Tag: #womens problem

  • ಚಿನ್ನ ಖರೀದಿಸುವ ಭರದಲ್ಲಿ, ಮಗುವನ್ನೇ ಕಳೆದುಕೊಂಡ ತಾಯಿ..! 
Complaint ಕೊಟ್ಟಾಗ ತಿಳಿದು ಬಂದದ್ದೇನು?

    ಚಿನ್ನ ಖರೀದಿಸುವ ಭರದಲ್ಲಿ, ಮಗುವನ್ನೇ ಕಳೆದುಕೊಂಡ ತಾಯಿ..! Complaint ಕೊಟ್ಟಾಗ ತಿಳಿದು ಬಂದದ್ದೇನು?

    ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ನಗರದಲ್ಲಿ ಚಿನ್ನಾಭರಣ ಖರೀದಿಸುವ ಭರದಲ್ಲಿ ಉಷಾ ಎಂಬುವವರು ಅಂಗಡಿಯಲ್ಲೇ ಬಿಟ್ಟು ಹೋಗಿದ್ದ ಮಗುವನ್ನು ಸಿದ್ದಯ್ಯ ನಗರದ ಭವಾನಿ ಎಂಬುವವರು ರಕ್ಷಿಸಿ ಪೊಲೀಸ್‌ ಠಾಣೆಯಲ್ಲಿ ಮತ್ತೆ ಹಸ್ತಾಂತರಿಸಿದರು.

    ನಗರದ ಗಾಂಧಿ ಬಜಾರ್‌ನ ಮಳಿಗೆಗೆ ಬಂದಿದ್ದ ಉಷಾ, ಎರಡೂವರೆ ವರ್ಷದ ಮಗಳು ಸುಪ್ರಿಯಾಳನ್ನು ತಮ್ಮೊಂದಿಗೆ ಕರೆದೊಯ್ಯುವುದನ್ನು ಮರೆತು ನಿರ್ಗಮಿಸಿದ್ದರು. ಮಗುವು ಅಳುತ್ತಿರುವುದನ್ನು ಕಂಡ ಭವಾನಿ ಸಂತೈಸಿದರು. ಪೋಷಕರು ಪತ್ತೆಯಾಗದ್ದರಿಂದ ತಮ್ಮೊಂದಿಗೆ ಕರೆದೊಯ್ದಿದ್ದರು.

    ಮಗುವನ್ನು ಮಳಿಗೆಯಲ್ಲಿ ಮರೆತು ಬಂದಿರುವ ಸಂಗತಿಯನ್ನು ಮುಚ್ಚಿಟ್ಟ ತಾಯಿಯು, ಮಗು ಕಳುವಾಗಿದೆ ಎಂದು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಹುಡುಕಾಡಿದಾಗ, ಮಗುವನ್ನು ಭವಾನಿ ಅವರು ಕರೆದೊಯ್ದಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ಗೊತ್ತಾಗಿತ್ತು. ಆಕೆಯೇ ಮಗುವನ್ನು ಅಪಹರಿಸಿದ್ದಾರೆಂದು ಭಾವಿಸಲಾಗಿತ್ತು.

    ಆದರೆ, ಅವರು ಮಗುವಿಗೆ ಊಟ ಮಾಡಿಸಿ, ನಂತರ ಪೊಲೀಸರಿಗೆ ಒಪ್ಪಿಸಲು ಠಾಣೆಗೆ ಬಂದರು. ಆಗ, ‘ಮಗು ಅಪಹರಣವಾಗಿಲ್ಲ. ಬದಲಿಗೆ ತಾಯಿಯೇ ಮರೆತು ಬಂದಿದ್ದಾರೆ’ ಎಂಬುದು ದೃಢವಾಯಿತು. ವಿಷಯ ಮನವರಿಕೆಯಾದ ಪೊಲೀಸರು ಮಗುವನ್ನು ತಾಯಿಯ ಸುಪರ್ದಿಗೆ ನೀಡಿದರು.

  • ಬರೋಬ್ಬರಿ 300 ಲೀ. ಎದೆಹಾಲು ದಾನ ಮಾಡಿದ ಮಹಾತಾಯಿ: 
ತಾಯಿಗೆ ಸಿಕ್ಕ ಸರ್ಟಿಫಿಕೇಟ್ ಏನು ಗೊತ್ತೇ..?

    ಬರೋಬ್ಬರಿ 300 ಲೀ. ಎದೆಹಾಲು ದಾನ ಮಾಡಿದ ಮಹಾತಾಯಿ: ತಾಯಿಗೆ ಸಿಕ್ಕ ಸರ್ಟಿಫಿಕೇಟ್ ಏನು ಗೊತ್ತೇ..?

    ತಮಿಳುನಾಡಿನ ಮಹಿಳೆಯೊಬ್ಬರು ಸುಮಾರು 300 ಲೀಟರ್‌ ಎದೆಹಾಲನ್ನು ದಾನ ಮಾಡುವ ಮೂಲಕ ‘ಏಷ್ಯಾ ಬುಕ್ ಆಫ್ ರೆಕಾರ್ಡ್‌’ ಮತ್ತು ‘ಇಂಡಿಯಾ ಬುಕ್ ಆಫ್ ರೆಕಾರ್ಡ್‌’ ಎರಡರಲ್ಲೂ ಸ್ಥಾನ ಪಡೆದಿದ್ದಾರೆ.

    ಎರಡು ಮಕ್ಕಳ ತಾಯಿಯಾದ ಸೆಲ್ವಾ ಬೃಂದಾ, 2023ರ ಏಪ್ರಿಲ್‌ನಿಂದ 2025ರ ಫೆಬ್ರುವರಿಯವರೆಗೆ 22 ತಿಂಗಳುಗಳಲ್ಲಿ ಒಟ್ಟು 300.17 ಲೀಟರ್‌ ಎದೆಹಾಲನ್ನು ಚಿರುಚಿರಾಪಳ್ಳಿ ಜಿಲ್ಲೆಯ ಮಹಾತ್ಮಾ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಯ (ಎಂಜಿಎಂಜಿಎಚ್‌) ಎದೆಹಾಲಿನ ಬ್ಯಾಂಕ್‌ಗೆ ದಾನ ಮಾಡಿದ್ದಾರೆ.

    ಈ ಮೂಲಕ ಅವರು ಸಾವಿರಾರು ಅಕಾಲಿಕ ಸಾವು ಮತ್ತು ಅಸ್ವಸ್ಥ ಶಿಶುಗಳ ಜೀವ ಉಳಿಸಲು ಸಹಾಯ ಮಾಡಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    2023-24ರ ಅವಧಿಯಲ್ಲಿ ಆಸ್ಪತ್ರೆಯ ಎದೆಹಾಲಿನ ಬ್ಯಾಂಕ್‌ನಲ್ಲಿ ಸಂಗ್ರಹಿಸಿದ್ದ ಒಟ್ಟಾರೆ ಎದೆ ಹಾಲಿನಲ್ಲಿ ಪ್ರಮಾಣದಲ್ಲಿ ಬೃಂದಾ ಅವರ ಕೊಡುಗೆ ಅರ್ಧದಷ್ಟು ಇತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಬೃಂದಾ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಆಸ್ಪತ್ರೆಯ ಅಧಿಕಾರಿಗಳು ‘ವಿಶ್ವ ಸ್ತನ್ಯಪಾನ ಸಪ್ತಾಹ’ದ ಸಮಾರೋಪ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿಲಿದ್ದಾರೆ.

  • ಮಗಳ ಕಣ್ಣೆದುರೇ ಗಂಡನನ್ನು ಕೊಂದ ತಂದೆ! 
ಕಾರಣವೇನು ಗೊತ್ತೇ?

    ಮಗಳ ಕಣ್ಣೆದುರೇ ಗಂಡನನ್ನು ಕೊಂದ ತಂದೆ! ಕಾರಣವೇನು ಗೊತ್ತೇ?

    ಬಿಹಾರದ ದರ್ಭಾಂಗಾದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 25 ವರ್ಷದ ವ್ಯಕ್ತಿಯೊಬ್ಬನನ್ನು ಆತನ ಮಾವನೇ ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ರಾಹುಲ್ ಕುಮಾರ್ ಹತ್ಯೆಯಾದ ವ್ಯಕ್ತಿ. ದರ್ಭಾಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇವರು ವ್ಯಾಸಂಗ ಮಾಡುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಅದೇ ಕಾಲೇಜಿನ ವಿದ್ಯಾರ್ಥಿನಿ ತನ್ನು ಪ್ರಿಯಾ ಅವರನ್ನು ಆಕೆಯ ಕುಟುಂಬದ ವಿರೋಧದ ನಡುವೆಯೇ ರಾಹುಲ್‌ ವಿವಾಹವಾಗಿದ್ದರು.

    ಹತ್ಯೆಯ ಬೆನ್ನಲ್ಲೇ ರಾಹುಲ್‌ನ ಸಹಪಾಠಿಗಳು ತನ್ನುವಿನ ತಂದೆ ಆರೋಪಿ ಪ್ರೇಮ್‌ಶಂಕರ್ ಝಾ ಅವರನ್ನು ಥಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ‘ನಿನ್ನೆ ಸಂಜೆ ಹೂಡಿ ಧರಿಸಿದ್ದ ವ್ಯಕ್ತಿಯೊಬ್ಬ ರಾಹುಲ್‌ ಬಳಿಗೆ ಬಂದಿದ್ದರು. ಹತ್ತಿರ ಬಂದಾಗ ಅದು ನನ್ನ ತಂದೆ ಎಂದು ತಿಳಿಯಿತು. ಅವರು ಬಂದೂಕು ಹಿಡಿದುಕೊಂಡಿದ್ದರು. ನನ್ನ ಕಣ್ಣೆದುರೇ ನನ್ನ ಗಂಡನ ಎದೆಗೆ ಗುಂಡು ಹಾರಿಸಿದರು. ನನ್ನ ಗಂಡ ನನ್ನ ಮಡಿಲಲ್ಲಿ ಪ್ರಾಣ ಬಿಟ್ಟರು’ ಎಂದು ತನ್ನು ಪ್ರಿಯಾ ಕಣ್ಣೀರು ಸುರಿಸಿದ್ದಾರೆ.

    ‘ನನ್ನ ಇಡೀ ಕುಟುಂಬ ಈ ಪಿತೂರಿಯಲ್ಲಿ ಭಾಗಿಯಾಗಿದೆ. ನನ್ನ ಸಹೋದರ ಮತ್ತು ತಂದೆಯಿಂದ ನಮ್ಮ ಜೀವಕ್ಕೆ ಬೆದರಿಕೆಯಿದೆ ಎಂದು ದೂರು ನೀಡಿ ನ್ಯಾಯಾಲಯಕ್ಕೂ ಹೋಗಿದ್ದೆವು’ ಎಂದು ತಿಳಿಸಿದ್ದಾರೆ.

    ಮೇಲ್ನೋಟಕ್ಕೆ ಇದು ಮರ್ಯಾದೆಗೇಡು ಹತ್ಯೆ ಎಂದು ತಿಳಿದುಬಂದಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • “ರಸ್ತೆಗಿಳಿದು ಪ್ರತಿಭಟಿಸದ ಕಾರಣದಿಂದಾಗಿ ಕ್ರೈಸ್ತರ ಮೇಲೆ ದೌರ್ಜನ್ಯ” ಪ್ರತಿಭಟನೆ ವಿಡಿಯೋ

    “ರಸ್ತೆಗಿಳಿದು ಪ್ರತಿಭಟಿಸದ ಕಾರಣದಿಂದಾಗಿ ಕ್ರೈಸ್ತರ ಮೇಲೆ ದೌರ್ಜನ್ಯ” ಪ್ರತಿಭಟನೆ ವಿಡಿಯೋ

    ಛತ್ತೀಸ್‌ ಗಢದಲ್ಲಿ ಇಬ್ಬರು ಮಲಯಾಳಿ ಸನ್ಯಾಸಿನಿಯರನ್ನು ಬಂಧಿಸಲಾಗಿದ್ದು, ಇದಕ್ಕೆ ಕೇರಳದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಹುಲ್ ಗಾಂಧಿ ಸೇರಿದಂತೆ ರಾಜಕೀಯ ಪಕ್ಷಗಳ ನಾಯಕರು ಬಂಧನವನ್ನು ಖಂಡಿಸಿದ್ದಾರೆ. ಈ ಕುರಿತಂತೆ ಪ್ರತಿಭಟನೆಗಳು ನಡೆದಿವೆ. ಮುಖ್ಯಮಂತ್ರಿ ಪಿಣರಾಜಿ ವಿಜಯನ್, ತಕ್ಷಣ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇದು ಸಂಘ ಪರಿವಾರದ ಬೂಟಾಟಿಕೆಗಳ ಭಾಗವಾಗಿದೆ ಎಂದು ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಹೇಳಿದ್ದಾರೆ.

    ಮಂಗಳೂರು : ಸುಳ್ಳು ಆರೋಪ ಹೊರಿಸಿ ಕ್ರೈಸ್ತ ಸನ್ಯಾಸಿನಿಯರನ್ನು ಬಂಧಿಸಿ ಜೈಲಿಗಟ್ಟಿದ ಛತ್ತೀಸ್‌ಗಢ ಸರಕಾರದ ಫ್ಯಾಸಿಸ್ಟ್ ಸರಕಾರದ ರಾಜಕಾರಣವನ್ನು ವಿರೋಧಿಸಿ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ನೇತೃತ್ವದಲ್ಲಿ ಸೋಮವಾರ ಮಂಗಳೂರಿನ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಧಾರ್ಮಿಕ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಫಾ. ಡೊಮಿನಿಕ್ ವಾಸ್ ಅವರು ಭಾರತದ ಕ್ರೈಸ್ತರು ಈ ಮಣ್ಣಿನ ಮಕ್ಕಳು, ದೇಶಭಕ್ತರು. ಮತಾಂಧರಲ್ಲ. ಒಂದು ಕೈಯಲ್ಲಿ ಬೈಬಲ್ ಹಿಡಿದುಕೊಂಡು ಮತ್ತು ಇನ್ನೊಂದು ಕೈಯಲ್ಲಿ ಸಂವಿಧಾನವನ್ನು ಹಿಡಿದು ಈ ದೇಶವನ್ನು ಅಪಾರವಾಗಿ ಪ್ರೀತಿಸುವರು ಎಂದು ಹೇಳಿದರು.

  • ಮೂಡಬಿದ್ರೆ ಕಾಲೇಜೊಂದರ ವಿದ್ಯಾರ್ಥಿನಿಯ ಅತ್ಯಾಚಾರ:
ಉಪನ್ಯಾಸಕ ಸೇರಿ ಮೂವರ ಬಂಧನ

    ಮೂಡಬಿದ್ರೆ ಕಾಲೇಜೊಂದರ ವಿದ್ಯಾರ್ಥಿನಿಯ ಅತ್ಯಾಚಾರ: ಉಪನ್ಯಾಸಕ ಸೇರಿ ಮೂವರ ಬಂಧನ

    ಮಂಗಳೂರು: ವಿದ್ಯಾರ್ಥಿನಿಯನ್ನು ಬ್ಲ್ಯಾಕ್‌ಮೇಲ್‌ ಮಾಡಿ ಅತ್ಯಾಚಾರ ಮಾಡಿದ್ದ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕಾಲೇಜೊಂದರ ಇಬ್ಬರು ಉಪನ್ಯಾಸಕರೊಂದಿಗೆ ಸ್ನೇಹಿತನನ್ನು ಮಾರತ್‌ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
    19 ವರ್ಷದ ಸಂತ್ರಸ್ತೆ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
    ಕಾಲೇಜಿನ ಭೌತವಿಜ್ಞಾನ ವಿಭಾಗದ ಉಪನ್ಯಾಸಕ ನರೇಂದ್ರ, ಜೀವವಿಜ್ಞಾನ ವಿಭಾಗದ ಉಪನ್ಯಾಸಕ ಸಂದೀಪ್‌ ಹಾಗೂ ಅವರ ಸ್ನೇಹಿತ ಬೆಂಗಳೂರು ನಿವಾಸಿ ಅನೂಪ್‌ ಬಂಧಿತರು.
    ‘ಘಟನೆಯು ಕೆಲವು ತಿಂಗಳ ಹಿಂದೆ ನಡೆದಿತ್ತು. ಆರೋಪಿಗಳ ಬ್ಲ್ಯಾಕ್‌ಮೇಲ್‌ ಹೆಚ್ಚಾದ ಮೇಲೆ ಮಹಿಳಾ ಆಯೋಗಕ್ಕೆ ಕಳೆದ ವಾರ ಪೋಷಕರ ಜತೆಗೆ ಬಂದು ವಿದ್ಯಾರ್ಥಿನಿ ದೂರು ನೀಡಿದ್ದರು. ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ದೂರನ್ನು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿಗೆ ವರ್ಗಾಯಿಸಿ ತನಿಖೆಗೆ ಸೂಚನೆ

    ನೀಡಿದ್ದರು. ಮಾರತ್‌ಹಳ್ಳಿ ಠಾಣೆಯ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ನೋಟ್ಸ್ ನೀಡುವ ನೆಪದಲ್ಲಿ ಕೃತ್ಯ:
    ‘ಭೌತವಿಜ್ಞಾನ ವಿಭಾಗದ ಉಪನ್ಯಾಸಕ ನರೇಂದ್ರ ನೋಟ್ಸ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿಗೆ ಹತ್ತಿರವಾಗಿದ್ದ. ಬಳಿಕ ಆಕೆಯ ಜತೆಗೆ ವಾಟ್ಸ್‌ಆ್ಯಪ್‌ನಲ್ಲಿ ಚಾಟ್ ಮಾಡುವುದು, ನೋಟ್ಸ್ ಕಳುಹಿಸುವುದು ಮಾಡುತ್ತಿದ್ದ. ಅಲ್ಲಿ ಶಿಕ್ಷಣ ಪೂರೈಸಿ ಆಕೆ ಬೆಂಗಳೂರಿಗೆ ಬಂದ ನಂತರವೂ ಸಂದೇಶ ಕಳುಹಿಸುತ್ತಿದ್ದ. ನೋಟ್ಸ್ ನೀಡುವುದನ್ನೂ ಮುಂದುವರಿಸಿದ್ದ. ಅದೇ ನೆಪದಲ್ಲಿ ಮಾರತ್‌ಹಳ್ಳಿಯ ಗೆಳೆಯನ ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದಾಗಿ ಬೆದರಿಕೆ ಹಾಕಿದ್ದ’ ಎಂದು ಮೂಲಗಳು ಹೇಳಿವೆ.

    ‘ಕೆಲವು ದಿನಗಳ ನಂತರ ಜೀವವಿಜ್ಞಾನ ವಿಭಾಗದ ಉಪನ್ಯಾಸಕ ಸಂದೀಪ್‌ಗೂ ಈ ವಿಷಯ ಗೊತ್ತಾಗಿತ್ತು. ‘ನೀನು ನರೇಂದ್ರನ ಜೊತೆಗಿರುವ ಫೋಟೊ ಹಾಗೂ ವಿಡಿಯೊಗಳು ನನ್ನ ಬಳಿಯಿವೆ. ನನ್ನ ಜತೆಗೆ ಸಹಕಾರ ನೀಡದಿದ್ದರೆ ಕಾಲೇಜಿನ ಎಲ್ಲರಿಗೂ ವಿಷಯ ತಿಳಿಯುವಂತೆ ಮಾಡುತ್ತೇನೆ ಎಂಬುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್​ಮೇಲ್ ಮಾಡಲು ಆರಂಭಿಸಿದ್ದ. ನಂತರ, ಸಂದೀಪ್‌ ಸಹ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದ’ ಎಂದು ಮೂಲಗಳು ತಿಳಿಸಿವೆ.

    ಸ್ನೇಹಿತನಿಂದಲೂ ಅತ್ಯಾಚಾರ:
    ವಿದ್ಯಾರ್ಥಿನಿ ಮೇಲೆ ನರೇಂದ್ರ ಹಾಗೂ ಸಂದೀಪ್ ಅತ್ಯಾಚಾರ ಎಸಗಿದ್ದ ಕೊಠಡಿ ಅನೂಪ್‌ಗೆ ಸೇರಿತ್ತು. ಘಟನೆ ಬೆನ್ನಲ್ಲೇ ವಿದ್ಯಾರ್ಥಿನಿಯನ್ನು ಸಂಪರ್ಕಿಸಿದ್ದ ಅನೂಪ್, ‘ನೀನು ನನ್ನ ಕೊಠಡಿಗೆ ಬಂದು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನನ್ನ ಕೊಠಡಿಯಲ್ಲಿ ಕ್ಯಾಮೆರಾವಿದೆ. ನನ್ನ ಜತೆಗೂ ಸಹಕಾರ ನೀಡಬೇಕು ಎಂದು ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ‘ಭಯ ಪಡಬೇಡಿ ದೂರು ನೀಡಿ’
    ಸಂತ್ರಸ್ತೆಗೆ ಆಪ್ತಸಮಾಲೋಚನೆ ನಡೆಸಿ ಧೈರ್ಯ ತುಂಬಲಾಗಿದೆ. ‘ವಾರದ ಹಿಂದೆ ಹೆಣ್ಣು ಮಗಳೊಬ್ಬಳು ಪೋಷಕರ ಜತೆಗೆ ಬಂದು ದೂರು ನೀಡಿದ್ದಳು. ಆ ಮಗುವಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಾ ಶೋಷಣೆ ಮಾಡಿರುವುದು ಗೊತ್ತಾಗಿದೆ. ಆರೋಪಿಗಳು ಸಾಮಾಜಿಕ ಮಾಧ್ಯಮಗಳನ್ನೂ ಬಳಸಿಕೊಂಡು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದಾರೆ. ಸದ್ಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯೂ ತನ್ನ ಹೇಳಿಕೆ ದಾಖಲಿಸಿದ್ದಾಳೆ’ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ. ‘ಹೆಣ್ಣು ಮಗಳು ಧೈರ್ಯ ತೋರಿ ದೂರು ನೀಡಿದ್ದಾಳೆ. ಬ್ಲ್ಯಾಕ್‌ಮೇಲ್‌ಗೆ ಒಳಗಾಗದೇ ದೂರು ನೀಡಬೇಕು. ಹೆದರಿಕೊಂಡರೆ ನೀವೇ ಬಲಿಪಶು ಆಗುತ್ತೀರಿ. ಆರೋಪಿಗಳು ಶೋಷಣೆ ಮಾಡುತ್ತಲೇ ಇರುತ್ತಾರೆ. ಯಾವುದಾದರೂ ತಪ್ಪುಗಳು ನಡೆದರೆ ತಂದೆ –ತಾಯಿಗೆ ಮೊದಲು ತಿಳಿಸಬೇಕು. ನಂತರ ಹತ್ತಿರದ ಠಾಣೆಗೆ ಮಾಹಿತಿ ನೀಡಬೇಕು. ಅದೂ ಸಾಧ್ಯವಾಗದಿದ್ದರೆ ಮಹಿಳಾ ಆಯೋಗಕ್ಕೆ ತಿಳಿಸಿ’ ಎಂದು ನಾಗಲಕ್ಷ್ಮೀ ಮನವಿ ಮಾಡಿದರು.

  • ಮನೆಯಾಕೆಯ ಆಸೆಗಳು…

    ಮನೆಯಾಕೆಯ ಆಸೆಗಳು…

    ಬೆಳ್ಳಂಬೆಳಗ್ಗೆ ಏಳುವ, ಮಕ್ಕಳ ಬುತ್ತಿ ಕಟ್ಟಿ
    ಶಾಲೆಗೆ ಹೊರಡಿಸುವ, ಪತಿ, ಅತ್ತೆ
    ಮಾವನ ಬೇಕು ಬೇಡಗಳನ್ನು ಗಮನಿಸುವ
    ಆಕೆಗೂ ಇದೆಯಲ್ಲವೇ ಚಿಕ್ಕಪುಟ್ಟ ಆಸೆಗಳು.

    ಬೆಳಗ್ಗಿನ ಚುಮುಚುಮು ಚಳಿಗೆ
    ಹೊದ್ದುಕೊಂಡ ಹೊದಿಕೆಯನ್ನು ಮತ್ತಷ್ಟು ಗಟ್ಟಿಯಾಗಿ ಅವುಚಿಕೊಂಡು
    ಆ ಸವಿನಿದ್ದೆಯನ್ನು ಸಂಪೂರ್ಣವಾಗಿ ಅನುಭವಿಸುವ ಆಸೆ.

    ಕಾವಲಿಯಿಂದ ಆಗಷ್ಟೇ ಎದ್ದ,
    ಕುರುಕುರು ಎನ್ನುವ ಬಿಸಿಬಿಸಿ ದೋಸೆಯನ್ನು ನೆಮ್ಮದಿಯಿಂದ
    ಸವಿಯುವ ಆಸೆ

    ಊಟದ ಮೇಜಿನಲ್ಲಿ ಮಧ್ಯದಲ್ಲಿ ಒಮ್ಮೆಯೂ ಏಳದೆ,
    ಬಿಸಿಬಿಸಿ ಅನ್ನವ ಸಂತೃಪ್ತಿಯಿಂದ ತಿನ್ನುವ ಆಸೆ

    ಬೆಳಗ್ಗೆ, ಮಧ್ಯಾಹ್ನ, ರಾತ್ರಿಯಡಿಗೆಗೆ
    ಏನು ಮಾಡಲಿ ಎಂಬ ಚಿಂತೆಯನ್ನು
    ಒಂದು ದಿನವಾದರೂ ಬಿಡುವ ಆಸೆ.

    ಅಮ್ಮಾ ಅದೆಲ್ಲಿ? ಇವಳೇ ಇದೆಲ್ಲಿ?
    ನನ್ನ ಔಷಧಿ ಕೊಡು, ನನ್ನ ಟವಲು ಕೊಡು, ಪುಸ್ತಕ ಕಾಣುತ್ತಿಲ್ಲ,
    ಈ ಎಲ್ಲ ದೈನಿಕ ಧಾವಂತದಿಂದ ಒಂದು ದಿನವಾದರೂ ವಿರಾಮ ದೊರೆತರೆ ಎಂಬ ಆಸೆ.

    ಬಿಸಿ ಕಾಫಿಯ ಜೊತೆಗೆ,
    ಬಾಲ್ಕನಿಯಲ್ಲಿ ಕೂತು ಒಂದರ್ಧ ಗಂಟೆ ಮಳೆ ವೀಕ್ಷಿಸುವ ಆಸೆ.

    ಒಂದಿಡೀ ಕಾದಂಬರಿಯನ್ನು ಕೈಯಿಂದ ಕೆಳಗಿಡದೆ
    ಸಂಪೂರ್ಣ ಓದಿ ಮುಗಿಸುವ ಆಸೆ.

    ದಿನವಿಡೀ ಮನೆ, ಮಕ್ಕಳನ್ನು ಸಂಭಾಳಿಸುವಳು ಆಕೆ
    ಒಂದು ಕೆಲಸ ಮುಗಿಯಿತು ಎನ್ನುವಾಗ ಮತ್ತೊಂದು ಧುತ್ತನೆ ಎದುರಾಗುವುದು,

    ಪಾತ್ರೆ ತೊಳೆ, ಬಟ್ಟೆ ಒಗೆ,
    ಒಣಗಿಸು, ಮಡಚಿಡು,
    ಅಲ್ಲಿ ಧೂಳಿದೆ, ಇಲ್ಲಿ ಕಲೆಯಿದೆ,
    ಸ್ವಲ್ಪ ಕೂತೊಡನೆ ಮತ್ತೇನೋ ಕೆಲಸ ಕಾಣುತ್ತದೆ.
    ಇವೆಲ್ಲವ ಮುಗಿಸಿದರೂ ಕೆಲವೊಮ್ಮೆ ಪ್ರಶ್ನೆ
    “ಮನೆಯಲ್ಲಿ ನಿನಗೇನು ಕೆಲಸವಿದೆ?”

    ಆಕೆಯೊಂದು ದಿನ ಸುಮ್ಮನೆ ಕುಳಿತರೆ,
    ಮೈಬಿಸಿಯೆಂದು ಹೊದ್ದು ಮಲಗಿದರೆ
    ತಿಳಿಯಬಹುದು ಆಕೆಯ ಹೊರೆ

    ನಗುನಗುತ್ತಾ, ಕೆಲವೊಮ್ಮೆ ಸಿಡುಕುತ್ತಾ ಎಲ್ಲ ನಿಭಾಯಿಸುವ ಆಕೆಗೂ ಬೇಕಿದೆ
    ತಿಂಗಳಿಗೆ ಒಂದು ದಿನವಾದರೂ ರಜೆ..

  • ಋತು ಚಕ್ರಪೂರ್ವ (ಪ್ರಿಮೆನ್ಸ್ಟ್ರುವಲ್) ಸಿಂಡ್ರೋವ್

    ಋತು ಚಕ್ರಪೂರ್ವ (ಪ್ರಿಮೆನ್ಸ್ಟ್ರುವಲ್) ಸಿಂಡ್ರೋವ್

    ಪ್ರಿಮೆನ್ಸ್ಟ್ರುವಲ್ ಸಿಂಡ್ರೋಮ್ (PMS) ಎನ್ನುವುದು ಅನೇಕ ಮಹಿಳೆಯರು ತಮ್ಮ ಮುಟ್ಟಿನ ಮೊದಲು ಅನುಭವಿಸುವ ದೈಹಿಕ ಮತ್ತು ಮಾನಸಿಕ ಲಕ್ಷಣಗಳ ಒಂದು ಗುಂಪು. ಇದು ಮುಟ್ಟಿನ ಸುಮಾರು ಒಂದು ಅಥವಾ ಎರಡು ವಾರಗಳ ಮೊದಲು ಪ್ರಾರಂಭವಾಗಿ, ಮುಟ್ಟು ಪ್ರಾರಂಭವಾದ ಕೂಡಲೇ ಅಥವಾ ಅದರ ನಂತರ ಕಡಿಮೆಯಾಗುತ್ತದೆ. ಇದು ಸಾಮಾನ್ಯ ಸ್ಥಿತಿಯಾಗಿದ್ದು, ಹೆಚ್ಚಿನ ಮಹಿಳೆಯರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಇದನ್ನು ಅನುಭವಿಸುತ್ತಾರೆ.

    ಪಿ.ಎಂ.ಎಸ್.ನ ಲಕ್ಷಣಗಳು
    ಪಿ.ಎಂ.ಎಸ್.ನ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು ಮತ್ತು ತೀವ್ರತೆಯೂ ಭಿನ್ನವಾಗಿರಬಹುದು. ಸಾಮಾನ್ಯ ದೈಹಿಕ ಲಕ್ಷಣಗಳೆಂದರೆ ಸ್ತನಗಳ ನೋವು, ಹೊಟ್ಟೆ ಉಬ್ಬುವುದು, ತಲೆನೋವು, ದೇಹದ ನೋವು, ಆಯಾಸ ಮತ್ತು ನಿದ್ರಾಹೀನತೆ ಸೇರಿವೆ. ಮಾನಸಿಕ ಲಕ್ಷಣಗಳಲ್ಲಿ ಮನಸ್ಥಿತಿ ಬದಲಾವಣೆಗಳು (Mood Swings)- ಒಂದು ಕ್ಷಣ ಸಂತೋಷ, ಇನ್ನೊಂದು ಕ್ಷಣ ದುಃಖ ಅಥವಾ ಕಿರಿಕಿರಿ, ಆತಂಕ, ಖಿನ್ನತೆ, ಅಸಮಾಧಾನ ಮತ್ತು ಏಕಾಗ್ರತೆಯ ಕೊರತೆ ಇತ್ಯಾದಿ ಸೇರಿವೆ. ಕೆಲವು ಮಹಿಳೆಯರು ಆಹಾರದ ಹಂಬಲ ಅಥವಾ ಹಸಿವಿನಲ್ಲಿ ಬದಲಾವಣೆಗಳನ್ನೂ ಸಹ ಅನುಭವಿಸಬಹುದು.

    ಪ್ರಿಮೆನ್ಸ್ಟ್ರುವಲ್ ಡಿಸ್ಪೂರಿಕ್ ಡಿಸಾರ್ಡರ್ (PMDD)
    ಇದು ಪಿ.ಎಂ.ಎಸ್.ನ ತೀವ್ರತರಹ ರೂಪ. ಪಿ.ಎಂ.ಡಿ.ಡಿ.ನಲ್ಲಿ ಪಿ.ಎಂ.ಎಸ್.ನ ಲಕ್ಷಣಗಳ ಜೊತೆಗೆ ತೀವ್ರತರಹದ ಕಿರಿಕಿರಿ, ಸಿಟ್ಟಾಗುವಿಕೆ, ಉದ್ವಿಗ್ನತೆ ಅಥವಾ ಖಿನ್ನತೆ ಕಾಣಿಸಿಕೊಳ್ಳಬಹುದು ಮತ್ತು ಈ ಲಕ್ಷಣಗಳು ಅವರ ದೈನಂದಿನ ಚಟುವಟಿಕೆಗಳನ್ನು ಭಾದಿಸಬಲ್ಲಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಬಹುದು.

    ಕಾರಣಗಳು
    ಪಿ.ಎಂ.ಎಸ್.ಗೆ ನಿಖರವಾದ ಕಾರಣ ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲ. ಮುಟ್ಟಿನ ಚಕ್ರದ ಸಮಯದಲ್ಲಿ ಹಾರ್ಮೋನ್ ಮಟ್ಟದಲ್ಲಿನ ಬದಲಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಂಬಲಾಗಿದೆ. ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟೆರಾನ್ ಹಾರ್ಮೋನ್‌ಗಳ ಬದಲಾವಣೆಗಳಿಗೆ ದೇಹದಲ್ಲಿ ಉಂಟಾಗುವ ಅಸಹಜ ಪ್ರತಿಸ್ಪಂದನೆಗಳು ಇದಕ್ಕೆ ಕಾರಣ ಎನ್ನಲಾಗಿದೆ. ಮಿದುಳಿನ ರಾಸಾಯನಿಕಗಳಲ್ಲಿ ಒಂದಾದ ಸೆರೆಟೊನಿನ್ ಮೇಲೆ ಉಂಟಾಗುವ ಪ್ರಭಾವವೂ ಪಿ.ಎಂ.ಎಸ್. ಹಾಗೂ ಪಿ.ಎಂ.ಡಿ.ಡಿ. ಉಂಟಾಗುವಲ್ಲಿ ಪಾತ್ರ ವಹಿಸಬಹುದಾಗಿದೆ. ಋತುಚಕ್ರದ ಅವಧಿಯುದ್ಧಕ್ಕೂ ಸೆರೆಟೊನಿನ್ ಮಟ್ಟದಲ್ಲಿ ಬದಲಾವಣೆ ಆಗುತ್ತಿರುತ್ತದೆ. ಕೆಲವು ಮಹಿಳೆಯರು ಈ ಬದಲಾವಣೆಗಳಿಗೆ ಸೂಕ್ಷ್ಮಸಂವೇದಿಯಾಗಿರುತ್ತಾರೆ.

    PMS ನಿರ್ವಹಣೆ ಹೇಗೆ?
    PMS ಸಾಮಾನ್ಯವಾಗಿ ಗಂಭೀರ ಆರೋಗ್ಯ ಸಮಸ್ಯೆಯಲ್ಲವಾದರೂ, ಅದರ ಲಕ್ಷಣಗಳು ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು. ಈ ಲಕ್ಷಣಗಳನ್ನು ನಿರ್ವಹಿಸಲು ಹಲವಾರು ಮಾರ್ಗಗಳಿವೆ:

    • ಆರೋಗ್ಯಕರ ಜೀವನ ಶೈಲಿ: ಸಮತೋಲಿನ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಸಾಕಷ್ಟ ನಿದ್ರೆ ಮಾಡುವುದು ಪಿ.ಎಂ.ಎಸ್. ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
    • ಒತ್ತಡ ನಿರ್ವಹಣೆ: ಯೋಗ, ಧ್ಯಾನ, ಉಸಿರಾಟದ ವ್ಯಾಯಮಗಳು ಅಥವಾ ವಿಶ್ರಾಂತಿ ತಂತ್ರಗಳು (Relaxation techniques) ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಲು ಮತ್ತು ಮಾನಸಿಕ ಲಕ್ಷಣಗಳನ್ನು ಸುಧಾರಿಸಲು ಸಹಾಯ ಮಾಡಬಹುದು.
      ಆಹಾರ ಪದ್ಧತಿ: ಕೆಫೇನ್, ಉಪ್ಪು, ಸಕ್ಕರೆ ಮಿತವಾಗಿ ಬಳಸಿ ಮತ್ತು ಮದ್ಯಪಾನದಿಂದ ದೂರವಿರಿ.
    • ವೈದ್ಯರ ಸಲಹೆ: ಲಕ್ಷಣಗಳು ತೀವ್ರವಾಗಿದ್ದರೆ ಮತ್ತು ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
    • ಹೋಮಿಯೋಪತಿ ಚಿಕಿತ್ಸೆ: ಹೋಮಿಯೋಪತಿ ಚಿಕಿತ್ಸಾ ವಿಧಾನದಲ್ಲಿ ಪಿ.ಎಂ.ಎಸ್. ಸಮಸ್ಯೆಯನ್ನು ನಿವಾರಿಸಲು ಅನೇಕ ಪರಿಣಾಮಕಾರಿ ಔಷಧಗಳು ಲಭ್ಯವಿದೆ. ಹಾಗೂ ಇತರೆ ಔಷಧಗಳಂತೆ ಇದನ್ನೂ ಸೇವಿಸುದರಿಂದ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ. ಹಾಗೂ ಯಾವುದೇ ಬಗೆಯ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ಸಾಧ್ಯವಿದೆ.

    • ಡಾ| ಅಲ್‌ಫ್ರೀಡಾ ಲವಿನ ಪಿಂಟೊ,
      ಹೋಮಿಯೋಪತಿ ತಜ್ಞೆ, ವೆಲ್‌ಕೇರ್ ಹೋಮಿಯೋಪತಿ, ಮಂಗಳೂರು
      ಮೊ: 9449300306