Tag: #womens problem

  • ನಿಮಗೆ ಗೊತ್ತೇ? ಮಹಿಳೆಯರ ರಕ್ಷಣೆಗಾಗಿ ತಯಾರಾಗಿದೆ ‘ಅಕ್ಕಾ ಪಡೆ’..!

    ನಿಮಗೆ ಗೊತ್ತೇ? ಮಹಿಳೆಯರ ರಕ್ಷಣೆಗಾಗಿ ತಯಾರಾಗಿದೆ ‘ಅಕ್ಕಾ ಪಡೆ’..!

    ಕರ್ನಾಟಕ ಸರ್ಕಾರವು ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಜಾರಿಗೆ ತಂದಿರುವ ಅತ್ಯಂತ ಮಹತ್ವದ ಯೋಜನೆಯೇ ಈ ‘ಅಕ್ಕ ಪಡೆ’ (Akka Pade). ಇದನ್ನು ಇತ್ತೀಚೆಗೆ (ಜನವರಿ 2026ರ ಹೊತ್ತಿಗೆ) ರಾಜ್ಯದಾದ್ಯಂತ ವಿಸ್ತರಿಸಲಾಗುತ್ತಿದೆ.

    ಇದರ ಸಂಪೂರ್ಣ ವಿವರಗಳು ಇಲ್ಲಿವೆ:

    1. ಅಕ್ಕ ಪಡೆ ಎಂದರೇನು?
    ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ರೂಪಿಸಲಾದ ಒಂದು ವಿಶೇಷ ಗಸ್ತು ಪಡೆ (Patrol Force). ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣವೇ ಸ್ಪಂದಿಸುವುದು ಈ ಪಡೆಯ ಮುಖ್ಯ ಕೆಲಸ.

    2. ಇದು ಹೇಗೆ ಕೆಲಸ ಮಾಡುತ್ತದೆ?
    ಗಸ್ತು ವಾಹನಗಳು: ಪೊಲೀಸ್ ಇಲಾಖೆಯ ‘ಹೊಯ್ಸಳ’ ವಾಹನಗಳಂತೆಯೇ ಅಕ್ಕ ಪಡೆಗೆ ಪ್ರತ್ಯೇಕ ವಾಹನಗಳನ್ನು ನೀಡಲಾಗಿರುತ್ತದೆ.

    ಕಾರ್ಯಾಚರಣೆ ಸಮಯ:

    ಸಾಮಾನ್ಯವಾಗಿ ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಅಥವಾ ಅಗತ್ಯವಿದ್ದಲ್ಲಿ ಶಿಫ್ಟ್ ಮಾದರಿಯಲ್ಲಿ ಇದು ಕೆಲಸ ಮಾಡುತ್ತದೆ.ತಂಡದ ರಚನೆ: ಪ್ರತಿ ತಂಡದಲ್ಲಿ ಮಹಿಳಾ ಪೊಲೀಸ್ ಪೇದೆಗಳು ಮತ್ತು ಎನ್‌ಸಿಸಿ (NCC) ‘ಸಿ’ ಸರ್ಟಿಫಿಕೇಟ್ ಹೊಂದಿರುವ ಮಹಿಳಾ ಕೆಡೆಟ್‌ಗಳು ಅಥವಾ ಹೋಮ್ ಗಾರ್ಡ್‌ಗಳು ಇರುತ್ತಾರೆ.

    3. ಮುಖ್ಯ ಉದ್ದೇಶಗಳು:

    ಸಾರ್ವಜನಿಕ ಸುರಕ್ಷತೆ: ಶಾಲಾ-ಕಾಲೇಜುಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಮಾಲ್‌ಗಳು ಮತ್ತು ಪಾರ್ಕ್‌ಗಳಂತಹ ಜನನಿಬಿಡ ಪ್ರದೇಶಗಳಲ್ಲಿ ಈ ಪಡೆ ಗಸ್ತು ತಿರುಗುತ್ತದೆ.

    ದುರ್ವರ್ತನೆ ತಡೆ: ಮಹಿಳೆಯರನ್ನು ಅಥವಾ ವಿದ್ಯಾರ್ಥಿನಿಯರನ್ನು ಚುಡಾಯಿಸುವ (Eve-teasing) ಪುಂಡರ ಮೇಲೆ ಕಣ್ಣಿಡುವುದು ಮತ್ತು ಕ್ರಮ ಕೈಗೊಳ್ಳುವುದು.ಜಾಗೃತಿ ಮೂಡಿಸುವುದು: ಬಾಲ್ಯ ವಿವಾಹ, ಮಕ್ಕಳ ಕಳ್ಳಸಾಗಣೆ ಮತ್ತು ಗುಡ್ ಟಚ್-ಬ್ಯಾಡ್ ಟಚ್ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸುತ್ತದೆ.

    ತುರ್ತು ಸಹಾಯ: ಮಹಿಳೆಯರು ಮನೆಯಲ್ಲಾಗಲಿ ಅಥವಾ ಹೊರಗಾಗಲಿ ಸಂಕಷ್ಟಕ್ಕೆ ಸಿಲುಕಿದಾಗ ಈ ಪಡೆಯನ್ನು ಸಂಪರ್ಕಿಸಬಹುದು.

    4. ಯಾರಿಗೆ ಸಹಾಯ?

    ಶಾಲೆಗೆ ಹೋಗುವ ಮಕ್ಕಳು, ಕಾಲೇಜು ವಿದ್ಯಾರ್ಥಿನಿಯರು, ಕೆಲಸಕ್ಕೆ ಹೋಗುವ ಮಹಿಳೆಯರು, ಸಂಕಷ್ಟದಲ್ಲಿರುವ ಯಾವುದೇ ಮಹಿಳೆ.

    5. ಸಂಪರ್ಕಿಸುವುದು ಹೇಗೆ?

    ನೀವು ಅಥವಾ ನಿಮ್ಮ ಸಂಬಂಧಿಕರು ಯಾವುದೇ ತೊಂದರೆಯಲ್ಲಿದ್ದಾಗ ಸಹಾಯವಾಣಿ ಸಂಖ್ಯೆಗಳಾದ 112 (ತುರ್ತು ಸೇವೆ) ಅಥವಾ 181 (ಮಹಿಳಾ ಸಹಾಯವಾಣಿ)ಗೆ ಕರೆ ಮಾಡಬಹುದು. ಈ ಸಂಖ್ಯೆಗಳಿಗೆ ಕರೆ ಮಾಡಿದ ತಕ್ಷಣ ಸಮೀಪದಲ್ಲಿರುವ ‘ಅಕ್ಕ ಪಡೆ’ ವಾಹನವು ಸ್ಥಳಕ್ಕೆ ಬರುತ್ತದೆ.

    ಮಾಹಿತಿ: ಈಗಾಗಲೇ ದಕ್ಷಿಣ ಕನ್ನಡ, ಮಂಡ್ಯ, ಬೆಂಗಳೂರು ಸೇರಿದಂತೆ ರಾಜ್ಯದ 31 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ.

  • ಏನೂ ನೆನಪಿನಲ್ಲಿ ಉಳಿಯುತ್ತಿಲ್ಲವೇ? ಕಾರಣ ಮತ್ತು ಪರಿಹಾರ ಇಲ್ಲಿದೆ..!

    ಏನೂ ನೆನಪಿನಲ್ಲಿ ಉಳಿಯುತ್ತಿಲ್ಲವೇ? ಕಾರಣ ಮತ್ತು ಪರಿಹಾರ ಇಲ್ಲಿದೆ..!

    ಇತ್ತೀಚಿನ ದಿನಗಳಲ್ಲಿ ಅನೇಕರು ಒಂದು ಸಿನಿಮಾ ಪೂರ್ತಿ ನೋಡಲು ಅಥವಾ ಪುಸ್ತಕ ಓದಲು ಸಾಧ್ಯವಾಗುತ್ತಿಲ್ಲ ಎಂದು ದೂರುತ್ತಾರೆ. ಯಾವುದರ ಮೇಲೂ ಗಮನಹರಿಸಲು ಸಾಧ್ಯವಾಗದಿರುವುದು ಮತ್ತು ಸಣ್ಣಪುಟ್ಟ ವಿಷಯಗಳನ್ನು ಸಹ ಮರೆತುಬಿಡುವುದು ಹಲವರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ.

    ಇದಕ್ಕೆ ಪ್ರಮುಖ ಕಾರಣ ‘ಮೆದುಳಿನ ಮಬ್ಬು’ (Brain Fog). ಇದು ನಮ್ಮ ದೈನಂದಿನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಸ್ಥಿತಿಯಾಗಿದ್ದರೂ, ಹೆಚ್ಚಿನವರು ಇದನ್ನು ಗುರುತಿಸುವುದಿಲ್ಲ. ದಟ್ಟವಾದ ಮಬ್ಬಿನಲ್ಲಿ ಹೋದಾಗ ದಾರಿ ಹೇಗೆ ಅಸ್ಪಷ್ಟವಾಗಿರುತ್ತದೋ, ಹಾಗೆಯೇ ಮೆದುಳಿನಲ್ಲಿ ಆಲೋಚನೆಗಳು ಅಸ್ಪಷ್ಟವಾಗುವುದರಿಂದ ಇದನ್ನು ಈ ಹೆಸರಿನಿಂದ ಕರೆಯಲಾಗುತ್ತದೆ.

    ​ಈ ಮೆದುಳಿನ ಮಬ್ಬು (Brain Fog) ಹಲವು ದೈಹಿಕ ಮತ್ತು ಮಾನಸಿಕ ಕಾರಣಗಳನ್ನು ಹೊಂದಿರಬಹುದು. ಅತಿಯಾದ ಮಾನಸಿಕ ಒತ್ತಡವು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ; ದೇಹವು ದೀರ್ಘಕಾಲದವರೆಗೆ ಒತ್ತಡದಲ್ಲಿದ್ದಾಗ ಉತ್ಪತ್ತಿಯಾಗುವ ಹಾರ್ಮೋನುಗಳು ಮೆದುಳಿನ ಕಾರ್ಯಕ್ಷಮತೆಯನ್ನು ನಿಧಾನಗೊಳಿಸುತ್ತವೆ.

    ಇದರೊಂದಿಗೆ ನಿದ್ರೆಯ ಕೊರತೆಯೂ ಮತ್ತೊಂದು ಪ್ರಮುಖ ಕಾರಣವಾಗಿದೆ. ಮೆದುಳಿಗೆ ಸಾಕಷ್ಟು ವಿಶ್ರಾಂತಿ ಸಿಗದಿದ್ದಾಗ, ಅದು ಮಾಹಿತಿಯನ್ನು ಸರಿಯಾಗಿ ವಿಶ್ಲೇಷಿಸಲು ಮತ್ತು ನೆನಪಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಪೌಷ್ಟಿಕಾಂಶದ ಕೊರತೆ, ವಿಶೇಷವಾಗಿ ವಿಟಮಿನ್ ಬಿ12 ಕೊರತೆಯು ಈ ಸಮಸ್ಯೆಗೆ ನೇರ ಕಾರಣವಾಗಬಹುದು. ಇದರ ಜೊತೆಗೆ ಥೈರಾಯ್ಡ್ ಸಮಸ್ಯೆಗಳು, ಹಾರ್ಮೋನ್ ಬದಲಾವಣೆಗಳು ಮತ್ತು ಕೋವಿಡ್‌ನಂತಹ ವೈರಲ್ ಕಾಯಿಲೆಗಳ ನಂತರದ ದೈಹಿಕ ಸ್ಥಿತಿಗಳು ಕೂಡ ಮೆದುಳಿನ ಮಬ್ಬನ್ನು ಉಂಟುಮಾಡಬಹುದು.

    ​ಇದು ಮೂಲತಃ ಒಂದು ಕಾಯಿಲೆಯಲ್ಲ, ಬದಲಾಗಿ ಆಲೋಚನೆಗಳಲ್ಲಿ ಸ್ಪಷ್ಟತೆಯ ಕೊರತೆ, ವಿಷಯಗಳನ್ನು ಬೇಗನೆ ಮರೆತುಬಿಡುವುದು ಮತ್ತು ಏಕಾಗ್ರತೆಯ ನಷ್ಟದಂತಹ ಮೆದುಳಿನ ಆಯಾಸದ ಲಕ್ಷಣವಾಗಿದೆ. ಇಂತಹ ಸ್ಥಿತಿಯನ್ನು ಎದುರಿಸಲು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ. ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಆಳವಾದ ನಿದ್ರೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಮುಖ್ಯವಾದ ವಿಷಯ. ಹಣ್ಣು ಮತ್ತು ತರಕಾರಿಗಳನ್ನು ಒಳಗೊಂಡಿರುವ ಸಮತೋಲಿತ ಆಹಾರದ ಸೇವನೆ ಹಾಗೂ ಸಾಕಷ್ಟು ನೀರು ಕುಡಿಯುವುದು ಮೆದುಳಿನ ತಾಜಾತನವನ್ನು ಹೆಚ್ಚಿಸುತ್ತದೆ. ಮಾನಸಿಕ ಒತ್ತಡ ಕಡಿಮೆ ಮಾಡಲು ಯೋಗ ಅಥವಾ ಧ್ಯಾನ ಮಾಡುವುದು ಪ್ರಯೋಜನಕಾರಿ. ಹಾಗೆಯೇ ಒಂದೇ ಬಾರಿಗೆ ಅನೇಕ ಕೆಲಸಗಳನ್ನು ಮಾಡಲು ಪ್ರಯತ್ನಿಸದೆ (Multitasking), ಪ್ರತಿಯೊಂದು ವಿಷಯದ ಮೇಲೆ ಪ್ರತ್ಯೇಕವಾಗಿ ಗಮನಹರಿಸುವುದರಿಂದ ಏಕಾಗ್ರತೆಯನ್ನು ಮರಳಿ ಪಡೆಯಬಹುದು.

    ​ಸಂಕ್ಷಿಪ್ತವಾಗಿ ಹೇಳುವುದಾದರೆ, ಮೆದುಳಿನ ಮಬ್ಬು (Brain Fog) ನಮ್ಮ ದೇಹವು ನೀಡುವ ಎಚ್ಚರಿಕೆಯ ಸಂಕೇತವಾಗಿದೆ. ಕಾರ್ಯನಿರತ ಜೀವನದಲ್ಲಿ ಮೆದುಳಿಗೆ ಅಗತ್ಯವಿರುವ ವಿಶ್ರಾಂತಿ ಮತ್ತು ಪೋಷಣೆ ಸಿಗುತ್ತಿಲ್ಲ ಎಂಬುದರ ಸೂಚನೆ ಇದು. ಸರಿಯಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಈ ಸ್ಥಿತಿಯನ್ನು ಸುಲಭವಾಗಿ ನಿವಾರಿಸಬಹುದು. ಆದಾಗ್ಯೂ, ಈ ಸ್ಥಿತಿಯು ದೀರ್ಘಕಾಲದವರೆಗೆ ಮುಂದುವರಿದರೆ, ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ವೈದ್ಯರ ಸಲಹೆ ಪಡೆಯುವುದು ಸೂಕ್ತ.

  • ನವವಧುಗಳ ಆತ್ಮಹತ್ಯೆ ಹೆಚ್ಚಳ: 
ಮದುವೆ ಮುನ್ನ ಕಡ್ಡಾಯ ಕೌನ್ಸಿಲಿಂಗ್‌ಗೆ ಸಂಸದ ಹ್ಯಾರಿಸ್ ಬೀರನ್ ಆಗ್ರಹ

    ನವವಧುಗಳ ಆತ್ಮಹತ್ಯೆ ಹೆಚ್ಚಳ: ಮದುವೆ ಮುನ್ನ ಕಡ್ಡಾಯ ಕೌನ್ಸಿಲಿಂಗ್‌ಗೆ ಸಂಸದ ಹ್ಯಾರಿಸ್ ಬೀರನ್ ಆಗ್ರಹ

    ​ದೇಶದಲ್ಲಿ ವಿವಾಹಿತ ಮಹಿಳೆಯರ ಆತ್ಮಹತ್ಯೆ ಪ್ರಮಾಣವು ಆತಂಕಕಾರಿಯಾಗಿ ಏರುತ್ತಿದ್ದು, ವಾರ್ಷಿಕವಾಗಿ 1.6 ಲಕ್ಷಕ್ಕೂ ಹೆಚ್ಚು ಮಹಿಳೆಯರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂಬ ಕಠೋರ ಸತ್ಯವನ್ನು ಸಂಸದ ಹ್ಯಾರಿಸ್ ಬೀರನ್ ರಾಜ್ಯಸಭೆಯಲ್ಲಿ ಬಿಚ್ಚಿಟ್ಟಿದ್ದಾರೆ. ಮದುವೆಯ ನಂತರದ ಕೌಟುಂಬಿಕ ಕಿರುಕುಳ ಮತ್ತು ಮಾನಸಿಕ ಸಂಘರ್ಷಗಳಿಂದಾಗಿ ಪ್ರತಿ ವರ್ಷ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಹಿಳೆಯರು ಪ್ರಾಣ ಕಳೆದುಕೊಳ್ಳುತ್ತಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ನವವಧುಗಳ ಸುರಕ್ಷತೆಯನ್ನು ಖಚಿತಪಡಿಸಲು ವಿವಾಹದ ಕಾನೂನು ಪ್ರಕ್ರಿಯೆಯಲ್ಲಿ ಸಮೂಲ ಬದಲಾವಣೆ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

    ​ಮದುವೆ ನೋಂದಣಿ ಸಮಯದಲ್ಲಿ ಅಥವಾ ಮ್ಯಾರೇಜ್ ಸರ್ಟಿಫಿಕೇಟ್ ಪಡೆಯುವ ಮೊದಲು ದಂಪತಿಗಳಿಗೆ ‘ವಿವಾಹಪೂರ್ವ ಕೌನ್ಸಿಲಿಂಗ್’ ಅನ್ನು ಕಡ್ಡಾಯಗೊಳಿಸಬೇಕು ಎಂಬುದು ಸಂಸದರ ಪ್ರಮುಖ ಬೇಡಿಕೆಯಾಗಿದೆ. ಕೌಟುಂಬಿಕ ಒತ್ತಡ ಮತ್ತು ಹೊಂದಾಣಿಕೆಯ ಸಮಸ್ಯೆಗಳನ್ನು ನಿಭಾಯಿಸಲು ಈ ಕೌನ್ಸಿಲಿಂಗ್ ದಂಪತಿಗಳಿಗೆ ಮಾನಸಿಕ ಬಲ ನೀಡುತ್ತದೆ. ಕೇವಲ ಅಪರಾಧ ನಡೆದ ನಂತರ ಕಾನೂನು ಕ್ರಮ ಕೈಗೊಳ್ಳುವ ಬದಲು, ಮುನ್ನೆಚ್ಚರಿಕೆಯಾಗಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಶಾಸನಬದ್ಧಗೊಳಿಸುವುದರಿಂದ ಲಕ್ಷಾಂತರ ಮಹಿಳೆಯರ ಜೀವ ಉಳಿಸಬಹುದು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ನವವಧುಗಳ ಜೀವ ಉಳಿಸಲು ಮತ್ತು ಸುಭದ್ರ ಕುಟುಂಬ ವ್ಯವಸ್ಥೆಯನ್ನು ನಿರ್ಮಿಸಲು ಇಂತಹ ಕಾನೂನು ಸುಧಾರಣೆಗಳು ಕಾಲದ ಅಗತ್ಯವಾಗಿದೆ.

  • ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಸ್ಲಿಮ್ ವೈದ್ಯೆಯ ನಕಾಬ್ ಎಳೆದಿರುವ ಘಟನೆ ಅತ್ಯಂತ ಖಂಡನೀಯ: 
ಫಾರ್ವರ್ಡ್ ಟ್ರಸ್ಟ್

    ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಸ್ಲಿಮ್ ವೈದ್ಯೆಯ ನಕಾಬ್ ಎಳೆದಿರುವ ಘಟನೆ ಅತ್ಯಂತ ಖಂಡನೀಯ: ಫಾರ್ವರ್ಡ್ ಟ್ರಸ್ಟ್

    ಬೆಂಗಳೂರು: ಪಟ್ನಾದಲ್ಲಿ ಡಿಸೆಂಬರ್ 15, 2025ರಂದು ನಡೆದ ಆಯುಷ್ ವೈದ್ಯರ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಸ್ಲಿಮ್ ಮಹಿಳಾ ವೈದ್ಯರೊಬ್ಬರ ನಿಖಾಬ್ ಅನ್ನು ಎಳೆದ ಘಟನೆಯು ಅತ್ಯಂತ ಖಂಡನೀಯವಾಗಿದೆ.

    ಭಾರತದಂತಹ ಜಾತ್ಯತೀತ ರಾಷ್ಟ್ರದಲ್ಲಿ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ಧಾರ್ಮಿಕ ಸ್ವಾತಂತ್ರ್ಯ, ವೈಯಕ್ತಿಕ ಘನತೆ ಮತ್ತು ಗೌರವವನ್ನು ಖಾತರಿಪಡಿಸಿದೆ. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಮಹಿಳೆಯ ಧಾರ್ಮಿಕ ಆಚರಣೆ ಅಥವಾ ವೈಯಕ್ತಿಕ ಆಯ್ಕೆಯನ್ನು ಸಾರ್ವಜನಿಕವಾಗಿ ಉಲ್ಲಂಘಿಸುವುದು ಸಂವಿಧಾನದ ಮೌಲ್ಯಗಳಿಗೆ ಮಾಡಿದ ಅವಮಾನವಾಗಿದೆ. ಮಾತ್ರವಲ್ಲ ಈ ಕೃತ್ಯವು ಮಹಿಳೆಯರ ಘನತೆ, ಸುರಕ್ಷತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಡೆದ ದಾಳಿಯಾಗಿದೆ.

    ಈ ದೇಶದ ಸಂವಿಧಾನವು ಎಲ್ಲ ನಾಗರಿಕರಿಗೂ ಗೌರವಯುತ, ಘನತೆಯುತ ಮತ್ತು ಸಮಾನ ಜೀವನವನ್ನು ಭರವಸೆ ನೀಡುತ್ತದೆ. ಒಂದು ಕಡೆ ದೇಶವನ್ನು ತಾಯಿಯೆಂದು ಪೂಜಿಸುತ್ತೇವೆ ಮತ್ತೊಂದು ಕಡೆ ಈ ದೇಶದ ಮಹಿಳೆಯರ ಮೇಲೆ ಈ ರೀತಿಯ ದಾಳಿಗಳು ನಿರಂತರವಾಗಿ ನಡೆಯುತ್ತಿರುವುದು ದುರಾದೃಷ್ಟಕರ.

    ಈ ಕೃತ್ಯವನ್ನು ಫಾರ್ವರ್ಡ್ ಟ್ರಸ್ಟ್ ತೀವ್ರವಾಗಿ ಖಂಡಿಸುತ್ತದೆ ಮತ್ತು ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತದೆ ಹಾಗೂ ಎಲ್ಲ ಮಹಿಳೆಯರ ಧಾರ್ಮಿಕ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಆಯ್ಕೆಯನ್ನು ರಕ್ಷಿಸಲು ಸೂಕ್ತ ಕಾನೂನುಗಳು ಮತ್ತು ನೀತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸುತ್ತದೆ.

    ಫಾರ್ವರ್ಡ್ ಟ್ರಸ್ಟ್

  • ಬಂಧನ: ಕಥೆ

    ಬಂಧನ: ಕಥೆ

    ಇವತ್ತು ಗುರುವಾರ. ನನಗೆ ಅಲ್ಲಿಗೆ ಹೋಗಬೇಕಮ್ಮಾ… ಮಗಳು ಶಾಲೆಯಿಂದ ಬೇಗ ಬಂದರೆ… ಎಂದಿನಂತೇ ಏನಾದರೂ ಕಾರಣ ಹೇಳಿ ಬಿಡು ಅಮ್ಮಾ. ಅವಳಿಗಿಷ್ಟದ ತಿಂಡಿ ಮಾಡಿದ್ದೇನೆ…

    ಸಾಯಿರಾ ಸಿಂಗರಿಸಿಕೊAಡು ಬುರ್ಖಾ ಧರಿಸಿ ಹೊರಟಾಗ ತಾಯಿ ಫಾತೀಮಾ ಟಿಫಿನ್ ಬಾಕ್ಸ್ನ್ನು ಮಗಳ ಕೈಗೆ ಕೊಡುತ್ತಾ ಇದರಲ್ಲಿ ಶೇವಿಗೆ ಪಾಯಸ ಇದೆ, ಆತನಿಗೆ ತುಂಬಾ ಇಷ್ಟ ತಾನೆ… ಕೊಡು.. ಎಂದರು ನಗುತ್ತಾ, ಅಂಗಳದಲ್ಲಿಟ್ಟ ಸ್ಕೂಟರ್ ಹತ್ತಿ ಆಕೆ ಕೈಯಾಡಿಸಿದಳು.

    ಶಾಂತ ಲಾಡ್ಜ್’ನೊಳಗೆ ಸಾಯಿರಾ ಬಂದಾಗ ವಾಚ್‌ಮ್ಯಾನ್ ಪರಿಚಯದ ನಗೆ ಬೀರಿ ಸಲಾಮ್ ಹೇಳಿದ. ಸಾರ್… ಬಂದಿದ್ದರಾ? ಸಾಯಿರಾ ಕೇಳಿದಾಗ, ವಾಚ್‌ಮ್ಯಾನ್ ನಸುನಗುತ್ತಾ ಹೌದು ಮ್ಯಾಡಮ್… ಅವರು ಬಂದು ಆದಾಗಲೇ ಅರ್ಧ ಗಂಟೆ ಆಗಿರಬಹುದು. ಸಾಯಿರಾ ಅವಸರದಲ್ಲಿ ಲಿಫ್ಟ್ನೊಳಗೆ ನುಸುಳಿಕೊಂಡು ಉಸಿರು ಬಿಟ್ಟಳು. ರೂಮ್ ನಂಬರ್ ನೂರಹನ್ನೊಂದರ ಮುಂದೆ ನಿಂತ ಸಾಯಿರಾ ಮೆಲ್ಲನೆ ಬಾಗಿಲು ತಟ್ಟಿದಳು. ಮೆಲ್ಲನೆ ಬಾಗಿಲು ತೆರೆಯಿತು. ಸಾಯಿರಾ ನಸು ನಗುತ್ತಾ ತನ್ನೆದುರು ನಿಂತವನನ್ನು ನೋಡಿದಳು. ಸಲಾಮ್ ಹೇಳಿದ ಆತ ಅವಳನ್ನು ಬರಸೆಳೆದುಕೊಳ್ಳುತ್ತಾ, “ಯಾಕಿಷ್ಟು ತಡ ಮಾಡಿದೆ ಚಿನ್ನಾ?” ಎಂದ ನಸು ಮುನಿಸು ತೋರಿಸುತ್ತಾ. ಸ್ಸಾರೀ… ಮಗಳನ್ನು ಶಾಲೆಗೆ ಕಳುಹಿಸಿ ಬರಬೇಕಲ್ಲವೇ? ಬೇಸರ ಮಾಡಬೇಡಿ… ಬರುವ ವಾರ ನಿಮಗಿಂತಲೂ ಮುಂಚೆ ನಾನೇ ಬಂದು ನಿಮ್ಮನ್ನು ಕಾಯುತ್ತೇನೆ… ಸರಿನಾ? ಅಂದಹಾಗೆ ಅಮ್ಮ ನಿಮಗೆ ಪಾಯಸ ಕೊಟ್ಟು ಕಳುಹಿಸಿದ್ದಾಳೆ. ನೀವು ನಿಮ್ಮ ಬಾಹುಗಳ ಬಿಗಿತವನ್ನು ಸಡಲಿಸಿದರೆ… ನಾನು ಟಿಫಿನ್ ಬಿಚ್ಚಬಹುದೂ… ಸಾಯಿರಾ ತುಂಟ ನೋಟದೊಂದಿಗೆ ಹೇಳಿದಾಗ ಅವನು ಆಕೆಯ ಸೊಂಟದಿಂದ ಕೈ ತೆಗೆದ.

    ವಾಹ್! ಅತ್ತೆಯ ಕೈ ರುಚಿ ಅದ್ಭುತ! ನನ್ನ ಅಮ್ಮನೂ ಇದೇ ರೀತಿ ಪಾಯಸ ಮಾಡುತ್ತಿದ್ದರು… ಪಾಯಸವನ್ನು ಚಪ್ಪರಿಸುತ್ತಾ ಪತಿ ಹೇಳಿದಾಗ ಸಾಯಿರಾ ಖುಶಿಗೊಂಡಳು. ಹನೀಫ್ ತಾನು ತಂದ ಮಲ್ಲಿಗೆಯನ್ನು ಪತ್ನಿಯ ತಲೆಗೆ ತಾನೇ ಮುಡಿಸುತ್ತಾ, “ನೀನು ಸದಾ ಮದುಮಗಳಂತೇ ನನ್ನ ಮುಂದೆ ಇರಬೇಕು ಸಾಯಿರಾ, ನಿನ್ನ ಮಗಳ ಹುಟ್ಟಿದ ಹಬ್ಬ ನಾಳೆ ತಾನೆ. ನನಗೆ ದಾರಿಯಲ್ಲಿ ಬರುತ್ತಿರಬೇಕಾದರೆ ನೆನಪಾಯಿತು. ಹೋದ ವರ್ಷ ಅವಳಿಗೆ ಕಾಲಿನ ಗೆಜ್ಜೆ ನೀಡಿದ್ದೆ. ಈ ಬಾರಿ ನಾನು ಏನು ಖರೀದಿಸಲಿ…” ಎಂದು ಚಿಂತಿಸುತ್ತಿದ್ದಾಗ ಸುಂದರವಾದ ಡ್ರೆಸ್ ಶೋಕೇಸ್‌ನಲ್ಲಿ ಕಂಡು ಬಂತು. ಅದನ್ನೇ ಉಡುಗೊರೆಯಾಗಿ ತಂದೆ. ನೀವು… ಅವಳನ್ನು ಪ್ರೀತಿಸುತ್ತೀರಿ… ಆದರೆ… ಆಕೆಗೆ ನಿಮ್ಮ ಪರಿಚಯವೂ ಇಲ್ಲ! ಅವಳ ಶಾಲೆಯ ಫೀಸ್, ಆಕೆಗೆ ವಸ್ತ್ರ, ಉಡುಗೊರೆ ಎಲ್ಲವನ್ನೂ ನೀವು ಕೊಡುತ್ತಿದ್ದೀರಿ, ಅವಳಿಗೆ ಅದನ್ನೆಲ್ಲಾ ನೀಡುತ್ತಿರುವ ವ್ಯಕ್ತಿಯ ಕುರಿತು ಏನೂ ತಿಳಿದಿಲ್ಲ. ನಾನು ಏನು ಮಾಡಲಿ ಹನೀಫ್? ಯಾವಾಗ ಅವಳಿಗೆ ತಿಳಿಸುವುದು? ಆಕೆಯ ಅಮ್ಮನ ಬದುಕಲ್ಲಿ ಪತಿ’ ಎಂಬ ಓರ್ವನಿದ್ದಾನೆ… ಆಕೆಗೆ ಮಲ ತಂದೆ ಇದ್ದಾರೆಂದು ಹೇಗೆ ತಿಳಿಸಲಿ?

    ಅವಳ ಅಪ್ಪ ಆಕ್ಸಿಡೆಂಟ್‌ನಲ್ಲಿ ತೀರಿ ಹೋದ ನಂತರ ನಾನು ಬೇರೆ ಮದುವೆನೇ ಆಗಲಾರೆ ಎಂದು ನಿರ್ಧಾರ ಮಾಡಿದ್ದೆ. “ಅಮ್ಮಾ… ನಿಮ್ಮನ್ನು ನಾನೇ ಸಾಕುತ್ತೇನೆ, ನಾನು ಕಲಿತು ಉದ್ಯೋಗ ಮಾಡ್ತೇನೆ, ಅಪ್ಪನನ್ನು ನೆನೆದು ಕಣ್ಣೀರು ಹಾಕುತ್ತಿರಬೇಡಿ…!” ಎಂದು ನನ್ನನ್ನು ಅಂದು ಸಂತೈಯಿಸಿದಾಗ ಪಿಂಕಿಗೆ ಎಂಟು ವರ್ಷ. ಈಗ ಹದಿನಾಲ್ಕು ವರ್ಷಕ್ಕೆ ಕಾಲಿಡುತ್ತಿದ್ದಾಳೆ. ನಿಮ್ಮನ್ನು ಮದುವೆ ಆಗಿ ಎರಡು ವರ್ಷ ಆಯಿತು. ಪಿಂಕಿಗೆ ಅವಳ ಅಮ್ಮನ ಬದುಕಲ್ಲಿ ಬೇರೊಬ್ಬ ಬರುವುದೇ ಇಷ್ಟವಿಲ್ಲ ಎಂಬ ಸತ್ಯ ನನಗೆ ತಿಳಿದಿತ್ತು. ಅಮ್ಮನ ಬಲವಂತ ಹಾಗೂ ತನ್ನ ಭವಿಷ್ಯದ ಚಿಂತೆ ಮಾಡಿಕೊಂಡು ನಾನು ಮರು ವಿವಾಹಕ್ಕೆ ಮನಸ್ಸು ಮಾಡಿದ್ದೆ. ಇಪ್ಪತೆಂಟರ ಹರೆಯಕ್ಕೇ ನಾನು ಗಂಡನನ್ನು ಕಳೆದುಕೊಂಡಾಗ ಮಗಳಿಗಾಗಿ ಮಾತ್ರ ಅಂದು ಬದುಕಿದ್ದೆ. ವರ್ಷ ಕಳೆದಂತೇ ರಾತ್ರಿಯು ನನ್ನನ್ನು ನಿದ್ರಾಹೀನಳನ್ನಾಗಿಸಿತು. ಬಯಕೆಗಳನ್ನು ತಡೆದುಕೊಳ್ಳಲು ನಾನು ಬಚ್ಚಲು ಕೋಣೆಯೊಳಗೆ ಹೊಕ್ಕು ತಣ್ಣೀರನ್ನು ತಲೆಮೇಲೆ ಹೊಯ್ದುಕೊಳ್ಳುತ್ತಿದ್ದೆ. ಉಪವಾಸ ವ್ರತ ಮಾಡುತ್ತಿದ್ದೆ. ಯಾರೊಂದಿಗು ಹೇಳಲಾಗದ ಈ ಒಂಟಿಯಾತನೆಯಲ್ಲಿ ನಾನು ಬೆಂದು ಹೋಗುತ್ತಿದ್ದಾಗ ನನ್ನ ದೊಡ್ಡಪ್ಪನನ್ನು ಭೇಟಿ ಆಗಲು ನೀವು ಮನೆಗೆ ಬಂದಿರಿ. ನನ್ನನ್ನು ನೋಡಿದಿರಿ. ನನ್ನ ಕಥೆಯೆಲ್ಲಾ ನಿಮಗೆ ತಿಳಿಯಿತು. ಪಿಂಕಿಗೆ ಈಗ ತಿಳಿಯುವುದೇ ಬೇಡಾ, ಪ್ರಾಯಕ್ಕೆ ಬಂದಾಗ ತಿಳಿದೇ ತಿಳಿಯುತ್ತದೆ… ಎಂದೆಲ್ಲಾ ಅಮ್ಮ ಸಮಧಾನಿಸಿ ನಿಮ್ಮೊಂದಿಗೆ ಮದುವೆಗೆ ಒಪ್ಪಿಸಿದರು. ನಾವಿಂದು ಗುಟ್ಟಾಗಿ ದಾಂಪತ್ಯ ನಡೆಸುತ್ತಿದೇವೆ… ಇನ್ನು ಎಷ್ಟು ಸಮಯ ಹನೀಫ್…? ಈ ರೀತಿ ಗುಟ್ಟು ಇಡುವುದು? ಪ್ರತೀ ಗುರುವಾಗ ನಾನು ಎಲ್ಲಿಗೆ ಹೋಗುತ್ತಿದ್ದೇನೆಂದು ಪ್ರಶ್ನಿಸುತ್ತಿದ್ದಾಳೆ ಮಗಳು. ಸುಳ್ಳು ಹೇಳಿ ಬರುವುದೇ ಕಷ್ಟವಾಗುತ್ತಿದೆ. ನಾನು ನಿಮ್ಮೊಂದಿಗೆ ಮೊಬೈಲ್‌ನಲ್ಲಿ ಹರಟುತ್ತಿದ್ದರೆ ಸಂಶಯದಿಂದ ನೋಟ ಹರಿಸುತ್ತಿದ್ದಾಳೆ. ಅವಳಿಗೆ ಸತ್ಯ ತಿಳಿಸಿ ಬಿಡಬೇಕು ಎಂದು ಈಗೀಗ ಅನಿಸುತ್ತಿದೆ. ಆಕೆ ದೊಡ್ಡವಳಾಗಿದ್ದಾಳೆ… ಅರ್ಥ ಮಾಡಿಕೊಳ್ಳಬಹುದೂ…

    ಸಾಯಿರಾಳ ಮಾತುಗಳನ್ನು ಮೌನವಾಗಿ ಆಲಿಸುತ್ತಿದ್ದ ಹನೀಫ್ ಪತ್ನಿಯನ್ನು ಸಮಧಾನಿಸಿದ. ಪಿಂಕಿಗೆ ಮದುವೆ ಸಮಯ ಬಂದಾಗ ನಾನು ಮುಂದೆ ಬರಲೇಬೇಕಲ್ಲವೇ? ಸಹನೆ ವಹಿಸು.. ಅವಳು ಈ ಸತ್ಯವನ್ನು ಒಪ್ಪಿಕೊಳ್ಳುವಳು. ಸಾಯಿರಾ ಅವನ ಎದೆಗೆ ಮುಖ ಒತ್ತಿ ಕಣ್ಣು ಮುಚ್ಚಿದಳು. ಪುರುಷನ ಆಸರೆ ಇಲ್ಲದೇ ಬದುಕುವುದೇ ಕಷ್ಟ… ನಿಮ್ಮಂತಹ ಒಳ್ಳೆಯ ಸಂಗಾತಿಯನ್ನು ನಾನು ಪಡೆದುಕೊಂಡದ್ದು ನನ್ನ ಪುಣ್ಯ. ಮನಸ್ಸಲ್ಲೇ ಪಿಸುಗುಟ್ಟಿಕೊಂಡಳು.

    ಮಮ್ತಾಜ್ ಮಲಗಿದ್ದಲ್ಲಿಂದಲೇ ಮೊಬೈಲ್‌ಗೆ ಕರೆ ಮಾಡಿದಳು. ಪತ್ನಿಯ ನಂಬರ್ ನೋಡಿ ಹನೀಫ್ ಆತುರದಿಂದ ರಿಸೀವ್ ಮಾಡಿದ.

    ರೀ… ನೀವು ಬರುವಾಗ ನನಗೆ ಎರಡು ನೈಟ್ ಡ್ರೆಸ್ ತನ್ನಿ. ಮಂಗಳೂರಿನಲ್ಲಿ ಒಳ್ಳೆಯ ನೈಟಿ ಸಿಗುತ್ತದೆ. ಬರಲು ತುಂಬಾ ತಡಮಾಡ ಬೇಡಿ… ನನ್ನ ಮಾತ್ರೆಗಳನ್ನೂ ಮರೆಯದೇ ತಂದು ಬಿಡಿ.
    ಓ.ಕೆ… ಮಮ್ತಾ, ಡ್ರೆಸ್ ರ‍್ತೇನೆ. ಬೇರೆ ಏನಾದರೂ ಬೇಕಾ? ಊಟ ಮಾಡು… ನನ್ನನ್ನು ಕಾಯುತ್ತಾ ಕುಳಿತಿರಬೇಡಾ… ಹನೀಫ್ ಪತ್ನಿಗೆ ಹೇಳುತ್ತಿರುವುದನ್ನು ಕೇಳಿ ಸಾಯಿರಾ ಶಬ್ದವಾಗದಂತೇ ಕುಳಿತಳು.
    ಹನೀಫ್ ಸಾಯಿರಾಳತ್ತ ತಿರುಗಿ, “ಚಿನ್ನಾ… ನನಗೆ ಎರಡು ನೈಟ್ ಡ್ರೆಸ್ ಖರೀದಿ ಮಾಡಬೇಕು ನಿನಗೆ ತಿಳಿದಿರುತ್ತದೆ… ಹೆಂಗಸರು ಯಾವ ರೀತಿಯ ಡ್ರೆಸ್ ಹಾಕುವುದೆಂದೂ…”
    ನಿಮ್ಮ ಪತ್ನಿ ತುಂಬಾ ದಪ್ಪದ ಹೆಂಗಸಾ? ಸಾಯಿರಾ ಕೇಳಿದಳು.

    ಹೌದೂ… ಇದೀಗ ದಪ್ಪ ಆಗಿರುವುದು, ಪಕ್ಷವಾತಕ್ಕೆ ಈಡಾದ ಬಳಿಗೆ ಹಾಸಿಗೆಯ ರೋಗಿಯಾಗಿ ಮಲಗಿದ್ದಲ್ಲೇ ಇದ್ದಾಗ ವ್ಯಾಯಾಮ ಇಲ್ಲ… ದಪ್ಪ ಆಗುತ್ತಾ ಹೋದಳು. ಮೂರು ವರ್ಷದಿಂದ ನಾನೇ ಅವಳ ಸೇವೆ ಮಾಡುತ್ತಿರುವುದು. ಮಗ ಸೊಸೆ ಅಮೇರಿಕಾದಿಂದ ಎಂದಾದರೂ ಬಂದಾಗ ತುಂಬಾ ಖುಶಿಯಲ್ಲಿರುತ್ತಾಳೆ. ಈಗ ನಾನು ಅವಳ ಕಣ್ಣ ಮುಂದೆನೇ ಇರಬೇಕು. ಅದಕ್ಕೇ ಎಲ್ಲಾ ವ್ಯಾಪಾರವನ್ನು ತಮ್ಮಂದಿರಿಗೆ ವಹಿಸಿ ಅವಳೊಂದಿಗೆ ಇರುವುದು. ಗುರುವಾರದ ದಿನ ಮಾತ್ರ ಮಂಗಳೂರಿನಲ್ಲಿ ಕೆಲಸ ಇದೆಯೆಂದು ಹೇಳಿ ಬರುತ್ತೇನೆ. ನಿನ್ನನ್ನು ಒಮ್ಮೆ ನಮ್ಮ ಕಾರ್ಕಳದ ಮನೆಗೆ ಕರೆದೊಯ್ಯ ಬೇಕೆಂದು ಆಸೆ ಇದೆ. ಆದ್ರೆ… ಮಮ್ತಾಳಿಗೆ ನಿನ್ನನ್ನು ಏನೆಂದು ಪರಿಚಯಿಸುವುದು? ಅವಳ ಪತಿ ಎಂದಿಗೂ ಇನ್ನೊಂದು ಹೆಂಗಸಿನತ್ತ ನೋಡದಂತಹ ಏಕಪತ್ನೀ ವ್ರತನಾಗಿರಬೇಕೆಂದು ಅವಳು ಬಯಸುತ್ತಾಳೆ. ನಮ್ಮ ದಾಂಪತ್ಯ ಮಧುರವಾಗಿದೆ. ನಾನು ಹೆಣ್ಣಿನ ಸಂಗ ಇಲ್ಲದೇ ಹೇಗೆ ಜೀವಿಸುತ್ತಿದ್ದೇನೆಂದು ಅವಳು ಯೋಚಿಸುವುದೇ ಇಲ್ಲ. ಅವಳ ಮಟ್ಟಿಗೆ ನಾನು ಐವತ್ತರ ಪ್ರಾಯದವನು ನನಗೆ ಸೆಕ್ಸ್ನ ಅಗತ್ಯವಿಲ್ಲ ಎಂದು ತಿಳಿದರಲೂ ಬಹುದು. ಅವಳಿಗೆ ಶುಗರ್, ಬಿ.ಪಿ. ಕೂಡಾ ಇದೆ. ಆದರಿಂದ ನಾನು ಅವಳಿಗೆ ಯಾವುದೇ ಮಾನಸಿಕ ನೋವು ಕೊಡದೇ ಸತ್ಯವನ್ನು ಮುಚ್ಚಿಟ್ಟು ಬಿಟ್ಟೆ. ಕೆಲವು ವೇಳೆ ಒಬ್ಬರ ಸುಳ್ಳು ಮುಚ್ಚುಮರೆಯ ಇನ್ನೋರ್ವರಿಗೆ ಬದುಕಲ್ಲಿ ಸಂತಸ ನೀಡುತ್ತದೆ. ಅವಳು ಆಕೆಯ ನಂಬಿಕೆಯಲ್ಲಿ ನೆಮ್ಮದಿಯಲ್ಲಿದ್ದಾಳೆ ಎಂದಾದರೂ ತಿಳಿಯಬಹುದೂ… ನೋಡುವ.

    ಪಿಂಕಿ ಹದಿಹರೆಯಕ್ಕೆ ಕಾಲಿಟ್ಟಳು. ಹನೀಫ್‌ನ ಗೆಳೆಯನ ಮಗ ಇಂಜಿನಿಯರ್ ತನ್ನ ಮಲ ಮಗಳಾದ ಪಿಂಕಿಯ ಫೋಟೋವನ್ನು ಹನೀಫ್ ತೋರಿಸಿದಾಗ ಖುಶಿಯಿಂದಲೇ ವಧುವನ್ನು ಒಪ್ಪಿಕೊಂಡ. ಹೆಣ್ಣು ನೋಡುವ ಶಾಸ್ತçವೂ ಮುಗಿದು ಮದುವೆಗೆ ದಿನ ನಿಗದಿಯಾಯಿತು. ಮಲ ಮಗಳ ಮದುವೆಯ ಎಲ್ಲಾ ಜವಾಬ್ದಾರಿಯನ್ನು ಹನೀಫ್ ವಹಿಸಿಕೊಂಡಿದ್ದ. ಮದುವೆಯ ಕಾಗದ ಪ್ರಿಂಟ್ ಆಗಲು ಬಾಕಿ ಇತ್ತು. ಪಿಂಕಿ ತಾನೇ ಮದುವೆ ಕಾಗದದ ರೂಪರೇಖೆಯನ್ನು ಸಿದ್ಧಪಡಿಸಿ ಅಮ್ಮನ ಕೈಗೆ ನೀಡಿದಳು.

    ಅಮ್ಮಾ… ಇದರಲ್ಲಿ ಬರೆದಂತೇ ಪ್ರಿಂಟ್ ಆಗಲಿ. ನನ್ನ ಗೆಳತಿಯರೆಲ್ಲಾ ಬರುತ್ತಾರೆ. ನಾವು ಹೆಚ್ಚು ಜನರನ್ನು ಆಮಂತ್ರಿಸುವುದು ಬೇಡಾ. ಮದುವೆಗೆ ಬಹಳ ಖರ್ಚು ಆಗುತ್ತಾ ಇದೆ. ಈಗಲೇ ನನ್ನ ಬಂಗಾರ, ವಸ್ತçಕ್ಕೆಂದೇ ಎರಡುವರೆ ಲಕ್ಷ ಖರ್ಚು ಮಾಡಿದ್ದಿ. ಅದ್ಧೂರಿ ಮದುವೆ ಬೇಡಾ…

    ಮಗಳು ಹೇಳಿದಾಗ ಸಾಯಿರಾ ಮದುವೆಯ ಕಾಗದತ್ತ ಕಣ್ಣು ಹಾಯಿಸಿದಳು. ಪಿಂಕಿ ಹಾಗೂ ವರನ ಹೆಸರಿನ ಕೆಳಗೆ ಮಿಸ್ಟರ್ ಹನೀಫ್ ಮಿಸೆಸ್ ಸಾಯಿರಾ ಎಂದು ಪ್ರಿಂಟಾಗಿರುವ ಅಕ್ಷರಗಳನ್ನು ನೋಡಿ ಸಾಯಿರಾ ದಿಗ್ಭçಮೆಯಿಂದ ಮಗಳತ್ತ ನೋಡಿದಳು.

    ಯಾಕಮ್ಮಾ… ಈ ರೀತಿ ಹೆದರಿ ಬಿಟ್ಟೆ! ನನಗೆ ಎಲ್ಲಾ ಗೊತ್ತಾಗಿದೆ. ನನ್ನನ್ನು ಬೆನ್ನ ಹಿಂದೆ ನಿಂತು ಪೋಷಿಸುವ ಓರ್ವ ಅಪ್ಪ ಇರುವುದು ನೀನು ತಿಳಿಸದೇ ಹೋದ್ರೂ ನಾನು ಪತ್ತೆ ಹಚ್ಚಿದೆ. ಇಂದು ನಾನು ವಿದ್ಯಾವಂತಳಾಗಿ ನಿಂತು, ಒಳ್ಳೆಯ ಗಂಡು ನನ್ನನ್ನು ಮದುವೆ ಆಗಲು ಸಿದ್ಧವಾದದ್ದು ನನ್ನ ಮದುವೆಯ ಜವಾಬ್ದಾರಿ ಎಲ್ಲವನ್ನೂ ನಿರ್ವಹಿಸಿದ ಆ ಪುಣ್ಯಾತ್ಮ ನನಗೆ ಜನ್ಮ ನೀಡದ ತಂದೆ ಆಗಿರಬಹುದೂ… ಆದ್ರೆ ನನ್ನ ಅಮ್ಮನ ಬದುಕಿಗೆ ಆಸರೆಯಾಗಿ ನಿಂತ ಅವರು ನನಗೆ ತಂದೆ ಸಮಾನ ತಾನೆ? ನಾನು ಅಜ್ಜಿಯೊಂದಿಗೆ ಎಲ್ಲಾ ಕೇಳಿ ತಿಳಿದುಕೊಂಡೆ. ನಾನು ಎಷ್ಟು ಸ್ವಾರ್ಥಿ ಮಗಳಲ್ಲಾ… ಅಮ್ಮಾ… ಬುದ್ಧಿ ಇಲ್ಲದ ವಯಸ್ಸಲ್ಲಿ ನಾನು ಏನೋ ಅಂದಿದ್ದಕ್ಕೆ ನೀನು ನನ್ನ ಮುಂದೆ ರಹಸ್ಯ ಬಾಯಿ ಬಿಡಲಿಲ್ಲ. ಅಮ್ಮಾ… ನಾನು ಅವರನ್ನು ಅಪ್ಪಾ’ ಎಂದು ಕರೆಯಬಹುದೇ? ಸಾಯಿರಾ ಕುಳಿತಲ್ಲಿಂದ ಒಮ್ಮೆಲೇ ಎದ್ದು ನಿಂತು ಮಗಳನ್ನು ಬಿಗಿಯಾಗಿ ಅಪ್ಪಿ ಹಿಡಿದು ಬಿಕ್ಕಳಿಸಿದಳು. ಅಮ್ಮಾ… ನನಗೆ ನೆಮ್ಮದಿಯಾಯಿತು. ನಾನು ವಿವಾಹ ಆಗಿ ಹೋದ ನಂತರ ನೀನು ಒಂಟಿಯಾಗಿರಲಾರೆ. ನನಗೆ ಅವರನ್ನು ನೋಡಬೇಕಮ್ಮಾ… ಸಾಯಿರಾಳ ಮೊಬೈಲ್ ರಿಂಗಾಯಿತು. ಹನೀಫ್‌ನ ನಂಬರ್ ನೋಡಿ ಖುಶಿಯಿಂದ ಸಾಯಿರಾ ಮಗಳತ್ತ ನೋಡಿ, “ನೀನು ಕೇಳುವಾಗಲೇ ನಿನ್ನ ಅಪ್ಪನ ಕರೆ ಬಂತು… ಮಾತನಾಡು ಮಗಳೇ…” ಎಂದು ಮೊಬೈಲ್ ನೀಡಿದಳು. ಪಿಂಕಿ ನಡುಗುವ ಕೈಯಿಂದ ಮೊಬೈಲ್ ತಗೊಂಡು ಕಿವಿಗೆ ಒತ್ತಿಕೊಂಡಳು.

    ಹಲೋ… ಆಚೆಯಿಂದ ಧನಿ ಕೇಳಿ ಬಂತು. ಪಿಂಕಿ ಹೆದರುತ್ತಲೇ… “ಹಲೋ ಅಸ್ಸಾಲಾಮ್ ಅಲೈಕುಮ್ ಡ್ಯಾಡ್… ನಾನು ಪಿಂಕಿ ಮಾತನಾಡುವುದೂ…” ಎಂದಳು. ಏನೆAದೇ…! ಡ್ಯಾಡ್!? ಇನ್ನೊಮ್ಮೆ ಹೇಳೂ ಪಿಂಕೀ… ಹನೀಫ್‌ನ ಧ್ವನಿ ಭಾರವಾಗಿ ಗದ್ಗದಿತವಾಗಿತ್ತು. ಹಾಯ್… ಡ್ಯಾಡ್! ಹೌ ಆರ್ ಯೂ? ನನಗೆ ಎಲ್ಲಾ ವಿಷಯ ತಿಳಿದಿದೆ. ನಿಮ್ಮನ್ನು ಭೇಟಿ ಆಗಲು ಕಾತುರಿಸುತ್ತಿದ್ದೇನೆ ಡ್ಯಾಡ್… ಥ್ಯಾಂಕ್ಸ್, ಅಲ್‌ಹಮ್ದುಲಿಲ್ಲಾಹ್! ನನ್ನ ಎದೆಯ ಭಾರ ಕಡಿಮೆ ಆಯಿತು. ಅಂದಹಾಗೇ… ಒಂದು ವಿಷಯ ಹೇಳಲು ಕಾಲ್ ಮಾಡಿದ್ದೆ, ಅರ್ಜೆಂಟ್… ಅಮ್ಮನಿಗೆ ಸೆಲ್ ನೀಡೂ… ಬೇಗಾ… ಎಂದರು ಆತುರದಿಂದ. ಅಮ್ಮಾ… ಅಪ್ಪನಿಗೆ ಏನೋ ಅರ್ಜೆಂಟ್ ಮಾತನಾಡಬೇಕಂತೇ ನಿನ್ನ ಬಳಿ… ಹಲೋ… ಏ… ಏನೂರೀ…? ಸಾಯಿರಾ ಗಾಬರಿಯಿಂದ ಕೇಳಿದಳು. ನೀನು ಬೇಗನೇ ಹೊರಟು ಸಿಟಿ ಆಸ್ಪತ್ರೆಗೆ ಬಾ. ಮಮ್ತಾಜ್ ಸೀರಿಯಸ್ ಆಗಿದ್ದಾಳೆ. ಒಮ್ಮೆ ಅವಳನ್ನು ನೋಡು, ಡಾಕ್ಟರ್ ಭರವಸೆ ಬಿಟ್ಟಿದ್ದಾರೆ. ನಿಮ್ಮವರಿಗೆ ಸುದ್ಧಿ ಮುಟ್ಟಿಸಲು ಹೇಳಿದ್ರು… ನೀನು ಪಿಂಕಿ ಒಟ್ಟಿಗೇ ಬೇಗನೇ ಬಂದು ಬಿಡು. ಸಾಯಿರಾ

    ಮಗಳೊಂದಿಗೆ ಆಸ್ಪತ್ರೆಗೆ ಬಂದಾಗ ಐ.ಸಿ. ರೂಮಲ್ಲಿ ಹನೀಫ್ ಅಳುತ್ತಾ ಮಮ್ತಾಜ್‌ನ ಪಕ್ಕ ನಿಂತಿದ್ದರು. ಸಾಯಿರಾ ಮೆಲ್ಲನೇ ಮಮ್ತಾಜ್‌ನ ಹತ್ತಿರ ನಡುಗುತ್ತಾ ನಿಂತಳು. ಮಮ್ತಾಜ್‌ನ ಕಣ್ಣು ನಿರೀಕ್ಷಿಸುತ್ತಿತ್ತು… ಆಕೆಯನ್ನೂ ಸಾಯಿರಾಳನ್ನು ಸನ್ನೆಯಿಂದ ಹತ್ತಿರ ಕರೆದಳು. ನೀನೂ.. ಸಾ…ಯಿ…ರಾ… ತಾನೆ? ಆಕೆಯ ಕೈಗಳನ್ನು ಮೆಲ್ಲನೇ ಮೇಲೆತ್ತಿ ಕೇಳಿದಳು. ನನಗೆ ಗೊತ್ತಿದೇ… ಹನೀಫ್‌ನತ್ತ ಕೈ ತೋರಿಸಿ ಆಕೆ ನಸು ನಗು ಬೀರಿದಳು. ಮೊಬೈಲ್‌ನಲ್ಲಿತ್ತು ನಿನ್ನ ಹೆಸರು. ತುಂಬಾ ಒಳ್ಳೆಯವರು ನನ್ನ ಗಂಡ. ಅವರನ್ನು ಕೈ ಬಿಡಬೇಡಾ… ಒಂದು ವರುಷದಿಂದ ನಿನ್ನನ್ನು ನೋಡಲು ಬಯಸುತ್ತಿದ್ದೆ… ಇಂದು ಕೊನೆಗಳಿಗೆಯಲ್ಲಿ ಕಾಣುವಂತಾಯಿತೂ… ನನ್ನ ಮಗ… ಸಲ್ಮಾನ್‌ಗೆ ನೀನುಅಮ್ಮ’ ಆಗಬೇಕೂ… ನನ್ನ ಮನೆಯಲ್ಲಿ… ಇರಬೇಕೂ… ಮಮ್ತಾಜ್ ಏದುರಿಸಿರು ಬಿಡ ತೊಡಗಿದಳು. ಕಣ್ಣುಗಳು ನೋಟ ನೆಟ್ಟಿರುವಂತೇ ದೇಹ ತಟಸ್ಥವಾಯಿತು.

    ಸಾಯಿರಾಳ ಕೈಯನ್ನು ಬಿಗಿಯಾಗಿ ಹಿಡಿದು ಮಮ್ತಾಜ್‌ಳ ತೆರೆದ ಕಣ್ಣನ್ನು ಮುಚ್ಚಿದ ಸಾಯಿರಾ ಕಂಬನಿ ಒರೆಸಿಕೊಂಡು ಪತಿಯತ್ತ ನೋಡಿದಳು. ದುಃಖದಿಂದ ಕುಸಿದ ಹನೀಫ್‌ರನ್ನು ಪಿಂಕಿ ಹಿಡಿದುಕೊಂಡು ಸಂತೈಯಿಸುತ್ತಿರುವುದು ಕಾಣಿಸಿತೂ… ಡ್ಯಾಡ್… ಧೈರ್ಯ ವಹಿಸಿಕೊಳ್ಳಿ… ಮಗಳ ಮಾತುಗಳು ಅವರ ಮನಸ್ಸಿಗೆ ಹಾಯೆನಿಸಿದವು.

    ಶಹನಾಝ್ ಎಂ.

  • ಹೆಣ್ಣಿನ ನೋವು

    ಹೆಣ್ಣಿನ ನೋವು

    ಮನಬಿಚ್ಚಿ ಹೇಳುವ ಹಾಗಿಲ್ಲ
    ಕಣ್ಣಂಚಿ ನಲ್ಲಿ ಕಣ್ಣೀರು ಮಾತ್ರ
    ನಿನ್ನದೇನು ಮಹಾನ್ ನೋವುಗಳೇ
    ಎಲ್ಲರ ಹಾಗೆ ನೀನೂ ಕೂಡ

    ಅತ್ತರೇನು ನಕ್ಕರೇನು ನಿನ್ನ ಕೇಳುವವರಾರು
    ನಾಲ್ಕು ಗೋಡೆಗಳ ಮಧ್ಯವಷ್ಟೆ ನಿನ್ನ ರೋದನ
    ಕೈಗೆ ಕೋಳ ಕಟ್ಟಬೇಕಾಗಿಲ್ಲ
    ಮಾತಿನ ಸರಪಳಿಯೇ ಸಾಕಲ್ಲವೇ?

    ಶತಮಾನಗಳೇನೋ ಕಳೆದಿವೆ
    ಹೆಣ್ಣಿನ ಬಾಳಿಗೆ ತೂಕವೇನೋ ಬಂದಿದೆ
    ನೋಟಗಳಲ್ಲಿ ಅದೇ ಭಾವನೆಯಲ್ಲವೇ

    ಇಲ್ಲವೆನ್ನಲ್ಲ ಸ್ವಾತಂತ್ರ‍್ಯ ವಿದೆ, ಹಕ್ಕೂ ಇದೆ
    ಕಾನೂನಿದೆ, ನ್ಯಾಯವಿದೆ
    ಎಲ್ಲ ಅದರದರ ಸ್ಥಾನದಲ್ಲಿದೆ
    ಎಲ್ಲರಿಗೂ ಎಟುಕುವುದು ಅನುಮಾನ
    ಹಣಬಲವಲ್ಲವೇ ಇಲ್ಲಿಯ ಪರಿಮಾಣ

    ಹೂವಾಗಿ ಅರಳಬೇಕಿತ್ತು
    ಹಕ್ಕಿಗಳಾಗಿ ಹಾರಾಡಬೇಕಿತ್ತು
    ನೀರಾಗಿ ಹರಿಯಬೇಕಿತ್ತು
    ಗಂಡಾಗಿ ಹುಟ್ಟಬೇಕಿತ್ತು
    ಹೆಣ್ಣು ಅಂದುಕೊಂಡದ್ದು ಅಂತು ನಿಜ
    ಎಲ್ಲಿದೆ ಸಾರ್ಥಕ ಬದುಕು
    ನಮ್ಮೊಳಗೇ ಪ್ರಶ್ನಿಸಬೇಕಿದೆ???

    ರುಮಾನ, ಮುಂಡೋಳಿ

  • ಮಹಿಳೆ ಮಸೀದಿ ಪ್ರವೇಶಿಸಬಹುದೇ..?

    ಮಹಿಳೆ ಮಸೀದಿ ಪ್ರವೇಶಿಸಬಹುದೇ..?

    ಇಸ್ಲಾಮ್ ಭಾರತಕ್ಕೆ ಆಗಮಿಸಿ ಸಾವಿರ ವರ್ಷಗಳೇ ಕಳೆದಿದ್ದರೂ ಅದರ ಧರ್ಮಗ್ರಂಥ ಕುರ್‌ಆನ್ ಮತ್ತು ಆರಾಧನಾ ಕೇಂದ್ರವಾಗಿರುವ ಮಸೀದಿಗಳು, ಉಪವಾಸ ವ್ರತ, ಹಬ್ಬಗಳು ಮತ್ತು ಮುಸ್ಲಿಮರ ಆಚಾರ-ವಿಚಾರಗಳೆಲ್ಲ ಈ ದೇಶಕ್ಕೆ ತೆರೆದುಕೊಂಡಿರುವುದು ಬಹಳ ಕಡಿಮೆ. ಇದರಿಂದಾಗಿ ಸಮಾಜದಲ್ಲಿ ಮಸೀದಿಗಳ ಬಗ್ಗೆ, ಮುಸ್ಲಿಮರ ಬಗ್ಗೆ, ಅವರ ಗ್ರಂಥದ ಬಗ್ಗೆ ಮತ್ತು ಸಾಂಸ್ಕೃತಿಕ, ಸಂಗತಿಗಳ ಬಗ್ಗೆ ಹಲವು ಅನುಮಾನ, ಕುತೂಹಲಗಳುಳ್ಳ ಅಭಿಪ್ರಾಯ ಸೃಷ್ಟಿಯಾಗುವುದಕ್ಕೆ ಕಾರಣವಾಗಿದೆ. ಆರೋಪಗಳಿಗೂ ಕೊರತೆ ಇಲ್ಲ. ಮುಚ್ಚಿಟ್ಟ ಯಾವುದೇ ವಸ್ತು ಕುತೂಹಲಕ್ಕೂ ಅನುಮಾನಗಳಿಗೂ ಕಾರಣವಾಗುವುದು ಸಹಜ. ಆದ್ದರಿಂದಲೇ ಈ ವಿಷಯದಲ್ಲಿ ಸಮಾಜವನ್ನು ವಿಶ್ವಾಸಕ್ಕೆ ಪಡಕೊಳ್ಳಬೇಕು ಮತ್ತು ಎಲ್ಲವುಗಳು ಬಗ್ಗೆ ತೆರೆದ ಮನಸ್ಸಿನಿಂದ ಸಮಾಜಕ್ಕೆ ತಿಳಿಸಬೇಕು ಎಂದು ತೀರ್ಮಾನಿಸಿ “ಮಸೀದಿ ದರ್ಶನ” ಎಂಬ ಕಾರ್ಯಕ್ರಮಗಳನ್ನು ದೇಶದ ಹಲವೆಡೆ ಏರ್ಪಡಿಸಲಾಯಿತು.

    ಮಸೀದಿ ಹೇಗಿದೆ, ಏನಿದೆ, ಏನಿಲ್ಲ, ಅಲ್ಲಿ ನಡೆಯುವ ಪ್ರಾರ್ಥನೆ ಹೇಗಿರುತ್ತದೆ, ಅದನ್ನು ಯಾಕೆ ಕಟ್ಟಲಾಯಿತು, ಮಸೀದಿಯಿಂದ ಕೊಡುವ ಅಝಾನ್ (ಪ್ರಾರ್ಥನಾ ಕರೆ) ಹಿನ್ನಲೆ ಏನು, ಅದನ್ನು ಕೊಡುವುದಕ್ಕೆ ಕಾರಣ ಏನು, ಅದರ ಅರ್ಥ ಏನು, ವುಝೂ (ಅಂಗಸ್ನಾನ) ಹೇಗೆ ಮಾಡುವುದು, ಇತ್ಯಾದಿ ಹಲವು ಸಂಗತಿಯನ್ನು ದೇಶ ಬಾಂಧವರಿಗಾಗಿ ತಿಳಿಸುವ ಅಗತ್ಯ ಇದೆ.

    ಈ ಹಿನ್ನಲೆಯಲ್ಲಿ ಮಂಗಳೂರಿನ ಕುದ್ರೋಳಿ ಎಂಬ ಪ್ರದೇಶದಲ್ಲಿ ಜಾಮಿಯಾ ಮಸೀದಿಯನ್ನು ದರ್ಶನಕ್ಕಾಗಿ ತೆರೆದಿಡಲಾಯಿತು. ಸರ್ವ ಧರ್ಮೀಯರು ಈ ಒಂದು ಅವಕಾಶವನ್ನು ಪಡೆದುಕೊಂಡರು. ಸಂದರ್ಶಕರಿಗೆ ಕಾರ್ಯಕರ್ತರಾದ ಪುರುಷರೂ, ಮಹಿಳೆಯರೂ ಸಂಭ್ರಮದಿಂದ ವಿವರಣೆ ನೀಡಿದರು. ಸಮಾಜ ಸೇವಕರು, ಸಾಹಿತಿಗಳು, ರಾಜಕೀಯದಲ್ಲಿರುವವರು, ವಿದ್ಯಾರ್ಥಿಗಳು, ಸಾಮಾನ್ಯ ನಾಗರಿಕರು ಮಸೀದಿಯ ಸಂದರ್ಶನ ಮಾಡಿದರು. ಮಸೀದಿಯಲ್ಲಿ ಅಂದು ನಡೆದ ಸಾಮೂಹಿಕ ನಮಾಝ್‌ನ ಶಿಸ್ತುಬದ್ಧ ಸಾಲು, ಭಕ್ತಿಯ ವಾತಾವರಣ ನೋಡಿದರು. ಮಸೀದಿ ಎಂಬುವುದು ನಿಗೂಢ ಸ್ಥಳ ಎಂಬ ಭಾವನೆ ಇದ್ದ ಹಲವರಿಗೆ ಅಲ್ಲಿಯ ತೆರೆದ ಪ್ರಾರ್ಥನಾ ಸ್ಥಳದ ಪವಿತ್ರತೆ ನೋಡಿ ಮನಸ್ಸು ತಿಳಿಯಾಗಿತ್ತು. ದೇಶಬಾಂಧವರು ಸಂಭ್ರಮದಿAದ ಒಳಗೆ ಓಡಾಡಿ ಪ್ರತಿಯೊಂದು ಸ್ಥಳವನ್ನೂ ವೀಕ್ಷಿಸಿ ವಿವರ ಪಡೆದುಕೊಂಡದ್ದು ಮಾತ್ರವಲ್ಲ ಟಿ.ವಿ. ಮಾಧ್ಯಮಗಳಿಗೆ ಸೋಶಿಯಲ್ ಮೀಡಿಯಾಗಳ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಅನುಭವಗಳನ್ನು ಹಂಚಿಕೊAಡರು. ಬಹಳಷ್ಟು ಗಣ್ಯ ಪುರುಷರೂ ಆಗಮಿಸಿದ್ದರು.

    ಇಲ್ಲಿ ಮುಖ್ಯವಾಗಿ ಪುರುಷರಿಂದ ಹಾಗೂ ಮಹಿಳೆಯರಿಂದ ಬಂದ ಒಂದು ಪ್ರಶ್ನೆ ಮಸೀದಿಗೆ ಮಹಿಳೆಯರಿಗೆ ಪ್ರವೇಶ ಇದೆಯೇ?” ಎಂದಾಗಿತ್ತು. ಯಾಕಾಗಿ ಒಟ್ಟಿಗೆ ನಮಾಝಿಲ್ಲ ಎಂದಾಗಿತ್ತು. ಸಂದರ್ಶಕರ ಪ್ರಶ್ನೆ ನಮಗೆ ಅನಿರೀಕ್ಷಿತವೂ ಆಗಿರಲಿಲ್ಲ. ಸಹಜವಾಗಿಯೇ ಅವರ ಮನಸ್ಸಿನಲ್ಲಿದ್ದ ಸಂಶಯ! ಆಕ್ಷೇಪನೂ ಇದಾಗಿತ್ತು. ಮಸೀದಿ ಒಳಗೆ ಅಂದು ಇದ್ದ ಅಪಾರ ಸಂಖ್ಯೆಯ ಬುರ್ಖಾಧಾರಿಣಿಗಳ ಸಂಖ್ಯೆಯನ್ನು ನೋಡಿ ಅವರಿಗೂ ಆಶ್ಚರ್ಯವಾಗಿತ್ತು.

    ನಮ್ಮ ಪ್ರವಾದಿ ಮುಹಮ್ಮದ್(ಸ)ರ ಬಳಿ ಇದೇ ಪ್ರಶ್ನೆಯನ್ನು ಸಾವಿರದ ನಾನೂರೈವತ್ತು ವರ್ಷದ ಹಿಂದೆ ಅಂದಿನ ಮಹಿಳೆಯರು ಕೇಳಿದ್ದರು. ಆಗ ಪ್ರವಾದಿಯವರು(ಸ) ಹೇಳಿದರು, ದೇವನ ಆರಾಧಾನಾಲಯ ಎಲ್ಲರಿಗೂ ಸೇರಿದ್ದು. ಪುರುಷರಂತೆಯೇ ಮಹಿಳೆಯರಿಗೂ ಮಸೀದಿಗೆ ಬರುವ ಸ್ವಾತಂತ್ರ್ಯ ಇದೆ. ಆದ್ರೆ ಮಹಿಳೆಯರಿಗೆ ಈ ಬಗ್ಗೆ ಕಡ್ಡಾಯ’ ವಿಧಿಸಲಾಗಿಲ್ಲ. ಪುರುಷರು ಐದು ಹೊತ್ತು ಮಸೀದಿಗೆ ಬಂದು ನಮಾಝ್ ಮಾಡುವಂತೆ ಮಹಿಳೆಯರಿಗೂ ಒಂದು ವೇಳೆ ಕಡ್ಡಾಯ ಮಾಡಿರುತ್ತಿದ್ದರೆ ಮಹಿಳೆಯರಿಗೆ ಅದು ಕಷ್ಟಕರವಾಗುತ್ತಿತ್ತು. ಕಾರಣ ಪ್ರಥಮವಾಗಿ ಮಹಿಳೆಯರ ದೈಹಿಕವಾದ ಮಾಸಿಕ ಮುಟ್ಟು, ಬಾಣಂತನ, ಬಸುರಿ ಇತ್ಯಾದಿ ಆರೋಗ್ಯ ಸಮಸ್ಯೆಗಳು ಮಹಿಳೆಯರಿಗೆ ಮಸೀದಿಯ ಪ್ರಾರ್ಥನೆಗೆ ಅನುಕೂಲವಾಗಿರದು. ಮಹಿಳೆಯರು ಮಸೀದಿಗೆ ಹೋಗಿ ಪ್ರಾರ್ಥನೆ ಮಾಡಲು ಬಯಸಿದರೆ ಅವರನ್ನು ತಡೆಯಬಾರದು, ಹೋಗಲು ಇಷ್ಟ ಪಡದಿದ್ದರೆ ಅವರನ್ನು ಒತ್ತಾಯಿಸಲೂ ಬಾರದು, ಅವರಿಗೆ ಮಸೀದಿಗಿಂತಲೂ ಮನೆಯ ಒಳ ಕೋಣೆಯೇ ಹೆಚ್ಚು ಅನುಕೂಲ ಆಗಿರುತ್ತದೆ” ಎಂದರು ಪ್ರವಾದಿ(ಸ).

    ರಾಜಕಾರಣಿಗಳು ಮತ್ತು ಧರ್ಮದ್ವೇಷಿಗಳು “ಮಸೀದಿಗೆ ಮುಸ್ಲಿಮ್ ಮಹಿಳೆಯರಿಗೆ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ” ಎಂದು ಅಪಪ್ರಚಾರ ಮಾಡುತ್ತಾರೆ. ಇಂತಹ ತಪ್ಪು ಭಾವನೆಯನ್ನು ಹೋಗಲಾಡಿಸಲು ಈ ಮಸೀದಿ ಸಂದರ್ಶನ ಕಾರ್ಯಕ್ರಮ ಪ್ರಯೋಜನವಾಗುತ್ತದೆ. ಪುರುಷರೊಂದಿಗೇ ಯಾಕೆ ಮಹಿಳೆಯರಿಗೂ ಒಂದೇ ಜಾಗದಲ್ಲಿ ನಮಾಝ್‌ಗೆ ಅವಕಾಶ ಇರಲ್ಲ… ಎಂದು ಓರ್ವರು ಕೇಳಿದರು. ಅದಕ್ಕೆ ನಮ್ಮ ಉತ್ತರ ಮುಸ್ಲಿಮರ ನಮಾಝ್ ರೀತಿ ತಲೆ ಬಾಗುವುದು ಮತ್ತು ನೆಲಕ್ಕೆ ಸಾಷ್ಟಾಂಗವಾಗಿ ಎರಗುವ ಶೈಲಿಯು ಪುರುಷರು ಮುಂದೆ ನಿಂತು ನಮಾಝ್ ಮಾಡಿದರೆ ಮಹಿಳೆಯರು ಪುರುಷರ ಹಿಂದೆ ನಿಂತು ನಮಾಝ್ ಮಾಡುವುದು ಹೆಚ್ಚು ಅನುಕೂಲ ಹಾಗೂ ಒಳಿತು ಅನಿಸುತ್ತದೆ. ಮಹಿಳೆಯರು ಯಾವುದೇ ಸಂಕೋಚ, ಮುಜುಗರ, ಸಂದೇಹದ ಒದ್ದಾಟವಿಲ್ಲದೆ ನಿರಾಳವಾಗಿ ನಮಾಝ್ ಮಾಡಬಹುದು. ಹೆಚ್ಚಾಗಿ ಪರ್ಧಾಧಾರಿಣಿ ಮಹಿಳೆಯರು ಪ್ರತ್ಯೇಕವಾಗಿಯೇ ನಮಾಝ್ ನಿರ್ವಹಿಸಲು ಬಯಸುತ್ತಾರೆ. ಆರಾಧನೆಗೆ ಯಾವುದೇ ತೊಂದರೆ ಆಗದೇ ಇರುವುದು ಮುಖ್ಯ.

    ಮಸೀದಿಯನ್ನು ಒಂದು ನಿಗೂಢವಾಗಿ ಎಂದೂ ಇರಿಸಬಾರದು, ನಾವು ಪರಸ್ಪರ ಎಲ್ಲರ ಧರ್ಮದ ಆಚಾರ, ವಿಚಾರವನ್ನು ಅರಿಯಬೇಕು. ನಮ್ಮ ನಡುವೆ ಇರುವ ಒಂದು ಭೀತಿಯ ಗೋಡೆ ತೊಲಗಬೇಕು, ಇಗರ್ಜಿ, ಮಂದಿರ, ದೇವಸ್ಥಾನ ಎಲ್ಲರ ಪಾಲಿಗೂ ತೆರೆದ ಮನೆಯಾಗಬೇಕು. ಒಬ್ಬಕ್ರೈಸ್ತ ಸಮುದಾಯದ ಸಹೋದರಿ ಉಪನ್ಯಾಸಕಿ ಕೇಳಿದರು, “ನಿಮ್ಮ ಮಸೀದಿಯಲ್ಲಿ ಕೇವಲ ಆರಾಧನೆ ಮಾತ್ರವೇ ನಿರ್ವಹಿಸುವುದೇ? ಯಾಕೆ ಇಲ್ಲಿ ಸಮಾಜಕ್ಕೆ ಒಳಿತಾಗುವ ಕೆಲಸಕ್ಕೆ ಪ್ರೇರಣೆ ಕೊಡಬಾರದು, ಉದಾ: ಮುಸ್ಲಿಮ್ ಸಮುದಾಯದ ಯುವಕರು ಹೆಚ್ಚಾಗಿ ಡ್ರಗ್ಸ್ ಪೀಡಿತರೆಂಬ ಅಪವಾದ ಇದೆ. ಇಂತಹ ಡ್ರಗ್ಸ್’ನ ಅಪಾಯದ ಬಗ್ಗೆ ಇಲ್ಲಿ ಏನೂ ಕ್ರಮ ಕೈಗೊಳ್ಳುವುದಿಲ್ಲವೇ? ಎಂದರು. ನಾವು ಇದಕ್ಕೆ ಅವರಿಗೆ ಹೇಳಿದೆವು, “ಮಸೀದಿಯಲ್ಲಿ ಕೇವಲ ನಮಾಝ್ ಮಾತ್ರವಲ್ಲ, ಶುಕ್ರವಾರದ ದಿವಸ ಜುಮಾ ಪ್ರವಚನ ಇರುತ್ತದೆ. ಅಂದು ಸಾಮಾಜಿಕವಾದ ವಿಷಯಗಳ ಉಪನ್ಯಾಸ ಕೂಡಾ ಇರುತ್ತದೆ. ಸಮಾಜದಲ್ಲಿದ್ದ ಕೆಡುಕಿನ ವಿರುದ್ಧ ಜನ ಜಾಗೃತಿ ಹುಟ್ಟಿಸುವ ಪ್ರವಚನ ಕಾರ್ಯ ನೀಡಲ್ಪಡುತ್ತದೆ.

    ಅದೇ ರೀತಿ ಮಸೀದಿಯಲ್ಲಿ ಸಮುದಾಯದ ಕೌಟುಂಬಿಕ ಸಮಸ್ಯೆಗಳ ಕೌನ್ಸಿಲಿಂಗ್ ಕೂಡಾ ಇಲ್ಲಿಯ ಧರ್ಮ ಗುರುಗಳು ನಡೆಸುತ್ತಾರೆ. ಡ್ರಗ್ಸ್ನ ನಿರ್ಮೂಲನೆ ಜನ ಜಾಗೃತಿ ಕಾರ್ಯಕ್ರಮವನ್ನು ಎಲ್ಲಾ ಕಡೆ ಮುಸ್ಲಿಮ್ ಸಮುದಾಯದ ಸಮಾಜ ಸೇವಾ ಘಟಕದವರು ನಡೆಸುತ್ತಾ ಬಂದಿದ್ದಾರೆ ಎಂದೆವು.ಮಸೀದಿ’ ಎಂಬುವುದು ದೇವನ ಸ್ತುತಿ, ಸ್ತೋತ್ರ ಮಾಡುವ ಪವಿತ್ರ ಸ್ಥಳ. ನಿರ್ಮಲ ಮನಸ್ಸು ಎಲ್ಲರಲ್ಲೂ ಮುಖ್ಯ. ಇಲ್ಲಿ ಮದ್ರಸಾ' ಇದೆ. ಈಮದ್ರಸಾ’ದಲ್ಲಿ ಮಕ್ಕಳಿಗೆ ಕುರ್‌ಆನ್ ಮತ್ತು ಧಾರ್ಮಿಕ ವಿಧಿ, ವಿಧಾನ ಕಲಿಸಲಾಗುತ್ತದೆ. ಒಳಿತು ಮತ್ತು ಕೆಡುಕಿನ ವ್ಯತ್ಯಾಸ ಕಲಿಸಲಾಗುತ್ತದೆ. ಸತ್ಯ, ನ್ಯಾಯ, ನೀತಿ ಕಲಿಸಲಾಗುತ್ತದೆ. ಮೊಸರಿನಲ್ಲೂ ಕಲ್ಲು ಹುಡುಕುವ ದುಷ್ಟ ಮನಃಸ್ಥಿತಿಯನ್ನು ತೊರೆದಾಗಲೇ ನಾವು ನೈಜ ಮಾನವರಾಗಲು ಸಾಧ್ಯ ಅಲ್ಲವೇ?

    ಸಾರ್ವಜನಿಕರಿಗೆ ಮಸೀದಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಇಂತಹ ಅದ್ಭುತ ಕಾರ್ಯಕ್ರಮ ಸಂಘಟಿಸಿದ ಕುದ್ರೋಳಿ ಜಾಮಿಯಾ ಮಸೀದಿ ಕಮಿಟಿ, ಮುಸ್ಲಿಮ್ ಐಕ್ಯತಾ ವೇದಿಕೆ ಕುದ್ರೋಳಿ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕ ನಿಜಕ್ಕೂ ಅಭಿನಂದನಾರ್ಹರು.

    ಶಮು

  • “ಅರಿವು: ಮಾನವೀಯತೆಯ ಜಾಗೃತಿ” ಅಭಿಯಾನ (ಅ. 2 – 12): 
ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ಕರ್ನಾಟಕ

    “ಅರಿವು: ಮಾನವೀಯತೆಯ ಜಾಗೃತಿ” ಅಭಿಯಾನ (ಅ. 2 – 12): ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ಕರ್ನಾಟಕ

    ಬೆಂಗಳೂರು: ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ಕರ್ನಾಟಕದ ವತಿಯಿಂದ ನಗರದ ಕ್ವೀನ್ಸ್‌ರೋಡ್‌ನ ಬಿಫ್ಟ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಅರಿವು – ಮಾನವೀಯತೆಯ ಜಾಗೃತಿ” ಅಭಿಯಾನದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ, ರಾಜ್ಯಾದ್ಯಂತ ಅಭಿಯಾನದ ಅಂಗವಾಗಿ ನಡೆಯಲಿರುವ ಕಾರ್ಯಚಟುವಟಿಕೆಗಳ ಕುರಿತು ದೃಶ್ಯ ಮತ್ತು ಪತ್ರಿಕಾ ಮಾಧ್ಯಮದವರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.

    ‘ಅರಿವು’ ಕರ್ನಾಟಕದಾದ್ಯಂತ ಅಕ್ಟೋಬರ್ 2 ರಿಂದ ಅಕ್ಟೋಬರ್ 12ರವರೆಗೆ ನಡೆಯುವ ಅಭಿಯಾನವಾಗಿದ್ದು, ವಿಭಿನ್ನ ಸಮುದಾಯಗಳಲ್ಲಿ ದಯೆ, ಸಹಾನುಭೂತಿ ಮತ್ತು ಏಕತೆಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶ ಹೊಂದಿದೆ.

    “ಅರಿವು” ಕೇವಲ ಒಂದು ಅಭಿಯಾನವಲ್ಲ –ಇದು ಪರಸ್ಪರ ಮಾನವೀಯತೆಯನ್ನು ಅಳವಡಿಸಿಕೊಳ್ಳಲಿಕ್ಕಾಗಿ ಒಂದು ಕರೆಯಾಗಿದೆ,” ಎಂದು GIO ಕರ್ನಾಟಕದ ರಾಜ್ಯಾಧ್ಯಕ್ಷೆ ನವೀದಾ ಅಸ್ಸಾದಿ ಹೇಳಿದರು.
    “ಯಾವುದೇ ಭೇದಭಾವಗಳಿಲ್ಲದೆ ಪರಸ್ಪರರ ಕಾಳಜಿವಹಿಸುದರಲ್ಲಿ ನಿಜವಾದ ಶಕ್ತಿಯಿದೆ ಎಂದು ನಾವು ನಂಬುತ್ತೇವೆ.”

    ಅವರು ಕುರ್‌ಆನ್‌ನ ಸೂಕ್ತವನ್ನು ಉಲ್ಲೇಖಿಸುತ್ತಾ ಅಭಿಯಾನದ ತತ್ತ್ವವನ್ನು ವಿವರಿಸಿದರು: “ಜನರೇ! ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು, ತರುವಾಯ ನೀವು ಪರಸ್ಪರ ಪರಿಚಯ ಪಟ್ಟುಕೊಳ್ಳಲಿಕ್ಕಾಗಿ ನಿಮ್ಮ ಜನಾಂಗಗಳನ್ನು ಮತ್ತು ಗೋತ್ರಗಳನ್ನು ಮಾಡಿದೆವು.” (ಕುರ್‌ಆನ್- 49: 13)
    “ಅರಿವು” ಇಂದಿನ ಅಸಹಿಷ್ಣುತೆ, ಭಿನ್ನತೆ ಮತ್ತು ಹಿಂಸೆಯ ಸವಾಲುಗಳಿಗೆ ಉತ್ತರವಾಗಿ ಚಿಂತನೆ, ಸುಧಾರಣೆ ಮತ್ತು ಸೇವೆಗಳನ್ನು ಉತ್ತೇಜಿಸುತ್ತದೆ.

    “ಅಂತರ್ಧರ್ಮೀಯ ಸಂವಾದವನ್ನು ಉತ್ತೇಜಿಸುವುದು, ಮಾನವೀಯ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸುವುದು., ಸಂವಾದ, ಬೆಂಬಲ ಮತ್ತು ಸಾಮಾಜಿಕ ಗುಣಮುಖತೆಗೆ ಸಮಗ್ರ ವೇದಿಕೆಗಳನ್ನು ಒದಗಿಸುವುದು, ಮಾನವೀಯತೆಯ ಕಾರ್ಯಗಳ ಮೂಲಕ ಇಸ್ಲಾಂ ನ ಸಂದೇಶವನ್ನು ಸಾಕಾರ ಗೊಳಿಸುವ ಉದ್ದೇಶಗಳನ್ನು ಈ ಅಭಿಯಾನ ಹೊಂದಿದೆ” ಎಂದವರು ತಿಳಿಸಿದರು.

    “ಅಭಿಯಾನದ ಅಂಗವಾಗಿ ವಿವಿಧ ಸಮಾಜ ಸೇವಾ ಚಟುವಟಿಕೆಗಳಾದ ,ಅಂತರ್ಧರ್ಮೀಯ ಸಂವಾದಗಳು ಮತ್ತು ಶಾಂತಿ ವಲಯಗಳು (Peace Circles), ಮಾನಸಿಕ ಆರೋಗ್ಯ ಕಾರ್ಯಾಗಾರಗಳು, ಕಲೆ,ಕವನ ಮತ್ತು ಪೋಸ್ಟರ್ ಸ್ಪರ್ಧೆಗಳು, ಸಾಮಾಜಿಕ ಮಾಧ್ಯಮ ರೀಲ್ಸ್ ಗಳು ಮತ್ತು ಜಾಗೃತಿ ವಿಡಿಯೋಗಳು, ಮಾಹಿತಿ ಪುಸ್ತಕ ಮತ್ತು ಕರಪತ್ರಗಳ ವಿತರಣೆ, ಮನೆಮನೆಗೆ ಜಾಗೃತಿ ಭೇಟಿ ಮುಂತಾದ ಹಲವು ಕಾರ್ಯಕ್ರಮಗಳು ನಡೆಯಲಿವೆ” ಎಂದು ತಿಳಿಸಿದರು.

    ಇಸ್ಲಾಮಿನ ಬೋಧನೆಗಳಿಂದ ಪ್ರೇರಣೆ ಪಡೆದ ‘ಅರಿವು’:

    “ಯಾರಾದರು ಒಬ್ಬ ಮನುಷ್ಯನನ್ನು ವಧಿಸಿದರೆ , ಅವನು ಸಕಲ ಮಾನವಕೋಟಿಯನ್ನೇ ವಧಿಸಿದಂತೆ. ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವ ಕೋಟಿಗೇ ಜೀವದಾನ ಮಾಡಿದಂತೆ.” (ಕುರ್‌ಆನ್ 5:32) ಎಂಬ ಸಂದೇಶವನ್ನು ನೀಡಿದರು.

    “GIO ಕರ್ನಾಟಕವು ದೈವಿಕ ಮಾರ್ಗದರ್ಶನದ ಬೆಳಕಿನಲ್ಲಿ ಯುವತಿಯರು ಮತ್ತು ವಿದ್ಯಾರ್ಥಿನಿಯರ ವೈಯಕ್ತಿಕ ಶ್ರೇಷ್ಠತೆ ಮತ್ತು ಸಮಾಜದ ಬದಲಾವಣೆಗೆ ಮೀಸಲಾಗಿರುವ ಸೈದ್ಧಾಂತಿಕ ಸಂಘಟನೆಯಾಗಿದೆ. ನಾವು ಸರ್ವ ಧರ್ಮದ ಮತ್ತು ಸಮುದಾಯದ ಜನರನ್ನು ನಮ್ಮೊಂದಿಗೆ ಸೇರಲು ಆಹ್ವಾನಿಸುತ್ತೇವೆ,” ಎಂದು ನವೀದಾ ಅಸ್ಸಾದಿ ಹೇಳಿದರು.

    “ನಾವು ದಯೆಯನ್ನು ಪುನಃ ನಮ್ಮ ಸುತ್ತಮುತ್ತಲೂ ಸ್ಥಾಪಿಸೋಣ ಮತ್ತು ಮುಂದಿನ ಪೀಳಿಗೆಗಳಿಗೆ ಮಾದರಿಯಾಗೋಣ” ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ಲೋಗೋವನ್ನು ಬಿಡುಗಡೆ ಮಾಡಲಾಯಿತು.
    ಈ ಸಂದರ್ಭದಲ್ಲಿ ಅಭಿಯಾನದ ಸಂಯೋಜಕಿ ಅಫ್ರಾ ಫತೀನ್, GIO ಕರ್ನಾಟಕದ ಉಪಾಧ್ಯಕ್ಷೆ ಅನೀಸ್ ಫಾತಿಮಾ, JIH ಕರ್ನಾಟಕ ಕಾರ್ಯದರ್ಶಿ ತಶ್ಕೀಲ್ ಖಾನಂ, ಅನುಪಮಾ ಮಾಸಪತ್ರಿಕೆಯ ಉಪಸಂಪಾದಕಿ ಕುಲ್ಸೂಮ್ ಅಬೂಬಕ್ಕರ್ ಉಪಸ್ಥಿತರಿದ್ದರು.

    ಹೆಚ್ಚಿನ ಮಾಹಿತಿಗಾಗಿ ಅಥವಾ ಅಭಿಯಾನದಲ್ಲಿ ಪಾಲ್ಗೊಳ್ಳಲು:

    ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್, ಕರ್ನಾಟಕ
    ಶಾಂತಿ ಸದನ್, #52, 2ನೇ ಮೆೈನ್, 1ನೇ ಬ್ಲಾಕ್, ಆರ್‌ಟಿ ನಗರ, ಬೆಂಗಳೂರು – 560032
    ✉️ ಇಮೇಲ್: giokarnataka@anupamamasikagmail-com

    ಅಭಿಯಾನ ಸಂಯೋಜಕಿ:
    ಅಫ್ರಾ ಫತೀನ್, ಸಲಹಾ ಸಮಿತಿ ಸದಸ್ಯೆ, GIO ಕರ್ನಾಟಕ