆ ಶ್ರೀಮಂತರ ಮತ್ತು ವ್ಯಾಪಾರಿಗಳಿಗೆ ಹೆಚ್ಚು ತೆರಿಗೆ ವಿಧಿಸಿ ಅದರಿಂದ ಮಧ್ಯಮ ವರ್ಗದವರ ಜೀವನವನ್ನು ಉತ್ತಮಗೊಳಿಸುವುದು. ಮಾತ್ರವಲ್ಲ ನ್ಯೂಯಾರ್ಕ್ನಲ್ಲಿ ಅಧ್ಯಕ್ಷ ಟ್ರಂಪ್‌ನ ತೆರಿಗೆ ವ್ಯವಸ್ಥೆಯನ್ನು ಪರಿಷ್ಕರಿಸುವುದು. ಹೀಗೆ ಶ್ರಮಿಕ ಮತ್ತು ಮಧ್ಯಮ ವರ್ಗಕ್ಕೆ ಚೇತರಿಸಿಕೊಂಡು ಬದುಕಲು ಸಾಧ್ಯವಾಗುವ ಎಲ್ಲಾ ರೀತಿಯ ಯೋಜನೆಗಳನ್ನು ಅವರು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ಇದುವೇ ಅವರಿಗೆ ಗೆಲುವನ್ನು ತಂದುಕೊಟ್ಟಿತು.

    ಅವರು ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಶ್ರೀಮಂತರನ್ನು ಭೇಟಿಯಾಗಿ ಅವರ ಮುಂದೆ ಮಂಡಿಯೂರುವ ಕೆಲಸಕ್ಕೆ ಕೈಹಾಕಲಿಲ್ಲ. ಏಕೆಂದರೆ ಅವರ ಚುನಾವಣಾ ಪ್ರಣಾಳಿಕೆ ಶ್ರೀಮಂತರ ವಿರುದ್ಧವಾಗಿತ್ತು. ಅವರು ಅದನ್ನು ಖಂಡಿತ ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ಅದಕ್ಕೆ ಬದಲಾಗಿ ಅವರು ಸೋಷಿಯಲ್ ಮೀಡಿಯಾದ ಮೊರೆ ಹೋಗಿ ಜನರಲ್ಲಿ ತನ್ನ ಪ್ರಣಾಳಿಕೆಯನ್ನು ವಿವರಿಸುವ ಮೂಲಕ ಹಣ ಸಂಗ್ರಹಕ್ಕೆ ಭಿನ್ನವಿಸಿದರು ಮತ್ತು ಆ ಮೂಲಕ ಅವರಿಗೆ ಹೆಚ್ಚು ಹಣ ಸಂಗ್ರಹ ಮಾಡಲು ಸಾಧ್ಯವಾಯಿತು. ಮಾತ್ರವಲ್ಲ ಇದರಿಂದ ಅವರು ಕೈಗೊಂಡ ಪ್ರಚಾರ ಎಷ್ಟು ಜನಪ್ರಿಯವಾಯಿತೆಂದರೆ ಕೇವಲ ನ್ಯೂಯಾರ್ಕ್ ಮಾತ್ರವಲ್ಲ ಇಡೀ ಜಗತ್ತೇ ಇಂದು ಅವರ ಭಾಷಣವನ್ನು ಆಲಿಸಲು ಮತ್ತು ಅವರ ಪ್ರಚಾರದ ರೀತಿಯನ್ನು ತದೇಕಚಿತ್ತದಿಂದ ಗಮನಿಸುವಂತೆ ಮಾಡಿದೆ.
    ಇವೆಲ್ಲದರ ನಡುವೆ ಮಮ್ದಾನಿಯ ವಿರುದ್ಧ ಪ್ರಚಾರ ಮಾಡುವ ವಿರೋಧ ಪಕ್ಷವೂ ತನ್ನ ಪ್ರಚಾರವನ್ನು ಮುಂದುವರಿಸಿದೆ. ಅವರೊಬ್ಬ ಆಂಟಿ ಸೆಮೆಟಿಕ್ (ಯಹೂದಿಯರ ವಿರೋಧಿ) ಏಕೆಂದರೆ ಅಮೇರಿಕಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಹೂದಿಗಳೂ ಇದ್ದಾರೆ. ಅವರೊಬ್ಬ ಮೂಲಭೂತವಾದಿ ಮುಸ್ಲಿಮ್ ಮತ್ತು ಅವರೊಬ್ಬ ಎಡಪಂಥೀಯ ಎಂಬಿತ್ಯಾದಿ ಆಪಾದನೆಗಳನ್ನು ಹುಟ್ಟು ಹಾಕಿ ಪ್ರಚಾರ ಮಾಡುತ್ತಲೂ ಇದ್ದಾರೆ.

    ನಿಜವಾಗಿ ಅಮೇರಿಕ ಎಂಬ ಅಷ್ಟು ದೊಡ್ಡ ದೇಶದ ಒಂದು ಚಿಕ್ಕ ನಗರವಾದ ಆದರೆ ಅಷ್ಟೇ ಶ್ರೀಮಂತ ನಗರವಾದ ನ್ಯೂಯಾರ್ಕ್ನ ಮೇಯರ್ ಚುನಾವಣೆಯಲ್ಲಿ ಆಯ್ಕೆಯಾದ ಮುಮ್ದಾನಿಯ ವಿರುದ್ಧ ಅಧ್ಯಕರಾದ ಟ್ರಂಪ್ ತಲೆಕೆಡಿಸುವ ಅಗತ್ಯ ಖಂಡಿತಾ ಇಲ್ಲ. ಆದರೆ ಟ್ರಂಪ್ ನೇರವಾಗಿ ಮುಮ್ದಾನಿಯ ವಿರುದ್ಧ ವಾಗ್ದಾಳಿಗೆ ಇಳಿದಿದ್ದು ಅವರೊಬ್ಬ ಪಕ್ಕಾ ಹುಚ್ಚು ಕಮ್ಯೂನಿಸ್ಟ್ ಮತ್ತು ನೋಡಲು ಭಯಾನಕ ಜೀವಿಯಂತೆ ಕಾಣುತ್ತಿದ್ದಾರೆ ಮಾತ್ರವಲ್ಲ ಅವರೊಬ್ಬ ಆಡಳಿತಕ್ಕೆ ತಕ್ಕುದಾದ ವ್ಯಕ್ತಿಯಲ್ಲ ಎಂಬ ಹೇಳಿಕೆಯ ಮೂಲಕ ತನ್ನ ಅಸಹಿಷ್ಣುತೆ ಮತ್ತು ಅಸಹಾಯಕತೆಯನ್ನು ತೋಡಿ ಮತ್ತೊಮ್ಮೆ ಮುಸ್ಲಿಮರೊಂದಿಗಿನ ವೈರತ್ವವನ್ನು ಇಸ್ಲಾಮೊಫೋಬಿಯಾವನ್ನು ನಾಲಿಗೆಯ ಮೂಲಕ ಹರಿಯಬಿಟ್ಟಿದ್ದಾರೆ.

    ಟ್ರಂಪ್ ಸೇರಿದಂತೆ ವಿರೋಧ ಪಕ್ಷವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಮ್ದಾನಿಯ ಪೌರತ್ವನ್ನು ರದ್ಧುಗೊಳಿಸುವಂತೆ ಕೋರಿದ್ದಾರೆ. ಅದಕ್ಕಾಗಿ ಅಲ್ಲಿನ ರಿಪಬ್ಲಿಕ್ ಪಕ್ಷವು ಅಧ್ಯಕ್ಷ ಟ್ರಂಪ್‌ರೊAದಿಗೆ 1954 ರ ಕಮ್ಯೂನಿಸ್ಟ್ ವಿರೋಧಿ ನೀತಿಯನ್ನು ಪುನಃಸ್ಥಾಪನೆಗೊಳಿಸಬೇಕೆಂದು ಕೂಡ ಕೋರಿದ್ದಾರೆ. 1954 ರಲ್ಲಿ ಅಂದಿನ ಸರಕಾರವು ಕಮ್ಯೂನಿಸ್ಟ್ ವಿರೋಧಿ ನೀತಿಯನ್ನು ಜಾರಿಗೊಳಿಸಿತ್ತು. ಅದರಂತೆ ಸರಕಾರಿ ಮತ್ತು ಸರಕಾರೇತರ ಹುದ್ದೆಗಳಲ್ಲಿದ್ದ ಎಲ್ಲ ಎಡಪಂಥೀಯರನ್ನು ವಜಾಗೊಳಿಸಿ ಅವರ ಪೌರತ್ವನ್ನು ರದ್ಧುಗೊಳಿಸುವ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು.

    ಅದಕ್ಕೆ ಕಾರಣವೂ ಇದೆ. ಮಮ್ದಾನಿ ಸ್ವೇಚ್ಛೆಯ ವಿರುದ್ಧ ಮತ್ತು ಬಂಡವಾಳಶಾಹಿಯ ವಿರುದ್ಧ ಧ್ವನಿಯೆತ್ತುತ್ತಿದ್ದಾರೆ. ಮಾತ್ರವಲ್ಲ ಟ್ರಂಪ್‌ನ ಆಪ್ತ ಮಿತ್ರರಾದ ನೆತನ್ಯಾಹು ಮತ್ತು ಅನೇಕ ಶ್ರೀಮಂತರಿಗೆ ಮಮ್ದಾನಿಯ ಯೋಜನೆ ನಿದ್ರೆಗೆಡಿಸುವುದಂತೂ ಸತ್ಯ. ಏಕೆಂದರೆ ನ್ಯೂಯಾರ್ಕ್ ನಗರ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದ್ದರಿಂದಲೇ ಮಮ್ದಾನಿಯ ಯೋಜನೆ ಶ್ರೀಮಂತರ ಮತ್ತು ಉದ್ಯಮಿಗಳ ನೀತಿಯನ್ನು ತಲೆಕೆಳಗಾಗಿಸುವುದಂತೂ ಸತ್ಯ.

    ನಾವು 21 ನೇಯ ಶತಮಾನದಲ್ಲಿ ಬದುಕುತ್ತಿದ್ದೇವೆ. ಆದರೆ ನಮ್ಮ ದೇಶದಲ್ಲಿ 20 ನೆಯ ಶತಮಾನದ ರಾಜಕೀಯ ನೀತಿಯನ್ನು ಬಳಸಲಾಗುತ್ತೆ. ಆದ್ದರಿಂದಲೇ ಫ್ಯಾಸಿಸ್ಟ್ ಮತ್ತು ಕೋಮುವಾದಿಗಳು ಪದೇ ಪದೇ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆಯನ್ನು ಹಿಡಿಯುತ್ತಿದ್ದಾರೆ. ಆದರೆ ಮಮ್ಡಾನಿ ಚುನಾವಣಾ ಪ್ರಚಾರಕ್ಕೆ ಅನುಸರಿಸಿದ ನೀತಿ ವಿಶಿಷ್ಟವಾದುದಾಗಿದೆ. ಅವರು ಹೊಸ ಬಗೆಯ ನೀತಿಯನ್ನು ಅನುಸರಿಸುವ ಮೂಲಕ ಜನ ಸಾಮಾನ್ಯರ ಹೃದಯವನ್ನು ಗೆಲ್ಲಲು ಸಾಧ್ಯವಾಗಿದೆ. ಇದೇ ನೀತಿಯನ್ನು ಅಥವಾ ಇದಕ್ಕೆ ಅನುರೂಪವಾದ ಹೊಸ ಬಗೆಯ ಯೋಜನೆ ಮತ್ತು ತಂತ್ರಗಾರಿಕೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿದರೆ ಕೋಮುವಾದಿ, ಕ್ರಿಮಿನಲ್ ಮತ್ತು ಫ್ಯಾಸಿಸ್ಟರನ್ನು ಸೋಲಿಸಲು ಸಾಧ್ಯವಿದೆ ಎಂದು ಮಮ್ದಾನಿ ತೋರಿಸಿಕೊಟ್ಟಿದ್ದಾರೆ.

    ರಾಜಕೀಯದಲ್ಲಿ ಸೋಲು ಮತ್ತು ಗೆಲುವು ಇದ್ದೇ ಇದೆ. ಆದರೆ ಚುನಾವಣಾ ಪ್ರಚಾರದಲ್ಲಿ ಹತ್ತಾರು ಭರವಸೆಗಳನ್ನು ನೀಡುವ ಮೂಲಕ ಮತ ಗಳಿಸಿ ಅಧಿಕಾರಕ್ಕೆ ಬಂದರೆ ಅವೆಲ್ಲವನ್ನೂ ಮರೆತು ಬಿಡುವುದು ರಾಜಕಾರಣಿಗಳಿಗೆ ಅಭ್ಯಾಸವಾಗಿ ಬಿಟ್ಟಿದೆ. ಅಂತವರಿಗೆ ತಕ್ಕ ಪಾಠ ಕಲಿಸಲು ಇನ್ನಾದರೂ ಜನಸಾಮಾನ್ಯರು ಮುಂದಾಗಬೇಕು. ಮತೀಯವಾದಿಗಳನ್ನು ಮತ್ತು ಅಧಿಕಾರದಾಹಿಗಳನ್ನು ಸೋಲಿಸಿ ಮನೆಯಲ್ಲಿ ಕೂರಿಸಬೇಕು ಮತ್ತು ಜನಸಾಮಾನ್ಯರಿಗಾಗಿ ಮಿಡಿಯುವ, ಅವರ ಹಕ್ಕುಗಳಿಗಾಗಿ ಹೋರಾಡುವ ಹೊಸ ಯುವ ಸಮೂಹವು ರಾಜಕೀಯಕ್ಕೆ ಧುಮುಕುವ ಅಗತ್ಯ ಖಂಡಿತ ಇದೆ. ಅಂತಹ ಗುಣ ಮತ್ತು ವೈಶಿಷ್ಯತೆ ಮಮ್ದಾನಿಯವರಲ್ಲಿ ಇದೆ. ಅವರು ಬಳಸಿದ ತಂತ್ರಗಾರಿಕೆ ನಮ್ಮ ದೇಶದ ಜಾತ್ಯಾತೀತವಾದಿಗಳು ಅನುಸರಿಸಬೇಕಾಗಿದೆ. ಅಧಿಕಾರದ ಲಾಲಸೆಯಿಂದ ಹೊರಬಂದು ತನ್ನ ಸ್ವಾರ್ಥತೆಯನ್ನು ಬದಿಗಿಟ್ಟು ಜನರಿಗಾಗಿ ತನ್ನಿಂದೇನು ಮಾಡಲು ಸಾಧ್ಯ ಎಂಬ ಹೊಸ ಕಲ್ಪನೆಯನ್ನು ಹುಟ್ಟು ಹಾಕುವಲ್ಲಿ ಮಮ್ದಾನಿ ಒಂದು ರೀತಿಯಲ್ಲಿ ಯಶಸ್ವಿಯಾಗಿದ್ದಾರೆ. ಅವರಂತಹ ಮುತ್ತು ರತ್ನಗಳು ಬೆಳೆದು ಬರಲಿ ಮತ್ತು ಅವರ ಕನಸು ನನಸಾಗಲಿ ಎಂದು ಹಾರೈಸೋಣ.

  • ಮಗಳನ್ನೇ ಗುಂಡಿಟ್ಟು ಕೊಂದ ತಂದೆ: 
ರಾಷ್ಟ್ರೀಯ ಟೆನಿಸ್ ಆಟಗಾರ್ತಿ ಹತ್ಯೆಗೆ ಕಾರಣವೇನು ಗೊತ್ತೇ?

    ಮಗಳನ್ನೇ ಗುಂಡಿಟ್ಟು ಕೊಂದ ತಂದೆ: ರಾಷ್ಟ್ರೀಯ ಟೆನಿಸ್ ಆಟಗಾರ್ತಿ ಹತ್ಯೆಗೆ ಕಾರಣವೇನು ಗೊತ್ತೇ?

    ಹೆಣ್ಣು ಮಕ್ಕಳ ಸಾಧನೆಗೆ ಹೆಮ್ಮೆ ಪಡುವ ಬದಲಿಗೆ ಕೆಲವರು ಅದನ್ನು ಅಪಮಾನವೆಂದೂ, ಹೆತ್ತವರ ಗೌರವಕ್ಕೆ ಭಂಗವೆಂದು ಪರಿಗಣಿಸುತ್ತಿರುವುದು ಎಷ್ಟೊಂದು ದುಃಖದ ಸಂಗತಿಯಾಗಿದೆ.

    ಗುರುಗಾಂವ್‌ನಲ್ಲಿ ಟೆನಿಸ್ ಆಟಗಾರ್ತಿಯ ಹತ್ಯೆ, ಸಾಂಸ್ಕೃತಿಕ ಮೌಲ್ಯಗಳ ಬಲಿ ಸಮಾಜದ ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಬೆಳವಣಿಗೆ ಅಲ್ಲ; ಅದು ಮಾನವೀಯ ಮೌಲ್ಯಗಳ ಗಾಢ ಬೆಳೆತವನ್ನೂ ಒಳಗೊಂಡಿರಬೇಕು.
    ಇತ್ತೀಚೆಗೆ ಹರಿಯಾಣದ ಗುರುಗಾಂವ್‌ನಲ್ಲಿ ನಡೆದ ದಾರುಣ ಘಟನೆ ಈ ಮಾತಿಗೆ ಉಜ್ವಲ ಸಾಕ್ಷಿ. ರಾಷ್ಟ್ರಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ (25) ಅವಳನ್ನು ಅವಳ ತಂದೆ ದೀಪಕ್ ಯಾದವ್ (54) ಗುಂಡಿಕ್ಕಿ ಹತ್ಯೆ ಮಾಡಿದ ಶೋಕಾಂತಿಕ ಘಟನೆ ಜುಲೈ 10 ರಂದು ಗುರುವಾರ ಬೆಳಗ್ಗೆ 10.30ರ ಸುಮಾರಿಗೆ ನಡೆದಿತ್ತು. ಆಕೆಯು ಅಡಿಗೆ ಮನೆಯಲ್ಲಿದ್ದಾಗಲೇ ತಂದೆ ತನ್ನ ಲೈಸೆನ್ಸ್ ಹೊಂದಿದ್ದ ಪಿಸ್ತೂಲ್‌ನಿಂದ ಅವಳ ಹೊಟ್ಟೆಗೆ ಗುಂಡು ಹಾರಿಸಿದ್ದರು. ಆಸ್ಪತ್ರೆಯಲ್ಲಿ ಅವಳು ಕೊನೆಯುಸಿರೆಳೆದಳು.

    ಪೊಲೀಸರು ತಿಳಿಸಿದಂತೆ, ಈ ಅಪರಾಧಕ್ಕೆ ಪ್ರೀತಿ ಸಂಬಂಧ ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್ಗಳು ಎಂಬುದು ಯಾವುದೇ ಕಾರಣವಾಗಿಲ್ಲ. ಬದಲಾಗಿ, ಮಹಿಳೆಯೊಬ್ಬಳ ಸ್ವಾತಂತ್ರ‍್ಯ ಹಾಗೂ ಆರ್ಥಿಕ ಸ್ವಾವಲಂಬನೆಯೇ ಈ ದುರಂತಕ್ಕೆ ಕಾರಣವಾಯಿತು. ದೀಪಕ್ ಅವರನ್ನು ಗ್ರಾಮದಲ್ಲಿ “ಮಗಳ ಹಣದಲ್ಲಿ ಮನೆಯು ನಡೆಯುತ್ತಿದೆ” ಎಂಬ ಟೀಕೆ ಮಾಡಿದ್ದರಿಂದ ಹಿಂಸೆಯತ್ತ ಪ್ರೇರಿತನಾಗಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.

    ಇಂದು ಕೆಲವರಿಗೆ ತಮ್ಮ ಹೆಣ್ಣುಮಕ್ಕಳ ಯಶಸ್ಸು ಸಹಿಸಲಾಗುತ್ತಿಲ್ಲ. ಆ ಹೆಣ್ಣು ಮಕ್ಕಳ ಆದಾಯದ ಮೇಲೆ ಮನೆಯ ಹಿಡಿತ ಇದ್ದರೂ ಕೂಡ ಅದು ಹೆತ್ತವರ ಅಹಂಕಾರಕ್ಕೆ ಧಕ್ಕೆಯಾಗುತ್ತದೆ ಎಂಬ ಯಾಂತ್ರಿಕ ಚಿಂತನೆ ಇನ್ನೂ ಜೀವಂತವಾಗಿದೆ. ಆ ಚಿಂತನೆ ಸತ್ತವರನ್ನು ಮಾತ್ರವಲ್ಲ ಬದುಕಿರುವವರ ಮೌಲ್ಯವನ್ನೂ ಹಿಂಸೆಯ ಮೂಲಕ ನಾಶ ಮಾಡುತ್ತಿದೆ.

    ರಾಧಿಕಾ ಯಾದವ್ ಅವಳ ಸಾಧನೆ ಚಿಕ್ಕದಾಗಿರಲಿಲ್ಲ. ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ ದಾಖಲೆಗಳ ಪ್ರಕಾರ ಅವಳು ಗರ್ಲ್ಸ್ ಅಂಡರ್-18 ವಿಭಾಗದಲ್ಲಿ 75ನೇ, ವುಮೆನ್ಸ್ ಡಬಲ್ಸ್ನಲ್ಲಿ 53ನೇ ಹಾಗೂ ಸಿಂಗಲ್ಸ್ನಲ್ಲಿ 35ನೇ ಸ್ಥಾನ ಪಡೆದಿದ್ದಳು. ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ (ITF) ವೃತ್ತಿ ಚಟುವಟಿಕೆಗಳಲ್ಲಿ 113ನೇ ಸ್ಥಾನ ಪಡೆದಿದ್ದಳು. ಇವು ಯಾವ ತಂದೆಗೆ ತಾನೇ ಹೆಮ್ಮೆಯಾಗದು? ಆದರೆ ಇಲ್ಲಿ ಕೊಲೆಗೆ ಕಾರಣವಾಯಿತು..!
    ಇದು ಕೇವಲ ಒಂದು ಕುಟುಂಬದ ದುರಂತವಲ್ಲ. ಮಹಿಳೆಯರ ಸಾಧನೆ, ಸ್ವಾತಂತ್ರ‍್ಯ ಮತ್ತು ಕನಸುಗಳ ಹಿಂಸಾತ್ಮಕ ಹತೋಟಿಯ ಮುಖವಾಡವಾಗಿದೆ.

    ಸಮಾಜವೆಂದರೆ ನಮ್ಮೆಲ್ಲರ ಪ್ರತಿಫಲನ. ಈ ಘಟನೆ ಏಕಾಏಕಿ ಆಗಿಹೋದ ದುರಂತವಲ್ಲ. ಇದು ಲೈಂಗಿಕ ರಾಜಕೀಯ, ಹೆಣ್ಣುಮಕ್ಕಳ ಮೇಲೇರುವ ಆಧಿಪತ್ಯದ, ಮತ್ತು ಹೆತ್ತವರಾದವರ ಅನಂತ `ಅಹಂ’ನ ಕ್ರಿಯಾತ್ಮಕ ರೂಪ. ಇಂಥ ದೌರ್ಜನ್ಯವನ್ನು ತಡೆಗಟ್ಟಬೇಕೆಂದರೆ ಕಾನೂನಿಗಿಂತ ಮುಂಚೆ ಮಾನವೀಯ ಮೌಲ್ಯಗಳ ಪುನರ್ ಸ್ಥಾಪನೆ ಅಗತ್ಯ. ಇನ್ನುಳಿದಂತೆ ಹೆಣ್ಣುಮಕ್ಕಳ ಕನಸುಗಳೂ ಹತ್ಯೆಯಿಂದ ಕೊನೆಗೊಳ್ಳಬಾರದು. ಅವರು ಬೆಳೆಯುತ್ತಿರುವಾಗ ಹೆಮ್ಮೆಪಡುವ ಹೆತ್ತವರಾಗಬೇಕು. ಕ್ರೂರರಾಗಬಾರದು. ಹೆತ್ತವರ ಯೋಚನೆಯ ಧಾಟಿ ಬದಲಾಗಬೇಕು. ಹೃದಯದೊಳಗೆ ಯಾವತ್ತಿಗೂ ಒಂದು ಆಯ್ಕೆ ಮಾಡಬೇಕಾಗುತ್ತದೆ.
    ಇನ್ನೊಂದೆಡೆ ಹೆಣ್ಣು ಮಕ್ಕಳ ಸಾಧನೆ ಅಂದರೆ ಮಗಳ ಸಾಧನೆಯೇ ತನ್ನ ಗೌರವದ ಪ್ರಶ್ನೆ ಎಂಬ ಅಹಂ ನಿಂದ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎನ್ನುವ ಕಾರಣಕ್ಕೆ ತಂದೆಯೇ ತನ್ನ ಮಗಳನ್ನು ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಸಾಂಗ್ಲಿಯದ ಸಾಧನಾ ಭೋಂಸ್ಲೆ ನೀಟ್ ಪರೀಕ್ಷೆಯ ಅಣಕು ಪರೀಕ್ಷೆಯನ್ನು ತೆಗೆದುಕೊಂಡಿದ್ದಳು. ಒಂದು ವರ್ಷದಿಂದ ನೀಟ್‌ಗಾಗಿ ತಯಾರಿ ನಡೆಸುತ್ತಿದ್ದಳು. ಈ ಬಾರಿ ಮೋಕ್ ಟೆಸ್ಟ್ನಲ್ಲಿ ಕಡಿಮೆ ಅಂಕ ತೆಗೆದು ಕೊಂಡಿದ್ದಳು. ಇದರಿಂದ ಸಿಟ್ಟಿಗೆದ್ದ ತಂದೆ ಮಗಳನ್ನು ಕೊಂದಿದ್ದಾರೆ. ಜೀವನದ ಪರೀಕ್ಷೆಯಲ್ಲಿ ಮಗಳು ಗೆದ್ದು ಸಾಗಲಿ ಎಂದು ಆಶೀರ್ವದಿಸಬೇಕಾಗಿದ್ದ ಅಪ್ಪನೇ ಕೇವಲ ಒಂದು ಪರೀಕ್ಷೆಯ ಅಂಕದ ಹಿಂದೆ ಬಿದ್ದು ಬದುಕುವ ಹಕ್ಕನ್ನೇ ಕಸಿದುಕೊಂಡರು.

    ವೃತ್ತಿಯಲ್ಲಿ ಶಿಕ್ಷಕರಾದ ಧೋಂಡಿರಾಮ್ ಭೋಂಸ್ಲೆ ಮಗಳು ಕಡಿಮೆ ಅಂಕಗಳಿಸಿದ್ದಕ್ಕೆ ಆಕೆಯನ್ನು ಸರಿಯಾಗಿ ಥಳಿಸಿದ್ದಾರೆ. ಇದಾದ ನಂತರ ತಂದೆ ಶಾಲೆಯಲ್ಲಿ ವಿಶ್ವ ಯೋಗ ದಿನದಂದು (International Yoga Day) ಶಾಲೆಯಲ್ಲಿ ಯೋಗ ಕಾರ್ಯಕ್ರಮ ಆಯೋಜನೆಯಾಗಿದ್ದ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಅವರು ಸೀದಾ ಶಾಲೆಗೆ ಹೋಗಿದ್ದಾರೆ. ಇತ್ತ ಅಪ್ಪನ ಹೊಡೆತದಿಂದ ಮಗಳು ಪ್ರಜ್ಞೆ ಕಳೆದುಕೊಂಡಿದ್ದಾಳೆ. ಶಾಲೆಯಿಂದ ಕಾರ್ಯಕ್ರಮ ಮುಗಿಸಿ ಮನೆಗೆ ಬಂದ ವೇಳೆ ಅಪ್ಪನಿಗೆ ಈ ವಿಚಾರ ತಿಳಿದಿದ್ದು ಕೂಡಲೇ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಸಾಧನಾ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಳು ಶುಕ್ರವಾರ ಆಸ್ಪತ್ರೆಯಲ್ಲಿ ನಿಧನಳಾಗಿದ್ದಾಳೆ. ಸಾಧನಾ ಭೋಂಸ್ಲೆ ತಲೆಗೆ ಗಾಯಗಳಾಗಿದ್ದವು. ಅವರನ್ನು ಸಾಂಗ್ಲಿಯ ಉಷಾಕಲ್ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಚಿಕಿತ್ಸೆ ಸಿಗುವ ಮೊದಲೇ ಆಕೆ ಸಾವನ್ನಪ್ಪಿದ್ದಳು.

    ಕಡಿಮೆ ಅಂಕಗಳು ಬಂದ ಕಾರಣಕ್ಕೆ ಅಪ್ಪನೇ ಆಕೆಗೆ ಹೊಡೆದಿದ್ದರಿಂದ ಆಸ್ಪತ್ರೆಯಲ್ಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಬಾಲಕಿಯ ತಾಯಿ ಜೂನ್ 22 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿ ತಂದೆಯನ್ನು ಬಂಧಿಸಲಾಗಿದೆ.

    ಶಾಲಾ ಕಾಲೇಜುಗಳ ಅಂಕಗಳ ಹಿಂದೆ ಬೀಳುವ ಹೆತ್ತವರಿಗೆ ಈ ಘಟನೆ ಪಾಠವಾಗಬೇಕು. ಬಾಯಿಪಾಠ ಮಾಡಿ ಅಂಕ ಗಳಿಸುವುದರಲ್ಲೇ ತಮ್ಮ ವಿಧ್ಯಾರ್ಥಿ ಜೀವನ ಕಳೆಯುವ ಮಕ್ಕಳು ಮುಂದೆ ತಮ್ಮ ಪ್ರತಿಭೆಗನುಸಾರವಾಗಿ ಸಾಧನೆ ಮಾಡಿ ಆ ಮೂಲಕ ರಾಷ್ಟ್ರದ ಅಭಿವೃದ್ಧಿಗೂ ಕೊಡುಗೆ ನೀಡಲು ಸಾಧ್ಯವಾದೀತು.

  • ಟರ್ಕಿಶ್ ಅದಾನ ಚಿಕನ್ ಕಬಾಬ್ ಬಿರಿಯಾಣಿ: 
ಮಾಡುವ ವಿಧಾನ ಹೇಗೆ?

    ಟರ್ಕಿಶ್ ಅದಾನ ಚಿಕನ್ ಕಬಾಬ್ ಬಿರಿಯಾಣಿ: ಮಾಡುವ ವಿಧಾನ ಹೇಗೆ?

    ಕಬಾಬ್ ತಯಾರಿಸಲು ಬೇಕಾಗುವ ವಸ್ತುಗಳು:

    ಕೋಳಿಮಾಂಸ ಕೀಮ- 750 ಗ್ರಾಮ್, ಈರುಳ್ಳಿ- 1, ಕೆಂಪು ಕ್ಯಾಪ್ಸಿಕಮ್- 1, ಕೊತ್ತಂಬರಿ ಸೊಪ್ಪು- ಕತ್ತರಿಸಿದ್ದು – 1 ಕಪ್, ಚಿಲ್ಲಿ ಫ್ಲೇಕ್ಸ್- 1 ಟೀ.ಸ್ಪೂ., ಪ್ಯಾಪ್‌ರಿಕ ಪೌಡರ್- 1 ಟೀ.ಸ್ಪೂ., ಹಸಿಮೆಣಸಿನ ಕಾಯಿ ಪೇಸ್ಟ್- 1, ಬೆಳ್ಳುಳ್ಳಿ ಪೇಸ್ಟ್- 1 ಟೀ.ಸ್ಪೂ., ಎಣ್ಣೆ- 2-3 ಟೀ.ಸ್ಪೂ., ಉಪ್ಪು- ರುಚಿಗೆ.

    ಮಸಾಲ ತಯಾರಿಸಲಿಕ್ಕಿರುವ ವಸ್ತುಗಳು:
    ಮೊಸರು- 1 ಕಪ್, ಈರುಳ್ಳಿ (ಡೀಪ್ ಫ್ರೈ ಮಾಡಿದ್ದು) ಒಂದು ಕಪ್, ಎಣ್ಣೆ- 1/2 ಕಪ್, ಏಲಕ್ಕಿ- 2, ಕೆತ್ತೆ- 1 ಇಂಚು, ಗರಮ್ ಮಸಾಲೆ ಹೂ- 2, ಕರಿಮೆಣಸು- 1/4 ಟೀ.ಸ್ಪೂ., ಬೇಲೀಫ್- 2, ಶುಂಠಿ ಬೆಳ್ಳುಳ್ಳಿ ಪೇಸ್ಟ್- 1 ಟೀ.ಸ್ಪೂ., ಮೆಣಸಿನ ಹುಡಿ- 1/2 ಟೀ.ಸ್ಪೂ., ಹಳದಿ ಹುಡಿ- 1/2 ಟೀ.ಸ್ಪೂ., ಗರಮ್ ಮಸಾಲೆ ಹುಡಿ- 1 ಟೀ.ಸ್ಪೂ., ಕೊತ್ತಂಬರಿ ಹುಡಿ- 2 ಟೀ.ಸ್ಪೂ., ಜೀರಿಗೆ ಹುಡಿ (ಹುರಿದದ್ದು)- 1/2 ಟೀ.ಸ್ಪೂ., ಉಪ್ಪು- ರುಚಿಗೆ, ಕೊತ್ತಂಬರಿ ಸೊಪ್ಪು ಕತ್ತರಿಸಿದ್ದು- 1 ಕಪ್, ಪುದಿನ ಎಲೆ ಕತ್ತರಿಸಿದ್ದು- 1/2 ಕಪ್, ಹಸಿಮೆಣಸಿನ ಕಾಯಿ- 3, ಕಬಾಬ್- ತಯಾರಿಸಿ ಇಟ್ಟದ್ದು, ಲಿಂಬೆರಸ- 2 ಟೀ.ಸ್ಪೂ.

    ನೈಅಕ್ಕಿ ತಯಾರಿಸಲು ಬೇಕಾಗುವ ವಸ್ತುಗಳು:
    ನೀರು- 41/2 ಕಪ್, ಚೀಲೀಫ್ (ಬಿರಿಯಾಣಿ ಎಲೆ)- 1, ಕೆತ್ತೆ- 1 ಇಂಚು, ಲವಂಗ- 4, ಏಲಕ್ಕಿ- 2, ಲಿಂಬೆರಸ- 1/2 ಟೀ.ಸ್ಪೂ., ಎಣ್ಣೆ- ಒಂದು ಟೀ.ಸ್ಪೂ., ನೈಅಕ್ಕಿ- 3 ಕಪ್ (600 ಗ್ರಾಮ್), ಗೋಡಂಬಿ- ಒಂದು ಹಿಡಿ, ಒಣದ್ರಾಕ್ಷಿ- 3/4 ಹಿಡಿ, ಉಪ್ಪು- ರುಚಿಗೆ.

    ದಮ್ ಮಾಡಲಿಕ್ಕಿರುವ ವಸ್ತುಗಳು:
    ಪುದಿನ ಎಲೆ- 3/4 ಕಪ್, ತುಪ್ಪ- 2 ಟೀ.ಸ್ಪೂ.

    ಕಬಾಬ್ ತಯಾರಿಸುವ ವಿಧಾನ:
    ಈರುಳ್ಳಿ ಮತ್ತು ಕ್ಯಾಪ್ಸಿಕಮ್ ಸೇರಿಸಿ ಅರೆದಿಡಿ. ಸೋಸು ಪಾತ್ರೆಗೆ ಹಾಕಿ ನೀರನ್ನು ಬಸಿಯಿರಿ. ಇದನ್ನು ಒಂದು ಮಿಕ್ಸಿಂಗ್ ಬೌಲ್‌ಗೆ ಹಾಕಿ ಕೀಮ ಮಾಡಿದ ಚಿಕನ್. ಉಪ್ಪು, ಚಿಲ್ಲಿಫ್ಲೆಕ್ಸ್, ಪ್ಯಾಪ್‌ರಿಕ ಪೌಡರ್, ಹಸಿಮೆಣಸಿನ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 30 ನಿಮಿಷ ಫ್ರಿಜ್‌ನಲ್ಲಿ ಇಡಿ.
    ಇದರಿಂದ ಒಂದು ಉಂಡೆ ತೆಗೆದು ಕೈಯನ್ನು ಒದ್ದೆ ಮಾಡಿ ಕಬಾಬ್ ಸ್ಟಿಕ್‌ನಲ್ಲಿ ಪ್ರೆಸ್ ಮಾಡಿ ಹಿಡಿಯುವಂತೆ ಶೇಪ್ ಮಾಡಿರಿ. ಹೀಗೆ ಮಾಡಿದ ಕಬಾಬ್‌ಗಳನ್ನು ಒಂದು ತೆರೆದ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಎಲ್ಲ ಕಡೆ ತಿರುಗಿಸುತ್ತಾ ಬೇಯಿಸಿ ಕಬಾಬ್ ತಯಾರಾಯಿತು.

    ರೈಸ್ ತಯಾರಿಸುವ ವಿಧಾನ:
    ನೈಅಕ್ಕಿಯನ್ನು ಚೆನ್ನಾಗಿ ತೊಳೆದು ನೀರು ಬಸಿದು 30 ನಿಮಿಷ ಇಡಿ. ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಬೇಲೀಫ್, ಕೆತ್ತೆ, ಲವಂಗ ಏಲಕ್ಕಿ ಸೇರಿಸಿ ಕೈಯಾಡಿಸಿ ಬಳಿಕ ಇದಕ್ಕೆ ಅಕ್ಕಿ ಸೇರಿಸಿ 3-4 ನಿಮಿಷ ಹುರಿಯಿರಿ. ಇದಕ್ಕೆ ಚೆನ್ನಾಗಿ ಕುದಿಸಿದ ನೀರು ಸೇರಿಸಿ. ಕುದಿಯುತ್ತಾ ಬರುವಾಗ ಉಪ್ಪು ಲಿಂಬೆ ರಸ ಸೇರಿಸಿ ಮುಚ್ಚಳ ಮುಚ್ಚಿ 5-6 ನಿಮಿಷ ಬೇಯಿಸಿ.

    ಬಿರಿಯಾನಿ ತಯಾರಿಸುವ ವಿಧಾನ:
    ಗ್ರೈಂಡರ್ ನಲ್ಲಿ ಹುರಿದ ಈರುಳ್ಳಿ ಮೊಸರು ಸೇರಿಸಿ ಅರೆದು ತೆಗೆದಿಡಿ. ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಏಲಕ್ಕಿ, ಕೆತ್ತೆ, ಗರಮ್ ಮಸಾಲೆ ಹೂ, ಕರಿಮೆಣಸು, ಬೇ ಲೀಫ್ ಸೇರಿಸಿ ಹುರಿಯಿರಿ. ಅರೆದಿಟ್ಟ ಮಿಶ್ರಣ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಎರಡು ನಿಮಿಷ ಹುರಿಯಿರಿ. ಮೆಣಸಿನ ಹುಡಿ, ಹಳದಿ ಹುಡಿ, ಗರಮ್ ಮಸಾಲೆ ಹುಡಿ, ಕೊತ್ತಂಬರಿ ಹುಡಿ, ಜೀರಿಗೆ ಹುಡಿ, ಉಪ್ಪು ಸೇರಿಸಿ ಪುನಃ ಅಡಿಮೇಲು ಮಾಡಿ. ಕೊತ್ತಂಬರಿ ಸೊಪ್ಪು ಅರ್ಧಕ್ಕೆ ಕತ್ತರಿಸಿದ ಕಾಯಿಮೆಣಸಿ ಸೇರಿಸಿ ಬಾಡಿಸಿ.

    ಇದಕ್ಕೆ ತಯಾರಿಸಿಟ್ಟ ಕಬಾಬನ್ನು ಕಡ್ಡಿಯಿಂದ ಬೇರ್ಪಡಿಸಿ ಸೇರಿಸಿ ಅಡಿಮೇಲು ಮಾಡಿ. ಸಣ್ಣ ಉರಿಯಲ್ಲಿ ಎರಡು ನಿಮಿಷ ಪಾತ್ರೆ ಮುಚ್ಚಿ ಬೇಯಿಸಿ. ಅದರಲ್ಲಿರುವ ಕಬಾಬನ್ನು ಹೊರ ತೆಗೆದು ಆ ಉಳಿದ ಮಸಾಲೆಯ ಮೇಲೆ ಅನ್ನ ಹಾಕಿ ಅದರ ಮೇಲೆ ಕಬಾಬ್ ತುಂಡುಗಳನ್ನು ಇಟ್ಟು ಕೊತ್ತಂಬರಿ ಸೊಪ್ಪು, ಹುರಿದ ಈರುಳ್ಳಿ, ಗೋಡಂಬಿ, ಒಣದ್ರಾಕ್ಷಿ ಸೇರಿಸಿ 8-10 ನಿಮಿಷ ದಮ್‌ನಲ್ಲಿಡಿ. ರುಚಿಕರವಾದ ಟರ್ಕಿಶ್ ಅದಾನ ಕಬಾಬ್ ಬಿರಿಯಾನಿ ತಯಾರಾಗಿದೆ.

  • ಪ್ರವಾಹದಿಂದ ರಸ್ತೆಗೆ ಹರಿದು ಬಂತು 12 ಕೋಟಿಯ ಬಂಗಾರ: 
ಚಿನ್ನ ಹೆಕ್ಕುವರನ್ನು ನೋಡೋದೇ ಚೆನ್ನ..!

    ಪ್ರವಾಹದಿಂದ ರಸ್ತೆಗೆ ಹರಿದು ಬಂತು 12 ಕೋಟಿಯ ಬಂಗಾರ: ಚಿನ್ನ ಹೆಕ್ಕುವರನ್ನು ನೋಡೋದೇ ಚೆನ್ನ..!

    ಒಂದು ಆಭರಣ ಅಂಗಡಿಯಿಂದ 20 ಕಿಲೋಗ್ರಾಂ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ! ಅಂದ್ರೆ ನೀವೇನು ಮಾಡುತ್ತೀರಿ. ಹೌದು, ನೀವು ಯೋಚಿಸಿದಂತೆಯೇ ಇಲ್ಲಿಯೂ ಆಗಿದೆ. ಜನರು ಆಭರಣಗಳನ್ನು ಹುಡುಕಲು ಧಾವಿಸಿದ್ದಾರೆ , ನಾವು ಈ ಚಿನ್ನದ ಹಿಂದಿನ ಕಥೆಯನ್ನು ಅಗೆದು, ಬಗೆಯೋಣ ಬನ್ನಿ.

    ಇದು ಚೀನಾದಿಂದ ಬಂದ ವರದಿ, ಜುಲೈ 25, ರಂದು, ಶಾಂಕ್ಸಿ ಪ್ರಾಂತ್ಯದ ವುಕಿ ಕೌಂಟಿಯಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಹಠಾತ್ ಪ್ರವಾಹವು ಲಾವೊಫೆಂಗ್‌ಕ್ಸಿಯಾಂಗ್ ಎಂಬ ಆಭರಣ ಅಂಗಡಿಯನ್ನು ಕಬಳಿಸಿತು. ಕೇವಲ ಕೆಲವೇ ನಿಮಿಷಗಳಲ್ಲಿ, ಒಂದು ಮೀಟರ್‌ಗಿಂತಲೂ ಎತ್ತರದ ನೀರು ಅಂಗಡಿಯೊಳಗೆ ನುಗ್ಗಿ, ಚಿನ್ನದ ಹಾರಗಳು, ಬಳೆಗಳು, ಉಂಗುರಗಳು, ಕಿವಿಯೋಲೆಗಳು, ವಜ್ರದ ಆಭರಣಗಳು ಮತ್ತು ಬೆಳ್ಳಿಯ ವಸ್ತುಗಳಿಂದ ಕೂಡಿದ ಕ್ಯಾಬಿನೆಟ್‌ ಕೊಚ್ಚಿಕೊಂಡು ಹೋಯಿತು. ಇದರ ಜೊತೆಗೆ, ದೊಡ್ಡ ಪ್ರಮಾಣದ ನಗದು ಮತ್ತು ಮರುಬಳಕೆಯ ಚಿನ್ನ ಇದ್ದ ತಿಜೋರಿಯೂ ಕಾಣೆಯಾಗಿದೆ. ಒಟ್ಟು ನಷ್ಟ? 12 ಕೋಟಿ ರೂಪಾಯಿಗಿಂತಲೂ ಹೆಚ್ಚು.

    ದೃಶ್ಯ: ಸ್ಥಳೀಯರು ಕೈಯಿಂದ ಮಣ್ಣು ಅಗೆಯುವುದು, ಲೋಹ ಶೋಧಕಗಳನ್ನು ಬಳಸುವ ದೃಶ್ಯಗಳು

    ಈ ಸುದ್ದಿ ಹರಡಿದ ಕೂಡಲೇ, ಸ್ಥಳೀಯರಲ್ಲಿ ಒಂದು ರೀತಿಯ “ಗೋಲ್ಡ್ ರಶ್” ಶುರುವಾಯಿತು! ಜನರು ಕಾಣೆಯಾದ ಆಭರಣಗಳನ್ನು ಹುಡುಕಲು ಧಾವಿಸಿದರು. ಕೆಲವರು ಕೈಯಿಂದ ಮಣ್ಣು ಅಗೆದರೆ, ಲೋಹ ಶೋಧಕಗಳನ್ನು ತಂದು ಚಿನ್ನ ಹುಡುಕಿದವರೂ ಇದ್ದಾರೆ.. ಈ ದೃಶ್ಯಗಳು ವೈರಲ್ ಆಗಿವೆ, ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಅಂಗಡಿಯವನಿಗೆ ಸಿಕ್ಕಿದ್ದು ಕೇವಲ 1 ಕಿಲೋಗ್ರಾಂ ಆಭರಣಗಳು ಮಾತ್ರ ಆದರೆ, ತಿಜೋರಿ ಇನ್ನೂ ಒಂದು ರಹಸ್ಯವಾಗಿಯೇ ಉಳಿದಿದೆ!

    ದೃಶ್ಯ: ಅಂಗಡಿ ಮಾಲೀಕ ಕ್ಸಿಯಾವೋಯ್ ಮಾತನಾಡುವ ಕ್ಲಿಪ್, ಜನರಿಗೆ ಮನವಿ ಮಾಡುವ ದೃಶ್ಯ

    ಅಂಗಡಿಯ ಮಾಲೀಕ ಕ್ಸಿಯಾವೋಯ್ ಆಭರಣಗಳನ್ನು ಹಿಂತಿರುಗಿಸಿದವರಿಗೆ ಬಹುಮಾನ ಘೋಷಿಸಿದ್ದಾರೆ, ಆದರೆ ಕೆಲವರು ಉದ್ದೇಶಪೂರ್ವಕವಾಗಿ ವಸ್ತುಗಳನ್ನು ಇಟ್ಟುಕೊಂಡರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ, ಇಲ್ಲಿ ಒಂದು ದೊಡ್ಡ ತೊಡಕು ಇದೆ – ಅಂಗಡಿಯ ಸಿಸಿಟಿವಿ ಕಾರ್ಯನಿರ್ವಹಿಸುತ್ತಿರಲಿಲ್ಲ, ಮತ್ತು ಪ್ರವಾಹದ ಸಮಯದಲ್ಲಿ ವಿದ್ಯುತ್ ಕಡಿತಗೊಂಡಿತ್ತು. ಇದರಿಂದ ತನಿಖೆಗೆ ದೊಡ್ಡ ಸವಾಲು ಎದುರಾಗಿದೆ.

    ಪ್ರವಾಹದ ಪ್ರಭಾವ ಒಂದು ಅಂಗಡಿಯ ನಷ್ಟಕ್ಕೆ ಸೀಮಿತವಾಗಿಲ್ಲ. ಶಾಂಕ್ಸಿ ಮತ್ತು ಹೆಬೈ ಪ್ರಾಂತ್ಯಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿವೆ, ಇದರಿಂದ ಆಸ್ತಿಪಾಸ್ತಿಗೆ ಭಾರೀ ಹಾನಿಯಾಗಿದೆ. ಈ ಆಭರಣ ಅಂಗಡಿಯ ಕಥೆ, ತೀವ್ರ ಹವಾಮಾನದಿಂದ ಸ್ಥಳೀಯ ವ್ಯವಹಾರಗಳ ಮೇಲೆ ಆಗಿರುವ ಆರ್ಥಿಕ ಆಘಾತವನ್ನು ಎತ್ತಿ ತೋರಿಸುತ್ತದೆ.

    ಆಭರಣಗಳು ಎಲ್ಲಿಗೆ ಕೊಚ್ಚಿಹೋದವು?

    ತಿಜೋರಿಯ ರಹಸ್ಯ ಯಾವಾಗ ಬಿಚ್ಚಿಕೊಳ್ಳಲಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕಾಯುತ್ತಾ, ಸ್ಥಳೀಯರು ಮತ್ತು ಅಧಿಕಾರಿಗಳು ತಮ್ಮ ಹುಡುಕಾಟವನ್ನು ಮುಂದುವರೆಸಿದ್ದಾರೆ.

  • ಧರ್ಮಸ್ಥಳ: 6ನೇ ಜಾಗದಲ್ಲಿ ಮೃತದೇಹದ ಕುರುಹು ಪತ್ತೆ

    ಧರ್ಮಸ್ಥಳ: 6ನೇ ಜಾಗದಲ್ಲಿ ಮೃತದೇಹದ ಕುರುಹು ಪತ್ತೆ

    ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳ ಸಂಬಂಧ ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣದ ಸಾಕ್ಷಿ ದೂರುದಾರ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ತೋರಿಸಿದ ಆರನೇ ಜಾಗದಲ್ಲಿ ಗುರುವಾರ ಮೃತದೇಹದ ಕುರುಹು ಪತ್ತೆಯಾಗಿದೆ.

    ‘ಮೃತದೇಹದ ಕುರುಹು ಸಿಕ್ಕಿದೆ.‌ಅದು ಗಂಡಸಿನ ಮೃತದೇಹದ ಅವಶೇಷದಂತಿದೆ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.

    ವಿಧಿವಿಜ್ಞಾನ ತಜ್ಞರ ತಂಡವು ಸ್ಥಳದಲ್ಲೇ ಇದ್ದು, ಮೃತದೇಹದ ಅವಶೇಷಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದೆ.